ಶ್ರಾವಣ ಮಾಸ ಮುಗಿದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆಯೇ, ಭಾರತದ ಬಹುತೇಕ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಮನೆಗಳ ಮುಂದೆ ರಂಗೋಲಿ, ಬಾಗಿಲಿಗೆ ಮಾವಿನ ಎಲೆಗಳ ತೋರಣ, ಹೂವಿನ ಅಲಂಕಾರ, ಸಿಹಿ–ಖಾರದ ತಿಂಡಿಗಳ ತಯಾರಿ… ಎಲ್ಲೆಡೆ ಒಂದೇ ಸಂಭ್ರಮ. ಅದೇ ನಮ್ಮ ಗೌರಿ–ಗಣೇಶ ಹಬ್ಬ! ಗಣೇಶ ಚತುರ್ಥಿ ಎಂದರೆ ಕೇವಲ ಮಕ್ಕಳಿಗೋ, ಮಹಿಳೆಯರಿಗೋ ಅಥವಾ ವಯಸ್ಕರಿಗೋ ಸೀಮಿತವಾದ ಹಬ್ಬವಲ್ಲ. ಆಬಾಲವೃದ್ಧರಾದಿಯಾಗಿ ಎಲ್ಲರೂ ಒಂದಾಗಿ ಆಚರಿಸುವ ಸಾರ್ವತ್ರಿಕ ಹಬ್ಬ ಇದು.

ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದರ ಜೊತೆಗೆ, ಸಣ್ಣ ಗಲ್ಲಿಗಳಿಂದ ಬಡಾವಣೆಗಳವರೆಗೆ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತವೆ. ಕೆಲವೆಡೆ ಒಂದು ದಿನ, ಕೆಲವೆಡೆ ಐದು, ಏಳು ಅಥವಾ ಹನ್ನೊಂದು ದಿನಗಳ ಕಾಲ ಉತ್ಸವ ನಡೆಯುತ್ತದೆ. ಇನ್ನೂ ಕೆಲವು ಕಡೆ ಸ್ಥಳೀಯ ಸಂಪ್ರದಾಯಗಳ ಪ್ರಕಾರ ನಂತರದ ದಿನಗಳಲ್ಲೂ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಆದರೆ ಗಣೇಶ ಹಬ್ಬದ ಹಿಂದೆ ಇರುವ ಕಥೆ ಕೇವಲ ಒಂದು ಪುರಾಣಕಥೆಯಲ್ಲ. ಇದರೊಳಗೆ ಪುರಾಣವಿದೆ, ತತ್ವಜ್ಞಾನವಿದೆ, ಸಾಮಾಜಿಕ ಸಂದೇಶವಿದೆ, ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ, ಕಲೆ–ಸಂಸ್ಕೃತಿಯಿದೆ ಮತ್ತು ಪರಿಸರದ ಕುರಿತ ಚಿಂತನೆಯೂ ಇದೆ. ಹಾಗಾದರೆ ಗಣೇಶ ಚತುರ್ಥಿಯ ಈ ಬಹುಮುಖ ಇತಿಹಾಸವನ್ನು ತಿಳಿಯೋಣ ಬನ್ನಿ.

ಶ್ರೀ ಗಣೇಶನ ಜನನದ ಕಥೆ

ಶ್ರೀ ಗಣೇಶನ ಜನನದ ಕುರಿತು ವಿವಿಧ ಪುರಾಣಗಳಲ್ಲಿ ಬೇರೆಬೇರೆ ನಿರೂಪಣೆಗಳು ಕಂಡುಬರುತ್ತವೆ. ಜನಪ್ರಿಯವಾಗಿರುವ ಕಥೆಯ ಪ್ರಕಾರ, ಒಂದು ದಿನ ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವಾಗ ಯಾರೂ ತನ್ನ ಅಂತಃಪುರದೊಳಗೆ ಪ್ರವೇಶಿಸಬಾರದು ಎಂದು ನಿರ್ಧರಿಸುತ್ತಾಳೆ. ತನ್ನ ದೇಹಕ್ಕೆ ಹಚ್ಚಿಕೊಳ್ಳುವ ಅರಿಶಿನ, ಚಂದನ ಮತ್ತು ಇತರ ಲೇಪನಗಳಿಂದ ಪಾರ್ವತಿಯ ಮೈ ಮೇಲಿನ ಕೊಳೆ ಎಂದೇ ಬಹುತೇಕರು ನಂಬಿಸಿರುವುದು ಹುನ್ನಾರ) ಒಂದು ಬಾಲಕನ ಆಕೃತಿಯನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬುತ್ತಾಳೆ. ನಾನು ಸ್ನಾನ ಮುಗಿಸಿ ಬರುವವರೆಗೆ ಯಾರನ್ನೂ ಒಳಗೆ ಬಿಡಬಾರದು ಎಂದು ಆ ಬಾಲಕನಿಗೆ ಆಜ್ಞಾಪಿಸುತ್ತಾಳೆ.

ಅಷ್ಟರಲ್ಲಿ ಶಿವನು ತನ್ನ ಗಣಗಳೊಂದಿಗೆ ಅಲ್ಲಿಗೆ ಬರುತ್ತಾನೆ. ಶಿವನನ್ನು ಆ ಬಾಲಕ ಹಿಂದೆಂದೂ ನೋಡಿರಲಿಲ್ಲ. ಹೀಗಾಗಿ ಪಾರ್ವತಿಯ ಆಜ್ಞೆಯನ್ನು ಪಾಲಿಸಿದ ಬಾಲಕ, ನನ್ನ ತಾಯಿಯ ಅನುಮತಿಯಿಲ್ಲದೆ ಯಾರನ್ನೂ ಒಳಗೆ ಬಿಡುವುದಿಲ್ಲ”ಎಂದು ಶಿವನನ್ನೇ ತಡೆಯುತ್ತಾನೆ. ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ತೀವ್ರವಾಗುತ್ತದೆ. ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಆ ಬಾಲಕನ ಶಿರವನ್ನು ಕಡಿದುಹಾಕುತ್ತಾನೆ. ಇದನ್ನು ಕಂಡ ಪಾರ್ವತಿ ದೇವಿ ದುಃಖದಿಂದ ತನ್ನ ಮಗನನ್ನು ಬದುಕಿಸಬೇಕೆಂದು ಶಿವನಲ್ಲಿ ಬೇಡಿಕೊಳ್ಳುತ್ತಾಳೆ.

ganesha1

ಕೊನೆಗೆ ಶಿವನು ತನ್ನ ಗಣಗಳಿಗೆ ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿರುವ ಮೊದಲ ಜೀವಿಯ ತಲೆಯನ್ನು ತರಲು ಸೂಚಿಸುತ್ತಾನೆ. ಗಣಗಳು ಹುಡುಕಿದಾಗ ಅಂತಿಮವಾಗಿ ಅವರಿಗೆ ಆನೆಯೊಂದು ಸಿಗುತ್ತದೆ. ಆನೆಯ ತಲೆಯನ್ನು ತಂದು ಬಾಲಕನ ದೇಹಕ್ಕೆ ಜೋಡಿಸಿ ಶಿವನು ಅವನಿಗೆ ಪುನರ್ಜೀವ ನೀಡುತ್ತಾನೆ. ನಂತರ ಅವನನ್ನು ತನ್ನ ಗಣಗಳ ಅಧಿಪತಿಯನ್ನಾಗಿ ಮಾಡಿ— ಗಣಪತಿ, ಗಣೇಶ ಎಂಬ ಹೆಸರು ನೀಡುತ್ತಾನೆ.

ಮತ್ತು ಯಾವುದೇ ಶುಭಕಾರ್ಯ, ಪೂಜೆ ಅಥವಾ ಧಾರ್ಮಿಕ ವಿಧಿ ಆರಂಭಿಸುವ ಮೊದಲು ಗಣೇಶನನ್ನು ಪೂಜಿಸಬೇಕು ಎಂಬ ವರವನ್ನು ನೀಡುತ್ತಾನೆ. ಆ ಕಾರಣಕ್ಕೇ ಗಣೇಶನಿಗೆ, ವಿಘ್ನೇಶ್ವರ, ವಿಘ್ನವಿನಾಶಕ, ಗಣಪತಿ, ಏಕದಂತ, ಲಂಬೋದರ, ಗಜಾನನ ಮುಂತಾದ ಅನೇಕ ಹೆಸರುಗಳು ಬಂದಿವೆ.

