ಜವಳಿ ಗಿರಣಿಯಿಂದ ಕಾರ್ಮಿಕರ ಬದುಕಿಗೆ, ಅಲ್ಲಿಂದ ಆಧುನಿಕ ರಿಯಲ್ ಎಸ್ಟೇಟ್‌ವರೆಗೆ ಬದಲಾಗಿರುವ ಬೆಂಗಳೂರಿನ ವಿಶಿಷ್ಟ ಪ್ರದೇಶ

ಸಾಮಾನ್ಯವಾಗಿ ಬೆಂಗಳೂರಿನ ಬಹುತೇಕ ಪ್ರದೇಶಗಳ ಹೆಸರುಗಳ ಹಿಂದೆ ಐತಿಹಾಸಿಕ, ಭೌಗೋಳಿಕ, ಸಾಮಾಜಿಕ ಅಥವಾ ಪೌರಾಣಿಕ ಹಿನ್ನೆಲೆ ಇರುತ್ತದೆ. ಆದರೆ ನಗರದ ಹೃದಯಭಾಗದಲ್ಲಿರುವ ಬಿನ್ನಿಪೇಟೆಯ ಕಥೆ ಸ್ವಲ್ಪ ವಿಭಿನ್ನ. ಈ ಹೆಸರಿನ ಹಿಂದೆ ಸ್ಥಳೀಯ ರಾಜರು, ದೇವಾಲಯ ಅಥವಾ ಪುರಾಣದ ಕಥೆಯಷ್ಟೇ ಅಲ್ಲ—ಬ್ರಿಟಿಷ್ ಕಾಲದ ಜವಳಿ ಉದ್ಯಮ ಮತ್ತು ‘Binny & Co.’ ಎಂಬ ವ್ಯಾಪಾರ ಸಂಸ್ಥೆಯ ಇತಿಹಾಸವೂ ಅಡಗಿದೆ. ಒಂದು ಕಾಲದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಬಿನ್ನಿ ಮಿಲ್, ಅದರ ಸುತ್ತಲಿನ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಬದುಕನ್ನೇ ಬದಲಿಸಿತು. ಕೊನೆಗೆ ಆ ಗಿರಣಿ ಮಾಯವಾದರೂ, ಅದರ ಹೆಸರೇ ಒಂದು ಸಂಪೂರ್ಣ ಪ್ರದೇಶದ ಗುರುತಾಗಿ ಉಳಿಯಿತು. ಅದರ ಕುರಿತಾದ ರೋಚಕ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.   ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಮೆಜೆಸ್ಟಿಕ್ ಪಕ್ಕದಲ್ಲಿದ್ದ ಮಿಲ್… ಮಿಲ್ ಸುತ್ತ ಬೆಳೆದ ‘ಬಿನ್ನಿಪೇಟೆ’

ಇಂದು ಮೆಜೆಸ್ಟಿಕ್, ಕೆಂಪೇಗೌಡ ಬಸ್ ನಿಲ್ದಾಣ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಸಂಪರ್ಕ ಹೊಂದಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಚಿಕ್ಕಪೇಟೆ, ಚಾಮರಾಜಪೇಟೆ, ಓಕಳಿಪುರಂ ಮತ್ತು ಮಾಗಡಿ ರಸ್ತೆಯಿಂದ ಸುತ್ತುವರಿದಿರುವ ಬಿನ್ನಿಪೇಟೆ ಅತ್ಯಂತ ಚಟುವಟಿಕೆಯ ಪ್ರದೇಶ. ಆದರೆ ಒಂದು ಕಾಲದಲ್ಲಿ ಇದು ಮುಖ್ಯವಾಗಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರ ವಸತಿ ಹಾಗೂ ಉದ್ಯೋಗದ ಪ್ರದೇಶವಾಗಿತ್ತು.

