ಕಥೆ ಶುಭಾ ಶ್ರೀನಾಥ್

ಕಾಲೇಜಿನಲ್ಲಿ ಲೆಕ್ಚರರ್ಆಗಿದ್ದ ನಿಮಿಷಾ ಶಿಸ್ತಿನ ಸಿಪಾಯಿಯಂಥ ಸ್ವಭಾವ ಹೊಂದಿದ್ದಳು. ಜೀವನದ ವಾಸ್ತವತೆ ಅವಳನ್ನು ಕಟುವಾಗಿ ವರ್ತಿಸುವಂತೆ ಮಾಡಿತ್ತು. ಇವಳ ಸ್ವಭಾವಕ್ಕೆ ತೀರಾ ವಿರುದ್ಧ ಸ್ವಭಾವದವನಾದ ಸಹೋದ್ಯೋಗಿ, ಸದಾ ಲವಲವಿಕೆಯ ಹಸನ್ಮುಖಿ ಅದ್ವಿತೀಯ ಆದರ್ಶ ಗುಣವುಳ್ಳವನು. ಇವಳ ಬದುಕಲ್ಲಿ ಬದಲಾವಣೆ ತರಲು ಬಯಸಿದ ಅವನಿಗೆ ಇವಳ ಉತ್ತರವೇನು……?

ಬಾದಾಮಿ ಬಣ್ಣದ ಕಾಟನ್‌ ಸೀರೆ ಉಟ್ಟು, ಉದ್ದ ಕೂದಲನ್ನು ಹೆಣೆದು, ಮುಖಕ್ಕೆ ತೆಳುವಾಗಿ ಪೌಡರ್‌ ಲೇಪಿಸಿಕೊಂಡು ಹಣೆಗೆ ದುಂಡನೆಯ ಕೆಂಪು ಕುಂಕುಮ ಇಟ್ಟಿದ್ದ ನಿಮಿಷಾ ಕೋಣೆಯಿಂದ ಹೊರಗೆ ಬಂದಳು. ಡೈನಿಂಗ್‌ ಟೇಬಲ್ ಮೇಲೆ ಅವಳಿಗಾಗಿ ಇಡ್ಲಿ, ಚಟ್ನಿ ಕಾಯುತ್ತಿತ್ತು. ಯಾಂತ್ರಿಕವಾಗಿ ಬೇಗನೇ ಮೂರು ಇಡ್ಲಿ ತಿಂದು ಮುಗಿಸಿದಾಗ, ತಾಯಿ ಕಾವೇರಮ್ಮ ಇನ್ನೊಂದು ಇಡ್ಲಿ ಎಂದರು. ಬೇಡ ಎನ್ನುವಂತೆ ಸನ್ನೆ ಮಾಡಿದ ಅವಳು, ವ್ಯಾನಿಟಿ ಬ್ಯಾಗಿಗೆ ಮಧ್ಯಾಹ್ನದ ಊಟದ ಡಬ್ಬಿಯನ್ನು ಸೇರಿಸಿದಳು.

“ಇನ್ನೊಂದು ಇಡ್ಲಿ ಹಾಕಿಸಿಕೊಳ್ಳೆ, ಅಲ್ಲಿ ಪಾಠ ಮಾಡೋಕೆ ಶಕ್ತಿ ಬೇಡವೇ…..?” ತಾಯಿ ಪ್ರೀತಿ ತುಂಬಿದ ಅಸಮಾಧಾನದಿಂದ ಹೇಳಿದಾಗ ಮರು ಮಾತನಾಡದೇ ನಡೆದಳು.

ಕಾವೇರಮ್ಮನ ಮೊಗದ ತುಂಬಾ ದುಃಖವೇ ತುಂಬಿತ್ತು. ನಿಮಿಷಾಗೆ ತಾಯಿಯ ದುಃಖಕ್ಕೆ ಸಮಾಧಾನವಾಗಿ ಕುಳಿತು ನಾಲ್ಕು ಮಾತನಾಡುವಷ್ಟು ಸಮಯ ಇರಲಿಲ್ಲ, ಸೈರಣೆಯೂ ಇರಲಿಲ್ಲ. ಇನ್ನು ಏನಾದರೂ ಮಾತಾಡಿದರೆ ತಾಯಿ ಅತ್ತೇ ಬಿಡುತ್ತಾರೆ ಎಂದು ಅವಳಿಗೆ ಗೊತ್ತಿತ್ತು. ಹಾಗಾಗಿ ಮಾತಿಗಿಂತ ಮೌನವೇ ಲೇಸು ಅಂತ ಅಂದುಕೊಂಡಳು.

ದ್ವಿಚಕ್ರ ವಾಹನ ಏರಿ ಕಾಲೇಜಿನ ದಾರಿಯನ್ನು ಹಿಡಿದಳು. ಅವಳಿಗೆ ತಾಯಿಯ ದುಃಖಕ್ಕೆ ಕಾರಣ ಏನೆಂದು ಗೊತ್ತಿತ್ತು. ತಾಯಿಯ ಮೇಲೆ ಕನಿಕರ ಇತ್ತು. ಕಳೆದ ವಾರ ನೋಡಿಕೊಂಡು ಹೋಗಿದ್ದ ವರನ ಕಡೆಯವರು ಏನೋ ಸಬೂಬು ಹೇಳಿ ನಿಮ್ಮ ಹುಡುಗಿ ಇಷ್ಟವಿಲ್ಲವೆಂದು ಹೇಳಿದ್ದರು. ಅಮ್ಮನಿಗೆ ತನ್ನ ಮದುವೆ ಆಗಿಲ್ಲವೆಂದು ಆತಂಕ, ದುಃಖ. ಅದು ಸಹಜವೇ ಆಗಿತ್ತು. ತನಗೀಗ 32, ತನ್ನ ಓರಗೆಯ ಗೆಳತಿಯರಿಗೆ ಮದುವೆಯಾಗಿ ಮಕ್ಕಳಾಗಿವೆ. ಆದರೆ ತನ್ನ ಮದುವೆ ಇನ್ನೂ ಆಗಿಲ್ಲ. ಏನು ಮಾಡುವುದು ನನ್ನ ಹಣೆಬರಹವೇ ಹಾಗಿದೆ.

ನಿಮಿಷಾ ಎಂ.ಎಸ್ಸಿ ಫಿಸಿಕ್ಸ್ ಮುಗಿಸಿ, ಪ್ರಸಿದ್ಧ ಕಾಲೇಜಿನಲ್ಲಿ ಲೆಕ್ಚರರ್‌ ಆಗಿದ್ದಳು. ಕೈತುಂಬಾ ಸಂಬಳ, ಎತ್ತರದ ನಿಲುವು, ಗೋಧಿ ಮೈಬಣ್ಣ, ದೊಡ್ಡ ಕಂಗಳು ಕೂಡ ಯಾವ ವರನನ್ನೂ ಕೂಡ ಆಕರ್ಷಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಪ್ರತಿಯೊಬ್ಬ ಗಂಡು ಕೂಡ ಅವಳನ್ನು ನಿರಾಕರಿಸಲು ಕಾರಣ ಅವಳಿಗೆ ಗೊತ್ತಿತ್ತು. ಅವಳು ಸದಾ ಗಂಭೀರ ವದನೆ, ಗಂಟಿಕ್ಕಿದ ಹುಬ್ಬುಗಳು, ಮುಗುಳ್ನಗೆಯ ಲೋಪ ಮೊಗದಲ್ಲಿ ಎದ್ದು ಕಾಣಿಸುತ್ತಿತ್ತು. ಚಿಕ್ಕಂದಿನಿಂದಲೂ ಶಾಲೆ, ಕಾಲೇಜಿನಲ್ಲಿ ಕೂಡ ಅವಳು ಯಾವಾಗಲೂ ಹೀಗೆಯೇ ಗಂಭೀರವಾಗಿರುತ್ತಿದ್ದಳು. ಅವಳು ಮಾತು ಕಡಿಮೆ, ಕೆಲಸ ಜಾಸ್ತಿ ಮಾಡುತ್ತಿದ್ದಳು.