ಗಣೇಶನ ಆನೆಯ ತಲೆಯ ಹಿಂದಿನ ತತ್ವವೇನು?

ಗಣೇಶನ ಆನೆಯ ತಲೆಯ ಕಥೆಯನ್ನು ಕೇವಲ ಪೌರಾಣಿಕ ಘಟನೆಯಾಗಿ ನೋಡುವುದಕ್ಕಿಂತ ಅದರೊಳಗಿನ ಸಂಕೇತವನ್ನು ಅರ್ಥಮಾಡಿಕೊಳ್ಳುವುದೂ ಆಸಕ್ತಿದಾಯಕ. ಆನೆ ಭಾರತೀಯ ಸಂಸ್ಕೃತಿಯಲ್ಲಿ ಬುದ್ಧಿವಂತಿಕೆ, ಶಕ್ತಿ, ಸ್ಮರಣಶಕ್ತಿ, ಸ್ಥೈರ್ಯ ಮತ್ತು ನಾಯಕತ್ವದ ಸಂಕೇತ.

  • ಆನೆಯ ದೊಡ್ಡ ಕಿವಿಗಳು : ಹೆಚ್ಚು ಕೇಳು, ಕಡಿಮೆ ಮಾತನಾಡು ಎಂಬ ಸಂದೇಶ.
  • ಸಣ್ಣ ಕಣ್ಣುಗಳು : ಏಕಾಗ್ರತೆಯಿಂದ ನೋಡು ಎಂಬ ಸಂದೇಶ.
  • ಉದ್ದವಾದ ಸೊಂಡಿಲು: ಬಲ ಮತ್ತು ಸೂಕ್ಷ್ಮತೆ ಎರಡನ್ನೂ ಹೊಂದಿರು ಎಂಬ ಸಂದೇಶ.
  • ದೊಡ್ಡ ಹೊಟ್ಟೆ:  ಜೀವನದಲ್ಲಿ ಬರುವ ಒಳ್ಳೆಯ–ಕೆಟ್ಟ ಅನುಭವಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೊಂದಿರು ಎಂಬ ತಾತ್ವಿಕ ಸಂದೇಶವನ್ನು ಸಂಕೇತಿಸುತ್ತದೆ ಎಂದು ಹಲವು ವ್ಯಾಖ್ಯಾನಗಳು ಹೇಳುತ್ತವೆ.

ಹೀಗಾಗಿ ಗಣೇಶನ ರೂಪವೇ ಒಂದು ಜೀವನ ಪಾಠಗಳ ಸಂಕಲನದಂತಿದೆ.

ಶಿವನು ಕತ್ತರಿಸಿದ ಗಣೇಶನ ತಲೆ ಎಲ್ಲಿದೆ?

WhatsApp Image 2024-09-08 at 11.09.37

ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಅಂದು ಶಿವನಿಂದ ಕತ್ತರಿಸಲ್ಪಟ್ಟ ಬಾಲಕನ ಶಿರವನ್ನು ಇಂದಿಗೂ ಸಹಾ ದೇವಭೂಮಿಯಾದ ಉತ್ತರಾಖಂಡ್​ನ ಪಿಥೋರ್ಗಢ ಜಿಲ್ಲೆಯ ಪಾತಾಳ ಭುವನೇಶ್ವರಿ ಎಂಬ  ಭೂಮಿಯ ಒಳಗಡೆ ಇರುವ ಗುಹೆಯಲ್ಲಿ ಲಿಂಗಾಕಾರದಲ್ಲಿ ಕಾಣ ಬಹುದಾಗಿದೆ. ಸ್ಕಂದ ಪುರಾಣದಲ್ಲಿ ಈ ಪಾತಾಳ ಭುವನೇಶ್ವರದ ಬಗ್ಗೆ ಉಲ್ಲೇಖವಿದ್ದು, ಬಹುಕಾಲದವರೆಗೂ ಈ ಗುಹೆಗೆ ಯಾರೂ ಸಹಾ ಭೇಟಿ ನೀಡದ ಕಾರಣ ಅದು ಅಗೋಚರವಾಗಿಯೇ ಇತ್ತು. ಕ್ರಿ.ಶ. 8ನೇ–9ನೇ ಶತಮಾನದಲ್ಲಿ  ಆದಿ ಗುರು ಶ್ರೀ ಶಂಕರಾಚಾರ್ಯರು ಮೊದಲ ಬಾರಿ ಈ ಗುಹೆಯನ್ನು ಪತ್ತೆಹಚ್ಚಿದ್ದಲ್ಲದೇ ಅದಕ್ಕೊಂದು ಹೊಸ ಕಾಯಕಲ್ಪ ನೀಡಿದ ನಂತರ  ಭಕ್ತಾದಿಗಳು ಅಲ್ಲಿಗೆ ಭೇಟಿ ನೀಡತೊಡಗಿದರು. ಈ ಗುಹೆಯಲ್ಲಿ ಕೇವಲ ಗಣೇಶನ ಮೂರ್ತಿಯಷ್ಟೇ ಅಲ್ಲದೇ ಹಿಂದೂಗಳು  ನಂಬುವ 33 ಕೋಟಿ ದೇವರುಗಳೂ ಸಹಾ  ಇಲ್ಲಿಯೇ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಈ ಪಾತಾಳಭುವನೇಶ್ವರಿಯನ್ನು ತಲುಪಲು ಅತ್ಯಂತ ಕಡಿದಾದ ಮತ್ತು ಅಷ್ಟೇ ದುರ್ಗಮವಾದ ಹಾದಿಯಲ್ಲಿ ಹೋಗಿ ಒಂದು ಬಾರಿ ಒಬ್ಬರು ಮಾತ್ರ ಇಳಿದು ಹೋಗುವಷ್ಟು ಜಾಗವಿರುವ, ಭೂಮಿಯಿಂದ ಸುಮಾರು 90 ಆಡಿ ಆಳದಲ್ಲಿರುವ ಗುಹೆಯೊಳಗೆ ಇಳಿದದಲ್ಲಿ ಲಿಂಗರೂಪದಲ್ಲಿರುವ ಗಣೇಶನ ಶಿರದ ದರ್ಶನವನ್ನು ಪಡೆಯಬಹುದಾಗಿದೆ.

ಗಣೇಶನಿಗೆ ಚಂದ್ರನ ಶಾಪ

ಒಮ್ಮೆ ಬಾಲ ಗಣೇಶನು ತನ್ನ ಅಜ್ಜನ ಮನೆಗೆ ಹೋಗಿ ಮರಳಿ ಬರುತ್ತಿದ್ದನು. ಗಣೇಶನಿಗೆ ಮೋದಕಗಳೆಂದರೆ ಬಹಳ ಪ್ರೀತಿ. ಅಂದು ಕೂಡ ಸಾಕಷ್ಟು ಮೋದಕಗಳನ್ನು ತಿಂದು, ಅವುಗಳ ಭಾರದಿಂದ ಹೊಟ್ಟೆ ಉಬ್ಬಿಕೊಂಡಿತ್ತು. ರಾತ್ರಿ ವೇಳೆಯಲ್ಲಿ ಗಣೇಶನು ತನ್ನ ವಾಹನವಾದ ಮೂಷಕದ ಮೇಲೆ ಕುಳಿತು ಮನೆಗೆ ಹಿಂದಿರುಗುತ್ತಿದ್ದಾಗ, ದಾರಿಯಲ್ಲಿ ಮೂಷಕವು ಯಾವುದೋ ಕಾರಣಕ್ಕೆ ಎಡವಿ ಬಿದ್ದಿತು. ಮೂಷಕದ ಮೇಲಿದ್ದ ಗಣೇಶನೂ ಕೆಳಗೆ ಬಿದ್ದನು. ಅವನ ಹೊಟ್ಟೆಯಲ್ಲಿದ್ದ ಮೋದಕಗಳು ಚದುರಿಹೋದವು. ಗಣೇಶನು ಅವುಗಳನ್ನು ಮತ್ತೆ ಎತ್ತಿಕೊಂಡು ಹೊಟ್ಟೆಗೆ ಕಟ್ಟಿಕೊಂಡು ಮುಂದಕ್ಕೆ ಸಾಗಲು ಪ್ರಯತ್ನಿಸಿದನು.