binny3

1870ರ ದಶಕದ ಕೊನೆಯ ಭಾಗದಲ್ಲೇ ಬೆಂಗಳೂರಿನಲ್ಲಿ ಜವಳಿ ಕೈಗಾರಿಕೆಯ ಪ್ರಯತ್ನಗಳು ಆರಂಭವಾಗಿದ್ದವು. 1881ರ Rendition ನಂತರ ಮೈಸೂರು ಸಂಸ್ಥಾನಕ್ಕೆ ಆಡಳಿತ ಮರಳಿದ ಸಂದರ್ಭದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ಸಿಕ್ಕಿತು. ಇದೇ ಹಿನ್ನೆಲೆಯಲ್ಲೇ ಬೆಂಗಳೂರಿನ ಜವಳಿ ಉದ್ಯಮಕ್ಕೆ ಹೊಸ ವೇಗ ದೊರೆಯಿತು. 1884ರಲ್ಲಿ Bangalore Woollen, Cotton and Silk Mills ಸ್ಥಾಪನೆಯಾಯಿತು; ನಂತರ ಮದ್ರಾಸ್‌ನ Binny ಸಂಸ್ಥೆಯು ಇದರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಸುಮಾರು 16 ಎಕರೆ ಪ್ರದೇಶದಲ್ಲಿ, ಮಾಗಡಿ ರಸ್ತೆಯ ಆರಂಭದ ಭಾಗದಲ್ಲಿ, ರೈಲ್ವೆ ಸಂಪರ್ಕಕ್ಕೆ ಸಮೀಪವಾಗಿ ಈ ಮಿಲ್ ಬೆಳೆದಿತ್ತು.

ಇಲ್ಲೊಂದು ಕುತೂಹಲಕಾರಿ ಸಂಗತಿಯಿದೆ. ಆ ಕಾಲದಲ್ಲಿ ಸುತ್ತಮುತ್ತಲಿನ ಜನರಲ್ಲಿ ಕೃಷಿ, ಹೈನುಗಾರಿಕೆ, ಸಣ್ಣ ವ್ಯಾಪಾರ ಸೇರಿದಂತೆ ವಿವಿಧ ಉದ್ಯೋಗಗಳಿದ್ದವು. ಆದರೆ ಮಿಲ್ ಬೆಳೆದಂತೆ ಉದ್ಯೋಗಕ್ಕಾಗಿ ಜನರು ಗಿರಣಿಯತ್ತ ಆಕರ್ಷಿತರಾದರು. ಕಾರ್ಮಿಕರು ಬಂದರು, ಅವರಿಗಾಗಿ ಮನೆಗಳು ನಿರ್ಮಾಣವಾದವು, ಸಣ್ಣ ಅಂಗಡಿಗಳು ಹುಟ್ಟಿಕೊಂಡವು, ಸಾರಿಗೆ ಹೆಚ್ಚಾಯಿತು. ಹೀಗೆ ನಿಧಾನವಾಗಿ ಮಿಲ್ ಪ್ರದೇಶವೇ ‘ಬಿನ್ನಿ ಪೇಟೆ’ ಎಂಬ ಹೆಸರಿನಿಂದ ಗುರುತಿಸಲ್ಪಡತೊಡಗಿತು.

‘ಬಿನ್ನಿ’ ಎನ್ನುವ ಹೆಸರು ಎಲ್ಲಿಂದ ಬಂತು?

ಇದರ ಕಥೆ ಬೆಂಗಳೂರಿನಿಂದ ಆರಂಭವಾಗುವುದಿಲ್ಲ. John Binny ದಕ್ಷಿಣ ಭಾರತಕ್ಕೆ ಬಂದು 18ನೇ ಶತಮಾನದ ಅಂತ್ಯದ ವೇಳೆಗೆ ವ್ಯಾಪಾರ ಆರಂಭಿಸಿದವರು. 1797ರಲ್ಲಿ Binny & Co. ಅನ್ನು ಮದ್ರಾಸಿನಲ್ಲಿ ಸಾಮಾನ್ಯ, Clearing ಮತ್ತು Forwarding Agency ಆಗಿ ಆರಂಭಿಸಲಾಯಿತು. ನಂತರ ಸಂಸ್ಥೆ ಬ್ಯಾಂಕಿಂಗ್, ವಿಮೆ, ಹಡಗು ಏಜೆನ್ಸಿ ಮತ್ತು ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿತು.

