ನೀಳ್ಗಥೆ ಶೇಖರಗೌಡ ವೀ..

ಎಲ್ಲಾ ಯುವ ಜೋಡಿಗಳಂತೆ ಪ್ರೀತಿ ಪ್ರೇಮ ಪ್ರಣಯ ಎನ್ನುತ್ತಾ ಸರಸ ಸಲ್ಲಾಪದಲ್ಲಿ ಮುಳುಗಿದ್ದ ಪ್ರತ್ಯಕ್ಷ ಜಾಹ್ನವಿಯವರ ನಡುವೆ ಮುಂದೊಂದು ದಿನ ಬಿರುಕು ಬಂದದ್ದಾದರೂ ಏಕೆ……?

ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಪ್ರತ್ಯಕ್ಷ ಅಧಿಕಾರಿಯಾಗಿದ್ದ. ನೇರ ನೇಮಕಾತಿಯಲ್ಲಿ ಪ್ರೊಬೆಶನರಿ ಆಫೀಸರ್‌ ಎಂದು ನೇಮಕಗೊಂಡನು. ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಸ್ವಯಂ ಪ್ರತಿಭೆಯಿಂದ ಯಶಸ್ಸು ಗಳಿಸಿದನು. ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕೃಷಿ, ಎಂಎಸ್ಸಿ ಕೃಷಿ ಮಾಡಿಕೊಂಡನು. ಕಾಲೇಜು, ವಿಶ್ವವಿದ್ಯಾಲಯದಲ್ಲಿ ಗೋಲ್ಡ್ ಮೆಡಲಿಸ್ಟ್. ಪ್ರೌಢಶಾಲೆಯ ವಿದ್ಯಾಭ್ಯಾಸದಿಂದಲೇ ಪ್ರಾಮಾಣಿಕ ಸೇವೆ ಮಾಡಬೇಕೆಂಬ ಆದರ್ಶ ಮೈಗೂಡಿಸಿಕೊಂಡನು.

ಬ್ಯಾಂಕ್‌ ನಲ್ಲಿ ಸೇವೆ ಮಾಡಬೇಕೆಂಬ ಗುರಿಯನ್ನೂ ಹೊಂದಿದ್ದ. ಅವನಿಷ್ಟದಂತೆ ಬ್ಯಾಂಕ್‌ ನಲ್ಲಿ ಕೆಲಸ ಸಿಕ್ಕಿತು. ಖುಷಿ ಖುಷಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದ. ಎರಡು ವರ್ಷಗಳ ಪ್ರೊಬೆಶನರಿ ಅವಧಿಯಲ್ಲಿ ಮ್ಯಾನೇಜ್‌ ಮೆಂಟ್‌ ನವರು ಡೆಲ್ಲಿ, ಮುಂಬೈ, ಬೆಂಗಳೂರು, ಚೆನ್ನೈ, ಗಂಗಾವತಿಯಂತಹ ಸ್ಥಳಗಳಿಗೆ ಸುತ್ತಾಡಿಸಿದರು. ಖುಷಿಖುಷಿಯಾಗಿಯೇ ಕರ್ತವ್ಯ ನಿಭಾಯಿಸಿದ. ಎರಡು ವರ್ಷಗಳ ಅವಧಿಯಲ್ಲಿ ಬ್ಯಾಂಕಿಂಗ್‌ ಸೆಕ್ಟರ್‌ ನ ಕಲಿಕೆ ಮತ್ತು ಕರ್ತವ್ಯ ಎರಡೂ ಇದ್ದವು. ಪ್ರತ್ಯಕ್ಷ ಹುಬ್ಬಳ್ಳಿ ಹುಡುಗ. ಎರಡು ವರ್ಷಗಳ ಪ್ರೊಬೆಶನರಿ ಅವಧಿಯ ನಂತರ ಅವನಿಗೆ ಪೋಸ್ಟಿಂಗ್‌ ಸಿಕ್ಕಿದ್ದು ಕರಾವಳಿ ಪ್ರದೇಶದ ಮಂಗಳೂರಿನ ಮುಖ್ಯ ಶಾಖೆಗೆ. ಮಂಗಳೂರಿನಲ್ಲಿ ಬ್ಯಾಂಕಿನ ಹನ್ನೊಂದು ಶಾಖೆಗಳಿದ್ದವು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಅವನು ಮಂಗಳೂರಿನಲ್ಲಿ ಕರ್ತವ್ಯ ನಿಭಾಯಿಸಬೇಕಿತ್ತು. ಇದೀಗ ಮಂಗಳೂರು ಅವನ ಕಾರ್ಯಕ್ಷೇತ್ರ.

ಮಂಗಳೂರು ಎಂದ ಕೂಡಲೇ ಪ್ರತ್ಯಕ್ಷ ಒಂದಿಷ್ಟು ಅಧೀರನಾದದ್ದು ನಿಜ. ಏಕೆಂದರೆ ಮಂಗಳೂರು ಎಂದರೆ ಎರಡು ಧರ್ಮಗಳ ಕೋಮಿನವರ ನಡುವೆ ಯಾವಾಗಲೂ ಘರ್ಷಣೆ, ಹೊಡೆದಾಟ, ಬಡಿದಾಟ ಇದ್ದೇ ಇರುತ್ತಿದ್ದವು. ಕೆಲವೊಂದು ಪ್ರಕರಣಗಳು ಕೊನೆಯಲ್ಲೂ ಅಂತ್ಯವಾಗಿರುವುದು ತಿಳಿದ ವಿಷಯವೇ. ಅದೂ ಅಲ್ಲದೇ, ಅಲ್ಲಿ ಹಿಂದೂಗಳ ಜೊತೆ ಜೊತೆಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮದವರ ಜನಸಂಖ್ಯೆಯೂ ಹೆಚ್ಚಾಗಿಯೇ ಇದೆ.

ಕರಾವಳಿಯ ಕೆಲವೊಂದು ಪ್ರದೇಶಗಳು ಸಂಬಾರು ಪದಾರ್ಥಗಳಾದ ಏಲಕ್ಕಿ, ಕರಿಮೆಣಸು, ಲವಂಗ, ಧನಿಯಾ, ಚಕ್ಕೆ, ಸ್ಟಾರ್ ಅನೀಸ್‌ ಮುಂತಾದ ಬೆಳೆಗಳಿಗೆ ಪ್ರಸಿದ್ಧಿಯಾದವುಗಳು. ಅರಬ್ಬಿ ಸಮುದ್ರದ ಮೂಲಕವೇ  ಹದಿನಾರನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೆ ಹಡಗಿನ ಮೂಲಕ ಸಂಬಾರ ಪದಾರ್ಥಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಕೆಳದಿ ಇಕ್ಕೇರಿ ಅರಸರ ಕಾಲದಲ್ಲೂ ವಿದೇಶಿಗರು ಸಂಬಾರ ಪದಾರ್ಥಗಳ ಖರೀದಿಗೆ ಹಡಗಿನ ಮೂಲಕ ಬರುತ್ತಿದ್ದರು.

ವಿದೇಶದಿಂದ ಬಂದವರಲ್ಲಿ ಮುಸಲ್ಮಾನರು, ಇಂಗ್ಲಿಷರು, ಪೋರ್ಚುಗೀಸರು, ಡಚ್ಚರು ಮುಂತಾದವರು. ವ್ಯಾಪಾರಕ್ಕೆಂದು ಬಂದವರು ತಮ್ಮತಮ್ಮ ಧರ್ಮದ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿದ್ದರು. ಹಿಂದೂ ಮತ್ತು ಇನ್ನೊಂದು ಧರ್ಮದ ಕೋಮಿನವರ ಜೊತೆಗೆ ಆಗಾಗ ಗಲಭೆ, ಸಂಘರ್ಷ, ಹೊಡೆದಾಟ ಬಡಿದಾಟ ನಡೆಯುತ್ತಿದ್ದುದರಿಂದ ನಾಗರಿಕರ ಎದೆಯಲ್ಲಿ ಆತಂಕ ಮೂಡಿಸುತ್ತಿದ್ದವು. ಅಂತಹ ಪ್ರದೇಶಕ್ಕೆ ಹೋಗಿ ಕರ್ತವ್ಯ ನಿಭಾಯಿಸಲು ಪ್ರತ್ಯಕ್ಷನ ಮನಸ್ಸೇಕೋ ಹಿಂದೇಟು ಹೊಡೆಯತೊಡಗಿತು. ಅದೂ ಅಲ್ಲದೇ ಅಲ್ಲಿ ಕನ್ನಡಕ್ಕಿಂತ ಕೊಂಕಣಿ, ತುಳು ಭಾಷೆ ಮಾತನಾಡುವ ಅನ್ಯಭಾಷಿಗರೇ ಬಹಳ ಎಂಬ ಮಾಹಿತಿಯೂ ಸಿಕ್ಕಿತು.

