ಮನರಂಜನೆಯ `ಫುಲ್ ಮೀಲ್ಸ್‘ನಲ್ಲಿ ದಿಯಾ ಖ್ಯಾತಿಯ ಖುಷಿ ರವಿ, ತಮ್ಮ ಕುರಿತು ಏನೆಂದು ಹೇಳುತ್ತಾರೆ ಕೇಳೋಣವೇ….?
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿರುವ ನಟಿ ಖುಷಿ ರವಿ. ಇವರನ್ನು 2020ರಲ್ಲಿ ತೆರೆಕಂಡ `ದಿಯಾ’ ಸಿನಿಮಾ ಮೂಲಕ ಹೆಚ್ಚಾಗಿ ಗುರುತಿಸುತ್ತಾರೆ. ಈ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಅಂತರ್ಮುಖಿ (ಇಂಟ್ರೋವರ್ಟ್) ಪಾತ್ರದಲ್ಲಿ ದಿಯಾ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ತಲುಪಿದರೆಂದರೆ, ಸಿನಿಪ್ರಿಯರು ಈಗಲೂ ಅವರನ್ನು ದಿಯಾ ಎಂದೇ ಗುರುತಿಸುತ್ತಾರೆ. ಇಲ್ಲಿಂದ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ಇತ್ತೀಚೆಗೆ ಜೀ 5ನ ಮೊದಲ ಕನ್ನಡ ವೆಬ್ ಸೀರೀಸ್ `ಅಯ್ಯನ ಮನೆ’ಯಲ್ಲಿ ನಟಿಸಿದ್ದಾರೆ. ಅಲ್ಲದೆ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ `ಫುಲ್ ಮೀಲ್ಸ್’ ಚಿತ್ರದ ನಾಯಕಿಯಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
`ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ (2016) ಸಿನಿಮಾದಲ್ಲಿಯೂ ಸಹ ಈ ನಟಿ ಅಭಿನಯಿಸಿದ್ದರು. ಅದಾದ ಬಳಿಕ ನಟಿಸಿದ `ದಿಯಾ’ ಖುಷಿ ರವಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತು. `ಸ್ಪೂಕಿ ಕಾಲೇಜ್’ ಸಿನಿಮಾದಲ್ಲಿ ನಟನೆಯಿಂದ ಗಮನ ಸೆಳೆದಿದ್ದ ಖುಷಿ ಬಳಿಕ ನಟಿಸಿದ `ಕೇಸ್ ಆಫ್ ಕೊಂಡಾಣ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ರಾಘವೇಂದ್ರರಿಗೆ ಖುಷಿ ಜೋಡಿಯಾದರು. ಇದರಲ್ಲಿ ಅವರದ್ದು ಡಾಕ್ಟರ್ ಪಾತ್ರ. ತೆಲುಗು ಸಿನಿಮಾ `ಪಿಂಡಂ, ನೀತಿ,’ ಡೈನಾಮಿಕ್ ಸ್ಟಾರ್ ದೇವರಾಜ್ ರ ದ್ವಿತೀಯ ಪುತ್ರ ಪ್ರಣವ್ ದೇವರಾಜ್ ನಟಿಸಿರುವ `ಸನ್ ಆಫ್ ಮುತ್ತಣ್ಣ’ ಅಂತಹ ಸಿನಿಮಾಗಳಿಂದ ಮೆಚ್ಚುಗೆ ಗಳಿಸಿದ್ದರು. ಖುಷಿ ರವಿ ಪಾತ್ರವನ್ನು ಸಿನಿಮಾ ಮಂದಿ ಹೊಗಳಿ ಕೊಂಡಾಡಿದ್ದರು.

ಇಂತಹ ಕನ್ನಡ ಪ್ರತಿಭೆ, ಖುಷಿ ರವಿ ಜೊತೆಗೊಂದು ಖುಷಿಯ ಮಾತುಕಥೆಯನ್ನು `ಗೃಹಶೋಭಾ’ ಇಲ್ಲಿ ಹಂಚಿಕೊಂಡಿದ್ದಾಳೆ.
ಖುಷಿ ರವಿಯರ ಮೂಲ ಹೆಸರು ಸುಶ್ಮಿತಾ ರವಿ. ಸಿನಿಮಾಗಾಗಿ ಖುಷಿ ರವಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು. ಖುಷಿಯ ತಂದೆ ರವಿ, ತಾಯಿ ಶೋಭಾ. ಬೆಂಗಳೂರಿನ ಜೆಪಿ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಖುಷಿ, ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ.
