ಹೈದರಾಬಾದ್ ನಿಂದ ಹೊಸಪೇಟೆಗೆ ರೈಲಿನಲ್ಲಿ ರಾಯಚೂರು ಮಾರ್ಗವಾಗಿ ಹೊರಟಿದ್ದೆ. ನನಗೆ ಕೆಳಗಿನ ಬರ್ತ್ ಸಿಕ್ಕಿತ್ತು. ರಾತ್ರಿ 9 ಆಗುತ್ತಿತ್ತು. ತಂದಿದ್ದ ಊಟ ಮುಗಿಸಿ ಹಾಗೇ ಕೂತಿದ್ದೆ.
ಯಾವುದೋ ಸ್ಟೇಷನ್ ನಲ್ಲಿ ವಯಸ್ಸಾದ ದಂಪತಿಗಳು ಹತ್ತಿದರು. ನಾನು ಕುಳಿತಿದ್ದ ಬರ್ತ್ ಗಳ ಹತ್ತಿರವೇ ಬಂದು ತಮ್ಮ ಬರ್ತ್ ಗಾಗಿ ಹುಡುಕಾಡಿದರು. ಆಗ ತಿಳಿಯಿತು, ಅವರಲ್ಲಿ ಒಬ್ಬರಿಗೆ ಮೇಲಿನ ಬರ್ತ್, ಒಬ್ಬರಿಗೆ ಕೆಳಗಿನ ಬರ್ತ್ ಸಿಕ್ಕಿದೆ ಎಂದು. ಆತನಿಗೆ ಮೇಲಿನ ಬರ್ತ್ ಬದಲಾಗಿ ಕೆಳಗಿನ ಬರ್ತ್ ಬೇಕಾಗಿತ್ತು. ನನ್ನನ್ನು ತೆಲುಗಿನಲ್ಲಿ ಕೇಳಿದರು
“ಏಮಿ ಸಾರ್, ಮೀದಿ ಲೋಯರ್ ಬರ್ತೇನಾ?” (ಏನ್ ಸರ್, ನಿಮ್ಮದು ಕೆಳಗಿನ ಬರ್ತೇನಾ?)
ನಾನೂ ತೆಲುಗುನಲ್ಲೇ
” ಔನು (ಹೌದು)” ಅಂದೆ.
ಆತ ನನಗೆ ತೆಲುಗಿನಲ್ಲಿ ರಿಕ್ವೆಸ್ಟ್ ಮಾಡಿಕೊಂಡ
“ನೀವೊಬ್ಬರೇ ಅಲ್ಲವಾ, ಇನ್ನೂ ಯುವಕರು. ನನಗೆ ಮೇಲೆ ಹತ್ತಲಾಗುವುದಿಲ್ಲ… ಮೇಲಿನ ಬರ್ತೇ ಸಿಕ್ಕಿರುವುದು… ನಿಮಗೆ ತೊಂದರೆ ಯಾಗದಿದ್ದರೆ ದಯಮಾಡಿ ನನ್ನ ಅಪ್ಪರ್ ಬರ್ತ್ ತಗೊಂಡು ನನಗೆ ಈ ಕೆಳಗಿನ ಬರ್ತ್ ಬಿಟ್ಟುಕೊಡಲು ಸಾಧ್ಯವೇ?”
ನಾನು ಮರು ಮಾತಾಡದೆ ನನ್ನ ಕಿಟ್ ಬ್ಯಾಗನ್ನು ಅವರ ಅಪ್ಪರ್ ಬರ್ತ್ ನಲ್ಲಿಟ್ಟು ಮೇಲೆ ಹತ್ತಿ ಹೋಗಿ ಅಲ್ಲಿ ಮಲಗಿದೆ.
ಕೆಳಗೆ ತಮ್ಮ ಲಗ್ಗೇಜನ್ನು ಸೀಟ್ ಕೆಳಗೆ ಸರಿಸಿ ತಾವೂ ಹಾಸಿಕೊಂಡು ಮಲಗಿದರು.

