ವರ್ಷದ ಮೊದಲ ಹಬ್ಬ, ಚೈತ್ರದ ಆಗಮನ ಸೂಚಿಸುವ ಯುಗಾದಿಯ ಬಗ್ಗೆ ವರ್ಣಿಸದ ಕನ್ನಡ ಕವಿಗಳೇ ಇಲ್ಲ. ಕವಿಗಳು ಕಂಡ ಯುಗಾದಿಯ ಕುರಿತಾಗಿ ಇಲ್ಲಿದೆ ಒಂದು ಪಕ್ಷಿನೋಟ……!

ಚೈತ್ರ ಮಾಸ ಬಂತೆಂದರೆ ಇಡೀ ವಾತಾವರಣವೇ ಬದಲಾಗಿ ಹೊಸತನದಿಂದ ತುಂಬಿ ತುಳುಕುತ್ತದೆ. ಬಿಸಿಲಿನ ತಾಪ ಹೆಚ್ಚಾದರೂ, ಬೀಸುವ ತಂಗಾಳಿ ಹಾಯ್‌ ಎನಿಸುವಂತೆ ಮಾಡುತ್ತದೆ.

ಚ್ರೈತ್ರ ಬರುವ ಹೊತ್ತು ಕವಿಗಳಿಗಂತೂ ಚೈತ್ರಾಗಮನವನ್ನು ಕವನಗಳ ಮೂಲಕವೇ ಸಂಭ್ರಮಿಸಿದ್ದಾರೆ. ಕವಿ ಮನಕ್ಕೆ ವಸಂತ ತರುವ ಸಂಭ್ರಮ ಹೇಳತೀರದು. ಕವಿಗಳು ಕಂಡ ಚೈತ್ರದ ಸೊಬಗೇ ಸೊಗಸು!

ಈ ಚೈತ್ರ ಮಾಸದ ಮೊದಲ ಹಬ್ಬವೇ ಯುಗಾದಿ ಹಬ್ಬ. ಈ ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರುವ ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ ಬಣ್ಣ ಬಣ್ಣದ ಹೂಗಳಿಂದ ಅಲಂಕಾರಗೊಂಡು ಮರಗಿಡಗಳು ಕಣ್ಣಿಗೆ ಸೊಬಗನ್ನು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ. ಮುಖ್ಯವಾಗಿ ಯುಗಾದಿ ಆಚರಣೆಯೊಂದಿಗೆ ಅವಿಭಾಜ್ಯಾ ಅಂಗವಾಗಿ ಹೆಣೆದುಕೊಂಡಿದೆ ಬೇಂದ್ರೆಯವರ ಕವಿತೆ. ಮಾಬೇ ಚಿಗುರಿ, ಈ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಲೇಬೇಕು. ಇದು ಪ್ರಕೃತಿಯ ಸಹಜ ಧರ್ಮ.

ಯುಗಾದಿ ಹಿಂದೂಗಳಿಗೆ ಅಮೃತಘಳಿಗೆ ಹೌದು. ಹೊಸ ಚೈತನ್ಯವನ್ನು ಮನಮನಗಳಲ್ಲಿ ಮೂಡಿಸುವ, ನೋವುನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನದಿಂದ ಪ್ರಕೃತಿಯೇ ಅಲಂಕೃತಳಾಗುತ್ತಾಳೆ. ಈ ಪ್ರಕೃತಿಯ ಸೊಬಗನ್ನು ವರ್ಣಿಸಲು ಕವಿಗಳಿಗೆ ಎಲ್ಲಿಲ್ಲದ ಹಿಗ್ಗು. ಕನ್ನಡದ ಮಹಾನ್‌ ಕವಿಗಳು ಯುಗಾದಿ ಹಬ್ಬದ ಸೊಬಗವನ್ನು ಪ್ರಕೃತಿಯ ಬದಲಾವಣೆಯನ್ನು ಮತ್ತು ಬದುಕಿನ ತತ್ವವನ್ನು ತಮ್ಮ ಕವಿತೆಗಳ ಮೂಲಕ ಅದ್ಭುತವಾಗಿ ವರ್ಣಿಸಿದ್ದಾರೆ.