ಆ ಸಮಯದಲ್ಲಿ ಆಕಾಶದಲ್ಲಿ ಪ್ರಕಾಶಿಸುತ್ತಿದ್ದ ಚಂದ್ರನು ಗಣೇಶನ ಈ ಸ್ಥಿತಿಯನ್ನು ನೋಡಿ ನಕ್ಕನು. ತನ್ನ ಸೌಂದರ್ಯ ಮತ್ತು ರೂಪದ ಬಗ್ಗೆ ಗರ್ವ ಹೊಂದಿದ್ದ ಚಂದ್ರನ ನಗುವಿನಿಂದ ಗಣೇಶನಿಗೆ ಕೋಪ ಬಂತು. “ನನ್ನನ್ನು ನೋಡಿ ನಗುತ್ತೀಯಾ? ನಿನ್ನ ರೂಪದ ಗರ್ವದಿಂದ ನೀನು ಇತರರನ್ನು ಹಾಸ್ಯ ಮಾಡುತ್ತಿದ್ದೀಯ. ಇನ್ನು ಮುಂದೆ ನಿನ್ನನ್ನು ನೋಡುವವರಿಗೆ ಅಪವಾದ ಉಂಟಾಗಲಿ!” ಎಂದು ಗಣೇಶನು ಚಂದ್ರನಿಗೆ ಶಾಪ ನೀಡಿದನೆಂದು ಪುರಾಣಕಥೆ ಹೇಳುತ್ತದೆ. ಗಣೇಶನ ಶಾಪದಿಂದ ಭಯಗೊಂಡ ಚಂದ್ರನು ತನ್ನ ತಪ್ಪನ್ನು ಅರಿತು ಗಣೇಶನನ್ನು ಸ್ತುತಿಸಿ ಕ್ಷಮೆ ಕೇಳಿದನು. ಚಂದ್ರನ ಪ್ರಾರ್ಥನೆಗೆ ಪ್ರಸನ್ನನಾದ ಗಣೇಶನು ಶಾಪವನ್ನು ಸಂಪೂರ್ಣವಾಗಿ ಹಿಂಪಡೆಯದೆ, ಅದರ ಪರಿಣಾಮವನ್ನು ಕಡಿಮೆ ಮಾಡಿದನು.

ಅದರಂತೆ ಭಾದ್ರಪದ ಶುಕ್ಲ ಚತುರ್ಥಿಯಂದು ಚಂದ್ರನನ್ನು ನೋಡುವುದರಿಂದ ಅಪವಾದ ಅಥವಾ ಸುಳ್ಳು ಆರೋಪ ಉಂಟಾಗಬಹುದು ಎಂಬ ನಂಬಿಕೆ ಬೆಳೆದಿದೆ. ಇದೇ ಕಾರಣದಿಂದ ಗಣೇಶ ಚತುರ್ಥಿಯಂದು ಚಂದ್ರದರ್ಶನ ಮಾಡಬಾರದು ಎಂಬ ಸಂಪ್ರದಾಯವೂ ಇದೆ.

ಶ್ರೀಕೃಷ್ಣನಿಗೆ ಬಂದ ಅಪವಾದ ಮತ್ತು  ಶಮಂತಕೋಪಾಖ್ಯಾನದ ಹಿನ್ನೆಲೆ

ಈ ಕಥೆಯ ಮುಂದಿನ ಪ್ರಮುಖ ಭಾಗವೇ ಶಮಂತಕೋಪಾಖ್ಯಾನ. ದ್ವಾರಕೆಯಲ್ಲಿ ಸತ್ರಾಜಿತ್ ಎಂಬ ಯಾದವನಿಗೆ ಸೂರ್ಯದೇವನ ಅನುಗ್ರಹದಿಂದ ಶಮಂತಕ ಮಣಿ ದೊರೆಯುತ್ತದೆ. ಅತ್ಯಂತ ಪ್ರಭಾವಶಾಲಿಯಾಗಿದ್ದ ಆ ಮಣಿಯನ್ನು ಧರಿಸಿದ ಸತ್ರಾಜಿತನನ್ನು ಕಂಡ ಜನರು ಸೂರ್ಯದೇವನೇ ಬಂದಿದ್ದಾನೆಂದು ಭಾವಿಸುತ್ತಾರೆ. ನಂತರ ಸತ್ರಾಜಿತ್ ತನ್ನ ಸಹೋದರ ಪ್ರಸೇನನಿಗೆ ಆ ಮಣಿಯನ್ನು ನೀಡುತ್ತಾನೆ. ಪ್ರಸೇನನು ಅದನ್ನು ಧರಿಸಿಕೊಂಡು ಬೇಟೆಗೆ ಹೋದಾಗ ಸಿಂಹವೊಂದು ಅವನನ್ನು ಕೊಂದು ಮಣಿಯನ್ನು ತೆಗೆದುಕೊಂಡು ಹೋಗುತ್ತದೆ. ಆ ಸಿಂಹವನ್ನು ಜಾಂಬವಂತನು ಕೊಂದು ಮಣಿಯನ್ನು ತನ್ನ ಗುಹೆಗೆ ತೆಗೆದುಕೊಂಡು ಹೋಗುತ್ತಾನೆ. ಪ್ರಸೇನನು ಕಾಣೆಯಾಗಿದ್ದರಿಂದ, ಶ್ರೀಕೃಷ್ಣನೇ ಶಮಂತಕ ಮಣಿಗಾಗಿ ಪ್ರಸೇನನನ್ನು ಕೊಂದಿರಬೇಕು ಎಂಬ ಅಪವಾದ ದ್ವಾರಕೆಯಲ್ಲಿ ಹರಡುತ್ತದೆ.

ಶ್ರೀಕೃಷ್ಣನು ತನ್ನ ಮೇಲಿನ ಈ ಆರೋಪವನ್ನು ನಿವಾರಿಸಿಕೊಳ್ಳಲು ಪ್ರಸೇನನ ಹೆಜ್ಜೆ ಗುರುತುಗಳನ್ನು ಅನುಸರಿಸಿ ಹೋಗುತ್ತಾನೆ. ಪ್ರಸೇನನ ಮೃತದೇಹ, ನಂತರ ಸಿಂಹದ ಹೆಜ್ಜೆ ಗುರುತುಗಳನ್ನು ಕಂಡು, ಕೊನೆಗೆ ಜಾಂಬವಂತನ ಗುಹೆಯನ್ನು ತಲುಪುತ್ತಾನೆ. ಅಲ್ಲಿ ಜಾಂಬವಂತನೊಂದಿಗೆ ದೀರ್ಘ ಯುದ್ಧ ನಡೆಯುತ್ತದೆ. ಕೊನೆಗೆ ಜಾಂಬವಂತನು ಕೃಷ್ಣನ ಮಹಿಮೆಯನ್ನು ಅರಿತು, ಶಮಂತಕ ಮಣಿಯ ಜೊತೆಗೆ ತನ್ನ ಪುತ್ರಿ ಜಾಂಬವತಿಯನ್ನು ಕೃಷ್ಣನಿಗೆ ವಿವಾಹವಾಗಿ ನೀಡುತ್ತಾನೆ. ನಂತರ ಶಮಂತಕ ಮಣಿ ಸತ್ರಾಜಿತನಿಗೆ ಮರಳುತ್ತದೆ. ಹೀಗೆ ಶ್ರೀಕೃಷ್ಣನ ಮೇಲೆ ಬಂದಿದ್ದ ಕಳಂಕ ಮತ್ತು ಸುಳ್ಳು ಆರೋಪ ನಿವಾರಣೆಯಾಗುತ್ತದೆ.

