ಕಥೆ –  ರಮಾಶ್ರೀ ನಾಡಿಗೇರ್

ಪ್ರೀತಿ ಪ್ರೇಮ ಪ್ರಣಯ ಎಂಬುದು ಅನಾದಿ ಕಾಲದಿಂದಲೂ ಮಾವನ ಹೃದಯಕ್ಕೆ ವೇದ್ಯ. ಪೀಳಿಗೆಯಿಂದ ಪೀಳಿಗೆಗೆ ಇದರ ಅಭಿವ್ಯಕ್ತಿ ಬದಲಾದರೂ ಅದನ್ನು ಒಲ್ಲೆ ಎನ್ನುವವರೂ ಉಂಟೆ…..?

ಸುಭದ್ರಮ್ಮ ಬೆಳಗ್ಗೆಯಿಂದ ಹೊರಬಾಗಿಲಿಗೂ ದೇವರ ಮನೆಗೂ ನಾಲ್ಕಾರು ಬಾರಿ ಓಡಾಡಿದ್ದರು.

“ಅಮ್ಮ….. ಯಾಕೆ ಅಷ್ಟು ಸಾರಿ ಹೊರಗೆ ಒಳಗೆ ಓಡಾಡ್ತಾ ಇದಾಳೆ. ಮೊದ್ಲೇ ಅವಳಿಗೆ ಕಾಲು ನೋವು,” ಕಾಫಿ ತಂದುಕೊಟ್ಟ ಮಡದಿ ಪುಷ್ಪಾರನ್ನು ಪ್ರಶ್ನಿಸಿದ ಅಮರ್‌.

“ಇವತ್ತು ಮಲ್ಲಿಗೆ ಹೂ ಕೊಡೋಳು ಬಂದಿಲ್ಲ. ಅದಕ್ಕೇ ಹೀಗೆ ಓಡಾಡ್ತಾ ಇದಾರೆ,” ಎಂದರು ಪುಷ್ಪಾ ನಸುನಗುತ್ತಾ.

“ಓಹೋ ಅದಾ ವಿಷ್ಯಾ…..” ಎಂದು ನಗುತ್ತಾ ಕಾಫಿ ತೆಗೆದುಕೊಂಡು ಕುಡಿಯತೊಡಗಿದರು.

ರೂಮಿನಿಂದ ಹೊರಬಂದ ಮಗ ವಿಶ್ವಾಸ್‌ ನನ್ನು ನೋಡಿ, “ವಿಶು, ಸರ್ಕಲ್ ಹತ್ರ ಮಲ್ಲಿಗೆ ಹೂ ಸಿಗುತ್ತಾ ನೋಡ್ಕೊಂಡು ಬಾಪ್ಪಾ…. ಇವತ್ತು ಹೂವಿನವಳು ಬಂದಿಲ್ಲ. ನಿಮ್ಮ ಅಜ್ಜಿ ಹೊರಗೂ ಒಳಗೂ ಓಡಾಡಿ ದಣಿಯುತ್ತಾಳೆ,” ಎಂದರು ಅಮರ್‌.

“ಅಜ್ಜಿ…. ಇವತ್ತು ನಿಮ್ಮ ಹೂವಿನ ಹುಡುಗಿ ಬರಲ್ಲ. ಯಾಕೆ ಸುಮ್ನೆ ಆಚೆ ಈಚೆ ಓಡಾಡ್ತೀರಾ…..?” ಎಂದ ವಿಶ್ವಾಸ್‌.

“ಇವತ್ತು ಬರಲ್ವಾ….. ಯಾಕೆ….?” ಮುಗ್ಧವಾಗಿ ಕೇಳುತ್ತಿದ್ದ ಅಜ್ಜಿಯ ಕೆನ್ನೆ ಹಿಂಡುತ್ತಾ, “ಇವತ್ತು ನಿಮ್ಮ ಹೂವಿನ ಹುಡುಗಿ ಗುಲಾಬಿ ಹೂಗಳನ್ನೆಲ್ಲಾ ತೊಗೊಂಡು ಕಾಲೇಜುಗಳ ಹತ್ರ ಹೋಗಿರ್ತಾಳೆ. ಯಾಕಂದ್ರೆ ಇವತ್ತು ವ್ಯಾಲೆಂಟೈನ್‌ ಡೇ…..” ಎಂದ.

