ಸಪ್ತವರ್ಣಗಳ ಕಾಮನಬಿಲ್ಲಿನ ಮೆರವಣಿಗೆ
ನಮ್ಮ ಭಾರತೀಯ ಚಿತ್ರಗಳು ಎಂದರೆ, ಕೇವಲ ಆಕಾಶದಲ್ಲಿ ಮಾತ್ರವಲ್ಲದೆ ಆ ಸಪ್ತವರ್ಣಗಳ ಕಾಮನಬಿಲ್ಲು ಬೆಳ್ಳಿತೆರೆಯ ಮೇಲೆ ಮೆರವಣಿಗೆ ಮಾಡಿದಂತೆ! ಸಪ್ತ ಪ್ರಾಂತೀಯ ಭಾಷೆಗಳ ಈ ಚಿತ್ರಗಳು ಬೆಳ್ಳಿತೆರೆಯಲ್ಲಿ ಇಂದ್ರಧನುಸ್ಸನ್ನೇ ಇಳಿಸಿದಂತಿವೆ. ಇದನ್ನು ಮೆಚ್ಚಿ ಬರುವ ಪ್ರೇಕ್ಷಕರು ಈ ರಂಗಿನೋಕುಳಿಯಲ್ಲಿ ಮಿಂದೆದ್ದು ಬಣ್ಣ ತುಂಬಿಸಿಕೊಂಡಿದ್ದಾರೆ. ನಿಜಕ್ಕೂ ಈ ವಿವಿಧ ಪ್ರಾಂತೀಯ ಭಾಷೆಗಳು ತಮ್ಮ ವಿಭಿನ್ನ ವಿಚಾರಧಾರಿ, ಸಾಂಸ್ಕೃತಿಕ ರೂಪುರೇಷೆ, ಕಲೆಯ ವೈವಿಧ್ಯತೆಗಳಿಂದ ಜನರಿಗೆ ಸುಸಮೃದ್ಧ ಮನರಂಜನೆ ಒದಗಿಸುತ್ತಿವೆ. ಇದು ಅವರ ಮನಸ್ಸಿಗೆ ಭಾವೈಕ್ಯತೆಯ ಸಂಚಾರ ಒದಗಿಸಿದೆ. ನೀವು ಈ ವಿಭಿನ್ನ ವೈಚಾರಿಕ ಚಿತ್ರಗಳ ಕುರಿತು ತಿಳಿಯಬಯಸುತ್ತೀರಲ್ಲವೇ….?
ಕನ್ನಡ : ಕಾಂತಾರ ಚಾಪ್ಟರ್-1
ಹೊಂಬಾಳೆ ಫಿಲಮ್ಸ್ ನಿರ್ಮಾಣದ `ಕಾಂತಾರ ಚಾಪ್ಟರ್-1′ 23 ದಿನಗಳಿಗೆ ಈ ಸಿನಿಮಾ ವಿಶ್ವಾದ್ಯಂತ 818 ಕೋಟಿ ರೂ. ಹಣವನ್ನು ಬಾಚಿಕೊಂಡಿದೆ. ಆ ಮೂಲಕ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. (ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ) ವರದಿಗಳ ಪ್ರಕಾರ, ಈ ಚಿತ್ರ ವಿದೇಶಗಳಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಅತ್ಯುತ್ತ ಪ್ರದರ್ಶನ ಕಂಡಿದೆ. ಸ್ಥಿರವಾದ ಕಲೆಕ್ಷನ್ ಗಳು ಮತ್ತು ಹೌಸ್ ಫುಲ್ ಪ್ರದರ್ಶನಗಳು ಈ ವರ್ಷ ಬಿಡುಗಡೆಯಾದ ಇತರೆ ಭಾರತೀಯ ಚಲನಚಿತ್ರಗಳ ಪೈಕಿ `ಕಾಂತಾರ ಚಾಪ್ಟರ್-1′ ಚಿತ್ರವನ್ನು ಅಗ್ರಸ್ಥಾನದಲ್ಲಿ ಇರಿಸಿದೆ.