ಯುಗಾದಿಯ ಒಬ್ಬಟ್ಟಿನ ಸವಿಯತೆ ಈ ಕಾವ್ಯದ ಸಂಭ್ರಮವನ್ನು ಸವಿಯೋಣ ಬನ್ನಿ. ಕವಿ ಜಿ.ಎಸ್‌. ಶಿವರುದ್ರಪ್ಪನವರು ಮರಗಳ ತುಂಬಾ ಹೂಗಳು ಶೋಭಿಸುವುದನ್ನು ಕಂಡಾಗ, `ಮೈ ತುಂಬಾ ಹೂ ಮುಡಿದು ಹುಚ್ಚಾದ ಮರ ಚೈತ್ರದಲ್ಲಿ ಬೇಸರವೇ ಇಲ್ಲ ಈ ನಿಸರ್ಗಕ್ಕೆ, ಸದಾ ಹೊಸ ಹೊಸದಾಗಿ ಹೊಮ್ಮುವುದಕ್ಕೆ,’ ಎಂದು ಬಣ್ಣಿಸಿದ್ದಾರೆ.

ಇವರು ಬದುಕಿನ ಸಂಕೀರ್ಣತೆಯನ್ನು ಯುಗಾದಿ ಬೇವು ಬೆಲ್ಲದ ಮೂಲಕ ಕಂಡಿದ್ದಾರೆ. ಜೀವನದಲ್ಲಿ ಕಷ್ಟ ಮತ್ತು ಸುಖ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬ ಸತ್ಯವನ್ನು ಯುಗಾದಿ ನಮಗೆ ಬೋಧಿಸುತ್ತದೆ ಎಂದು ಅವರು ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ  ಹಬ್ಬಗಳ ಪರಂಪರೆಯೇ ಇದೆ. ಈ ಹಬ್ಬಗಳಲ್ಲಿ ಮೊದಲನೆಯದೇ ಈ ಯುಗಾದಿ. ಮೂರೂವರೆ ಮುಹೂರ್ತದ ಪೈಕಿ ಯುಗಾದಿ ಒಂದು ಶುಭ ಮುಹೂರ್ತವಾಗಿದೆ. ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿಯ ಹೊಸ ವರ್ಷದ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಭವಿಷ್ಯದ ಸುಖಕ್ಕಾಗಿ ಆಚರಿಸುತ್ತಾರೆ.

ಕಷ್ಟಸುಖದ ಸಂಕೇತ

ಈ ಹಿನ್ನೆಲೆಯಲ್ಲಿಯೇ ಪ್ರೇಮಕವಿ ಕೆ.ಎಸ್‌. ನರಸಿಂಹಸ್ವಾಮಿಯವರು ತಾವು ಕಂಡ ಯುಗಾದಿಯ ಸಂಭ್ರಮವನ್ನು ತಮ್ಮ ಕಾವ್ಯವೊಂದರಲ್ಲಿ `ಬನಬನದಲ್ಲಿ ಅಚ್ಚಾಗಿದೆ ಹೊಸ ವರ್ಷದ ಹೆಸರು ಪಲ್ಲವಿಯು ಗರಿಗೆದರಿದೆ ಗೀತ’ ಹಾಗೆ ಮತ್ತೊಂದು ಕವನ  `ಹೆಜ್ಜೆಗೊಂದು ಹೊಸ ಯುಗಾದಿ ಚೆಲುವು ನಮ್ಮ ಜೀವನ ಪಯಣವೆಲ್ಲ ಪಾವನ,’ ಎಂದು ಯುಗಾದಿ ಮಹಿಮೆಯನ್ನು ಹೊಗಳಿದ್ದಾರೆ.

ಕವಿ ವಿಶ್ವೇಶ್ವರವರು ತಮ್ಮ ಕವನದಲ್ಲಿ, `ಚೈತ್ರ  ಬರುವುದು ಮಾತ್ರ ನಿನ್ನ ನೆನಪು ಅರಳಿದ ಹಾಗೆ….. ಮಾಗಿ ಎಲೆ ಉದುರಿ ಹೊಸ ಚಿಗುರು ಮಲ್ಲಿಗೆ ಸಂಪಿಗೆಯ ಗಾಳಿ ಸುಳಿದು ದೇಗುಲದ ಚಂದನದ ಘಮಲನ್ನು ನೆನಪಿಸುವಂತೆ ಬರುವ ಚೈತ್ರ.’ ಚೈತ್ರದೊಂದಿಗೆ ಸಂಭ್ರಮ ತಾನಾಗಿ ಮೈವೆತ್ತಂತಿದೆ.