ಹೆಂಡತಿ ಗಂಡನ ಜೊತೆಗೆ ಏನೋ ಮಣ-ಮಣ ಮಾತಾಡುತ್ತಿದ್ದಳು. ಆದರೆ ಗಂಡ ಏನೂ ಉತ್ತರ ಕೊಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಮಲಗಿದ. ಆಕೆಯೂ ಮಲಗಿದರು.
ಬೆಳಗಿನ ಜಾವ 5 ಗಂಟೆಗೆ ನನಗೆ ವಾಡಿಕೆಯಂತೆ ಎಚ್ಚರವಾಯಿತು. ಖಾಲಿ ಇರುತ್ತದೆ ಈಗ ಎಂದು ಟಾಯ್ಲೆಟ್, ಮುಖಮಾರ್ಜನೆ ಎಲ್ಲ ಮುಗಿಸಿ ಬಂದು ಮತ್ತೆ ಮೇಲೆ ಹತ್ತಿ ಸುಮ್ಮನೆ ಮಲಗಿಕೊಂಡೆ. ನಾನು ಇಳಿದು ರೈಲು ಬದಲಾಯಿಸಬೇಕಾದ ಗುಂತಕಲ್ ಸ್ಟೇಷನ್ ಇನ್ನು ಬಹಳ ದೂರವಿತ್ತು, ಸಾಕಷ್ಟು ಸಮಯವಿತ್ತು. ಟ್ರೈನ್ ಅವತ್ತು ಲೇಟ್ ಬೇರೆ.
ಸ್ವಲ್ಪ ಹೊತ್ತಿನಲ್ಲಿ ಹೆಂಡತಿ ಎದ್ದು ತನ್ನ ಬಹಿರ್ದೆಸೆ, ಮುಖಮಾರ್ಜನೆ ಎಲ್ಲ ಮುಗಿಸಿಕೊಂಡು ಬಂದು ಗಂಡನನ್ನು ಎಬ್ಬಿಸುವ ಪ್ರಯತ್ನ ಮಾಡಿದರು.
“ಏಳ್ರಿ… ರಾಯಚೂರು ಬರ್ಲಿಕ್ಕ ಹತ್ತದ
ಕಾಣತದ…ಎದ್ದು ಮಾರಿ ತೊಳ್ದು ಟಾಯ್ಲೆಟ್ ಗೇನರ ಹೋಗಂಗಿದ್ದರ ಮುಗಿಸಿ ಬಂದು ತಯಾರಾಗ್ರಿ…ಇಳಿಬೇಕಲ್ಲ”
“ನಾನೆಲ್ಲಿ ಇಳೀತೀನಿಲ್ಲೆ?… ನಾ ಹೇಳೇ ಬಿಟ್ಟೀನಲ್ಲ… ನೀನೊಬ್ಬಾಕಿ ಇಳ್ಕೊಂಡು ಹೋಗು… ನಿನ್ನ ಮಗಳು ಬಂದಿರ್ತಾಳ… ಆಕಿ ಕೂಡ ಹೋಗು… ನಾ ಮುಂದೆ ಹೋಗೋಂವ”
“ಹಂಗ್ಯಾಕೆ ಮಾಡ್ತೀರೀ…ನಾ ಏನಂದೀನಂತ ಹಿಂಗ ಮಾತಾಡಲಿಕ್ಕ ಹತ್ತೀರಿ?… ಸುಮ್ಮನ ಇಳಕೊಳ್ರೀ… ಸುಮಿ ದಾರಿ ನೋಡ್ತಿರ್ತಾಳ ಅಪ್ಪ ಬರ್ತಾರ ಅಂತ… ಅವಳಿಗ್ಯಾಕ ನೀರು ಉಗ್ಗುತೀರಿ ಮಾರಿ ಮ್ಯಾಲೆ?”