ಇನ್ನು ಈ ಚಿತ್ರ ಸಾವಿರ ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಚಿತ್ರತಂಡಕ್ಕಿದೆ. ಚಿತ್ರ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ 125 ಕೋಟಿ ರೂ. ಕೊಟ್ಟು ಖರೀದಿಸಿದ್ದರೆ, ಸ್ಯಾಟಲೈಟ್ ಹಕ್ಕುಗಳನ್ನು ಝೀ ಕನ್ನಡ ವಾಹಿನಿ ಬಹುದೊಡ್ಡ ಮೊತ್ತ ಕೊಟ್ಟು ತನ್ನದಾಗಿಸಿಕೊಂಡಿದೆ.

ಇಷ್ಟೆಲ್ಲಾ ಯಶಸ್ವಿಯಾಗಿರುವ ಈ ಚಿತ್ರದ ಕಥೆ ಏನು ಎಂದು ಕೇಳಿದರೆ, ಬಾಂಗ್ರಾ ರಾಜ ಮನೆತನ ಹಾಗೂ ಈಶ್ವರ ಹೂದೋಟದ ಜನರ ನಡುವಿನ ಯುದ್ಧವನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಕಥೆ. ಈಶ್ವರ ಹೂದೋಟದ ಮುಂಚೂಣಿಯ ಯುವ ನಾಯಕ ಬೆರ್ಮೆಲ್ ಆಗಿ ನಟ ರಿಷಬ್ ಕಾಣಿಸಿಕೊಂಡರೆ, ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ (ರಾಜಶೇಖರ) ಮತ್ತು ಗುಲ್ಶನ್ ದೇವಯ್ಯ (ಕುಲಶೇಖರ), ರುಕ್ಮಿಣಿ ವಸಂತ್ (ಕನಕವತಿ) ಕಾಣಿಸಿಕೊಂಡಿದ್ದಾರೆ. ಇವರ ನಡುವಿನ ಸಮಯದಲ್ಲಿ ದೈವದ ಪಾತ್ರವೇನು? ದೈವಕ್ಕೂ ಹೂದೋಟಕ್ಕೂ ಯಾವ ನಂಟು ಎಂಬುದನ್ನು ತೆರೆಮೇಲೆ ಅತ್ಯದ್ಭುತ ಮೇಕಿಂಗ್ ನೋಡಬಹುದಾಗಿದೆ.
ಕಾಂತಾರ ಮತ್ತೊಮ್ಮೆ ಬಹುದೊಡ್ಡ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಡಿವೈನ್ ಸ್ಟಾರ್, ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿದ್ದಾರೆ. ದೇವರ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ಗಂಗಾ ಆರತಿಯಲ್ಲೂ ಪಾಲ್ಗೊಂಡಿದ್ದಾರೆ. ಇನ್ನು ಇದೇ ವೇಳೆ ಸಿನಿಮಾಗೆ ಅತ್ಯಂತ ದೊಡ್ಡ ಗೆಲುವು ಕೊಟ್ಟಿದ್ದಕ್ಕೆ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಅಕ್ಟೋಬರ್ 2 ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ `ಕಾಂತಾರ ಚಾಪ್ಟರ್-1′ ಚಿತ್ರದಲ್ಲಿ ರಿಷಬ್
ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾವ್‌ಮತ್ತು ಪ್ರಕಾಶ್‌ತುಮಿನಾಡ್‌ನಟಿಸಿದ್ದಾರೆ. ಚಿತ್ರಕ್ಕೆ ಅರವಿಂದ್‌ಎಸ್. ಕಶ್ಯಪ್‌ರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಸುರೇಶ್ ಮಲ್ಲಯ್ಯ ಅವರ ಸಂಕಲನವಿದೆ.

ಮಲೆಯಾಳಂ : ಪಾದಿರಾತ್ರಿ
ನ್ಯಾ ನಾಯರ್ ಸೌಬಿನ್ ಶಾಹಿರ್ ಪ್ರಮುಖ ಪಾತ್ರದಲ್ಲಿರುವ `ಪಾದಿರಾತ್ರಿ’ ಚಿತ್ರ ಕ್ರೈಂ ಡ್ರಾಮಾ/ಥ್ರಿಲ್ಲರ್ ಆಗಿ ಮಿಂಚಿದೆ. ಇದು ರಥೀನಾರ 2ನೇ ನಿರ್ದೇಶನದ ಚಿತ್ರ. ಆಕೆಯ ಮೊದಲ ಚಿತ್ರ `ಪುಳು.’ ಈ ಚಿತ್ರದ ಕಥಾಹಂದರ ಕೇರಳದ ಇಡುಕ್ಕಿ ಜಿಲ್ಲೆಯ ಅನಕ್ಕರಾ ಎಂಬ ಗ್ರಾಮದಲ್ಲಿ ನಡೆಯುತ್ತದೆ. ಒಂದು ರಾತ್ರಿ ಇವರ ಪ್ಯಾಟ್ರೋಲ್ ಡ್ಯೂಟಿ ಸಮಯದಲ್ಲಿ ಹಲವಾರು ಶಾಕಿಂಗ್‌ಘಟನೆ ನಡೆಯುತ್ತವೆ. ಆ ರಾತ್ರಿ ಅವರಿಬ್ಬರ ಸಂಬಂಧ ಸಂಪೂರ್ಣ ಬದಲಾಗುತ್ತದೆ.