ಪೋಸ್ಟಿಂಗ್‌ ಆರ್ಡರ್‌ ಕ್ಯಾನ್ಸಲ್ ಆಗುವುದು ಅಷ್ಟು ಸುಲಭವಲ್ಲ ಎಂಬುದು ಅವನಿಗೆ ಗೊತ್ತಿದ್ದ ವಿಷಯ. `ನೋಡೋಣ ಆಫೀಸರ್ಸ್ ಅಸೋಸಿಯೇಶನ್‌ ನ ಪದಾಧಿಕಾರಿಗಳ ಜೊತೆಗೆ ಮಾತನಾಡಿ ಒಂದು ಪ್ರಯತ್ನ ಮಾಡೋಣ. ಬೇರೆ ಕಡೆಗೆ ಪೋಸ್ಟಿಂಗ್ ಸಿಗದಿದ್ದರೆ ಮಂಗಳೂರೇ ಗತಿ ಎಂದು ಅಲ್ಲಿಗೇ ಹೋದರಾಯಿತು. ಪ್ರಯತ್ನವಂತೂ ಮಾಡೋಣ….’ ಎಂದುಕೊಂಡು ತಮ್ಮ ವಲಯದ ಅಸೋಸಿಯೇಶನ್‌ ನ ಸಹಾಯಕ ಕಾರ್ಯದರ್ಶಿಯವರ ಜೊತೆಗೆ ಮಾತನಾಡಿದ.

“ನೋಡಪ್ಪಾ ಪ್ರತ್ಯಕ್ಷ, ಮೊದಲಿನಿಂದಲೂ ನಿನ್ನ ಸರ್ವೀಸ್‌ ರೆಕಾರ್ಡ್‌ ತುಂಬಾ ಚೆನ್ನಾಗಿದೆ. ಒಂದು ಒಳ್ಳೆಯ ಉದ್ದೇಶದಿಂದಲೇ ಮ್ಯಾನೇಜ್‌ ಮೆಂಟ್‌ ನಿನ್ನನ್ನು ಅಲ್ಲಿಗೆ ಪೋಸ್ಟ್ ಮಾಡಿದ್ದಾರೆ. ನೀನು ಅಲ್ಲಿ ಯಶಸ್ವಿಯಾಗಿ ಕರ್ತವ್ಯವನ್ನು ನಿಭಾಯಿಸುವಿ ಎಂದುಕೊಂಡಿದ್ದಾರೆ. ಆದ್ದರಿಂದ ನೀನು ಬೇರೇನೂ ಯೋಚಿಸದೆ, ನೇರವಾಗಿ ಮಂಗಳೂರಿಗೆ ಹೋಗಿ ಕರ್ತವ್ಯಕ್ಕೆ ಹಾಜರಾಗು. ಹಾಗೇನಾದರೂ ನಿನಗೆ ಅಲ್ಲಿ ತೊಂದರೆಯಾದರೆ ನಿನ್ನನ್ನು ನೋಡಿಕೊಳ್ಳಲು ನಾವಿದ್ದೇವೆ. ಅದೂ ಅಲ್ಲದೇ ಅಲ್ಲಿ ಬೀಚ್‌ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳೂ ಇವೆ. ವೀಕೆಂಡ್‌ ನಲ್ಲಿ ಸುತ್ತಾಡು, ಮಜಾ ಮಾಡು. ಆಲ್ ದಿ ಬೆಸ್ಟ್,” ಎಂದು ಹೇಳಿದರು ಅಸಿಸ್ಟೆಂಟ್‌ ಸೆಕ್ರೆಟರಿ ಪ್ರಮೋದ್‌ ಶೆಟ್ಟಿ.

ಪ್ರತ್ಯಕ್ಷ ಅವರ ಮಾತಿಗೆ ಬೆಲೆ ಕೊಟ್ಟು, ಮಂಗಳೂರಿನ ಮುಖ್ಯ ಶಾಖೆಗೆ ಹಾಜರಾದ. ಅಲ್ಲಿನ ಸಹಾಯಕ ಮಹಾ ಪ್ರಬಂಧಕರ ನೇತೃತ್ವದಲ್ಲಿ ಸಾವಿರಾರು ಕೋಟಿ ವ್ಯವಹಾರದ ಶಾಖೆ ಅದಾಗಿತ್ತು. ಶಾಖೆಯ ಎಜಿಎಂ, ಡೌನ್‌ ದಿ ಲೈನ್‌ ಅಧಿಕಾರಿಗಳು ಮತ್ತು ಇತರೆ ಎಲ್ಲಾ ಸಿಬ್ಬಂದಿ ವರ್ಗದವರಿಂದ ಪ್ರತ್ಯಕ್ಷನಿಗೆ ತುಂಬು ಹೃದಯದ ಸ್ವಾಗತ ಸಿಕ್ಕಿತು. ವಾಚ್‌ಸ್ಟ್ಯಾಫ್ಸ್ ಸೇರಿಕೊಂಡು ಐವತ್ತೈದು ಜನ ಸಿಬ್ಬಂದಿಗಳ ದೊಡ್ಡ ಶಾಖೆ ಅದು. ಇಪ್ಪತ್ತೈದು ಮಂದಿ ಮಹಿಳಾ ಸಿಬ್ಬಂದಿಗಳೇ ಇದ್ದರು. ಐತ್ತೈದು ಜನ ಸಿಬ್ಬಂದಿಗಳಲ್ಲಿ ಎಂಟು ಜನ ಮುಸ್ಲಿಮರು, ಹತ್ತು ಜನ ಕ್ರಿಶ್ಚಿಯನ್ನರು ಇದ್ದರು.

ಕಾಮರ್ಸ್‌ಇಂಡಸ್ಟ್ರೀಸ್‌ ಸಾಲಗಳ ಖಾತೆಗಳನ್ನು ನಿಭಾಯಿಸುವುದು ಪ್ರತ್ಯಕ್ಷನ ಕೆಲಸವಾಗಿತ್ತು. ಕೋಟ್ಯಂತರ ಮೊತ್ತದ ಸಾಲದ ಖಾತೆಗಳನ್ನು  ಹ್ಯಾಂಡಲ್ ಮಾಡಬೇಕಿತ್ತು. ಒಂದೆರಡು ದಿನಗಳಲ್ಲೇ ಶಾಖೆಯ ಸಿಬ್ಬಂದಿಗಳ ಸ್ಥೂಲ ಪರಿಚಯವಾಯಿತು. ಸಿಬ್ಬಂದಿಗಳಲ್ಲಿ ಮಂಗಳೂರಿನವರೇ ಅಲ್ಲದೆ ಸುತ್ತುಮುತ್ತಲ ತಾಲ್ಲೂಕಿನವರೂ ಇದ್ದರು. ಹಿರಿಯ ಅಧಿಕಾರಿಗಳಲ್ಲಿ ಕೆಲವರು ಬೇರೆ ರಾಜ್ಯದವರೂ ಇದ್ದರು. ಶಾಖೆಯಲ್ಲಿ ಅನೇಕ ಧರ್ಮಿಯರಿದ್ದರೂ ಎಲ್ಲರಲ್ಲೂ ಸಮನ್ವಯತೆ ಇರುವುದು ಅವನ ಗಮನ ಸೆಳೆಯಿತು. ಸಿಬ್ಬಂದಿಯ ನಡುವೆ ಪ್ರೀತಿ, ವಿಶ್ವಾಸದ ಮಾತುಗಳು ಕಳೆಗಟ್ಟುತ್ತಿದ್ದವು. ಎಲ್ಲರ ಮನದಲ್ಲೂ ಒಂದೇ ಕುಟುಂಬದವರು ಎಂಬ ಭಾವನೆ ಹರಿದಾಡುತ್ತಿತ್ತು.

ಇದೆಲ್ಲದರಿಂದ ಪ್ರತ್ಯಕ್ಷ ಖುಷಿಗೊಂಡನಾದರೂ ಕುತೂಹಲಕ್ಕೆಂದು ಕೋಮುಗಲಭೆಗಳ ಕುರಿತು ಸಿಬ್ಬಂದಿಗಳೊಂದಿಗೆ ಚರ್ಚಿಸಿದ.