1800ರಲ್ಲಿ ಸಂಸ್ಥೆಯ ಹೆಸರು Binny and Denison ಎಂದು ಬದಲಾಯಿತು; ನಂತರ ಮತ್ತೆ Binny & Co. ಎಂಬ ಹೆಸರಿನಿಂದ ಮುಂದುವರಿಯಿತು. 1812ರಲ್ಲಿ ಸಂಸ್ಥೆಯ ಕೇಂದ್ರ ಕಚೇರಿ Armenian Street ಪ್ರದೇಶಕ್ಕೆ ಸ್ಥಳಾಂತರವಾಯಿತು. ಹಡಗುಗಳ ಮೂಲಕ ಸರಕು ಸಾಗಣೆ, ಬಂದರು ಸೇವೆಗಳು ಮತ್ತು ಭೂ ಸಾರಿಗೆಯಲ್ಲೂ ಸಂಸ್ಥೆ ತೊಡಗಿಸಿಕೊಂಡಿತ್ತು. ಒಂದು ಹಂತದಲ್ಲಿ ಸಂಸ್ಥೆಯ ಬಳಿ 35 barges ಮತ್ತು 30 lighters ಇದ್ದವು ಎಂಬ ದಾಖಲೆಗಳೂ ದೊರೆಯುತ್ತವೆ.  ಅಂದರೆ, ಇಂದು ಬೆಂಗಳೂರಿನ ಒಂದು ಪ್ರದೇಶದ ಹೆಸರಾಗಿ ಉಳಿದಿರುವ ‘ಬಿನ್ನಿ’ ಎಂಬುದು ಮೂಲತಃ ಒಬ್ಬ ಬ್ರಿಟಿಷ್ ವ್ಯಾಪಾರಿಯ ಹೆಸರಿನಿಂದ ಬೆಳೆದ ಉದ್ಯಮದ ನೆನಪು!

ಜವಳಿ ಕ್ಷೇತ್ರಕ್ಕೆ Binny & Co. ಪ್ರವೇಶ

binny419ನೇ ಶತಮಾನದ ಕೊನೆಯ ಭಾಗದಲ್ಲಿ ಭಾರತದಲ್ಲಿ ಜವಳಿ ಕೈಗಾರಿಕೆ ವೇಗವಾಗಿ ಬೆಳೆಯತೊಡಗಿತು. ಬ್ರಿಟನ್‌ನ ಕೈಗಾರಿಕಾ ಕ್ರಾಂತಿಯಿಂದ ಯಂತ್ರಚಾಲಿತ ಬಟ್ಟೆ ಉತ್ಪಾದನೆ ಹೆಚ್ಚಾದರೆ, ಭಾರತದಲ್ಲಿದ್ದ ಸಾಂಪ್ರದಾಯಿಕ ಕೈಮಗ್ಗ ಉದ್ಯಮಕ್ಕೆ ತೀವ್ರ ಪೈಪೋಟಿ ಎದುರಾಯಿತು. Binny & Co. ಕೂಡ ಜವಳಿ ಉದ್ಯಮಕ್ಕೆ ಕಾಲಿಟ್ಟಿತು. 1876ರಲ್ಲಿ Buckingham Mills ಹಾಗೂ ನಂತರ 1881ರಲ್ಲಿ Carnatic Mills ಸ್ಥಾಪಿಸಲಾಯಿತು. ಈ ಎರಡೂ ಮಿಲ್‌ಗಳು ಮುಂದೆ 1920ರಲ್ಲಿ ಒಂದಾಗಿ Buckingham and Carnatic Mills ಆಗಿ ರೂಪುಗೊಂಡವು. ಬೆಂಗಳೂರಿನ Bangalore Woollen, Cotton and Silk Mills ಕೂಡ 1884ರ ವೇಳೆಗೆ Binny ಸಂಸ್ಥೆಯ ಜವಳಿ ವ್ಯವಹಾರದ ಪ್ರಮುಖ ಭಾಗವಾಯಿತು.

ಬೆಂಗಳೂರಿನ ಈ ಮಿಲ್‌ನಲ್ಲಿ ಹತ್ತಿ, ರೇಷ್ಮೆ ಮತ್ತು ಉಣ್ಣೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಉತ್ತಮ ಗುಣಮಟ್ಟದ ಬಟ್ಟೆಗಳಿಗೆ ರಾಜ್ಯದಷ್ಟೇ ಅಲ್ಲ, ದೇಶದ ವಿವಿಧ ಭಾಗಗಳಲ್ಲೂ ಬೇಡಿಕೆ ಇತ್ತು. ವಿಶೇಷವಾಗಿ ಸುಮಾರು 800 ಯಾಂತ್ರೀಕೃತ ಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿ ಮಿಲ್‌ನ ಉತ್ಪಾದನಾ ಸಾಮರ್ಥ್ಯ ಗಮನಾರ್ಹವಾಗಿತ್ತು. ಸಶಸ್ತ್ರ ಪಡೆಗಳಿಗೆ ಬೇಕಾದ ಉನ್ನತ ಗುಣಮಟ್ಟದ ಹತ್ತಿ ಮತ್ತು ಉಣ್ಣೆಯ ವಸ್ತುಗಳನ್ನೂ ಇಲ್ಲಿ ತಯಾರಿಸಲಾಗುತ್ತಿತ್ತು.