ಹಾದಿಯುದ್ದಕ್ಕೂ ಹೊಂಗೆ ಮರಗಳ ಹೂ ಚೆಲ್ಲಿದ ಹಾದಿ….. ಕೆಳಗೆ ಕಣ್ಣಾಡಿಸಿದರೆ ಬಿದ್ದ ನಾಜೂಕಿನ ಹೂಗಳು…. ಮೇಲೆ ಕಣ್ಣೆತ್ತಿದ್ದರೆ ನಳ ನಳಿಸುವ ಹಸಿರು ಎಲೆಗಳ ಮುಚ್ಚುವಂತೆ ರಾಶಿಗಳ ರಾಶಿ. ಮೇಲೂ ವರ್ಣ ಕೆಳಗೂ ಬಣ್ಣ ಚೈತ್ರದ ಸೊಬಗು ಅದು.

`ಹೊಸ ವರ್ಷ ಬಹುದೆಂದಿಗೆ? ಮಹಾಪುರುಷ ತರುಂದಿಗೆ’ ಪು.ತಿ. ನರಸಿಂಹಚಾರ್‌ ಕವನದಲ್ಲಿ ಹೇಳಿದ್ದಾರೆ.

`ಯುಗಾದಿಯ ತೆರೆಗಳೇಳುತ್ತಿವೆ, ಬೀಳುತ್ತಿವೆ… ಹೊಸ ಹೊಸ ಪ್ರತಿ ವರ್ಷ.’

ಕವಿಗಳೆಲ್ಲರ ಭಾವ ಒಂದೇ ಪ್ರತಿ ವರ್ಷ ಹೊಸತೇನೂ ಇಲ್ಲಿಂದರಿತಿದ್ದರೂ ಹೊಸತೆಂದು ಭಾವಿಸುವುದು ಕಳೆದುಕೊಂಡ ನೋವು ಮರೆಯಲು, ಪಡೆದುಕೊಂಡ ಖುಷಿಯು ಅನುಭವಿಸಲು ಚೈತ್ರ ಬರುವುದು, ಎಂಬುದು ಗೋಪಾಲಕೃಷ್ಣ ಅಡಿಗರ ಕವನ ಯುಗಾದಿ ಹಬ್ಬದಂದು ರೈತರು ಎತ್ತುಗಳನ್ನು ಚೆನ್ನಾಗಿ ತೊಳೆದು ಅಲಂಕರಿಸಿ, ಹಾಗೆ ಉಳುಮೆಗೆ ಉಪಯೋಗಿಸುವ ನೇಗಿಲು ಮುಂತಾದ ಸಾಮಾನುಗಳನ್ನು ಪೂಜಿಸಿ, ಬೆಳೆದ ಪೈರನ್ನು ಕಣದಲ್ಲಿ ಹಾಕಿ ಪೂಜಿಸಿ, ಆ ದಿನ ಉಳಿಮೆಯ ಶಾಸ್ತ್ರ ಮಾಡುತ್ತಾರೆ. ಕೆ.ಎಸ್‌. ನಿಸಾರ್‌ ಅಹಮದ್‌, `ಬೆವರ ಹೀರಿ ಬೆಳೆದ ಪೈರು ಕಣಕಣದಲ್ಲಿ ಹೊನ್ನ ತೇರು ಕಣಜ ತುಂಬಿ ತುಳುಕಿ ಹಿಗ್ಗಿ ನಾಡಿ ಕೂಗಿ ಬಂತು ಸುಗ್ಗಿ,’ ಎಂದು ಸುಂದರವಾಗಿ ಬಣ್ಣಿಸಿದ್ದಾರೆ.

`ಹೊಸ ಬಟ್ಟೆಯ ತೊಟ್ಟು ಚೈತ್ರ ಜಲದರ್ಪಣ ಮಗ್ನ ನೇತ್ರ ಮುಗಿಲಿನ ಪಂಚಾಂಗ ತೆರೆಸಿ ಕುಳಿತಿಹ ಫಲ ತಿಳಿಯ ಬಯಸಿ,’ ಎಂದು ಯುಗಾದಿಯ ಆಚರಣೆ ಬಗ್ಗೆ ತಿಳಿಸಿದ್ದಾರೆ.