“ಅದ್ದೆಲ್ಲ ನಡೆಯುತ್ತಲೇ ಇರುತ್ತವೆ. ಅದಕ್ಕೂ ನಮ್ಮ ಬ್ಯಾಂಕಿಗೂ ಯಾವುದೇ ಸಂಬಂಧವಿಲ್ಲ. ಯಾರೋ ಒಂದಿಷ್ಟು ಕಿಡಿಗೇಡಿಗಳು, ರಾಜಕೀಯ ಪುಢಾರಿಗಳ ಕುಮ್ಮಕ್ಕಿನಿಂದ ಗಲಾಟೆಗಳಾಗುತ್ತಿರುತ್ತವೆ. ಗಲಭೆ ತಾರಕಕ್ಕೇರಿದಾಗ, ಪ್ರಾಣ ಹರಣವಾಗುವುದು ಅಮಾಯಕ ಜನರದೇ ಹೊರತು ಯಾವ ಕಿಡಿಗೇಡಿಯಾಗಲಿ, ರಾಜಕೀಯ ಮುತ್ಸದ್ದಿಯಾಗಲಿ ಅಥವಾ ಅವರ ಕುಟುಂಬದವರಾಗಲಿ ಪ್ರಾಣ ಕಳೆದುಕೊಳ್ಳುವುದಿಲ್ಲ. ವಿಕೃತ ಮನಸ್ಸುಗಳ ಓತಪ್ರೋತ ಹಿತಾಸಕ್ತಿಗಳಿಗೆ ಬಲಿಯಾಗುವವರು ಅಮಾಯಕರೇ. ಆದರೆ ಅದಕ್ಕೂ ನಮ್ಮ ಬ್ಯಾಂಕಿಗೂ ಯಾವುದೇ ಸಂಬಂಧವಿಲ್ಲ. ನೀವು ನಿರ್ಭೀತಿಯಿಂದ ನಿಮ್ಮ ಕರ್ತವ್ಯ ನಿಭಾಯಿಸಿ, ನಿಮ್ಮ ಜೊತೆಗೆ ನಾವಿರುತ್ತೇವೆ,” ಎಂದು ಅಲ್ಲಿನ ಸಿಬ್ಬಂದಿಗಳು ಧೈರ್ಯ ಹೇಳಿದರು.

ಪ್ರತ್ಯಕ್ಷನ ಎದೆಯೊಳಗಿದ್ದ ದುಗುಡ, ಮುಂಜಾನೆಯ ಸೂರ್ಯರಶ್ಮಿಗೆ ಕರಗುವ ಮಂಜಿನಂತೆ ಕರಗಿತ್ತು. ಅವನು ಗೆಲುವಿನ ನಗೆ ಬೀರಿ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದ.

ಪ್ರತ್ಯಕ್ಷ ಸುಗಮವಾಗಿ ತನ್ನ ಕರ್ತವ್ಯ ನಿರ್ವಹಿಸತೊಡಗಿದ್ದ. ಅವನ ಸೆಕ್ಷನ್‌ ನಲ್ಲಿ ಅವನಂತೆ ಮತ್ತೊಬ್ಬ ಹಿರಿಯ ಆಫೀಸರ್‌, ಮ್ಯಾನೇಜರ್‌, ಅಸಿಸ್ಟೆಂಟ್‌ ಮ್ಯಾನೇಜರ್‌ ಮತ್ತು ಆದಿತ್ಯ ಮತ್ತು ಜಾಹ್ನವಿ ಎಂಬ ಇಬ್ಬರು ಕ್ಲೆರಿಕ್‌ ಸಿಬ್ಬಂದಿಗಳಿದ್ದರು. ಹೀಗೆ ಪ್ರತ್ಯಕ್ಷ ಮಂಗಳೂರಿನ ಬ್ಯಾಂಕಿನ ಕೆಲಸಕ್ಕೆ ಸೇರಿ ಮೂರ್ನಾಲ್ಕು ವರ್ಷಗಳಾದವು. ಅವನ ಸೇವೆ ಅತ್ಯುತ್ತಮವಾಗಿತ್ತು. ಗ್ರಾಹಕರಿಗೆ ಅವನ ಕಾರ್ಯವೈಖರಿ ಮೆಚ್ಚುಗೆಯಾಗಿ, ಒಳ್ಳೆಯ ಫೀಡ್‌ ಬ್ಯಾಕ್‌ ಸಹ ಸಿಕ್ಕಿತು.

ನಂತರ ದಿನಗಳಲ್ಲಿ ಜಾಹ್ನವಿ ಪ್ರತ್ಯಕ್ಷನಿಗೆ ಆತ್ಮೀಯಳಾಗಿಬಿಟ್ಟಳು. ಎಂಎ ಸ್ನಾತಕೋತ್ತರ ಪದವೀಧರೆಯಾದ ಜಾಹ್ನವಿ ಬಹುಮುಖ ಪ್ರತಿಭೆಯ ಹುಡುಗಿ. ಹಾಡುಗಾರಿಕೆ, ನಟನೆ, ನಾಟ್ಯದಲ್ಲೂ ಜಾಹ್ನವಿ ಪ್ರವೀಣೆ. ಮಧುರ, ಇಂಪಾದ, ಕೋಗಿಲೆ ಕಂಠದ ಅವಳು ಆಗಾಗ ಗೀತ ಗಾಯನ, ನಾಟ್ಯ ಸಮಾರಂಭಗಳನ್ನು ಏರ್ಪಡಿಸುತ್ತಿದ್ದಳು. ಜೊತೆ ಜೊತೆಗೆ ತನ್ನ ನಟನಾ ಕೌಶಲ್ಯವನ್ನೂ ಪ್ರದರ್ಶಿಸುತ್ತಿದ್ದ ಅವಳು ಎಂತಹ ಅರಸಿಕರ ಕಣ್ಮನಗಳನ್ನು ಸೆಳೆಯುವ ರೂಪಸಿಯೂ ಆಗಿದ್ದಳು. ನೋಡುಗರ ಕಣ್ಣು ಕುಕ್ಕುವ ಆಕರ್ಷಕ ಮೈಮಾಟ ಅವಳದಾಗಿತ್ತು.

ಹಾಲಿನ ಬಣ್ಣದ ಸೊಬಗಿನ ಹುಡುಗಿ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ……? ಜಾಹ್ನವಿ, ಪ್ರತ್ಯಕ್ಷನಿಗೆ ಆತ್ಮೀಯಳಾಗುವುದರ ಜೊತೆಗೆ ಇಷ್ಟ ಆದಳು. ಅವನ ಮನಸ್ಸನ್ನು ಕದ್ದಳು, ಗೆದ್ದಳು, ತುಂಬಿದಳು, ಹೃದಯದಲ್ಲೂ ಪ್ರತಿಷ್ಠಾಪಿತಗೊಂಡಳು. ಇವೆಲ್ಲ ಸಕಾರಾತ್ಮಕ ಪಾಯಿಂಟ್‌ ಗಳ ಜೊತೆಗೆ ಜಾಹ್ನವಿ ಬ್ಯಾಂಕಿನ ಕೆಲಸದಲ್ಲೂ ತುಂಬಾ ಅಚ್ಚುಕಟ್ಟು. ತನ್ನ ಸ್ಥಾನದ ಜವಾಬ್ದಾರಿ ಅರಿತು ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮೆರೆಯುತ್ತಿದ್ದಳು. ಪ್ರತ್ಯಕ್ಷ ಆಗಾಗ, “ಜಾಹ್ನವಿಯವರೇ, ನೀವು ನಿಜವಾಗಿಯೂ ಮಲ್ಟಿ ಟ್ಯಾಲೆಂಟೆಡ್‌ ಬಿಡ್ರಿ. ಬ್ಯಾಂಕಿನ ಕೆಲಸದ ಜೊತೆಜೊತೆಗೆ ನಿಮ್ಮ ಸಮಾಜಮುಖಿ ಹವ್ಯಾಸಗಳು ನಿಜವಾಗಿಯೂ ಅಭಿನಂದನಾರ್ಹ! ಇಲ್ಲಿಯ ಕೆಲಸವನ್ನು ನೀವು ತುಂಬಾ ಶ್ರದ್ಧೆಯಿಂದ ಮಾಡುವುದರ ಜೊತೆಗೆ ಹಾಡುಗಾರಿಕೆ, ನೃತ್ಯ, ನಟನೆ ಎಲ್ಲದರಲ್ಲಿಯೂ ನೀವು ಸೂಪರ್‌. ವಿಶಿಷ್ಟ ಮೇರು ವ್ಯಕ್ತಿತ್ವ ನಿಮ್ಮದು. ಅದು ಹೇಗೆ ಎಲ್ಲದಕ್ಕೂ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವಿರೋ ಏನೋ….? ನಾನೋ ಒಂಥರ ಗಾಣದೆತ್ತಿನ ತರಹ. ಬ್ಯಾಂಕಿನ ಈ ಕೆಲಸ ಬಿಟ್ಟರೆ ಬೇರೇನೂ ತಿಳಿಯದು,’ ಎಂದು ಹೇಳುತ್ತಿದ್ದ.

bandhak-story-1

“ಅಯ್ಯೋ ಸರ್‌…. ಇದೇನು ಮಹಾಸಾಧನೆ ಅಲ್ಲ. ಏನೋ ಚಿಕ್ಕವಳಿದ್ದಾಗಿನಿಂದ ಒಂಚೂರು ಆಸಕ್ತಿ ಇತ್ತು. ಆ ನನ್ನ ಆಸಕ್ತಿಗಳಿಗೆ ಒಂಚೂರು ಪರಿಶ್ರಮ ಹಾಕಿ ರೂಢಿಸಿಕೊಂಡಿದ್ದೇನೆ. ಇದೇನು ಮಹಾ ಬಿಡ್ರಿ…? ನಿಮ್ಮದು ನಿಜವಾಗಿಯೂ ಸಾಧನೆ. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯ ನಂತರ ನೀವು ಬ್ಯಾಕಿಂಗ್‌ ಪರೀಕ್ಷೆಯಲ್ಲಿ ಲೀಲಾಜಾಲವಾಗಿ ಪಾಸಾಗಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದು ಅಷ್ಟು ಹಗುರವೇ….? ಪ್ರೊಬೆಶನರಿ ಆಫೀಸರ್‌ ಹುದ್ದೆ ಪಡೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ನನಗೂ ತಿಳಿದಿದೆ.