ಹೆಣ್ಣುಮಕ್ಕಳು ಗಂಭೀರವಾಗಿರಬೇಕು ಎಂದು ಚಿಕ್ಕಂದಿನಿಂದಲೇ ತಾಯಿ ತಂದೆ ಹೇಳಿದ್ದರ ಪರಿಣಾಮವೋ ಏನೋ ಅವಳು ನಗುವುದು ಬಲು ಅಪರೂಪ. ಆದರೆ ನಕ್ಕರೆ ಅವಳೂ ಚೆಲುವೆಯೇ! ನಗುವಿನ ಲೇಪನವಿಲ್ಲದ ಸೌಂದರ್ಯ ಯಾವ ವರನಿಗೂ ಆಕರ್ಷಕ ಎನಿಸಿರಲಿಲ್ಲ. ಯಾರಿಗಾಗಿಯೋ ಅವಳಿಗೆ ಬದಲಾಗುವುದು ಇಷ್ಟವಿರಲಿಲ್ಲ. ಅವಳು ಹೇಗಿದ್ದಳೋ ಹಾಗೇ ಒಪ್ಪಿಕೊಳ್ಳುವ ಗಂಡು ಬೇಕೆನ್ನುವುದು ಅವಳ ಮನಸ್ಥಿತಿಯಾಗಿತ್ತು. ಅವಳ ತಂದೆ ಅದೇ ಯೋಚನೆಯಲ್ಲಿ ತೀರಿಕೊಂಡ ಮೇಲೆ, ಅವಳ ತಮ್ಮ ಒಂದೆರಡು ವರ್ಷಗಳ ಹಿಂದೆ ಅವನ ಆಫೀಸಿನಲ್ಲಿಯೇ ಕೆಲಸ ಮಾಡುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ಮನೆಯಿಂದ ಆಫೀಸಿಗೆ ದೂರವಾಗುತ್ತದೆ. ಆದ್ದರಿಂದ ಆಫೀಸ್‌ ಗೆ ಹತ್ತಿರದಲ್ಲಿ ಮನೆ ಮಾಡಿಕೊಂಡು ಹೋಗುತ್ತೇವೆ ಎಂದು ಹೊರಟುಹೋದ.

ಆಗ ಕಾವೇರಮ್ಮ ಬಹಳ ಕುಸಿದುಹೋದರು. ಅಕ್ಕನ ಮದುವೆಯಾಗದೆ ತಮ್ಮ ಮದುವೆಯಾದ, ಜೊತೆಗೆ ಮದುವೆಯಾದ ಕೂಡಲೇ ಮಗ ಸೊಸೆ ಬೇರೆ ಹೋದರು. ಇನ್ನು ತಮಗೆ ಯಾರು ದಿಕ್ಕು ಎಂದು ಯಾವಾಗಲೂ ಅಳುತ್ತಿದ್ದರು.

“ಅಮ್ಮಾ….. ಯಾಕೆ ಅಳ್ತೀಯಾ….? ನನ್ನ ಮದುವೆಯಾಗಿಲ್ಲ ಅಂತ ಅವನನ್ನು ಮದುವೆ ಮಾಡಿಕೊಳ್ಳಬೇಡ ಎನ್ನುವುದು ಎಷ್ಟು ಸರಿ…? ಅವನ ದಾರಿ ಅವನು ನೋಡಿಕೊಂಡು ಹೋದ. ನನಗೆ ಮದುವೆಯೇ ಬೇಡ, ಹೀಗೆಯೇ ಮಕ್ಕಳಿಗೆ ಪಾಠ ಹೇಳಿಕೊಂಡು ಇರ್ತೀನಿ,” ಎಂದಳು ನಿಮಿಷಾ.

ಆದರೆ ಕಾವೇರಮ್ಮ ಹೇಗೆ ಸುಮ್ಮನಿದ್ದಾರು….? ಮಗಳಿಗೆ ಮದುವೆ ಮಾಡಬೇಕೆಂದು ಮತ್ತೆ ಮತ್ತೆ ವರನನ್ನು ಹುಡುಕತೊಡಗಿದರು. ಸಾಕಷ್ಟು ಪೂಜೆ, ಪುನಸ್ಕಾರ ಎಲ್ಲವೂ ಆದವು. ಆದರೆ ಫಲಿತಾಂಶ ಶೂನ್ಯವಾಗಿತ್ತು. ಪ್ರತಿಬಾರಿ ಉಪ್ಪಿಟ್ಟು, ಕೇಸರಿಬಾತ್‌, ಬೋಂಡಾ, ಚಿಪ್ಸ್ ಹೀಗೆ ರುಚಿರುಚಿಯಾದ ತಿಂಡಿಗಳನ್ನು ಮಾಡಿ ದುಡ್ಡು ಖರ್ಚಾಗುತ್ತಿತ್ತೇ ಹೊರತು, ಯಾವ ವರನೂ ನಿಮಿಷಾಳನ್ನು ಒಪ್ಪುತ್ತಿರಲಿಲ್ಲ. ಚೆನ್ನಾಗಿ ಅಲಂಕರಿಸಿಕೊಂಡು, ಉಪ್ಪಿಟ್ಟು ಕೇಸರಿಬಾತ್‌ ಕೊಟ್ಟು ಬಂದವರ ಎದುರಿಗೆ ಪ್ರದರ್ಶನಕ್ಕಿಟ್ಟ ಗೊಂಬೆಯ ಹಾಗೆ ಕುಳಿತು ಕೊಳ್ಳುವುದು ಹಿಂಸೆ ಎನಿಸುತ್ತಿತ್ತು. ನನಗೆ ಮದುವೆಯೇ ಬೇಡ. ಹೇಗೂ ಕೆಲಸದಲ್ಲಿದ್ದೇನೆ, ಹೀಗೆಯೇ ಇದ್ದುಬಿಡುತ್ತೇನೆ ಎಂದರೆ ತಾಯಿ ಕೇಳುತ್ತಿರಲಿಲ್ಲ…. ಹೀಗೆ ಯೋಚಿಸುತ್ತಾ ಅವಳಿಗೆ ದಾರಿ ಸಾಗಿದ್ದೇ ತಿಳಿಯಲಿಲ್ಲ.