ಈ ಕಥೆಗೆ ಗಣೇಶ ಚತುರ್ಥಿಯ ಸಂಬಂಧ

ಜನಪದ–ಪುರಾಣ ಪರಂಪರೆಯಲ್ಲಿ, ಗಣೇಶನ ಶಾಪದಿಂದ ಉಂಟಾಗಬಹುದಾದ “ಅಪವಾದ ದೋಷ”ಕ್ಕೆ ಶಮಂತಕೋಪಾಖ್ಯಾನವನ್ನು ಪರಿಹಾರವಾಗಿ ಕೇಳುವುದು ಅಥವಾ ಓದುವುದು ಎಂಬ ನಂಬಿಕೆ ಪ್ರಸಿದ್ಧವಾಗಿದೆ. ಆದ್ದರಿಂದ ಗಣೇಶ ಚತುರ್ಥಿಯಂದು ಅಕಸ್ಮಾತ್ ಚಂದ್ರದರ್ಶನವಾದರೆ: ಶಮಂತಕೋಪಾಖ್ಯಾನವನ್ನು ಕೇಳಬೇಕು/ಓದಬೇಕು. ಎಂಬ ಆಚರಣೆ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದರ ಆಂತರಿಕ ಸಂದೇಶವೂ ಬಹಳ ಅರ್ಥಪೂರ್ಣವಾಗಿದೆ—ನಿಜವಾದ ತಪ್ಪು ಮಾಡದಿದ್ದರೂ ವ್ಯಕ್ತಿಯ ಮೇಲೆ ಅಪವಾದ ಬರಬಹುದು; ಆದರೆ ಸತ್ಯವನ್ನು ಹುಡುಕಿ ಹೊರತೆಗೆದರೆ ಕಳಂಕ ನಿವಾರಣೆಯಾಗುತ್ತದೆ. ಶ್ರೀಕೃಷ್ಣನ ಶಮಂತಕ ಮಣಿ ಪ್ರಸಂಗವು ಇದಕ್ಕೆ ಪೌರಾಣಿಕ ಉದಾಹರಣೆಯಾಗಿ ಕಾಣುತ್ತದೆ.

ಗಣೇಶನ ಹಬ್ಬ ಮನೆಗಳಿಂದ ಬೀದಿಗೆ ಬಂದದ್ದು ಹೇಗೆ?

ಶತಮಾನಗಳಿಂದ ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶನ ಆರಾಧನೆ ನಡೆಯುತ್ತಲೇ ಬಂದಿದೆ. ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ಗಣೇಶನ ಪೂಜೆ ಮಾಡುವ ಸಂಪ್ರದಾಯವೂ ವ್ಯಾಪಕವಾಗಿದೆ. ಆದರೆ ಗಣೇಶೋತ್ಸವಕ್ಕೆ ಮತ್ತೊಂದು ದೊಡ್ಡ ತಿರುವು ಬಂದದ್ದು 19ನೇ ಶತಮಾನದಲ್ಲಿ. ಅದು ಭಾರತದ ಸ್ವಾತಂತ್ರ್ಯ ಹೋರಾಟದ ಕಾಲ. ಬ್ರಿಟಿಷರ ಆಡಳಿತದ ವಿರುದ್ಧ ಜನರನ್ನು ಸಂಘಟಿಸುವುದು ಸುಲಭವಾಗಿರಲಿಲ್ಲ. ಜಾತಿ, ಧರ್ಮ, ಭಾಷೆ ಮತ್ತು ಸಾಮಾಜಿಕ ವಿಭಜನೆಗಳಿದ್ದವು. ಇಂತಹ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಜನಸಾಮಾನ್ಯರನ್ನು ಒಂದೆಡೆ ಸೇರಿಸುವ ಸಾಮಾಜಿಕ–ರಾಷ್ಟ್ರೀಯ ವೇದಿಕೆಯಾಗಿ ಬಳಸುವ ಮಹತ್ವದ ಪ್ರಯತ್ನ ಮಾಡಿದರು.

1890ರ ದಶಕದಲ್ಲಿ, ವಿಶೇಷವಾಗಿ 1893ರಲ್ಲಿ, ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಹೊಸ ರೂಪ ನೀಡಲಾಯಿತು. 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ಸಂಪ್ರದಾಯಸ್ಥರ ಮನೆಗಳಲ್ಲಿ ಮಾತ್ರವೇ ಹಬ್ಬವಾಗಿ ಅಚರಿಸಲ್ಪಡುತ್ತಿದ್ದ ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಕರೆ ನೀಡಿದ್ದಲ್ಲದೇ, ಅಂದಿನಿಂದ ಅನಂತ ಚತುರ್ದಶಿಯವರೆಗೂ ಸುಮಾರು 11 ದಿನಗಳ ಕಾಲ ಅದ್ದೂರಿಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಅನ್ನದಾನವನ್ನೂ ಸಹಾ ಮಾಡುವ ಮೂಲಕ ಹಿಂದೂಗಳಲ್ಲಿ ಏಕತೆಯ ಮಂತ್ರವನ್ನು ಬಿತ್ತಿದ್ದಲ್ಲದೇ  ಗಣೇಶನ ಮೂರ್ತಿಯನ್ನು ಹತ್ತಿರದ ಕೆರೆ, ನದಿ ಸಮುದ್ರಗಳಲ್ಲಿ ವಿಸರ್ಜನಾ ವಿಧಿಯನ್ನು ಜಾರಿಗೆ ತಂದರು. ಈ ಗಣೇಶೋತ್ಸವದಲ್ಲಿ ತಿಲಕರು ಮಾಡಿದ ದಿಕ್ಸೂಚಿ ಭಾಷಣದಿಂದ ಸ್ವಾತಂತ್ರ್ಯದ ಕಿಡಿ ಹಬ್ಬಿಸಿತು.

ಭಾರತ ಸರ್ಕಾರದ Azadi Ka Amrit Mahotsav ದಾಖಲೆಯೂ ತಿಲಕರು 1890ರ ದಶಕದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಗ್ಗೂಡಿಸಿ ರಾಷ್ಟ್ರೀಯ ಭಾವನೆ ಮೂಡಿಸಲು ಪ್ರಯತ್ನಿಸಿದರು ಎಂದು ದಾಖಲಿಸುತ್ತದೆ.  ಹೀಗೆ ಮನೆಯೊಳಗಿನ ಗಣೇಶನು ಬೀದಿಗೆ ಬಂದ. ಬೀದಿಯ ಗಣೇಶ, ಸಮಾಜವನ್ನು ಒಗ್ಗೂಡಿಸಿದ. ಸಮಾಜದ ಒಗ್ಗಟ್ಟು, ಸ್ವಾತಂತ್ರ್ಯದ ಚಳವಳಿಗೆ ಜನಶಕ್ತಿಯಾಗಿ ಮಾರ್ಪಟ್ಟಿತು.

ಅಂದಿನಿಂದಲೂ ಅನೂಚಾನವಾಗಿ ಸಕಲ ಸನಾತನಿಗಳ ಮನೆಯಲ್ಲಿ ಭಾದ್ರಪದಮಾಸದ ಚೌತಿಯಂದು ಗಣೇಶನ ಹಬ್ಬವನ್ನು ಮಾಡುವ ಸಂಪ್ರದಾಯ ರೂಢಿಗೆ ಬಂದಿದ್ದಲ್ಲದೇ, ಪ್ರತಿಯೊಂದು ಶುಭಕಾರ್ಯಗಳನ್ನು ಮಾಡುವ ಮುನ್ನಾ ಗಣೇಶನ ಪೂಜೆಯನ್ನು ಮಾಡುವ ಮೂಲಕ ಗಣೇಶ ಒಂದು ರೀತಿಯಲ್ಲಿ ಯಾವುದೇ ಜಾತಿಯ ಹಂಗಿಲ್ಲದೇ ಸಾರ್ವತ್ರಿಕವಾಗಿ ಒಪ್ಪಿಕೊಂಡ ದೇವರಾಗಿ ಎಲ್ಲರ ಮನೆ ಮತ್ತು ಮನಗಳಲ್ಲಿ ಮೂಡಿದ್ದ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಯಾವುದೇ ಧರ್ಮ, ಜಾತಿಯ ಹಂಗಿಲ್ಲದ್ದೇ ಸಕಲ ಭಾರತೀಯರನ್ನೂ ಒಗ್ಗೂಡಿಸುವ ಸಲುವಾಗಿ 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ಸಂಪ್ರದಾಯಸ್ಥರ ಮನೆಗಳಲ್ಲಿ ಮಾತ್ರವೇ ಹಬ್ಬವಾಗಿ ಅಚರಿಸಲ್ಪಡುತ್ತಿದ್ದ ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಕರೆ ನೀಡಿದ್ದಲ್ಲದೇ,

