ಶ್ರಾವಣ ಮಾಸ ಬಂತೆಂದರೆ ಹಬ್ಬ-ಹರಿದಿನಗಳ ಸಂಭ್ರಮವೂ ಜೊತೆಯಾಗುತ್ತದೆ. ಅದರಲ್ಲೂ ನಾಗಪಂಚಮಿ ಎಂದರೆ ನಮ್ಮ ಬಾಲ್ಯದ ನೆನಪುಗಳ ಬುತ್ತಿಯನ್ನೇ ತೆರೆದಂತಾಗುತ್ತದೆ. “ಉಳಿದಾವ ದಿನ ನಾಲ್ಕು ಅಣ್ಣ ಬರಲಿಲ್ಲ ಯಾಕ ಕರೆಯಾಕ?” ಎಂಬ ಹಳೆಯ ಹಾಡು ಎಲ್ಲೋ ಕೇಳಿಬರುತ್ತಿದ್ದರೆ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಜ್ಜಿ-ಅಮ್ಮಂದಿರ ಜೊತೆಯಲ್ಲಿ ಕಳೆದ ನಮ್ಮ ಬಾಲ್ಯದ ದಿನಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.

ನಮ್ಮದು ಬಾಗಲಕೋಟೆ ಜಿಲ್ಲೆಯ ಒಂದು ಸಣ್ಣ ಓಣಿಯಲ್ಲಿ ಬೆಳೆದ ಕುಟುಂಬ. ಅಜ್ಜಿ, ಅಜ್ಜ, ಅಪ್ಪ, ಅಮ್ಮ, ಕಾಕ, ಕಾಕಿ—ಹೀಗೆ ಕೂಡು ಕುಟುಂಬದಲ್ಲಿ ಬೆಳೆದವಳು ನಾನು. ಹಬ್ಬ-ಹರಿದಿನಗಳೆಂದರೆ ನಮಗೆ ಅದೊಂದು ದೊಡ್ಡ ಸಂಭ್ರಮ. ಹಬ್ಬಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಮನೆಯ ಸ್ವಚ್ಛತೆ, ಹೊಸ ಬಟ್ಟೆಗಳ ತಯಾರಿ, ತರಹೇವಾರಿ ಅಡುಗೆಗಳ ಸಿದ್ಧತೆ ಹೀಗೆ ಒಂದೊಂದಾಗಿ ಕೆಲಸಗಳು ಶುರುವಾಗುತ್ತಿದ್ದವು.

ಶ್ರಾವಣದಲ್ಲಿ ಬರುವ ನಾಗದೇವರ ಆರಾಧನೆಯಾದ ಪಂಚಮಿ ಹಬ್ಬದ ತಯಾರಿಯಂತೂ ಇನ್ನೂ ಜೋರಾಗಿರುತ್ತಿತ್ತು. ಮನೆಯ ದೊಡ್ಡವರೆಲ್ಲರೂ ಒಟ್ಟಿಗೆ ಕುಳಿತು ಉಂಡಿ, ಚಕ್ಕುಲಿ, ಕಾರಜಿಕಾಯಿ, ಕಬ್ಬರಿ ಕರದಂಟ, ಕೋಡಬಳೆ ಹೀಗೆ ಹಲವಾರು ಖಾದ್ಯಗಳನ್ನು ತಯಾರಿಸುತ್ತಿದ್ದರು. ಮನೆಯ ತುಂಬೆಲ್ಲ ಹರಡುತ್ತಿದ್ದ ಆ ತಿಂಡಿಗಳ ಸುವಾಸನೆ, ಅಜ್ಜಿ-ಅಮ್ಮಂದಿರ ಓಡಾಟ, ಮಕ್ಕಳಾದ ನಮ್ಮ ಕುತೂಹಲ—ಇವೆಲ್ಲ ಸೇರಿ ಹಬ್ಬದ ವಾತಾವರಣವನ್ನು ಇನ್ನಷ್ಟು ವಿಶೇಷವಾಗಿಸುತ್ತಿದ್ದವು.

ಊರಲ್ಲಿರುವ ನಮ್ಮ ಅತ್ತೆ-ಚಿಕ್ಕಮ್ಮಂದಿರನ್ನೆಲ್ಲ ಕರೆತರುವ ಚಿಂತೆ ನಮ್ಮ ಅಜ್ಜಿಗೆ. ಆದರೆ ನಮಗೇ ಅಜ್ಜಿ ಮಾಡಿದ ಉಂಡಿ ತಿನ್ನಬೇಕು, ದಿನವಿಡೀ ಆಟ ಆಡಬೇಕು ಎಂಬ ಒಂದೇ ಆಸೆ!