ಯುಗಾದಿಯ ಸಂಭ್ರಮಾಚರಣೆ

ಈ ಯುಗಾದಿ ಹಬ್ಬದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ರಂಗವಲ್ಲಿ ಇಟ್ಟು, ಮಾವುಬೇವು ತೋರಣಗಳಿಂದ ಸಿಂಗರಿಸಿ, ಅಭ್ಯಂಜನ ಮಾಡಿ, ದೇವರಿಗೆ ಪೂಜೆ ಮಾಡಿ, ಬೇವು ಬೆಲ್ಲಗಳ ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ, ಪಂಚಾಂಗ ಶ್ರವಣ ಮಾಡುತ್ತಾರೆ.

ಪ್ರತಿಯೊಂದು ಹಬ್ಬ ನಮ್ಮ ಬದುಕಿನ ದಿವ್ಯ ಸಂದೇಶವನ್ನೇ ನೀಡುತ್ತದೆ. ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ ಬೇವುಬೆಲ್ಲ ದೈವೀಗುಣ ಮೈಗೂಡಿಸಿಕೊಳ್ಳುತ್ತ (ಬೆಲ್ಲ) ಪ್ರಕೃತಿಗಾಗಿ ಹಂಬಲಿಸುತ್ತ (ಬೇವು) ತಾಳ್ಮೆಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ದಿವ್ಯ ಸಂದೇಶವನ್ನೇ ಬಿಂಬಿಸುತ್ತದೆ. ಮಹಾಕವಿಯ ವರ್ಣನೆ ಮಹಾಕವಿ ಕುವೆಂಪುರವರು ಯುಗಾದಿಯನ್ನು ಪ್ರಕೃತಿಯ ವೈಭವವಾಗಿ ಕಂಡಿದ್ದಾರೆ. ಚೈತ್ರ ಮಾಸದಲ್ಲಿ ಮರಗಿಡಗಳು ಚಿಗುರುವುದನ್ನು, ಕೋಗಿಲೆ ಗಾಯನವನ್ನು ಅವರು ವರ್ಣಿಸಿದ್ದಾರೆ. ಅವರ ದೃಷ್ಟಿಯಲ್ಲಿ ಯುಗಾದಿ ಎಂದರೆ `ಜಗದ ಚೇತನಕ್ಕೆ ಹೊಸ ಕಳೆ ಬರುವ ಸಮಯ’  ಹಳೆಯ ಎಲೆಗಳು ಉದುರಿ ಹೊಸ ಚಿಗುರು ಬರುವಂತೆ, ಮನುಷ್ಯನ ಮನಸ್ಸಿನ ಕಲ್ಮಶಗಳು ದೂರವಾಗಿ ಹೊಸ ವಿಚಾರಗಳು ಮೂಡಬೇಕು ಎಂದು ಅವರು ಆಶಿಸುತ್ತಾರೆ. ಹಾಗೆ ತಮ್ಮ ಯುಗಾದಿ ಕವನದಲ್ಲಿ ಬೇವುಬೆಲ್ಲಗಳ ಸಂಗಮದ ಬಗ್ಗೆ ತುಂಬಾ ಸುಂದರವಾಗಿ ಹೀಗೆ ಹೇಳುತ್ತಾರೆ.

`ಮಾವಿನ ಬೇವಿನ ತೋರಣ ಕಟ್ಟು, ಬೇವು ಬೆಲ್ಲಗಳ ನೊಟ್ಟಿಗೆ ಕುಟ್ಟು, ಜೀವನವೆಲ್ಲ ಬೇವುಬೆಲ್ಲ ಎರಡೂ ಸವಿದರನೇ ಕವಿಮಲ್ಲ.’ ಹಾಗೆ ಹೊಸ ಬಟ್ಟೆ ತೊಟ್ಟು ಹೋಳಿಗೆ ಹೂರಣ ತಿಂದ ಮಾತ್ರಕ್ಕೆ ಯುಗಾದಿಯ ಆಶಯ ಪೂರ್ಣವಾಗುವುದಿಲ್ಲ. ಮಾನವನೊಳಗೆ ಸೇರಿರುವ ದ್ವೇಷ, ಮತ್ಸರಗಳು ತೊಲಗಬೇಕು. ಪ್ರೀತಿ, ಸ್ನೇಹಗಳು ಮೂಡಬೇಕು.

