ಕೊನೇರೂ ಹಂಪೀ
ಚದುರಂಗದ ರಣರಂಗದಲ್ಲಿ ಮತ್ತೊಂದು ನಡೆ ಭವ್ಯಾ ಡೋರೆ ಕೊನೇರೂ ಹಂಪೀ ವಿಶ್ವ ಚದುರಂಗದಾಟದಲ್ಲಿ ಚಾಂಪಿಯನ್ ಎನಿಸಿದ್ದಾರೆ! ಈ ಯಶಸ್ಸಿನ ಶಿಖರವೇರಲು ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇಡೀ ಜೀವನ ಸಂಘರ್ಷದಲ್ಲಿಯೇ ನಡೆದು, ಹಣದ ಬಿಕ್ಕಟ್ಟು ಕಂಗೆಡಿಸಿತು. ಹೀಗಿದ್ದೂ ಸಮಾಜದ ಕಂದಾಚಾರದ ವಿರುದ್ಧ ಹೋರಾಡಿ, ಈ ಯಶಸ್ಸಿನ ಶಿಖರ ಮುಟ್ಟಿದ್ದು ಖಂಡಿತಾ ಸುಲಭ ಆಗಿರಲಿಲ್ಲ…….
ಕೊನೇರೂ ಹಂಪೀ ತಮ್ಮ ಹೆಗಲ ಮೇಲೆ ಹೊದೆಯಲಾಗಿದ್ದ ಸ್ಲೇಟ್ ಬಣ್ಣದ ನೆಟೆಡ್ ಜ್ಯಾಕೆಟ್ ನ್ನು ಇನ್ನಷ್ಟು ಬಿಗಿಯಾಗಿ ಹೊದ್ದರು. ಅವರ ಎದುರಿಗೆ ಇರಿಸಲಾಗಿದ್ದ ಚದುರಂಗದಾಟದ ಕ್ರೀಂ ಬಣ್ಣದ ಪಾನ್ ಗಳನ್ನು ಆಕೆ ವಿಧಿವತ್ತಾಗಿ ವ್ಯವಸ್ಥಿತಗೊಳಿಸಿದರು. ಇವರ ಎದುರಾಳಿ, ಮಹಾಷ್ಟ್ರಾದ 19ರ ಹರೆಯದ ಪ್ರತಿಭಾಶಾಲಿ ದಿವ್ಯಾ ದೇಶ್ ಮುಖ್ ತಮ್ಮ ರಿವಾಲ್ವಿಂಗ್ ಕುರ್ಚಿಯ ಮೇಲೆ ಲೈಟಾಗಿ ತೂಗುತ್ತಾ ಕಾಯುತ್ತಲೇ ಇದ್ದರು. ದಿವ್ಯಾ ಟೈಂ ಸೆಟ್ ಮಾಡಲು ಮುಂದಾದರು. ಇಬ್ಬರು ಹೆಂಗಸರೂ ಪರಸ್ಪರ ಕೈ ಕುಲುಕಿಕೊಂಡರು.
ಜುಲೈ 2025ರ ಜಾರ್ಜಿಯಾ ಅಂತಾರಾಷ್ಟ್ರೀಯ ಚದುರಂಗದ ಮಹಾಸಂಘ ಮಹಿಳಾ ವಿಶ್ವ ಕಪ್ ನ್ನು ಆಯೋಜಿಸಿತ್ತು. ಮೊದಲ ಸಲ ಇಬ್ಬರು ಭಾರತೀಯ ಆಟಗಾರರು ಫೈನಲ್ ನಲ್ಲಿ ಪರಸ್ಪರ ಎದುರಾಗಿದ್ದರು. 3 ದಿನಗಳ ಸತತ ಸರಿಸಮಾನ ಪೈಪೋಟಿಯ ನಂತರ ಹಂಪೀ ಮತ್ತು ದಿವ್ಯಾ ಕೊನೆಯದಾಗಿ ಪರಸ್ಪರ ಎದುರಬದುರಾಗಿದ್ದರು.
ಅಂತೂ ಮ್ಯಾಚ್ ಶುರುವಾಯಿತು. ಹಂಪೀ ಕ್ವೀನ್ಸ್ ಗ್ಯಾಂಬಿಟ್ ಮೂಲಕ ಆಟ ಶುರು ಮಾಡಿದರು. ಆಕೆ ರಾಣಿಯ ಮುಂದಿದ್ದ ಸೈನಿಕನನ್ನು ಮುನ್ನಡೆಸಿದರು. ಇವರ ಈ ನಡೆ ಬೋರ್ಡ್ ನ ಕೇಂದ್ರದಲ್ಲಿ ನಿಯಂತ್ರಣ ತರುವಂಥದ್ದಾಗಿತ್ತು. ಸುಮಾರು 15 ನಿಮಿಷಗಳಲ್ಲಿ ದಿವ್ಯಾ ಈಕೆಯನ್ನು ಸೋಲಿನ ಅಂಚಿಗೆ ಎಳೆತಂದಿದ್ದರು. ಭಾರತದ ಪ್ರಪ್ರಥಮ ಹಾಗೂ ಎಲ್ಲರಿಗಿಂತ ವರಿಷ್ಠ ಮಹಿಳಾ ಗ್ರಾಂಡ್ ಮಾಸ್ಟರ್, ಭಾರತದ ನವನವೀನ ಯುವ ಆಟಗಾರ್ತಿಯ ಮುಂದೆ, ಅದೂ ಕೊನೆ ಮ್ಯಾಚಿನಲ್ಲಿ ಇಂಥ ತಪ್ಪು ತಂದುಕೊಂಡಿದ್ದರು!
ಇದಾದ 2 ತಿಂಗಳ ನಂತರ ಆಂಧ್ರದ ವಿಜಯವಾಡಾದ ತಮ್ಮ ಮನೆಯಿಂದ ನನ್ನೊಂದಿಗೆ ಮಾತನಾಡುತ್ತಿದ್ದ 38ರ ಹರೆಯದ ಹಂಪೀ, ಆ ಸೋಲಿನ ಕುರಿತು ಬಹಳ ವಿಚಲಿತರಾಗಿದ್ದರು. ಆ ದಿನ ಅವರು ಒಂದು ಸಾಧಾರಣ ಬಿಳಿ ಕುರ್ತಾ ಧರಿಸಿ, ಸಣ್ಣ ಬಿಂದಿ ಇರಿಸಿದ್ದರು. ಅವರ ಹಿಂದೆ ಒಂದು ಲೈಟ್ ಕಲರ್ ಪರದೆ ಇಳಿಬಿಡಲಾಗಿತ್ತು.
“ಖಂಡಿತವಾಗಿಯೂ ಇದೊಂದು ಅತ್ಯಂತ ಕಠಿಣಕರ ಹಾಗೂ ಸಾಲುಭರಿತ ಪೈಪೋಟಿ ಆಗಿತ್ತು!” ಹಂಪೀ ಮಾತನಾಡುತ್ತಿದ್ದರು, “ಈ ಮಟ್ಟದಲ್ಲಿ ಗಟ್ಟಿಯಾಗಿ ನೆಲೆಯೂರಲು ನಾವು ಯುವಜನತೆ ವಿರುದ್ಧ ತೀವ್ರ ಸೆಣಸಬೇಕಾಗುತ್ತದೆ. ಏಕೆಂದರೆ, ಅವರ ಬಳಿ ಅತ್ಯಧಿಕ ಧೀಶಕ್ತಿ ಇರುತ್ತದೆ. ನಮ್ಮ ಪೀಳಿಗೆಗೆ ಹೋಲಿಸಿದರೆ ಅವರು ಅಧಿಕ ತಯಾರಿ ನಡೆಸಿ, ಬೆಟರ್ ಪರ್ಫಾರ್ಮೆನ್ಸ್ ನೀಡಲು ತರಬೇತಿ ಪಡೆದಿರುತ್ತಾರೆ.”
ಅನುಭವದ ಝಲಕ್
ಹಂಪೀಯ ಮಾತುಗಳಲ್ಲಿ 3 ದಶಕಗಳಿಗಿಂತ ಹೆಚ್ಚಿನ ಝಲಕ್ ಕಾಣುತ್ತಿತ್ತು. ಆಕೆ 1993ರಲ್ಲಿ ಚದುರಂಗದ ಸ್ಪರ್ಧೆಯಲ್ಲಿ ಮೊದ ಮೊದಲು ಆಟ ಆರಂಭಿಸಿದ್ದರು. ಆಗ ಆಕೆಗೆ ಕೇವಲ 6 ವರ್ಷ. ಇದಾದ 3 ವರ್ಷಗಳ ನಂತರ ಆಕೆ ತನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು. ಇದಾದ ನಂತರ ಹಂಪೀ, ಈ ಚದುರಂಗದ ಸರ್ವಶ್ರೇಷ್ಠ ಆಟಗಾರ್ತಿ ಎಂದೇ ಗುರುತಿಸಲ್ಪಟ್ಟರು. 2002ರಲ್ಲಿ ತನ್ನ 15ನೇ ಹುಟ್ಟುಹಬ್ಬದ 1 ತಿಂಗಳ ನಂತರ, ಹಂಪೀ ಭಾರತದ ಪ್ರಪ್ರಥಮ ಮಹಿಳಾ ಗ್ರಾಂಡ್ ಮಾಸ್ಟರ್‌ಎನಿಸಿದರು! ಆ ಸಮಯದಲ್ಲಿ ಆಕೆ ವಿಶ್ವದ ಅತಿ ಯಂಗ್ ಗ್ರಾಂಡ್ ಮಾಸ್ಟರ್ ಆಗಿದ್ದರು. 2003ರಲ್ಲಿ ಈಕೆಗೆ `ಅರ್ಜುನ ಪ್ರಶಸ್ತಿ’ ಲಭಿಸಿತು, ನಮ್ಮ ದೇಶದ ಪ್ರಧಾನ ಕ್ರೀಡಾ ಸನ್ಮಾನಗಳಲ್ಲಿ ಒಂದು! 2007ರಲ್ಲಿ ಈಕೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ಇದಂತೂ ನಮ್ಮ ದೇಶದ ನಾಲ್ಕನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಆಗಿತ್ತು.
“ಆಗ ನಾನು ನನ್ನ ಉಚ್ರಾಯ ಮಟ್ಟದಲ್ಲಿದ್ದೆ,” ಎನ್ನುತ್ತಾರೆ ಹಂಪೀ.
“ಖಂಡಿತಾ ಈಗ ನಾನು ಆ ಸ್ಥಿತಿಯಲ್ಲಿಲ್ಲ, ಅದು ನನ್ನಿಂದ ಹಿಂದೆ ಸರಿದಿದೆ.”
2014ರಲ್ಲಿ ಆಕೆ ದಾಸರೀ ಅನ್ವೇಶ್ ರನ್ನು ವಿವಾಹವಾದರು. ಆತ ವೃತ್ತಿನಿರತ ಎಲೆಕ್ಟ್ರಿಕ್ ಎಂಜಿನಿಯರ್, ಒಬ್ಬ ಪ್ರಸಿದ್ಧ ವಾಣಿಜ್ಯೋದ್ಯಮಿಯ ಮಗ. 2 ವರ್ಷಗಳಲ್ಲಿ ಆಕೆ ಗರ್ಭವತಿಯಾಗಿ ಕಠಿಣಕರ ಸ್ಥಿತಿಯಲ್ಲಿದ್ದಾಗ, ಕೆಲಕಾಲ ಚದುರಂಗದಿಂದ ದೂರ ಸರಿದಿದ್ದರು.
ನಿಜ, ಕೆಲವು ಕಾಲ ಚದುರಂಗದಲ್ಲಿ ಇವರ ಸ್ಪೀಡ್ ತಗ್ಗಿತ್ತು, ಆಕೆಯ ಕೆರಿಯರ್ ಅಲ್ಲಿಗೇ ಅಪೂರ್ಣವಾಗಿ ನಿಂತುಬಿಡಲಿಲ್ಲ. ಅದು ಅವರ ಸಮತೋಲಿತ ಧೈರ್ಯಚಿತ್ತದ ಕುರಿತಾದುದು. 2018ರಲ್ಲಿ ಆಕೆ ಮತ್ತೆ ಚದುರಂಗಕ್ಕೆ ವಾಪಸ್ಸಾದರು. ಆಗ ಅವರು ಹಲವು ಸೋಲುಗಳನ್ನು ಕಾಣಬೇಕಾಯಿತು. ಹಾಗೆಯೇ ಹಲವು ಗೆಲುವುಗಳೂ ಅವರದಾಯಿತು. ಇಂಥ ಸಂದಿಗ್ಧದಲ್ಲಿ ಚೆಸ್ ಬಿಟ್ಟುಬಿಡೋಣ ಎಂದು ನಿರ್ಧರಿಸುವ ಮಟ್ಟಕ್ಕೆ ಬಂದಿದ್ದರು.