7,200ಕ್ಕೂ ಹೆಚ್ಚು ಕಾರ್ಮಿಕರು… ಬಿನ್ನಿಪೇಟೆಯ ‘ಚಿನ್ನದ ಯುಗ’

ಬಿನ್ನಿ ಮಿಲ್‌ನ ಬೆಳವಣಿಗೆಯೊಂದಿಗೆ ಬಿನ್ನಿಪೇಟೆಯೂ ವೇಗವಾಗಿ ವಿಸ್ತರಿಸಿತು. ಒಂದು ಹಂತದಲ್ಲಿ ಮಿಲ್‌ನಲ್ಲಿ 7,200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ಹೇಳುತ್ತವೆ. ಅಂದಿನ ಬೆಂಗಳೂರಿನ ಮಟ್ಟಿಗೆ ಇದು ಅಸಾಧಾರಣ ಪ್ರಮಾಣದ ಉದ್ಯೋಗ ಸೃಷ್ಟಿಯಾಗಿತ್ತು.  ಮಿಲ್ ಎಂದರೆ ಕೇವಲ ಯಂತ್ರಗಳು ಮತ್ತು ಕಾರ್ಮಿಕರಲ್ಲ. ಅದರ ಸುತ್ತಲೂ ಒಂದು ಸಂಪೂರ್ಣ ಆರ್ಥಿಕ ವ್ಯವಸ್ಥೆಯೇ ರೂಪುಗೊಂಡಿತ್ತು. ಕಾರ್ಮಿಕರ ವಸತಿ, ಸಣ್ಣ ಅಂಗಡಿಗಳು, ಊಟದ ಸ್ಥಳಗಳು, ಸಾರಿಗೆ, ಸೇವಾ ವೃತ್ತಿಗಳು—ಎಲ್ಲವೂ ಮಿಲ್‌ನ ಚಟುವಟಿಕೆಯೊಂದಿಗೆ ಬೆಳೆದವು.

ಒಂದು ಹಂತದಲ್ಲಿ ಬಿನ್ನಿ ಮಿಲ್ ಪ್ರದೇಶವು TCN Royan Circleನಿಂದ Tank Bund Roadವರೆಗೆ ವಿಸ್ತರಿಸಿತ್ತು. ಮಿಲ್ ಆವರಣದಲ್ಲಿದ್ದ Binnyston Garden ಅದರ ಮತ್ತೊಂದು ಆಕರ್ಷಣೆಯಾಗಿತ್ತು. ಎತ್ತರದ ಮರಗಳು, ಹಸಿರು ಪ್ರದೇಶ ಮತ್ತು ಜಲಾಶಯಗಳಿಂದ ಕೂಡಿದ್ದ ಈ ಪ್ರದೇಶ ಕಾರ್ಮಿಕರ ಬದುಕಿನಲ್ಲೂ ಪ್ರಮುಖ ಸ್ಥಾನ ಪಡೆದಿತ್ತು.  ಹೀಗಾಗಿ ಬಿನ್ನಿಪೇಟೆ ಎನ್ನುವುದು ಕೇವಲ ಒಂದು ಸ್ಥಳದ ಹೆಸರು ಆಗಿರಲಿಲ್ಲ. ಅದು ಉದ್ಯೋಗ, ಕೈಗಾರಿಕೆ, ಕಾರ್ಮಿಕ ಬದುಕು ಮತ್ತು ನಗರೀಕರಣದ ಒಂದು ಮಾದರಿಯಾಗಿತ್ತು.