ಕಾಲೇಜಿಗೆ ಬಂದಳು. ಅಂದು ಕಾಲೇಜಿನಲ್ಲಿ ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ತುಂಬಿತ್ತು. ಹೊಸ ಬಟ್ಟೆಗಳನ್ನು ಧರಿಸಿದ್ದ ಹುಡುಗ ಹುಡುಗಿಯರು ಸಂಭ್ರಮದಿಂದ ಮಾತನಾಡುತ್ತಿದ್ದರು. ಹೊಸ ವರ್ಷದ ವಿಶ್‌ ಮಾಡಿದ ಒಂದಿಬ್ಬರು ವಿದ್ಯಾರ್ಥಿಗಳಿಗೆ ಕಂಡೂ ಕಾಣದ ಹಾಗೆ ನಗೆ ಬೀರಿದ ನಿಮಿಷಾ, ಸ್ಟಾಫ್‌ ರೂಮಿಗೆ ಹೋಗಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ತನ್ನ ತರಗತಿಗೆ ನಡೆದಳು.

ಬಹಳಷ್ಟು ವಿದ್ಯಾರ್ಥಿಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇದ್ದರೂ ಕೂಡ ನಿಮಿಷಾಳ ತರಗತಿಗೆ ಮಾತ್ರ ಎಲ್ಲರೂ ಹಾಜರಾಗಿದ್ದರು. ಹಾಜರಾತಿ ತೆಗೆದುಕೊಂಡು ಬೋರ್ಡ್‌ ಮೇಲೆ ಬರೆಯಲು ತಿರುಗಿದಾಗ ಅಲ್ಲಿ ಬಣ್ಣದ ಸೀಮೆಸುಣ್ಣದಿಂದ ಡಿಸೈನ್ ಮಾಡಿ, ಹೊಸ ವರ್ಷದ ಶುಭಾಶಯಗಳನ್ನು ಬರೆದಿದ್ದರು.

ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು, “ಮ್ಯಾಮ್ ಪ್ಲೀಸ್‌ ಅದನ್ನು ಅಳಿಸಬೇಡಿ. ಇವತ್ತೊಂದು ದಿನ ಎಂಜಾಯ್ ಮಾಡಬೇಕೆಂದಿದ್ದೇವೆ,” ಎಂದು ಕೇಳಿಕೊಂಡಳು.

“ಇದನ್ನು ಅಳಿಸಬಾರದು ಎಂದರೆ, ನಾನು ಪಾಠ ಮಾಡುವುದಾದರೂ ಹೇಗೆ? ಅಷ್ಟಕ್ಕೂ ನಮಗೆ ಹೊಸವರ್ಷ ಯುಗಾದಿ. ಇದು ಜಸ್ಟ್ ಕ್ಯಾಲೆಂಡರ್‌ ಬದಲಾಯಿಸುವ ದಿನವಷ್ಟೆ,” ಎಂದು ನಿರ್ದಯವಾಗಿ ಬೋರ್ಡ್‌ ಮೇಲೆ ಬರೆದಿದ್ದನ್ನು ಅಳಿಸಿ `ಅಯಸ್ಕಾಂತದ ಗುಣಗಳು’ ಎಂದು ಬರೆದು ಪಾಠವನ್ನು ಶುರು ಮಾಡಿದಳು.

ಆ ವಿದ್ಯಾರ್ಥಿನಿ ಮುಖ ಚಿಕ್ಕದು ಮಾಡಿಕೊಂಡು ಕುಳಿತಳು. ಎಲ್ಲಾ ವಿದ್ಯಾರ್ಥಿಗಳೂ ಪೆಚ್ಚುವೋರೆ ಹಾಕಿಕೊಂಡರು. ಇಂಥದ್ದಕ್ಕೆಲ್ಲಾ ನಿಮಿಷಾ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಅವಳಿಗೆ ಸಮಯದ ಬೆಲೆ ಗೊತ್ತಿತ್ತು.

ಅಯಸ್ಕಾಂತದಲ್ಲಿ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಿಸುತ್ತವೆ ಮತ್ತು ಸಜಾತೀಯ ಧ್ರುವಗಳು ವಿಕರ್ಷಣೆಯನ್ನು ಹೊಂದುತ್ತವೆ ಎನ್ನುವುದನ್ನು ಅವಳು ತಂದಿದ್ದ ಅಯಸ್ಕಾಂತವನ್ನು ತೋರಿಸಿ ವಿವರಿಸಿದಳು. ಒಬ್ಬರೇ ಇರಲಿ, ಇಬ್ಬರೇ ಇರಲಿ ನಿಮಿಷಾ ಬಹಳ ಚೆನ್ನಾಗಿ ಪಾಠ ಮಾಡುತ್ತಿದ್ದಳು. ಅದು ಅವಳ ಸ್ವಭಾವ. ಅಲ್ಲದೆ, ನಿಮಿಷಾಳ ತರಗತಿಗೆ ಗೈರುಹಾಜರಿ ಆಗುವವರಿಗೆ, ತರಗತಿಗೆ ಹಾಜರಾಗಿರುವವರು ಯಾರೂ ಅಂದಿನ ಪಾಠದ ನೋಟ್ಸ್ ನ್ನು ಕೊಡುವ ಹಾಗಿರಲಿಲ್ಲ. ಗೈರುಹಾಜರಾಗಲು ಕಾರಣ ಹೇಳಿ, ಕ್ಷಮಾಪಣೆ ಪತ್ರವನ್ನು ತೆಗೆದುಕೊಂಡು ಬರಬೇಕಿತ್ತು. ಸರಿಯಾದ ಕಾರಣವಿದ್ದರೆ ಮಾತ್ರ ಅವರನ್ನು ಕ್ಷಮಿಸುತ್ತಿದ್ದಳು, ಮುಂದಿನ ತರಗತಿಗೆ ಹಾಜರಾಗಲು ಅನುಮತಿ ನೀಡುತ್ತಿದ್ದಳು. ಹಾಗಾಗಿ ಡಿಗ್ರಿಗೆ ಬಂದರೂ ಕೂಡ ವಿದ್ಯಾರ್ಥಿಗಳು ನಿಮಿಷಾ ಮೇಡಂ ಎಂದರೆ ಹೆದರಿಕೊಳ್ಳುತ್ತಿದ್ದರು.

ಬೆಲ್ ಹೊಡೆಯುವ ಮೊದಲು ಪಾಠವನ್ನು ಮುಗಿಸಿ, “ಯಾರಿಗಾದರೂ ಏನಾದರೂ ಸಂದೇಹವಿದ್ದರೆ ಕೇಳಿ,” ಎಂದಳು.

ಯಾರೂ ಏನೂ ಕೇಳಲಿಲ್ಲ. ನಿಮಿಷಾ ಪಾಠ ಮಾಡುವುದು ಎಂದರೆ ಹಾಗೆಯೇ, ತರಗತಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದ ತುಂಬಿರುತ್ತಿತ್ತು. ಹಾಗೆಯೇ ಎಲ್ಲರಿಗೂ ಪಾಠ ಅರ್ಥವಾಗುವಂತೆ ವಿವರಿಸುತ್ತಿದ್ದಳು. ಪಾಠದ ಬಗ್ಗೆ ಯಾರು ಏನೇ ಸಂದೇಹ ಕೇಳಿದರೂ ಮತ್ತೊಮ್ಮೆ ಅರ್ಥಾವಾಗುವ ಹಾಗೆ ಹೇಳಿಕೊಡುತ್ತಿದ್ದಳು.