“ನಾನಂತೂ ಈ ಆಟ ಬಿಟ್ಟೇ ಬಿಡೋಣ ಅಂದುಕೊಂಡಿದ್ದೆ. ಏಕೆಂದರೆ ನಾನು ಕೇವಲ ಚದುರಂಗ ಆಡುವುದು ಬೇಡ ಅಂತಿದ್ದೆ, ನಾನು ಇದಕ್ಕೆ ತಕ್ಕ ಆಟಗಾರ್ತಿಯೋ ಅಲ್ಲವೋ? ಯಶಸ್ಸು ಸಿಗುತ್ತದೋ ಇಲ್ಲವೋ? ನಾನು ಈ ಆಟ ಮುಂದುವರಿಸಬೇಕಿದ್ದರೆ, ನಾನು ಏನಾದರೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲೇಬೇಕಿತ್ತು. ಮುಂದಿನ ಕ್ರೀಡಾಪಟುಗಳಿಗೆ ಒಂದು ಪ್ರೇರಣೆ ಆಗಬೇಕಿತ್ತು,” ಎಂದು ನನಗೆ ಹೇಳಿದರು.
ತಾಯಿ ಆದ ನಂತರ ಆಕೆಯ ಪ್ರಾಥಮಿಕ ಅವಶ್ಯಕತೆಗಳು ವಿಸ್ತೃತಗೊಂಡವು. ಆದರೆ ಆಟದ ಕುರಿತಾಗಿ ಆಕೆಯ ಸಮರ್ಪಣೆ ಈಗಲೂ ಹಾಗೆಯೇ ಇದೆ! ಇದೀಗ ಆಕೆ ತಮ್ಮ ಕೆರಿಯರ್ ನ ಎರಡನೇ ಮಗ್ಗುಲಲ್ಲಿದ್ದಾರೆ. ಅನುಭವ, ಆತ್ಮವಿಶ್ವಾಸ ದಟ್ಟೈಸಿದೆ.
ವಿಶ್ವ ಚಾಂಪಿಯನ್
ಕಳೆದ ಕೆಲವು ವರ್ಷಗಳಿಂದ ಹಂಪೀ ಪ್ರಭಾವಶಾಲಿ ಗೆಲುವುಗಳನ್ನು ಸಾಧಿಸಿದ್ದಾರೆ. ಇದರಲ್ಲಿ ಮಹಿಳೆಯರ ರಾಪಿಡ್ ಚದುರಂಗದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿದರು. ಇದು ಈ ಆಟದ ತೀವ್ರ ಗತಿಯ ಫಾರ್ಮ್ಯಾಟ್ ಆಗಿತ್ತು. ಈ ಬಿರುದು ಅವರಿಗೆ 2019 2024ರಲ್ಲಿ 2 ಬಾರಿ ಲಭಿಸಿತು. ಇವರನ್ನು ಬಿಟ್ಟರೆ ಈ ಮಟ್ಟದಲ್ಲಿ 2 ಸಲ ಇಂಥ ಬಿರುದು ಪಡೆದವರು ಒಬ್ಬರೇ ಮಹಿಳೆ! 2008ರ ನಂತರ ಹಂಪೀಯರ ರಾಂಕಿಂಗ್ ಮಟ್ಟ 5ಕ್ಕಿಂತ ಎಂದೂ ಕೆಳಗೆ ಇಳಿಯಲೇ ಇಲ್ಲ.
ನ್ಯೂಸ್ ಪಬ್ಲಿಕೇಶನ್ಸ್ ಹಂಪೀಯರ ವಾಪಸಿ ಕುರಿತು ವರ್ಣಿಸುವುದಕ್ಕಾಗಿ ಅತಿಶಯೋಕ್ತಿ ತುಂಬಿದ ಪದಗಳ ಬಳಕೆ ಮಾಡುತ್ತದೆ. ಸೆನ್ಸೇಶನ್, ಪ್ರೇರಣಾದಾಯಕ, ಚಕಿತಗೊಳಿಸುವಂಥ, ಇನ್ನೂ ಏನೇನೋ…. ಆದರೆ ಅವರ ಸಾಧನೆಯನ್ನು ಪರಿಸ್ಥಿತಿಗಳಿಂದ ಭಿನ್ನ ಮಾಡಿ ನೋಡಲು ಆಗುವುದೇ ಇಲ್ಲ.
“ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ಹಾಗೂ ಮಾನಸಿಕ ಶ್ರಮ ತಾಯಿಯ ಪಾಲಿಗೇ ಬರುತ್ತದೆ. ಪ್ರೊಫೆಶನಲ್ ರೂಪದಲ್ಲಿ ಕೆಲಸ ಮಾಡುತ್ತಾ ಇಂಥ ಮನೆವಾರ್ತೆ ನಿಭಾಯಿಸುವುದು ನಿಜಕ್ಕೂ ಮಲ್ಟಿ ಟ್ಯಾಲೆಂಟ್ ಸರಿ.”
ಪತ್ರಕರ್ತೆ ಜೋನಿಯಾ ಸ್ಪೋರ್ಟ್ಸ್ ಪಬ್ಲಿಕೇಶನ್ ಗಾಗಿ ಒಂದು ಲೇಖನದಲ್ಲಿ ಹೇಳಿದ್ದಾರೆ, “2 ಸಲ ವಿಶ್ವ ಚಾಂಪಿಯನ್ ಆದ ಮೇಲೆ ಹೀಗಾ ಮಾಡುವುದು….? ಇದಕ್ಕಾಗಿ ಜಬರ್ದಸ್ತಾದ ಸಾಹಸ ತೋರಬೇಕಾದೀತು…..”

ಹಿಂದೆಲ್ಲ ಹಂಪೀ ಯಾವುದೇ ಮ್ಯಾಚ್ ನಲ್ಲಿ ಡ್ರಾ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಆಕೆ `ಗೆಲ್ಲುವುದಕ್ಕಾಗಿ ಅಗತ್ಯಕ್ಕಿಂತಲೂ ಬಲು ಜೋರಾಗಿಯೇ ಹೋರಾಡುತ್ತಿದ್ದರು,’ ಎಂಬುದನ್ನು ನೆನಪಿಸಿಕೊಂಡು ಹೇಳಿದರು. ಅವರು ಈ ಆಟಕ್ಕೆ ವಾಪಸ್ ಮರಳಿದಾಗ, “ನನಗೆ ನನ್ನ ಶಕ್ತಿಯ ಬಗ್ಗೆ ಗೊತ್ತಿದೆ. ಎಲ್ಲಿ ಹೆಚ್ಚಿನ ಒತ್ತಡ ಹೇರಬೇಕು, ಎಲ್ಲಿ ನಿಂತು ನಿಧಾನ ಸಾಗಬೇಕು…. ಗೊತ್ತಿದೆ!” ಎಂದು ಮುಂದುವರಿಸುತ್ತಾ, “ಈ ಬ್ರೇಕ್ ನನ್ನ ಚದುರಂಗದಾಟವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿದೆ. ನಾನು ಪೂರ್ತಿಯಾಗಿ ತಾಜಾ ಆಗಿ ಮರಳಿದ್ದೆ. ನನ್ನ ಮೈಂಡ್ ಈ ಕುರಿತು ಬಿಲ್ ಕುಲ್ ಸ್ಪಷ್ಟವಾಗಿತ್ತು!”
ಪರಿಶ್ರಮದಿಂದ ದೊರೆತ ಐಡೆಂಟಿಟಿ
ಹಂಪೀ ತಂದೆ ಅಶೋಕ್ ಕೊನೇರೂ ತಮ್ಮ ಮಗಳನ್ನು ಮುಂದೆ ಒಬ್ಬ ಕ್ರೀಡಾಪಟುವಾಗಿ ಕೆರಿಯರ್ ತೆಗೆದುಕೊಳ್ಳಲು ಮೊದಲಿನಿಂದಲೂ ಪ್ರೇರೇಪಿಸುತ್ತಿದ್ದರು. ಹೀಗಾಗಿ ಆಕೆ ತಂದೆಯಿಂದ ಟೆನಿಸ್ ಹಾಗೂ ಚೆಸ್ ಎರಡನ್ನೂ ಕಲಿತರು. ಅವರು ಮಗಳ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ನ ಒಂದು ಲೇಖನದಲ್ಲಿ ಹೀಗೆ ಹೇಳಿಕೊಂಡಿದ್ದಾರೆ, 90ರ ದಶಕದ ಆರಂಭದಲ್ಲಿ ಹಂಪೀ ದೊಡ್ಡವಳಾಗುತ್ತಿದ್ದಾಗ, ಇಬ್ಬರು ಸಹೋದರಿಯರಾದ ವೀನಸ್‌ಸೆರೇನಾ ವಿಲಿಯಮ್ಸ್ ಗ್ಲೋಬಲ್ ಮಟ್ಟದಲ್ಲಿ ಸುಪ್ರಸಿದ್ಧರಾಗಿದ್ದರು. ಟೆನ್ನಿಸ್ ನಲ್ಲಿ ಅವರ ಬೆಳವಣಿಗೆ ಗಮನಿಸಿ ಮಗಳಿಗೆ ಹಾಗೇ ಅಭಿವೃದ್ಧಿಗೊಳ್ಳಬೇಕೆಂದು ತಂದೆ ವಿವರಿಸುತ್ತಿದ್ದರು.
“ಹೀಗಾಗಿ ನಮ್ಮ ಹಂಪೀ ಟೆನ್ನಿಸ್ ನಲ್ಲಿ ಪಳಗಲೆಂದೇ ನಾನು ಬಯಸಿದ್ದೆ,” ಆ ದಿನಪತ್ರಿಕೆಯ ಸಂದರ್ಶನದಲ್ಲಿ ತಂದೆ ಹೇಳುತ್ತಾರೆ, “ಆದರೆ… ಮುಂದೆ ಈ ಆಟದ ಅಧ್ಯಯನ ಮಾಡಿದಾಗ, ಹಂಪೀ ಆಕಸ್ಮಿಕವಾಗಿಯೇ ಚದುರಂಗದಾಟದತ್ತ ಒಲಿದಿದ್ದಳು! ಆಗ ನಾನು ಹಂಪೀಗೆ, ನೀನು ಈ ಆಟದಲ್ಲಿ ನಿನ್ನ ತಾತನನ್ನು ಸೋಲಿಸಬಲ್ಲೆಯಾ? ಎಂದು ಚಾಲೆಂಜ್ ಒಡ್ಡಿದ್ದೆ. ಆಗ ಅವಳು ದಿನಾ ಚೆಸ್ ಕ್ಲಬ್ಬಿಗೆ ಹೋಗಿ ಈ ಆಟ ಕಲಿಯುತ್ತಿದ್ದ ಕಾಲ. ಕೇವಲ 8 ವರ್ಷದ ಈ ಪೋರಿ, ತಾತನನ್ನು ಸೋಲಿಸಿಯೇಬಿಟ್ಟಳು! ಅಂದಿನಿಂದ ನಾನು ಅವಳೊಂದಿಗೆ ಆಗಾಗ ಆಡುತ್ತಾ ತೀವ್ರ ತೆರನಾದ ತರಬೇತಿ ನೀಡುತ್ತಿದ್ದೆ. ಟೂರ್ನಮೆಂಟ್ ಮಟ್ಟದ ಆಟಗಾರನಾದ ನನ್ನನ್ನು 11 ವರ್ಷದ ಈ ಹುಡುಗಿ ಸುಲಭವಾಗಿ ಸೋಲಿಸಿ ಮುಂದುವರಿದಳು!”
ಹೀಗೆ ಹಂಪೀ ಆ ಪ್ರಾಂತ್ಯದಲ್ಲೆಲ್ಲ ಆಟವಾಡುತ್ತಾ ಫೇಮಸ್ ಆದರು. ಈ ಆಟ ಆರಂಭಿಸಿದ ಕೆಲವೇ ದಿನಗಳಲ್ಲಿ ಆಕೆ ಜಿಲ್ಲಾ, ರಾಜ್ಯ ಮಟ್ಟಗಳಲ್ಲಿ ಪ್ರದರ್ಶನ ನೀಡುತ್ತಾ ಯಶಸ್ಸು ಕಂಡರು. ಈ ನಡುವೆ ಅಶೋಕ್ ತಮ್ಮ ಅಪ್ಲೈಡ್ ಸೈನ್ಸ್ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ನೀಡಿ, 100% ಕೇವಲ ಮಗಳ ತರಬೇತುದಾರರಾಗಿ ಉಳಿದುಬಿಟ್ಟರು. ಜೊತೆಗೆ ಆಕೆ ಎಲ್ಲೆಲ್ಲಿ ಟೂರ್ನಮೆಂಟ್ಸ್ ಗೆ ಹೋಗಬೇಕಿತ್ತೋ ಅಲ್ಲೆಲ್ಲ ಜೊತೆಯಾಗಿ, ಹೊರಟರು.
