ದೇವರ ಪಾದ ಸೇರಿದ್ದ ಹೂವು ಮತ್ತು ತುಳಸೀಗಳಿಗೆ ಹೊಸ ಬದುಕು ಕೊಟ್ಟ ಭಾರತೀಯ ಉದ್ಯಮಿಗಳು – ಆಯುರ್ವೇದ ಔಷಧಿ, ಧೂಪ, ಗೊಬ್ಬರ, ಸಾಬೂನು, ಅಲಂಕಾರಿಕ ವಸ್ತುಗಳಿಂದ ಬಯೋ-ಲೆದರ್‌ವರೆಗೆ

Phool: The Indian Startup Turning Waste Temple Flowers into Biodegradable 'Fleather'

ಹೂವು ಎಂದರೆ ಸೌಂದರ್ಯ, ಪರಿಮಳ, ಭಕ್ತಿ ಮತ್ತು ಶುಭದ ಸಂಕೇತ. ಮದುವೆ, ಗೃಹಪ್ರವೇಶ, ಹಬ್ಬ, ಪೂಜೆ, ದೇವಾಲಯದ ಆರಾಧನೆ, ಧಾರ್ಮಿಕ ಕಾರ್ಯಕ್ರಮ—ಯಾವುದೇ ಶುಭಸಂದರ್ಭವಿರಲಿ, ಹೂವುಗಳಿಗೆ ವಿಶೇಷ ಸ್ಥಾನವಿದೆ. ದೇವರ ಮೂರ್ತಿಗೆ ಅರ್ಪಿಸುವ ಹೂವಿನಿಂದ ಹಿಡಿದು, ಹೂಮಾಲೆ, ನೈವೇದ್ಯದ ಅಲಂಕಾರ, ಮಂಟಪದ ಸಿಂಗಾರ, ಮದುವೆಯ ವೇದಿಕೆ—ಎಲ್ಲೆಡೆ ಹೂವಿನ ಬಳಕೆ ಅಪಾರ. ಆದರೆ ಪೂಜೆ ಮುಗಿದ ಮೇಲೆ? ಮದುವೆ ಮುಗಿದ ಮೇಲೆ? ಹಬ್ಬ ಮುಗಿದ ಮೇಲೆ? ನಿನ್ನೆ ದೇವರ ಪಾದದಲ್ಲಿದ್ದ ಹೂವು ಇಂದು ಕಸದ ಬುಟ್ಟಿಗೆ ಸೇರುತ್ತದೆ. ಕೆಲವೊಮ್ಮೆ ದೇವಸ್ಥಾನದ ಆವರಣದಲ್ಲೇ ರಾಶಿಯಾಗುತ್ತದೆ. ಕೆಲವೊಮ್ಮೆ ಚರಂಡಿಗೆ ಸೇರುತ್ತದೆ. ಇನ್ನೂ ಕೆಲವೆಡೆ ನದಿಗೆ ಎಸೆಯಲಾಗುತ್ತದೆ.

ಇದೇ ಸಮಸ್ಯೆಯಲ್ಲಿ ಕೆಲ ಭಾರತೀಯ ಉದ್ಯಮಿಗಳು ಒಂದು ಅಪೂರ್ವ ಅವಕಾಶವನ್ನು ಕಂಡುಕೊಂಡಿದ್ದಾರೆ. ತ್ಯಾಜ್ಯ ಎಂದು ಬಿಸಾಡುವ ಹೂವಿಗೆ ಮತ್ತೊಂದು ಜೀವನ ಕೊಡಬಾರದೇ? ಎಂಬ ಸರಳ ಪ್ರಶ್ನೆಯಿಂದ ಆರಂಭವಾದ ಪ್ರಯತ್ನ ಇಂದು ಧೂಪ, ಅಗರಬತ್ತಿ, ಗೊಬ್ಬರ, ಸಾಬೂನು, ಸುಗಂಧ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ವಿಗ್ರಹಗಳು ಮಾತ್ರವಲ್ಲದೆ ಹೊಸ ಜೈವಿಕ ವಸ್ತುಗಳವರೆಗೂ ವಿಸ್ತರಿಸಿದೆ. ಅದರಲ್ಲೂ ಕೆಲವು ಉದ್ಯಮಗಳು ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಸಾಮಾಜಿಕ ಉದ್ಯಮಗಳಾಗಿ ಬೆಳೆದಿವೆ. ಹೂವು ಕಸದ ಬುಟ್ಟಿಗೆ ಹೋಗುವುದನ್ನು ತಡೆಯುವುದಷ್ಟೇ ಅಲ್ಲ—ಕಸವನ್ನು ಕಚ್ಚಾ ವಸ್ತುವನ್ನಾಗಿ ಪರಿವರ್ತಿಸಿ ಮೌಲ್ಯ ಸೃಷ್ಟಿಸುವ ಸರ್ಕ್ಯುಲರ್ ಎಕಾನಮಿ ಮಾದರಿಯನ್ನೇ ಈ ಉದ್ಯಮಗಳು ತೋರಿಸಿಕೊಟ್ಟಿವೆ.

ಹೂವಿನ ತ್ಯಾಜ್ಯವೂ ಪರಿಸರ ಸಮಸ್ಯೆಯೇ?

ಹೂವು ನೈಸರ್ಗಿಕವಾದುದೇನೋ ಸರಿ. ಆದರೆ ಅದನ್ನು ಹಾಗೆಯೇ ನದಿಗೆ ಎಸೆದರೆ ಸಮಸ್ಯೆಯೇ ಇಲ್ಲ ಎಂದು ಹೇಳಲಾಗದು. ಹೂವುಗಳನ್ನು ಬೆಳೆಸುವಾಗ ಬಳಸಿದ ಕೀಟನಾಶಕ ಮತ್ತು ರಾಸಾಯನಿಕಗಳ ಅವಶೇಷಗಳು, ಹೂವಿನೊಂದಿಗೆ ಸೇರಿದ ಪ್ಲಾಸ್ಟಿಕ್ ದಾರ, ಪ್ಯಾಕಿಂಗ್ ವಸ್ತುಗಳು, ಪಾಲಿಥಿನ್, ಅಲಂಕಾರಿಕ ವಸ್ತುಗಳು ಮುಂತಾದವು ನೀರು ಮತ್ತು ಮಣ್ಣಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. Phool ಸಂಸ್ಥೆಯೇ ವಿವರಿಸುವಂತೆ, ದೇವಾಲಯಗಳಲ್ಲಿ ಅರ್ಪಿಸಲಾದ ಹೂವುಗಳನ್ನು ನದಿಗೆ ಎಸೆಯುವುದರಿಂದ ಹೂವುಗಳೊಂದಿಗೆ ಕೃಷಿಯಲ್ಲಿ ಬಳಸಿದ ಕೆಲವು ರಾಸಾಯನಿಕಗಳು ನೀರಿಗೆ ಸೇರಬಹುದೆಂಬ ಆತಂಕವಿದೆ. ಅದಕ್ಕಾಗಿಯೇ ಭಕ್ತಿ ಮಾಲಿನ್ಯವಾಗಬಾರದು ಎಂಬ ಪರಿಕಲ್ಪನೆಯೊಂದಿಗೆ ಹೂವುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಪ್ರಯತ್ನ ಆರಂಭವಾಯಿತು.  ಇದೀಗ ಭಾರತದಲ್ಲಿ ಈ ಕ್ಷೇತ್ರದಲ್ಲಿ ಗಮನ ಸೆಳೆದಿರುವ ನಾಲ್ಕು ವಿಭಿನ್ನ ಪ್ರಯತ್ನಗಳನ್ನು ನೋಡೋಣ.

