ಅಪ್ಪಟ ಗೃಹಿಣಿಯಾದ ಜಯಾ ತುಂಬೇಮನೆ, ಮಲೆನಾಡ ಗ್ರಾಮ ನಿವಾಸಿಯಾಗಿ ಕಷ್ಟಗಳನ್ನು ಕಂಡುಂಡು ಬೆಳೆದವರು. ಮನೆಯನ್ನೇ ಮಂತ್ರಾಲಯವಾಗಿಸಿಕೊಂಡು ತಮ್ಮ ಅಪ್ಪಟ ಬಹುಮುಖ ಪ್ರತಿಭೆಯಿಂದ ಏನೆಲ್ಲಾ ಸಾಧಿಸಿದ್ದಾರೆ ಎಂದು ವಿವರವಾಗಿ ತಿಳಿಯೋಣವೇ…..?

ಆಕಾಶದ ನೀಲಿಯಲಿ ಚಂದ್ರತಾರೆ ತೊಟ್ಟಿಲಲಿ

ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ?

ಮನೆಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ

ತಂದೆ ಮಗು ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ….?

ಸ್ತ್ರೀ ಎಂದರೆ ಅಷ್ಟೇ ಸಾಕೇ…?

– ಡಾ. ಜಿ.ಎಸ್‌. ಶಿವರುದ್ರಪ್ಪ

ಇಂದಿನ ಮಹಿಳೆ ಕೇವಲ ಅಡುಗೆಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಸೀಮಿತವಾಗಿಲ್ಲ. ಅವಳು ಹೆಜ್ಜೆ ಇಟ್ಟ ನೆಲವೆಲ್ಲಾ ವೇದಿಕೆಯಾಗಿ ಬೆಳಗಿದೆ. ಅವಳು ತನಗಿ ಸಿಕ್ಕ ಅವಕಾಶವನ್ನೇ ಸದುಪಯೋಗ ಪಡಿಸಿಕೊಂಡು ಸುಂದರ ಬದುಕನ್ನು ಹೆಣೆದುಬಿಡುತ್ತಾಳೆ. ತನ್ನ ಪ್ರತಿಭೆ, ಆಸಕ್ತಿ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿ ಅವಳಿಗಿದೆ.

ಮಲೆನಾಡಿನ ಹಚ್ಚ ಹಸಿರಿನ ಮಡಿಲಿನಲ್ಲಿ ಚಿಗುರಿ ಟಿಸಿಲೊಡೆದು ಹೂವಾಗಿ ಅರಳಿದ ಬಹುಮುಖ ಪ್ರತಿಭೆ ಜಯಾ ತುಂಬೇಮನೆ. ಕೃಷಿ ಕುಟುಂಬದ ಅಪ್ಪಟ ಗೃಹಿಣಿಯಾಗಿರುವ ಇವರು ಕಸೂತಿ, ಕ್ರಾಫ್ಟಿಂಗ್‌, ಪೇಂಟಿಂಗ್‌, ರಂಗೋಲಿ, ಹಾಡು, ಹೊಲಿಗೆ, ಗಾರ್ಡನಿಂಗ್‌, ತರಕಾರಿ ಬೆಳೆಯುವುದು, ಹಪ್ಪಳ, ಸಂಡಿಗೆ ಮಾಡುವುದೇ ಅಲ್ಲದೆ, ಜೇನು ಸಾಕಾಣಿಕೆ, ಹೈನುಗಾರಿಕೆ ಎಂದು ಬೇರೆ ಬೇರೆ ರೀತಿಯ ಕಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಆಸಕ್ತಿ, ಶ್ರದ್ಧೆ, ತಾಳ್ಮೆ ಇವುಗಳನ್ನೇ ಸಾಧನವಾಗಿಸಿಕೊಂಡು, ತಮ್ಮನ್ನು ತಾವು ಗುರುತಿಸಿಕೊಂಡಿರುವ ಅಪರೂಪದ ಪ್ರತಿಭೆ. ಹವ್ಯಾಸವಾಗಿ ರೂಪುಗೊಂಡ ಈ ಕಲೆ ಇವರ ಸ್ವಾವಲಂಬಿ ಬದುಕಿಗೂ ದಾರಿಯಾಗಿದೆ. ಎಲೆಮರೆಯ ಕಾಯಿಯಾಗಿಯೇ ಉಳಿದುಕೊಂಡಿದ್ದ ಇವರು, ತಮಗೆ ಅರಿವಿಲ್ಲದೇ ಸುತ್ತಣ ಜನರನ್ನು ಆಕರ್ಷಿಸಿದ್ದಾರೆ.