ಈ ಚಿತ್ರ ವಿವಾಹೇತರ ಸಂಬಂಧಗಳ ಕುರಿತೂ ಚರ್ಚಿಸುತ್ತದೆ. ಮೊದಲಿಗೆ ಅದನ್ನು ವೈಭವೀಕರಿಸುವ ಹಾಗಿದ್ದರೂ, ನಂತರ ಅದರ ಕುಕರ್ಮಗಳ ಸ್ಪಷ್ಟ ವಾಸ್ತವತೆ ಚಿತ್ರಿಸುತ್ತದೆ. ನಟನೆಯ ದೃಷ್ಟಿಯಲ್ಲಿ ಸೌಬಿನ್ ಬೆಸ್ಟ್ ಎನಿಸುತ್ತಾರೆ, ಆದರೆ ಆತನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ.
ನ್ಯಾ ಮೊದಲ ಸಲ ಲೇಡಿ ಪೊಲೀಸ್ ಆಗಿ ನಟಿಸಿ, ತನ್ನ ಕೆರಿಯರ್ ನ ಕಂಬ್ಯಾಕ್ ಫೇಸ್ ಗೆ ನ್ಯಾಯ ಒದಗಿಸಿದ್ದಾರೆ. ಆಕೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಹೆಚ್ಚು ಆಪ್ತರಾಗುತ್ತಾರೆ, ಆದರೆ ಹೆಚ್ಚು ಪರಿಪಕ್ವತೆ ಬೇಕಿದ್ದ ಕಡೆ ಪೇವಲ ಎನಿಸುತ್ತಾರೆ. ಒಟ್ಟಾರೆ ಈ ಚಿತ್ರದಲ್ಲಿ ಉತ್ತಮ ನಟನೆ ಇದ್ದು, ಆಸಕ್ತಿ ಕೆರಳಿಸಿದರೂ ಅತಿ ಸಾಧಾರಣ ಚಿತ್ರಕಥೆ, ಭಾವಾವೇಶದ ಆಳ ಡಲ್ ಎನಿಸುತ್ತದೆ.

ತೆಲುಗು : ಓಜಿ
ಈ ಸಲದ ತೆಲುಗು ಚಿತ್ರ ಒರಿಜಿನಲ್ ಗ್ಯಾಂಗ್ ಸ್ಟರ್ ಕುರಿತಾದುದು. ಮುಖ್ಯವಾಗಿ ಇದು ನಾಯಕನ ಇನಿಶಿಯಲ್ಸ್ ಕುರಿತಾಗಿದೆ, ಅಂದ್ರೆ ಓಜಸ್ ಗಂಭೀರನ ಬಗ್ಗೆ. ಪವನ್ ಕಲ್ಯಾಣ್ ಈ ಮಾಸ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದ ಟೈಟ್ 2 ವಿಧದಲ್ಲಿ ಗೆದ್ದಿದೆ, ಪಾತ್ರದ ಹೆಸರನ್ನು ಶಾರ್ಟ್ ಆಗಿಸಿದ್ದಲ್ಲದೆ, ಚಿತ್ರದ ಆ್ಯಕ್ಷನ್ ಡ್ರಾಮಾ ಥೀಮ್ ನ್ನು ಒರಿಜನಲ್ ಗ್ಯಾಂಗ್ ಸ್ಟರ್ ಗಳ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸಿದೆ.