ಫ್ರಂಟ್ ಲೈನ್ ಪತ್ರಿಕೆಗಾಗಿ 1998ರಲ್ಲಿ, ಮ್ಯಾನ್ಯುಯೆಲ್ ಎರಾನ್ ಒಂದು ಸಂದರ್ಶನದ ಲೇಖನದಲ್ಲಿ ಹೇಳುತ್ತಾರೆ, “ಹಂಪೀ ಒಬ್ಬ ಸೀರಿಯಸ್ ಶ್ರೋತೃ ಮಾತ್ರ, ಚಿನಕುರುಳಿಯಂತೆ ಎಂದೂ ಮಾತನಾಡಿದ್ದೇ ಇಲ್ಲ, ಮಹಾ ಇಂಟ್ರೋವರ್ಟ್! ಆದರೆ ಚದುರಂಗದ ಕುರಿತಾಗಿ ಯಾವುದೇ ವಾಗ್ವಾದ ನಡೆದಾಗ, ತಾನೇ ವಾದದಲ್ಲಿ ಗೆಲ್ಲುವಳು!”
ಮ್ಯಾನ್ಯುಯೆಲ್ ಭಾರತದ ಮೊದಲ ಅಂತಾರಾಷ್ಟ್ರೀಯ ಮಾಸ್ಟರ್ ಆಗಿದ್ದರು, ಇವರು ಚೆನ್ನೈನ ಸಮೃದ್ಧ ಚದುರಂಗ ಸಂಸ್ಕೃತಿಯ ಬುನಾದಿ ಸ್ಥಾಪಿಸುವುದರಲ್ಲಿ ಬಲು ಮಹತ್ವಪೂರ್ಣ ಪಾತ್ರ ವಹಿಸಿದ್ದರು. ಹಂಪೀ ಇವರನ್ನು ಭೇಟಿಯಾದಾಗ ಕೇವಲ 10ರ ಬಾಲೆ. ಆದರೆ ಅಷ್ಟೇ ಧೈರ್ಯವಾಗಿ ಅವರೊಂದಿಗೆ ಆಡುತ್ತಿದ್ದಳು. ಅದಕ್ಕೆ ಮ್ಯಾನ್ಯುಯೆಲ್ ರ ಟಿಪ್ಪಣಿ ಎಂದರೆ, “ಆಕೆ ಎಂದೂ ಅವಸರವಸರದಲ್ಲಿ ಆಕ್ರಮಣಕಾರಿ ಆಟ ಆಡುತ್ತಿರಲಿಲ್ಲ. ಮೊದಲು ಆಕೆ ತನ್ನ ಪಾನ್ಸ್ ನಿಂದ ಚದುರಂಗದ ಸೇನೆ ದೃಢಪಡಿಸಿಕೊಳ್ಳುತ್ತಾ, ಸಮಯ ಪಕ್ವಗೊಂಡಾಗ ಮಾತ್ರ ಎದುರಾಳಿಯನ್ನು ಒಮ್ಮೆಲೇ `ಚಿತ್’ ಮಾಡಿಬಿಡುತ್ತಾಳೆ!”
ಅವರ ಭೇಟಿಯ ಹೊತ್ತಿಗೆ ಹಂಪೀ ಅದಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಳು. ಪತ್ರಕರ್ತೆ ಸೂಜನ್ ಈಕೆಯ ಕುರಿತು ಬರೆಯುತ್ತಾ, “ಆಕೆಯ ತಂದೆಯರ ನಿರ್ಧಾರ ಎಂದರೆ, ಕಿಶೋರಾವಸ್ಥೆ ತಲುಪುವ ಹೊತ್ತಿಗೆ ಬಾಲಕರ ಟೂರ್ನಮೆಂಟ್ ನಲ್ಲಿ ಹಂಪೀ ವಿಜೇತೆ ಎನಿಸುತ್ತಾಳೆ. ಇದರಿಂದ ಹಂಪೀ ವೇಗವಾಗಿ ಮುಂದುವರಿಯಲು ಅವಕಾಶವಾಗುತ್ತದೆ. ನಮ್ಮ ದೇಶದ ಕೆಲವೇ ಆಯ್ದ ಆಟಗಳಲ್ಲಿ ಚದುರಂಗ ಒಂದು. ಇದರಲ್ಲಿ ಮಾತ್ರ ಸ್ತ್ರೀಪುರುಷರು ಒಂದೇ ಟೂರ್ನಮೆಂಟ್ ನಲ್ಲಿ ತಮ್ಮ ಬಲಾಬಲ ಪ್ರದರ್ಶಿಸಬಹುದಾಗಿದೆ!”
ಆತ್ಮವಿಶ್ವಾಸಕ್ಕೆ ಮೂಡಿದ ಗರಿ
ಹಂಪೀ “ಅಂಡರ್ ಬಾಲಕರ ಏಷ್ಯನ್ ಟೂರ್ನಮೆಂಟ್ 1999ರಲ್ಲಿ ಒಬ್ಬಂಟಿ ಹುಡುಗಿಯಾಗಿ ಆಡಿದಳು. ಅದರಲ್ಲಿ ವಿಜೇತೆ ಎನಿಸಿದಳು! ಅದರ ಮುಂದಿನ ವರ್ಷ ಆಕೆ ಅಂಡರ್ ಬಾಲಕರ ಟೂರ್ನಮೆಂಟ್ ನಲ್ಲೂ ವಿಜೇತೆ ಆಗಿದ್ದಳು!” ಎಂದು ಬರೆಯುತ್ತಾರೆ ಸೂಜನ್.
ಈ ಗೆಲುವುಗಳಿಂದ ಹಂಪೀಯ ಆತ್ಮವಿಶ್ವಾಸ ಗರಿಗೆದರಿತು. ಆ ರೀತಿ ಆಡುತ್ತಿದ್ದ ಆಕೆಗೆ, ತಕ್ಕ ಮಹಿಳಾ ಎದುರಾಳಿ ಯಾರೂ ಇರಲಿಲ್ಲ.
“ನನಗೆ ಮಹಿಳಾ ಸ್ಪರ್ಧೆಗಳಲ್ಲಿ ಗೆಲ್ಲುವುದಕ್ಕಿಂತ ಗಂಡಸರ ವಿರುದ್ಧ ವಿಜೇತೆ ಎನಿಸುವುದರಲ್ಲಿ ಹೆಚ್ಚಿನ ಹೆಮ್ಮೆ ಸಿಗುತ್ತಿತ್ತು!” ಹಂಪೀ ನನಗೆ ಹೇಳಿದರು, “ಹೀಗೆ ಮಾಡುವುದರಿಂದ ನನಗೆ ಎಲ್ಲಿಲ್ಲದ ಉತ್ಸಾಹ ಹೆಚ್ಚುತ್ತಿತ್ತು. ಏಕೆಂದರೆ ನನಗಿಂತ ಎಷ್ಟೋ ಮಟ್ಟದಲ್ಲಿ ಉನ್ನತ ಹಂತಕ್ಕೇರಿದ್ದ ಎದುರಾಳಿ ಗಂಡಸರನ್ನು ಸೋಲಿಸುವುದರಲ್ಲಿ ವಿಶೇಷ ಖುಷಿ ಕಾಣುತ್ತಿದ್ದೆ!”
ಹಂಪೀಗೆ ತನ್ನ ಮುಂದಿನ ಗುರಿ ಕ್ಲಿಯರ್ ಆಗಿತ್ತು. ಆಕೆ ಚೆಸ್ ಬಿಟ್ಟು ಬೇರೆನ್ನಾದನ್ನೂ ತನ್ನ ಕೆರಿಯರ್‌ಆಗಿಸಿಕೊಳ್ಳಲು ಬಯಸಲೇ ಇಲ್ಲ. ಎಂದೂ ಸಾಂಪ್ರದಾಯಿಕ ಸ್ಕೂಲಿಂಗ್ ಪೂರ್ತಿ ಮಾಡಲಿಲ್ಲ, ಕರೆಸ್ಪಾಂಡೆನ್ಸ್ ನಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಿದರು. ಇತರ ಮಕ್ಕಳಂತೆ ಬಾಲ್ಯವನ್ನು ಎಂಜಾಯ್ ಮಾಡಿದ್ದೇ ಇಲ್ಲ. ಆದರೆ ಆ ಕುರಿತಾಗಿ ಆಕೆಗೆ ಪಶ್ಚಾತ್ತಾಪವಿಲ್ಲ.
“ನಾನೇನಾದರೂ ಈ ಕೆರಿಯರ್ ನಲ್ಲಿ ಯಶಸ್ವಿ ಎನಿಸದಿದ್ದರೆ ಆಗ ಪಶ್ಚಾತ್ತಾಪ ಪಡುತ್ತಿದ್ದೆನೇನೋ…. ಆದರೆ ನನಗೆ ದೊರೆತ ಯಶಸ್ಸಿನ ಮುಂದೆ ಇದೆಲ್ಲ ಗೌಣ ಎನಿಸಿತು. ವಿಶ್ವದ ಸುಮಾರು ಕಡೆ ಪ್ರವಾಸ ಮಾಡಿದ್ದೀನಿ, ಹಾಗಿರುವಾಗ ಇತರರಂತೆ ನನ್ನ ಬಾಲ್ಯವಿರಲಿಲ್ಲ ಎಂದೇಕೆ ಕೊರಗಲಿ?” ಎನ್ನುತ್ತಾರೆ.
ಲಿಂಗಭೇದ ತಾರತಮ್ಯದ ಪಾಶವೀ ಪ್ರಹಾರಕ್ಕೆ ಹಂಪೀ ಸಹ ತುತ್ತಾದವರೇ! 2002ರಲ್ಲಿ ಭಾರತದ ಮೊಟ್ಟ ಮೊದಲ ಮಹಿಳಾ ಗ್ರಾಂಡ್ ಮಾಸ್ಟರ್ ಬಿರುದು ದೊರೆತ ತಕ್ಷಣ, ಆಕೆ ಮಹಾ ದುಃಸ್ವಪ್ನಕ್ಕೆ ಗುರಿಯಾದರು. ಆಕೆಯ ಪ್ರತಿಸ್ಪರ್ಧಿಗಳಾಗಿದ್ದ ಗಂಡಸರು ಬೇಕೆಂದೇ ಈಕೆಯನ್ನು ಟೀಕಿಸಿದರು, ಈಕೆಯ ಶಕ್ತಿ ಸಾಮರ್ಥ್ಯಗಳನ್ನು ಕಡೆಗಣಿಸಿದ್ದರು.
ಆಗಿನ್ನೂ 15ರ ಬಾಲೆ ಆಗಿದ್ದ ಆಕೆ ಒಂದಿಷ್ಟು ಕಳವಳದಿಂದ, “ಅದಾದ ನಂತರ ಕೆಲವು ಟೂರ್ನಮೆಂಟ್ಸ್ ನಲ್ಲಿ ನನಗೆ ಯಶಸ್ಸು ಸಿಗಲಿಲ್ಲ,” ಎಂದು ಖಿನ್ನರಾಗುತ್ತಾರೆ.
2003ರಲ್ಲಿ ಹಂಪೀ ಮಹಾರಾಷ್ಟ್ರದ ನಾಗ್ ಪುರ್ ನಲ್ಲಿ ನಡೆಯಲಿದ್ದ ಒಂದು ರಾಷ್ಟ್ರೀಯ ಸ್ಪರ್ಧೆಯಲ್ಲಿ ಕ್ವಾಲಿಫೈರ್ ಮಟ್ಟದ ಶ್ರೇಣಿಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಅಷ್ಟು ಹೊತ್ತಿಗೇ ಆಕೆ ಇನ್ನೂ ಉಚ್ಚ ಶ್ರೇಣಿಗೆ ಏರುವ ಸಾಮರ್ಥ್ಯ ಹೊಂದಿದ್ದರು. ಆಕೆ ತಮ್ಮನ್ನು ಟೀಕಿಸಿದವರನ್ನು ಬಗ್ಗುಬಡಿಯಲು ಮುಂದಾದರು. ಆಕೆ ಒಂದಲ್ಲ ಎರಡಲ್ಲ, ಸುಮಾರು 300 ಗಂಡು ಪ್ರತಿಸ್ಪರ್ಧಿಗಳನ್ನು ಆ ವಯಸ್ಸಿನಲ್ಲೇ ಸೋಲಿಸಿ ಸೈ ಎನಿಸಿದ್ದರು!
ಆಕೆ ನೆನಪಿಸಿಕೊಂಡು ಹೇಳುತ್ತಾರೆ, ಒಬ್ಬ ಹೆಣ್ಣುಮಗಳು ಈ ರೀತಿ ಸತತವಾಗಿ ಗಂಡು ಹುಡುಗರನ್ನು ಬಗ್ಗುಬಡಿಯುವುದನ್ನು ನೋಡಲೆಂದೇ ಆಯಾ ಆಟಗಳ ಕೊನೆಯ ಸುತ್ತುಗಳಲ್ಲಿ ಜನ ಮುಗಿಬಿದ್ದು ನೋಡಲು ಸೇರುತ್ತಿದ್ದರು. ಈಕೆಯ ಪ್ರತಿಸ್ಪರ್ಧಿಗಳು ಮ್ಯಾಚ್ ನ್ನು ಡ್ರಾನಲ್ಲಿ ಮುಗಿಸಲು ಯತ್ನಿಸಿದರೂ, ಆಕೆ ಮಾತ್ರ ಗೆಲ್ಲದೆ ಅಲ್ಲಿಂದ ಏಳುತ್ತಿರಲಿಲ್ಲ. ಪ್ರತಿ ಮ್ಯಾಚ್ ನ್ನೂ ಗೆಲ್ಲಲೇಬೇಕೆಂದು ಹಠ ಹೂಡುತ್ತಿದ್ದರು.