ಪಾಠ ಮುಗಿಸಿ ಸ್ಟಾಫ್‌ ರೂಮಿಗೆ ಬಂದಾಗ ಹೊಸದಾಗಿ ಬಂದಿದ್ದ ಇಂಗ್ಲಿಷ್‌ ಲೆಕ್ಚರರ್‌ ಅದ್ವಿತೀಯ ಎಲ್ಲರಿಗೂ ಕೇಳಿಸುವ ಹಾಗೆ ಜೋರಾಗಿ, “ಪ್ರಿನ್ಸಿಪಾಲ್ ಹತ್ತಿರ ಪರ್ಮೀಷನ್‌ ಕೇಳಿದ್ದೇನೆ. ಇವತ್ತು ನೋ ಕ್ಲಾಸಸ್‌, ಈಗ ಹೊಸ ವರ್ಷದ ಗ್ರಾಂಡ್‌ ಸೆಲೆಬ್ರೇಷನ್‌ ಮಾಡೋಣ. ಎಲ್ಲರೂ ಬನ್ನಿ, ವಿದ್ಯಾರ್ಥಿಗಳು ಕೇಕ್‌ ತಂದು ಕಾಯುತ್ತಿದ್ದಾರೆ,” ಎಂದು ಕರೆದ. ಎಲ್ಲರೂ ಖುಷಿಯಿಂದ ಎದ್ದು ನಡೆದರು.

`ಈ ಅದ್ವಿತೀಯ ಯಾವಾಗಲೂ ಹೀಗೆ…. ಲೆಕ್ಚರರ್‌ಆದರೂ ಒಂಚೂರು ಗಾಂಭೀರ್ಯ ಇಲ್ಲ. ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಕಬಡ್ಡಿ, ಖೋಖೋ, ಕ್ರಿಕೆಟ್‌ ಎಂದೆಲ್ಲಾ ಆಡುವುದು, ತಮಾಷೆ ಮಾಡುವುದು, ಎಲ್ಲರ ಕಾಲು ಎಳೆಯುವುದು ಮಾಡುತ್ತಿರುತ್ತಾರೆ,’ ಎಂದು ಮನಸ್ಸಿನಲ್ಲೇ ಅಂದುಕೊಂಡಳು ನಿಮಿಷಾ.

“ರೀ ನಿಮಿಷಾ ಮೇಡಂ, ನೀವು ಬನ್ನಿ. ಒಬ್ಬರೇ ಸ್ಟಾಫ್‌ ರೂಮ್ ನಲ್ಲಿ ಕುಳಿತುಕೊಂಡು ಏನು ಮಾಡುತ್ತೀರಿ?” ಎಂದು ಅದ್ವಿತೀಯ ಕರೆದಾಗ ನಿಮಿಷಾ ಅವನ ಕಡೆ ನೋಡಿ, “ಯಾರು ಸರ್‌…. ನಿಮಗೆ ಇದೆಲ್ಲಾ ಪಾರುಪತ್ಯ ಮಾಡಲು ಹೇಳಿದ್ದು? ಇವತ್ತು ಇನ್ನೂ 5 ಪೀರಿಯಡ್‌ ಇತ್ತು, ಎಲ್ಲ ನಿಮ್ಮಿಂದ ಹಾಳಾಯಿತು,” ಎಂದು ತುಸು ಅಸಮಧಾನಗೊಂಡಳು.

“ಅಯ್ಯೋ ದಿನಾ ಇದ್ದಿದ್ದೇ ಬಿಡಿ ಮೇಡಂ. ಅದೇ ಪಾಠ, ಅದೇ ನೋಟ್ಸ್, ಅದೇ ಟೆಸ್ಟ್. ಜೀವನದಲ್ಲಿ ಚೇಂಜ್‌ ಇರಬೇಕು ಮೇಡಂ. ಆಗಲೇ ಜೀವನ ಸುಂದರವಾಗಿರುತ್ತದೆ,” ಮೊಗದ ತುಂಬಾ ಸಂಭ್ರಮ, ದಪ್ಪ ಕಪ್ಪು ಮೀಸೆಯ ಕೆಳಗಿನ ಕೆಂಪು ಒರಟು ತುಟಿಗಳ ಮೇಲೆ ಮಾಸದ ಕಿರುನಗೆ ತುಂಬಿಕೊಂಡಿದ್ದ ಅದ್ವೀತಿಯ ಹೇಳಿದ.

nokjhonk-story

ಅವನ ಎತ್ತರದ ನಿಲುವಿಗೆ ತಕ್ಕಂತೆ ಗುಲಾಬಿ ಟೀ ಶರ್ಟ್‌, ನೀಲಿ ಜೀನ್ಸ್ ಧರಿಸಿ, ಪರಿಮಳಯುಕ್ತ ಸೆಂಟ್‌ ಸಿಂಪಡಿಸಿಕೊಂಡು ಬಹಳ ಆಕರ್ಷಕವಾಗಿ ಕಾಣುತ್ತಿದ್ದ ಅವನನ್ನೇ ಅರೆ ಕ್ಷಣ ತೀಕ್ಷ್ಣವಾಗಿ ನೋಡಿ, `ತನ್ನನ್ನು ತಾನು ಹೀರೋ ಅಂದುಕೊಂಡಿದ್ದಾನೆ,’ ಎಂದು ಮನದಲ್ಲಿಯೇ  ಹೇಳಿಕೊಂಡಳು.

“ನೋಡಿ, ನಮಗೆ ಹೊಸ ವರ್ಷ ಯುಗಾದಿ, ಅಂದು ಬೇವು ಬೆಲ್ಲ ತಿಂದು ಹೋಳಿಗೆ ಪಾಯಸ ಮಾಡಿ ಹಬ್ಬದ ಊಟ ಮಾಡುತ್ತೇವೆ. ಈ ಕೇಕ್‌ ಕಟಿಂಗ್‌ ಎಲ್ಲಾ ಯಾಕೆ? ನನಗೆ ಇದೆಲ್ಲಾ ಇಷ್ಟವಾಗುವುದಿಲ್ಲ,” ಎಂದಳು ನಿರ್ದಾಕ್ಷಿಣ್ಯವಾಗಿ.