ಪವನ್ ಜೊತೆ ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಶ್ರಿಯಾ ರೆಡ್ಡಿ, ಪ್ರಕಾಶ್ ರಾಜ್ ಮುಂತಾದವರಿದ್ದಾರೆ. ಸುಜೀತ್ ನಿರ್ದೇಶನ.90ರ ದಶಕದ ಈ ಕಥೆಯಲ್ಲಿ ಸವ್ಯ ದಾದಾ (ಪ್ರಕಾಶ್‌ರೈ) ಮುಂಬೈನಲ್ಲಿ ಒಂದು ಬಂದರು ಹೊಂದಿರುತ್ತಾನೆ. ಅತಿ ಪವರ್ ಫುಲ್ ವ್ಯಕ್ತಿ ಮಿರ್ಬಾಕರ್ (ತೇಜ್ ನಮ್ರ) ಮುಂಬೈ ಭೂಗತ ದೊರೆಯಾಗಲು ಅದನ್ನು ಕಸಿಯಲು ಬಯಸುತ್ತಾನೆ. ಅವನ ಮಗ ಜಿಮ್ಮಿ (ಸುದೇನ್ ನಾಯರ್) ಪೋರ್ಟ್‌ನಿಂದ, ಅಪಾಯಕಾರಿ ಮಾರಕಾಸ್ತ್ರ ಅಡಗಿದ್ದ ಒಂದು ಭಾರಿ ಕಂಟೇನರ್ ಕಣ್ಮರೆ ಎಂದು ರಾದ್ಧಾಂತ ಎಬ್ಬಿಸುತ್ತಾನೆ, ಎಲ್ಲರನ್ನೂ ಸಂದೇಹಿಸುತ್ತಾ ದಾದಾನ ಮಗನನ್ನೂ ಕೊಲ್ಲುತ್ತಾನೆ. ಓಮಿ ಈ ಕಂಟೇನರ್ ಗಾಗಿ ಕಾಯುತ್ತಿರುತ್ತಾನೆ. ಆಗ ಸಂದರ್ಭ ಹತೋಟಿ ಮೀರಿ, ಓಜಿ ಬಂದು ಮುಂಬೈನಲ್ಲಿ ಇದನ್ನು ನಿಯಂತ್ರಿಸಲಿ ಎಂದು ಬಯಸುತ್ತಾನೆ. ಈ ಓಜಿ ಯಾರು? ದಾದಾಗೂ ಅವನಿಗೂ ಏನು ಸಂಬಂಧ? ಅನೇಕೆ ಗಡೀಪಾರಾಗಿದ್ದ? ಅವನ ಹಿನ್ನೆಲೆ ಏನು? ಇದರ ಅನ್ವೇಷಣೆಯೇ ಚಿತ್ರದ ಉಳಿದ ಭಾಗ. ಕ್ಲಾಸಿ + ಮಾಸಿ ಆಗಿರುನ ಪವನ್ ನಟನೆಯೇ ಇಲ್ಲಿ ಜೀವಾಳ. ನಿರ್ದೇಶಕರ ಅಪೇಕ್ಷೆಗೆ ತಕ್ಕಂತೆ, ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಪವನ್ ಇಲ್ಲಿ ವಿಜೃಂಭಿಸುತ್ತಾರೆ.

ತಮಿಳು : ಡ್ಯೂಡ್
ಕೇವಲ 2 ದಿನಗಳಲ್ಲಿ 45 ಕೋಟಿ ರೂ. ಬಾಚಿರುವ ಚಿತ್ರವಿದು! ಈ ಸಲದ ದೀಪಾವಳಿಗೆಂದು ರಿಲೀಸ್ ಆದ ತಮಿಳು ಚಿತ್ರಗಳಲ್ಲಿ ಕೀರ್ತಿ ಸ್ವರನ್ ನಿರ್ದೇಶಿತ (ಮೊದಲ ಸಲ) ಹಾಗೂ ಪ್ರದೀಪ್ ರಂಗನಾಥನ್, ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿರುವ `ಡ್ಯೂಡ್’ ಚಿತ್ರ ಭಾರಿ ಸುದ್ದಿ ಮಾಡಿದೆ. ಶರತ್ ಕುಮಾರ್ ಗಿಲ್ಲಿ ಪ್ರಮುಖ ಪಾತ್ರವಿದೆ. ಸಾಯಿ ಅಭಯಂಕರ್ ಸಂಗೀತ. ಚಿತ್ರದ ಪ್ರಥಮಾರ್ಧ ಅತ್ಯುತ್ತಮವಾಗಿ ಸಾಗುತ್ತದೆ, ದ್ವಿತೀಯಾರ್ಧ ಬೋರಿಂಗ್ ಆಗಿದೆ.