“ಇವುಗಳ ನಂತರ ನಾನೊಂದು ದುಃಸ್ಥಿತಿ ತಲುಪಿದ್ದೆ. ಒಮ್ಮೊಮ್ಮೆ ನನ್ನ ಪ್ರತಿಸ್ಪರ್ಧಿ ಎಲ್ಲಿ ನನ್ನನ್ನು `ಚಿತ್ತ್’ ಮಾಡಿಬಿಡುತ್ತಾರೋ ಎಂಬ ಪರಿಸ್ಥಿತಿ ತಲುಪಿದಾಗ, ನಾನು ದಿಢೀರ್ ಎಂದು ಎಚ್ಚೆತ್ತುಕೊಳ್ಳುತ್ತಿದ್ದೆ. ಅಂತೂ ಇಂತೂ ಮಾಡಿ ಗೆದ್ದೇ ತೀರುತ್ತಿದ್ದೆ! ಆ ಟೂರ್ನಮೆಂಟ್ ನಲ್ಲಿ ನಾನು 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅದಾದ ಮೇಲೆ ನಾನು ಮತ್ತೆ ಎಂದೂ ಟೀಕೆಗೆ ಒಳಗಾಗಲಿಲ್ಲ.”

ಸವಾಲುಗಳಿಗೆ ಎಂದೂ ಕೊರತೆ ಇರಲಿಲ್ಲ
ಇತರ ಕಷ್ಟಕರ ಸವಾಲು ಎಂದರೆ ಪ್ರಾಯೋಜಕರ ಕೊರತೆ. ಆರಂಭದಲ್ಲಿ ಬ್ಯಾಂಕ್ ಆಫ್ ಬರೋಡಾ, ಸುಮಾರು 6-7 ವರ್ಷ ಹಂಪೀಯ ಪ್ರಾಯೋಜಕತ್ವಕ್ಕೆ ಮುಂದಾಗಿತ್ತು. ಆದರೆ ಅದು ಮುಂದುವರಿಯದೇ ಅಲ್ಲಿಗೇ ನಿಂತಿತು. ಇದೇ ಸಂದರ್ಭದಲ್ಲಿ ಆಕೆ 2002ರಲ್ಲಿ ಗ್ರಾಂಡ್ ಮಾಸ್ಟರ್ ಎನಿಸಿದ್ದರು.
“ಆಗ ಬ್ರಾಂಡ್ ಅಂಬಾಸಿಡರ್ ನ್ನು ಆರಿಸಬೇಕಿತ್ತು. ಬೇಕೆಂದೇ ನನ್ನನ್ನು ಕೈಬಿಟ್ಟು ಒಬ್ಬ ಕ್ರಿಕೆಟರ್ ನ್ನು ಆರಿಸಿಕೊಂಡರು,” ಎನ್ನುತ್ತಾರೆ ಹಂಪೀ, “ಅದಾದ ಮೇಲೆ ಸ್ಪಾನ್ಸರ್ ಶಿಪ್ ಸಿಗುವುದು ದುರ್ಲಭವಾಯಿತು.”
ಆಗ ಅಶೋಕ್ ಸಹಾಯಕ್ಕಾಗಿ ಕಾರ್ಪೊರೇಟ್ ಆಫೀಸುಗಳನ್ನು ಎಡತಾಕಿದರು, ಬದಲಿಗೆ ಅವರ ದಿವ್ಯ ಮೌನವೇ ಉತ್ತರವಾಗಿತ್ತು. ವೃತ್ತ ಪತ್ರಿಕೆಗಳಲ್ಲಿ ಈ ಕುರಿತಾಗಿ ವಿನಂತಿಸಿಕೊಂಡರೂ ಏನೂ ಲಾಭವಾಗಲಿಲ್ಲ.
2006ರ ಹೊತ್ತಿಗೆ ಹಂಪೀ, `ಆಯಿಲ್‌ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್’ ವಿಭಾಗದಲ್ಲಿ ಒಬ್ಬ ಪರ್ಸನಲ್ ಅಡ್ಮಿನಿಸ್ಟ್ರೇಟರ್ ಆಗಿ ನೌಕರಿಗೆ ಸೇರಿದರು. ನಡುನಡುವೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಮತಿ ಸಹ ಸಿಕ್ಕಿತ್ತು. ಇದಕ್ಕಾಗಿ ಷರತ್ತು ಎಂದರೆ ಆಕೆ ಟಾಪ್ ಮ್ಯಾನೇಜ್ ಮೆಂಟ್ ಗೆ ಸೂಚಿಸಿ ಹೊರಡಬೇಕಿತ್ತು.
ಹೀಗೆಯೇ ಹಂಪೀಯ ಸತತ ಪರಿಶ್ರಮ ಮುಂದುವರಿದಿತ್ತು. 2007ರ ಅಕ್ಟೋಬರ್ ನಲ್ಲಿ ಈಕೆ ರೇಟಿಂಗ್ ಸಿಸ್ಟಂನಲ್ಲಿ 2,606 ಅಂಕಿಸಂಖ್ಯೆ ದಾಟಿದ್ದರು. ಈ ಅಂಕಿಸಂಖ್ಯೆ, ಚದುರಂಗದ ಪಟುವಿನ ಶಕ್ತಿ ಸಾಮರ್ಥ್ಯವನ್ನು ಅವರ ಎದುರಾಳಿಗೆ ಹೋಲಿಸಿ, ಆಯಾ ಪ್ರದರ್ಶನದ ಆಧಾರದಲ್ಲಿ ಅಳೆಯಲಾಗುತ್ತದೆ. ಈಕೆಗೆ ಮೊದಲು ಕೇವಲ ಒಬ್ಬ ಮಹಿಳೆ ಮಾತ್ರ 2600ರವರೆಗೆ ತಲುಪಿದ್ದರು. ಅದೇ ವರ್ಷ ಅಶೋಕ್ ಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತು. ಇದು ಉತ್ಕೃಷ್ಟ ಕೋಚ್ ಗಳಿಗೆ ಕೊಡಮಾಡಲಾಗುತ್ತದೆ. 2009ರಲ್ಲಿ ಹಂಪೀ ತನ್ನ ಕೆರಿಯರ್ ನ ಅತ್ಯುನ್ನತ ಈನೋ ರೇಟಿಂಗ್, ಅಂದ್ರೆ 2,623 ಗಳಿಸಿದ್ದರು.
2009ರಲ್ಲಿ ಹಂಪೀ ಮಹಿಳಾ ಗ್ರಾಂಡ್ ಪ್ರಿಕ್ಸ್ ಸ್ಪರ್ಧೆಯಲ್ಲೂ ವಿಜೇತರಾದರು. ಇದು ಅಂತಾರಾಷ್ಟ್ರಿಯ ಚದುರಂಗದ ಮಹಾಸಂಘದಿಂದ ಆಯೋಜಿತ ಟೂರ್ನಮೆಂಟ್ ಗಳ ಒಂದು ಶ್ರೇಣಿಯಾಗಿತ್ತು. ಕೊನೇರೂ ಹಂಪೀ ಭಾರತೀಯ ಮಹಿಳಾ ಚದುರಂಗಕ್ಕಾಗಿ, ಸಾನಿಯಾ ಮಿರ್ಜಾ ಟೆನಿಸ್ ಗೆ ಮಾಡಿದಂಥ ಕೆಲಸವನ್ನೇ ಮಾಡಿದರು. ಸೈನಾ ನೇಹ್ವಾಲ್ ಬ್ಯಾಡ್ಮಿಂಟನ್ ಗಾಗಿ ಹೀಗೆ ಮಾಡಿದ್ದರು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಒಂದು ವರದಿಯಲ್ಲಿ ಹಂಪೀ ಕುರಿತಾಗಿ ಆಕೆ ದಿನೇ ದಿನೇ ಇಂಥ ಅಂಕಿಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ, ಈ ಸಾಧನೆ ಪ್ರಶಂಸನೀಯ! ಎಂದು ಹೊಗಳಿ ಬರೆಯಲಾಗಿತ್ತು.
2024ರಲ್ಲಿ ಹಂಪೀ ಅನ್ವೇಶ್ ರನ್ನು ಮದುವೆಯಾದರು. ನಂತರ ಮಧುಚಂದ್ರಕ್ಕಾಗಿ ಹೊರಡದೆ, ಶಾರ್ಜಾದಲ್ಲಿ ನಡೆಯಲಿದ್ದ ಮಹಿಳಾ ಗ್ರಾಂಡ್ ಪ್ರಿಕ್ಸ್ ನಲ್ಲಿ ಪಾಲ್ಗೊಳ್ಳಲು ಹೊರಟರು.
ತಂದೆ ತರಹ ಹಂಪೀ ಟೆನಿಸ್ ನಲ್ಲಿ ಪಳಗದಿದ್ದರೂ, ಆಕೆಗೆ ಸಾನಿಯಾ ಮಿರ್ಜಾ/ಸೆರೆನಾ ವಿಲಿಯಂಸ್ ರೊಂದಿಗೆ ಒಂದು ಹೋಲಿಕೆ ಇತ್ತು. ಮೂವರೂ ತಾಯಂದಿರಾದ ನಂತರ ಗ್ರೇಟ್ ಕಂಬ್ಯಾಕ್ ಮಾಡಿದ್ದರು.
ಆಟೋಟ ಕುಟುಂಬದ ಜವಾಬ್ದಾರಿ
ಚದುರಂಗದಾಟ ತನ್ನ ಪಟುಗಳಿಂದ ಇತರ ಕ್ರೀಡೆಗಳಲ್ಲಿರುವಂತೆ ಹೆಚ್ಚಿನ ದೈಹಿಕ ಶ್ರಮದ ಬೇಡಿಕೆ ಮುಂದಿಡದಿದ್ದರೂ, ಹೆಚ್ಚಿನ ಮಾನಸಿಕ ಶ್ರಮ ಬೇಡುತ್ತದೆ. ಮನೆಯಲ್ಲೇ ಇದ್ದರೂ ಇದರ ಸತತ ಅಭ್ಯಾಸ ಮಾಡುತ್ತಲೇ ಇರಬೇಕು. ಇತರ ಆಟಗಳಂತೆಯೇ ಇದರಿಂದ ಬ್ರೇಕ್ ಪಡೆದಾಗ ಮಾತ್ರ, ಒಬ್ಬ ಆಟಗಾರನ ಪ್ರತಿಸ್ಪರ್ಧೆಯ ವೇಗದ ದರವನ್ನು ಮೊಟಕು ಗೊಳಿಸಿಬಿಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಬ್ರೇಕ್ ನಂತರ ಬೇಗ ಬೇಗ ವಾಪಸ್ಸು ಮರಳಲಾಗದು. ಹೆಣ್ಣುಮಕ್ಕಳಿಗೆ ಅದಿನ್ನೂ ಕಷ್ಟ. ಪ್ರೆಗ್ನೆನ್ಸಿಯ ತೊಂದರೆಗಳಿಂದಾಗಿ ಆಕೆ ಚದುರಂಗದಿಂದ ಸುಮಾರು ದಿನ ದೂರ ಇದ್ದರು. 5ನೇ ತಿಂಗಳ ನಂತರ ಸಂಪೂರ್ಣ ಬೆಡ್ ರೆಸ್ಟ್ ಕಡ್ಡಾಯ ಎಂದು ವೈದ್ಯರು ಖಾತ್ರಿಪಡಿಸಿದರು.
“ಆಗ ನಾನು ಚದುರಂಗದಾಟ ನೋಡಲಿಕ್ಕೂ ಹೆಚ್ಚಿನ ಉತ್ಸಾಹ ತೋರುತ್ತಿರಲಿಲ್ಲ. ನಾನು ನನ್ನ ಕುಟುಂಬದ ಜೊತೆ ರಿಲ್ಯಾಕ್ಸ್ ಆಗಿದ್ದೆ. ಆ ಕುರಿತಾಗಿ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ಆ ದಿನಗಳು ನನ್ನ ಸಂತಸದ ನೆನಪಾಗಿ ಉಳಿಯುತ್ತವೆ.”
ಹಂಪೀಗೇನೋ ಇದು ವಿರಾಮದ ಸಮಯ, ಆದರೆ ಆಟದಿಂದ ಬಹಳ ದೂರ ಅಲ್ಲ. ನಾನು ಆಟಕ್ಕೆ ಖಂಡಿತಾ ವಾಪಸ್ಸಾಗುವೆ ಎಂದು ಆಕೆಗೆ ಗೊತ್ತಿತ್ತು. ಆದರೆ ಯಾವಾಗ ಎಂದು ಗೊತ್ತಿರಲಿಲ್ಲ. 2017ರಲ್ಲಿ ಮಗಳು ಅಹಾನಾ ಹುಟ್ಟಿದ ನಂತರ, ಈಕೆಗೆ ಆಟದ ಆಹ್ವಾನ ಬರತೊಡಗಿತು. ಆದರೆ ಹಂಪೀ ಇನ್ನೂ ಅದಕ್ಕೆ ತಯಾರಿರಲಿಲ್ಲ. 2018ರ ಹೊತ್ತಿಗೆ ಮಗಳಿಗೆ 1 ವರ್ಷ ತುಂಬಿದ ನಂತರ, ಆಟಕ್ಕೆ ಮರಳಲು ಸಾಧಾನವಾಗಿ ಸಿದ್ಧರಾದರು.