ಉಡುಪಿಯ ಕೃಷ್ಣನಿಗೆ ಪ್ರತೀ ದಿನವೂ ಮಾಡುವ ಲಕ್ಷ ತುಳಸಿ ಅರ್ಪಣೆಯಾದ ಏನು ಮಾಡಲಾಗುತ್ತದೆ?

ನಿತ್ಯ ಲಕ್ಷ ತುಳಸಿ ಅರ್ಚನೆ ಆರಂಭವಾದ ಸಂದರ್ಭದಲ್ಲಿ ಪ್ರತಿದಿನ ದೊಡ್ಡ ಪ್ರಮಾಣದ ತುಳಸಿ ಬಳಕೆಯಾಗುತ್ತಿತ್ತು. ಪೂಜೆಯ ನಂತರ ಅದನ್ನು ವ್ಯರ್ಥವಾಗಿ ಎಸೆಯುವ ಬದಲು ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಉದ್ದೇಶದಿಂದ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಪಣೆಯಾದ ತುಳಸಿ ಎಲೆಗಳನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ, ಕುತ್ಪಾಡಿಗೆ ಕಳುಹಿಸಿ, ಅವುಗಳಿಂದ ತುಳಸಿ ಆಧಾರಿತ ಹರ್ಬಲ್ ಕ್ಯಾಪ್ಸುಲ್‌ಗಳನ್ನು ತಯಾರಿಸುವ ವ್ಯವಸ್ಥೆ ಮಾಡಲಾಗಿದ್ದು, ಅದರ ಪ್ರಕ್ರಿಯೆ  ಹೀಗಿದೆ

ಪೂಜೆಗೆ ತುಳಸಿ → ಸಂಗ್ರಹ → ಒಣಗಿಸುವುದು → ಕಷಾಯ/ಸಾರ ತಯಾರಿಕೆ → ಸಾಂದ್ರೀಕರಣ → ಸ್ಪ್ರೇ ಡ್ರೈಯಿಂಗ್ → ಹರ್ಬಲ್ ಎಕ್ಸ್‌ಟ್ರಾಕ್ಟ್ → ಕ್ಯಾಪ್ಸುಲ್

ವರದಿಯ ಪ್ರಕಾರ, ಸುಮಾರು 100 ಕೆ.ಜಿ. ತಾಜಾ ತುಳಸಿ ಎಲೆಗಳನ್ನು ವ್ಯಾಕ್ಯೂಮ್ ಡ್ರೈಯರ್‌ನಲ್ಲಿ ಒಣಗಿಸಿದಾಗ ಸುಮಾರು 10 ಕೆ.ಜಿ. ಒಣ ವಸ್ತುವಾಗುತ್ತದೆ. ಅದನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ, ವ್ಯಾಕ್ಯೂಮ್ ಕಾನ್ಸೆಂಟ್ರೇಷನ್ ಮೂಲಕ ಸಾಂದ್ರೀಕರಿಸಲಾಗುತ್ತದೆ. ನಂತರ ಸ್ಪ್ರೇ ಡ್ರೈಯರ್ ಬಳಸಿ ಅದನ್ನು ಇನ್ನಷ್ಟು ಸಾಂದ್ರೀಕರಿಸಿ ಸುಮಾರು 2.5–3 ಕೆ.ಜಿ. ತುಳಸಿ ಸಾರ ಪಡೆಯಲಾಗುತ್ತದೆ. ಅದರಿಂದ ಕ್ಯಾಪ್ಸುಲ್‌ಗಳನ್ನು ತಯಾರಿಸಲಾಗುತ್ತದೆ. ಹೀಗೆ ದೇವರಿಗೆ ಅರ್ಪಿತವಾಗಿ ಪ್ರಸಾದವಾಗುವ ತುಳಸೀ ದಳಗಳು ಮತ್ತೆ ಜೀವರಕ್ಷಕ ಔಷಧಿಗಳಾಗಿ ಅನಾರೋಗ್ಯ ಪೀಡಿತರ ಖಾಹಿಲೆಯನ್ನು ಗುಣಪಡಿಸಿವುದು ನಿಜಕ್ಕೂ ಅದ್ಭುತವಾಗಿದೆ

PHOOL – ಗಂಗೆಯ ದಡದಲ್ಲಿ ಹುಟ್ಟಿದ ಹೂವಿನ ಕ್ರಾಂತಿ

ಭಾರತದಲ್ಲಿ ಹೂವಿನ ತ್ಯಾಜ್ಯವನ್ನು ಉದ್ಯಮವಾಗಿ ಪರಿವರ್ತಿಸಿದ ಅತ್ಯಂತ ಗಮನಾರ್ಹ ಹೆಸರುಗಳಲ್ಲಿ Phool ಪ್ರಮುಖವಾದುದು. ಇದರ ಹಿಂದೆ ಅಂಕಿತ್ ಅಗರ್ವಾಲ್ ಮತ್ತು ಪ್ರತೀಕ್ ಕುಮಾರ್ ಇದ್ದಾರೆ. ಕಥೆ ಆರಂಭವಾಗಿದ್ದು 2015ರ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ. ಕಾನ್ಪುರದ ಗಂಗಾ ಘಾಟ್‌ಗೆ ಹೋದ ಅಂಕಿತ್ ಅಗರ್ವಾಲ್, ಜನರು ಪೂಜೆ ಮುಗಿಸಿ ಹೂವುಗಳನ್ನು ನದಿಗೆ ಎಸೆಯುತ್ತಿರುವುದನ್ನು ಗಮನಿಸಿದರು. ಗಂಗೆಯ ಮಾಲಿನ್ಯಕ್ಕೆ ಕೈಗಾರಿಕಾ ತ್ಯಾಜ್ಯ ಮಾತ್ರ ಕಾರಣವಲ್ಲ; ಧಾರ್ಮಿಕ ಆಚರಣೆಗಳಿಂದ ಉಂಟಾಗುವ ತ್ಯಾಜ್ಯವೂ ಒಂದು ಭಾಗ ಎಂಬ ಅರಿವು ಅವರಿಗೆ ಮೂಡಿತು. ಆ ಕಲ್ಪನೆಯೇ ಮುಂದೆ Phool ಆಗಿ ರೂಪುಗೊಂಡಿತು.