ಗಣೇಶೋತ್ಸವವೇ ಒಂದು ಸಾಂಸ್ಕೃತಿಕ ವೇದಿಕೆಯಾಯಿತು

ತಿಲಕರ ಕಾಲದ ಸಾರ್ವಜನಿಕ ಗಣೇಶೋತ್ಸವ ಕೇವಲ ಪೂಜೆ ಮತ್ತು ಮೆರವಣಿಗೆಯಾಗಿರಲಿಲ್ಲ. ಅದರ ಜೊತೆಗೆ,

  • ದೇಶಭಕ್ತಿ ಭಾಷಣಗಳು
  • ನಾಟಕಗಳು
  • ಸಂಗೀತ
  • ಭಜನೆಗಳು
  • ಉಪನ್ಯಾಸಗಳು
  • ಅನ್ನದಾನ
  • ಸಾಮಾಜಿಕ ಚರ್ಚೆಗಳು
  • ಜನಜಾಗೃತಿ ಕಾರ್ಯಕ್ರಮಗಳು

ನಡೆಯತೊಡಗಿದವು. ಬ್ರಿಟಿಷರ ವಿರುದ್ಧ ನೇರವಾಗಿ ರಾಜಕೀಯ ಸಭೆ ನಡೆಸುವುದಕ್ಕಿಂತ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಸಾವಿರಾರು ಜನರನ್ನು ಒಂದೆಡೆ ಸೇರಿಸುವುದು ಸುಲಭವಾಗಿತ್ತು. ಇದರಿಂದ ಗಣೇಶೋತ್ಸವ ಧಾರ್ಮಿಕ ಆಚರಣೆಯಿಂದ ಸಾಮಾಜಿಕ ಮತ್ತು ರಾಷ್ಟ್ರೀಯ ಚಳವಳಿಯ ವೇದಿಕೆಯಾಗಿ ರೂಪುಗೊಂಡಿತು.

ಗಣೇಶನ ನಂತರ ಶಿವಾಜಿ ಉತ್ಸವ

ಈ ಗಣೇಶೋತ್ಸವದಲ್ಲಿ ತಿಲಕರು ಮಾಡಿದ ದಿಕ್ಸೂಚಿ ಭಾಷಣದಿಂದ ಸ್ವಾತಂತ್ರ್ಯದ ಕಿಡಿ ಹಬ್ಬಿದ್ದಲ್ಲದೇ, ಗಣೇಶೋತ್ಸವದ ಮೂಲಕ ಜನರನ್ನು ಸಂಘಟಿಸುವ ಪ್ರಯೋಗ ಯಶಸ್ವಿಯಾಗುತ್ತಿರುವುದನ್ನು ಗಮನಿಸಿದ ತಿಲಕರು ನಂತರ 1896ರಲ್ಲಿ ಶಿವಾಜಿ ಉತ್ಸವವನ್ನು ಜನಪ್ರಿಯಗೊಳಿಸಲು ಮುಂದಾದರು. ಶಿವಾಜಿ ಮಹಾರಾಜರ ಶೌರ್ಯ ಮತ್ತು ಸ್ವರಾಜ್ಯದ ಆದರ್ಶವನ್ನು ಜನರಲ್ಲಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಹೀಗೆ ಗಣೇಶೋತ್ಸವ → ಸಾಮಾಜಿಕ ಒಗ್ಗಟ್ಟು ಶಿವಾಜಿ ಉತ್ಸವ → ಸ್ವರಾಜ್ಯದ ಪ್ರೇರಣೆ ಎಂಬ ರೀತಿಯಲ್ಲಿ ಈ ಎರಡೂ ಉತ್ಸವಗಳು ರಾಷ್ಟ್ರೀಯ ಚಳವಳಿಯ ಜನಪ್ರಿಯ ವೇದಿಕೆಗಳಾದವು.

ಗಣೇಶನನ್ನು ಮಣ್ಣಿನಿಂದಲೇ ಏಕೆ ಮಾಡಬೇಕು?

ನಿಜ ಹೇಳಬೇಕೆಂದರೆ ಗಣೇಶನ ಮೂರ್ತಿಯನ್ನು ಹತ್ತಿರದ ಕೆರೆಗಳಿಂದ ತರುವ ಜೇಡಿ ಮಣ್ಣಿನಿಂದ ಮಾಡುವುದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ಬೇಸಿಗೆಯಲ್ಲಿ ಬಹುತೇಕ ಕೆರೆಕಟ್ಟೆಗಳು ಒಣಗಿ ಹೋಗಿರುವ ಸಂಧರ್ಭದಲ್ಲಿ  ಆ ಮೆಕ್ಕಲು ಮಣ್ಣನ್ನು ತೆಗೆದು ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಮೂಲಕ ಆ ಕೆರೆ ಕಟ್ಟೆಗಳನ್ನು ಆಳವನ್ನು ಮಾಡಿ ಹೆಚ್ಚು ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಲಾಗುತ್ತದೆ ಮತ್ತು ಅದೇ ಜೇಡಿ ಮಣ್ಣಿನಿಂದ ವಿವಿಧ ಆಕೃತಿಯ ಗಣೇಶನ ವಿಗ್ರಹಗಳನ್ನು ಮಾಡಿ ಪೂಜಿಸಲಾಗುತ್ತದೆ.

ಇಂದಿನ ಕಾಲದಲ್ಲಿ ಗಣೇಶನ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್, ರಾಸಾಯನಿಕ ಬಣ್ಣಗಳು ಮತ್ತು ಇತರ ವಸ್ತುಗಳಿಂದ ತಯಾರಿಸುವುದು ಸಾಮಾನ್ಯವಾಗಿದೆ. ಆದರೆ ಸಾಂಪ್ರದಾಯಿಕವಾಗಿ ಗಣೇಶನ ಮೂರ್ತಿ ಜೇಡಿ ಮಣ್ಣಿನಿಂದ ಮಾಡಲಾಗುತ್ತಿತ್ತು. ಇದರ ಹಿಂದೆ ಆಧ್ಯಾತ್ಮಿಕ ಅರ್ಥವೂ ಇದೆ. ಮಣ್ಣಿನಿಂದ ರೂಪುಗೊಂಡ ದೇಹ ಮತ್ತೆ ಮಣ್ಣಿನಲ್ಲೇ ಲೀನವಾಗುವುದು ಇದು ಭಾರತೀಯ ತತ್ವಶಾಸ್ತ್ರದ “ಪಂಚಭೂತಗಳಲ್ಲಿ ಲೀನವಾಗುವುದು” ಎಂಬ ಪರಿಕಲ್ಪನೆಯನ್ನು ನೆನಪಿಸುತ್ತದೆ.

ಮಣ್ಣಿನಿಂದ ಬಂದ ದೇಹ ಮತ್ತೆ ಪ್ರಕೃತಿಗೆ ಮರಳುತ್ತದೆ. ಅಂದರೆ— ಸೃಷ್ಟಿ → ಸ್ಥಿತಿ → ಲಯ ಎಂಬ ಜೀವನಚಕ್ರವನ್ನು ಗಣೇಶೋತ್ಸವವೇ ಸಂಕೇತಿಸುತ್ತದೆ. ಇಂದಿನ ಪರಿಸರದ ದೃಷ್ಟಿಯಿಂದಲೂ ಮಣ್ಣಿನ ಮೂರ್ತಿಗಳಿಗೆ ಮಹತ್ವವಿದೆ. ಪರಿಸರ ಸಚಿವಾಲಯದ ಪರಿಸರ ಶಿಕ್ಷಣ ಕಾರ್ಯಕ್ರಮಗಳಲ್ಲಿಯೂ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಉತ್ತೇಜಿಸಲಾಗಿದೆ.

ಗಣೇಶನ ಮೂರ್ತಿಯನ್ನು ನೀರಿನಲ್ಲಿ ಏಕೆ ವಿಸರ್ಜಿಸುತ್ತೇವೆ?