ಹತ್ತು ವರ್ಷಗಳಿಂದಲೂ ರಂಗಭೂಮಿಯಲ್ಲಿ ಕಾರ್ಯಪ್ರವೃತ್ತರಾಗಿರುವ ನಟಿ ಹಲವು ನಾಟಕ ತಂಡಗಳ ಜೊತೆ ತೊಡಗಿಸಿಕೊಂಡಿದ್ದಾರೆ. ಇನ್ನು ಇವರು 2012ರ ರಿಪಬ್ಲಿಕ್ ಡೇ ಕ್ಯಾಂಪ್ ನಲ್ಲಿ ಭಾಗವಹಿಸಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ಖುಷಿ ಕೂಡ ಇದ್ದರು. ಅದಲ್ಲದೆ, ಇವರು ಭರತನಾಟ್ಯ ಸಹ ಕಲಿತಿದ್ದಾರೆ. ನಾಲ್ಕು ವರ್ಷ ಸಂಗೀತ ಅಭ್ಯಾಸವನ್ನೂ ಕೂಡ ಮಾಡಿದ್ದಾರೆ.
`ದಿಯಾ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಚಂದನವನ ಫಿಲ್ಮ್ ಕ್ರಿಕೆಟ್ ಅಕ್ಯಾಡೆಮಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಬಾಲ್ಯ ಹಾಗೂ ರಂಗಭೂಮಿ ಹಿನ್ನೆಲೆ
ಸಂಗೀತ ಮತ್ತು ನೃತ್ಯ ಎಂದರೆ ನನಗೆ ಬಾಲ್ಯದಿಂದಲೂ ಇಷ್ಟ. ನಾನು ಜೆಪಿನಗರದ ಆಕ್ಸ್ ಫರ್ಡ್ ಇಂಗ್ಲಿಷ್ ಹೈಸ್ಕೂಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದೆ. ಜಯನಗರದ ಎನ್‌ಎಂಕೆಆರ್‌ವಿಯಲ್ಲಿ ಕಾಲೇಜು ಮುಗಿಸಿದೆ. ಅಲ್ಲೇ ಎಸ್‌ಎಸ್‌ಎಂಆರ್‌ವಿಯಲ್ಲಿ ಗ್ರ್ಯಾಜುಯೇಶನ್ ಮಾಡಿದ್ದೇನೆ. ಆರ್.ಡಿ ಕೆಡೆಟ್ ಆಗಿದ್ದುಕೊಂಡು ಕರ್ನಾಟಕ ಮತ್ತು ಗೋವಾ ರಿಪಬ್ಲಿಕ್ ಡೇ ಕ್ಯಾಂಪ್ ಮೂಲಕ 2012ರ ದೆಹಲಿಯ `ರಾಜ್ ಪಥ್ ಮಾರ್ಚ್’ನಲ್ಲಿ ಭಾಗವಹಿಸಿದ್ದೆ.
ವೀಣಾ ಮಂಜುನಾಥ್ ರ ಬಳಿ ಭರತನಾಟ್ಯ ಕಲಿತಿದ್ದೇನೆ. ಉಮಾದೇವಿಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದೇನೆ. ಗಾಯಕಿಯಾಗಿಯೇ ನನ್ನ ರಂಗಭೂಮಿ ಪ್ರವೇಶ ಆಯಿತು. `ಕಿವುಡು ಸರ್ ಕಿವುಡು’ ಎನ್ನುವ ಹಾಸ್ಯ ನಾಟಕದ ಮೂಲಕ ರಂಗಪ್ರವೇಶ ಮಾಡಿದೆ. ನಂತರ `ಕವಿಮಾಯೆ, ಚಿತ್ರಪಟ, ಸಂಸಾರ ಸಾಗರ, ರೆವೆಲ್ಯೂಶನ್, ಮೌನ, ಸದಾರಮೆ,’ ಸೇರಿದಂತೆ ಏಳೆಂಟು ನಾಟಕಗಳಲ್ಲಿ ಸೇರಿಕೊಂಡು ನಾನು ನೀಡಿದ ಪ್ರದರ್ಶನ ಹಲವಾರು!