2017ರಲ್ಲಿ ಆರಂಭವಾದ ಈ ಸಂಸ್ಥೆ ದೇವಸ್ಥಾನಗಳಿಂದ ಬಳಸಿ ಬಿಸಾಡಿದ ಹೂವುಗಳನ್ನು ಸಂಗ್ರಹಿಸಿ ಅವುಗಳನ್ನು ಅಗರಬತ್ತಿ, ಧೂಪ, ಧೂಪದ ಕೋನ್‌ಗಳು, ನೈಸರ್ಗಿಕ ಗೊಬ್ಬರ, ಸುಗಂಧ ಉತ್ಪನ್ನಗಳು, ಇತರ ಜೀವನಶೈಲಿ ಉತ್ಪನ್ನಗಳು ಮುಂತಾದವುಗಳಾಗಿ ಪರಿವರ್ತಿಸಲು ಆರಂಭಿಸಿತು.

ಆದರೆ Phool ಕಥೆ ಇಲ್ಲಿಗೇ ಮುಗಿಯುವುದಿಲ್ಲ!

ಸಂಸ್ಥೆಯು ನಂತರ ಹೂವಿನ ತ್ಯಾಜ್ಯದಿಂದ ಜೈವಿಕ ಚರ್ಮದ ಪರ್ಯಾಯ “Fleather” ಹಾಗೂ Florafoam ಸೇರಿದಂತೆ ಹೊಸ ಜೈವಿಕ ವಸ್ತುಗಳ ಅಭಿವೃದ್ಧಿಯತ್ತಲೂ ಸಂಶೋಧನೆ ನಡೆಸಿದೆ. ಸಂಸ್ಥೆಯ ಪ್ರಕಾರ, ಹೂವಿನ ತ್ಯಾಜ್ಯದಿಂದ biodegradable packaging ಮತ್ತು bio-leather ಅಭಿವೃದ್ಧಿಪಡಿಸುವ R&D ಕೂಡ ನಡೆದಿದೆ. ಅಂದರೆ, ನಿನ್ನೆ ದೇವರ ಪಾದದಲ್ಲಿದ್ದ ಹೂವು, ಇಂದು ಅಗರಬತ್ತಿಯಾಗಬಹುದು. ನಾಳೆ ಜೈವಿಕ ವಸ್ತುವಾಗಬಹುದು ಇದೇ ಈ ಉದ್ಯಮದ ಅತ್ಯಂತ ಕುತೂಹಲಕಾರಿ ಅಂಶ.

ಮಹಿಳೆಯರಿಗೆ ಉದ್ಯೋಗವೂ

This Indian Startup Is Upcycling Floral Waste Into Vegan LeatherPhoolನ ಮಾದರಿಯಲ್ಲಿ ಗ್ರಾಮೀಣ ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಒಳಗೊಂಡು ಹೂವಿನ ಸಂಸ್ಕರಣೆ ಮತ್ತು ಉತ್ಪನ್ನ ತಯಾರಿಕೆಯಲ್ಲಿ ಉದ್ಯೋಗ ಸೃಷ್ಟಿಸುವ ಪ್ರಯತ್ನವೂ ನಡೆದಿದೆ. ಸಂಸ್ಥೆಯ ಹಳೆಯ ಪ್ರಕಟಣೆಯ ಪ್ರಕಾರ, ಅವರ ಕಾರ್ಯಾಚರಣೆಯು ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿತ್ತು. ಹೀಗಾಗಿ ಇದು ಕೇವಲ ಹೂವಿನಿಂದ ಅಗರಬತ್ತಿ  ಮಾಡುವ ಉದ್ಯಮವಲ್ಲ, ಇದು, ತ್ಯಾಜ್ಯ ನಿರ್ವಹಣೆ + ಪರಿಸರ ಸಂರಕ್ಷಣೆ + ಮಹಿಳಾ ಉದ್ಯೋಗ + ಉತ್ಪನ್ನ ನಿರ್ಮಾಣ ಎಂಬ ನಾಲ್ಕು ಅಂಶಗಳನ್ನು ಒಂದೇ ಕಡೆ ಸೇರಿಸಿದ ಮಾದರಿ.

ಇನ್ನೊಂದು ಕುತೂಹಲಕಾರಿ ವಿಷಯ, ಹೂವಿನಿಂದಲೇ ಲೆದರ್!

ಹೂವಿನ ತ್ಯಾಜ್ಯದಿಂದ ಅಗರಬತ್ತಿ ಮಾಡುವುದು ಅರ್ಥವಾಗುತ್ತದೆ. ಗೊಬ್ಬರ ಮಾಡುವುದು ಸಹಜ. ಆದರೆ ಹೂವಿನಿಂದ leather alternative? ಇದು ಈ ಕ್ಷೇತ್ರದ ಅತ್ಯಂತ ಕುತೂಹಲಕಾರಿ ಬೆಳವಣಿಗೆಗಳಲ್ಲಿ ಒಂದು. Phool ತನ್ನ R&D ಮೂಲಕ Fleather ಎಂಬ bio-leather ಉತ್ಪನ್ನದ ಅಭಿವೃದ್ಧಿಯತ್ತ ಕೆಲಸ ಮಾಡಿದೆ. ಇದರ ಉದ್ದೇಶ ಪ್ರಾಣಿಗಳ ಚರ್ಮಕ್ಕೆ ಪರ್ಯಾಯವಾಗಬಲ್ಲ ಜೈವಿಕ ವಸ್ತುವನ್ನು ಅಭಿವೃದ್ಧಿಪಡಿಸುವುದು. ಸಂಸ್ಥೆಯ ಪ್ರಸ್ತುತ ತಂಡದ ಮಾಹಿತಿಯಲ್ಲಿಯೂ flower wasteನಿಂದ bio-leather ಮತ್ತು Florafoam ಅಭಿವೃದ್ಧಿಯ ಸಂಶೋಧನೆ ಉಲ್ಲೇಖಿಸಲಾಗಿದೆ. ಅಂದರೆ ನಾಳೆಯ ದಿನಗಳಲ್ಲಿ ನಾವು ಹೂವಿನ ತ್ಯಾಜ್ಯದಿಂದ, ಅಗರಬತ್ತಿ ಮಾತ್ರವಲ್ಲ, ಫ್ಯಾಷನ್ ಮತ್ತು ಪ್ಯಾಕೇಜಿಂಗ್ ಕ್ಷೇತ್ರಕ್ಕೂ ಬೇಕಾಗುವ ಜೈವಿಕ ವಸ್ತುಗಳನ್ನು ನೋಡಬಹುದಾಗಿದೆ.