ನಾಗಪಂಚಮಿಗೆಂದು ಹೊಸದಾಗಿ ಹೊಲಿಸಿದ ಲಂಗ-ಬ್ಲೌಸ್ ತೊಟ್ಟು, ಕುಂಬಾರರ ಮನೆಗೆ ಹೋಗಿ ಮಣ್ಣಿನಿಂದ ಮಾಡಿದ ನಾಗಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಮಾಡುತ್ತಿದ್ದೆವು. “ನನ್ನ ಪಾಲು, ನಿನ್ನ ಪಾಲು, ದೇವರ ಪಾಲು” ಎಂದು ದೇವರಿಗೆ ಹಾಲೆರೆದು, ನಾಗಪ್ಪನಿಗೆ ಪೂಜೆ ಸಲ್ಲಿಸಿ, ನಂತರ ಮನೆಯಲ್ಲಿ ಮಾಡಿದ ರುಚಿಕರವಾದ ಖಾದ್ಯಗಳನ್ನು ಸವಿದು ಸಂಭ್ರಮಿಸುತ್ತಿದ್ದೆವು.

ಅದಾದ ಮೇಲೆ ನಮ್ಮ ಅಜ್ಜಿ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಬಳೆ ತೊಡಿಸುವುದು, ಮೂಗು ಚುಚ್ಚಿಸುವುದು ಮುಂತಾದ ಸಂಪ್ರದಾಯಗಳನ್ನು ಮಾಡಿಸುತ್ತಿದ್ದರು. ಮೂಗು ಚುಚ್ಚಲು ನಮ್ಮ ಅಜ್ಜಿ ಮನೆಗೆ ಬರುತ್ತಿದ್ದವರನ್ನು ಕಂಡಾಕ್ಷಣ ನಾವೆಲ್ಲ “ಯಮಧೂತನೇ ಬಂದನೇ ಏನೇ!” ಎನ್ನುವ ಹಾಗೆ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿದ್ದೆವು.

ಆಗ ನಮ್ಮ ಚಿಕ್ಕಪ್ಪ, ಚಿಕ್ಕಮ್ಮ ನಮ್ಮನ್ನು ಹುಡುಕಿ, ಹಗಲು ಮೇಲೆ ಹಾಕಿಕೊಂಡು ಕರೆದುಕೊಂಡು ಬಂದು ಮೂಗು ಚುಚ್ಚಿಸುತ್ತಿದ್ದರು. ಅಯ್ಯೋ ದೇವರೇ! ಆ ಕೂಗಾಟ, ಆ ಕಿರಿಚಾಟ! ಈಗಲೂ ನೆನಪಿಸಿಕೊಂಡರೆ ನಗು ಬರುತ್ತದೆ. ನಮ್ಮ ನೋವು ವಾಸಿಯಾಗಲೆಂದು ಆಮೇಲೆ ನಮಗೆ ಉಂಡಿ ಕೊಡುತ್ತಿದ್ದರು. ಆ ಉಂಡಿಯನ್ನೇ ಹಿಡಿದುಕೊಂಡು, ಕಣ್ಣೀರನ್ನು ಒರೆಸಿಕೊಂಡು, ನಾವೆಲ್ಲ ಮತ್ತೆ ನಮ್ಮ ಓಣಿಯ ವಠಾರಕ್ಕೆ ಓಡುತ್ತಿದ್ದೆವು.

ಅಲ್ಲಿ ದೊಡ್ಡ ಅಕ್ಕಂದಿರು, ಅಣ್ಣಂದಿರು, ಓಣಿಯ ಮಕ್ಕಳಲ್ಲರೂ ಸೇರಿ ಒಂದು ಮರಕ್ಕೆ ಜೋಕಾಲಿ ಕಟ್ಟುತ್ತಿದ್ದರು. ಮತ್ತೊಂದು ಮರದ ಕೊಂಬೆಗೆ ಕಾರಜಿಕಾಯಿ ಕಟ್ಟಲಾಗುತ್ತಿತ್ತು. ಯಾರು ಜೋಕಾಲಿಯ ಮೇಲೆ ಕುಳಿತು ಜೋಕಾಡುತ್ತಾ ಆ ಕಾರಜಿಕಾಯಿಯನ್ನು ತಿನ್ನುತ್ತಾರೋ ಅವರೇ ವಿಜೇತರು!