“ಇವೆಲ್ಲ ಕುಟುಂಬದ ಪರಸ್ಪರ ಸಹಕಾರದ ಮೇಲೆ ನಿಂತಿದೆ. ನನ್ನ ತಾಯಿತಂದೆ ಸಹ ನಮ್ಮೂರಿನಲ್ಲೇ ಇದ್ದಿದ್ದರಿಂದ ನನಗೆ ಎಷ್ಟೋ ಕಷ್ಟ ಕಳೆಯಿತು. ನನ್ನ ಪತಿ ಸಹ ಈ ನಿಟ್ಟಿನಲ್ಲಿ ಬಹಳ ಸಹಕರಿಸಿದರು. ಇಂಥ ಸಹಯೋಗವಿಲ್ಲದೆ, ಯಾವ ಮಹಿಳಾ ಕ್ರೀಡಾಪಟು ಮಗುವನ್ನು ಬಿಟ್ಟು ನೆಮ್ಮದಿಯಾಗಿ ಆಡಲಿಕ್ಕೆ ಹಿಂದಿರುಗಲಾಗದು. ಒಬ್ಬ ತಾಯಿಗೆ ತನ್ನ ಮಗುವೇ ಎಲ್ಲಕಿಂತ ಹೆಚ್ಚಿನ ಪ್ರಾಥಮಿಕತೆ ಆಗಿರುತ್ತದೆ.”
ಹಂಪೀ ತಾಯಿ ಲತಾ ಯಾವ ಕ್ರೀಡೆಗಳಲ್ಲಿ ಪಾಲ್ಗೊಳ್ಳದಿದ್ದರೂ, ತಮ್ಮ ಮಗಳ ಜೀವನದಲ್ಲಿ ಈ ಆಟ ಎಷ್ಟು ಪ್ರಮುಖ ಎಂದು ಆಕೆಗೆ ಗೊತ್ತಿತ್ತು.
“ನನ್ನ ತಾಯಿ ಸದಾ ನನ್ನ ಕೆರಿಯರ್ ಕುರಿತಾಗಿ ಒಂದು ಕಣ್ಣಿಟ್ಟಿದ್ದರು. ಸದಾ ನನ್ನನ್ನು ಪ್ರೋತ್ಸಾಹಿಸುತ್ತಿರುತ್ತಾರೆ,” ಸ್ಪೋರ್ಟ್ಸ್ ಸ್ಟಾರ್ ಪತ್ರಿಕೆಯ ಸಂದರ್ಶನದಲ್ಲಿ ಹಂಪೀ ಹೇಳಿದ ಮಾತುಗಳಿವು.
“ನಾನು ನನ್ನ ಆಟದ ಕಡೆ ಸಂಪೂರ್ಣ ಗಮನ ಹರಿಸಿದ್ದೇನೆ ತಾನೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ಮದುವೆ ನಂತರ ನನಗೆ ಗೃಹಿಣಿಯ ಕರ್ತವ್ಯಗಳಾದ ಅಡುಗೆ, ಮನೆಯ ಜವಾಬ್ದಾರಿ ಕೆಲಸಗಳು ಬಹಳಷ್ಟಿದ್ದವು. ಆದರೆ ಇವೆಲ್ಲ ನನ್ನ ಪ್ರಾಕ್ಟೀಸ್ ಗೆ ಭಂಗ ತರದಂತೆ ಪ್ಲಾನಿಂಗ್ ಮಾಡಿಕೋ ಎಂದು ಹೇಳುತ್ತಲೇ ಇದ್ದರು.”
ಯಾವುದೇ ಟೂರ್ನಮೆಂಟ್ ಇರಲಿ, 23 ವಾರ ಕಾಲಾವಕಾಶ ಬೇಕು. ಹಂಪೀ ಹೀಗೆ ಹೊರಟಾಗೆಲ್ಲ, ಈಕೆಯ ತಾಯಿ ತಂದೆ ಮೊಮ್ಮಗಳ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಆರಂಭದಲ್ಲಿ ಮಗುವನ್ನು ಅಷ್ಟು ದಿನ ಬಿಟ್ಟಿರುವುದು ಆಕೆಗೆ ಕಷ್ಟವಾಗುತ್ತಿತ್ತು. ಈಕೆ ಮನೆಗೆ ವಾಪಸ್ಸು ಬಂದಾಗ, ಮಗು ಇವರ ಬಳಿಯೇ ಅಂಟಿಕೊಂಡು ಉಳಿದುಬಿಡುತ್ತಿತ್ತು. ಕ್ರಮೇಣ ದಿನ ಕಳೆದಂತೆ, ಈ ಕ್ರಮ, ತಾಯಿಮಗು ಇಬ್ಬರಿಗೂ ಅಭ್ಯಾಸವಾಯಿತು. ವಿಡಿಯೋ ಫೋನ್ ಕಾಲ್ ಮೂಲಕ ಆಗಾಗ ಮಗುವಿನ ಯೋಗಕ್ಷೇಮದ ಬಗ್ಗೆ ತಿಳಿದುಕೊಳ್ಳುತ್ತಿದ್ದರು.

ಮಹತ್ವಪೂರ್ಣ ಘಟ್ಟ
ಹಂಪೀ ನಂತರ ವಾಪಸ್ಸು ಮರಳಲು 2018ರ ಚೆಸ್ ಒಲಿಂಪಿಯಾಡ್ ನ್ನು ಆರಿಸಿಕೊಂಡರು. ಇದು ಅಂತಾರಾಷ್ಟ್ರೀಯ ಚದುರಂಗದ ಮಹಾಸಂಘದಿಂದ, ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸಲ್ಪಡುವ ಒಂದು ಟೀಂ ಸ್ಪರ್ಧೆ. ಇದುವೇ ಸರಿಯಾದ ನಿರ್ಧಾರ ಎನಿಸಲು ಕಾರಣ, ಆಕೆ ಈ ಸಲ ಭಾರತವನ್ನು ಪ್ರತಿನಿಧಿಸಲು ಹೊರಟಿದ್ದರು. ಈ ಸ್ಪರ್ಧೆಗೆ ಒಂದು ತಿಂಗಳು ಮೊದಲೇ ಆಕೆ ಸತತ ಅಭ್ಯಾಸ ಶುರು ಮಾಡಿದ್ದರು, ಆಗ ಮಾತ್ರ ಆಟದಲ್ಲಿ ತಮ್ಮ ಗ್ರಿಪ್ ಚುರುಕಾಗಲಿದೆ ಎಂದು ಗ್ರಹಿಸಿದರು. ಆದರೆ ಇವರ ಟೀಂ ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಕೊನೆಗೆ ಭಾರತ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಅದೇ ವರ್ಷ ನವೆಂಬರ್ ನಲ್ಲಿ ನಡೆದ ಮತ್ತೊಂದು ಟೂರ್ನಮೆಂಟ್ ನಲ್ಲಿ ಹಂಪೀ ಎರಡನೇ ಸುತ್ತಿಗೇ ಹೊರ ಹೋಗಬೇಕಾಯಿತು. ಅದರ ಪರಿಣಾಮ ಪ್ರಭಾಶಾಲಿ ಆಗಿರಲಿಲ್ಲ. ಆದರೆ 2019ರಿಂದ ಹಂಪೀ ಮತ್ತೆ ತಮ್ಮ ಹಿಂದಿನ ಹೊಳಪು ಪಡೆದರು. ಸೆಪ್ಟೆಂಬರ್ ನಲ್ಲಿ ಆಕೆ ರಷ್ಯಾದಲ್ಲಿ ಆಯೋಜಿಸಲಾಗಿದ್ದ `ವುಮನ್ಸ್ ಗ್ರಾಂಡ್ ಪ್ರಿಕ್ಸ್’ನಲ್ಲಿ ಗೆಲುವು ಪಡೆದರು. ಇದಾದ ಕೆಲವು ತಿಂಗಳ ನಂತರ ಮೊನಾಕ್ಕೋದಲ್ಲಿ ನಡೆದ ಮತ್ತೊಂದು ಗ್ರಾಂಡ್ ಪ್ರಿಕ್ಸ್ ಇವೆಂಟ್ ನಲ್ಲಿ ಆಕೆ ರಜತ ಪದಕ ಗಳಿಸಿದರು. ಈ ಸ್ಪರ್ಧೆಗಳಲ್ಲಿ ಗೆದ್ದ ಪಟುಗಳಿಗೆ, ಉಚ್ಚ ಮಟ್ಟದ ಸ್ಪರ್ಧೆಗಳಿಗೆ ಕ್ವಾಲಿಫೈ ಆಗುವ ಅವಕಾಶಗಳಿವೆ.
ಆ ವರ್ಷದ ಕೊನೆಯಲ್ಲಿ ಹಂಪೀ ತಮ್ಮ ಕೆರಿಯರ್ ನ ಒಂದು ಮಹತ್ವಪೂರ್ಣ ಘಟ್ಟ ತಲುಪಿದರು. ಆಕೆ ಮೊದಲ ಸಲ `ವುಮನ್ಸ್ ವರ್ಲ್ಡ್ ರಾಪಿಡ್ ಚೆಸ್ ಚ್ಯಾಂಪಿಯನ್ ಶಿಪ್’ನ ಬಿರುದು ಗಳಿಸಿದರು! ಹೀಗೆ ಅವರ ಗೆಲುವಿನ ಸರಮಾಲೆ ಮುಂದುವರಿಯಿತು. 2020ರ ಫೆಬ್ರವರಿಯಲ್ಲಿ ಹಂಪೀ ಕ್ಯಾರೆನ್ಸ್ ಕಪ್ ನ ಬಿರುದು ಪಡೆದರು. ಇದು ವಿಶ್ವದ ಅತಿ ಪ್ರತಿಷ್ಠಿತ ಮಹಿಳಾ ಚದುರಂಗ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಮಾತೃತ್ವದಿಂದ ಹಂಪೀ ಒಂದು ಹೊಸ ಸ್ಥಾನಕ್ಕೆ ಏರಿದ್ದು ಮಾತ್ರವಲ್ಲದೆ, ಪರಿಸ್ಥಿತಿಗಳ ದೃಷ್ಟಿಯಿಂದ ಅವರು ಆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಸಶಕ್ತತೆ ಸಹ ಗಳಿಸಿದರು.
“ಹಿಂದೆಲ್ಲ ನಾನು ಯಾವುದೇ ಬೇರೆ ಬೇರೆ ಟೈಂ ಝೋನ್ ನಲ್ಲಿ ಹೋಗುತ್ತಿದ್ದಾಗ, ಕಂದನನ್ನು ಬಿಟ್ಟಿದ್ದೇನಲ್ಲ ಎಂದು ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಅದರ ನೇರ ಪರಿಣಾಮ ನನ್ನ ತತ್ ಕ್ಷಣದ ಆಟದ ಮೇಲಾಗುತ್ತಿತ್ತು. ಆದರೆ ಕಾಲಕ್ರಮೇಣ ಜವಾಬ್ದಾರಿಗಳು ನನಗೆ ಎಲ್ಲವನ್ನೂ ದೃಢತೆಯಿಂದ ಎದುರಿಸುವುದನ್ನು ಕಲಿಸಿದ.”
ಹಂಪೀಯ ವೈಯಕ್ತಿಕ ಜೀವನದ ತರಹವೇ ಆಕೆಯ ಪ್ರೊಫೆಶನಲ್ ಕ್ರೀಡಾ ವೃತ್ತಿಯೂ ಹಂತ ಹಂತವಾಗಿ ಮೇಲೇರುತ್ತಾ ಹೋಯಿತು. ಕಳೆದ 5 ವರ್ಷಗಳಿಂದ ಗಮನಿಸಿದರೆ, ವಿಶ್ವದೆಲ್ಲೆಡೆ ಚದುರಂಗದಾಟದ ಘನತೆ ದಿನೇದಿನೇ ಇನ್ನಷ್ಟು ಮತ್ತಷ್ಟು ಹೆಚ್ಚುತ್ತಿದೆ!