1906ರ ಆರ್ಥಿಕ ಹೊಡೆತದಿಂದ ನಿಧಾನವಾದ ಅವನತಿಯವರೆಗೆ

Binny ಸಂಸ್ಥೆಯ ಇತಿಹಾಸವೂ ಸದಾ ಏರುಮುಖವಾಗಿರಲಿಲ್ಲ. 22 ಅಕ್ಟೋಬರ್ 1906ರಂದು Arbuthnot & Co. ಬ್ಯಾಂಕ್ ಕುಸಿದ ಪರಿಣಾಮ Binny & Co. ಭಾರೀ ಆರ್ಥಿಕ ಹೊಡೆತ ಅನುಭವಿಸಿತು. ಅಕ್ಟೋಬರ್ 31ರಂದು ಸಂಸ್ಥೆ voluntary liquidationಗೆ ಹೋಗಬೇಕಾಯಿತು; ನಂತರ ಹೊಸ ಆಡಳಿತ ವ್ಯವಸ್ಥೆಯಡಿ ಸಂಸ್ಥೆ ಪುನರ್‌ರಚಿಸಲಾಯಿತು.  ಸ್ವಾತಂತ್ರ್ಯಾನಂತರ ಬ್ರಿಟಿಷ್ ವ್ಯಾಪಾರ ಸಂಸ್ಥೆಗಳ ಪರಿಸ್ಥಿತಿ ಬದಲಾಗಿತು. ನಂತರದ ದಶಕಗಳಲ್ಲಿ ಹಳೆಯ ಯಂತ್ರೋಪಕರಣಗಳು, ಕಾರ್ಮಿಕ ಸಮಸ್ಯೆಗಳು, ಹೆಚ್ಚುತ್ತಿರುವ ವೆಚ್ಚ ಮತ್ತು ಕೈಗಾರಿಕಾ ಸ್ಪರ್ಧೆ ಮುಂತಾದ ಕಾರಣಗಳಿಂದ Binny ಸಂಸ್ಥೆಯ ಹಲವು ವ್ಯವಹಾರಗಳು ದುರ್ಬಲವಾದವು.

1969ರಲ್ಲಿ Buckingham & Carnatic Company, Bangalore Woollen, Cotton & Silk Mills, Madura Company, Ganges Transport & Trading Company ಸೇರಿದಂತೆ ಹಲವು ಸಂಸ್ಥೆಗಳನ್ನು ವಿಲೀನಗೊಳಿಸಿ Binny Limited ರೂಪಿಸಲಾಯಿತು. ಆದರೆ ನಷ್ಟಗಳು, ಹಳೆಯ ಯಂತ್ರೋಪಕರಣಗಳು, ಹೆಚ್ಚುವರಿ ಕಾರ್ಮಿಕ ಬಲ ಮತ್ತು ಇತರ ಸಮಸ್ಯೆಗಳು ಮುಂದುವರಿದವು. Binny Limited ಅನ್ನು 1993ರಲ್ಲಿ BIFR ‘sick unit’ ಎಂದು ಘೋಷಿಸಿತ್ತು.