HOLYWASTE – ಹೂವಿನ ತ್ಯಾಜ್ಯಕ್ಕೆ FloRejuvenation

ಹೈದರಾಬಾದ್‌ನಲ್ಲಿ ಮಾಯಾ ವಿವೇಕ್ ಮತ್ತು ಮಿನಲ್ ದಾಲ್ಮಿಯಾ ಅವರು Oorvi Sustainable Concepts Pvt Ltd ಅಡಿಯಲ್ಲಿ HolyWaste ಎಂಬ ಸಾಮಾಜಿಕ ಉದ್ಯಮವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮಹಿಳಾ ನೇತೃತ್ವದ ಪರಿಸರ ಆಧಾರಿತ ಉದ್ಯಮ. 2018ರ ನವೆಂಬರ್‌ನಲ್ಲಿ ಅವರು ಹೂವಿನ ತ್ಯಾಜ್ಯದ ಬಗ್ಗೆ ಪ್ರಯೋಗ ಆರಂಭಿಸಿದರು. ನಂತರ ಸಂಸ್ಥೆಯನ್ನು ಅಧಿಕೃತವಾಗಿ ನೋಂದಾಯಿಸಿ ಕಾರ್ಯಾಚರಣೆಯನ್ನು ವಿಸ್ತರಿಸಿದರು. ವಿವಿಧ ಮೂಲಗಳಲ್ಲಿ ಸಂಸ್ಥೆಯ ಆರಂಭವನ್ನು 2018ರ ಪ್ರಯೋಗ ಹಂತ ಮತ್ತು 2019ರ ಅಧಿಕೃತ ಸ್ಥಾಪನೆ ಎಂದು ವಿಭಿನ್ನವಾಗಿ ದಾಖಲಿಸಲಾಗಿದೆ.  ಅವರ ವಿಶೇಷ ವಿಧಾನಕ್ಕೆ ನೀಡಿರುವ ಹೆಸರು FloRejuvenation. ಅಂದರೆ, ಬಳಸಿ ಬಿಸಾಡಿದ ಹೂವಿಗೆ ಮರುಜೀವ ನೀಡುವುದು. HolyWaste ದೇವಸ್ಥಾನಗಳು, ಹೂವಿನ ವ್ಯಾಪಾರಿಗಳು, ಕಾರ್ಯಕ್ರಮ ಆಯೋಜಕರು ಮತ್ತು ಅಲಂಕಾರಕಾರರಿಂದ ಹೂವಿನ ತ್ಯಾಜ್ಯ ಸಂಗ್ರಹಿಸುತ್ತದೆ. ನಂತರ ಅದನ್ನು ವಿಂಗಡಿಸಿ, ಒಣಗಿಸಿ, ಸಂಸ್ಕರಿಸಿ ವಿವಿಧ ಉತ್ಪನ್ನಗಳನ್ನಾಗಿ ಮಾಡಲಾಗುತ್ತದೆ.

ಹೂವಿನಿಂದ ಸಾಬೂನು ಕೂಡ!

DIY Flowers Using Waste Materials Craft Tutorial

HolyWasteನ ಪ್ರಮುಖ ಉತ್ಪನ್ನಗಳಲ್ಲಿ ಚಾರ್ಕೋಲ್ ರಹಿತ ಅಗರಬತ್ತಿ, ಧೂಪ, ಸುಗಂಧ ಕೋನ್‌ಗಳು, ನೈಸರ್ಗಿಕ ಗೊಬ್ಬರ, ಪ್ಯಾರಬೆನ್ ರಹಿತ ಸಾಬೂನು ಮುಂತಾದವು ಸೇರಿವೆ. ಇದರ ಜೊತೆಗೆ Bio-Yarn, Bio-Fresheners, Bio-Pigments ಮುಂತಾದ ಹೊಸ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ ಎಂದು UNDPಯ Grassroots Innovation Database ದಾಖಲಿಸುತ್ತದೆ.

ಮಹಿಳೆಯರ ಬದುಕಿಗೂ ಹೊಸ ದಾರಿ

HolyWasteನ ಅತ್ಯಂತ ಗಮನಾರ್ಹ ಅಂಶವೆಂದರೆ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಮಹಿಳೆಯರನ್ನು “Rejuvenators” ಆಗಿ ತರಬೇತಿ ನೀಡಿ ಉದ್ಯೋಗ ನೀಡುವುದು. ಅಂದರೆ ಒಂದು ಹೂವು ಮರುಬಳಕೆಯಾಗುವುದಷ್ಟೇ ಅಲ್ಲ, ಒಂದು ಮಹಿಳೆಯ ಬದುಕಿಗೂ ಹೊಸ ಅವಕಾಶ ಸಿಗುತ್ತದೆ. UNDP ದಾಖಲೆಯ ಪ್ರಕಾರ, ಈ ಉದ್ಯಮವು ಹೂವಿನ ತ್ಯಾಜ್ಯದಿಂದ ಉತ್ಪನ್ನಗಳನ್ನು ತಯಾರಿಸುವುದರ ಜೊತೆಗೆ ಮಹಿಳೆಯರ ಜೀವನೋಪಾಯ ಸೃಷ್ಟಿಸುವ ಸಾಮಾಜಿಕ ಮಾದರಿಯನ್ನೂ ಬೆಳೆಸಿದೆ. 2021ರ ವರದಿಯೊಂದರ ಪ್ರಕಾರ, ಸಂಸ್ಥೆ ವಾರಕ್ಕೆ ಕನಿಷ್ಠ ಮೂರು ಬಾರಿ ವಿವಿಧ ಮೂಲಗಳಿಂದ ಸುಮಾರು 300 ಕೆಜಿ ಹೂವುಗಳನ್ನು ಸ್ವೀಕರಿಸುತ್ತಿತ್ತು; ದೇವಸ್ಥಾನಗಳು, ಹೂವಿನ ಮಾರಾಟಗಾರರು, ಕಾರ್ಯಕ್ರಮಗಳು ಮತ್ತು ಮದುವೆಗಳು ಅದರ ಮೂಲಗಳಾಗಿದ್ದವು.

AARUHI ENTERPRISE – ದೇವಸ್ಥಾನದ ಹೂವಿನಿಂದ ವಿಗ್ರಹದವರೆಗೆ!