“ಎಂಥಾ ಡೇನೋ ಅದು…..” ಎಂದು ಕೇಳಿದ ಅಜ್ಜಿಗೆ, “ಇವತ್ತು ಪ್ರೇಮಿಗಳ ದಿನ ಕಣಜ್ಜಿ….” ಎಂದು ಮೊಮ್ಮಗ ಹೇಳಿದಾಗ ಸುಭದ್ರಮ್ಮನ ಮುಖ ಸಪ್ಪಗಾಯಿತು.

ಅಷ್ಟರಲ್ಲಿ ಒಳ ಬಂದ ಪ್ರೀತಿ, “ಅಜ್ಜಿ, ಇವತ್ತು ನಿನ್ಮ ತುರುಬಿಗೆ ಮಲ್ಲಿಗೆ ದಂಡೆ ಬದಲು ಸಂಪಿಗೆ ದಂಡೆ ಮುಡಿದುಕೊಳ್ಳಿ,” ಎನ್ನುತ್ತಾ ನಾಲ್ಕಾರು ಸಂಪಿಗೆ ಸೇರಿಸಿ ಮಾಡಿದ್ದ ಸಂಪಿಗೆ ದಂಡೆಯನ್ನು ಕೊಟ್ಟಳು.

ತಮ್ಮ ಮನೆಯಲ್ಲೇ ಬಿಟ್ಟ ಸಂಪಿಗೆ ಹೂವನ್ನೇ ದಂಡೆ ಮಾಡಿಕೊಟ್ಟ ಸೊಸೆಯ ಕಡೆ ವಾತ್ಸಲ್ಯದ ನೋಟ ಹರಿಸಿದರು ಪುಷ್ಪಾ. ಮಲ್ಲಿಗೆ ಸಿಗಲಿಲ್ಲ ಎಂಬ ಬೇಸರವಿದ್ದರೂ ಮೊಮ್ಮಗನ ಹೆಂಡತಿ ಕೊಟ್ಟ ಸಂಪಿಗೆ ದಂಡನ್ನೇ ತುರುಬಿಗೆ ಏರಿಸಿಕೊಂಡು ಒಳಗೆ ನಡೆದರು.

ಸುಭದ್ರಮ್ಮ ಎಪ್ಪತ್ತಾರು ವರ್ಷದ ಹಿರಿ ಮುತ್ತೈದೆ. ವೆಂಕಟೇಶರಾಯರನ್ನು ಮದುವೆಯಾಗಿ ಬಂದಾಗ ಅವರಿಗೆ ಹನ್ನೆರಡು ವರ್ಷ, ವೆಂಕಟೇಶರಾಯರಿಗೆ ಹದಿನೆಂಟು ವರ್ಷ. ಎಂಟು ಮಕ್ಕಳನ್ನು ಪಡೆದು ತುಂಬು ಜೀವನ ಕಂಡವರು ಈ ದಂಪತಿಗಳು.

Happy-Family

ಬೆಳಗ್ಗೆ ಪೂಜೆಗೆ ಕೂರುವಾಗ ತಮ್ಮ ತುರುಬಿನಲ್ಲಿ ಮಲ್ಲಿಗೆ ಮುಡಿಯುವುದು ಸುಭದ್ರಮ್ಮನವರಿಗೆ ಅಂದಿನಿಂದಲೂ ಅಭ್ಯಾಸ. ಮಲ್ಲಿಗೆ ಹೂವೆಂದರೆ ಅವರಿಗೆ ಪ್ರಾಣ.

“ಪುಷ್ಪಾ, ನಾನು ಸ್ನಾನ ಮಾಡಿಕೊಂಡು ಬರ್ತೀನಿ. ನೀನು ಬೇಗ ತಿಂಡಿಗೆ ರೆಡಿ ಮಾಡ್ಬಿಡು,” ಎನ್ನುತ್ತಾ ಅಮರ್‌ ಸ್ನಾನಕ್ಕೆ ಹೊರಟರು.

“ಅತ್ತೆ, ಇವತ್ತು ವ್ಯಾಲೆಂಟೈನ್ಸ್ ಡೇ ಪಾರ್ಟಿ ನಮ್ಮ ಫ್ರೆಂಡ್‌ ರೆಸಾರ್ಟ್‌ ನಲ್ಲಿ ಇದೆ. ಇವತ್ತು ಆಫೀಸ್‌ ನಿಂದ ಅಲ್ಲಿಗೇ ಡೈರೆಕ್ಟ್ ಆಗಿ ಹೋಗ್ತೀವಿ. ನಾನು ವಿಶ್ವಾಸ್‌ ಅಲ್ಲೇ ಉಳಿದುಕೊಂಡು ನಾಳೆ ಬರ್ತೀವಿ,” ಎಂದಳು ಸೊಸೆ ಪ್ರೀತಿ.