“ನೀ ನನಗೇನು ಲೆಕ್ಚರ್ ಕೊಡಬ್ಯಾಡ. ಸುಮ್ಮನ ಇಳಕೊಂಡು ಹೋಗು…ಅಪ್ಪ ಬರಂಗಿಲ್ಲ ಅಂತಾರಂತ ಹೇಳು ಬೇಕಂದ್ರ. ಯಾರೇನ್ ಹೇಳವಲ್ಲರ್ಯಾಕ… ನಾ ಏನು ಇಳಕೊಳ್ಳೋಂವ ಅಲ್ಲ… ಏನು”

(ಓಹೋ, ಗಂಡ ಹೆಂಡತಿ ಮಧ್ಯೆ ಏನೋ ವಿರಸ ನಡೆದಿದೆ ಊರಲ್ಲಿ… ಗಂಡ ಹೆಂಡತಿಗೆ ಬುದ್ಧಿ ಕಲಿಸುವ ಪ್ರಯತ್ನ ಮಾಡುತ್ತಿದ್ದಾನೆ… ಅಂತ ಅನಿಸಿತು ನನಗೆ)
ಸ್ವಲ್ಪ ಹೊತ್ತು ಮೌನ, ಮತ್ತೆ ಹೆಂಡತಿಯೇ ಮಾತಾಡಿದಳು
“ಹಂಗ ಮಾಡಬ್ಯಾಡ್ರೀ… ಸುಮಿ ಬಿಟ್ರ ಯಾರಿದ್ದಾರ ನಮಗೆ ಹೇಳ್ರಿ? … ನಾ ಹೋಗಲಿ, ಮಗಳ ಮನಸಿಗ್ಯಾಕ ತ್ರಾಸ್ ಕೊಡ್ತೀರಿ?… ಏಳ್ರಿ ಏಳ್ರಿ… ಲಗೂನ. ಇನ್ನೊಂದು ತಾಸ್ ಅನ್ನೋದ್ರೊಳಗ ರಾಯಚೂರು ಬಂದೇಬಿಡ್ತದೆ… ಏಳ್ರಿ”
“ಇನ್ನೋಡೂ… ಜುಲುಮಿ ಮಾಡಬ್ಯಾಡ ನನಗ… ನಾ ಹೇಳೇ ಬಿಟ್ಟೀನಿ ನಿಂಗ… ನನ್ನಿಂದ ನಿನಗೆ ತ್ರಾಸ್ ಆಗ್ತದ… ನಾ ಎಲ್ಲಾರೆ ಹೋಗಾಂವ, ಏನಾರೆ ಮಾಡೋಂವ, ನನ್ನ ಚಿಂತಿ ನಿನಗ ಬ್ಯಾಡ… ನಾ ಮಂತ್ರಾಲಯಕ್ಕ ಹೋಗಿ ರಾಯರ ಸೇವಾ ಮಾಡ್ಕೊಂಡ್ ಇರಂವ.. ತಿಳಿತಿಲ್ಲೋ… ಇನ್ನ ಬಿಡು ನನ್ನ ಸುದ್ದಿ”
“ನಾ ಎಲ್ಲಿ ಹೇಳೀನಿ ನಿಮ್ಮಿಂದ ನನಗೆ ತ್ರಾಸ್ ಆಗ್ತದಂತ? ನೀವ ಕಲ್ಪನಾ ಮಾಡ್ಕೊಂಡು ಏನರೆ ಹೇಳ್ಳಕ್ಕ ಹತ್ತೀರಿ…ಏಳ್ರಿ ಸಾಕು. ಸುಮಿ ಬರ್ತಾಳ…ಆಕೀನಾದ್ರೂ ಏನ್ ಅನ್ಕೋಬ್ಯಾಡ ನೀವು ಹಿಂಗ ರಸ ಕಸಿ ಮಾಡ್ಲಿಕ್ ಹತ್ತಿದರ?”