ರಾಜ್ಯದಲ್ಲಿ ಮಾತ್ರವಲ್ಲದೆ, ಕೋಲ್ಕತಾ, ಅಸ್ಸಾಂ, ಒಡಿಶ್ಶಾ ಮೊದಲಾದ ಕಡೆ ನಾಟಕ ಪ್ರದರ್ಶನ ನೀಡಿದ್ದೆ. `ತ್ರಿನೇತ್ರ, ದಿ ರೆಡ್ ಥಿಯೇಟರ್ಸ್, ಸರ್ವಸ್ವ,’ ಸೇರಿದಂತೆ ಬಿ. ಜಯಶ್ರೀಯವರ `ಸ್ಪಂದನಾ’ ಮೊದಲಾದ ನಾಟಕ ತಂಡಗಳಲ್ಲಿಯೂ ಅಭಿನಯಿಸಿದೆ. ಸ್ಪಂದನಾದಲ್ಲಿ ವರ್ಕ್ ಶಾಪ್ ನೀಡಿದ್ದ ಮಂಡ್ಯ ರಮೇಶ್ ಸರ್, `ನೀನು ಒಳ್ಳೆಯ ನಟಿ. ಸಿನಿಮಾದಲ್ಲಿ ನಿನಗೆ ಒಳ್ಳೆಯ ಭವಿಷ್ಯವಿದೆ. ಆದರೆ ಚಿಕ್ಕಪುಟ್ಟ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಬೇಡ,’ ಎಂದು ಕಿವಿಮಾತು ಹೇಳಿದ್ದರು.
ಚಿತ್ರರಂಗದ ಪ್ರಾರಂಭದ ದಿನಗಳು
ನನಗೆ ನಟಿಯಾಗಬೇಕು, ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಗುರಿ ಇರಲಿಲ್ಲ ಎನ್ನುವ ನಟಿ ರಂಗಭೂಮಿಗೆ ಸಂಬಂಧಿಸಿದರು. ಚಿತ್ರ ಮಾಡುವಾಗ ನಾನು ಕೂಡ ನಟಿಯಾಗಿ ಪಾಲ್ಗೊಂಡಿದ್ದೆ. ಟಿ.ಎನ್. ಸೀತಾರಾಮ್ ರ ಪುತ್ರ ಸತ್ಯಜಿತ್ ನಿರ್ದೇಶಿಸಿದ್ದಂಥ `ಹಿಂಗ್ಯಾಕೆ’ ಎನ್ನುವ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದೆ. ಅದರ ಬಳಿಕ `ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಚಿತ್ರದಲ್ಲಿ ದ್ವಿತೀಯಾರ್ಧದಲ್ಲಿ ಬರುವಂಥ ಪಾತ್ರವಾಗಿದ್ದೆ. ಇದರ ನಡುವೆ `ಜಾತ್ರೆ’ ಎನ್ನುವ ಕಿರುಚಿತ್ರ ಮಾಡಿದ್ದೆ.
ತಮಿಳು, ತೆಲುಗು ವಿಡಿಯೋ ಆಲ್ಬಮ್ ಗಳಲ್ಲಿಯೂ ನಟಿಸಿದ್ದೇನೆ. ರಘು ದೀಕ್ಷಿತ್ ಪಾಲ್ಗೊಂಡಿದ್ದಂಥ ಭೀಮಾ ಜ್ಯುವೆಲರಿಯ ಹಳೆಯ ಜಾಹೀರಾತೊಂದರಲ್ಲಿಯೂ ಕಾಣಿಸಿಕೊಂಡಿದ್ದೆ ಎಂದು ತಮ್ಮ ಪ್ರಾರಂಭದ ವೃತ್ತಿ ಬದುಕಿನ ಕುರಿತು ಹೇಳುತ್ತಾರೆ.