“ಸರಿ ಕಣ್ಣಮ್ಮಾ….. ಹುಷಾರು! ಎಂಜಾಯ್‌ ಯುವರ್‌ ಡೇ,” ಎಂದು ನಗುತ್ತಾ ಕಳುಹಿಸಿದರು ಪುಷ್ಪಾ.

ತಿಂಡಿ ತಿನ್ನಲು ಮೇಜಿನ ಬಳಿ ಬಂದ ಅಮರ್‌ ಗೆ ತಿಂಡಿ ಬಡಿಸುತ್ತಾ, “ಅತ್ತಿಗೆಗೆ ಸ್ವಲ್ಪ ಹುಷಾರಿಲ್ವಂತೆ…. ಮಧ್ಯಾಹ್ನ ಹೋಗಿ ನೋಡಿಕೊಂಡು ಬರ್ತೀನಿ,” ಎಂದರು ಪುಷ್ಪಾ.

“ಎಷ್ಟೊತ್ತಿಗೆ ಹೊರಡ್ತೀಯಾ…..? ಮಧ್ಯಾಹ್ನ 12ರ ಮೇಲಾದರೆ ನಾನೇ ಬರ್ತೀನಿ. ಒಟ್ಟಿಗೆ ಹೋಗೋಣ,” ಎಂದ ಗಂಡನ ಮಾತಿಗೆ ಒಪ್ಪಿ ಹ್ಞೂಂ ಗುಟ್ಟಿದರು.

ಆಫೀಸ್‌ ಗೆ ಹೊರಟ ಮಗನ ಬಳಿ ಬಂದ ವೆಂಕಟೇಶರಾಯರು, “ನೀನು ಆಫೀಸಿಗೆ ಹೋಗ್ತಾ ನನ್ನನ್ನು ಶಾಸ್ತ್ರಿಗಳ ಮನೆ ಹತ್ತಿರ ಬಿಟ್ಟುಹೋಗಪ್ಪ. ನಿನ್ನೆ ಯಾಕೋ ಬೇಜಾರಿನಲ್ಲಿದ್ದ, ಮಾತನಾಡಿಸಿಕೊಂಡು ಬರ್ತೀನಿ,” ಎಂದರು.

ಹನ್ನೊಂದು ಗಂಟೆಗೆಲ್ಲಾ ಮಧ್ಯಾಹ್ನದ ಅಡುಗೆ ಮುಗಿಸಿ ರೆಡಿ ಆದ ಪುಷ್ಪಾ, “ಅತ್ತೆ, ಮಧ್ಯಾಹ್ನಕ್ಕೆ ಹುಳಿ, ಅನ್ನ, ಪಲ್ಯ ಮಾಡಿಟ್ಟಿದ್ದೀನಿ. ಚಪಾತಿ ಹಾಟ್‌ ಬಾಕ್ಸ್ ನಲ್ಲಿ ಹಾಕಿಟ್ಟಿದ್ದೀನಿ. ಸಂಜೆ ಐದು ಗಂಟೆಯೊಳಗೆ ಬಂದುಬಿಡ್ತೀನಿ. ನೀವು ಹುಷಾರ್‌, ಮತ್ತೆ ಪಾತ್ರೆಗೀತ್ರೇ ತೊಳೀತೀನಿ ಅಂತಾ ಹೋಗ್ಬೇಡಿ,” ಎಂದು ಹೇಳಿ ವೆಂಕಟೇಶರಾಯರಿಗೆ ಫೋನ್‌ ಮಾಡಿ, “ಮಾಲಾ….. ಮನೇಲಿ ಅತ್ತೆ ಒಬ್ರೇ ಇರ್ತಾರೆ. ನಾನು ಬರೋದು ಸಂಜೆ ಆಗುತ್ತೆ…. ನೀವು ಆದಷ್ಟು ಬೇಗ ಮನೆಗೆ ಬಂದುಬಿಡಿ,” ಎಂದು ಹೇಳಿ ಪುಷ್ಪಾ ಹೊರಟರು.