ರಷ್ಯಾಚೀನಾದ ಅರಿಭಯಂಕರ ಪೈಪೋಟಿ
ಚದುರಂಗದಾಟದ ಈ ಏರಿಳಿತದ ಒಂದು ನಂಟು ಮಹಾಮಾರಿ ಕೋವಿಡ್ ಜೊತೆಗೂ ಇದೆ. ಜನ ತಂತಮ್ಮ ಮನೆಗಳಲ್ಲಿ ಲಾಕ್ ಡೌನ್ ನಿಂದ ಖೈದಿಗಳಾದಾಗ, ಹೊರ ಪ್ರಪಂಚದ ಸಂಪರ್ಕ ತಪ್ಪಿದಾಗ, ಜನ ಸಂಪೂರ್ಣವಾಗಿ ಆನ್ ಲೈನ್ ಚೆಸ್ ಆಡುವುದರಲ್ಲಿ ಆಸಕ್ತರಾದರು, ಅದರಲ್ಲಿ ತೃಪ್ತಿ ಕಂಡುಕೊಂಡರು. ಇದು ಶುದ್ಧ ಇನ್ ಡೋರ್ ಗೇಮ್ ಆದ್ದರಿಂದ ಈ ಜನಪ್ರಿಯತೆಗೆ ಮತ್ತಷ್ಟು ಇಂಬು ದೊರಕಿತು. 2020ರ ಅಕ್ಟೋಬರ್ ನಲ್ಲಿ ನೆಟ್ ಫ್ಲಿಕ್ಸ್ ನಲ್ಲಿ `ದಿ ಕ್ವೀನ್ಸ್ ಗ್ಯಾಂಬಿಟ್’ ಎಂಬ ಸೀರೀಸ್ ರಿಲೀಸ್ ಆಯ್ತು. ಇದು ಒಬ್ಬ ಯುವ ಪ್ರತಿಭಾಶಾಲಿ ಮಹಿಳಾ ಚೆಸ್ ಪ್ಲೇಯರ್ ಕುರಿತು, ಅಭೂತಪೂರ್ವ ಏರಿಳಿತಗಳ ಕಥೆಯಾಗಿತ್ತು. ವರದಿಗಳ ಪ್ರಕಾರ, ಈ ಸೀರೀಸ್ ಗೆ ಒಂದೇ ತಿಂಗಳಲ್ಲಿ 62 ಮಿಲಿಯನ್ ಗೂ ಹೆಚ್ಚಿನ ವೀಕ್ಷಕರು ದೊರೆತರು. ಆಗಿನಿಂದ ಏಪ್ರಿಲ್ ರವರೆಗೆ ವಿಶ್ವದ ಅತಿ ದೊಡ್ಡ ಆನ್ ಲೈನ್ ಚದುರಂಗ ಸಮುದಾಯದ ಚೆಸ್.ಕಾಮ್ ನ ಮಾಸಿಕ ಸದಸ್ಯರ ಸಂಖ್ಯೆ 8 ಮಿಲಿಯನ್ ಗೂ ಮೀರಿ, 17 ಮಿಲಿಯನ್ ಆಚೆಗೆ ಮುಂದುವರಿಯಿತು.
ಭಾರತದಲ್ಲಿ ಒಂದು ತಂಡ 3ನೇ ಪ್ರೇರಕ ಕಾರಕವಾಗಿಯೂ ಕೆಲಸ ಮಾಡತೊಡಗಿತು. ನಮ್ಮ ದೇಶ ಈ ಕ್ರೀಡೆಯಲ್ಲಿ ಮೊದಲಿನಿಂದಲೂ ಚುರುಕು, ಅದೀಗ ಮತ್ತಷ್ಟು ಉಜ್ವಲವಾಗತೊಡಗಿತು. ಈ ನಿಟ್ಟಿನಲ್ಲಿ ರಷ್ಯಾ-ಚೀನಾ ಮೊದಲಿನಿಂದಲೂ ನಮ್ಮವರ ಮೇಲೆ ಅರಿಭಯಂಕರ ಪೈಪೋಟಿ ನಡೆಸುತ್ತಿದೆ. 2009ರಲ್ಲಿ ಭಾರತದಲ್ಲಿ ಒಟ್ಟು 20 ಗ್ರಾಂಡ್ ಮಾಸ್ಟರ್ಸ್ ಇದ್ದರು. ಈ ವರ್ಷದ ನವೆಂಬರ್ ವರೆಗೂ ಈ ಸಂಖ್ಯೆ 91ಕ್ಕೇರಿದೆ! ಕಳೆದ ವರ್ಷ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳೆರಡೂ ಚದುರಂಗದ ಒಲಂಪಿಯಾಡ್ ನಲ್ಲಿ ಐತಿಹಾಸಿಕ ರೂಪದಲ್ಲಿ ಮೊದಲ ಬಾರಿಗೆ ಸ್ವರ್ಣಪದಕ ಗೆದ್ದಿದೆ. ಅಕ್ಟೋಬರ್ 2025ರವರೆಗೂ ವಿಶ್ವದೆಲ್ಲೆಡೆಯ ಟಾಪ್ 100 ಚೆಸ್ ಪಟುಗಳಲ್ಲಿ 12 ಮಂದಿ ಭಾರತೀಯರೇ ಇದ್ದರು. ಅದೇ ಮಹಿಳಾ ತಂಡದಲ್ಲಿ 100ಕ್ಕೆ 7 ಮಂದಿ ಇದ್ದಾರೆ.
ಇದರರ್ಥ ಎಂದರೆ ಇಂದು ದಿನೇದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ಚದುರಂಗದ ಪಟುಗಳು ಅಸಾಧಾರಣ ಪೈಪೋಟಿ ಎದುರಿಸಲೇಬೇಕಿದೆ.
“ನನ್ನ ಕಾಲದಿಂದ ಇದನ್ನು ಹೋಲಿಸಿದಾಗ, ಈಗ 14-15ನ್ನೇ ಯಾವುದೇ ಆಟಗಾರನ ಶಿಖರಪ್ರಾಯ ಎಂದೇ ಪರಿಗಣಿಸಲಾಗುತ್ತಿದೆ. ನೀವು 12-13ರ ಪ್ರಾಯದಲ್ಲೇ ಗ್ರಾಂಡ್ ಮಾಸ್ಟರ್ ಆಗದಿದ್ದರೆ, ಮುಂದೆ ನೀವು ಇದನ್ನು ಪ್ರೊಫೆಶನಲ್ ಕೆರಿಯರ್ ಆಗಿ ಮುಂದುವರಿಸಲಾಗದು,” ಎನ್ನುತ್ತಾರೆ ಹಂಪೀ.
ಪರಿಣಾಮವಾಗಿ ಕಡಿಮೆ ವಯಸ್ಸಿನ ಆಟಗಾರರು, ಹೆಚ್ಚು ಚುರುಕಾಗಿ, ಬೆಟರ್ ತಯಾರಿ ಜೊತೆ ಬರುತ್ತಿದ್ದಾರೆ. ಇವರುಗಳಿಗೆ ಅಭ್ಯಾಸಕ್ಕಾಗಿ ಮೊದಲಿಗಿಂತ ಹೆಚ್ಚಿನ ಅವಕಾಶಗಳು ಲಭ್ಯ. ಅದು ಟೂರ್ನಮೆಂಟ್ ಯಾ ಆನ್ ಲೈನ್‌ಸ್ಪರ್ಧೆ ಆಗಿರಬಹುದು.
“ನಿಶ್ಚಿತ ರೂಪದಲ್ಲಿ ಯುವ ಆಟಗಾರರ ಬಳಿ ಹೆಚ್ಚಿನ ಜ್ಞಾನ ತಯಾರಿ ಇರುತ್ತದೆ. ಏಕೆಂದರೆ ಈ ಆಟದಲ್ಲಿ ಅವರು ಸಂಪೂರ್ಣ ಮುಳುಗಿ ಹೋಗಿರುತ್ತಾರೆ. ಇವರುಗಳು ನನಗಿಂತಲೂ 10 ಪಟ್ಟು ಹೆಚ್ಚಾಗಿಯೇ ಪ್ರಾಕ್ಟೀಸ್ ಮಾಡಿರುತ್ತಾರೆ. ಹೀಗಾಗಿಯೇ ಇವರುಗಳ ಜೊತೆ ಪೈಪೋಟಿ ನಡೆಸುವುದು ಸುಲಭ ಸಾಧ್ಯವಲ್ಲ, ಮಹಾ ಚಾಲೆಂಜಿಂಗ್!”
ತಮ್ಮ ಅನುಭವವೇ ತಮ್ಮ ಅತಿ ದೊಡ್ಡ ಧೀಶಕ್ತಿ ಎಂದು ಹಂಪೀ ನಂಬುತ್ತಾರೆ. ಅನೇಕ ವರ್ಷಗಳವರೆಗೆ ತಿಳಿವಳಿಕೆಯ ಒರೆಯಿಂದ ಪಡೆದ ಹೊಳಪು, ಆಟದ ಮೇಲಿನ ಆಳವಾದ ಗ್ರಿಪ್ ಗೆಲುವಿಗೆ ಸೋಪಾನ ಆಗುತ್ತದೆ.
ಹಂಪೀ ಈಗ ಹೇಳುವುದೆಂದರೆ ಆಕೆ ಈಗ ಬಲು ಚೂಸೀ ಆಗಿದ್ದಾರೆ. ಹಿಂದಿನ ಆಟಗಳಿಗೆ ಹೋಲಿಸಿದಾಗ, ಕಡಿಮೆ ಟೂರ್ನಮೆಂಟ್ಸ್ ಆಡುತ್ತಾರಂತೆ. ತಾನು ವಿಶ್ವ ಚ್ಯಾಂಪಿಯನ್ ಶಿಪ್ ಗೆ ಕ್ವಾಲಿಫೈ ಆಗಲು ನೆರವಾಗುವಂಥ ಆಟಗಳಿಗೆ ಮಾತ್ರ ಪ್ರಾಥಮಿಕತೆ ಕೊಡುತ್ತೇನೆ ಅಂತಾರೆ. ತಡರಾತ್ರಿಯವರೆಗೂ ನಡೆಯುವ ಆನ್ ಲೈನ್ ಟೂರ್ನಮೆಂಟ್ಸ್ ನ್ನೂ ಅವರು ಇಷ್ಟಪಡುವುದಿಲ್ಲ.
ಅಪಾಯ ಏನೂ ಕಡಿಮೆಯಲ್ಲ
ಹಂಪೀ 2024ರಲ್ಲಿ ಸುಮಾರು 8 ಟೂರ್ನಮೆಂಟ್ ಆಡಿದ್ದರು. ಈ ವರ್ಷ ಇಲ್ಲಿಯವರೆಗೂ ಆಕೆ 5 ಟೂರ್ನಮೆಂಟ್ ಮಾತ್ರ ಆಡಿದ್ದಾರೆ. ಅದೇ ಹೊಸ ಆಟಗಾರರು ಒಂದೇ ಅವಧಿಯಲ್ಲಿ ಡಜನ್ ಗಟ್ಟಲೇ ಟೂರ್ನಮೆಂಟ್ ಆಡುತ್ತಾರೆ. ಈಗ ಆಕೆ ಓಪನ್ ಸರ್ಕೀಟ್ ನಿಂದಲೂ ದೂರವಿದ್ದಾರೆ. ಇದರಲ್ಲಿ ಗಂಡಸರು ಹೆಂಗಸರಿಬ್ಬರೂ ಭಾಗವಹಿಸುತ್ತಾರೆ.
ಸದ್ಯಕ್ಕೆ ಹಂಪೀ ಪುರುಷರ ಮಹಿಳೆಯರ ಆಟವಾಡುವ ರೀತಿಯಲ್ಲಿ ಕೆಲವು ವ್ಯತ್ಯಾಸಗಳನ್ನು ಅಗತ್ಯವಾಗಿ ಗುರುತಿಸಿದ್ದಾರೆ. ಆಕೆ ಈ ವ್ಯತ್ಯಾಸಗಳನ್ನೇ ತಮ್ಮ ಶಕ್ತಿಯಾಗಿ ಗುರುತಿಸಿಕೊಂಡರು.
“ಮಹಿಳೆಯರು ಈ ಆಟವನ್ನು ಬಹಳ ಚೂಸಿಯಾಗಿ ಆರಿಸಿ ಆಡುತ್ತಾರೆ, ಅದರಲ್ಲೂ ವಿಶೇಷವಾಗಿ ಓಪನಿಂಗ್ಸ್ ನಲ್ಲಿ. ಆದರೆ ಅವರೇನೇ ಆಡಿದರೂ, ಅದರಲ್ಲಿ ಅವರು ಆಳಕ್ಕಿಳಿದೇ ಆಡುತ್ತಾರೆ, ಚೆನ್ನಾಗಿ ತಯಾರಿ ಮಾಡಿಕೊಂಡು ಬಂದಿರುತ್ತಾರೆ. ಅದೇ ಗಂಡಸರಾದರೆ ಓಪನಿಂಗ್ ರೆಪರ್ಟಾಯರ್ ಇನ್ನೂ ಬಲು ವ್ಯಾಪಕ ಆಗಿರುತ್ತದೆ. ಆದರೆ ಅವರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಾರೆ.”