`ತೊಲಗಲಿ ದುಃಖ, ತೊಲಗಲಿ ಮತ್ಸರ ಪ್ರೇಮಕ್ಕೆ ಮೀಸಲು ನವ ಸಂವತ್ಸರ’ ಎಂದು ಸುಂದರವಾಗಿ ವರ್ಣಿಸಿದ್ದಾರೆ. ಯುಗಾದಿಯ ಶ್ಲೋಕ ಬೇವುಬೆಲ್ಲ ಸ್ವೀಕರಿಸುವಾಗ ಈ ಶ್ಲೋಕವನ್ನು ಹೇಳುತ್ತಾರೆ.

`ಶತಾಯುವರ್ಜ್ರದೇವಾಲಯ  ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ.’ ಈ ಶ್ಲೋಕದ ಅರ್ಥ ನೂರು ವರ್ಷಗಳ ಆಯುಸ್ಸು, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ ರೋಗ ನಿವಾರಣೆಗಾಗಿ ಬೇವುಬೆಲ್ಲ ಸೇವನೆ ಮಾಡುತ್ತೇನೆ ಎಂದು ಅರ್ಥ. ಬೇವುಬೆಲ್ಲವನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಕೊಟ್ಟು ಶುಭಾಶಯ ಕೋರುತ್ತಾರೆ.

ಬೇವುಬೆಲ್ಲ ನಮ್ಮ ಬದುಕಿನ ಸಿಹಿಕಿಹಿಗಳ ಪ್ರತೀಕ. ನೋವು ನಲಿವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಭಾವ ಇದರಲ್ಲಿದೆ. ಬೇವು ಕಹಿಯ ಸಂಕೇತವಾದರೆ, ಬೆಲ್ಲ ಸಿಹಿಯ ಸಂಕೇತ. ಪ್ರತಿಯೊಬ್ಬರ ಜೀವನದಲ್ಲಿಯೂ ಕೇವಲ ಸಿಹಿಯೊಂದೇ ಅಂದರೆ ಸುಖವೇ ಬರುವುದು ಸಾಧ್ಯವಿಲ್ಲ. ಆಗಾಗ್ಗೆ ಕಹಿ ಅಂದರೆ ಕಷ್ಟಗಳು ಬರುತ್ತಿರುತ್ತವೆ. ಆಗ ನಾವು ಜೀವನದಲ್ಲಿ ನಿರಾಶೆ ಹೊಂದಬಾರದು ಎನ್ನುವುದರ ಸೂಚಕವಾಗಿ ಬೇವುಬೆಲ್ಲ ಎರಡನ್ನೂ ಸೇವಿಸಬೇಕು.

ಸಿಹಿಕಹಿಯ ಪ್ರತೀಕ

ಇವೆರಡೂ ಸುಖ ದುಃಖದ ಪ್ರತೀಕ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಎರಡನ್ನೂ ನಮ್ಮ ಜೀವನದಲ್ಲಿ ಸಮನವಾಗಿ ಸ್ವೀಕರಿಸಬೇಕು ಎಂಬುದೇ ಇದರ ಅರ್ಥ.

`ಜನ ಜೀವನದಲ್ಲಿ ಬೆರೆತಿರುವ ವಿರಸವೆಂಬ ವಿಷಯವನ್ನು ಕಳೆದು, ಸೌಹಾರ್ದತೆಯನ್ನು ಯುಗಾದಿ ನೆಲೆಗೊಳಿಸಲಿ,’ ಎನ್ನುತ್ತಾರೆ ಕವಿಗಳು.

ಡಾ. ಕೆ. ಪರೀಫಾರವರು ಯುಗಾದಿಯನ್ನು ಪುಟ್ಟಮಗುವಿನಂತೆ ಬಾ ಯುಗಾದಿ ಎಂಬ ತಮ್ಮ ಕವನದಲ್ಲಿ ಸುಂದರವಾಗಿ ಕರೆದಿದ್ದಾರೆ.