ಅಮರ್‌ ಜೊತೆ ಕಾರಿನಲ್ಲಿ ಹೊರಟರು ಪುಷ್ಪಾ. ಕಾರು ಒಂದು ಒಳ್ಳೇ ಹೋಟೆಲ್ ‌ಮುಂದೆ ನಿಂತಾಗ ಅಚ್ಚರಿಯಿಂದ ಪತಿಯ ಕಡೆ ನೋಡಿದರು. ಫ್ಯಾಮಿಲಿ ರೂಮಿನಲ್ಲಿ ಕುಳಿತು ಅವರಿಗಿಷ್ಟದ ತಿನಿಸು ಸ್ವೀಟ್‌ ಆರ್ಡರ್‌ ಮಾಡಿದ ಅಮರ್‌, ತಿಳಿ ಗುಲಾಬಿ ಬಣ್ಣದ ಸೀರೆಯನ್ನು ಪತ್ನಿ ಪುಷ್ಪಾರ ಕೈಲಿಟ್ಟರು.

ಸೀರೆಯ ಕವರ್‌ ಮೇಲೆ, `ನನ್ನ ಪ್ರತೀ ಜನುಮದ ಒಲವಿಗೆ’ ಎಂಬ ಬರಹ ನೋಡಿ ನಸು ನಾಚಿಕೆಯಿಂದ, “ಏನ್ರೀ ಇದು….” ಎಂದರು.

“ಪ್ರೇಮಿಗಳ ದಿನಾಚರಣೆಯ ಶುಭಾಶಯ ಕಣೇ…..” ಎಂದರು ಅಮರ್‌.

ಪತಿಯ ಕಣ್ಣಲ್ಲಿ ತುಂಬಿದ್ದ ಒಲವಿನ ಧಾರೆಗೆ ಪುಷ್ಪಾ ಕರಗಿಹೋದರು.

ವೆಂಕಟೇಶರಾಯರು ಊಟದ ಹೊತ್ತಿಗೆ ಸರಿಯಾಗಿ ಮನೆಗೆ ಬಂದರು. ತಟ್ಟೆಯಿಟ್ಟ ಸುಭದ್ರಮ್ಮ ಬಿಸಿ ಬಿಸಿ ಅನ್ನ ಬಡಿಸಿದರು. ಅನ್ನದ ಮೇಲೆ ಬಿದ್ದ ಗಟ್ಟಿ ಚಟ್ನಿ ನೋಡಿ ರಾಯರು ಕಣ್ಣರಳಿಸಿದರು. ಅದರ ಮೇಲೆ ಎರಡು ಚಮಚ ಒಳ್ಳೆಣ್ಣೆ ಹಾಕಿದಾಗ, ಖುಷಿಯಿಂದ ಲೊಟ್ಟೆ ಹೊಡೆದರು. ಒಂದು ತುತ್ತು ತಿಂದು, “ಆಹಾ, ಸುಭಿ ಪರಮಾನ್ನ ಕಣೇ. ಒರಳಲ್ಲಿ ರುಬ್ಬಿದ ಗಟ್ಟಿ ಚಟ್ನಿ….. ನೀನೇ ರುಬ್ಬಿದ್ಯಾ….” ಎಂದರು.

ಗಂಡ ಖುಷಿಯಿಂದ ಊಟ ಮಾಡುವುದನ್ನು ನೋಡುವುದೇ ಒಂದು ಹಬ್ಬ ಸುಭದ್ರಮ್ಮನಿಗೆ, “ಹ್ಞೂಂ…. ನಾನೇ ರುಬ್ಬಿದೆ. ಮೊನ್ನೆ ನೀವು ವಿಶು ಹತ್ರ ಹೇಳ್ತಾ ಇದ್ರಲ್ಲ….. ಗಟ್ಟಿ ಚಟ್ನಿ….. ಅದರಲ್ಲೂ ನಾನು ಮಾಡೋ ಗಟ್ಟಿ ಚಟ್ನಿ ಅನ್ನ ತಿನ್ನೋದು ಎಂಥಾ ಸುಖ ಅಂತಾ. ಅದಕ್ಕೆ ನಾನೇ ಮಾಡಿದೆ. ಪುಷ್ಪಾ ಅವರ ಅತ್ತಿಗೆಯನ್ನು ನೋಡ್ಕೊಂಡು ಬರೋಕೆ ಅಂತಾ ಹೋದ್ಲು. ಅವಳು ಹೊರಟ ಮೇಲೆ ಮಾಡಿದೆ. ಮೊದಲೇ ಮಾಡೋಕೆ ಹೋಗಿದ್ರೆ ತಾನೇ ರುಬ್ಬೋಕೆ ಕೂರ್ತಿದ್ಲು,” ಎಂದು ಸೊಸೆ ತಮಗೆ ತೋರುವ ಅಕ್ಕರೆ ನೆನೆದು ಹೇಳಿದರು.