ಗಣೇಶನ ಮೂರ್ತಿಗಳನ್ನು ಭಾವಿ, ಕೆರೆ ಕಟ್ಟೆ, ನದಿಗಳಲ್ಲಿ ವಿಸರ್ಜನೆ ಮಾಡುವದರಿಂದ ಪರಿಸರದ ಮೇಲೇ ಭಾರಿ ಪರಿಣಾಮವಾಗುತ್ತದೆ ಎಂದು  ಬಾಯಿ ಬಡಿದು ಕೊಳ್ಳುವವರನ್ನೂ ನೋಡುತ್ತೇವೆ.  ಇನ್ನೂ ಜೇಷ್ಟ, ಆಶಾಢ ಮತ್ತು ಶ್ರಾವಣಮಾಸಗಳಲ್ಲಿ ಸುರಿಯುವ ಮುಂಗಾರು ಮಳೆಯಿಂದಾಗಿ ಬಹುತೇಕ ಕೆರೆ ಕಟ್ಟೆಗಳು ತುಂಬಿ ತುಳುಕಿ ಕಟ್ಟೆಗಳು ಒಡೆಯುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಅದೇ ಮಣ್ಣಿನಿಂದ ಮಾಡಿರುವ ಗಣೇಶನ ಮೂರ್ತಿಗಳನ್ನು ಕೆರೆಕಟ್ಟೆಗಳಲ್ಲಿ ವಿಸರ್ಜಿಸುವ ಮೂಲಕ ಕೆರೆಕಟ್ಟೆಗಳು ಒಡೆಯುವುದನ್ನು ತಪ್ಪಿಸಬಹುದಾಗಿದೆ. ಮಣ್ಣಿನಿಂದ ಮಾಡಿದ ಮೂರ್ತಿ ನೀರಿನಲ್ಲಿ ಕರಗುವುದು ನಾವು ಪ್ರಕೃತಿಯಿಂದ ಬಂದವರು; ಕೊನೆಗೆ ಪ್ರಕೃತಿಯಲ್ಲೇ ಲೀನವಾಗಬೇಕು ಎಂಬ ಸಂದೇಶ. ಇದು ಕೇವಲ ವಿಸರ್ಜನೆಯಲ್ಲ. ಅನಿತ್ಯತೆಯ ನೆನಪು.

ಆದರೆ ಪರಿಸರದ ಪ್ರಶ್ನೆ?

ಇಲ್ಲಿಯೇ ಇಂದಿನ ಗಣೇಶೋತ್ಸವಕ್ಕೆ ಅತ್ಯಂತ ಮುಖ್ಯವಾದ ಪಾಠವಿದೆ. ಹಳೆಯ ಕಾಲದಲ್ಲಿ ಸ್ಥಳೀಯ ಜೇಡಿ ಮಣ್ಣಿನಿಂದ ಸಣ್ಣ ಮೂರ್ತಿಗಳನ್ನು ತಯಾರಿಸಿ, ಅದೇ ಸ್ಥಳೀಯ ಜಲಮೂಲಗಳಲ್ಲಿ ವಿಸರ್ಜಿಸಲಾಗುತ್ತಿತ್ತು. ಆದರೆ ನಗರೀಕರಣದ ನಂತರ,

  • POP ಮೂರ್ತಿಗಳು
  • ಕೃತಕ ಬಣ್ಣಗಳು
  • ಪ್ಲಾಸ್ಟಿಕ್ ಅಲಂಕಾರ
  • ಥರ್ಮಾಕೋಲ್
  • ರಾಸಾಯನಿಕ ವಸ್ತುಗಳು

ಹೆಚ್ಚಾಗಿವೆ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ವಿಸರ್ಜನೆ ಮಾಡಬಾರದು ಎನ್ನುವುದಕ್ಕಿಂತ ಪರಿಸರ ಸ್ನೇಹಿಯಾಗಿ ವಿಸರ್ಜಿಸಬೇಕು ಎಂಬ ಸಂದೇಶ ಹೆಚ್ಚು ಅರ್ಥಪೂರ್ಣ. ಮಣ್ಣಿನ ಗಣೇಶ, ನೈಸರ್ಗಿಕ ಬಣ್ಣ, ಕಡಿಮೆ ಅಲಂಕಾರ, ಕೃತಕ ವಸ್ತುಗಳ ಬಳಕೆ ಕಡಿಮೆ ಮಾಡುವುದು ಮತ್ತು ಸ್ಥಳೀಯ ಆಡಳಿತ ಸೂಚಿಸುವ ವಿಸರ್ಜನಾ ವ್ಯವಸ್ಥೆಯನ್ನು ಬಳಸುವುದು ಉತ್ತಮ ಮಾರ್ಗ. ನೀರಿನ ಮೂಲಗಳು ನಮ್ಮ ಹಬ್ಬದ ನಂತರವೂ ಜೀವಂತವಾಗಿರಬೇಕು ಎಂಬುದು ನಮ್ಮ ಜವಾಬ್ದಾರಿ.

ಗಣೇಶನೇ ವಿಶ್ವದ ಮೊದಲ ಸ್ಟೆನೋಗ್ರಾಫರ್?

ಗಣೇಶನ ಹಬ್ಬದ ಮತ್ತೊಂದು ಅದ್ಭುತ ಪೌರಾಣಿಕ ಪ್ರಸಂಗ—

ವ್ಯಾಸರು ಹೇಳಿದ ಮಹಾಭಾರತವನ್ನು ಗಣೇಶ ಬರೆದದ್ದು!

ಪುರಾಣಕಥೆಯ ಪ್ರಕಾರ, ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ರಚಿಸುವಾಗ ಅದನ್ನು ಬರೆಯಲು ಗಣೇಶನನ್ನು ಲಿಪಿಕಾರನನ್ನಾಗಿ ಮಾಡಿಕೊಂಡರು. ಗಣೇಶ ಒಂದು ಷರತ್ತು ಹಾಕುತ್ತಾನೆ: ನೀವು ಕಥೆಯನ್ನು ಹೇಳುವಾಗ ಒಂದು ಕ್ಷಣವೂ ನಿಲ್ಲಬಾರದು. ವ್ಯಾಸರು ಅದಕ್ಕೆ ಪ್ರತಿಯಾಗಿ ಮತ್ತೊಂದು ಷರತ್ತು ಹಾಕುತ್ತಾರೆ: ನಾನು ಹೇಳುವ ಪ್ರತಿಯೊಂದು ಮಾತಿನ ಅರ್ಥವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ನಂತರವೇ ನೀನು ಬರೆಯಬೇಕು. ಇಬ್ಬರೂ ಒಪ್ಪಿಕೊಂಡರು.

ವ್ಯಾಸರು ಹೇಳುತ್ತಾ ಹೋದರು. ಗಣೇಶ ಬರೆಯುತ್ತಾ ಹೋದ. ಇಲ್ಲಿ ಒಂದು ಕುತೂಹಲಕಾರಿ ಪೌರಾಣಿಕ ತಂತ್ರವನ್ನು ವ್ಯಾಸರು ಬಳಸಿದರು ಎಂದು ಕಥೆ ಹೇಳುತ್ತದೆ. ಕಷ್ಟವಾದ, ಅರ್ಥಮಾಡಿಕೊಳ್ಳಲು ಸಮಯ ಬೇಕಾದ ಶ್ಲೋಕಗಳನ್ನು ಮಧ್ಯೆ ಮಧ್ಯೆ ಹೇಳುತ್ತಿದ್ದರು. ಗಣೇಶ ಅದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ವ್ಯಾಸರು ಮುಂದಿನ ಭಾಗವನ್ನು ಮನಸ್ಸಿನಲ್ಲಿ ಸಿದ್ಧಪಡಿಸಿಕೊಳ್ಳುತ್ತಿದ್ದರು!

ಲೇಖನಿ ಮುರಿದಾಗ ಗಣೇಶ ತನ್ನ ದಂತವನ್ನೇ ಮುರಿದ!

ಮಹಾಭಾರತ ಬರೆಯುವಾಗ ಗಣೇಶನ ಲೇಖನಿ ಮುರಿಯುತ್ತದೆ. ಆದರೆ ಷರತ್ತಿನಂತೆ ಕಥೆಯ ಓಘ ನಿಲ್ಲಬಾರದು. ಹೀಗಾಗಿ ಗಣೇಶ ತನ್ನ ಒಂದು ದಂತವನ್ನೇ ಮುರಿದು ಲೇಖನಿಯಾಗಿ ಬಳಸಿಕೊಂಡು ಬರೆಯುವುದನ್ನು ಮುಂದುವರಿಸುತ್ತಾನೆ. ಇದರಿಂದಲೇ ಗಣೇಶನಿಗೆ

ಏಕದಂತ

ಎಂಬ ಹೆಸರು ಬಂದಿದೆ. ಇದು ಅತ್ಯಂತ ಜನಪ್ರಿಯ ಪೌರಾಣಿಕ ಪ್ರಸಂಗ. ಇಂದಿಗೂ ಗಣೇಶನ ಮೂರ್ತಿಗಳಲ್ಲಿ ಒಂದು ದಂತ ಮುರಿದಿರುವ ರೂಪವನ್ನು ಕಾಣಬಹುದು.