`ದಿಯಾ‘ ತಂದ ಖುಷಿ
`ದಿಯಾ’ ಚಿತ್ರದ ಪಾತ್ರ ನನಗೆ ಖಂಡಿತಾ ಖುಷಿ ಕೊಟ್ಟಿದೆ. ಇದು ನನಗೆ ನಾಯಕಿಯಾಗಿ ಮೊದಲ ಚಿತ್ರ. ಮೊದಲ ನಾಯಕಿಯ ಪಾತ್ರ ಎನ್ನುವುದರ ಜೊತೆಗೆ ಚಿತ್ರಕ್ಕೆ ನನ್ನದೇ ಪಾತ್ರದ ಹೆಸರಿದೆ ಎಂದಾಗ ತುಂಬಾ ಖುಷಿಯಾಗಿತ್ತು. ಇನ್ನು ಆ ಸಂದರ್ಭದಲ್ಲಿ ನಾನು `ದಿಯಾ’ ನಾಯಕಿಯಾಗಿ ಆಯ್ಕೆ ಆಗಿದ್ದು ಹೇಗೆಂದರೆ, ಅದೊಮ್ಮೆ ನಾನು ತಮಿಳಿನಲ್ಲಿ `ಶಿವಶಕ್ತಿ’ ಎನ್ನುವ ಶಾರ್ಟ್ ಫಿಲ್ಮ್ ಮಾಡಿದ್ದೆ. ನಿಜವಾಗಿ ಅದು ಯಾವುದೋ ಪ್ರೊಡ್ಯೂಸರ್ ಗೆ ತೋರಿಸುವ ಉದ್ದೇಶದಿಂದ ಮಾಡಿದ್ದಂಥ ಚಿತ್ರ. ಹಾಗಾಗಿ ಅದು ಯೂಟ್ಯೂಬ್ ಸೇರಿದಂತೆ ಹೊರಗಡೆ ಎಲ್ಲಿಯೂ ಲಭ್ಯವಿಲ್ಲ. ಆದರೆ ಅದಕ್ಕೆ ಛಾಯಾಗ್ರಾಹಕರಾಗಿದ್ದ ಶಂಕರ್ `ದಿಯಾ’ ನಿದೇರ್ಶಕ ಅಶೋಕ್ ರವರಿಗೆ ನನ್ನ ಹೆಸರನ್ನು ರೆಫರ್ ಮಾಡಿದ್ದರು. ಹಾಗಾಗಿ `ದಿಯಾ’ ಚಿತ್ರಕ್ಕಾಗಿ ಆಡಿಶನ್ ನೀಡುವಂತೆ ನನಗೆ ಕರೆ ಬಂದಿತ್ತು. ಅಲ್ಲಿಗೆ ಹೋದೆ, ನಾಯಕಿಯೂ ಆದೆ.
ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಕಳೆದ ನಂತರ `ದಿಯಾ’ ಚಿತ್ರ ನನಗೆ ದೊಡ್ಡ ಬ್ರೇಕ್ ಕೊಟ್ಟಿತು. ನಾನು ಚಿತ್ರ ಮಾಡಿಯೇ ಐದಾರು ವರ್ಷವಾಗಿತ್ತು. ಒಂದು ಒಳ್ಳೆಯ ಸಿನಿಮಾ ಮೂಲಕ, ನಿರ್ದೇಶಕರ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಬೇರೆ ಯಾವ ಸಿನಿಮಾನೂ ನಾನು ಒಪ್ಪಿಕೊಂಡಿರಲಿಲ್ಲ. ಅದರಂತೆ ಯಶಸ್ಸು ಲಭಿಸಿತ್ತು. ಅದಾದ ನಂತರ ಬಹಳ ಆಫರ್ ಗಳೂ ಬಂದಿವೆ. ಜನರು ನನ್ನನ್ನು `ದಿಯಾ’ ಮೂಲಕ ಈಗಲೂ ಗುರುತಿಸುತ್ತಿರುವುದು ಖುಷಿಯ ಸಂಗತಿಯಾಗಿದೆ, ಎಂದು ನಟಿ ಖುಷಿ ರವಿ ಖುಷಿಯಿಂದ ಹೇಳುತ್ತಾರೆ.
ಥಿಯೇಟರ್ ಗೆ ಭೇಟಿ ಕೊಟ್ಟಾಗ ಗಂಡಸರ ಕಣ್ಣಲ್ಲಿಯೂ ಕಣ್ಣೀರು ನೋಡಿದ್ದೆ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದಿದ್ದರೂ ಜನರ ಮನಸ್ಸು ಗೆದ್ದಿದೆ. ಚಿತ್ರ ನೋಡಿದವರೆಲ್ಲ `ಭಾವನಾತ್ಮಕವಾಗಿ ಕಾಡಿತು’ ಎಂದು ಹೇಳುತ್ತಾರೆ. ಇದೇ ನನಗೆ ನಾನೊಬ್ಬ ನಟಿಯಾಗಿ ಖುಷಿಪಡಲು ಕಾರಣವಾಗಿದೆ ಎನ್ನುತ್ತಾರೆ ಖುಷಿ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ `ದಿಯಾ’ ಸಿನಿಮಾ ಗೆದ್ದು ಬೀಗಿತ್ತು. ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವಾಗಲೇ ಕೊರೋನಾ ಪರಿಣಾಮದಿಂದ ಚಿತ್ರಮಂದಿರಗಳು ಬಂದ್ ಆಗುವ ಮೂಲಕ `ದಿಯಾ’ ಪ್ರದರ್ಶನಕ್ಕೂ ಬ್ರೇಕ್ ಬಿತ್ತು. ಆದರೆ ಆನಂತರ ಆನ್ ಲೈನ್ ನಲ್ಲಿ ರಿಲೀಸ್ ಮಾಡಲಾಯಿತು. ಆನ್ ಲೈನ್ ನಲ್ಲಿ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಚಿತ್ರದಲ್ಲಿ ದಿಯಾ ಸ್ವರೂಪ್ ಆಗಿ ಅದ್ಭುತ ಅಭಿನಯದ ಮೂಲಕ ಚಿತ್ರಪ್ರಿಯರ ಮನಗೆಲ್ಲುವ ಮೂಲಕ ಖುಷಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದಾರೆ.