ಸುಭದ್ರಮ್ಮ ಊಟ ಮುಗಿಸಿಕೊಂಡು ರೂಮಿಗೆ ಬರುವಷ್ಟರಲ್ಲಿ, ರಾಯರು ನೋವಿನ ಎಣ್ಣೆ ಬಿಸಿ ಮಾಡಿಕೊಂಡು ಬಂದು ಕೂತಿದ್ದರು, “ಎಲ್ಲಿ ಕಾಲು ಸ್ವಲ್ಪ ಉದ್ದಕ್ಕೆ ಚಾಚು,” ಎಂದರು.

“ನನಗೆ ಕೊಡಿ ನಾನೇ ಹಚ್ಚಿಕೊಳ್ತೀನಿ,” ಎಂದ ಮಡದಿಯ ಮಾತು ಕೇಳದೇ, ತಾವೇ ಕಾಲಿಗೆ ಎಣ್ಣೆ ಹಚ್ಚಲು ಪ್ರಾರಂಭಿಸಿದಾಗ ಸುಭದ್ರಮ್ಮ ನಾಚಿದರು.

“ಇದೇನು ನಾಚಿಗ್ಗೇಡು ಅಂದ್ರೆ….. ಗಂಡ ಹೆಂಡತಿ ಕಾಲು ಒತ್ತೋದು…. ಯಾರಾದ್ರೂ ನೋಡಿದ್ರೆ ಏನ್‌ಅಂದುಕೊಳ್ತಾರೆ,” ಎಂದರು ಹುಸಿಮುನಿಸಿನಿಂದ.

“ಏನಂದುಕೊಳ್ತಾರೆ…. ಪುಣ್ಯ ಮಾಡಿದ್ರು ಅಂದ್ಕೊಳ್ತಾರೆ. ಅಷ್ಟಕ್ಕೂ ಇಲ್ಲಿ ನೋಡೋಕೆ ಯಾರಿದ್ದಾರೆ…..” ಎನ್ನುತ್ತಾ ಹಗುರವಾಗಿ ಮಸಾಜ್‌ ಮಾಡಿದರು.

ಕಾಲು ನೋವಿದ್ದರೂ, ದೇಹ ಸಹಕರಿಸದೇ ಇದ್ದರೂ ತಮಗಾಗಿ ಚಟ್ನಿಯನ್ನು ಒರಳಲ್ಲೇ ರುಬ್ಬಿದ ಪತ್ನಿ ಪ್ರೇಮಕ್ಕೆ ರಾಯರು ಶರಣಾಗಿದ್ದರು.

ತಮ್ಮ ರೂಮಿನಲ್ಲಿದ್ದ ಸ್ಟೂಲಿನ ಮೇಲೆ ಇದ್ದ ಮಲ್ಲಿಗೆ ದಂಡೆ ನೋಡಿ ಸುಭದ್ರಮ್ಮನವರ ಕಣ್ಣು ಅರಳಿತು, “ಮಲ್ಲಿಗೆ ತಂದ್ರಾ….” ಎಂದು ಕೇಳಿದ ಪತ್ನಿಯ ದನಿಯಲ್ಲಿ ಕಣ್ಣಲ್ಲಿ ಮಿನುಗಿದ ಸಂತಸದ ಮಿಂಚು ಕಂಡು ಅಷ್ಟು ದೂರ ಹೋಗಿ ಹುಡುಕಿ ಮಲ್ಲಿಗೆ ದಂಡೆ ತಂದಿದ್ದು ಸಾರ್ಥಕ ಎನಿಸಿತು ರಾಯರಿಗೆ.

ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ತಲೆಮಾರಿನಿಂದ ತಲೆಮಾರಿಗೆ ಬೇರೆಯಾದರೂ ಪ್ರೀತಿಯ ನೀತಿ ಮಾತ್ರ ಒಂದೇ. ಒಲವಿನಧಾರೆ ಆ ಕುಟುಂಬದ ಪ್ರತಿ ಜೋಡಿಯಲ್ಲೂ ಹಸಿರಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