ಗಣೇಶ — ಜ್ಞಾನ ಮತ್ತು ಬರವಣಿಗೆಯ ಸಂಕೇತ

ವ್ಯಾಸ–ಗಣೇಶರ ಈ ಕಥೆಯನ್ನು ಕೇವಲ ಪುರಾಣಕಥೆಯಾಗಿ ನೋಡುವುದಕ್ಕಿಂತ ಅದರಲ್ಲಿರುವ ಜ್ಞಾನಸಂದೇಶವನ್ನು ಗಮನಿಸುವುದು ಇನ್ನೂ ಆಸಕ್ತಿದಾಯಕ. ವ್ಯಾಸ — ಜ್ಞಾನ ಮತ್ತು ಸೃಜನಶೀಲತೆಯ ಪ್ರತೀಕ. ಗಣೇಶ — ಜ್ಞಾನವನ್ನು ಅಕ್ಷರ ರೂಪಕ್ಕೆ ತರುವ ಸಾಮರ್ಥ್ಯದ ಪ್ರತೀಕ. ಹೀಗಾಗಿ ವಿದ್ಯಾರ್ಥಿಗಳು, ಬರಹಗಾರರು, ಕಲಾವಿದರು ಮತ್ತು ಜ್ಞಾನಾರ್ಜನೆ ಮಾಡುವವರು ಗಣೇಶನನ್ನು ಬುದ್ಧಿ, ವಿದ್ಯೆ ಮತ್ತು ಸ್ಮರಣಶಕ್ತಿಯ ದೇವರಾಗಿ ಆರಾಧಿಸುವ ಪರಂಪರೆ ಬೆಳೆದಿದೆ. ಇದೇ ಕಾರಣಕ್ಕೆ ಶಾಲೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹೊಸ ವ್ಯವಹಾರ ಆರಂಭಿಸುವ ಸಂದರ್ಭದಲ್ಲಿಯೂ ಗಣೇಶ ಪೂಜೆ ನಡೆಯುತ್ತದೆ.

ಅನಂತ ಚತುರ್ದಶಿಯಂದು  ಗಣೇಶನ ವಿಸರ್ಜಿಸುವ ಆಚರಣೆ

ವ್ಯಾಸರು ಮಹಾಭಾರತವನ್ನು ಹೇಳುತ್ತಾ ಹೋದಂತೆ ಗಣೇಶನು ನಿರಂತರವಾಗಿ ಬರೆಯುತ್ತಿದ್ದನು. ಹತ್ತು ದಿನಗಳ ಕಾಲ ಈ ಕಾರ್ಯ ಮುಂದುವರಿಯಿತು ಎಂದು ಜನಪ್ರಿಯ ಪುರಾಣಕಥೆ ಹೇಳುತ್ತದೆ. ಹೀಗಾಗಿ ಭಾದ್ರಪದ ಶುಕ್ಲ ಚತುರ್ಥಿಯಿಂದ ಆರಂಭವಾದ ಗಣೇಶೋತ್ಸವ ಅನಂತ ಚತುರ್ದಶಿಯವರೆಗೆ ಮುಂದುವರಿಯುವ ಸಂಪ್ರದಾಯ ರೂಪುಗೊಂಡಿದೆ. ಹತ್ತು ದಿನಗಳ ಕಾಲ ನಿರಂತರವಾಗಿ ಮಹಾಭಾರತ ಬರೆಯುತ್ತಿದ್ದ ಗಣೇಶನ ದೇಹದ ಉಷ್ಣತೆ ಹೆಚ್ಚಾಗುತ್ತದೆ. ವ್ಯಾಸರು ಅವನನ್ನು ಸರಸ್ವತಿ ನದಿಯ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸ್ನಾನ ಮಾಡಿಸಿದ ನಂತರ ಗಣೇಶನು ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಮರಳುತ್ತಾನೆ ಎಂಬ ಕಥೆಯಿದೆ. ಇದಕ್ಕೆ ಸಂಬಂಧಿಸಿದಂತೆ ಗಣೇಶನನ್ನು ಹತ್ತು ದಿನಗಳ ಕಾಲ ಪ್ರತಿಷ್ಠಾಪಿಸಿ, ಅನಂತ ಚತುರ್ದಶಿಯಂದು ವಿಸರ್ಜಿಸುವ ಆಚರಣೆ ಜನಪ್ರಿಯವಾಗಿದೆ. ಆದರೆ ದೇಶದ ಎಲ್ಲ ಭಾಗಗಳಲ್ಲೂ ಇದೇ ಅವಧಿ ಕಡ್ಡಾಯವಲ್ಲ. ಒಂದು ದಿನದಿಂದ 3, 5, 7, 10 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ.

ಗೌರಿ ಹಬ್ಬಕ್ಕೆ ಗಣೇಶನ ಜೊತೆಗೆ ಏನು ಸಂಬಂಧ?

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಗೌರಿ–ಗಣೇಶ ಹಬ್ಬ ಎಂಬ ಹೆಸರೇ ಹೆಚ್ಚು ಪ್ರಸಿದ್ಧ. ಇಲ್ಲಿ ಗಣೇಶ ಚತುರ್ಥಿಗೆ ಮುನ್ನ ಗೌರಿ ಹಬ್ಬ ಆಚರಿಸುವ ಪದ್ಧತಿಯಿದೆ. ಗೌರಿ ದೇವಿಯನ್ನು ಸೌಭಾಗ್ಯ, ಶಕ್ತಿ, ಕುಟುಂಬದ ಕ್ಷೇಮ ಮತ್ತು ಸಮೃದ್ಧಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಮುಂದಿನ ದಿನ ಗಣೇಶನನ್ನು ಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಕರ್ನಾಟಕದ ಅನೇಕ ಮನೆಗಳಲ್ಲಿ, ಗೌರಿ ಬರುತ್ತಾಳೆ → ಮನೆಯ ಮಂಗಳ ಹೆಚ್ಚುತ್ತದೆ → ಗಣೇಶ ಬರುತ್ತಾನೆ → ವಿಘ್ನಗಳು ದೂರವಾಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಎಂಬ ಸುಂದರ ಧಾರ್ಮಿಕ ಪರಂಪರೆ ಕಾಣಬಹುದು.

ಗಣೇಶನಿಗೆ ಕಡುಬು ಏಕೆ ಇಷ್ಟ?

ಗಣೇಶ ಎಂದರೆ ನಮಗೆ ಮೊದಲು ನೆನಪಾಗುವುದು. ಕಡುಬು! ಕರ್ನಾಟಕದಲ್ಲಿ ಗಣೇಶ ಚತುರ್ಥಿಯಂದು ಕಡುಬು, ಮೋದಕ, ಪಾಯಸ, ಪಂಚಕಜ್ಜಾಯ, ಚಕ್ಕುಲಿ, ಕೋಸಂಬರಿ, ವಿವಿಧ ಹಣ್ಣುಗಳು ಸೇರಿದಂತೆ ಹಲವು ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಮೋದಕವನ್ನು ಗಣೇಶನಿಗೆ ಅತ್ಯಂತ ಪ್ರಿಯವಾದ ನೈವೇದ್ಯವೆಂದು ಪರಿಗಣಿಸಲಾಗುತ್ತದೆ. ಇದರ ಒಳಗಿನ ಸಿಹಿ ಪೂರಣವು ಜ್ಞಾನ ಮತ್ತು ಆಂತರಿಕ ಆನಂದದ ಸಂಕೇತ ಎಂಬ ತಾತ್ವಿಕ ವ್ಯಾಖ್ಯಾನವೂ ಇದೆ.

ಗರಿಕೆ ಹುಲ್ಲು ಗಣೇಶನಿಗೆ ಏಕೆ ವಿಶೇಷ?

ಗಣೇಶ ಪೂಜೆಯಲ್ಲಿ ಗರಿಕೆಗೆ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಯಾರೂ ದೊಡ್ಡ ಮೌಲ್ಯ ಕೊಡದ ಸರಳವಾದ ಹುಲ್ಲು ಗಣೇಶನ ಪೂಜೆಯಲ್ಲಿ ಅತ್ಯಂತ ಪವಿತ್ರವಾಗುತ್ತದೆ. ಇದರಲ್ಲಿರುವ ಸಂದೇಶವೂ ಸುಂದರ: ದೇವರಿಗೆ ಅರ್ಪಿಸಲು ದೊಡ್ಡದು, ದುಬಾರಿ ಅಥವಾ ಅಪರೂಪದ ವಸ್ತುವೇ ಬೇಕಿಲ್ಲ; ಶುದ್ಧ ಭಕ್ತಿ ಸಾಕು. ಹೀಗಾಗಿ ಗರಿಕೆ ಗಣೇಶನ ಸರಳತೆಯ ಸಂಕೇತವೂ ಹೌದು.