ಆ ಸ್ಪರ್ಧೆಯನ್ನು ನೋಡಲು ಇಡೀ ಓಣಿಯೇ ಒಂದಾಗುತ್ತಿತ್ತು. ಓಹ್! ಎಂತಹ ಕಿರಿಚಾಟ, ಚಪ್ಪಾಳೆ, ನಗು, ಸ್ಪರ್ಧಿಗಳಿಗೆ ಹುರುಪು ತುಂಬಿಸುವ ಕೂಗಾಟ! ಯಾರು ಗೆದ್ದರು, ಯಾರು ಸೋತರು ಎನ್ನುವುದಕ್ಕಿಂತ, ಎಲ್ಲರೂ ಸೇರಿ ಆ ಕ್ಷಣವನ್ನು ಆನಂದಿಸುತ್ತಿದ್ದುದೇ ನಮಗೆ ಮುಖ್ಯವಾಗಿತ್ತು.

ಸಂಜೆಯಾಗುತ್ತಿದ್ದಂತೆ ಮತ್ತೆ ಎಲ್ಲರೂ ಸೇರಿ ನದಿ ಅಥವಾ ಹೊಳೆಯ ಬಳಿಗೆ ಹೋಗಿ ಪೂಜೆ ಮಾಡುತ್ತಿದ್ದೆವು. ನಮ್ಮ ಮನೆ ಹತ್ತಿರವಿದ್ದ ನದಿಗೆ ಹೋಗಿ ಎಲ್ಲರೂ ಸೇರಿ ಪೂಜೆ ಸಲ್ಲಿಸಿ, ನಂತರ ನಾಗಪ್ಪನ ಮೂರ್ತಿಯನ್ನು ವಿಸರ್ಜನೆ ಮಾಡುತ್ತಿದ್ದೆವು. ಆ ಸಮಯದಲ್ಲಿ ಇಡೀ ಕುಟುಂಬ, ಬಂಧು-ಬಳಗ, ಓಣಿಯ ಜನರೆಲ್ಲರೂ ಒಟ್ಟಿಗೆ ಇರುವುದೇ ಒಂದು ದೊಡ್ಡ ಹಬ್ಬದಂತಿರುತ್ತಿತ್ತು.

ಹಬ್ಬ ಮುಗಿದ ಮೇಲೆ ಉಳಿದ ಉಂಡಿಗಳನ್ನು ನೆಂಟರಿಗೆ, ಓಣಿಯ ಜನರಿಗೆ ಹಂಚುತ್ತಿದ್ದೆವು. “ಒಂದೇ ತಾಯಿಯ ಮಕ್ಕಳು” ಎನ್ನುವ ಹಾಗೆ ಎಲ್ಲರೂ ಒಂದಾಗಿ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಾ, ಹರಟೆ ಹೊಡೆಯುತ್ತಾ, ನಗುತ್ತಾ ಸಮಯ ಕಳೆಯುತ್ತಿದ್ದೆವು. ಯಾರ ಮನೆಯ ಹಬ್ಬದ ತಿಂಡಿ ರುಚಿ, ಯಾರ ಉಂಡಿ ಹೆಚ್ಚು ಸಿಹಿ, ಯಾರು ಜೋಕಾಲಿ ಸ್ಪರ್ಧೆಯಲ್ಲಿ ಗೆದ್ದರು—ಹೀಗೆ ಸಣ್ಣ ಸಣ್ಣ ವಿಷಯಗಳೂ ದೊಡ್ಡ ಸಂಭ್ರಮಕ್ಕೆ ಕಾರಣವಾಗುತ್ತಿದ್ದವು.

ಹೀಗೆ ಹಾಡು, ಹರಟೆ, ನಗು, ಮನಸ್ತಾಪ, ಆಟ, ಊಟ—ಎಲ್ಲದರ ನಡುವೆ ನಮ್ಮ ಹಬ್ಬಗಳು ಸಾಗುತ್ತಿದ್ದವು. ಆಗ ಹಬ್ಬವೆಂದರೆ ಕೇವಲ ದೇವರ ಪೂಜೆಯಲ್ಲ; ಅದು ಕುಟುಂಬ ಒಂದಾಗುವ ದಿನ, ಬಂಧುಗಳು ಭೇಟಿಯಾಗುವ ದಿನ, ನೆರೆಹೊರೆಯವರು ಒಂದಾಗುವ ದಿನ, ಮಕ್ಕಳಿಗೆ ಮರೆಯಲಾಗದ ನೆನಪುಗಳನ್ನು ಕೊಡುವ ದಿನವಾಗಿತ್ತು.