“ನಾನು ಎರಡು ಬಾರಿ ಪರೀಕ್ಷೆ ಬರೆದೆ, ಪಾಸಾಗಲಿಲ್ಲವೆನ್ನಿ. ಅದೆಷ್ಟು ಟಫ್‌ ಅನ್ನೋದು ಪರೀಕ್ಷೆ ಬರೆದವರಿಗೇ ಗೊತ್ತು. ಈ ಶಾಖೆಗೆ ನೀವು ರಿಪೋರ್ಟ್‌ ಮಾಡಿದಂದಿನಿಂದ ನಿಮ್ಮ ಕಾರ್ಯಕ್ಷಮತೆಯನ್ನು ನಾನು ಗಮನಿಸುತ್ತಿಲ್ಲವೇ? ನೀವು ತುಂಬಾ ಡೈನಾಮಿಕ್‌ ಆಫೀಸರ್‌. ಅದೂ ಯಂಗ್‌ ಅಂಡ ಎನರ್ಜೆಟಿಕ್‌. ನಿಮ್ಮ ಸೆಕ್ಷನ್‌ ಹ್ಯಾಂಡ್‌ ಮಾಡುತ್ತಿದ್ದ ಹಿಂದಿನ ಅಧಿಕಾರಿಯನ್ನು ನಾನು ನೋಡಿಲ್ಲವೇ….? ಅವರೂ ಪ್ರೊಬೇಶನರಿ ಆಫೀಸರ್‌. ಆದರೆ ಅವರಿಗೆ ನಿಮ್ಮಷ್ಟು ವರ್ಕಿಂಗ್‌ ನಾಲೆಜ್‌ ಇದ್ದಿಲ್ಲ. ನೀವು ತುಂಬಾ ಲೀಲಾಜಾಲವಾಗಿ ಗ್ರಾಹಕರನ್ನು ಹ್ಯಾಂಡಲ್ ಮಾಡುತ್ತಿರುವಿರಿ. ಗ್ರಾಹಕರು ಫುಲ್ ಖುಷ್‌ ಆಗಿದ್ದಾರೆ. ಮೇಲಧಿಕಾರಿಗಳ ಮನಸ್ಸನ್ನೂ ಗೆದ್ದಿರುವಿರಿ. ಹಾಗೇ ನಮ್ಮ ಕ್ಲೆರಿಕ್‌ ಸಿಬ್ಬಂದಿಗಳೂ ಸಹ ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಕರ್ತವ್ಯ ಪ್ರಜ್ಞೆ, ಕಾರ್ಯತತ್ಪರತೆ ಎಲ್ಲರೂ ಮೆಚ್ಚುವಂತಹವು,” ಎಂದು ಜಾಹ್ನವಿ ಉದ್ದುದ್ದವಾಗಿ ಒಂದೇ ಸಮನೆ ನಗುನಗುತ್ತಾ ಬಡಬಡಿಸಿದಳು.

ಅವಳ ಮಾತನ್ನು ಶಾಂತಚಿತ್ತದಿಂದ ಆಲಿಸಿದ ಪ್ರತ್ಯಕ್ಷ, “ಅಯ್ಯೋ….. ನೀವು ಪ್ರೊಬೆಷನರಿ ಆಫೀಸರ್‌ ಹುದ್ದೆಗೆ ಪರೀಕ್ಷೆ ಬರೆದಿದ್ದೀರಾ….? ಇರಲಿಬಿಡಿ, ಅದಕ್ಯಾಕೆ ಮನಸ್ಸಿಗೆ ಅಷ್ಟು ಹಚ್ಚಿಕೊಳ್ತೀರಿ…? ಸಾಹಿತ್ಯ, ಸಂಗೀತ, ನಾಟ್ಯ, ನಟನಾ ಕುಶಲತೆ ಎಲ್ಲರಿಗೂ ಒಲಿಯುವಂತಹುದಲ್ಲ. ಕಲೆಗಳ ಆಗರವೇ ನೀವು. ನಿಮ್ಮ ಸಾಧನೆ ಅದೊಂಥರ ತಪಸ್ಸೇ ಎನ್ನಬಹುದು. ಈ ಸಾಧನೆಗೆ ನೀವು ಹಾಕಿರುವ ಕಠಿಣ ಪರಿಶ್ರಮ, ಅರ್ಪಣಾ ಮನೋಭಾವ, ಶ್ರದ್ಧೆ ನಿಮಗಷ್ಟೇ ಗೊತ್ತು. ರಿಯಲ್ ನೀವು ಗ್ರೇಟ್‌ ಕಣ್ರೀ….. ನಿಮ್ಮ ಸಾಧನೆಗೆ ನನ್ನ ಎದೆಯುಬ್ಬಿ ಬರುತ್ತಿದೆ.  ಮನಸ್ವೀ ಅಭಿನಂದನೆಗಳು,” ಎಂದು ಅವಳ ಗುಣಗಾನಕ್ಕೆ ನಿಂತ.

ಪರಸ್ಪರ ಹೊಗಳಿಕೆಯ ಗುಣಗಾನದಲ್ಲಿ ಇಬ್ಬರ ಆತ್ಮೀಯ ಮಾತುಗಳು ಆಗಾಗ ಕಳೆಗಟ್ಟುತ್ತಿದ್ದವು.

ಪ್ರತ್ಯಕ್ಷನಿಗೆ ಜಾಹ್ನವಿ ಇಷ್ಟವಾದಂತೆ ಜಾಹ್ನವಿಗೆ ಪ್ರತ್ಯಕ್ಷನೂ ಇಷ್ಟವಾಗತೊಡಗಿದ್ದ. ಅವನೂ ಅಳೆದೆಯೊಳಗೆ ಇಳಿಯತೊಡಗಿದ್ದ. ಮನಸ್ಸನ್ನು ತುಂಬತೊಡಗಿದ್ದ. ಹೃದಯಕ್ಕೆ ಲಗ್ಗೆ ಇಡತೊಡಗಿದ್ದ. ಎದೆಯೊಳಗಿನ ಭಾವನೆಗಳು ಮಾತಿನಲ್ಲಿ ಆವಿರ್ಭವಿಸಲಿಲ್ಲ ಅಷ್ಟೇ. ಇಬ್ಬರೂ ಒಳಗೊಳಗೇ ಪರಸ್ಪರ ಪ್ರೀತಿಸಿಕೊಳ್ಳುತ್ತಾ, ಅವನೇ ಮೊದಲು ಬಾಯಿಬಿಡಲಿ ಎಂದು ಇವಳು, ಅವಳೇ ಮೊದಲು ತನ್ನೆದೆಯೊಳಗಿನ ಭಾವಗಳನ್ನು ಹೊರಗಿಡಲಿ ಎಂದು ಇವನೂ ಅಂದುಕೊಂಡು ಮಂಡಿಗೆ ಮೆಲ್ಲುತ್ತಾ ಸುಮ್ಮನೇ ಇದ್ದರು.

ಜಾಹ್ನವಿ ಪ್ರೀತಿಯ ಭಾವಗಳ ಶಿಖರವನ್ನೇ ಎದೆಯೊಳಗೆ ಹೊತ್ತುಕೊಂಡಿದ್ದಳು. ಪ್ರತ್ಯಕ್ಷನ ಮನಸ್ಸನ್ನು ಗೆಲ್ಲಲು ಜಾಹ್ನವಿ ವೀಕೆಂಡ್ ಗಳಲ್ಲಿ ತನ್ನೂರಿಗೆ ಕರೆದುಕೊಂಡು ಹೋಗಿ ಉಡುಪಿಯ ಶ್ರೀಕೃಷ್ಣನ ದರ್ಶನ ಮಾಡಿಸುವುದರ ಜೊತೆಗೆ, ಹೆತ್ತವರಿಗೂ ಪರಿಚಯಿಸಿದಳು, ಬೀಚ್‌ ಗಳಲ್ಲಿ ಸುತ್ತಾಡಿಸಿದಳು. ಇಷ್ಟಾದರೂ ಪ್ರತ್ಯಕ್ಷನಿಂದ ಪ್ರೀತಿ ಪ್ರೇಮದ ಮಾತುಗಳು ಬಹಿರಂಗಗೊಳ್ಳಲಿಲ್ಲ.