ಕೆಲವೊಮ್ಮೆ ದೊಡ್ಡ ಉದ್ಯಮದ ಕಲ್ಪನೆ ಒಂದು ಸಾಮಾನ್ಯ ದೃಶ್ಯದಿಂದಲೇ ಹುಟ್ಟುತ್ತದೆ. ಪೂನಂ ಸೆಹ್ರಾವತ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಭಕ್ತರು ದೇವರಿಗೆ ಅರ್ಪಿಸಿದ ಹೂವುಗಳನ್ನು ಸ್ವಲ್ಪ ಸಮಯದ ನಂತರ ತೆಗೆದು ಬಿಸಾಡುತ್ತಿರುವುದನ್ನು ಗಮನಿಸಿದರು. ಅವರಿಗೆ ಒಂದು ಪ್ರಶ್ನೆ ಕಾಡಿತು: ದೇವರಿಗೆ ಅರ್ಪಿಸಿದ ಈ ಹೂವುಗಳಿಗೆ ಇಷ್ಟೇನಾ ಅಂತ್ಯ? ಆ ಪ್ರಶ್ನೆ ಮುಂದೆ ಉದ್ಯಮವಾಯಿತು. 2019ರಲ್ಲಿ ಪೂನಂ ಸೆಹ್ರಾವತ್ ಮತ್ತು ಪಿಂಕಿ ಯಾದವ್ ಸೇರಿ Aaruhi Enterprise ಆರಂಭಿಸಿದರು. ಸಂಸ್ಥೆ ದೆಹಲಿ-NCR ಪ್ರದೇಶದ ದೇವಸ್ಥಾನಗಳಿಂದ ಹೂವಿನ ತ್ಯಾಜ್ಯ ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುತ್ತದೆ.

ಹೂವಿನಿಂದ ವಿಗ್ರಹ!

Aaruhi Enterprises in Palam Vihar, Gurgaon - Best Dhoop Manufacturers in Gurgaon - Justdial

Aaruhiಯ ವಿಶೇಷತೆ ಎಂದರೆ ಹೂವಿನ ತ್ಯಾಜ್ಯವನ್ನು ಕೇವಲ ಅಗರಬತ್ತಿಗೆ ಸೀಮಿತಗೊಳಿಸದೇ ವಿವಿಧ ಕೈತಯಾರಿಕಾ ಉತ್ಪನ್ನಗಳನ್ನಾಗಿ ಮಾಡುವುದು. ಹೂವನ್ನು ಇತರ ತ್ಯಾಜ್ಯದಿಂದ ಬೇರ್ಪಡಿಸಿ, ಸಂಸ್ಕರಿಸಿ, ಧೂಪ, ಅಗರಬತ್ತಿ, ವಿಗ್ರಹಗಳು, ಅಲಂಕಾರಿಕ ವಸ್ತುಗಳು, ಏರ್ ಫ್ರೆಶನರ್‌ಗಳು ಮುಂತಾದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಅಂದರೆ, ದೇವರ ಮೂರ್ತಿಗೆ ಅರ್ಪಿಸಿದ ಹೂವು, ಮತ್ತೆ ಒಂದು ಅಲಂಕಾರಿಕ ವಿಗ್ರಹದ ರೂಪದಲ್ಲೇ ಮರಳಿ ಬರಬಹುದು! ಇದು ಮರುಬಳಕೆಯ ಅತ್ಯಂತ ಕುತೂಹಲಕಾರಿ ರೂಪ.

ಮಹಿಳೆಯರ ಕೈಯಲ್ಲಿ ಹೊಸ ಉದ್ಯೋಗ

Aaruhi ಮಹಿಳೆಯರಿಗೆ ತರಬೇತಿ ನೀಡಿ ಹೂವಿನ ಉತ್ಪನ್ನಗಳನ್ನು ತಯಾರಿಸುವ ಅವಕಾಶ ಕಲ್ಪಿಸುತ್ತದೆ. ಕೆಲವು ಕೆಲಸಗಳನ್ನು ಮನೆಮೂಲಕವೂ ಮಾಡಬಹುದಾದ ರೀತಿಯಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಮಾದರಿಯ ಬಗ್ಗೆ ಸಂಸ್ಥೆಯ ಮಾಹಿತಿ ಲಭ್ಯವಿದೆ.  ಕೆಲವು ಅಧ್ಯಯನಗಳಲ್ಲಿ Aaruhi ಸುಮಾರು 200 ಮಹಿಳೆಯರಿಗೆ ಉದ್ಯೋಗ ಮತ್ತು ತರಬೇತಿ ನೀಡುತ್ತಿರುವ ಸಾಮಾಜಿಕ ಉದ್ಯಮವೆಂದು ಉಲ್ಲೇಖಿಸಲಾಗಿದೆ.  ಇಲ್ಲಿ ಮತ್ತೊಂದು ದೊಡ್ಡ ಪಾಠವಿದೆ: ಕಸವನ್ನು ಸಂಗ್ರಹಿಸುವ ಕೈಗಳೇ ಅದನ್ನು ಮೌಲ್ಯಯುತ ಉತ್ಪನ್ನವನ್ನಾಗಿ ಮಾಡಬಲ್ಲವು.

ಹಿಮಾಚಲ ಪ್ರದೇಶದಲ್ಲಿ ಹೂವಿನಿಂದ ನೈಸರ್ಗಿಕ ಧೂಪ

ಹಿಮಾಚಲ ಪ್ರದೇಶದ ಉನಾ ಮೂಲದ ಉದ್ಯಮಿ ರವೀಂದರ್ ಪ್ರಶಾರ್ ಅವರು ಹೂವಿನ ತ್ಯಾಜ್ಯವನ್ನು ಮತ್ತೊಂದು ರೀತಿಯಲ್ಲಿ ಮರುಬಳಕೆ ಮಾಡುವ ಪ್ರಯತ್ನ ಕೈಗೊಂಡರು. ಅವರು Dr. Y.S. Parmar University of Horticulture and Forestry, Nauniಯ ತಜ್ಞರ ಸಹಕಾರದೊಂದಿಗೆ ದೇವಸ್ಥಾನಗಳಲ್ಲಿ ಭಕ್ತರು ಅರ್ಪಿಸುವ ಹೂವುಗಳಿಂದ ಸಾವಯವ ಧೂಪದ ಕಡ್ಡಿಗಳನ್ನು ಅಭಿವೃದ್ಧಿಪಡಿಸಿದರು. ಈ ಉಪಕ್ರಮಕ್ಕೆ Yuvan ಎಂಬ ಹೆಸರು ನೀಡಲಾಯಿತು. ಇದಕ್ಕೆ ಹಿಮಾಚಲ ಪ್ರದೇಶ ಸರ್ಕಾರದ Chief Minister’s Startup Scheme ಬೆಂಬಲ ದೊರೆಯಿತು.

ಇಲ್ಲಿ ವಿಶೇಷತೆ ಏನು?