ಬರುವುದಾದರೆ ಬಾ ಯುಗಾದಿ

ಮೆಲ್ಲಗೆ ನನ್ನ ಕೈ ಬೆರಳು ಹಿಡಿದು

ನಡೆ ಪುಟ್ಟ ಮಗುವಿನಂತೆ

ನಡೆದು ಬಾ ಹೊಸ ವರ್ಷವೇ

ಅಬ್ಬರಿಸಿ ಗದ್ದರಿಸಿದಿರು ನನಗೆ

ಬರುವುದೇ ಆದರೆ ಮೆಲ್ಲಗೆ ಬಾ

ಮಾವು ಬೇವಿನ ಉದುರದಂತೆ

ಹೂ ನಡಿಗೆಯ ಮಗುವಿನಂತೆ ನಡೆದು ಬಾ ಯುಗಾದಿಯೇ….. ಎಂದು ಪ್ರೀತಿಯಿಂದ ಕರೆದಿದ್ದಾರೆ.

ಜೆ.ಪಿ. ರಾಜರತ್ನಂ ಅವರು ಜೀವನದ ಸುಖ ದುಃಖದ ಬಗ್ಗೆ ಹೀಗೆ ಹೇಳಿದ್ದಾರೆ.

ಲೋಕದಲ್ಲಿ ಸೂರ್ಯಚಂದ್ರರಿದ್ದಂತೆ, ಅವರಿಗೆ ಉದಯಾಸ್ತಮಾನಗಳಿದ್ದಂತೆ, ಅದರಿಂದಾಗುವ ಹಗಲು ರಾತ್ರಿಗಳಿದ್ದಂತೆ. ಬೆಳಕು ಕತ್ತಲೆಗಳಂತೆ.

ಮನುಷ್ಯರ ಬದುಕಿನಲ್ಲಿಯೂ ಸುಖ, ದುಃಖಗಳು ಯಾವ ಕಾಲಕ್ಕೂ ಇರುವುದೇ ಇವು. ಒಂದನ್ನು ಬಿಟ್ಟು ಒಂದು ಇಲ್ಲ. ಒಂದಾದ ಮೇಲೆ ಒಂದು ಉಂಟು.

ಎರಡು ಜೊತೆ ಜೊತೆಯಲ್ಲಿಲ್ಲ. ಇರುವುದು ಉಂಟು ಎಂಬ ಅರಿವು ಯಾವಾಗ ನಮಗೆ ಆಗುತ್ತದೋ ಅಂದೇ ನಮಗೆ ನಿಜವಾದ ಯುಗಾದಿ!

ಬೇಂದ್ರೆಯವರ ಮಹಾಕಾವ್ಯಾ

ಡಾ. ದ.ರಾ. ಬೇಂದ್ರೆಯವರು ಯುಗಾದಿಯನ್ನು ಕೇವಲ ಒಂದು ಹಬ್ಬವಾಗಿ ನೋಡದೆ, ಪ್ರಕೃತಿಯಲ್ಲಿ ಸಂಭವಿಸುವ ನಿರಂತರ ಪುನರ್ಜನ್ಮವಾಗಿ ಕಂಡಿದ್ದಾರೆ. ಹಳೆಯದನ್ನು ಮರೆತು ಹೊಸ ಚೈತನ್ಯದೊಂದಿಗೆ ಬದುಕನ್ನು ಸ್ವಾಗತಿಸಬೇಕೆಂಬುದು ಅವರ ಆಶಯ.

`ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ,’ ಎಂದು ಪ್ರಕೃತಿಯ ಬಗ್ಗೆ ಸೊಗಸಾಗಿ ವರ್ಣಿಸಿದ್ದಾರೆ. ಹಾಗೆ ಯುಗಾದಿ ಎಂದ ಕೂಡಲೇ ನೆನಪಾಗುವುದು ಬೇಂದ್ರೆಯವರ ಈ ಅಮರ ಸಾಲುಗಳು `ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…..’

ಮುಖ್ಯವಾಗಿ ಯುಗಾದಿ ಆಚರಣೆಯೊಂದಿಗೆ ಅವಿಭಾಜ್ಯ ಅಂಗವಾಗಿ ಹೆಣೆದುಕೊಂಡಿದೆ ಈ ಕವಿತೆ. ಈ ಕವಿತೆ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ನಾಡಗೀತೆ ಎಲ್ಲವೂ ಆಗಿದೆ. ಯುಗಾದಿ ಮಹತ್ವವನ್ನು ಸಾರುವ ಬೇಂದ್ರೆಯವರ ಈ ಕವಿತೆ ಅಂದು ಪಂಚಾಂಗ ಶ್ರವಣದಷ್ಟೇ ಕಡ್ಡಾಯವೆನಿಸಿದೆ. ಬೇಂದ್ರೆಯವರ ಕವನ `ಯುಗ ಯುಗಾದಿ’  ಯುಗಾದಿಗೆ ಯುಗಾದಿಯೇ ಸಾಟಿ ಎಂದು ಹರ್ಷಘೋಷದೊಂದಿಗೆ ಆರಂಭವಾಗುತ್ತದೆ.