`ದಿಯಾ’ ನಾಲ್ಕು ವರ್ಷ ಹಿಂದೆ ಸೆಟ್ಟೇರಿದ ಸಿನಿಮಾ. ಬರೋಬ್ಬರಿ ನಾಲ್ಕು ವರ್ಷದ ಪ್ರಾಜೆಕ್ಟ್ `ದಿಯಾ.’ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಖುಷಿ, ರಾಕೇಶ್ ಜೊತೆ ಹಸೆಮಣೆ ಏರಿದ್ದರು. ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.
ಸುಳ್ಳು ಹೇಳಿದ್ದಕ್ಕೆ ಮದ್ವೆ ಆಯ್ತು
ಕೆಲವು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಖುಷಿಯವರ ಪತಿಯ ಹೆಸರು ರಾಕೇಶ್. ಆತ ಒಬ್ಬ ಉದ್ಯಮಿ, ಸ್ವಂತ ಬಿಸ್ ನೆಸ್ ಮಾಡುತ್ತಿದ್ದಾರೆ. ಈ ದಂಪತಿಗೊಂದು ಮುದ್ದಾದ ಹೆಣ್ಣುಮಗುವಿದ್ದು, ಅವಳೇ ತನಿಷಾ. ಖುಷಿ ಮದುವೆ ವಿಷಯ ಬಹಳ ಸ್ವಾರಸ್ಯಕರವಾಗಿದೆ. ಏಕೆಂದರೆ ಮದುವೆ ಆಗೋಕೆ ಸಾವಿರ ಸುಳ್ಳು ಹೇಳಬೇಕು ಎನ್ನುತ್ತಾರೆ. ಹಾಗೆಯೇ ಖುಷಿ ಮದುವೆ ಆಗೋದಕ್ಕೂ ಸಹ ಒಂದು ಸುಳ್ಳು ಕಾರಣವಾಗಿದೆ.
ಖುಷಿಯವರದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಅವರ ಲವ್ ಸ್ಟೋರಿ ಶುರುವಾಗಿದ್ದೇ ಒಂದು ಸುಳ್ಳಿನ ಕಾರಣ. ನನ್ನನ್ನು ಪ್ರೀತಿ ಮಾಡಲು ರಾಕೇಶ್ ಒಂದು ಸುಳ್ಳು ಹೇಳಿದ್ದರು. ಕಾಲೇಜ್ ನಲ್ಲಿ ಇರುವಾಗ ನನಗೆ ಹೀಗೆ ಯಾವುದೋ ಒಂದು ಅಪರಿಚಿತ ನಂಬರ್ ನಿಂದ ಮೆಸೇಜ್ ಬಂದಿತ್ತು. ನಾನು ಯಾರಿದು? ಎಂದು ಕೇಳಿ ಪುನಃ ಮೆಸೇಜ್ ಮಾಡಿದ್ದೆ. ನನಗೆ ಎನ್‌ಸಿಸಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಆಗ ಅವರು ನಾನು ನಿಮ್ಮ ಎನ್‌ಸಿಸಿ ಸೀನಿಯರ್ ಎಂದು ಹೇಳಿದ್ದರು. ಆದರೆ ಅವರು ನಿಜವಾಗಲೂ ನನ್ನ ಸೀನಿಯರ್ ಆಗಿರಲಿಲ್ಲ. ಅವರು ನನಗೆ ಗೊತ್ತಿರುವವರ ಬಳಿ ನನ್ನ ನಂಬರ್ ತೆಗೆದುಕೊಂಡು ಮೆಸೇಜ್ ಮಾಡುತ್ತಿದ್ದರು, ನಾನು ನನ್ನ ರಾಕೇಶ್ ರಿಲೇಶನ್ ಶಿಪ್ ನಲ್ಲಿದ್ದೆ. ಹೀಗೆ ಒಂದು ದಿನ ರಾಕೇಶ್ ನಮ್ಮ ಮನೆಗೆ ಬಂದು ಅಮ್ಮ ಅಪ್ಪನ ಬಳಿ ಡೈರೆಕ್ಟ್ ಆಗಿ ಮದುವೆ ಬಗ್ಗೆ ಕೇಳಿದ್ದರು. ಇದಕ್ಕೆ ಮುನ್ನವೇ ನಾವು ಫೋನ್ ನಲ್ಲಿ ಮಾತನಾಡಲು