`ಉತ್ತರ ಕರ್ನಾಟಕದ ಈ ಆಸಾಮಿ ಅಷ್ಟು ಬೇಗ ತನ್ನ ಮನದಾಳದ ಭಾವನೆಗಳನ್ನು ಬಿಚ್ಚಿಡುವುದಿಲ್ಲ ಎಂದೆನಿಸುತ್ತದೆ. ನಾನೊಬ್ಬಳೇ ಇವನನ್ನು ಪ್ರೀತಿಸುತ್ತಿರಬಹುದೇ…? ಇವನು ನನ್ನನ್ನು ತನ್ನೆದೆಯೊಳಗೆ ತುಂಬಿಕೊಂಡು ಪ್ರೇಮಿಸುತ್ತಿರಲಿಕ್ಕಿಲ್ಲವೇ….? ಇವನ ಮನಸ್ಸಿನಲ್ಲಿ ಏನಿದೆಯೋ ಏನೋ…? ಯಾರಾದರೂ ಒಬ್ಬರು ಮೊದಲು ಬಾಯಿಬಿಡಬೇಕಲ್ಲ……? ನಾನೇ ಮೊದಲಿಗಳಾದರೆ ಅದರಲ್ಲಿ ತಪ್ಪೇನಿದೆ…..?’ ಎಂದುಕೊಂಡ ಜಾಹ್ನವಿ ಅದೊಂದು ಶನಿವಾರದ ದಿನ ಸಂಜೆ ಮಂಗಳೂರಿನ ಬೀಚ್‌ ನಲ್ಲಿ ಸುತ್ತಾಡುವಾಗ ದಿಢೀರನೇ ಪ್ರತ್ಯಕ್ಷನ ಕೈ ಹಿಡಿದುಕೊಂಡು ಪ್ರೇಮ ನಿವೇದನೆಗೆ ಮುಂದಾದಳು.

“ಪ್ರತ್ಯಕ್ಷ ಸರ್‌, ನಾನು ನಿಮ್ಮನ್ನು ತುಂಬಾ ತುಂಬಾ ಪ್ರೀತಿಸ್ತೀನಿ. ತುಂಬಾ ತುಂಬಾ ಅಂದರೆ ನನ್ನ ಪ್ರೀತಿ ಈ ಸಾಗರದಷ್ಟು ವಿಶಾಲ. ಐ ಆ್ಯಮ್ ಇನ್‌ ಡೀಪ್‌ ಲವ್ ವಿತ್‌ ಯೂ!” ಎಂದು ಜಾಹ್ನವಿ ಮನದುಂಬಿ ಹೇಳಿದಳು.

ಪ್ರತ್ಯಕ್ಷ ಪಿಳಿಪಿಳಿ ಕಣ್ಣುಬಿಡುತ್ತಾ ತುಸು ಹೊತ್ತು ಅವಳನ್ನೇ ನೋಡಿದ. ಮಾತಿಲ್ಲದ ಅವನ ನೋಟಕ್ಕೆ ಅವಳಿಗೆ ದಿಗಿಲಾಗಿ, ತಳಮಳಿಸತೊಡಗಿತು. ಅವಳ ಹೃದಯ ಕಾತುರ, ಕಳವಳದಿಂದ ಮಡುಗಟ್ಟಿತು.

“ಯಾಕ್ರೀ ಸರ್‌, ಏನಾಯಿತು…..? ನನ್ನ ಮಾತು ನಿಮಗಿಷ್ಟವಾಗಲಿಲ್ಲವೇ….? ನೀವು ನನ್ನನ್ನು ಪ್ರೀತಿಸುತ್ತಿಲ್ಲವೇ…..? ನನ್ನಂತೆ ನೀವು ನನ್ನನ್ನು ಮನಸಾರೆ ಪ್ರೀತಿಸುತ್ತಿರುವಿರಿ ಎಂದು ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿದೆ,” ಎಂದು ಮತ್ತೆ ಬಡಬಡಿಸಿದಳು ಜಾಹ್ನವಿ.

“ಜಾಹ್ನವಿ…. ನೀವು ಅದು ಹೇಗೆ ಇಷ್ಟವಾಗುವುದಿಲ್ಲ ಹೇಳಿ….? ಆದರೆ…..” ಎಂದು ಪ್ರತ್ಯಕ್ಷ ತನ್ನ ಅಭಿಪ್ರಾಯ ತಿಳಿಸಲು ನಿಧಾನಿಸತೊಡಗಿದ.

“ಆದರೆ ಅಂದ್ರೆ ಅದೇನ್ರೀ ಸಾರ್‌…..?”

“ಜಾಹ್ನವಿ…. ನೀವು ಕರಾವಳಿಯ ಕನ್ಯೆಯರು ತುಂಬಾ ಫಾಸ್ಟ್ ಕಣ್ರೀ. ಉತ್ತರ ಕರ್ನಾಟಕದ ನನ್ನಂಥವನಿಗೆ ನಿಮ್ಮೊಂದಿಗೆ ಓಡಲು ಸಾಧ್ಯವೇ ಎಂದು ಯೋಚಿಸುತ್ತಿದ್ದೆ ಅಷ್ಟೇ…. ನೀವು ನನ್ನ ಮನಸ್ಸನ್ನು ತುಂಬಿರುವುದಂತೂ ನಿಜ….” ಎಂದು ತಡೆದು  ತಡೆದು ಹೇಳಿದ ಪ್ರತ್ಯಕ್ಷ.

“ಹೀಗಾ ಬಾಸ್‌……? ಪ್ರೀತಿಯಲ್ಲಿ ಫಾಸ್ಟ್ ಅಥವಾ ಸ್ಲೋ ಅಂತೇನಿಲ್ಲ. ಪ್ರೀತಿ ಅಂದ್ರೆ ಪ್ರೀತಿ ಅಷ್ಟೆ. ಎರಡು ಮನಸ್ಸುಗಳು ಒಂದಾದಾಗ ತಾನೇ ಪ್ರೀತಿ ಹುಟ್ಟುವುದು….? ಜೀವನ ಅಂದ್ರೆ ಪರಸ್ಪರ ಹೊಂದಾಣಿಕೆ ಅಲ್ಲವೇ….? ಅದಕ್ಕೇನೀಗ, ನಾನು ನಿಮ್ಮ ಭಾವನೆಗಳಿಗೆ ಹೊಂದಿಕೊಳ್ಳುವೆ, ನನಗೆ ನಿಮ್ಮ ಪ್ರೀತಿ ಬೇಕು. ನೀವು ಇಲ್ಲದೇ ನನಗೆ ಜೀವನವಿಲ್ಲ. ಬಾಳುವೆ ಇಲ್ಲ, ಬದುಕೂ ಇಲ್ಲ ಅಷ್ಟೆ…..” ಎಂದು ಖಡಕ್ಕಾಗಿ ಹೇಳಿದಳು ಜಾಹ್ನವಿ. ಅವಳು ಒಮ್ಮೊಮ್ಮೆ ಅವನನ್ನು ಬಾಸ್‌ ಎಂದು ಕರೆಯುತ್ತಿದ್ದಳು.

“ಜಾಹ್ನವಿ, ನೀವು ನನ್ನ ಮನಸ್ಸಿನಲ್ಲಿ ಈಗಾಗಲೇ ಕನಸಿನ ಅರಮನೆಯನ್ನು ಕಟ್ಟಿರುವುದು ನಿಜವಾಗಿರುವಾಗ ಪ್ರೀತಿಸುತ್ತಿಲ್ಲವೆಂದು ಅದ್ಹೇಗೆ ಹೇಳಲಿ…..? ಪ್ರೀತಿಯ ಚಿಲಿಪಿಲಿ ಗಾನ ಎದೆಯ ಗೂಡಿನಲ್ಲಿ ಅನುರಣಿಸುತ್ತಿದೆ. ನಿಮ್ಮೊಲವೇ ನನ್ನೊಲಮೆ. ಒಲಿದ ಹೃದಯಗಳು ಒಂದಾದಾಗ ಮಾತ್ರ ಪ್ರೀತಿಗೆ ಸಾಫಲ್ಯತೆ ಸಿಗುತ್ತದೆ. ಇಬ್ಬರ ಪ್ರೀತಿಗಳು ಬೆರೆತಾಗ ತಾನೇ ಬಾಳ ಮಧುರಗೀತೆ ಉಲಿಯುವುದು….?” ಎನ್ನುತ್ತಾ ಪ್ರತ್ಯಕ್ಷ ತನ್ನ ಕೈಯಲ್ಲಿದ್ದ ಅವಳ ಕೈಯನ್ನು ಹಿತವಾಗಿ ಒತ್ತಿದ.

ಜಾಹ್ನವಿಯ ಎದೆಯಲ್ಲಿ ಸಿಹಿ ಜೇನು ಸುರಿದ ಭಾವ. ಅಷ್ಟರಲ್ಲಿ ಇಬ್ಬರೂ ಜನಸಂದಣಿಯಿಂದ ತುಸು ದೂರವೇ ಸರಿದಿದ್ದರು. ಸಮುದ್ರದ ಅಲೆಗಳ ಭೋರ್ಗರೆತ ಅಲ್ಲಿ ಕಡಿಮೆಯೇ ಇತ್ತು. ಮತ್ಯಾವ ಮಾತಿಗಿಳಿಯದೇ ಜಾಹ್ನವಿ ಆನಂದಾತಿರೇಕದಲ್ಲಿ ಅನೆದೆಯೊಳಗೆ ತೂರಿಕೊಂಡಿದ್ದಳು.

