ಕಾಂತಾರ ಕನಕವತಿಯ ಚಮತ್ಕಾರ
`ಬೀರಬಲ್ ಟ್ರಿಾಜಿ’ ಮೂಲಕ ನಾಯಕಿಯಾಗಿ ಸಿನಿಪಯಣ ಆರಂಭಿಸಿದ ನಟಿ ರುಕ್ಮಿಣಿ ವಸಂತ್, `ಸಪ್ತಸಾಗರದಾಚೆ ಎಲ್ಲೋ’ ಸರಣಿಯ ಮೂಲಕ ಮನೆಮಾತಾದವರು. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿದ್ದ ಅವರು, ಸಂಪೂರ್ಣ ಕಲಾವಿದೆಯಾಗಿ ಭರವಸೆ ಮೂಡಿಸಿದರು. `ಬಘೀರ, ಭೈರತಿ ರಣಗಲ್’ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿದ್ದ ರುಕ್ಮಿಣಿ `ಕಾಂತರ ಚಾಪ್ಟರ್’ರ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡಿದರು. ಚಿತ್ರದ ಜೊತೆಗೆ ಅವರು ನಟಿಸಿರುವ ಕನಕವತಿ ಪಾತ್ರಕ್ಕಂತೂ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಆ ಮೂಲಕ ನ್ಯಾಶನಲ್ ಕ್ರಶ್ ಎನಿಸಿದ್ದಾರೆ.

ಪಡ್ಡೆಗಳ ಹೃದಯಕ್ಕೆ ಕಚಗುಳಿ ಇಡುವ ನಮ್ರತಾ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಮೂಲಕ ಸೀರಿಯಲ್ ಜರ್ನಿ ಆರಂಭಿಸಿ, `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕ ಗಮನ ಸೆಳೆದರು. ತಕಧಿಮಿತ ಡ್ಯಾನ್ಸ್ ಶೋನಲ್ಲಿ ಟಾಪ್-5ಗೆ ಆಯ್ಕೆಯಾದರು. `ನಾಗಿಣಿ-5′ ಸೀರಿಯಲ್ ನಲ್ಲಿ ಶಿವಾನಿ ಪಾತ್ರ ನಿರ್ವಹಿಸಿ, ಬಿಗ್ ಬಾಸ್ ಕನ್ನಡ ಸೀಸನ್-10 ರಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. `ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಮ್ರತಾ, ಸೋಶಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್ ಆಗಿದ್ದು, ತಮ್ಮ ಮುದ್ದು ಮುದ್ದಾದ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ.

ಲುಕ್ ಬದಲಿಸಿಕೊಂಡ ಅನೂಷಾ ಹೆಗ್ಡೆ
ಕಿರುತೆರೆಯ `ರಾಧಾ ರಮಣ’ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದ ಮೂಲಕ ಮನೆಮಾತಾದವರು ಅನೂಷಾ ಹೆಗ್ಡೆ. ತೆಲುಗು ಕಿರುತೆರೆಯಲ್ಲಿ ಬಿಝಿಯಾಗಿರುವ ಈಕೆಯ ಅಭಿನಯಕ್ಕೆ ತೆಲುಗು ಮಂದಿ ಕೂಡ ಫಿದಾ ಆಗಿದ್ದಾರೆ. ತೆಲುಗಿನ `ಸೂರ್ಯಕಾಂತಂ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಅವರು ಸಂಪೂರ್ಣವಾಗಿ ತಮ್ಮ ಲುಕ್ ಬದಲಾಯಿಸಿಕೊಂಡರು. ಇದಕ್ಕೂ ಮೊದಲು `ಪೆಳ್ಳಾಡತಾ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