ಜಯಾರವರ ಮನೆಯ ಅಂಗಳದಲ್ಲಿ ಕಾಲಿಡುತ್ತಿದ್ದಂತೇ ಮನಮೋಹಕ ಹೂದೋಟ ತನ್ನ ವಯ್ಯಾರದಿಂದ ನಮ್ಮನ್ನು ಸ್ವಾಗತಿಸುತ್ತದೆ. ಮನೆಯ ಒಳಗಡೆಯ ಜಗುಲಿಗೆ ಬರುತ್ತಿದ್ದಂತೇ ಅವರದೇ ಕೈಚಳಕದ ಪೇಂಟಿಂಗ್‌, ಕಸೂತಿ, ಕ್ರಾಫ್ಟ್ ಗಳನ್ನೆಲ್ಲಾ ನೋಡಿದಾಗ ಬೇರೊಂದು ಹೊಸ ಲೋಕಕ್ಕೇ ಬಂದಂತೆ ಭಾಸವಾಗುತ್ತದೆ.

ಒಂದೇ ಸೂರಿನಡಿಯಲ್ಲಿ ಎಲ್ಲ ಒಬ್ಬರಿಂದಲೇ ಸಾಧ್ಯವೇ…..? ಎಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಹೌದು. ಇವೆಲ್ಲ ಒಂದು ಸೂರನಡಿಯಲ್ಲಿ ಹೇಗೆ ಸಾಧ್ಯವಾಯಿತು? ಇದನ್ನೆಲ್ಲಾ ಜಯಾರಿಂದಲೇ ಕೇಳಿ ತಿಳಿದುಕೊಳ್ಳೋಣ.

IMG-20251202-WA0005

ನಿಮ್ಮ ಪರಿಚಯ ಹೇಳಿ.

ನನ್ನ ಹೆಸರು ಜಯಲಕ್ಷ್ಮಿ ಗಣಪತಿ ಹೆಗಡೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತುಂಬೇಮನೆ ನನ್ನ ಊರು.

ನಿಮ್ಮ ದಿನಚರಿ ಶುರುವಾಗುವುದು ಹೇಗೆ….?

ನಾನು ಮುಂಜಾನೆ 5 ಗಂಟೆಗೆಲ್ಲಾ ಎದ್ದು ಅರ್ಧ ಗಂಟೆ ಕಾಲ ಯೋಗ, ಪ್ರಾಣಾಯಾಮ ಮಾಡುತ್ತೇನೆ. ನಂತರ ಮನೆಯ ದಿನದ ಕೆಲಸಗಳನ್ನು ಶುರು ಮಾಡುತ್ತೇನೆ. ಸಾಯಂಕಾಲ ಅರ್ಧ ಗಂಟೆ ಕಾಲ ವ್ಯಾಯಾಮ ಮಾಡುವ ರೂಢಿ ಇಟ್ಟುಕೊಂಡಿದ್ದೇನೆ.

IMG-20251202-WA0006

ನಿಮ್ಮದು ಬಹುಮುಖ ಪ್ರತಿಭೆ ಎಂದು ಹೇಳುತ್ತಾರೆ. ನಿಮ್ಮ ಹವ್ಯಾಸಗಳೇನು?

ಹಾಗೆನಿಲ್ಲ…. ನನಗೆ ಚಿಕ್ಕಂದಿನಿಂದಲೂ ಕಸೂತಿ, ರಂಗೋಲಿ, ಕ್ರಾಫ್ಟಿಂಗ್‌, ಪೇಂಟಿಂಗ್‌ ಇಂಥವುಗಳಲ್ಲಿ ಆಸಕ್ತಿ ಇತ್ತು. ಅದೇ ಮುಂದುವರಿದಿದೆ ಅಷ್ಟೆ.

ನಿಮ್ಮ ಮನೆಯಲ್ಲಿ ಅಮ್ಮಅಪ್ಪ, ಅಜ್ಜಅಜ್ಜಿ ಯಾರಾದರೂ ಇವುಗಳನೆಲ್ಲಾ ಮಾಡುತ್ತಿದ್ದರಾ….?