“ಸರ್‌, ಒಲವಿನ ಸುಧೆ ಹರಿಸುತ್ತಿರುವ ಚೆಂದದ ನನ್ನೆದೆಯಲ್ಲೂ ಮುಖವಿಟ್ಟು ಸಂಭ್ರಮಿಸಿದರೆ ನನಗದೇ ಖುಷಿ,” ಎನ್ನುತ್ತಾ ಅವಳು ತನ್ನ ತುಂಬಿದೆದೆಗೆ ಪ್ರತ್ಯಕ್ಷನ ತುಟಿಗಳನ್ನೊತ್ತಿಸಿಕೊಂಡು ಸಂಭ್ರಮಿಸಿದಳು.

galat-massage-story

ಎದೆಯೊಳಗೆ ಸ್ಛುರಿಸುತ್ತಿದ್ದ ಸಂತಸದಲೆಗಳ ಭೋರ್ಗರೆತಕ್ಕೆ ಸ್ಪಂದಿಸಿದ ಅವನೂ ಮುಂಗುರುಳನ್ನು ನೇವರಿಸುತ್ತಾ ಅವಳನ್ನು ಬಿಗಿದಪ್ಪಿಕೊಂಡು ಅವಳ ಬೆನ್ನ ಮೇಲೆ ಹಿತವಾಗಿ ಕೈಯಾಡಿಸತೊಡಗಿದ. ಪ್ರೀತಿಯ ಭಾವಗಳ ಮಿಳಿತಕ್ಕೆ ಸಂತಸಗೊಂಡ ಸಮುದ್ರರಾಜ ಅಲೆಗಳ ಭೋರ್ಗರೆತ ಹೆಚ್ಚಿಸಿಕೊಂಡು ಪ್ರೇಮಿಗಳ ತುಂಟಾಟಕ್ಕೆ ಉತ್ತೇಜನ ನೀಡಿದ.

ಇಬ್ಬರೂ ನೀರಿನಲ್ಲಿ ತೊಯ್ದು ತೊಪ್ಪೆಯಾದರು. ಒದ್ದೆ ಬಟ್ಟೆಯಲ್ಲಿ ಒಡೆದು ತೋರುತ್ತಿದ್ದ ಜಾಹ್ನವಿಯ ಚೆಲುವಿನ ಸಿರಿಯನ್ನು, ಪ್ರತ್ಯಕ್ಷ ಕಣ್ಮನಗಳಲ್ಲಿ ತುಂಬಿಕೊಂಡು ಸಂತಸದ ಸಂತೃಪ್ತಿಯ ಭಾವ ವ್ಯಕ್ತಪಡಿಸಿದರೆ, ಅವಳೂ ಸಹ ಅವನ ಮೈಸಿರಿಯ ಚೆಲುವನ್ನು ಆಸ್ವಾದಿಸುತ್ತಾ ಬೀಗತೊಡಗಿದಳು. ಭಾವನೆಗಳ ಆಲಾಪನೆಯಲ್ಲಿ ಇಬ್ಬರಿಗೂ ಸಮಯ ಸರಿದದ್ದೇ ತಿಳಿಯಲಿಲ್ಲ.

ಮುಂದಿನ ದಿನಗಳಲ್ಲಿ ಪ್ರೇಮಿಗಳ ಪ್ರೇಮಾಲಾಪನೆಗೆ ಅಡೆತಡೆಗಳಿರಲಿಲ್ಲ. ಆದರೂ ಸಂಯಮದ ಬೇಲಿಯನ್ನು ನಿರ್ಮಿಸಿಕೊಂಡು ತಮ್ಮ ಪ್ರೀತಿಯ ಪಯಣ ಬ್ಯಾಂಕ್‌ ನಲ್ಲಿ ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದರು. ಅನುಮಾನಕ್ಕೆ ಆಸ್ಪದ ಕೊಡದಂತೆ ನಡೆದುಕೊಳ್ಳುತ್ತಿದ್ದರು. ಹೀಗೆ ಅವರ ಪ್ರೀತಿಯ ಪಯಣ ಮಧುರವಾಗಿ ಮುಂದುವರಿಯ ತೊಡಗಿತ್ತು. ಕಣ್ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಅವರ ಒಲವಿನ ಪಯಣಕ್ಕೆ ವರ್ಷವೊಂದು ತುಂಬಿತ್ತು. ಇಬ್ಬರ ಮಾತುಗಳು ಏಕವಚನದಲ್ಲಿಯೇ ಕಳೆಗಟ್ಟುವಷ್ಟು ಮುಂದುವರಿದಿತ್ತು.

ಮಂಗಳೂರಿನ ಸೃಷ್ಟಿ ಯುವಕ ಸಂಘ, ಭಾವಗೀತೆಗಳ ಹಾಡುಗಾರಿಕೆ, ನಾಟ್ಯ, ನಟನೆಗಳ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಗೆ ಜಾಹ್ನವಿ ತನ್ನ ಹೆಸರು ನೋಂದಾಯಿಸಿದಳು. ಖುಷಿಯಿಂದ ಪ್ರತ್ಯಕ್ಷನಿಗೆ ವಿಷಯ ತಿಳಿಸಿದಾಗ, ಅವನು ಮನದುಂಬಿ ಅಭಿನಂದಿಸಿದ್ದ. ಆ ಕಾರ್ಯಕ್ರಮಕ್ಕೆ ಕನ್ನಡದ ಹೆಸರಾಂತ ಚಲನಚಿತ್ರ ಸಂಗೀತ ನಿರ್ದೇಶಕ ಶಿವರಂಜನ್‌ಮುಖ್ಯ ಅತಿಥಿಯಾಗಿ ಬರುವವರಿದ್ದರು. ಶಿವರಂಜನ್‌ ಮೂಲತಃ ಮಂಗಳೂರಿನವರೇ, ಜಾಹ್ನವಿ ತನ್ನ ಮಧುರ ಕಂಠದಿಂದ ರಾಷ್ಟ್ರಕವಿ ಕುವೆಂಪುರವರ, `ಓ ನನ್ನ ಚೇತನಾ, ಆಗು ನೀ ಅನಿಕೇತನಾ….’ ಎಂಬ ಭಾವಗೀತೆಯನ್ನು ಹಾಡಿ ಪ್ರೇಕ್ಷಕರೆದೆಗೆ ಭಾವ ಸಿಂಚನ ನೀಡಿದಳು.

ನಾಟ್ಯರಾಣಿ ಶಾಂತಲೆಯಂತೆ ಭರತನಾಟ್ಯ ಪ್ರದರ್ಶಿಸಿ ಅಲ್ಲಿ ಸೇರಿದವರೆಲ್ಲರ ಮನಸ್ಸನ್ನು ತಣಿಸಿದ್ದಳು. ಹಾಗೆಯೇ ಕಲ್ಯಾಣ ಶರಣರ ಅನುಭವ ಮಂಟಪಕ್ಕೆ ಶರಣೆ ಅಕ್ಕಮಹಾದೇವಿಯವರು ಬಂದಾಗ ಅಲ್ಲಮಪ್ರಭು ದೇವರು ಆಕೆಗೆ ಹಲವಾರು ಪ್ರಶ್ನೆಗಳನ್ನು  ಹಾಕಿದ್ದ ಸನ್ನಿವೇಶವನ್ನು ಜಾಹ್ನವಿ ಏಕಪಾತ್ರಾಭಿನಯದಲ್ಲಿ ತನ್ನ ನಟನಾ ಕೌಶಲ್ಯವನ್ನು ಮೆರೆದಿದ್ದಳು. ಎಲ್ಲರಿಗಿಂತ ಅತೀ ಖುಷಿಗೊಂಡಿದ್ದು ಪ್ರತ್ಯಕ್ಷ. ಸ್ಪರ್ಧೆಯ ಮೂರು ವಿಭಾಗದಲ್ಲೂ ಜಾಹ್ನವಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಳು. ಬಹುಮಾನಗಳನ್ನು ವಿತರಿಸಿದ ಸಂಗೀತ ನಿರ್ದೇಶಕ ಶಿವರಂಜನ್‌ ಮುಕ್ತ ಕಂಠದಿಂದ ಜಾಹ್ನವಿಯನ್ನು ಹೊಗಳುತ್ತಾ, “ಜಾಹ್ನವಿ…. ನಿಮಗೆ ಉಜ್ವಲ ಭವಿಷ್ಯವಿದೆ! ನಿಮ್ಮ ಹಾಡುಗಾರಿಕೆ, ನಾಟ್ಯ ಹಾಗೂ ನಟನಾ ಕೌಶಲ್ಯ ಅಮೋಘವಾಗಿವೆ. ನಿಮ್ಮ ಪ್ರತಿಭೆಗೆ ಚಿತ್ರರಂಗದಲ್ಲಿ ಸ್ಥಾನ ಸಿಗುತ್ತದೆ. ನೀವು ಬೆಂಗಳೂರಿಗೆ ಬನ್ನಿರಿ. ನಾನು ಚಿತ್ರರಂಗದ ಘಟಾನುಘಟಿಗಳಿಗೆ ನಿಮ್ಮ ಪರಿಚಯ ಮಾಡಿಕೊಡುವೆ. ಈ ಸುವರ್ಣಾವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿರಿ. ಇದು ನನ್ನ ಪರ್ಸನಲ್ ಕಾರ್ಡ್‌. ನೀವು ಬನ್ನಿ….. ನಾನು ಮುಂದಿನದನ್ನು ನೋಡಿಕೊಳ್ಳುವೆ. ನಾನು ನಿಮ್ಮ ಸ್ವಂತ ಅಣ್ಣನೆಂದು ತಿಳಿದುಕೊಳ್ಳಿ,” ಎಂದು ಅವಳ ಅಮೋಘ ಪ್ರತಿಭೆಗಳ ಅನಾವರಣಕ್ಕೆ ಮಾರ್ಗದರ್ಶನ ನೀಡಿದರು.