Florists' Green Waste Blooms into Something New

Yuvan ಅಭಿವೃದ್ಧಿಪಡಿಸಿದ ಧೂಪದ ಕಡ್ಡಿಗಳಲ್ಲಿ ಹೂವುಗಳಿಂದ ದೊರೆಯುವ ನೈಸರ್ಗಿಕ ಭಾಗಗಳು ಮತ್ತು essential oils ಬಳಸಲಾಗುತ್ತದೆ. ವರದಿಗಳ ಪ್ರಕಾರ, ಇದರಲ್ಲಿ: ಇದ್ದಿಲು (charcoal) ಅಥವಾ ಕೃತಕ ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕ ಪದಾರ್ಥಗಳಿಂದ ಉತ್ಪನ್ನ ತಯಾರಿಸುವ ಪ್ರಯತ್ನ ಮಾಡಲಾಗಿದೆ. ಅಷ್ಟೇ ಅಲ್ಲ ಹೂವಿನ ಬಳಕೆಯಾಗದೆ ಉಳಿದ ಭಾಗವನ್ನೂ ವ್ಯರ್ಥ ಮಾಡದೆ ಕಾಂಪೋಸ್ಟ್ ಆಗಿ ಪರಿವರ್ತಿಸಲಾಗುತ್ತದೆ. ಹೀಗಾಗಿ ಈ ಮಾದರಿಯಲ್ಲಿ: ಹೂವು → ಧೂಪ ಉಳಿದ ಹೂವಿನ ಭಾಗ → ಕಾಂಪೋಸ್ಟ್ ಎಂಬ ಬಹುತೇಕ ಶೂನ್ಯ-ತ್ಯಾಜ್ಯ ವಿಧಾನ ರೂಪುಗೊಳ್ಳುತ್ತದೆ. 2019ರ ವರದಿಯ ಪ್ರಕಾರ, ಉತ್ಪಾದನಾ ಪ್ರಕ್ರಿಯೆಯನ್ನು carbon-neutral ಆಗಿರಿಸುವ ಉದ್ದೇಶವೂ ಯೋಜನೆಯಲ್ಲಿತ್ತು.  Yuvan ಆರಂಭದಲ್ಲಿ ದೇವಸ್ಥಾನಗಳಿಂದ ದಿನಕ್ಕೆ ಸರಾಸರಿ 40–50 ಕೆಜಿ ಹೂವುಗಳನ್ನು ಸಂಗ್ರಹಿಸಿ ಸಂಸ್ಕರಿಸುತ್ತಿತ್ತು ಎಂದು 2019ರ ವರದಿ ಹೇಳುತ್ತದೆ. ಆಗ ಸುಮಾರು ಅರ್ಧ ಡಜನ್ ಸುಗಂಧಗಳಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ Amazon, Flipkart ಮತ್ತು The Better India ಮೂಲಕವೂ ಮಾರುಕಟ್ಟೆ ಮಾಡಲಾಗುತ್ತಿತ್ತು.

ಹೂವು ಕಸವಲ್ಲ… ಕಚ್ಚಾ ವಸ್ತು!

ಈ ನಾಲ್ಕು ಉದ್ಯಮಗಳ ಕಥೆಯನ್ನು ಒಟ್ಟಾಗಿ ನೋಡಿದರೆ ಒಂದು ಮಹತ್ವದ ಆರ್ಥಿಕ ಪರಿಕಲ್ಪನೆ ನಮ್ಮ ಮುಂದೆ ಬರುತ್ತದೆ: Waste-to-Wealth ಅಂದರೆ, ತ್ಯಾಜ್ಯದಿಂದ ಸಂಪತ್ತು. ಒಬ್ಬರ ಪಾಲಿಗೆ ಕಸವಾದದ್ದು ಮತ್ತೊಬ್ಬರ ಪಾಲಿಗೆ ಕಚ್ಚಾ ವಸ್ತು. ದೇವಾಲಯಕ್ಕೆ ಅದು ನಿನ್ನೆಗಿನ ಹೂವು. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಅದು ಜೈವಿಕ ತ್ಯಾಜ್ಯ. ಆದರೆ ಉದ್ಯಮಿಗೆ? ಅದು ಅಗರಬತ್ತಿ, ಸಾಬೂನು, ಗೊಬ್ಬರ, ಸುಗಂಧ ಉತ್ಪನ್ನ, ಅಲಂಕಾರಿಕ ವಸ್ತು ಅಥವಾ ಹೊಸ ಜೈವಿಕ ವಸ್ತು ತಯಾರಿಸುವ ಕಚ್ಚಾ ವಸ್ತು.

ಇದು ಕೇವಲ ಉದ್ಯಮವಲ್ಲ. Circular Economy

ಸಾಮಾನ್ಯ ಆರ್ಥಿಕತೆಯಲ್ಲಿ ಮಾದರಿ ಹೀಗಿರುತ್ತದೆ ಉತ್ಪಾದನೆ → ಬಳಕೆ → ತ್ಯಾಜ್ಯ → ಅಂತ್ಯ ಆದರೆ ಸರ್ಕ್ಯುಲರ್ ಎಕಾನಮಿಯಲ್ಲಿ: ಉತ್ಪಾದನೆ → ಬಳಕೆ → ಸಂಗ್ರಹಣೆ → ಸಂಸ್ಕರಣೆ → ಹೊಸ ಉತ್ಪನ್ನ → ಮತ್ತೆ ಬಳಕೆ ಇಲ್ಲಿ ಹೂವಿನ ಜೀವನವೂ ಹಾಗೆಯೇ. ಹೊಲದಲ್ಲಿ ಬೆಳೆದ ಹೂವು → ದೇವರಿಗೆ ಅರ್ಪಣೆ → ತ್ಯಾಜ್ಯ → ಸಂಗ್ರಹಣೆ → ಒಣಗಿಸುವಿಕೆ → ಸಂಸ್ಕರಣೆ → ಅಗರಬತ್ತಿ/ಸಾಬೂನು/ಗೊಬ್ಬರ → ಹೊಸ ಬಳಕೆ. ಇದನ್ನೇ Circular Economyಯ ಒಂದು ಸರಳ ಉದಾಹರಣೆಯಾಗಿ ನೋಡಬಹುದು.

ಒಂದು ಹೂವಿನಿಂದ ಎಷ್ಟು ಉದ್ಯೋಗ?

ಈ ಮಾದರಿಯ ಮತ್ತೊಂದು ದೊಡ್ಡ ಶಕ್ತಿ ಉದ್ಯೋಗ ಸೃಷ್ಟಿ. ಹೂವು ಸಂಗ್ರಹಿಸಲು ಜನ ಬೇಕು. ಅದನ್ನು ವಿಂಗಡಿಸಲು ಜನ ಬೇಕು. ಪ್ಲಾಸ್ಟಿಕ್, ದಾರ ಮತ್ತು ಇತರ ತ್ಯಾಜ್ಯ ಬೇರ್ಪಡಿಸಲು ಜನ ಬೇಕು. ಒಣಗಿಸಲು, ಪುಡಿ ಮಾಡಲು, ಸಂಸ್ಕರಿಸಲು ಜನ ಬೇಕು. ಅಗರಬತ್ತಿ, ಧೂಪ, ಸಾಬೂನು ತಯಾರಿಸಲು ಜನ ಬೇಕು. ಪ್ಯಾಕಿಂಗ್ ಮಾಡಲು ಜನ ಬೇಕು. ಮಾರಾಟ ಮತ್ತು ವಿತರಣೆಗೆ ಜನ ಬೇಕು. ಅಂದರೆ, ಒಂದು ದೇವಸ್ಥಾನದ ಕಸದ ಬುಟ್ಟಿಯಿಂದ ಆರಂಭವಾಗುವ ಹೂವಿನ ತ್ಯಾಜ್ಯ, ಕೊನೆಯಲ್ಲಿ ಹಲವಾರು ಕುಟುಂಬಗಳಿಗೆ ಆದಾಯದ ಮೂಲವಾಗಬಹುದು. HolyWaste ಮತ್ತು Aaruhiಯಂತಹ ಮಾದರಿಗಳಲ್ಲಿ ಮಹಿಳಾ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ವಿಶೇಷವಾಗಿ ಗಮನ ಸೆಳೆಯುತ್ತದೆ.