“ಇಕಾ… ನಾ ಹೇಳಿಬಿಟ್ಟೀನಿ… ನಾ ಇಳಿಯಾಂವ ಅಲ್ಲ… ಇನ್ನ ನನ್ನ ಹೆಚ್ಚಿಗಿ ಏನು ಕೇಳಬ್ಯಾಡ… ತಿಳೀತಿಲ್ಲೋ”
ಅಲ್ಲಿಗೆ ಅವರ ವಾಗ್ವಾದ ನಿಂತಿತು. ಆಕೆ ಟಾಯ್ಲೆಟ್ ಗೆ ಹೋಗಿ ಬಂದು ಸಾಮಾನುಗಳನ್ನೆಲ್ಲ ಚೀಲದಲ್ಲಿ ಹಾಕಿಕೊಂಡು ಇಳಿಯಲು ಸಿದ್ಧರಾಗುವ ಹಾಗೆ ಕಾಣುತ್ತಿತ್ತು. ಬಹುಶಃ ಮಗಳು ಬಂದು ಸರಿ ಮಾಡಬಹುದು ಅಂತ ಇರಬೇಕು ಅಂದುಕೊಂಡೆ.
ರಾಯಚೂರು ಸ್ಟೇಷನ್ ಬಂತು. ಆಕೆ ಕಿಟಕಿಯಿಂದಲೇ ಪ್ಲಾಟ್ ಫಾರ್ಮ್ ನಲ್ಲಿ ಮಗಳು ನಿಂತಿರುವುದು ನೋಡಿ ಕೈ ಬೀಸಿದರು… ಮಗಳು ಇವರ ಡಬ್ಬಿ ನಿಲ್ಲುವಲ್ಲಿಗೆ ಬಂದು ನಿಂತಳು.
ಗಾಡಿ ಪೂರ್ತಿ ನಿಂತಿತು. ಮಗಳು ಧಾವಿಸಿ ಒಳಗೆ ಬಂದಳು.
“ಅಪ್ಪಾ …ಕಾಲ್ ಕೆಳಗೆ ಬಿಡ್ರೀ… ನಮಸ್ಕಾರ ಮಾಡ್ತೀನಿ” ಅಂದಳು.
ಅವಳ ಚಿಕ್ಕ ಮಗಳು ‘ಅಜ್…ಜಾ’ ಎಂದು ಕೂಗಿಕೊಂಡೇ ಬಂತು…
ಅಜ್ಜನ ಮುಖದ ಮೇಲೆ ಸಂತೋಷದ ನಗು ಮೂಡಿತು.
“ಅರೆ ಅರೆ…ಅನೂ.. ನೀನೂ ಬಂದ್ ಬಿಟ್ಟೀ ಅವ್ವನ ಜೋಡಿ?… ಎಷ್ಟು ಉದ್ದಾಗಿಯಲ್ಲೇ ಚಿನ್ನಿ?” ಎಂದರು ಮಗುವನ್ನು ತಬ್ಬಿ ಹಿಡಿಯುತ್ತಾ.
“ಅಜ್ಜಾ… ನಾನು ಈಗ ಒಂದನೇ ಇಯತ್ತೆಗೆ ಬಂದೀನಿ,ಅದಕ್ಕ ಉದ್ದಾಗೀನಿ… ಈಗ ನಾನು ಬ್ಯಾರೆ ಸ್ಕೂಲಿಗೆ ಹೋಗಾಕಿ. ನೀವು ಆಗೊಮ್ಮೆ ಬಂದಾಗ ನೋಡಿದ್ರಲ್ಲಾ… ಆ ಸ್ಕೂಲ್ ಅಲ್ಲ… ಉಹುಂ… ಈಗ ದೊಡ್ಡ ಸ್ಕೂಲ್… ಗೊತ್ತದ?… ಅಜ್ಜಾ …ಬರ್ರಿ ನಾ ನಿಮಗ ನನ್ನ ಹೊಸ ಸ್ಕೂಲ್ ತೋರಿಸ್ತೇನಿ”
“ಹೂಂ..? ಹೌದೇನ ಬಂಗಾರಿ? ಈಗ ದೊಡ್ಡ ಸಾಲಿಗೆ ಹೋಗ್ತೀ? ಎಲ್ಲದ ನಿಮ್ಮ ದೊಡ್ಡ ಸಾಲಿ? ಸನಿಯ ಅದಾ ದೂರಾಗ್ತದಾ?”