“ಮೇಡಂ ನಾವು ಭಾರತೀಯರು. ವಿಶಾಲ ಹೃದಯಿಗಳು, ನಮ್ಮ ಸಂಸ್ಕೃತಿಯನ್ನೂ ಆಚರಿಸುತ್ತೇವೆ, ಜೊತೆಗೆ ಒಂದಷ್ಟು ಪಾಶ್ಚಾತ್ಯ ಸಂಸ್ಕೃತಿ ಕೂಡ ನಮ್ಮಲ್ಲಿ ಬೆಳೆಸಿಕೊಂಡಿದ್ದೇವೆ. ನೋಡಿ, ನಾವು ಬರೆಯುವ 1, 2, 3 ಇವೆಲ್ಲಾ ಅಂಗ್ಲ ಅಂಕಿಗಳೇ ಅಲ್ಲವೇ? ನೀವು ಫಿಸಿಕ್ಸ್ ಲೆಕ್ಚರರ್‌ ಫಿಸಿಕ್ಸ್ ನ್ನು ಇಂಗ್ಲಿಷ್‌ ನಲ್ಲೇ ಬೋಧಿಸುತ್ತೀರಿ ಅಲ್ಲವೇ….? ನಾವು ಪ್ಯಾಂಟ್‌ ಶರ್ಟ್‌ ಹಾಕುತ್ತೇವೆ ಇದೆಲ್ಲಾ ಪಾಶ್ಚಿಮಾತ್ಯರ ಪದ್ಧತಿ ಅಲ್ಲವೇ….? ಹಳೇ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು ಅಲ್ಲವೇ….? ನಮ್ಮ ಸಂಸ್ಕೃತಿಯನ್ನು ಪಾಲಿಸಿ, ಅದಕ್ಕೆ ಒಂಚೂರು ಪಾಶ್ಚಾತ್ಯ ಸಂಸ್ಕೃತಿ ಕೂಡಿಸೋಣ. ಹಾಲಿಗೆ ಸಕ್ಕರೆ ಬೆರೆಸಿದ ಹಾಗೆ,” ಎಂದು ಮಿನಿ ಭಾಷಣವನ್ನೇ ಮಾಡಿದ.

ನಿಮಿಷಾಗೆ ಏನು ಮಾತನಾಡಬೇಕೆಂದು ಒಂದು ನಿಮಿಷ ತೋಚಲಿಲ್ಲ. ಆದರೂ ಸಾವರಿಸಿಕೊಂಡು, “ನೋಡಿ ಸರ್‌, ಇವತ್ತು ಇನ್ನೂ 5 ಪೀರಿಯಡ್‌ ಇದ್ದವು. ಅಂದರೆ ಆ 5 ಪೀರಿಯಡ್‌ ಗೆ ನಾವು ಇವತ್ತಿನ ಸಂಬಳ ತೆಗೆದುಕೊಳ್ಳುವುದಿಲ್ಲವೇ….? ಆ 5 ಪೀರಿಯಡ್‌ ಗೆ ಪೋಷಕರು ಫೀಸ್‌ ಕಟ್ಟಿಲ್ಲವೇ….? ಅದನ್ನೆಲ್ಲಾ ನಾವೀಗ ಪೋಲು ಮಾಡಿದ ಹಾಗಾಗುತ್ತದೆ ಅಲ್ಲವೇ….?” ಎಂದಳು.

“ನಿಮಗೆ ನಿಮ್ಮ ಅಮ್ಮ ಅಪ್ಪ `ನಿಮಿಷಾ’ ಅಂತ ಸರಿಯಾಗೇ ಹೆಸರಿಟ್ಟಿದ್ದಾರೆ. ನೋಡಿ, ಪ್ರತಿ ನಿಮಿಷವನ್ನೂ ಲೆಕ್ಕ ಹಾಕುತ್ತೀರಿ. ಬನ್ನಿ ಮೇಡಂ, ನಿಮ್ಮ ಪಾಠ ಎಲ್ಲಿಯೂ ಹೋಗುವುದಿಲ್ಲ, ಅಲ್ಲಿಯೇ ಇರುತ್ತದೆ. ನಾಳೆ ಪಾಠ ಮಾಡುವಿರಂತೆ, ಈಗ ಬನ್ನಿ ಪ್ಲೀಸ್‌….” ಎಂದು ಒತ್ತಾಯ ಮಾಡಿದ. ಕೊನೆಗೂ ಅವನ ಒತ್ತಾಯಕ್ಕೆ ಮಣಿದು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಹೊರಟಳು.

ಕೆಲವು ದಿನಗಳ ನಂತರ ಒಂದು ದಿನ ಬೆಳಗ್ಗೆ ನಿಮಿಷಾ ತನ್ನ ದ್ವೀತಿಯ ವರ್ಷದ ಡಿಗ್ರಿ ಫಿಸಿಕ್ಸ್ ಪುಸ್ತಕ ತೆಗೆದುಕೊಂಡಳು. ಅದರ ಒಳಗೆ ಏನೋ ಒಂದು ಕಾಗದ ಕಂಡು ಬಂದಿತು. ಅದನ್ನು ನೋಡಿದಳು.`ಐ ಲವ್ ಯೂ’ ಎಂದು ಬರೆದಿತ್ತು.

`ಅರೆ ಇದನ್ನು ಯಾರು ಬರೆದರು….? ಇಷ್ಟು ಧೈರ್ಯ ಯಾರಿಗಿದೆ…..? ನಿನ್ನೆ ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕಗಳನ್ನು ಕೊಟ್ಟು ಸ್ಟಾಫ್‌ ರೂಮಿನಲ್ಲಿ ಇಡುವಂತೆ ಹೇಳಿ, ಪ್ರಾಂಶುಪಾಲರು ಕರೆದರೆಂದು ಹೋಗಿದ್ದೆ. ಆಗ ಯಾರಿಗೋ ಕೊಡಬೇಕಾಗಿದ್ದನ್ನು ಯಾರೋ ನನ್ನ ಪುಸ್ತಕದಲ್ಲಿ ಇಟ್ಟಿದ್ದಾರೆ. ಇರಲಿ, ಇವತ್ತು ಅವರಿಗೆ ಸರಿಯಾಗಿ ಕ್ಲಾಸ್‌ ತಗೋತೀನಿ,’ ಎಂದು ಸ್ಟಾಫ್‌ ರೂಮಿನಿಂದ ಹೊರಬಂದಳು.

ತರಗತಿಯಲ್ಲಿ ಇದರ ಬಗ್ಗೆ ಸ್ಟ್ರಿಕ್ಟ್ ಆಗಿ ವಿಚಾರಿಸಿದಾಗ, ಎಲ್ಲರೂ ತಮಗ್ಯಾರಿಗೂ ಏನೂ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು.

ಮರುದಿನ ನಿಮಿಷಾ ಒಬ್ಬಳೇ ಸ್ಟಾಫ್‌ ರೂಮಿನಲ್ಲಿ ಕುಳಿತು ಮಾರನೇ ದಿನದ ತರಗತಿಗೆ ನೋಟ್ಸ್ ತಯಾರಿಸುತ್ತಿದ್ದಳು. ಅದ್ವಿತೀಯ ಹಾಡೊಂದನ್ನು ಗುನುಗುತ್ತಾ ಒಳಬಂದ.

ನಿಮಿಷಾ ತಲೆಯೆತ್ತಿ ನೋಡಿ, “ಸರ್‌, ನೀವು ಹಾಡು ಹೇಳಿದರೆ, ನನಗೆ ಓದಿಕೊಳ್ಳಲು ತೊಂದರೆಯಾಗುತ್ತದೆ. ಸಾಕು ನಿಲ್ಲಿಸಿ ನಿಮ್ಮ ಗಾನ….” ಎಂದಳು ವ್ಯಂಗ್ಯವಾಗಿ.