ಹೌದು, ಅನುಂಶೀಯ ಇರಬಹುದು. ಏಕೆಂದರೆ ನಾನು ಚಿಕ್ಕವಳಿದ್ದಾಗ ಪೆನ್ಸಿಲ್‌, ಪೆನ್ನು ತೆಗೆದುಕೊಂಡು ನನ್ನ ಮನಸ್ಸಿಗೆ ಬಂದ ಚಿತ್ರಗಳನ್ನು ಬಿಡಿಸಿ, ಅದಕ್ಕೆ ವಾಟರ್‌ ಕಲರ್‌, ಸ್ಕೆಚ್‌ ಪೆನ್‌ ಗಳಿಂದ ಬಣ್ಣ ತುಂಬಿಸುತ್ತಿದ್ದೆ. ರಂಗೋಲಿಗಳನ್ನು ಹಾಕುತ್ತಿದ್ದೆ. ಆಗೆಲ್ಲಾ ನನ್ನ ತಂದೆ, ಅದನ್ನು ನೋಡಿ, ಇದು ಹೀಗೆ ಇರಬೇಕು, ಇದನ್ನು ಈ ರೀತಿ ಬರೆಯಬೇಕು ಎಂದು ತಿದ್ದುತ್ತಿದ್ದರು. ನಂತರ ಹೈಸ್ಕೂಲಿನಲ್ಲಿ ಓದುವಾಗ ನಮ್ಮ ಡ್ರಾಯಿಂಗ್‌ ಟೀಚರ್‌ ಜಿ.ಎಂ. ಹೆಗಡೆ ಹೊನ್ನಗದ್ದೆಯವರು ಇದನ್ನು ಗುರುತಿಸಿ ಮುಂದುವರಿಸಿಕೊಂಡು ಹೋಗುವಂತೆ ಪ್ರೋತ್ಸಾಹ ನೀಡಿದರು.

IMG-20251202-WA0007

ಮುಂದೆ ಇದನ್ನು ಹೇಗೆ ಮುಂದುವರಿಸಿಕೊಂಡು ಬಂದಿರಿ….?

ನಾನು ಎಸ್‌.ಎಸ್‌.ಎಲ್.ಸಿ ಮುಗಿಸಿದ ನಂತರ ಹುಬ್ಬಳ್ಳಿಯ `ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ ಮೂರು ಸಾವಿರ ಮಠ’ದಲ್ಲಿ ಎರಡು ವರ್ಷದ ಡಿಪ್ಲೋಮಾ ಕೋರ್ಸ್‌ ಮುಗಿಸಿಕೊಂಡೆ. ನಂತರ ಗಣಪತಿ ಹೆಗಡೆ ತುಂಬೇಮನೆಯವರ ಜೊತೆ ಮದುವೆಯಾಯ್ತು. ಅವರಿಗೂ ಕಲೆಯಲ್ಲಿ ಆಸಕ್ತಿ ಇತ್ತು. ಅವರೂ ಕೂಡ ಪೇಂಟಿಂಗ್‌, ಬರವಣಿಗೆ, ಫೋಟೋಗ್ರಫಿ ಇಂಥವುಗಳನ್ನೆಲ್ಲಾ ಮಾಡುತ್ತಿದ್ದರು. ಇದು ಬಹುಶಃ ನನಗೆ ನನ್ನ ಕಲೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ತುಂಬಾ ಅನುಕೂಲವಾಯ್ತು ಎಂದುಕೊಳ್ಳುವೆ.

ನಿಮಗೂ ಬರವಣಿಗೆಯಲ್ಲಿ ಆಸಕ್ತಿ ಇತ್ತಾ….?

ಹೌದು. ಹಲವು ಖ್ಯಾತ ಕನ್ನಡ ಪತ್ರಿಕೆಗಳಿಗೆ ಲೇಖನ, ಪ್ರವಾಸೀಕಥನ ಇಂಥವುಗಳನ್ನು ಬರೆಯುತ್ತಿದ್ದೆ.

IMG-20251202-WA0012

ನಿಮಗೆ ಇನ್ನೂ ಏನೇನು ಹವ್ಯಾಸಗಳಿವೆ?

ಹೊಲಿಗೆ, ಸೀರೆಗೆ ಕುಚ್ಚು ಕಟ್ಟುವುದು, ಕಸೂತಿ, ಕ್ರಾಫ್ಟಿಂಗ್‌ (ಕಸದಿಂದ ರಸ), ಅಡಿಕೆ ಹಾಳೆಯಿಂದ ಹಕ್ಕಿ, ಹೂ, ಬೊಕೇ, ಗ್ರೀಟಿಂಗ್ಸ್, ಮಣಿಗಳಿಂದ ಆರತಿಕಟ್ಟು, ಸೌತೇಬೀಜ, ಕುಂಬಳಬೀಜ, ಚಳ್ಳೆಬೀಜ, ಮೊಗೇಬೀಜ, ಬೇರೆ ಬೇರೆ ಹಣ್ಣುಗಳ ಬೀಜಗಳಿಂದ ಆರತಿ ತಾಟುಗಳನ್ನು ಮಾಡುತ್ತೇನೆ. ತರಕಾರಿಯನ್ನು ಹೆಚ್ಚುವಾಗ ಅದರ ಬೀಜಗಳನ್ನು ಸ್ವಚ್ಛ ಮಾಡಿ ಒಣಗಿಸಿ ಡಬ್ಬದಲ್ಲಿ ಸಂಗ್ರಹಿಸಿಕೊಂಡು, ನನಗೆ ಸಮಯ ಸಿಕ್ಕಾಗ ಅನ್ನು ಉಪಯೋಗಿಸಿ ಆರತಿ ತಾಟುಗಳು, ಬೇರೆ ಬೇರೆ ರೀತಿಯ ರಂಗೋಲಿಗಳ ಚಿತ್ತಾರ ಬಿಡಿಸುತ್ತೇನೆ.