ಶುರು ಮಾಡಿದ್ದೆ. ಹೀಗೆ ಮಾತನಾಡುತ್ತಿದ್ದಾಗ ಅವರ ಅಮ್ಮ ಮತ್ತು ನಮ್ಮ ಅಪ್ಪ ಇಬ್ಬರೂ ಒಂದೇ ಊರಿನವರು ಎನ್ನುವುದು ಗೊತ್ತಾಯ್ತು. ನಮ್ಮ ಅಮ್ಮ ಅಪ್ಪ ತುಂಬಾ ಫ್ರೆಂಡ್ಲಿಯಾಗಿದ್ದರು. ಆಗ ನಮ್ಮ ಅಪ್ಪನಿಗೆ, ರಾಕೇಶ್ ನಮ್ಮ ಊರಿನವರು, ನನ್ನ ಎನ್‌ಸಿಸಿ ಸೀನಿಯರ್ ಅಂತ ಫೋನ್ ನಲ್ಲಿಯೇ ಪರಿಚಯ ಮಾಡಿಸಿದ್ದೆ. ರಾಕೇಶ್ ದಿನ ನಮ್ಮ ಅಮ್ಮ ಅಪ್ಪನ ಜೊತೆ ಮಾತನಾಡುತ್ತಿದ್ದರು.
ನಂತರ ಅವರ ಹುಟ್ಟುಹಬ್ಬದ ದಿನ ಮನೆಗೆ ಬಂದು ಸುಶ್ಮಿತಾ ಅಂದ್ರೆ ನನಗೆ ಇಷ್ಟ. ನನಗೆ ಅವಳನ್ನು ಮದುವೆ ಮಾಡಿಕೊಡ್ತೀರಾ? ಎಂದು ಕೇಳಿದರು. ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ಒಂದೆರಡು ವರ್ಷ ಡೇಟಿಂಗ್ ಮಾಡಿದ ನಂತರ ನಾವು ಮದುವೆಯಾದೆವು. ಮದುವೆ ಆದಾಗ ನನಗೆ 22 ವರ್ಷ, ಅವರಿಗೆ 27 ವರ್ಷ, ಎಂದು ಖುಷಿ ತಮ್ಮ ಲವ್ ಸ್ಟೋರಿಯನ್ನು ನೆನಪಿಸಿಕೊಂಡರು.
ಇದರೊಂದಿಗೆ ನಮ್ಮ ಕುಟುಂಬ ಪ್ರೋತ್ಸಾಹದಿಂದ ತಮಗೆ ಈಗಲೂ ವಿವಿಧೆಡೆಯಲ್ಲಿ ನಡೆಯುವ ಸಿನಿಮಾ ಶೂಟಿಂಗ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕನ್ನಡದಲ್ಲಿ ಅವಕಾಶ ಸಿಗುತ್ತಿಲ್ಲ
ನಾನು ಒಂದು ವಿಚಾರವನ್ನು ತುಂಬಾ ಪ್ರಾಮಾಣಿಕವಾಗಿ ಹೇಳೋಕೆ ಇಷ್ಟಪಡುತ್ತೇನೆ. ಈ ವಿಚಾರ ನನಗೆ ತುಂಬಾ ಕಾಡುತ್ತಿತ್ತು. `ಅಯ್ಯನ ಮನೆ’ ವೆಬ್ ಸೀರೀಸ್ ಬಂತು, ತುಂಬಾ ಚೆನ್ನಾಗಿ ಆಯ್ತು. ಬೇರೆ ಬೇರೆ ಭಾಷೆಗಳಿಗೂ ಡಬ್ ಆಯ್ತು. ಅದರಿಂದ ನನಗೆ ಆಫರ್ಸ್ ಇದೆ. ಆದರೆ ಕನ್ನಡದಲ್ಲಿ ಬರ್ತಿಲ್ಲ…. ಬೇರೆ ಭಾಷೆಗಳಿಂದ ಆಫರ್ಸ್ ಬರ್ತಿವೆ. ಇದು ಯಾಕೆ ಹೀಗೆ ಆಗ್ತಿದೆ ಗೊತ್ತಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆಗಳಿಂದೆಲ್ಲಾ ಆಫರ್ಸ್ ಬರ್ತಿವೆ ಹೊರತು, ಕನ್ನಡದಲ್ಲಿ ಒಂದು ಸ್ಕ್ರಿಪ್ಟ್ ಕೂಡ ನಾನು ಕೇಳಿಲ್ಲ. ನೋಡೋಣ ಮುಂದಕ್ಕೆ ಒಳ್ಳೊಳ್ಳೆ ಸ್ಕ್ರಿಪ್ಟ್ಸ್ ಕನ್ನಡದಲ್ಲಿ ಸಿಕ್ಕಿದರೆ ಖುಷಿ, ಎಂದು ಖುಷಿ ರವಿ ಹೇಳಿಕೊಂಡಿದ್ದಾರೆ.