1996ರಲ್ಲಿ ಯಂತ್ರಗಳು ನಿಂತವು… 2001ರಲ್ಲಿ ಹೊಸ ಅಧ್ಯಾಯ

ಅಂತಿಮವಾಗಿ ಬಿನ್ನಿ ಮಿಲ್‌ನ ಕಾರ್ಯಾಚರಣೆ 1996ರಲ್ಲಿ ಸ್ಥಗಿತಗೊಂಡಿತು. ದೀರ್ಘಕಾಲದ ನಷ್ಟ, ಕಾರ್ಮಿಕ ಸಮಸ್ಯೆಗಳು ಮತ್ತು ಕೈಗಾರಿಕಾ ಕುಸಿತದಿಂದ ಒಂದು ಶತಮಾನಕ್ಕೂ ಹೆಚ್ಚು ಕಾಲ ಬೆಂಗಳೂರಿನ ಆರ್ಥಿಕ ಬದುಕಿನ ಭಾಗವಾಗಿದ್ದ ಮಿಲ್ ಮೌನಗೊಂಡಿತು. 2001ರಲ್ಲಿ ಮಿಲ್‌ನ ಭೂಮಿಯ ಮಾರಾಟದೊಂದಿಗೆ ಅದರ ಕೈಗಾರಿಕಾ ಯುಗ ಬಹುತೇಕ ಅಂತ್ಯವಾಯಿತು.  ಆದರೆ ಕಟ್ಟಡ ಮಾತ್ರ ಇನ್ನೂ ಕೆಲವು ವರ್ಷಗಳ ಕಾಲ ಹಳೆಯ ಬಿನ್ನಿ ಮಿಲ್‌ನ ನೆನಪನ್ನು ಹೊತ್ತು ನಿಂತಿತ್ತು. ಅಂತಿಮವಾಗಿ ಅದರ ಹಳೆಯ ಕಟ್ಟಡವನ್ನು 2016ರಲ್ಲಿ ನೆಲಸಮಗೊಳಿಸಲಾಯಿತು  ಅಂದರೆ 1996—ಉತ್ಪಾದನೆ ನಿಂತ ವರ್ಷ; 2001—ಭೂಮಿ ಮಾರಾಟದ ಪ್ರಮುಖ ಹಂತ; 2016—ಹಳೆಯ ಕಟ್ಟಡವೇ ನೆಲಸಮವಾದ ವರ್ಷ. ಈ ಮೂರು ದಿನಾಂಕಗಳು ಬಿನ್ನಿ ಮಿಲ್‌ನ ಅಂತಿಮ ಅಧ್ಯಾಯವನ್ನು ಅರ್ಥಮಾಡಿಕೊಳ್ಳಲು ಮುಖ್ಯ.

ಕಾರ್ಖಾನೆ ಹೋದರೂ ‘ಬಿನ್ನಿಪೇಟೆ’ ಉಳಿಯಿತು!

binny3

ಕೈಗಾರಿಕೆ ಹೋದ ನಂತರ ಭೂಮಿಯ ಸ್ವರೂಪ ಬದಲಾಗತೊಡಗಿತು. ಜಾಗತೀಕರಣ, ಹೊಸ ಆರ್ಥಿಕ ನೀತಿಗಳು ಮತ್ತು ಬೆಂಗಳೂರಿನ ವೇಗದ ನಗರೀಕರಣದೊಂದಿಗೆ ಹಳೆಯ ಕೈಗಾರಿಕಾ ಪ್ರದೇಶಗಳು ವಸತಿ ಮತ್ತು ವಾಣಿಜ್ಯ ಪ್ರದೇಶಗಳಾಗಿ ಪರಿವರ್ತನೆಯಾದವು. ಇಂದು ಬಿನ್ನಿಪೇಟೆಯಲ್ಲಿ ಮತ್ತು ಸುತ್ತಮುತ್ತ ಎತ್ತರದ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಕೇಂದ್ರಗಳು ಕಾಣಸಿಗುತ್ತವೆ. ಸಂಪರ್ಕದ ದೃಷ್ಟಿಯಿಂದಲೂ ಈ ಪ್ರದೇಶ ಬಹಳ ಪ್ರಮುಖವಾಗಿದೆ.

eta_mall

ಹೊಸಕೆರೆ ರಸ್ತೆಯ ಬಾಳೆಹಣ್ಣು ಮಾರುಕಟ್ಟೆಯ ಎದುರಿನ ETA Mall ಈ ಹೊಸ ಬಿನ್ನಿಪೇಟೆಯ ಮತ್ತೊಂದು ಸಂಕೇತ. ETA Mallನ ಅಧಿಕೃತ ಮಾಹಿತಿಯ ಪ್ರಕಾರ ಇಲ್ಲಿ 2.8 ಲಕ್ಷ ಚದರ ಅಡಿಗೂ ಹೆಚ್ಚು ಶಾಪಿಂಗ್ ಸ್ಪೇಸ್, Metro Wholesale, Decathlon, Pantaloons ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಮತ್ತು 8-screen Cinepolis ಸೇರಿದಂತೆ ಮನರಂಜನಾ ಸೌಲಭ್ಯಗಳಿವೆ.  ಅಂದರೆ, ಒಮ್ಮೆ ಯಂತ್ರಗಳ ಸದ್ದು ಕೇಳುತ್ತಿದ್ದ ಜಾಗದಲ್ಲಿ ಇಂದು ಮಾಲ್‌ಗಳ ಗದ್ದಲ, ವಾಹನಗಳ ಓಡಾಟ ಮತ್ತು ಆಧುನಿಕ ನಗರ ಜೀವನ ಕಾಣುತ್ತಿದೆ!