ದೇವಾಲಯಗಳಿಗೂ ಇದರಿಂದ ದೊಡ್ಡ ಪಾಠ

ಪ್ರತಿ ದೇವಸ್ಥಾನದಲ್ಲೂ ಹೂವಿನ ತ್ಯಾಜ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದರೆ? ಒಂದು ದೇವಸ್ಥಾನ → ಒಂದು ಸಂಗ್ರಹಣಾ ಕೇಂದ್ರ → ಸ್ಥಳೀಯ ಮಹಿಳಾ ಸ್ವಸಹಾಯ ಸಂಘ → ಕಾಂಪೋಸ್ಟ್/ಧೂಪ/ಅಗರಬತ್ತಿ → ಸ್ಥಳೀಯ ಮಾರಾಟ ಎಂಬ ಸಣ್ಣ ಆರ್ಥಿಕ ಚಕ್ರವನ್ನು ನಿರ್ಮಿಸಬಹುದು. ಅದರ ಪರಿಣಾಮ:

  • ದೇವಸ್ಥಾನದ ಕಸ ಕಡಿಮೆಯಾಗುತ್ತದೆ
  • ನದಿ ಮತ್ತು ಜಲಮೂಲಗಳಿಗೆ ಹೋಗುವ ತ್ಯಾಜ್ಯ ಕಡಿಮೆಯಾಗಬಹುದು
  • ಸ್ಥಳೀಯ ಉದ್ಯೋಗ ಸೃಷ್ಟಿಯಾಗುತ್ತದೆ
  • ಮಹಿಳೆಯರಿಗೆ ಆದಾಯದ ಅವಕಾಶ ಸಿಗುತ್ತದೆ
  • ದೇವಸ್ಥಾನಕ್ಕೂ ಪರಿಸರ ಸ್ನೇಹಿ ಗುರುತು ಸಿಗುತ್ತದೆ
  • ತ್ಯಾಜ್ಯದಿಂದ ಉತ್ಪನ್ನ ಮತ್ತು ಆದಾಯ ಸೃಷ್ಟಿಯಾಗುತ್ತದೆ

ಇದು ದೊಡ್ಡ ಕಾರ್ಖಾನೆ ಬೇಕಾದ ಮಾದರಿಯೇ ಆಗಬೇಕಿಲ್ಲ. ಸಣ್ಣ ಮಟ್ಟದಲ್ಲೂ ಆರಂಭಿಸಬಹುದು. Phool ಕೂಡ ತನ್ನ Flowercycling technologyಯನ್ನು ಇತರರು ಬಳಸಲು ಪರವಾನಗಿ ನೀಡುವ ಮಾದರಿಯನ್ನು ಹೊಂದಿದ್ದು, ಅದರ ತಂತ್ರಜ್ಞಾನ ಪರವಾನಗಿ ಪುಟದಲ್ಲಿ ಆರಂಭಿಕ ತಂತ್ರಜ್ಞಾನ ಪರವಾನಗಿ ಶುಲ್ಕ ₹5 ಲಕ್ಷ ಮತ್ತು ಆರಂಭಿಕ ಬಂಡವಾಳ ಅಗತ್ಯ ಸುಮಾರು ₹27 ಲಕ್ಷ ಎಂದು ಉಲ್ಲೇಖಿಸಿದೆ.

ಎಲ್ಲಾ ಹೂವಿನ ತ್ಯಾಜ್ಯವನ್ನೂ ನೇರವಾಗಿ ಉತ್ಪನ್ನ ಮಾಡಲಾಗದು

ಇಲ್ಲಿ ಇನ್ನೊಂದು ಮುಖ್ಯ ಅಂಶವನ್ನು ಮರೆಯಬಾರದು. ದೇವಾಲಯದಿಂದ ಬರುವ ಹೂವಿನ ಜೊತೆ, ಪ್ಲಾಸ್ಟಿಕ್, ಪಾಲಿಥಿನ್, ನೈಲಾನ್ ದಾರ, ಲೋಹದ ತಂತಿ, ಅಲಂಕಾರಿಕ ವಸ್ತುಗಳು, ರಾಸಾಯನಿಕ ಬಣ್ಣಗಳು ಸೇರುವ ಸಾಧ್ಯತೆಯಿದೆ. ಆದ್ದರಿಂದ ಮೂಲದಲ್ಲಿಯೇ ಹೂವನ್ನು ಇತರ ತ್ಯಾಜ್ಯದಿಂದ ಬೇರ್ಪಡಿಸುವುದು ಅತ್ಯಂತ ಮುಖ್ಯ. HolyWaste ಮತ್ತು Aaruhiಯಂತಹ ಮಾದರಿಗಳಲ್ಲಿ ಸಂಗ್ರಹಿಸಿದ ಹೂವುಗಳನ್ನು ಮೊದಲು ವಿಂಗಡಿಸಿ, ನಂತರ ಒಣಗಿಸಿ ಮತ್ತು ಸಂಸ್ಕರಿಸುವುದು ಇದೇ ಕಾರಣಕ್ಕೆ ಮುಖ್ಯ.  ಅಂದರೆ: ಹೂವನ್ನು ಪ್ರತ್ಯೇಕಿಸಿ,  ಪ್ಲಾಸ್ಟಿಕ್ ಅನ್ನು ಪ್ರತ್ಯೇಕಿಸಿ.ಇದು ದೇವಸ್ಥಾನದಿಂದಲೇ ಆರಂಭವಾಗಬೇಕು.

ಭಕ್ತಿ ಮತ್ತು ಪರಿಸರ ಎರಡೂ ಒಂದಾಗಬಹುದೇ?