ಅವರ ಹೃದಯ ತಟ್ಟು ಆಪ್ತ ಮಾತುಗಳಿಗೆ ಧನ್ಯವಾದ ಹೇಳಿದ ಜಾಹ್ನವಿ, “ ಹ್ಞೂಂ ಸರ್‌…. ಹಾಗೇ ಆಗಲಿ,” ಎಂದು  ವಿನಯವಂತಿಕೆ ಪ್ರದರ್ಶಿಸಿದಳು.

“ಹಾಗಾದರೆ ನೀನು ಬೆಂಗಳೂರಿಗೆ ಹಾರುವವಳಾ…..?” ಎಂದು ಸಂಶಯ ವ್ಯಕ್ತಪಡಿಸಿದ್ದ ಪ್ರತ್ಯಕ್ಷ ತುಸು ಖಿನ್ನನಾದ.  “ಹಾಗೇನಿಲ್ಲ ಬಾಸ್‌. ಹೀಗೇ ಒಂದು ಸಾರಿ ಹೋಗಿ ಬರಬೇಕೆಂದಿರುವೆ. ನಾನು, ನೀನು ಇಬ್ಬರೂ ಜೊತೆಯಾಗೇ ಹೋಗೋಣ,” ಎನ್ನುತ್ತಾ ಜಾಹ್ನವಿ ಸಪ್ಪಗಿದ್ದ ಅವನ ಮುಖವನ್ನು ತನ್ನೆದೆಗೆ ಒತ್ತಿಕೊಂಡು ಗೆಲುವಾಗುವಂತೆ ಮಾಡಿದ್ದಳು. ಅಂದುಕೊಂಡಂತೆ  ವೀಕೆಂಡ್‌ ನಲ್ಲಿ ಇಬ್ಬರೂ ಜೊತೆಯಾಗೇ ಬೆಂಗಳೂರಿಗೆ ಹೋಗಿ ಶಿವರಂಜನ್‌ ರನ್ನು ಕಂಡಿದ್ದರು. ಒಂದಿಷ್ಟು ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಅವಳನ್ನು ಪರಿಚಯಿಸಿದ್ದರು. ಅವಳ ಕಂಠ ಮಾಧುರ್ಯ, ನಟನೆ, ನಾಟ್ಯದ ಪರೀಕ್ಷೆಗಳೂ ಆದವು. ರೂಪಸಿಯಾಗಿದ್ದ ಜಾಹ್ನವಿ ಬಹುತೇಕರ ಮನಸ್ಸನ್ನು ಗೆದ್ದುಕೊಂಡು ಬೀಗಿದಳು. ಹಾಗೇ ಅವಳ ಸ್ಕ್ರೀನ್‌ ಟೆಸ್ಟ್ ಕೂಡಾ ಆಯಿತು. ರೂಪಸಿಯ ಫೋಟೋಜೆನಿಕ್‌ ಫೇಸ್‌ ಓ.ಕೆ ಆಯಿತು. ಕಿರುತೆರೆಯ ನಿರ್ಮಾಪಕ, ನಿರ್ದೇಶಕರು ತಕ್ಷಣ ಒಂದು ಧಾರಾವಾಹಿಯಲ್ಲಿ ಪಾತ್ರ ಕೊಡುವುದಾಗಿ ಆಶ್ವಾಸನೆ ನೀಡಿದ್ದೂ ಆಯಿತು.

ಜಾಹ್ನವಿಯ ಹೆತ್ತವರಿಂದ ಅವಳ ಕಿರುತೆರೆಯ ಪ್ರಪೋಸ್‌ ಗೆ ಹಸಿರು ನಿಶಾನೆ ಸಿಕ್ಕಿತು. ಬ್ಯಾಂಕಿನ ಕೆಲಸಕ್ಕೆ ಒಂದು ತಿಂಗಳ ರಜೆ ಹಾಕಿ, ಹೆತ್ತವರೊಂದಿಗೆ ಬೆಂಗಳೂರಿಗೆ ಹಾರಿದಳು. ಹೋಗುವುದಕ್ಕೆ ಮೊದಲು ಒಂದು ವೀಕೆಂಡ್‌ ನಲ್ಲಿ ಪ್ರತ್ಯಕ್ಷನೊಂದಿಗೆ ಗೋಕರ್ಣಕ್ಕೆ ಹೋಗಿಬಂದಳು. ಗೋಕಣೇಶ್ವರನ ದರ್ಶನ ಪಡೆದು ಧನ್ಯರಾದರು. ಇಬ್ಬರೂ ಕೈ ಕೈ ಹಿಡಿದುಕೊಂಡು, ಎದೆಗೆ ಎದೆ ಒತ್ತಿಕೊಂಡು ಬೀಚ್‌ ಗಳಲ್ಲಿ ಸುತ್ತಾಡಿದರು, ನೀರಾಟ ಆಡಿ ಸಂಭ್ರಮಿಸಿದರು.

“ಜಾನೂ…. ನೀನು ಬೆಂಗಳೂರಿಗೆ ಹೋಗುವುದು ಕನ್ಛರ್ಮ್ ಆದ ಹಾಗಾಯಿತು. ಬೆಂಗಳೂರಿಗೆ ಹೋದ ಮೇಲೆ ಈ ಬಡಪಾಯಿ ಪ್ರತ್ಯಕ್ಷನ ನೆನಪು ನಿನ್ನ ಮೆದುಳಿನಲ್ಲಿ ಅಳಿಸಿ ಹೋಗಬಹುವುದೆಂದು ನನಗನಿಸತೊಡಗಿದೆ…..” ಅನುಮಾನಿಸುತ್ತಾ ಪ್ರತ್ಯಕ್ಷ ಕೇಳಿದ.

“ಹಾಗೆಂದೂ ಅಂದುಕೋಬೇಡ ಪ್ರತ್ಯಕ್ಷ. ನಾನೆಂದೆಂದಿಗೂ ನಿನ್ನವಳೇ ಕಣೋ. ಸದ್ಯ ಒಂದು ತಿಂಗಳ ರಜೆಯಲ್ಲಿ ಅಲ್ಲಿನ ಕಿರುತೆರೆ, ಹಿರಿತೆರೆಯ ಹಲ್ ಚಲ್ ನೋಡುವೆ. ಓ.ಕೆ. ಎನಿಸಿದರೆ ಎರಡೂ ದೋಣಿಗಳನ್ನು ಮುನ್ನಡೆಸುವುದು ಸಾಧ್ಯವಾಗುವುದಾದರೆ ಬೆಂಗಳೂರಿಗೆ ಟ್ರಾನ್ಸ್ ಫರ್‌ ತೆಗೆದುಕೊಳ್ಳುವೆ.

“ಒಂದು ವೇಳೆ ನಾನು, ಬೆಂಗಳೂರಿನಲ್ಲೇ ಉಳಿದುಕೊಳ್ಳಬೇಕು ಎನ್ನುವುದು ಮನದಟ್ಟಾದರೆ ನೀನೂ ಬೆಂಗಳೂರಿಗೆ ಟ್ರಾನ್ಸ್ ಫರ್‌ ತೆಗೆದುಕೊಂಡುಬಿಡು. ಇಬ್ಬರೂ ಜೊತೆಯಾಗಿ ಅಲ್ಲೇ ಸೆಟಲ್ ಆಗಿಬಿಡೋಣ ಅಷ್ಟೆ,” ಎಂದು ಜಾಹ್ನವಿ ಪ್ರತ್ಯಕ್ಷನಿಗೆ ಸಮಜಾಯಿಸಿ ನೀಡಿದ್ದು ಅವನ ಮನಸ್ಸಿಗೆ ತೃಪ್ತಿಕೊಡಲಿಲ್ಲ. ಅವನು ಮೌನಕ್ಕೆ ಶರಣಾದ.