“ಸನೀಯ ಅದಜ್ಜಾ… ನಾವು ಮನೀಗೆ ಹೋದಿಂದೆ, ನೀವು ಮಾರಿ ತೊಳ್ಕೊಂಡು ಚಾ ಕುಡಿದು ನನ್ ಜೋಡಿ ಬನ್ರೀ ತೋರಿಸ್ತೀನಿ… ದೂರ ಇಲ್ಲ ಅಜ್ಜ ನಡ್ಕೊಂಡು ಹೋಗಲಿಕ್ಕೆ ಆಗ್ತದ ನಿಮಗೆ… ಬರ್ರಿ ಅಜ್ಜ… ಬರ್ರೆಲಾ..”
” ನಿಂದ್ರವಾ ಸ್ವಲ್ಪು.. ನಾ ಚಪ್ಪಲಿನರೆ ಹಾಕ್ಯೋಬೇಕಾ ಬ್ಯಾಡಾ…. ಹೂಂ ನಡಿ ಇನ್ನ”
ಅಜ್ಜ ಚಪ್ಪಲಿ ಹಾಕೊಂಡು ಕೈ ಹಿಡಿದು ಎಳೆಯುತ್ತಿದ್ದ ಮೊಮ್ಮಗಳ ಜೊತೆಗೆ ಹೊರಟರು.
ಮಗಳುಹೇಳಿದಳು
“ಅಪ್ಪಾ…ಆಕೀನ ಜಂಪ್ ಮಾಡಲಿಕ್ಕೆ ಬಿಡಬ್ಯಾಡ್ರಿ.. ನೀವು ಮೊದಲು ಇಳ್ಕೊಂಡು ಆಮೇಲೆ ಆಕೀನ ಇಳಸಕೊಳ್ರೀ… ನಿಮ್ಮ ಸಾಮಾನ ಏನವ ಎಲ್ಲ ನಾನೂ ಅವ್ವ ತರ್ತೇವಂತ.. ನಡೀರಿ ನೀವು ನಿಮ್ಮ ಮೊಮ್ಮಗಳ ಜೋಡಿ…. ಹೌರಾ ಮತ್ತ…ಗಡಬಡೀ ಮಾಡ್ಕೋಬ್ಯಾಡ್ರೀ..”
ಅಜ್ಜ ಮೊಮ್ಮಗಳ ಜೊತೆ ಹೊರಟರು.
ಮಗಳು ಅಮ್ಮನ ಮುಖ ನೋಡಿ ಮುಸಿಮುಸಿ ನಗುತ್ತಾ ಹೇಳಿದಳು
“ಅವ್ವಾ …ನೀ ಫೋನ್ ಮಾಡಿ ಛಲೋ ಕೆಲಸ ಮಾಡಿದಿ ನೋಡು… ಇಲ್ಲಾಂದ್ರೆ ನಾ ಆಕೀನ ಕರ್ಕೊಂಡು ಬರ್ತಿದ್ದಿಲ್ಲ”
“ಹಂಗಾನವಾ ಅಜ್ಜ ಮೊಮ್ಮಗಳ ಸಂಬಂಧ ಅಂದ್ರ… ಅದು ನನಗೇನು ಗೊತ್ತಿಲ್ಲೇನು? ಅದಕಾ ಫೋನ್ ಮಾಡಿ ನಿನಗ ಹೇಳಿದೆ… ಎಲ್ಲಾ ಸುಸೂತ್ರ ನಡೀತು ನೋಡು… ಮಾರಿ ತಿರುಗಿಸ್ಕೊಂಡ ಮಲಗಿದ್ರು ನಿಮ್ಮಪ್ಪ…
ನಾ ಇಳಿಯಂಗಿಲ್ಲಾ ಅಂತ… ಈಗ ನೋಡು ಹ್ಯಾಂಗ್ ಹೊಂಟಾರ ಮೊಮ್ಮಗಳ ಜೋಡಿ ?”
ಎಲ್ಲ ಸಾಮಾನು, ಒಟ್ಟು ಮಾಡಿಕೊಂಡು ತಾಯಿ ಮಗಳೂ ಇಳಕೊಂಡು ಹೋದರು.
**************
(ಒಂದು ನೈಜ ಘಟನೆ ಆಧರಿತ. -ಜೆ.ಬಿ.ಪ್ರಸಾದ್)