ಭಾರತದಾದ್ಯಂತ ಗಣೇಶೋತ್ಸವದ ವೈವಿಧ್ಯ

ಗಣೇಶ ಚತುರ್ಥಿ ಮಹಾರಾಷ್ಟ್ರದಲ್ಲಿ ಅತ್ಯಂತ ದೊಡ್ಡ ಸಾರ್ವಜನಿಕ ಹಬ್ಬಗಳಲ್ಲಿ ಒಂದಾಗಿದ್ದರೂ, ಇಂದು ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಗೌರಿ–ಗಣೇಶ ಹಬ್ಬ ಮನೆಮನೆಯ ಸಂಭ್ರಮಕ್ಕೆ ಹೆಚ್ಚು ಒತ್ತು ನೀಡುತ್ತದೆ. ಮಹಾರಾಷ್ಟ್ರದಲ್ಲಿ ದೊಡ್ಡ ಸಾರ್ವಜನಿಕ ಗಣೇಶೋತ್ಸವಗಳು ಪ್ರಸಿದ್ಧ. ಮುಂಬೈನ ಗಿರ್ಗಾಂವ್ ಚೌಪಾಟಿಯ ಗಣೇಶ ವಿಸರ್ಜನೆಯು ಇಂದಿಗೂ ಅಪಾರ ಜನರನ್ನು ಸೆಳೆಯುತ್ತದೆ; ತಿಲಕರ ಕಾಲದಿಂದಲೇ ಗಣೇಶ ವಿಸರ್ಜನೆಗೆ ರಾಷ್ಟ್ರೀಯ ಭಾವನೆಯ ಆಯಾಮ ದೊರಕಿತ್ತು ಎಂದು ಭಾರತ ಸರ್ಕಾರದ ದಾಖಲೆ ಹೇಳುತ್ತದೆ.  ಹೀಗೆ ಒಂದೇ ಹಬ್ಬ— ಪ್ರದೇಶ ಬದಲಾದಂತೆ ರೂಪ ಬದಲಿಸಿಕೊಂಡರೂ, ಭಕ್ತಿಯ ಮೂಲಭಾವ ಮಾತ್ರ ಒಂದೇ ಆಗಿ ಉಳಿದಿದೆ.

ಇಂದಿನ ಗಣೇಶೋತ್ಸವ: ಭಕ್ತಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರಲಿ

ಇಂದಿನ ಗಣೇಶೋತ್ಸವದಲ್ಲಿ ಸಂಗೀತ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ, ರಕ್ತದಾನ, ಆರೋಗ್ಯ ಶಿಬಿರ, ಪ್ರತಿಭಾ ಪ್ರದರ್ಶನ, ಶಿಕ್ಷಣ ಸಹಾಯ ಮುಂತಾದ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಇದು ಸಂತೋಷದ ಸಂಗತಿ. ಆದರೆ ಅದೇ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ಅಗತ್ಯ:

  • ಅತಿಯಾದ ಶಬ್ದ ಬೇಡ.
  • ಪರಿಸರ ಹಾನಿ ಮಾಡುವ ವಸ್ತುಗಳ ಬಳಕೆ ಬೇಡ.
  • ನೀರಿನ ಮೂಲಗಳನ್ನು ಕಲುಷಿತಗೊಳಿಸಬಾರದು.
  • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು.
  • ಸಾರ್ವಜನಿಕ ಸ್ಥಳದಲ್ಲಿ ಇತರರಿಗೆ ತೊಂದರೆಯಾಗದಂತೆ ಆಚರಿಸಬೇಕು. ಏಕೆಂದರೆ—

ವಿಘ್ನಗಳನ್ನು ನಿವಾರಿಸುವ ಗಣೇಶನ ಹಬ್ಬವೇ ಇತರರಿಗೆ ವಿಘ್ನವಾಗಬಾರದು! ಇದು ಇಂದಿನ ಗಣೇಶೋತ್ಸವದ ಅತ್ಯಂತ ಸುಂದರ ಸಂದೇಶವಾಗಬಹುದು.

ಗಣೇಶ ಹಬ್ಬ ನಮಗೆ ಕಲಿಸುವ ಪಾಠ

  • ಗಣೇಶನ ದೊಡ್ಡ ತಲೆ : ದೊಡ್ಡದಾಗಿ ಯೋಚಿಸು.
  • ದೊಡ್ಡ ಕಿವಿಗಳು : ಹೆಚ್ಚು ಕೇಳು.
  • ಸಣ್ಣ ಕಣ್ಣುಗಳು : ಏಕಾಗ್ರತೆಯಿಂದ ನೋಡು.
  • ಒಂದು ದಂತ : ಅಗತ್ಯವಿಲ್ಲದ್ದನ್ನು ತ್ಯಜಿಸು.
  • ದೊಡ್ಡ ಹೊಟ್ಟೆ : ಜೀವನದ ಏರುಪೇರುಗಳನ್ನು ಜೀರ್ಣಿಸಿಕೊಳ್ಳು.
  • ಇಲಿ ವಾಹನ : ಅಹಂಕಾರ ಎಷ್ಟೇ ದೊಡ್ಡದಾದರೂ ಅದನ್ನು ನಿಯಂತ್ರಿಸು.
  • ಮೋದಕ : ಜ್ಞಾನದ ಸಿಹಿಯನ್ನು ಅನುಭವಿಸು.
  • ಮತ್ತು ಗಣೇಶನ ಪೂಜೆ : ಯಾವುದೇ ಕೆಲಸ ಆರಂಭಿಸುವ ಮೊದಲು ಮನಸ್ಸನ್ನು ಶುದ್ಧಪಡಿಸಿಕೊಳ್ಳುವುದು

ಕೊನೆಯ ಮಾತು

ಗಣೇಶ ಚತುರ್ಥಿ ಕೇವಲ ಒಂದು ದಿನದ ಹಬ್ಬವಲ್ಲ. ಇದು ಪುರಾಣದ ನೆನಪು. ಇದು ಕುಟುಂಬದ ಒಗ್ಗಟ್ಟು. ಇದು ಸಮಾಜದ ಸಂಭ್ರಮ. ಇದು ತಿಲಕರ ಕಾಲದ ರಾಷ್ಟ್ರೀಯ ಜಾಗೃತಿಯ ಇತಿಹಾಸ. ಇದು ವ್ಯಾಸ–ಗಣೇಶರ ಜ್ಞಾನ ಪರಂಪರೆಯ ನೆನಪು. ಇದು ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ನೆನಪಿಸುವ ಆಚರಣೆ. ಮತ್ತು ಮುಖ್ಯವಾಗಿ—

ಮಣ್ಣಿನಿಂದ ಬಂದದ್ದು ಮಣ್ಣಿಗೇ ಮರಳುತ್ತದೆ.  ಆದರೆ ನಾವು ಬಿಟ್ಟುಹೋಗುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತ ಎಂಬ ಜೀವನದ ಸತ್ಯವನ್ನು ನೆನಪಿಸುವ ಹಬ್ಬ. ಇಂದಿನ ಯುವಜನತೆಗೆ ನಮ್ಮ ಹಬ್ಬಗಳ ಹಿಂದಿರುವ ಈ ಪುರಾಣ, ಇತಿಹಾಸ, ತತ್ವಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ. ಏಕೆಂದರೆ ನಮ್ಮ ಸಂಸ್ಕೃತಿಯನ್ನು ಕೇವಲ ಆಚರಿಸುವುದಷ್ಟೇ ಅಲ್ಲ

ಅದನ್ನು ಅರ್ಥಮಾಡಿಕೊಂಡು, ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ತಲುಪಿಸುವುದೇ ನಿಜವಾದ ಸಂಭ್ರಮ!!!

ಶ್ರೀ ಗೌರಿ–ಗಣೇಶರ ಕೃಪೆಯಿಂದ ಎಲ್ಲರ ಮನೆ–ಮನಗಳಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿ ನೆಲೆಸಲಿ. ಗೌರಿ–ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಏನಂತೀರಿ ???

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