ಬಿನ್ನಿಪೇಟೆ ರಾಜಕೀಯ ಇತಿಹಾಸದಲ್ಲೂ ಒಂದು ಅಧ್ಯಾಯ

somanna

ಬಿನ್ನಿಪೇಟೆ ಕೇವಲ ಕೈಗಾರಿಕಾ ಪ್ರದೇಶವಾಗಿರಲಿಲ್ಲ; ಕರ್ನಾಟಕದ ರಾಜಕೀಯದಲ್ಲೂ ಅದು ತನ್ನದೇ ಆದ ಗುರುತು ಮೂಡಿಸಿತ್ತು. 1978ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. 1978ರಲ್ಲಿ ಕಾಂಗ್ರೆಸ್‌ನ I. P. D. Salappa ಶಾಸಕರಾದರೆ, 1983 ಮತ್ತು 1985ರಲ್ಲಿ G. Narayana Kumar ಆಯ್ಕೆಯಾದರು. 1989ರಲ್ಲಿ Naseer Ahmed ಗೆಲುವು ಸಾಧಿಸಿದರು. ನಂತರ V. Somanna 1994, 1999 ಮತ್ತು 2004ರಲ್ಲಿ ಸತತವಾಗಿ ಮೂರು ಬಾರಿ ಗೆದ್ದು ಕ್ಷೇತ್ರದೊಂದಿಗೆ ತಮ್ಮದೇ ಆದ ರಾಜಕೀಯ ಗುರುತನ್ನು ಬೆಳೆಸಿಕೊಂಡರು.

2008ರ ಕ್ಷೇತ್ರ ಮರುವಿಂಗಡಣೆಯ ನಂತರ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರವೇ ಅಸ್ತಿತ್ವ ಕಳೆದುಕೊಂಡಿತು ಮತ್ತು ಅದರ ಪ್ರದೇಶಗಳು ಗೋವಿಂದರಾಜನಗರ ಸೇರಿದಂತೆ ಹೊಸ ಕ್ಷೇತ್ರಗಳ ವ್ಯಾಪ್ತಿಗೆ ಹೋದವು.  ಹೀಗಾಗಿ, ಒಂದು ಕಾಲದಲ್ಲಿ “ಬಿನ್ನಿಪೇಟೆ ಎಂದರೆ ಬಿನ್ನಿ ಮಿಲ್” ಎಂಬ ಗುರುತು ಇದ್ದರೆ, ಮತ್ತೊಂದು ಕಾಲದಲ್ಲಿ “ಬಿನ್ನಿಪೇಟೆ ಎಂದರೆ ಸೋಮಣ್ಣ” ಎನ್ನುವಷ್ಟು ರಾಜಕೀಯವಾಗಿ ಪರಿಚಿತವಾಗಿತ್ತು ಎಂಬುದು ಈ ಪ್ರದೇಶದ ಮತ್ತೊಂದು ಕುತೂಹಲಕಾರಿ ಅಧ್ಯಾಯ.

ಇಂದು ಬಿನ್ನಿಪೇಟೆ… ನಾಳೆಯ ಬೆಂಗಳೂರಿನ ಮತ್ತೊಂದು ಮುಖ

binny2

ಇಂದು ಮಿಲ್ ಇಲ್ಲ. ಸಾವಿರಾರು ಕಾರ್ಮಿಕರ ಸದ್ದು ಇಲ್ಲ. 800 ಮಗ್ಗಗಳ ಗರ್ಜನೆ ಇಲ್ಲ. Binnyston Gardenನ ಹಳೆಯ ರೂಪವೂ ಇಲ್ಲ. ಆದರೆ ‘ಬಿನ್ನಿಪೇಟೆ’ ಎಂಬ ಹೆಸರು ಮಾತ್ರ ಅಚ್ಚಳಿಯದೆ ಉಳಿದಿದೆ.