ನೀವು ಇಷ್ಟೊಂದು ಕರಕುಶಲ ಕಲೆಗಳನ್ನು ರೂಢಿಸಿಕೊಂಡಿದ್ದೀರಿ. ನಿಮ್ಮ ಮನೆಯ ಗೋಡೆಗಳನ್ನೆಲ್ಲಾ ನಿಮ್ಮ ಕೈಚಳಕದಿಂದಲೇ ಅಲಂಕರಿಸಿ ಬಂದು ಹೋಗುವವರ ಕಣ್ಣಿಗೆ ಹಬ್ಬವನ್ನಾಗಿಸಿದ್ದೀರಿ. ನೀವು ತಯಾರಿಸಿದ ವಸ್ತುಗಳ ಮಾರಾಟ, ಪ್ರದರ್ಶನ ಏನಾದರೂ ನಡೆದಿದೆಯಾ….?

ಹೌದು. ಹಲಸಿನ ಬೀಜದಿಂದ ಮಾಡಿದ ಹಕ್ಕಿ, ಅಡಿಕೆ ಹಾಳೆಯಿಂದ ತಯಾರಿಸಿದ ಹೂ, ಬೊಕೇ ತುಂಬಾ ಜನರನ್ನು ಆಕರ್ಷಿಸಿದ. ಬಹಳ ಮಂದಿ ಖರೀದಿಸಿದರು. ನಂತರ ಹವ್ಯಕ ಯುವ ಸಂಘ ಮುಂಬೈನವರು ಅಡಿಕೆಹಾಳೆಗಳ ಹೂ, ಬೊಕೇಗಳನ್ನು ಅಲ್ಲಿಂದ ಕಾರ್ಯಕ್ರಮಗಳಿಗೆಂದೇ ಆರ್ಡರ್‌ ಕೊಟ್ಟು ಮಾಡಿಸಿ ತರಿಸಿಕೊಂಡರು. ನಂತರ ನನ್ನ ಚಿಕ್ಕಮ್ಮನೂ ಲೇಖಕಿಯೂ ಆದ ತಾರಾ ಹೆಗಡೆಯವರ ಸಹಾಯದಿಂದ ಹೆಂಚಿನಮನಿ ಆರ್ಟ್‌ ಗ್ಯಾಲರಿ ಹಾವೇರಿಯಲ್ಲಿ ನಾನು ಮಾಡಿದ ಈ ಕಲೆಗಳೆಲ್ಲ ಪ್ರದರ್ಶನಗೊಂಡ. ಆಮೇಲೆ ಬನವಾಸಿ ಉತ್ಸವ, ಶಿರಸಿಯಲ್ಲಿ ನಡೆದ ವಿವಿಧ ಸಮ್ಮೇಳನಗಳು, ಲಯನ್ಸ್ ಸಂಸ್ಥೆ ಶಿರಸಿ, ಸಿದ್ಧಾಪುರದಲ್ಲಿ ನಡೆದ ಗಣೇಶೋತ್ಸವದಲ್ಲಂತೂ ದೊಡ್ಡ ಪ್ರಮಾಣದಲ್ಲಿ ಪ್ರದರ್ಶನಗೊಂಡಿತು. ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ನನಗೆ ಅವಕಾಶಗಳು ಸಿಕ್ಕ.

IMG-20251202-WA0001

ನೀವು ಈ ಕಲೆಯ ಕ್ಲಾಸ್‌ ಗಳನ್ನೇನಾದರೂ ನಡೆಸ್ತೀರಾ…..?

ಕ್ಲಾಸ್‌ ಅಂತ ಏನೂ ಮಾಡಿಲ್ಲ. ಹಾಗೇ ಸುಮ್ಮನೆ ಆಸಕ್ತಿ ಇದ್ದವರಿಗೆ ಕಲಿಸಿಕೊಟ್ಟಿದ್ದೇನೆ. ಬೇರೆ ಬೇರೆ ಕಡೆ ತರಬೇತುದಾರಳಾಗಿ, ನಿರ್ಣಾಯಕಳಾಗಿ ಹೋಗುತ್ತಿರುತ್ತೇನೆ. ಇತ್ತೀಚೆಗೆ ಇಂತಹ ಕಲೆಯಲ್ಲಿ ಆಸಕ್ತಿ ಇದ್ದರು ಯೂಟ್ಯೂಬ್‌, ಇನ್‌ ಸ್ಟಾಗ್ರಾಮ್ ಇಂಥವುಗಳನ್ನು ನೋಡಿಯೇ ಕಲಿಯುತ್ತಾರೆ. ಮನೆಯತನಕ ಬರುವುದು ಅಪರೂಪವಾಗಿದೆ.