ಇಂದು ಮಹಿಳೆಯರ ಚದುರಂಗ ಸಹ ಹಿಂದಿಗಿಂತ ಅತಿ ಹೆಚ್ಚಿನ ಪೈಪೋಟಿ ಹೊಂದುತ್ತಿದೆ. ಇದರ ವೀಕ್ಷಕರು ಸಹ ಮೊದಲಿಗಿಂತ ಹೆಚ್ಚಾಗಿದ್ದಾರೆ. ಇತಿಹಾಸ ಗಮನಿಸಿದಾಗ, 5 ಮಹಿಳಾ ಮ್ಯಾಚುಗಳಲ್ಲಿ 4ನ್ನು ಕಳೆದ 2 ವರ್ಷಗಳಲ್ಲೇ ಆಡಲಾಗುತ್ತಿದೆ. ಆದರೆ ಈಗಲೂ ಸಹ ಎಷ್ಟೋ ಟೂರ್ನಮೆಂಟ್ ಗಳಲ್ಲಿ ಗಂಡಸು ಹೆಂಗಸರಿಗೆ ಪುರಸ್ಕಾರದ ಸಂಭಾವನೆ ಏಕರೂಪವಾಗಿಲ್ಲ. ಉದಾ : ಇಂಟರ್ ನ್ಯಾಷನಲ್ ಚೆಸ್ ಫೆಡರೇಶನ್ ಜಾರ್ಜಿಯಾದಲ್ಲಿ ನಡೆದ ಮಹಿಳಾ ವಿಶ್ವಕಪ್ ನ ವಿಜೇತರಿಗೆ 50 ಸಾವಿರ ಡಾಲರ್ ಎಂದು ಘೋಷಿಸಿತ್ತು. ಆದರೆ ಗಂಡಸರು ಹೆಂಗಸರು ಇಬ್ಬರೂ ಆಡುವಂಥ ಓಪನಿಂಗ್ ಕೆಟಗರಿಯಲ್ಲಿ ಆ ವಿಜೇತರಿಗೆ ಮಾತ್ರ 1 ಲಕ್ಷ 20 ಸಾವಿರ ಡಾಲರ್ ನಷ್ಟೇ ಪುರಸ್ಕಾರ ಎಂದು ಬೇಕೆಂದೇ ಬದಲಾಯಿಸಲಾಗಿತ್ತು.
“ಹಿಂದಿನ ಹೋಲಿಕೆಗಳನ್ನು ಪಕ್ಕಕ್ಕಿರಿಸಿದರೂ ಇದೀಗ ಪರಿಸ್ಥಿತಿ ತುಸು ಸುಧಾರಿಸಿದೆ. ನಮ್ಮ ಬಳಿ ಆಮಂತ್ರಿತ ಟೂರ್ನಮೆಂಟ್ ಇರುತ್ತಿರಲಿಲ್ಲ, ಬಹುಮಾನದ ಮೊತ್ತ ದೊಡ್ಡದೇನಲ್ಲ. 56 ಸಾವಿರ ಯೂರೋಗಳನ್ನೇ ಉತ್ತಮ ಎಂದು ಭಾವಿಸಲಾಗುತ್ತಿತ್ತು. ಇಂದು ಆಮಂತ್ರಿತ ಮಹಿಳಾ ಟೂರ್ನಮೆಂಟ್ ನಲ್ಲಿ 30-40 ಸಾವಿರ ಯೂರೋ ಮಾಮೂಲಿ ಎನಿಸುತ್ತದೆ. ಈ ದೃಷ್ಟಿಯಿಂದ ಸುಧಾರಣೆ ಆಗಿದೆ. ಆದರೆ ಗಂಡಸರಿಗೆ ಹೋಲಿಸಿದಾಗ, ಈ ಮೊತ್ತ ಬಲು ಕಡಿಮೆ ಎಂದೇ ಹೇಳಬೇಕು.”
ಕೆಟ್ಟ ಕಾಲ ಅಪರೂಪವೇನಲ್ಲ
ಕಳೆದ ವರ್ಷ ಹಂಪೀ ಪಾಲಿಗೆ ಕಾಲ ಬಲು ಕೆಟ್ಟದಾಗಿತ್ತು. ನಾರ್ವೆಯ ಒಂದು ಟೂರ್ನಮೆಂಟ್ ನಲ್ಲಿ ಆಕೆ ಅಂತಿಮದಿಂದ 2ನೇ ಸ್ಥಾನದಲ್ಲಿ ತಮ್ಮ ಪ್ರಯಾಣ ನಿಲ್ಲಿಸಬೇಕಾಯ್ತು. ಅದಾದ ನಂತರದ ಟೂರ್ನಮೆಂಟ್ ನಲ್ಲೂ ಸೋತಿದ್ದರು. ಅಂದರೆ ಇವರ ಆಟದ ಅಂತ್ಯ ಸಮೀಪಿಸಿತು ಎಂದು ಅರ್ಥವೇ? ಇದರಿಂದ ಬೇಸರಗೊಂಡು ಆಕೆ ಮನೆಯವರ ಬಳಿ, ತಾನು ಈ ಆಟ ನಿಲ್ಲಿಸಿಬಿಡುವುದಾಗಿಯೂ ಹೇಳಿಬಿಟ್ಟರು. ಆದರೆ ಈ ನಿರ್ಧಾರ ಅವರು ಇಷ್ಟಪಟ್ಟು ತಳೆದದ್ದಲ್ಲ.
“ಯಾವುದೋ ಒಂದು ಘಳಿಗೆಯಲ್ಲಿ ಪ್ರತಿ ಆಟಗಾರನೂ ಕೆಳಗೆ ಇಳಿಯಲೇಬೇಕಾಗುತ್ತದೆ. ಆಟದಿಂದ ದೂರವಾಗುವುದು ಅಂದ್ರೆ… ಜೀವನದಿಂದ ವಿಮುಖರಾದಷ್ಟೇ ನೋವಾಗುತ್ತದೆ. ನಾನು ಈ ಕುರಿತು, ನನ್ನೆಲ್ಲ ಸಾಮರ್ಥ್ಯವನ್ನೂ ಇನ್ನೂ ಎಷ್ಟು ಚೆನ್ನಾಗಿ ಪ್ರದರ್ಶಿಸಬಹುದಿತ್ತೋ ಎಂದೇ ಯೋಚಿಸುತ್ತೇನೆ. ಈ ಸ್ಥಿತಿಯಿಂದ ಹೇಗೆ ಹೊರಬರುವುದು ಎಂದು ಪರಿತಪಿಸುತ್ತೇನೆ.”
2024ರ ಡಿಸೆಂಬರ್ ನಲ್ಲಿ ಹಂಪೀ ನ್ಯೂಯಾರ್ಕ್ ನಲ್ಲಿ ಮಹಿಳಾ ವಿಶ್ವ ರಾಪಿಡ್ ಚೆಸ್ ನ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದಾಗ, ಅವರು ಈ ಆಟ ಗೆದ್ದೇ ಗೆಲ್ಲುವ ಅಭ್ಯರ್ಥಿ ಎಂದೇನೂ ಗುರುತಿಸಲ್ಪಡುತ್ತಿರಲಿಲ್ಲ. ಆದರೆ 2019ರಲ್ಲಿ ಆಕೆ ಈ ಸ್ಪರ್ಧೆಯ ವಿಜೇತೆ ಎನಿಸಿದ್ದರು. ದುರಾದೃಷ್ಟ ಎಂಬಂತೆ ಅವರು ಈ ಸಲದ ಮೊದಲ ಮ್ಯಾಚ್ ಸೋತರು. ನಂತರ ಎಲ್ಲಾ ಬದಲಾಯಿತು. ಮುಂದಿನ 3 ಮ್ಯಾಚ್ ಡ್ರಾ ಮಾಡಿಕೊಂಡು, 7 ಮ್ಯಾಚ್ ಗಳಲ್ಲಿ ಗೆದ್ದರು.
ಕೊನೆಯ ಸುತ್ತಿಗೆ ಮೊದಲೇ ಹಂಪೀ ಹಾಗೂ ಇತರ 6 ಮಂದಿ ಫೈನಲಿಸ್ಟ್ ಗಳ ಅಂಕ ಸಮಾನವಾಗಿತ್ತು. ಅಂತಿಮ ಸ್ಪರ್ಧೆಯಲ್ಲಿ ಹಂಪೀ ಇಂಡೋನೇಷ್ಯಾದ ಆಟಗಾರ್ತಿ ಐರೀನ್ ಸುಕಂದರ್ ರನ್ನು ಸೋಲಿಸಿ, ಇತರ ಎಲ್ಲರಿಗಿಂತಲೂ ಹೆಚ್ಚಿನ ಅಂಕ ಗಳಿಸಿದರು! ಈ ಗೆಲುವು ಅವರ ನಿರ್ಧಾರವನ್ನೇ ಬದಲಿಸಿಬಿಟ್ಟಿತು.
“ಇದರಿಂದ ನಾನು ಆಟ ಬಿಟ್ಟು ಈಗಲೇ ಇಳಿಯಬಾರದು ಎಂಬ ಜ್ಞಾನೋದಯವಾಯಿತು. ನಾನಂತೂ ಮುಂದಿನ ಆಟಗಳಲ್ಲಿ ಗೆದ್ದೇ ಗೆಲ್ಲುವೆ ಎಂಬ ಛಲ ಮೂಡಿತು!” ಎನ್ನುತ್ತಾರೆ.
ತಮ್ಮ ವಾಪಸಾತಿಯ 7 ವರ್ಷಗಳ ನಂತರ ಹಂಪೀ ಮತ್ತಷ್ಟು ವಿಚಾರಶೀಲರಾದರು. ಆದರೆ ಗೆಲ್ಲುವ ಜಿಜ್ಞಾಸೆ, ಹಸಿವು ಇನ್ನೂ ಹೆಚ್ಚುತ್ತಲೇ ಇದೆ. ಸೋಲಿನ ನೋವು ಬಹಳ ಕಾಲ ಕಾಡುತ್ತದೆ. ಚದುರಂಗದ ಪಾನ್ಸ್ ಜೋಡಿಸಿ ಎತ್ತಿಟ್ಟರೂ ಅಲ್ಲಿಂದ ಏಳುವ ಮನಸ್ಸಾಗದು.
“ನಾನು ಮುಂದಿನ ಆಟದಲ್ಲಿ ಮತ್ತೆ ಗೆಲ್ಲುವವರೆಗೂ ಇದನ್ನು ನನ್ನನ್ನು ಕಾಡುತ್ತಲೇ ಇರುತ್ತದೆ. ನಾನು ಆಡಿ ಸೋತ ಕೆಲವು ಮ್ಯಾಚುಗಳು ನನ್ನನ್ನು ಈಗಲೂ ಕಾಡುತ್ತಲೇ ಇರುತ್ತವೆ. ಅಂದ್ರೆ… ಸುಮಾರು 2011ರಲ್ಲಿ ಆಡಿದಂಥ ಮ್ಯಾಚ್ ಸಹ.
“ಖಂಡಿತಾ ಪ್ರತಿ ಮ್ಯಾಚ್ ನ್ನು ಗೆಲ್ಲುವುದೂ ಒಂದು ಚಾಲೆಂಜೇ! ಹೀಗಾಗದಂತೆ ಹೇಗೆ ಎಚ್ಚರಿಕೆ ವಹಿಸುವುದು ಎಂದು ಈಗಲೂ ನಾನು ಕಲಿಯುತ್ತಲೇ ಇದ್ದೇನೆ. ಆದರೆ ಇದು ಆಟದ ಪ್ರದೇಶದಲ್ಲಿ ಮಾತ್ರ. ಮನೆಗೆ ಬಂದು ಮಗಳ ಮುಖ ನೋಡಿದಾಗ, ಮತ್ತೆ ನಾನು ತಾಯಿಯಾಗಿ ಅದನ್ನೆಲ್ಲ ತಾತ್ಕಾಲಿಕವಾಗಿ ಮರೆಯುತ್ತೇನೆ. ನಾನು ಮನೆಯಲ್ಲಿರುವ ಪ್ರತಿ ಘಳಿಗೆಯನ್ನೂ ಮನೆಯವರಿಗಾಗಿಯೇ ಮೀಸಲಿಡುತ್ತೇನೆ. ಅದೇ ಆಟದ ಕಣಕ್ಕಿಳಿದಾಗ, ನನ್ನ ವೈಯಕ್ತಿಕ ಬದುಕನ್ನು ಸಂಪೂರ್ಣ ಬದಿಗಿಡುತ್ತೇನೆ.”
ಪುರಸತ್ತಿನ ಸಮಯದಲ್ಲಿ ಮಾಡುವುದೇನು?
ಮನೆಯಲ್ಲಿರುವಾಗ ಹಂಪೀ ಕೆಲಸಗಳು ಭಲೇ ಗಮ್ಮತ್ತಾಗಿರುತ್ತವೆ. ಮುಂಜಾನೆಯ ದಿನಚರಿಯಲ್ಲಿ 1 ಗಂಟೆ ಜಾಗಿಂಗ್, ಯೋಗಾಭ್ಯಾಸಕ್ಕೆ ಮೀಸಲು. ನಂತರ ಬೆಳಗಿನ ಹೊತ್ತು ಮಧ್ಯಾಹ್ನ ಎಂದು 5-6 ಗಂಟೆಗಳ ಚದುರಂಗದ ಅಭ್ಯಾಸಕ್ಕೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಹತ್ತಿರದಲ್ಲೇ ಸ್ಪರ್ಧೆ ಇದ್ದರೆ, ಆ ಅಭ್ಯಾಸದ ಅವಧಿ ಇನ್ನೂ ಹೆಚ್ಚುತ್ತದೆ.