“ಹಾಗೇನಾದರೂ ನಿನಗೆ ನನ್ನ ಮಾತಿನ ಮೇಲೆ ಅನುಮಾನವಿದ್ದರೆ, ಇಂದೇ ನನ್ನನ್ನು ನಿನಗೆ ಅರ್ಪಿಸಿಕೊಳ್ಳುವೆ,” ಎಂದಳು ಜಾಹ್ನವಿ.

“ಜಾನೂ….. ನಾನು ಅಪ್ಪಟ ಭಾರತೀಯ ಹುಡುಗ. ಮದುವೆಗೆ ಮೊದಲು ನೀತಿಬಾಹಿರ ಹೀನ ಕೆಲಸಕ್ಕೆ ನನ್ನ ಮನಸ್ಸು ಎಳಸುವುದಿಲ್ಲ. ಹೆತ್ತವರು, ಗುರುಹಿರಿಯರ ಸಮ್ಮುಖದಲ್ಲಿ ಸತಿಪತಿಗಳಾದ ಮೇಲೆ ನಾವು ಶಾಸ್ತ್ರೋಕ್ತವಾಗಿ ಒಂದಾಗೋಣ. ಅಲ್ಲಿಯವರೆಗೂ ತಾಳ್ಮೆ ಇರಲಿ. ನೀನು ಬೆಂಗಳೂರಿಗೆ ಹೋಗಲೇಬೇಕೆಂದರೆ ಹೋಗು. ನನ್ನದೇನೂ ಅಭ್ಯಂತರವಿಲ್ಲ. ನಿನ್ನಲ್ಲಿ ಪ್ರತಿಭೆ ಇದೆ. ಆ ಪ್ರತಿಭೆ ಬೆಳಕಿಗೆ ಬರಲಿ, ಪ್ರತಿಭೆಗೆ ಪುರಸ್ಕಾರ ಸಿಗಲಿ.

“ಆದರೆ ನಿನ್ನೊಲವನ್ನೇ ನಂಬಿರುವ ನನ್ನನ್ನು ಮರೆಯಬೇಡ. ಈ ಜೀವ ನಿನಗಾಗಿ ಮಿಡಿಯುತ್ತಿರುವುದು ಎಂದು ನೆನಪಿರಲಿ. ನಾನೂ ಬೆಂಗಳೂರಿಗೆ ಟ್ರಾನ್ಸ್ ಫರ್‌ ತೆಗೆದುಕೊಳ್ಳಲು ಪ್ರಯತ್ನಿಸುವೆ. ನನ್ನ ಶುಭ ಹಾರೈಕೆಗಳು ಸದಾ ನಿನ್ನ ಜೊತೆಗಿರುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೋ.” ಪ್ರತ್ಯಕ್ಷನ ಹೃದಯ ತಟ್ಟುವ ಮಾತುಗಳು ಜಾಹ್ನವಿಯ ಮನಸ್ಸಿಗೆ ತಂಪನ್ನೆರೆದವು. ಭಾವುಕಳಾದ ಜಾಹ್ನವಿ ಭಾವೋದ್ವೇಗದಲ್ಲಿ ಥಟ್ಟಂತ ಪ್ರತ್ಯಕ್ಷನನ್ನು ಬಿಗಿದಪ್ಪಿಕೊಂಡು ಮುದ್ದಿಟ್ಟು, ಪ್ರಕ್ಷುಬ್ಧಗೊಂಡಿದ್ದ ಅವನ ಮನಸ್ಸನ್ನು ತಣಿಸಿದಳು.

ಭಾರವಾದ ಹೃದಯದಿಂದ ಪ್ರತ್ಯಕ್ಷನಿಂದ ಬೀಳ್ಕೊಂಡ ಜಾಹ್ನವಿ ಹೆತ್ತವರೊಂದಿಗೆ ಬೆಂಗಳೂರು ಸೇರಿಕೊಂಡಳು. ತಕ್ಷಣವೇ ಅವಳಿಗೆ ಕಿರುತೆರೆಯಲ್ಲಿ ನಾಯಕಿಯ ಪಾತ್ರ ಸಿಕ್ಕಿತು. ತನ್ನ ನಟನಾ ಚತುರತೆ, ಮಾದಕ ಸೌಂದರ್ಯದಿಂದ ಜಾಹ್ನವಿ ಪ್ರೇಕ್ಷಕರ ಮನಸ್ಸು ಗೆಲ್ಲುವುದರ ಜೊತೆಗೆ ಇನ್ನೂ ಮೂರ್ನಾಲ್ಕು ನಿರ್ಮಾಪಕ ನಿರ್ದೇಶಕರ ಮನಸ್ಸುಗಳಿಗೂ ಲಗ್ಗೆ ಇಟ್ಟಳು. ತಾನಾಗಿಯೇ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಳು. ಬ್ಯಾಂಕಿನ ಉನ್ನತ ಅಧಿಕಾರಿಗಳ ಕೈಕಾಲು ಹಿಡಿದು ಬೆಂಗಳೂರಿಗೆ ಟ್ರಾನ್ಸ್ ಫರ್‌ ಕೂಡ ತೆಗೆದುಕೊಂಡಳು. ವೀಕೆಂಡ್‌, ರಜೆಯ ದಿನಗಳಲ್ಲಿ ಶೂಟಿಂಗ್‌ ಅಟೆಂಡ್‌ ಮಾಡತೊಡಗಿದಳು. ಸಮಯ ಹೊಂದಿಸಿಕೊಂಡು ಪ್ರತ್ಯಕ್ಷನೊಂದಿಗೆ ಮಾತಿಗಿಳಿಯುತ್ತಿದ್ದಳು. ಬಿಡುವಿಲ್ಲದೇ ಕೆಲಸದಲ್ಲಿ ನಿರತಳಾದಳು. ಹಣದ ಹೊಳೆಯೂ ಹರಿದು ಬರತೊಡಗಿತ್ತು. ಅಷ್ಟರಲ್ಲಿ ಹಿರಿತೆರೆಯ ನಿರ್ಮಾಪಕರೂ ಜಾಹ್ನವಿಯ ರೂಪರಾಶಿ, ಪ್ರತಿಭೆಗೆ ಮನಸೋತು ತಮ್ಮ ಮುಂದಿನ ಚಲನಚಿತ್ರಕ್ಕೆ ಕಾಲ್ ಶೀಟ್‌ ಪಡೆದುಕೊಂಡು ಚಿತ್ರೀಕರಣವನ್ನೂ ಪ್ರಾರಂಭಿಸಿದಾಗ ಜಾಹ್ನವಿಗೆ ಬ್ಯಾಂಕಿನ ಕೆಲಸ ನಿರ್ವಹಿಸುವುದು ತುಂಬಾ ಕಠಿಣವೆಂದು ಅನಿಸಿದ್ದರಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪೂರ್ಣಪ್ರಮಾಣದಲ್ಲಿ ಬೆಳ್ಳಿತೆರೆಗೆ ತನ್ನನ್ನು ಅರ್ಪಿಸಿಕೊಂಡಳು.

ಅಷ್ಟರಲ್ಲಿ ಪ್ರತ್ಯಕ್ಷನ ಒಲವು ನಿಧಾನವಾಗಿ ಅವಳೆದೆಯ ಗೂಡಿನಿಂದ ದೂರ ಸರಿಯತೊಡಗಿತು. ಕೊನೆಗೊಂದು ದಿನ ಮೊಬೈಲ್ ನಿಂದ ಹಳೆಯ ಸಿಮ್ ಕಾರ್ಡ್‌ ನ್ನು ತೆಗೆದು ಹೊಸ ಸಿಮ್ ಕಾರ್ಡ್‌ ಹಾಕಿಕೊಂಡಳು. ಮತ್ತಾರು ತಿಂಗಳಲ್ಲಿ ಪ್ರತ್ಯಕ್ಷನ ಒಲವಿನ ಗುರುತುಗಳನ್ನು ತನ್ನೆದೆಯಿಂದ ಬೇರು ಸಹಿತ ಕಿತ್ತು ಹಾಕಿ ಹಿರಿತೆರೆಯ ಯುವ ನಾಯಕ ನಟ ಹೃಷಾಂಕನೊಂದಿಗೆ ಹಸೆಮಣೆ ಏರಿ ಮಧುಚಂದ್ರಕ್ಕೆ ಸ್ವಿಟ್ಜರ್ಲ್ಯಾಂಡಿಗೆ ಹಾರಿದಳು.

ಸದ್ದಿಲ್ಲದೇ ತನ್ನೊಲವಿನ ಹಕ್ಕಿ ದೂರ ಹಾರಿದ್ದಲ್ಲದೇ ಬೇರೊಂದು ಗೂಡನ್ನು ಸೇರಿದ್ದು ಪ್ರತ್ಯಕ್ಷನಿಗೆ ನುಂಗಲಾರದ ತುತ್ತಾಗಿ ಜಾಹ್ನವಿಯ ನೆನಪಿನ ಕನವರಿಕೆಯಲ್ಲೇ ತಳಮಳಿಸತೊಡಗಿದ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