ನಿಮ್ಮಲ್ಲಿ ಇಷ್ಟೊಂದು ಕಲೆ ಪ್ರತಿಭೆಗಳಿವೆ. ನೀವು ಮನಸ್ಸು ಮಾಡಿದ್ದರೆ ರಾಜ್ಯಮಟ್ಟದಲ್ಲಿ ಇನ್ನೂ ಹೆಚ್ಚಿನ ಅವಕಾಶ, ಪ್ರೋತ್ಸಾಹಗಳು ಸಿಗುತ್ತಿದ್ದವು. ನೀವೇಕೆ ಪ್ರಯತ್ನಿಸಲಿಲ್ಲ…..?

ನೀವು ಹೇಳುವುದು ನಿಜವೇ! ಆದರೆ ಮೊದಲನೆಯದಾಗಿ, ನಾನು ಹಳ್ಳೀಮನೆಯ ಅವಿಭಕ್ತ ಕುಟುಂಬದ ಗೃಹಿಣಿ. ನನ್ನದೇ ಆದ ಕರ್ತವ್ಯ, ಜವಾಬ್ದಾರಿಗಳಿವೆ. ನಾವು ಕೃಷಿಕರು. ಅಡಿಕೆ ತೋಟ, ಗದ್ದೆಯ ಕೆಲಸಗಳು ಸದಾ ನಡೆಯುತ್ತಲೇ ಇರುತ್ತವೆ. ತೋಟದ ಕೆಲಸಕ್ಕೆ ಬರುವವರಿಗೆಲ್ಲಾ ಸಮಯಕ್ಕೆ ಸರಿಯಾಗಿ ಚಹಾ, ತಿಂಡಿ ಎಂದು ಮಾಡಿಕೊಡಬೇಕಾಗುತ್ತದೆ. ಅಡಿಕೆಯ ಸೀಸನ್ನಿನಲ್ಲಂತೂ ಅವರಿಗೆ ಊಟವನ್ನೂ ನೀಡಬೇಕಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಹಬ್ಬ ಹರಿದಿನ, ವಿಶೇಷ ಪೂಜೆಗಳು, ಮದುವೆ, ಮುಂಜಿ, ಚೌಲ ಎಂದು ಆಗಾಗ ಕಾರ್ಯಕ್ರಮಗಳು ನಡೆಯುತ್ತಲೇ ಇರುವುದರಿಂದ ಮನೆಗೆ ನೆಂಟರಿಷ್ಟರು, ಪರಿಚಯದವರು ಎಂದು ಬಂದು ಹೋಗುವವರು ಇದ್ದೇ ಇರುತ್ತಾರೆ. ನಮ್ಮ ಮನೆಗೆ ಬಂದವರಿಗೆ ಪ್ರೀತಿಯಿಂದ ಊಟೋಪಚಾರ ಮಾಡುವುದು ನನ್ನ ಕರ್ತವ್ಯ. ಹಾಗೇ ಮನೆಯಲ್ಲಿರುವ ಗಂಡ, ಮಕ್ಕಳು, ವಯಸ್ಸಾದವರ ಯೋಗಕ್ಷೇಮ ಸೊಸೆಯಾದ ನನ್ನ ಜವಾಬ್ದಾರಿ ಕೂಡ. ಇವೆಲ್ಲಗಳ ಜೊತೆಯೇ ನನ್ನ ಹವ್ಯಾಸಗಳೂ ಸಾಗುತ್ತವೆ. ನಾನು ನನ್ನ ಕಲೆಯನ್ನು ಮಾತ್ರ ಮುಂದುವರಿಸಿಕೊಂಡು ಹೋಗಬೇಕೆಂದು ಹೊರಟಿದ್ದರೆ, ಆಗ ನನ್ನ ಕರ್ತವ್ಯ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪ್ರೀತಿಯಿಂದ ನಿರ್ಹಿಸುವುದು ಕಷ್ಟವೆನಿಸುತ್ತಿತ್ತು. ಎಲ್ಲೋ ಒಂದು ಕಡೆ ಅಪರಾಧೀಭಾವ ನನ್ನನ್ನು ಕಾಡುತ್ತಿತ್ತೇನೋ…. ಈಗ ನನಗೆ ಎಲ್ಲವನ್ನೂ ಸಮನವಾಗಿ ನಿರ್ವಹಿಸುತ್ತಿರುವುದಕ್ಕೆ ಖುಷಿ, ತೃಪ್ತಿ ಇದೆ.