“ಅರೆ, ನಾನು ನನ್ನ ಪಾಡಿಗೆ ಹಾಡು ಹೇಳಿಕೊಂಡರೆ, ನಿಮಗೆ ಯಾಕೆ ಮೇಡಂ ತೊಂದರೆಯಾಗುತ್ತದೆ? ನಿಮ್ಮ ಪಾಡಿಗೆ ನೀವು ಓದಿಕೊಳ್ಳಿ, ಯಾರು ಬೇಡ ಅಂದಿದ್ದೂ…..” ಅವನು ತುಸು ತಮಾಷೆಯಾಗಿ ಹೇಳಿದ.

“ಸರ್‌ ನೀವು ಲೆಕ್ಚರರ್ರಾ ಅಥವಾ ಸ್ಟೂಡೆಂಟಾ…. ಸ್ವಲ್ಪ ಡೀಸೆಂಟ್‌ ಆಗಿರಿ.”

“ನೋಡಿ ಮೇಡಂ, ನನಗಂತೂ ನಿಮ್ಮ ತರ ಯಾವಾಗಲೂ ಮುಖ ಊದಿಸಿಕೊಂಡು ಗುಂ ಅಂತ ಇರೋಕೆ ಬರೋಲ್ಲ ಮೇಡಂ. ಲೈಫ್‌ ಈಸ್‌ ಶಾರ್ಟ್‌, ಮೇಕ್‌ ಇಟ್‌ ಸ್ವೀಟ್‌ ಎಂಬುದು ನನ್ನ ಪಾಲಿಸಿ.”

“ಲೈಫ್‌ ಈಸ ಶಾರ್ಟ್‌, ಮೇಕ್‌ ಇಟ್‌ ಯೂಸ್‌ ಫುಲ್ ಎಂಬುದು ನನ್ನ ಪಾಲಿಸಿ. ನಿಮ್ಮ ಮೇಲೆ ಪ್ರಿನ್ಸಿಪಾಲ್ ‌ಗೆ ಕಂಪ್ಲೇಂಟ್‌ಕೊಡಬೇಕಾಗುತ್ತೆ,” ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದಳು.

“ಏನಂತ ಕೊಡುತ್ತೀರಿ….” ಎನ್ನುತ್ತಾ ಮೀಸೆ ಮರೆಯಲ್ಲಿ ತುಂಟ ನಗೆ ಸೂಸುತ್ತಾ ಸವಾಲು ಹಾಕುವವನಂತೆ ಕೇಳಿದ.

ನಿಮಿಷಾಗೆ ಅವನ ನಗು ನೋಡಿ, ಮೈಯೆಲ್ಲಾ ಉರಿದು ಹೋಯಿತು. “ನೀವು ತರಗತಿಗೆ ಸರಿಯಾಗಿ ಹೋಗುವುದಿಲ್ಲ, ಹುಡುಗರನ್ನು ಸೇರಿಸಿಕೊಂಡು ಕಬಡ್ಡಿ, ಖೋಖೋ, ಕ್ರಿಕೆಟ್‌ ಆಡುತ್ತೀರಿ, ಪಾಠ ಮಾಡುವುದಿಲ್ಲ ಎಂದು ಹೇಳ್ತೀನಿ,” ಎಂದಳು.

“ನೋಡಿ, ನಾನು ಈಗಾಗಲೇ ಎಲ್ಲಾ ತರಗತಿಗಳಿಗೆ ಈ ವರ್ಷದ ಸಿಲಬಸ್‌ ಮುಗಿಸಿದ್ದೀನಿ. ಬೇಕಾದರೆ ನಾನು ತೆಗೆದುಕೊಳ್ಳುವ ತರಗತಿಗಳಿಗೆ ಹೋಗಿ ಕೇಳಿ. ಮೇಡಂ….. ಯಾವಾಗಲೂ ಪಾಠ… ಪಾಠ… ಓದೂ…. ಓದೂ… ಇಂತ ಇರಬಾರದು ಕಣ್ರೀ….. ಪಾಠದ ಜೊತೆಗೆ ಆಟ ಕೂಡ ಇರಬೇಕು,” ಎಂದವನ ಮೊಗದಲ್ಲಿ ಆಕರ್ಷಕ ನಗುವೊಂದು ಮೂಡಿತು.

ನಿಮಿಷಾಳ ಹುಬ್ಬುಗಳು ಮತ್ತಷ್ಟು ಗಂಟಿಕ್ಕಿದ್ದವು. ಕೋಪದಿಂದ ಅವಳ ಮುಖ ಕೆಂಪಾಯಿತು, “ಆದರೆ ನಿಮ್ಮದು ಪಾಠಕ್ಕಿಂತ ಆಟ ಜಾಸ್ತಿಯಾಗಿದೆ…..” ಎಂದಳು ಗಡುಸಾಗಿ.

ಅಷ್ಟು ಹೊತ್ತಿಗೆ ಪೀರಿಯಡ್‌ ಬೆಲ್ ‌ಆದಕಾರಣ ನಿಮಿಷಾ ಪುಸ್ತಕವನ್ನು ತೆಗೆದುಕೊಂಡು ದಬದಬನೆ ಹೊರ ಬಂದಳು, `ಇದುವರೆಗೆ ಯಾರೂ ನನಗೆ ಹೀಗೆ ಮಾತನಾಡಿರಲಿಲ್ಲ…. ನಿನ್ನೆ ಮೊನ್ನೆ ಬಂದಿರುವ ಈ ಅದ್ವಿತೀಯ ಹೀಗೆ ಮಾತಾಡ್ತಾನೆ….. ವಿದ್ಯಾರ್ಥಿಗಳ ಜೊತೆಗೆ ಸೇರಿಕೊಂಡೂ ತಾನೂ ವಿದ್ಯಾರ್ಥಿ ಆಗಿದ್ದಾನೆ. ಪ್ರಾಂಶುಪಾಲರಿಗೆ ಹೇಳಿ ಇವನಿಗೆ ವಾರ್ನಿಂಗ್‌ ಲೆಟರ್‌ ಕೊಡಿಸ್ತೀನಿ,’ ಎಂದುಕೊಳ್ಳುತ್ತಾ ತರಗತಿಗೆ ನಡೆದಳು.

ಒಂದು ವಾರದ ನಂತರ ನಿಮಿಷಾಳ ತಾಯಿ ಮಗಳಿಗೆ, “ನಿಮಿಷಾ…. ಇವತ್ತು ಸಾಯಂಕಾಲ ಸ್ವಲ್ಪ ಬೇಗ ಬಾ…” ಎಂದರು.

“ಅಮ್ಮಾ….. ನನಗೆ ಗೊತ್ತಾಯ್ತು. ವರನ ಕಡೆಯವರು ಬರುತ್ತಾರೆ ಅದಕ್ಕೆ ಬೇಗ ಅಂತೀದಿಯಾ ಅಲ್ವಾ…..? ನಿನಗೆ ಎಷ್ಟು ಸಲ ಹೇಳಿದ್ದೀನಿ ನನಗೆ ಮದುವೆ ಬೇಡ ಅಂತ. ಆದರೂ ನೀನು ಕೇಳೋದೇ ಇಲ್ಲ,” ಎಂದಳು.