ಕನ್ನಡದವಳಾಗಿ ಬೇರೆ ಭಾಷೆಯವರು ನಮ್ಮನ್ನು ಗುರುತಿಸಿ ನಮಗೆ ಅವಕಾಶ ಕೊಡುತ್ತಿದ್ದಾರೆ. ಹಿಂದಿನಿಂದ ಅಂತ ಹೇಳ್ತಿಲ್ಲ, ಈಗ ಒಂದೂವರೆ ವರ್ಷದಿಂದ ಸ್ಕ್ರಿಪ್ಟ್ಸ ಬರೋದು ಸಿಕ್ಕಾಪಟ್ಟೆ ಕಮ್ಮಿಯಾಗಿದೆ. ನನ್ನೊಬ್ಬಳಿಗೆ ಅಲ್ಲ, ಬೇರೆ ನಟಿಯರಿಗೂ ಹೀಗೆ ಆಗಿದೆ. ನಮ್ಮಲ್ಲಿ ಬರಹಗಾರರು ಕಮ್ಮಿ ಆಗಿದ್ದಾರೆ. ಬೇರೆ ಭಾಷೆಗಳಲ್ಲಿ ಅವರೇ ಹೀರೋ ಹೀರೋಯಿನ್ ನಂತೆ. ನಮ್ಮಲ್ಲಿ ಒಳ್ಳೊಳ್ಳೆಯ ಬರಹಗಾರರನ್ನು ತರಬೇಕು, ಎಂದು ಖುಷಿ ಹೇಳಿಕೊಂಡಿದ್ದಾರೆ.
`ಮೊದಲ ಆದ್ಯತೆ ಕನ್ನಡ ಸಿನಿಮಾಗೇ ಇದೆ,’ ಎನ್ನುವ ಖುಷಿ, ತುಂಬಾ ಸಿನಿಮಾಗಳನ್ನು ಮಾಡಿದ್ರೆ, ಯಾವುದ್ಯಾವುದೋ ಸಿನಿಮಾಗಳನ್ನು ಮಾಡ್ತಿದ್ದಾರೆ. ಚೂಸಿಯಾಗಿ ಇಲ್ಲ ಅಂತ ಮಾತನಾಡಿಕೊಳ್ತಾರೆ. ಏನು ಮಾಡ್ತಿಲ್ಲ ಕಾಯೋಣ ಅಂದ್ರೆ, ಸಿನಿಮಾಗಳೇ ಇಲ್ಲ ಇವ್ರಿಗೆ ಅಂತಾರೆ. ಹಾಗಾಗಿ ನಮಗೆ ಎಲ್ಲಿ ಅವಕಾಶಗಳು ಸಿಗುತ್ತದೋ ಎಲ್ಲಿ ತೇಲಿಕೊಂಡು ಹೋಗಬೇಕು ಅಷ್ಟೆ. ಹಾಗೆಂದು ತುಂಬಾ ಗ್ಲಾಮರಸ್ ರೋಲ್ ಗಳಲ್ಲಿ ನಟಿಸೋಕೆ ನನಗೆ ಇಷ್ಟವಿಲ್ಲ.
ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸ್ತೀನಿ. ಆದರೆ ತುಂಬಾ ಗ್ಲಾಮರಸ್, ಬೋಲ್ಡ್ ಕ್ಯಾರೆಕ್ಟರ್ ಗಳು ನನಗೆ ಬೇಕಿಲ್ಲ. ಸ್ಕ್ರಿಪ್ಟ್ ಆ ಥರವಿದ್ದರೂ ನಾನು ಹಿಂಜರಿಯುತ್ತೇನೆ. ನಮ್ಮತನವನ್ನು ನಾವು ಬಿಟ್ಟುಕೊಡಬಾರದು. ನನ್ನ ಮೊದಲ ಆದ್ಯತೆ ಕನ್ನಡ ಸಿನಿಮಾಗೆ ಇರಲಿದೆ ಎಂದರು.