IMG-20251202-WA0017

ನಮ್ಮ ಹಿರಿಯರು `ಮನೆ ಗೆದ್ದು ಮಾರು ಗೆಲ್ಲು,’ ಅಂತ ಒಂದು ಗಾದೆ ಹೇಳುತ್ತಿದ್ದರು. ಅದನ್ನು ನೀವು ಅಕ್ಷರಶಃ ನಿಜವಾಗಿಸಿದ್ದೀರಿ. ಅಂದಹಾಗೆ ನೀವು ಹಲಸಿನ ಹಪ್ಪಳವನ್ನು ತುಂಬಾ ಚೆನ್ನಾಗಿ ಮಾಡುತ್ತೀರಿ ಎಂದು ಕೇಳಿರುವೆ. ಮಲೆನಾಡಿನ ಕಡೆ ಈ ಹಪ್ಪಳ ತುಂಬಾ ಪ್ರಸಿದ್ಧಿ ಕೂಡ. ಈ ಹಲಸಿನ ಕಾಯಿಯಿಂದ ಇನ್ನೂ ಯಾವ್ಯಾವ ವ್ಯಂಜನಗಳನ್ನು ಮಾಡುತ್ತೀರಿ…..?

ಹೌದು. ಹಲಸಿನ ಕಾಯಿಯಿಂದ ತುಂಬಾ ವ್ಯಂಜನಗಳನ್ನು ಮಾಡಬಹುದು. ನಮ್ಮ ಮನೆಯಲ್ಲೇ ಹಲಸಿನ ಮರಗಳಿವೆ. ಇವು ಮಾರ್ಚ್‌ ತಿಂಗಳಲ್ಲಿ ಬಲಿಯುವುದಕ್ಕೆ ಶುರುವಾಗುತ್ತದೆ. ಆಗ ನಾನು ಹಲಸಿನಕಾಯಿಯಿಂದ ಹಪ್ಪಳ, ಮಸಾಲೆ ಪಾಪಡ್‌, ಹಲಸಿನ ಸೂಪು, ಚಿಪ್ಸ್, ಕೋಸಂಬರಿ ಇವುಗಳನ್ನೆಲ್ಲಾ ಮಾಡ್ತೀನಿ. ನಮ್ಮ ಶಿರಸಿಯಲ್ಲೇ ಹಲಸಿನ ಮೇಳ ನಡೆಯುತ್ತದೆ. ಆವಾಗೆಲ್ಲಾ ನಾನೂ ವಿವಿಧ ವ್ಯಂಜನಗಳನ್ನು ಮಾಡಿಕೊಂಡು ಹೋಗ್ತಿದ್ದೆ. ಅಲ್ಲಿ ಹಲಸಿನ ಹಪ್ಪಳ, ಚಿಪ್ಸ್ ಜೊತೆಗೆ ಹಲಸಿನ ಸೂಪ್‌ ಮತ್ತು ಕೋಸಂಬರಿಗಳಿಗೆ ವಿಶೇಷ ಬೇಡಿಕೆ ಸಿಗುತ್ತಿತ್ತು. ಇದರ ಹಣ್ಣಿನಿಂದ ಕಡುಬು, ಪಾಯಸ, ಹಲ್ವಾ ಇತ್ಯಾದಿಗಳನ್ನೂ ಮಾಡುತ್ತಾರೆ. ಹಲಸಿನ ಕಡುಬು ನಮ್ಮ ಕಡೆ ಎಲ್ಲರೂ ಇಷ್ಟಪಡುವ ಸಿಹಿತಿನಿಸು.

ನೀವು ಹಪ್ಪಳ, ಚಿಪ್ಸ್ ಗಳನ್ನೆಲ್ಲಾ ಮಾರಾಟ ಮಾಡ್ತೀರಾ? ಇದಕ್ಕೆಲ್ಲಾ ಮಾರುಕಟ್ಟೆಯ ವ್ಯವಸ್ಥೆ ಹೇಗಿದೆ? ನಿಮ್ಮ ಕೆಲಸಕ್ಕೂ ಅವರು ಕೊಡುವ ಬೆಲೆಗೂ ತಾಳೆ ಹಾಕಿದರೆ ಲಾಭ ಸಿಗುತ್ತದಾ….?