ಆಕನ್ (ಪ್ರದೀಪ್) ಒಂದು ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯ ಮಾಲೀಕ, ಲವ್ ಫೇಲ್ಯೂರ್ ನಿಂದ ನೊಂದ ಜೀವ. ಕುವರ್ (ಮಮಿತಾ) ಈತನ ಸೋದರಮಾವ, ಮಂತ್ರಿ ಅಳಗಪ್ಪನ (ಶರತ್ ಕುಮಾರ್) ಮಗಳು. ಅವಳ ಪ್ರೇಮವನ್ನು ನಿರಾಕರಿಸುವ ಆಕನ್, ಅವಳು ಫ್ರೆಂಡ್ ಮಾತ್ರ ಎನ್ನುತ್ತಾನೆ.
ಹೀಗಾಗಿ ಆಕೆ ಬೇಸರದಿಂದ ಬೇರೆ ನಗರಕ್ಕೆ ಹೋಗುತ್ತಾಳೆ. ಅವಳು ದೂರಾದ ನಂತರ ಅವಳ ಪ್ರೇಮ ಅರ್ಥೈಸಿಕೊಳ್ಳುವ ಈತ, ಮುಂದೆ ಅವಳನ್ನೇ ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಈಗ ಅವಳು ಅವನನ್ನು ನಿರಾಕರಿಸುತ್ತಾಳೆ. ಇದಾದ ನಂತರ ನಡೆದುವುದೇನು ಎಂಬುದೇ ಚಿತ್ರ. ಇಲ್ಲಿ ಪ್ರದೀಪ್ ಪಾತ್ರ ಭಾರಿ ಮಿಂಚಿದೆ.

ಬಂಗಾಳಿ : ರಘು ದಕತ್
ಇತ್ತೀಚೆಗೆ ಬಂಗಾಳಿ ಚಿತ್ರಗಳಲ್ಲಿ `ರಘು ದತಕ್’ ಅತಿ ಯಶಸ್ವಿ ಚಿತ್ರ ಎನ್ನಬಹುದು. ಧೃಬ ಭಂಡೋಪಾಧ್ಯಾಯ ನಿರ್ದೇಶನವಿದ್ದು ಕಮರ್ಷಿಯಲಿ ಸಕ್ಸಸ್ ಎನಿಸಿದ ಚಿತ್ರ. ಫುಲ್ ಎಂಟರ್ ಟೇನಿಂಗ್, ಆ್ಯಕ್ಷನ್ ಪ್ಯಾಕ್ಡ್ ಆಗಿ ಗಮನಸೆಳೆಯುತ್ತದೆ. ಪ್ರೇಕ್ಷಕರ ಪ್ರಕಾರ ಈ ಚಿತ್ರಕ್ಕೆ ಐತಿಹಾಸಿಕ ಹಿನ್ನೆಲೆ ಏನೂ ಇಲ್ಲ. ಇದು ಯಾರ ಕುರಿತಾದ ಬಯೋಪಿಕ್ ಸಹ ಅಲ್ಲ. ಇದು ಸಂಪೂರ್ಣ ಕಾಲ್ಪನಿಕ ಚಿತ್ರ. ಹಾಗಾಗಿ ಇದು ಪೀರಿಯಡ್ ಡ್ರಾಮಾ ಎಂದೆನಿಸಿದೆ.