ಕವಿದೃಷ್ಟಿಯಲ್ಲಿ ಯುಗಾದಿಯ ಸಾರಾಂಶ

ಬದಲಾವಣೆ : ಶಿಶಿರ ಋತುವಿನ ಎಲೆ ಉದುರುವಿಕೆ ಮುಗಿದು, ವಸಂತನ ಆಗಮನದೊಂದಿಗೆ ಪ್ರಕೃತಿ ಹೇಗೆ ಮೈದುಂಬಿಕೊಳ್ಳುತ್ತದೋ ಹಾಗೆಯೇ ಮನುಷ್ಯನ ಬದುಕು ಕೂಡ ಬದಲಾವಣೆಗೆ ಒಗ್ಗಿಕೊಳ್ಳಬೇಕು.

ಬೇವುಬೆಲ್ಲದ ತತ್ವ : ಬದುಕು ಕೇವಲ ಸಿಹಿಯಲ್ಲ, ಕಹಿಯೂ ಉಂಟು. ಎರಡನ್ನು ಸಮಚಿತ್ತದಿಂದ ಸ್ವೀಕರಿಸುವವನೇ ನಿಜವಾದ ಮನುಷ್ಯ ಎಂಬುದನ್ನು ಕವಿಗಳು ನೆನಪಿಸುತ್ತಾರೆ.

ಹೊಸ ಭರವಸೆ : ಹಳೆಯ ವರ್ಷದ ನೋವು ಸೋಲುಗಳನ್ನು ಮರೆತು ಹೊಸ ಉತ್ಸಾಹದಿಂದ ಕೆಲಸ ಆರಂಭಿಸಲು ಯುಗಾದಿ ಸ್ಛೂರ್ತಿ ನೀಡುತ್ತದೆ.

ಇಂತಹ ಮಹಾಕವಿಗಳು ರಸವತ್ತಾಗಿ ತಮ್ಮ ಕವನದಲ್ಲಿ ಯುಗಾದಿ ಬಗ್ಗೆ ಸುಂದರವಾಗಿ ವರ್ಣಿಸಿದ ಅವರಿಗೆ ನಮನಗಳನ್ನು ಸಲ್ಲಿಸೋಣ.

ಕವಿಗೋಷ್ಠಿಗಳಲ್ಲಿ ಯುಗಾದಿ

ಕವಿಗೋಷ್ಠಿಗಳಲ್ಲಿ ಯುಗಾದಿಯ ಕುರಿತು ಕವಿತೆಗಳನ್ನು ಓದುವ ಸಂಪ್ರದಾಯ ಇಂದಿಗೂ ನಮ್ಮ ಕರ್ನಾಟಕದಲ್ಲಿ ಜೀವಂತವಾಗಿದೆ. ಕವಿಗಳಿಗೆ ಯುಗಾದಿ ಎಂದರೆ `ಹೊಸ ಆಶೀರ್ವಾದದ ಸಂಕೇತ.’

ಅಂತೂ ಯುಗಾದಿ ಸೃಷ್ಟಿಯ ಸಂಕೇತ. ಸೃಷ್ಟಿಯ ಹೊಸತವನ್ನು ಪ್ರತಿನಿಧಿಸುತ್ತದೆ. ನಾವು ದ್ವೇಷ, ಅಸೂಯೆಗಳನ್ನು ಬಿಟ್ಟು ಪ್ರೀತಿ, ಸ್ನೇಹದಿಂದ ಇದ್ದು ಪ್ರಕೃತಿಯನ್ನು ಕಾಪಾಡಿಕೊಂಡು ಈ ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಆಚರಿಸೋಣ. ಓದುಗರೆಲ್ಲರಿಗೂ ಗೃಹಶೋಭಾ ಪರವಾಗಿ ಯುಗಾದಿ ಹಬ್ಬದ ಶುಭಾಶಯಗಳು!

ರಾಜೇಶ್ವರಿ ವಿಶ್ವನಾಥ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