“ಹಾಗೆ ಹೇಳಬೇಡಮ್ಮ….. ನಾನು ಜೀವಂತವಾಗಿರುವಾಗಲೇ  ನಿನ್ನ ತಲೆಯ ಮೇಲೆ ನಾಲ್ಕು ಅಕ್ಷತೆಕಾಳು ಹಾಕಿ, ನನ್ನ ಜವಾಬ್ದಾರಿ ಮುಗಿಸಿಕೊಂಡರೆ ಸಾಕು….” ಎಂದರು ಅಮ್ಮ.

“ಏನಮ್ಮಾ ನೀನು…..ಈಗಾಗಲೇ 24 ವರಗಳು ಬಂದು ಹೋಗಿವೆ. ಇದು 25ನೆಯದು. ಬಂದವರೆಲ್ಲರೂ ನನ್ನನ್ನು ತಿರಸ್ಕಾರ ಮಾಡಿದರು. ಮತ್ತೇ ಈಗ ಹೊಸದಾಗಿ ಇನ್ನೊಬ್ಬ ವರ. ಬಂದವರು ನೀನು ಮಾಡುವ ರುಚಿಯಾದ ಉಪ್ಪಿಟ್ಟು, ಕೇಸರಿಬಾತ್ ತಿನ್ನೋದು, ನಾನು ಪ್ರದರ್ಶನಕ್ಕೆ ಕುಳಿತುಕೊಳ್ಳೋದು…. ಆಮೇಲೆ ಬೇಡ ಅಂತ ಹೇಳೋದು….. ನೀನು ಅಳುತ್ತಾ ಕೂರೋದು…. ಇದೇ ಆಗೋಯ್ತು. ನನಗಂತೂ ಸಾಕುಸಾಕಾಗಿಬಿಟ್ಟಿದೆ!” ಎಂದು ಸಿಡಿಮಿಡಿಗೊಂಡಳು ನಿಮಿಷಾ.

“ಹಾಗೇನೂ ಆಗಲ್ಲ…. ಈ ಬಾರಿ ಬರುವ ಹುಡುಗ ಒಪ್ಪಿಕೊಳ್ಳುತ್ತಾನೆ ಅನ್ನೋ ಭರವಸೆ ನನಗಿದೆ.”

“ಸರಿ ಸರಿ…. ಬೇಗ ಬರೋಕೆ ಪ್ರಯತ್ನಿಸ್ತೀನಿ. ಆದರೆ ಬರ್ತೀನಿ…. ಇಲ್ಲದಿದ್ದರೆ ಇಲ್ಲ. ನೀನೇನು ಕಾಯ್ತಾ ಇರಬೇಡ.  ಇವತ್ತು ಮಧ್ಯಾಹ್ನ ಲ್ಯಾಬ್‌ ಬೇರೆ ಇದೆ,” ಎನ್ನುತ್ತಾ ತನ್ನ ದ್ವಿಚಕ್ರ ವಾಹನ ಏರಿ ಕಾಲೇಜಿಗೆ ಹೋದಳು.

ಬೇಗ ಹೋಗಬೇಕು ಎಂದುಕೊಂಡರೂ… ಲ್ಯಾಬ್‌ ಅಸಿಸ್ಟೆಂಟ್‌ ರಜೆಯಲ್ಲಿದ್ದರಿಂದ ಎಲ್ಲ ಉಪಕರಣಗಳನ್ನೂ ಎತ್ತಿಟ್ಟು ಮನೆಗೆ ಬರುವ ಹೊತ್ತಿಗೆ ಹೆಚ್ಚೂಕಡಿಮೆ ಐದೂವರೆ ದಾಟಿತ್ತು. ಮನೆ ಮುಂದೆ ಬೈಕ್‌ ನಿಂತಿತ್ತು. ಒಳಗಡೆಯಿಂದ ಉಪ್ಪಿಟ್ಟು, ಕೇಸರಿಭಾತಿನ ಘಂ ಎನ್ನುವ ವಾಸನೆಯ ಜೊತೆಗೆ ಜೋರಾದ ನಗು ಕೇಳಿಸಿತು.

`ಯಾರು ಇಷ್ಟು ಜೋರಾಗಿ ನಗುತ್ತಿದ್ದಾರೆ. ಎಲ್ಲಿಯೋ ಈ ಧ್ವನಿ ಕೇಳಿದ ಹಾಗಿದೆಯಲ್ಲಾ,’ ಎಂದುಕೊಳ್ಳುತ್ತಾ ಒಳಗೆ ಬಂದಳು.

ಲ್ಯಾಬ್‌ ಮುಗಿಸಿ ವೇಗವಾಗಿ ಬಂದಿದ್ದರಿಂದ ಹಣೆಯ ಮೇಲೆ ಬೆವರಿನ ಹನಿಗಳು ಸಾಲಾಗಿ ಮೂಡಿದ್ದವು. ಗಾಳಿಗೆ ಕೂದಲು ಕೆದರಿತ್ತು. ಬೆಳಗಿನಿಂದ ಬಿಡುವಿಲ್ಲದ ಕೆಲಸದಿಂದ ಮುಖದ ಮೇಲೆ ಸುಸ್ತು ಎದ್ದು ಕಾಣಿಸುತ್ತಿತ್ತು. ಹಾಗೆ ಒಳಬಂದವಳಿಗೆ ಉಪ್ಪಿಟ್ಟು, ಕೇಸರಿಭಾತ್‌, ಬೋಂಡಾ ಸವಿಯುತ್ತಾ, ಅಮ್ಮನ ಜೊತೆ ಹರಟೆ ಹೊಡೆಯುತ್ತಾ, ಜೋರಾಗಿ ನಗುತ್ತಾ ಕುಳಿತಿದ್ದ ಅದ್ವಿತೀಯನನ್ನು ನೋಡಿದ ಕೂಡಲೇ ಅವಳ ಮೈಯೆಲ್ಲಾ ಉರಿದುಹೋಯಿತು.

“ರ್ರೀ ಅದ್ವಿತೀಯ….. ಏನ್ರೀ ಇದು… ಕಾಲೇಜಿನಲ್ಲಿ ನನ್ನ ಜೊತೆ ಜಗಳವಾಡುವುದು ಸಾಲದು ಅಂತ ನಮ್ಮ ಮನೆಯವರೆಗೂ ಹುಡುಕಿಕೊಂಡು ಬಂದಿದ್ದೀರಾ…? ಬೇಗ ತಿಂಡಿ ತಿಂದು ಹೊರಡಿ. ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಮರುಳು ಮಾಡಿದ ಹಾಗೆ ಏನೇನೋ ಹೇಳಿ ನಮ್ಮಮ್ಮನನ್ನೂ ಮರುಳು ಮಾಡಬೇಡಿ. ಬೇಗ ಹೊರಡಿ ಸಾಕು….” ಎಂದು ಜೋರಾಗಿ ಹೇಳಿದಳು.

“ನಿಮಿಷಾ ಯಾಕೆ ಹೀಗೆಲ್ಲಾ ಮಾತಾಡ್ತಿದ್ದೀಯಾ…. ಇವರೇ ಕಣೇ ನಿನ್ನನ್ನು ಮದುವೆಯಾಗಲು ಬಂದಿರುವ ವರ. ಅವರಿಗೆ ಗೌರವ ಕೊಟ್ಟು ಮಾತನಾಡು,” ಅಮ್ಮ ಮಗಳನ್ನು ಗದರಿದರು.