ಈ ಚಿತ್ರದಲ್ಲಿ, ಕ್ರೂರಿ ಅಹೀಂದ್ರ ಬರ್ಮನ್ (ಅನಿರ್ಬನ್ ಭಟ್ಟಾಚಾರ್ಯ) ಬ್ರಿಟಿಷರ ಜೊತೆ ಒಂದಾಗಿ, ತನ್ನ ಹಳ್ಳಿಯ ರೈತರನ್ನು ಇಂಡಿಗೋ ಬೆಳೆಯಲೇಬೇಕು ಎಂದು ಒತ್ತಡ ಹೇರುತ್ತಾನೆ. ಆ ವ್ಯಾಪಾರದಿಂದ ಏನೂ ಲಾಭವಾಗದೆ ಅವರು ತೆರಿಗೆ ಕಟ್ಟಲಾಗದಿದ್ದರೆ, ಗೋಳಾಡಿಸುತ್ತಾನೆ. ಇಂಥ ಸಂದರ್ಭದಲ್ಲಿ ಕಳ್ಳ ರಘು (ದೇವ್) ಕೌಬಾಯ್ ಹೀರೋ ಆಗಿ ಕಾಣಿಸಿಕೊಂಡು, ಶ್ರೀಮಂತರನ್ನು ದೋಚಿ ಬಡವರಿಗೆ ನೆರವಾಗುತ್ತಾನೆ. ರಘು ತಾಯಿ (ರೂಪಾ ಗಂಗೋಪಾಧ್ಯಾಯ) ಇದರಿಂದ ಮಗನ ಬಗ್ಗೆ ಹೆಮ್ಮೆ ತಾಳುತ್ತಾಳೆ. ಇವನ ಫ್ರೆಂಡ್ ಗುಂಜಾ (ಸೋಹಿನಿ ಸರ್ಕಾರ್) ಹಾಗೂ ಪ್ರೇಯಸಿ ಸೌಧಾಮಿನಿ (ಇಥಿಕಾ ಪಾಲ್) ಇಬ್ಬರೂ ಈತನ ಮೇಲೆ ವಿಶೇಷ ಪ್ರಭಾವ ಬೀರುತ್ತಾರೆ.

ಮರಾಠಿ : ಬಿನ್ ಲಗ್ನಾಚಿ ಗೋಷ್ಟ್
ಮರಾಠಿ ಹಿಂದಿ ಚಿತ್ರಗಳಲ್ಲಿ ಪ್ರೀತಿ, ಪ್ರೇಮ, ರೊಮಾನ್ಸ್ ಗೇನೂ ಕಡಿಮೆ ಇಲ್ಲ. ಆದರೆ ಇಲ್ಲಿ ಇಂದಿನ ಆಧುನಿಕ ಕಾಲದ ಪ್ರೇಮದ ಹೊಸ ಕಲ್ಪನೆಯ ಕುರಿತಾಗಿ ತೋರಿಸಲಾಗಿದೆ. ಇಂದಿನ ಆಧುನಿಕ ವಿಚಾರಧಾರೆ, ಲಿವ್ ಇನ್ ರಿಲೇಶನ್ ಕುರಿತಾದ ಚಿತ್ರವಿದು. ಆದಿತ್ಯ ಇಂಗ್ಳೆ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇಂದಿನ ಯುವಜನತೆ ಬಯಸುವಂಥ ಪ್ರೀತಿ, ಪ್ರೇಮ, ಸಂಬಂಧಗಳ ಮೌಲ್ಯಗಳನ್ನು ಚರ್ಚಿಸಲಾಗಿದೆ. ಜೊತೆಗೆ ಹಳೆ ತಲೆಮಾರಿನರ ಪರಿಪಕ್ವ ಪ್ರೇಮದ ಬಗ್ಗೆ ಹೇಳಲಾಗಿದೆ.
ಚಿತ್ರದ ನಾಯಕಿ ಋತಿಕಾ (ಪ್ರಿಯಾ ಬಾಪಟ್) ಲಂಡನ್ ನಿವಾಸಿ. ಅಲ್ಲಿಗೆ ಕೆಲಸದ ಸಲುವಾಗಿ ಬರುವ ಆಶಯ್ (ಉಮೇಶ್ ಕಾಮತ್) ಇವರಿಬ್ಬರ ಪ್ರೇಮದ ಕುರಿತಾಗಿದೆ. ಇಬ್ಬರೂ ಆಳವಾದ ಪ್ರೇಮಕ್ಕಿಳಿದರೂ, ಆಕೆಗೆ ಮದುವೆಯಂಥ ಬಂಧನದಲ್ಲಿ ಯಾವ ಆಸಕ್ತಿಯೂ ಇಲ್ಲ. ಒಮ್ಮೆ ಆಶಯನಿಗೆ ಆ್ಯಕ್ಸಿಡೆಂಟ್ ಆಗಿ ಕಾಲು ಮುರಿಯುತ್ತದೆ. ಹೀಗಾಗಿ ಇಬ್ಬರಿಗೂ ಪರಸ್ಪರರ ಸಹಾಯ ಅನಿವಾರ್ಯವಾಗುತ್ತದೆ. ತಮ್ಮ ಕೇರ್ ತೆಗೆದುಕೊಳ್ಳುವ ಹಿರಿಯರು ಬೇಕೆನಿಸುತ್ತದೆ. ಆಗ ಮಾಧವ್ ತಾಂಬೆ (ಗಿರೀಶ್ ಓಕ್) ಹಾಗೂ ಉಮಾ (ನಿವೇದಿತಾ ಸರಾಫ್) ಇವರ ಜೀವನದಲ್ಲಿ ಎಂಟ್ರಿ ಪಡೆಯುತ್ತಾರೆ. ಇವರಿಬ್ಬರಿಗೂ ಈ ನಾಯಕ ನಾಯಕಿಗೂ ಎಂಥ ಸಂಬಂಧ ಎನ್ನುವುದೇ ಸ್ವಾರಸ್ಯಕರ. ಈ ಚಿತ್ರ ಮಣಿರತ್ನಂರ ತಮಿಳು ಚಿತ್ರ `ಓಕೆ ಕಣ್ಮಣಿ’ಯ ಛಾಯೆ ಹೊಂದಿದೆ ಎಂದೇ ಅನಿಸುತ್ತದೆ.