ಫೈಟ್ ಗೂ ಸೈ, ನಟನೆಗೂ ಸೈ ಅರ್ಚನಾ
ಕನ್ನಡದ `ಮ್ಯೂಟ್’ ಸಿನಿಮಾದ ನಟನೆಗಾಗಿ 2021ನೇ ಸಾಲಿನ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದ ಸ್ಯಾಂಡಲ್ ವುಡ್ ನಟಿ ಅರ್ಚನಾ ಜೋಯಿಸ್, `ಮಹಾದೇವಿ’ ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದ ಮೂಲಕ ಕಿರುತೆರೆ ಪ್ರವೇಶಿಸಿದರು. `ದುರ್ಗಾ’ ಸೀರಿಯಲ್ ಮೂಲಕ ಮನೆಮಾತಾದ ಈಕೆ `ಕೆ.ಜಿ.ಎಫ್’ ಚಿತ್ರದಲ್ಲಿ ಯಶ್ ತಾಯಿ ಪಾತ್ರವನ್ನು ಅಮೋಘವಾಗಿ ಅಭಿನಯಿಸಿ, ಸೈಮಾ ಅತ್ಯುತ್ತಮ ಪೋಷಕರ ಪ್ರಶಸ್ತಿ ಪಡೆದರು. ಅರ್ಚನಾ, ದೃಷ್ಟಿ ಸೆಂಟರ್ ಮತ್ತು ನಾಟ್ಯ ಗ್ರೂಪ್ ನ ಮೂಲಕ ಭಾರತ ಮತ್ತು ವಿದೇಶಾದ್ಯಂತ ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಕಿರುತೆರೆಗೆ ಮನೆಮಗಳು ಅಶ್ವಿನಿ ಗೌಡ
ಕಿರುತೆರೆದ ಹಾಗೂ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ, ನಿರ್ಮಾಪಕಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಕಾರ್ಯದರ್ಶಿ ಅಶ್ವಿನಿ ಗೌಡ, ತಮ್ಮದೇ ಆದ ಎಎಂಜಿ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. `ಅಶ್ವಿನಿ ನಕ್ಷತ್ರ, ಮಹಾಪರ್ವ’ ಸೇರಿದಂತೆ ಕನ್ನಡದ 15ಕ್ಕೂ ಹೆಚ್ಚು ಹಾಗೂ ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾದವರು. ಸ್ಯಾಂಡಲ್ ವುಡ್ ನ `ಚಡ್ಡಿದೋಸ್ತ್, ರಾಜಾಹುಲಿ, ಹ್ಯಾಪಿ ಬರ್ತ್ ಡೇ’ ಸೇರಿದಂತೆ 45ಕ್ಕೂ ಹೆಚ್ಚು ಚಿತ್ರಗಳ ಮೂಲಕ ಗಮನ ಸೆಳೆದರು. ಬಿಗ್ ಬಾಸ್ ಕನ್ನಡ ಸೀಸನ್-12ರ ಸ್ಪರ್ಧಿಯಾಗಿ ಪಾಲ್ಗೊಂಡರು.`ಕೆಂಡಸಂಪಿಗೆ’ ಕಾವ್ಯಾ ಶೈ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನ ಆಧುನಿಕ ನಟಿ ಕಾವ್ಯಾ ಶೈ.

ಈಕೆ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ `ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದರು. `ಭೂಮಿ ತಾಯಾಣೆ’ ಕಾವ್ಯಾ ನಟನೆಯ ಮೊದಲ ಸೀರಿಯಲ್. `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಸ್ಪರ್ಧಿಸಿದ್ದ ಕಾವ್ಯಾ ಶೈ, `ಕೊತ್ತಲವಾಡಿ’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಕನ್ನಡ `ಬಿಗ್ ಬಾಸ್ ಸೀಸನ್-12’ರ 2ನೇ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ.

ಬಹುಭಾಷಾ ಪ್ರವೀಣೆ ಖುಷಿ ರವಿ
ಬಹುಭಾಷಾ ನಟಿ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಗುರುತಿಸಿಕೊಂಡಿದ್ದಾರೆ. `ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಚಿತ್ರದ ಮೂಲಕ ನಟನಾ ಜರ್ನಿ ಆರಂಭಿಸಿದರು. `ದಿಯಾ’ ಚಿತ್ರ ಖುಷಿ ರವಿಗೆ ಜನಪ್ರಿಯತೆ ತಂದುಕೊಟ್ಟಿತು. `ಅಯ್ಯನ ಮನೆ’ ವೆಬ್ ಸೀರೀಸ್ ನಲ್ಲೂ ನಟಿಸಿದವರು. ತೆಲುಗಿನ `ಪಿಂಡಂ’ ಚಿತ್ರದಲ್ಲಿ ನಟಿಸಿರುವ ಅವರು ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಗ್ಲಾಮರಸ್ ಬೊಂಬೆ ಸಾರಾ
`ಕನ್ನಡತಿ, ಅಮೃತಧಾರೆ’ ಸೀರಿಯಲ್ ನಟಿ ಸಾರಾ ಅಣ್ಣಯ್ಯ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಕನ್ನಡತಿ’ ಸೀರಿಯಲ್ ನಲ್ಲಿ ರೂಧಿನಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಸ್ಟಾರ್ ಸುವರ್ಣ ವಾಹಿನಿಯ `ನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ದೀಪಿಕಾ ಪಾತ್ರ ನಿರ್ವಹಿಸಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಅಮೃತಧಾರೆ’ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಅಭಿನಯಿಸಿದರು. ಸದಾ ಒಂದಲ್ಲಾ ಒಂದು ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಲೇ ಇರುವ ಸಾರಾ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್.