“ಅಮ್ಮಾ….. ಏನಿದು? ಇವರು ತಮಾಷೆಗೆ ಹೇಳಿರಬೇಕು, ಅದನ್ನು ನೀನು ನಂಬಿದೆಯಾ…? ಯಾವಾಗಲೂ, ಎಲ್ಲಾ ವಿಷಯದಲ್ಲೂ ಇವರಿಗೆ ತಮಾಷೆಯೇ…!”

“ನಿಮಿಷಾ ಮೇಡಂ, ಮದುವೆ ವಿಚಾರದಲ್ಲಿ ಯಾರಾದರೂ ತಮಾಷೆ ಮಾಡುತ್ತಾರೇನ್ರೀ…..? ಅತ್ತೆ ನೀವಾದರೂ ನಿಮ್ಮ ಮಗಳಿಗೆ ಹೇಳಿ, ನನಗೆ ಇವರಂದ್ರೆ ಇಷ್ಟಾ ಅಂತ,” ಎಂದು ಅವಳಿಗೆ ಕಣ್ಣು ಹೊಡೆದು ನಗುತ್ತಾ ಹೇಳಿದ.

“ಅತ್ತೆ ಬೋಂಡಾ ತುಂಬಾ ಚೆನ್ನಾಗಿ ಮಾಡಿದ್ದೀರಿ…. ಇನ್ನು ಮೇಲೆ ಹೀಗೆಯೇ ಆಗಾಗ ಒಳ್ಳೊಳ್ಳೆ ತಿಂಡಿ ಮಾಡಿ ಕೊಡ್ತಾ ಇರಿ. ಹೋಟೆಲ್‌, ಮೆಸ್‌ ಊಟ ತಿಂದು ಸಾಕುಸಾಕಾಗಿದೆ. ಅಂದಹಾಗೆ ನಿಮ್ಮ ಮಗಳಿಗೆ ಅಡುಗೆ ಏನಾದರೂ ಕಲಿಸಿದ್ದೀರಾ ಹೇಗೆ….? ಇಲ್ಲ ಬರೀ ಪಾಠ ಮಾಡುವುದು ಮಾತ್ರ ಗೊತ್ತಾ….? ಪರವಾಗಿಲ್ಲ ಅಡ್ಜಸ್ಟ್ ಮಾಡಿಕೊಳ್ತೀನಿ,” ಎಂದು ಬೋಂಡಾ ಸವಿಯುತ್ತಾ ಅದ್ವಿತೀಯ ಕಿಚಾಯಿಸಿದ.

ಈಗಂತೂ ನಿಮಿಷಾಳಿಗೆ ರೇಗಿ ಹೋಯಿತು. ಆದರೂ ಕೊಂಚ ಸಮಾಧಾನದಿಂದ, “ಅದ್ವಿತೀಯ, ನೀವು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ… ನಮ್ಮಿಬ್ಬರ ಸ್ವಭಾವ ಹೊಂದುದಿಲ್ಲ. ಇದೆಲ್ಲಾ ನಡೆಯುವುದಿಲ್ಲ…. ದಯವಿಟ್ಟು ಹೊರಡಿ,” ಎಂದಳು.

“ಹಲೋ ನಿಮಿಷಾ ಮೇಡಂ…. ನೀವು ಫಿಸಿಕ್ಸ್ ಲೆಕ್ಚರರ್‌ ಅಲ್ವಾ….. ಅಯಸ್ಕಾಂತದಲ್ಲಿ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಣೆ ಹೊಂದುತ್ತವೆ ಎಂದು ನಿಮಗೆ ಗೊತ್ತಿಲ್ಲವೇ….? ಹಾಗೇ ನನಗೂ ಕೂಡ…. ಅಯ್ಯೋ ಹೇಳಲು ನಾಚಿಕೆಯಾಗುತ್ತೆ,” ಎಂದು ಮುಖ ಕೆಂಪಗೆ ಮಾಡಿಕೊಂಡು ಹೇಳಿದ.

“ನಿಮಿಷಾ…. ಒಪ್ಪಿಕೊಳ್ಳಮ್ಮ…. ಇಷ್ಟು ದಿನ ಮದುವೆಯಾಗಿಲ್ಲ ಅಂತ ಕೊರಗುತ್ತಿದ್ದೆ. ಈಗ ಬಂಗಾರದಂಥ ಗಂಡು ಸಿಕ್ಕಿದ್ದಾನೆ, ಇನ್ನೂ ಯಾಕೆ ಮೀನಾಮೇಷಾ ಎಣಿಸ್ತಾ ಇದ್ದೀಯಾ…..?” ಅಮ್ಮ ಅನುನಯಿಸಿದರು.

“ಅಮ್ಮಾ….. ಇವರು ನನಗಿಂತ ಚಿಕ್ಕವರು….”

“ಇರಲಿ ಬಿಡಿ ಮೇಡಂ….. ವಯಸ್ಸು ಎನ್ನುವುದು ಬರೀ ಎಣಿಸುವುದಕ್ಕಷ್ಟೆ….. ಮನಸ್ಸುಗಳು ಕೂಡಿದರೆ ಸಾಕು ಅಲ್ವಾ…..?”

ನಿಮಿಷಾ ಯೋಚಿಸುತ್ತಾ ಅಲ್ಲಿಯೇ ಇದ್ದ ಸೋಫಾದಲ್ಲಿ ಕುಳಿತಳು. `ಹೌದು ಅದ್ವಿತೀಯ ಹೇಳುವುದರಲ್ಲಿ ಸತ್ಯವಿದೆ…. ಅವನ ವಿಚಾರಧಾರೆಗಳು ಸರಿಯಾಗಿಯೇ ಇವೆ. ನಾನೇಕೆ ಇಷ್ಟು ದಿನ ಹೀಗೆ ಯೋಚಿಸಲಿಲ್ಲ?’ ಎನಿಸಿತು.

ಅದ್ವಿತೀಯ ಅವಳ ಬಳಿ ಕುಳಿತು, “ನಿಮಗೆ ಒಪ್ಪಿಗೆಯಾ…..?” ಎಂದು ಕೇಳಿದ.

ನಿಮಿಷಾ ತಲೆಬಗ್ಗಿಸಿ, “ಹ್ಞೂಂ…..” ಎಂದಳು. ನಾಚಿಕೆಯಿಂದ ಅವಳ ಮುಖ ಕೆಂಪಾಯಿತು. ತುಟಿಯ ಮೇಲೆ ಸುಂದರವಾದ ನಗು ಮೂಡಿತು. ಕಾವೇರಮ್ಮ ಇಬ್ಬರ ಬಾಯಲ್ಲೂ ಕೇಸರಿಭಾತ್‌ ಇಟ್ಟರು. ತುಂಬಾ ಸಿಹಿ ಎನಿಸಿತು. ಮೊದಲ ಬಾರಿಗೆ ಜೀವನ ತುಂಬಾ ಚೆಂದ ಎನಿಸಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