ಗುಜರಾತಿ : ಚನಿಯಾ ಚೋಲಿ
ಈ ಚಿತ್ರದಲ್ಲಿ ಯಶ್ ಸೋನಿ, ನೇತ್ರಿ ತ್ರಿವೇದಿ, ಚೇತನ್ ದೈಯಾ, ಹೀನಾ ವಾರ್ದೆ, ಮೌಲಿಕ್ ನಾಯಕ್ ಮುಂತಾದವರು ನಟಿಸಿದ್ದಾರೆ. ಒಬ್ಬ ಮಾಮೂಲಿ ಟೀಚರ್, ಬಲು ಅತ್ಯುತ್ಸಾಹಿ. ತನ್ನ ಹಳ್ಳಿಯ ಅಮಾಯಕ ಗ್ರಾಮಸ್ಥರು ಅಧಿಕಾರಿಗಳ ದುರಾಸೆ ಲಂಚಕ್ಕೆ ಬಲಿಯಾಗಿ ತಮ್ಮ ಭೂಮಿಕಾಣಿ ಕಳೆದುಕೊಂಡು ಬರಿಗೈ ಆಗಿರುವುದನ್ನು ಕಂಡು ಸಿಡಿದೇಳುತ್ತಾನೆ. ಆಗ ಆತ ಕ್ರಾಂತಿಯಿಂದ ಸಿಡಿದೇಳುವ ಬದಲು ಆ ರೈತರಿಗಾಗಿ ಒಂದು ಹೊಸ ಐಡಿಯಾ ನೀಡುತ್ತಾನೆ. ಸರ್ಕಾರಿ ಸಿಸ್ಟಂ ಈ ಬಡವರ ಭೂಮಿ ಕಬಳಿಸಬಹುದಾದರೆ, ಆ ಸಿಸ್ಟಮನ್ನೇ ಏಕೆ ಲೂಟಿ ಹೊಡೆಯಬಾರದು? ಆ ಹಳ್ಳಿಯ 7 ಮಂದಿ ಹೆಂಗಸರು ಹಾಗೂ ಒಬ್ಬ ವಯೋವೃದ್ಧರು ಮಾತ್ರ ಈ ಐಡಿಯಾ ಒಪ್ಪುತ್ತಾರೆ. ಇವರೆಲ್ಲರ ಸೈನ್ಯ ಕಟ್ಟಿಕೊಂಡು ಕೆಚ್ಚೆದೆಯ ಹುಚ್ಚಿನಿಂದ ಮುನ್ನುಗ್ಗುವ ಆ ಹಳ್ಳಿಮೇಷ್ಟ್ರು, ಸಿಸ್ಟಮ್ ವಿರುದ್ಧ ಹೋರಾಡುತ್ತಾನೆ. ಇವರು ಅದರಲ್ಲಿ ಯಶಸ್ವಿಯಾದರೆ ಅಥವಾ ಇತರರಂತೆ ಫೇಲಾದರೇ? ಇದರ ಉತ್ತರವೇ ಈ ಚಿತ್ರದ ಉತ್ತರಾರ್ಧ. ಉತ್ತಮ ಆ್ಯಕ್ಷನ್, ಕಾಮಿಡಿ, ಸಾಮಾಜಿಕ ಕಳಕಳಿಯುಳ್ಳ ಈ ಚಿತ್ರ ಆ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತದೆ.