ಹೌದು. ಹಲಸಿನ ಹಪ್ಪಳ, ಚಿಪ್ಸ್, ಬಾಳೇಕಾಯಿಯ ಹಪ್ಪಳ ಇವುಗಳನ್ನೆಲ್ಲಾ ಮಾರಾಟ ಮಾಡ್ತೀನಿ. ಸಮೀಪದಲ್ಲಿರುವ ಕೋಆಪರೇಟಿವ್ ‌ಸೊಸೈಟಿ, ಕಲ್ಯಾಣ ಮಂಟಪ, ಮಾರಾಟ ಮಳಿಗೆಯವರೆಲ್ಲಾ ಖರೀದಿಸುತ್ತಾರೆ. ಇದರ ಜೊತೆ ನಮ್ಮ ಹತ್ತಿರದ ಸಂಬಂಧಿಗಳು, ಊರಿನವರು, ಸ್ನೇಹಿತರು, ಪರಿಚಯದವರೆಲ್ಲಾ ಹಲಸಿನ ಕಾಯಿ ಬಲಿಯುವುದಕ್ಕೆ ಮೊದಲೇ ಬೇಡಿಕೆ ಇಟ್ಟಿರುತ್ತಾರೆ. ಹಲಸಿನ ಕಾಯಿ ಮನೆಯಲ್ಲೇ ಬೆಳೆಯುವುದರಿಂದ ತಯಾರಿಸುವ ಶ್ರಮ ಜಾಸ್ತಿಯಾದರೂ, ಹೆಚ್ಚಿನ ಖರ್ಚುಗಳೇನೂ ಬರುವುದಿಲ್ಲ. ಇದರಿಂದ ಲಾಭವೇ ಹೊರತು ನಷ್ಟವಿಲ್ಲ.

IMG-20251202-WA0026

ಇದನ್ನೆಲ್ಲಾ ಮಾಡಲು ತುಂಬಾ ಕೆಲಸ ಹಿಡಿಯುತ್ತದೆ…. ನೀವು ಹೇಗೆ ನಿಭಾಯಿಸುತ್ತೀರಾ…..?

ಹೌದು. ಹಲಸಿನ ಕಾಯಿಯನ್ನು ಕೊಯ್ದು ತಂದು ಅದನ್ನು ಸಿಗಿಯಬೇಕು. ಅದು ತುಂಬಾ ಅಂಟಂಟಾಗಿರುತ್ತವೆ. ಕೈಗೆ ಎಣ್ಣೆ ಹಚ್ಚಿಕೊಂಡು ಸೊಳೆ (ತೊಳೆ)ಗಳನ್ನು ತೆಗೆಯಬೇಕು. ನಂತರ ಅದರ ಒಳಗಿನ ಬೀಜ ತೆಗೆದು ಸ್ವಲ್ಪ ನೀರು ಹಾಕಿ ಉಗಿ (ಹಬೆ)ಯಲ್ಲಿ ಬೇಯಿಸಬೇಕು. ಆಮೇಲೆ ಅದನ್ನು ರುಬ್ಬಿ ಬಾಳೆ ಅಥವಾ ಪ್ಲಾಸ್ಟಿಕ್‌ ಶೀಟ್‌ ಗಳಲ್ಲಿ ಹಚ್ಚಿ ಬಿಸಿಲಿನಲ್ಲಿ ಅಥವಾ ಡ್ರೈಯರ್ ನಲ್ಲಿ ಚೆನ್ನಾಗಿ ಒಣಗಿಸಿ ಕಟ್ಟುಗಳನ್ನು ಕಟ್ಟಿ ತುಂಬಿಡಬೇಕು. ನಂತರ ಬೇಕಾದವರಿಗೆ ಕೊಡಬಹುದು. ಹಲಸಿನ ಕಾಯಿಗಳನ್ನೆಲ್ಲಾ ಗಂಡಸರು ತಂದುಕೊಡುವುದರಿಂದ ನನಗೆ ಕೆಲಸ ಹಗುರವಾಗುತ್ತದೆ.

ಇದರ ಜೊತೆಗೆ ನೀವು ಇನ್ನೇನೆಲ್ಲಾ ಮಾರಾಟ ಮಾಡ್ತೀರಾ…?