Angala Parameshwari Temlple in Okalipuram,Bangalore - Temples near me in Bangalore - Justdial

ರಾಜಾಜಿನಗರದ ಕಡೆಯಿಂದ ಮಾಗಡಿ ರಸ್ತೆ ಮೆಟ್ರೋ ಪ್ರದೇಶ, ಅಂಗಾಳ ಪರಮೇಶ್ವರಿ ದೇವಾಲಯದ ಸುತ್ತಮುತ್ತ, ETA Mall, ಹೊಸಕೆರೆ ರಸ್ತೆ, ಚಾಮರಾಜಪೇಟೆ ಕಡೆಗೆ ಸಾಗುವಾಗ ಅಲ್ಲಲ್ಲಿ ಕಾಣುವ ಹಳೆಯ ಕಟ್ಟಡಗಳ ಅವಶೇಷಗಳು, ಹಳೆಯ ರೈಲ್ವೆ ಅಂಡರ್‌ಪಾಸ್‌ಗಳು ಮತ್ತು ಕೆಲವು ಹಳೆಯ ರಸ್ತೆಗಳು—ಇವೆಲ್ಲವೂ ಒಂದು ಕಾಲದಲ್ಲಿ ಇಲ್ಲಿ ಸಾವಿರಾರು ಜನರ ಬದುಕಿನ ಕೇಂದ್ರವಾಗಿದ್ದ ಬಿನ್ನಿ ಮಿಲ್‌ನ ಕಥೆಯನ್ನು ನೆನಪಿಸುತ್ತವೆ.

ಬಿನ್ನಿಪೇಟೆಯ ಕಥೆ ನಮಗೆ ಬೆಂಗಳೂರಿನ ನಗರೀಕರಣದ ಒಂದು ದೊಡ್ಡ ಸತ್ಯವನ್ನು ಹೇಳುತ್ತದೆ: ಒಂದು ಕಾರ್ಖಾನೆ ಕೇವಲ ಉತ್ಪನ್ನಗಳನ್ನು ತಯಾರಿಸುವುದಿಲ್ಲ; ಅದು ಒಂದು ಪ್ರದೇಶವನ್ನೇ ನಿರ್ಮಿಸುತ್ತದೆ. ಉದ್ಯೋಗ ಸೃಷ್ಟಿಸುತ್ತದೆ. ಮನೆಗಳನ್ನು ಕಟ್ಟಿಸುತ್ತದೆ. ಮಾರುಕಟ್ಟೆಗಳನ್ನು ಬೆಳೆಸುತ್ತದೆ. ಜನರನ್ನು ಒಂದೆಡೆ ಸೇರಿಸುತ್ತದೆ. ಕೊನೆಗೆ ಕಾರ್ಖಾನೆ ಮಾಯವಾದರೂ, ಅದರ ಹೆಸರನ್ನು ಒಂದು ಇಡೀ ಪ್ರದೇಶ ತನ್ನ ಗುರುತಾಗಿ ಉಳಿಸಿಕೊಳ್ಳಬಹುದು. ಅದಕ್ಕಾಗಿಯೇ ಇಂದಿನ ಆಧುನಿಕ ಬಿನ್ನಿಪೇಟೆಯ ಪ್ರತಿಯೊಂದು ರಸ್ತೆಯ ಹಿಂದೆ, ಯಂತ್ರಗಳ ಸದ್ದು, ಕಾರ್ಮಿಕರ ಬೆವರು, ಜವಳಿ ಬಟ್ಟೆಯ ಪರಿಮಳ ಮತ್ತು ಶತಮಾನಕ್ಕೂ ಮೀರಿದ ಕೈಗಾರಿಕಾ ನೆನಪು ಅಡಗಿದೆ.

ಬಿನ್ನಿ ಮಿಲ್ ಇಂದು ಇಲ್ಲ… ಆದರೆ ಬಿನ್ನಿಪೇಟೆ ಇದೆ. ಬಿನ್ನಿ ಮಿಲ್‌ನ ಕಟ್ಟಡ ಇಲ್ಲ… ಆದರೆ ಅದರ ಹೆಸರು ಬೆಂಗಳೂರಿನ ಭೂಪಟದಲ್ಲಿದೆ. ಅದೇ ಇತಿಹಾಸದ ವಿಚಿತ್ರ ಶಕ್ತಿ! ಇನ್ನೂ ಹಳೆಯ ಬಿನ್ನಿ ಪೇಟೆಯ ಸೊಗಡನ್ನು ನೆನಪಿಸುವ ಮೂಲಕ ಬಿನ್ನಿ ಪೇಟೆಯ ಗತವೈಭವಕ್ಕೆ ಮನಸ್ಸನ್ನು ಜಾರಿಸುತ್ತದೆ ಎಂದರೂ ಅತಿಶಯವಲ್ಲಾ ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