“ಆದರೆ ಟೂರ್ನಮೆಂಟ್ ಏನೂ ಇಲ್ಲದಿದ್ದಾಗ, ಅಭ್ಯಾಸ ಇಷ್ಟು ಚುರುಕಾಗಿರುವುದಿಲ್ಲ. ಒಂದಿಷ್ಟು ಸಮಯ ಸಿಕ್ಕರೂ ಸರಿ, ಮಗಳ ಜೊತೆ ಆಡುತ್ತಾ ಕಳೆಯುತ್ತೇನೆ. ಉಳಿದಂತೆ ಅಡುಗೆ, ತಿಂಡಿ, ಮನೆವಾರ್ತೆಯ ಕೆಲಸಗಳಲ್ಲೇ ಕಳೆದುಹೋಗುತ್ತದೆ.”
ಈಕೆಯ ಮಗಳು ಇದೀಗ ಬೆಳೆದು ತುಸು ದೊಡ್ಡವಳಾಗುತ್ತಿದ್ದಾಳೆ. ಬಾಲ್ಯದಲ್ಲಿ ಮಗಳು ಅಹಾನಾ ಚದುರಂಗದಾಟದ ಕುರಿತು ಯಾವ ಆಸಕ್ತಿಯನ್ನೂ ತೋರಿಸುತ್ತಿಲ್ಲ ಎನ್ನುತ್ತಾರೆ ಹಂಪೀ.
ಇದರ ಹೊರತಾಗಿಯೂ ಹಂಪೀ ಹೊರಗಿನ ಓಡಾಟ, ಪ್ರವಾಸಗಳಲ್ಲಿ ಖುಷಿ ಅರಸುತ್ತಾರೆ. ಮನೆಮಂದಿ ಜೊತೆ ಮಜವಾಗಿ ಟೈಂಪಾಸ್, ಸಿನಿಮಾಗೆ ಹೋಗೋದು, ಮಾಲ್ ನಲ್ಲಿ ಶಾಪಿಂಗ್, ಯೋಗಧ್ಯಾನಗಳತ್ತ ಗಮನ ಹರಿಸುತ್ತಾರೆ. ಬೋರ್ಡ್ ಗೇಮ್ಸ್ ಎಂದರೂ ಇಷ್ಟ. `ದಿ ಕ್ವೀನ್ಸ್ ಗ್ಯಾಂಬಿಟ್’ ಎಂಬ ಈ ಬೋರ್ಡ್ ಗೇಮ್ ನಲ್ಲಿ ಬಿಳಿಯ ಪಾನ್ ಹೊಂದಿದ ಆಟಗಾರ, ಕ್ವೀನ್ ಪಾನಿನ ಲಾಭ ಪಡೆಯಲು 2 ಮನೆ ಮುಂದೆ ಹೋಗುತ್ತಾ, ಇಡೀ ಕೇಂದ್ರ ನಿರ್ವಹಿಸುತ್ತದೆ. ಇದೇ ರಣನೀತಿಯನ್ನು ಹಂಪೀ ತಮ್ಮ ಆಟಕ್ಕೂ ಬಳಸಿಕೊಳ್ಳುತ್ತಾರೆ. ಜಾರ್ಜಿಯಾದಲ್ಲಿ ಈ ಕ್ರಮದಂದಲೇ ಆಕೆ ದಿವ್ಯಾ ವಿರುದ್ಧ ಆಡಿದ್ದರು. ಆದರೆ ನೆಟ್ ಫ್ಲಿಕ್ಸ್ ನ ಈ ಸೀರೀಸ್ ನೋಡುವಷ್ಟು ಟೈಂ ಸಿಗಲ್ಲ ಅಂತಾರೆ.
“ನನಗೆ ಈ ಸೀರೀಸ್ ನೋಡುವಂಥ ಹವ್ಯಾಸವಿಲ್ಲ. ಒಂದು ಸಲ ಶುರು ಮಾಡಿದ ಮೇಲೆ ಅದಕ್ಕೆ ಅಂಟಿಕೊಳ್ಳಬೇಕಾಗುತ್ತದೆ, ಅದು ನನ್ನಿಂದಾಗದು.”
ನಿಮ್ಮ ಈ ಯಶೋಗಾಥೆ ನಾಳೆ ಬಯೋಪಿಕ್ ಆದರೆ, ಯಾರು ನಿಮ್ಮ ಪಾತ್ರ ವಹಿಸಿದರೆ ಚೆನ್ನ ಎಂಬ ಪ್ರಶ್ನೆಗೆ, ಬಾಲಿವುಡ್ ನಟಿ ತಾಪಸೀ ಪನ್ನು ತನ್ನನ್ನು ಪ್ರತಿಬಿಂಬಿಸಲಿ ಎಂದು ಬಯಸುತ್ತಾರೆ.
ಈ ವರ್ಷ ಡಿಸೆಂಬರ್ ನಲ್ಲಿ ಹಂಪೀ ಗ್ಲೋಬಲ್ ಚೆಸ್ ಲೀಗ್ ಹಾಗೂ ವರ್ಲ್ಡ್ ರಾಪಿಡ್‌ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ. ಈಗಲೇ ರಿಟೈರ್ ಮೆಂಟ್ ಬಗ್ಗೆ ಇನ್ನೂ ಯೋಚಿಸಿಲ್ಲ. ಮಗಳು 10 ವರ್ಷದವಳಾದಾಗ, ತಾನು ರಿಟೈರ್ ಆಗಿ ಸಂಪೂರ್ಣವಾಗಿ ಮನೆವಾರ್ತೆ ನೋಡಿಕೊಳ್ಳುವುದಾಗಿ ಹೇಳುತ್ತಾರೆ. ಆ ಘಟ್ಟ ಬರಲು ಇನ್ನೂ 2 ವರ್ಷ ಬಾಕಿ ಇದೆ. ಹೀಗಾಗಿ ಅಲ್ಲಿಯವರೆಗೂ ನಿರಾಳವಾಗಿ ಆಟ ಮುಂದುವರಿಸುವುದಾಗಿ ಹೇಳುತ್ತಾರೆ.
“ಅಕಸ್ಮಾತ್ ನಿಮ್ಮ ಟೂರ್ನಮೆಂಟ್ ಕೆಟ್ಟದಾಗಿದ್ದರೆ ಯಾ ನೀವು ನಿಮ್ಮ ಅತಿ ಕೆಟ್ಟ ಪ್ರದರ್ಶನ ನೀಡುತ್ತಿದ್ದು, ಒಂದೇ ಒಂದು ಮ್ಯಾಚ್ ನಲ್ಲಿ ಗೆದ್ದಾಗ, ಮುಂದೆ ನೀವು ಮರಳಿ ಯತ್ನ ಮಾಡು ಎಂಬಂತೆ ಈ ಆಟದಲ್ಲಿ ಗೆದ್ದೆ ಗೆಲ್ಲುವುದಾಗಿ ಶಪಥ ತೊಡುವಿರಿ. ಒಂದು ಗೆಲುವು ಸಾಕು, ಮುಂದೆ ನೀವು ಗೆಲ್ಲುವ ಸಾಧ್ಯತೆ ಇದ್ದೇ ಇದೆ ಎಂದು ಸಾರುತ್ತದೆ. ಈ ಒಂದು ಕಾರಣವೇ ನನ್ನನ್ನು ಈ ಆಟಕ್ಕೆ ಪ್ರೇರಣೆ ನೀಡುತ್ತಿರುತ್ತದೆ.”
ಸಿಬ್ಬಂದಿ ಹಾಗೂ ದೋಹಾ ಏಷ್ಯನ್ ಗೇಮ್ಸ್ ನ ಗೋಲ್ಡ್ ಮೆಡಲ್ ವಿಜೇತರು ದೆಹಲಿಯಲ್ಲಿ (ಜನವರಿ 2007), ಕೊನೇರೂ ಹಂಪೀ 2006ರಲ್ಲಿ ಸೇರಿದ್ದರು.
ಕೊನೇರೂ ಹಂಪೀ ತಮ್ಮ ಸಾಮರ್ಥ್ಯ ಗುರುತಿಸಿ, ಎಲ್ಲಿ ಚುರುಕಾಗಿ, ಎಲ್ಲಿ ಮಂದಾಗಿ ಸಾಗಬೇಕು ಎಂದು ಆಟದ ಮಧ್ಯ ನಿರ್ಧರಿಸುತ್ತಾರೆ.
ಇವರ ತಂದೆ ಅಶೋಕ್ ತಮ್ಮ ಕೇಂದ್ರ ಸರ್ಕಾರಿ ನೌಕರಿ ತ್ಯಜಿಸಿ, ಹಗಲಿರುಳೂ ಮಗಳಿಗೆ ಕೋಚಿಂಗ್ ನೀಡತೊಡಗಿದರು. ತಾಯಿ ಲತಾ ಇವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ.
ಚದುರಂಗದಾಟ ತನ್ನ ಪಟುಗಳಿಂದ ಇತರ ಕ್ರೀಡೆಗಳಲ್ಲಿರುವಂತೆ ಹೆಚ್ಚಿನ ದೈಹಿಕ ಶ್ರಮದ ಬೇಡಿಕೆ ಮುಂದಿಡದಿದ್ದರೂ, ಹೆಚ್ಚಿನ ಮಾನಸಿಕ ಶ್ರಮ ಬೇಡುತ್ತದೆ. ಮನೆಯಲ್ಲೇ ಇದ್ದರೂ ಇದರ ಸತತ ಅಭ್ಯಾಸ ಮಾಡುತ್ತಲೇ ಇರಬೇಕು. ಇತರ ಆಟಗಳಂತೆಯೇ ಇದರಿಂದ ಬ್ರೇಕ್ ಪಡೆದಾಗ ಮಾತ್ರ, ಒಬ್ಬ ಆಟಗಾರನ ಪ್ರತಿಸ್ಪರ್ಧೆಯ ವೇಗದ ದರವನ್ನು ಮೊಟಕು ಗೊಳಿಸಿಬಿಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಬ್ರೇಕ್ ನಂತರ ಬೇಗ ಬೇಗ ವಾಪಸ್ಸು ಮರಳಾಗದು. ಹೆಣ್ಣುಮಕ್ಕಳಿಗೆ ಅದಿನ್ನೂ ಕಷ್ಟ. ಪ್ರೆಗ್ನೆನ್ಸಿಯ ತೊಂದರೆಗಳಿಂದಾಗಿ ಆಕೆ ಚದುರಂಗದಿಂದ ಸುಮಾರು ದಿನ ದೂರ ಇದ್ದರು. 5ನೇ ತಿಂಗಳ ನಂತರ ಸಂಪೂರ್ಣ ಬೆಡ್ ರೆಸ್ಟ್ ಕಡ್ಡಾಯ ಎಂದು ವೈದ್ಯರು ಖಾತ್ರಿಪಡಿಸಿದರು.
ಭಾರತದಲ್ಲಿ ಒಂದು ತಂಡ 3ನೇ ಪ್ರೇರಕ ಕಾರಕಾಗಿಯೂ ಕೆಲಸ ಮಾಡತೊಡಗಿತು. ನಮ್ಮ ದೇಶ ಈ ಕ್ರೀಡೆಯಲ್ಲಿ ಮೊದಲಿನಿಂದಲೂ ಚುರುಕು, ಅದೀಗ ಮತ್ತಷ್ಟು ಉಜ್ವಲವಾಗತೊಡಗಿತು. ಈ ನಿಟ್ಟಿನಲ್ಲಿ ರಷ್ಯಾ-ಚೀನಾ ಮೊದಲಿನಿಂದಲೂ ನಮ್ಮವರ ಮೇಲೆ ಅರಿಭಯಂಕರ ಪೈಪೋಟಿ ನಡೆಸುತ್ತಿದೆ. 2009ರಲ್ಲಿ ಭಾರತದಲ್ಲಿ ಒಟ್ಟು 20 ಗ್ರಾಂಡ್ ಮಾಸ್ಟರ್ಸ್ ಇದ್ದರು. ಈ ವರ್ಷದ ನವೆಂಬರ್‌ರೆಗೂ ಈ ಸಂಖ್ಯೆ 91ಕ್ಕೇರಿದೆ! ಕಳೆದ ವರ್ಷ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳೆರಡೂ ಚದುರಂಗದ ಒಲಂಪಿಯಾಡ್ ನಲ್ಲಿ ಐತಿಹಾಸಿಕ ರೂಪದಲ್ಲಿ ಮೊದಲ ಬಾರಿಗೆ ಸ್ವರ್ಣಪದಕ ಗೆದ್ದಿದೆ. ಅಕ್ಟೋಬರ್ 2025ರವರೆಗೂ ವಿಶ್ವದೆಲ್ಲೆಡೆಯ ಟಾಪ್ 100 ಚೆಸ್ ಪಟುಗಳಲ್ಲಿ 12 ಮಂದಿ ಭಾರತೀಯರೇ ಇದ್ದರು. ಅದೇ ಮಹಿಳಾ ತಂಡದಲ್ಲಿ 100ಕ್ಕೆ 7 ಮಂದಿ ಇದ್ದಾರೆ.