ಖಂಡಿತವಾಗಿಯೂ, ದೇವರಿಗೆ ಹೂ ಅರ್ಪಿಸುವುದು ನಮ್ಮ ಸಂಸ್ಕೃತಿಯ ಭಾಗ. ಆದರೆ ದೇವರಿಗೆ ಅರ್ಪಿಸಿದ ಹೂವನ್ನು ನದಿಗೆ ಎಸೆದು ಅದೇ ಪ್ರಕೃತಿಯನ್ನು ಮಾಲಿನ್ಯಗೊಳಿಸುವುದು ನಮ್ಮ ಭಕ್ತಿಯ ಅಂತಿಮ ಹಂತವಾಗಬೇಕಿಲ್ಲ. ಅದರ ಬದಲು ದೇವರಿಗೆ ಹೂ ಅರ್ಪಿಸೋಣ. ಪೂಜೆ ಮುಗಿದ ಮೇಲೆ ಪ್ರತ್ಯೇಕವಾಗಿ ಸಂಗ್ರಹಿಸೋಣ. ಹೂವಿಗೆ ಹೊಸ ಬದುಕು ಕೊಡೋಣ. ಉಳಿದ ಭಾಗವನ್ನು ಕಾಂಪೋಸ್ಟ್ ಮಾಡೋಣ. ಪ್ಲಾಸ್ಟಿಕ್ ಅನ್ನು ಮರುಬಳಕೆಗೆ ಕಳುಹಿಸೋಣ. ಹೀಗೆ ಮಾಡಿದರೆ ಭಕ್ತಿಯೂ ಉಳಿಯುತ್ತದೆ, ಪರಿಸರವೂ ಉಳಿಯುತ್ತದೆ. ಬಿಸಾಡಿದ್ದನ್ನು ಮೌಲ್ಯಯುತವಾಗಿಸುವುದು.

ಹೂವು ಒಣಗಿದರೂ ಅದರ ಮೌಲ್ಯ ಒಣಗುವುದಿಲ್ಲ!

ಹೂವು ಅರಳಿದಾಗ ನಾವು ಅದರ ಸೌಂದರ್ಯವನ್ನು ನೋಡುತ್ತೇವೆ. ಬಾಡಿದಾಗ ಕಸವೆಂದು ನೋಡುತ್ತೇವೆ. ಆದರೆ ಈ ಉದ್ಯಮಿಗಳು ನಮಗೆ ಹೊಸ ದೃಷ್ಟಿಕೋನ ನೀಡಿದ್ದಾರೆ: ಬಾಡಿದ ಹೂವು ಸತ್ತಿಲ್ಲ.
ಅದರ ರೂಪ ಮಾತ್ರ ಬದಲಾಗಿದೆ. ಅದರೊಳಗೆ ಇನ್ನೂ: ಸುವಾಸನೆ ಇದೆ. ಜೈವಿಕ ಪದಾರ್ಥ ಇದೆ. ಕಚ್ಚಾ ವಸ್ತುವಿನ ಮೌಲ್ಯ ಇದೆ. ಉದ್ಯೋಗದ ಅವಕಾಶ ಇದೆ. ಉದ್ಯಮದ ಸಾಧ್ಯತೆ ಇದೆ. ಅದಕ್ಕಾಗಿಯೇ ಇಂದು ದೇವರ ಪಾದದಲ್ಲಿದ್ದ ಹೂವು ಮರುದಿನ ಮಾರುಕಟ್ಟೆಯಲ್ಲಿ ಅಗರಬತ್ತಿಯಾಗಿ ಮರಳುತ್ತಿದೆ.

ಕಡೆಯ ಮಾತು

ನಾವು ಪ್ರತಿದಿನ ತ್ಯಾಜ್ಯ ಸಮಸ್ಯೆ ದೊಡ್ಡದಾಗಿದೆ”ಎಂದು ಹೇಳುತ್ತೇವೆ. ಆದರೆ ಸಮಸ್ಯೆಯನ್ನು ಅವಕಾಶವಾಗಿ ನೋಡುವ ದೃಷ್ಟಿ ಬಂದಾಗ ಅದೇ ತ್ಯಾಜ್ಯ ಉದ್ಯಮವಾಗುತ್ತದೆ. ಕಾನ್ಪುರದಲ್ಲಿ ಗಂಗೆಯ ದಡದಲ್ಲಿ ಬಿದ್ದಿದ್ದ ಹೂವು Phool ಆಗಿ ಬೆಳೆದಿದೆ. ಹೈದರಾಬಾದ್‌ನಲ್ಲಿ ಬಿಸಾಡುತ್ತಿದ್ದ ಹೂವು HolyWaste ಆಗಿ ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ. ಗುರುಗ್ರಾಮ್‌ನಲ್ಲಿ ದೇವಸ್ಥಾನದ ಹೊರಗೆ ಬಿದ್ದಿದ್ದ ಹೂವು Aaruhi Enterprise ಮೂಲಕ ಧೂಪ, ಅಗರಬತ್ತಿ ಮತ್ತು ಅಲಂಕಾರಿಕ ವಸ್ತುಗಳಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ದೇವಾಲಯದ ಹೂವು Yuvan ಮೂಲಕ ನೈಸರ್ಗಿಕ ಧೂಪವಾಗಿ ರೂಪಾಂತರಗೊಂಡಿದೆ. ಇವೆಲ್ಲವೂ ನಮಗೆ ಹೇಳುವುದು ಒಂದೇ ಮಾತು.

ಕಸ ಎಂದು ಬಿಸಾಡುವ ಮೊದಲು, ಅದರಲ್ಲಿ ಮೌಲ್ಯವಿದೆಯೇ ಎಂದು ಒಮ್ಮೆ ಯೋಚಿಸಿ. ಒಂದು ಹೂವು ದೇವರ ಪಾದ ಸೇರಿದಾಗ ಪವಿತ್ರವಾಗುತ್ತದೆ. ಆ ಹೂವು ಪೂಜೆ ಮುಗಿದ ನಂತರವೂ ಪ್ರಕೃತಿಗೆ ಹಾನಿಯಾಗದಂತೆ ಮರುಬಳಕೆಯಾದರೆ, ಅದರ ಪವಿತ್ರತೆಯ ಅರ್ಥ ಇನ್ನಷ್ಟು ವಿಸ್ತರಿಸುತ್ತದೆ.

ಹೂವನ್ನು ನದಿಗೆ ಎಸೆಯುವ ಬದಲು, ಹೂವಿಗೆ ಹೊಸ ಬದುಕು ಕೊಡೋಣ. ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸೋಣ. ಪರಿಸರವನ್ನು ಕಾಪಾಡೋಣ. ಉದ್ಯೋಗ ಸೃಷ್ಟಿಸೋಣ. ಒಂದು ಹೂವು… ಒಂದು ಹೊಸ ಉದ್ಯಮ… ನೂರಾರು ಹೊಸ ಬದುಕುಗಳನ್ನು ಕಟ್ಟಿಕೊಡಬಹುದು ಅಲ್ವೇ? ಅಸಾಧ್ಯ ಎನ್ನುವ ಪದದಲ್ಲಿ ಅ ತೆಗೆದುಹಾಕಿದಲ್ಲಿ ಸಾಧ್ಯ ಎನ್ನುವಂತೆ ಕಸದಿಂದಲೂ ರಸವನ್ನು ತೆಗೆಯುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಅಷ್ಟೇ.

ಏನಂತೀರೀ?
ನಿಮ್ಮವನೇ, ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