ಇನ್ನು ಖುಷಿ ನಟನೆಯ `ನಾಕುತಂತಿ’ ಸಿನಿಮಾದ ನಾಲ್ಕು ಕಥೆಗಳ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರದ ನಾಲ್ಕು ಕಥೆಗಳ ಪೈಕಿ ಒಂದಕ್ಕೆ ಮಹೇಶ್ ರಾಜ್ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ನಟಿ ಖುಷಿ ನರ್ಸ್ ಪಾತ್ರದಲ್ಲಿದ್ದಾರೆ. ಈ ಕಥೆ ಯಾರೂ ನಿರೀಕ್ಷೆ ಮಾಡಿರದ ಥ್ರಿಲ್ಲಿಂಗ್ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ. ಉಳಿದ ಮೂರು ಕಥೆಗಳಿಗೆ ಮೂವರು ನಿರ್ದೇಶಕರು ಮೂವರು ವಿಭಿನ್ನ ನಾಯಕಿಯರಿದ್ದಾರೆ.
ಮನರಂಜನೆಯ `ಫುಲ್ ಮೀಲ್ಸ್’ನಲ್ಲಿ ಖುಷಿ, ತೇಜಸ್ವಿನಿ ಶರ್ಮಾ ಸದ್ಯಕ್ಕೆ ಖುಷಿ ಅಭಿನಯದ ವಿನಾಯಕ್ ನಿರ್ದೇಶನದ `ಫುಲ್ ಮೀಲ್ಸ್’ ರಿಲೀಸ್ ಗೆ ತಯಾರಿದೆ. ಪ್ರಣವ್ ದೇವರಾಜ್ ಜೊತೆ ಅಭಿನಯಿಸಿರುವ `ಸನ್ ಆಫ್ ಮುತ್ತಣ್ಣ’ ಚಿತ್ರದ ನಂತರ ನಟಿಸಿರುವ ಮತ್ತೊಂದು ಚಿತ್ರ ಇದಾಗಿದೆ.
ಒಂದು ಕಾಲದಲ್ಲಿ ಉದಯ್ ಮ್ಯೂಸಿಕ್ ಚಾನೆಲ್ ನಲ್ಲಿ ಜನಪ್ರಿಯ ಆ್ಯಂಕರ್ ಆಗಿದ್ದರು ಲಿಖಿತ್ ಶೆಟ್ಟಿ. ಹೆಣ್ಣುಮಕ್ಕಳ ಫೇವರಿಟ್ ವಿಜೆ ಆಗಿದ್ದ ಲಿಖಿತ್ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. `ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್’ ಹಾಗೂ `ಅಬ್ಬಬ್ಬ!’ ಚಿತ್ರಗಳಲ್ಲಿ ಲಿಖಿತ್ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದರು. ಇದೀಗ `ಫುಲ್ ಮೀಲ್ಸ್’ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಲಿಖಿತ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತಾ ಸುತ್ತು ಕಥಾ ಹಂದರವನ್ನು `ಫುಲ್ ಮೀಲ್ಸ್’ ಹೊಂದಿದೆ. ಇದು ಔಟ್ ಅಂಡ್ ಔಟ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಮನರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಮೆಚ್ಚುವ ಅಂಶಗಳು ಈ ಚಿತ್ರದಲ್ಲಿದೆ.
ಈ ಚಿತ್ರದಲ್ಲಿ ಖುಷಿ ಜೊತೆಗೆ ತೇಜಸ್ವಿನಿ ಶರ್ಮ ಸಹ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗುವ ಪ್ರಯತ್ನದಲ್ಲಿರುವ ತೇಜಸ್ವಿನಿ ಶರ್ಮ ಮೂಲತಃ ಕೊಡಗಿನವರು. ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ನಲ್ಲಿ ತೇಜಸ್ವಿನಿ ಶರ್ಮ ನಟಿಸಿದ್ದಾರೆ. ಈ ಹಿಂದೆ ಫ್ಲಾಟ್, ಮೇರಿ, ಪ್ರಮೋದ್ ಜೊತೆ `ಇಂಗ್ಲಿಷ್ ಮಂಜ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಲಿಖಿತ್ ಶೆಟ್ಟಿ ಅಭಿನಯದ `ಫುಲ್ ಮೀಲ್ಸ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದುರ್ಗದ ಪ್ರತಿಭೆ ಎನ್ ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ರಂತೆ ಸಾಹಿತ್ಯ ಚಿತ್ರಕ್ಕಿದೆ. ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರೀ, ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
– ರಾಘವೇಂದ್ರ ಅಡಿಗ ಎಚ್ಚೆನ್