ಆದರೆ ಈಗ?

ಓದು, ಕೆಲಸ, ಉದ್ಯೋಗ ಎಂದು ಜನರು ಬೇರೆ ಬೇರೆ ಸ್ಥಳಗಳಿಗೆ ಹೋಗಿದ್ದಾರೆ. ಸ್ಥಳ ಬದಲಾವಣೆಯ ಜೊತೆಗೆ ಜೀವನಶೈಲಿಯೂ ಬದಲಾಗಿದೆ. ಒಂದು ಕಾಲದಲ್ಲಿ ಹಬ್ಬದ ತಯಾರಿಗಾಗಿ ಇಡೀ ಕುಟುಂಬ ಒಂದು ತಿಂಗಳ ಮುಂಚೆಯೇ ಒಂದಾಗುತ್ತಿತ್ತು. ಇಂದು ಒಂದೇ ಮನೆಯಲ್ಲಿರುವವರಿಗೂ ಸಮಯ ಸಿಗುವುದು ಕಷ್ಟವಾಗಿದೆ.

ಉಂಡಿ ಹಂಚುವುದಿರಲಿ, ಮನಸು ಬಿಚ್ಚಿ ಕುಳಿತು ಮಾತನಾಡುವುದೇ ಕಷ್ಟವಾಗಿದೆ.

ಆದರೂ ಕಾಲ ಎಷ್ಟೇ ಬದಲಾದರೂ, ಹಬ್ಬಗಳ ನೆನಪುಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತವೆ. ಅದರಲ್ಲೂ ಅಜ್ಜಿ ಕೈಯಲ್ಲಿ ತಯಾರಾಗುವ ಉಂಡಿಗೆ ಒಂದು ವಿಶೇಷ ಸಿಹಿ. ಆ ಸಿಹಿ ಕೇವಲ ಬೆಲ್ಲದ ಸಿಹಿಯಲ್ಲ; ಅದರೊಳಗೆ ಅಜ್ಜಿಯ ಪ್ರೀತಿ, ಕಾಳಜಿ, ನಮ್ಮ ಬಾಲ್ಯದ ನಗು, ಓಣಿಯ ಸಂಭ್ರಮ ಮತ್ತು ಇಡೀ ಕುಟುಂಬದ ಆತ್ಮೀಯತೆ ಬೆರೆತಿರುತ್ತದೆ.

ಇಂದು ನಾವು ಎಷ್ಟೇ ದೂರದಲ್ಲಿದ್ದರೂ, ಎಷ್ಟೇ ಬ್ಯುಸಿಯಾಗಿದ್ದರೂ, ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಉಂಡಿ ಮಾಡಿ ಕಾಯುವ ಅಜ್ಜಿಯ ಪ್ರೀತಿ ಮಾತ್ರ ಬದಲಾಗಿಲ್ಲ.

ಕಾಲ ಬದಲಾಯಿತು. ಊರು ಬದಲಾಯಿತು. ಜನರು ಬದಲಾದರು. ಹಬ್ಬ ಆಚರಿಸುವ ರೀತಿಯೂ ಬದಲಾಯಿತು. ಆದರೆ ಅಜ್ಜಿ ಕೈಯ ಉಂಡಿಯ ಸಿಹಿಯೂ, ಅದರ ಹಿಂದೆ ಅಡಗಿರುವ ಪ್ರೀತಿಯೂ ಮಾತ್ರ ಎಂದಿಗೂ ಬದಲಾಗಲಿಲ್ಲ.

ಬಹುಶಃ ಅದಕ್ಕೇ ಪಂಚಮಿ ನಮಗೆ ಕೇವಲ ಒಂದು ಹಬ್ಬವಲ್ಲ… ಮರಳಿ ಬಾರದ ಆ ಬಾಲ್ಯದ ದಿನಗಳನ್ನು ಮತ್ತೆ ಮತ್ತೆ ನೆನಪಿಸುವ ಒಂದು ಸಿಹಿಯಾದ ನೆನಪು.

ಲೇಖಕರು: ಶ್ವೇತಾ ಮನಗೂಳಿ, ಬಾಗಲಕೋಟೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