ಹಲಸಿನ ಪಲ್ಪ್, ಮುರುಗಲ ರಸ (ಕೋಕಂ ರಂಸ) ಮಾಡಿ, ಗಾಜಿನ ಬಾಟಲಿಯಲ್ಲಿ ತುಂಬಿಸಿಡ್ತೀನಿ. ಮುರುಗಲ ಸಿಪ್ಪೆಯನ್ನೂ ಒಣಗಿಸಿಡ್ತೀನಿ. ನೆಲ್ಲಿಕಾಯಿಯನ್ನು ಕತ್ತರಿಸಿ, ಉಪ್ಪು ಹಾಕಿ ಒಣಗಿಸಿ ಇಡ್ತೀನಿ. ಮುರುಗಲ ಮತ್ತು ನೆಲ್ಲಿಕಾಯಿಗಳೆರಡೂ ಔಷಧೀಯ ಪದಾರ್ಥಗಳು. ಇವಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಇದರ ಜೊತೆ ಬಾಳೇಹಣ್ಣಿನ ಸುಕೇಳಿ, ಹಲಸಿನ ಹಣ್ಣಿನ ಡ್ರೈ ತೊಳೆಗಳನ್ನೂ ಮಾಡಿ ಇಡುತ್ತೇನೆ. ಇವೆಲ್ಲಾ ಹಿರಿಯರಿಂದ ಮಕ್ಕಳತನಕ ಇಷ್ಟಪಡುವ ಪದಾರ್ಥಗಳು. ನಂತರ ಮನೆಯ ಅಂಗಳದಲ್ಲೇ ಬೇಸಿಗೆ, ಮಳೆ, ಚಳಿಗಾಲ ಎಂದು ಕಾಲಕ್ಕನುಗುಣವಾಗಿ ತರಕಾರಿಗಳನ್ನು ಬೆಳೆಯುತ್ತೇನೆ. ಬೀನ್ಸ್, ಟೊಮೇಟೊ, ತೊಂಡೆಕಾಯಿ, ಬದನೆಕಾಯಿ, ಸೌತೆಕಾಯಿ, ಬಣ್ಣದ ಸೌತೆ, ಸೀಮೆಬದನೆ, ಹೀರೆ, ಬೆಂಡೆ, ಹಾಲುಸೋರೆಕಾಯಿ, ಕುಂಬಳ, ಮೂಲಂಗಿ, ನವಿಲುಕೋಸು, ಬಸಳೆ, ಹರಿವೆ, ಕೊತ್ತಂಬರಿ ಸೊಪ್ಪು ಇವುಗಳನ್ನೆಲ್ಲಾ ಬೆಳೆದು, ಹತ್ತಿರದ ಸೊಸೈಟಿಗಳಿಗೆ ಕಳುಹಿಸಿಕೊಡುತ್ತೇನೆ. ಅಕ್ಕಪಕ್ಕದವರೂ ಬಂದು ಒಯ್ಯುತ್ತಾರೆ. ಇದರ ಜೊತೆಗೆ ಜೇನುತುಪ್ಪವನ್ನೂ ಮಾರಾಟ ಮಾಡುತ್ತೇನೆ.

IMG-20251202-WA0025

ಈಗೆಲ್ಲಾ ಔಷಧಿ ಹೊಡೆದು ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ತರಕಾರಿಗಳು, ಎಲ್ಲಿಂದಲೋ ಬರುತ್ತದೆ, ನೀವು ಮನೆಯ ಅಂಗಳದಲ್ಲೇ ನಿಮ್ಮದೇ ಕೊಟ್ಟಿಗೆಯ ಗೊಬ್ಬರವನ್ನು ಹಾಕಿ ಸಾವಯವ ತರಕಾರಿಗಳನ್ನು ಬಳಸಿ ಊಟ ಮಾಡುವಿರಿ. ಆಳಾಗಿ ದುಡಿವ ಅರಸನಾಗಿ ಉಣ್ಣು ಎನ್ನುವಂತೆ ನಿಮ್ಮ ಬದುಕು. ನೀವೇ ಅದೃಷ್ಟವಂತರು. ಜೇನುತುಪ್ಪ ಮಾರಾಟ ಮಾಡ್ತೀನಿ ಎಂದು ಹೇಳಿದ್ರಿ….. ಹೆಂಗಸರು ಜೇನು ಸಾಕಾಣಿಕೆ ಮಾಡುವುದು ಅಪರೂಪ. ನೀವು ಜೇನುಪೆಟ್ಟಿಗೆ ಇಟ್ಟೀದ್ದೀರಾ? ಅದಕ್ಕೇನಾದರೂ ತರಬೇತಿ ಪಡೆದಿದ್ದೀರಾ….? ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.

ಹೌದು. ಜೇನು ಸಾಕಾಣಿಕೆಯನ್ನು ನಾನೇ ಸ್ವತಃ ಮಾಡುತ್ತೇನೆ. ಅದರ ಎಲ್ಲಾ ಕೆಲಸಗಳೂ ನನ್ನದೇ. ಜೇನು ಸಾಕಾಣಿಕೆ ಮಾಡುವವರಿಗಾಗಿ ಸರ್ಕಾರದಿಂದ ಎರಡು ದಿನದ ತರಬೇತಿಯನ್ನು ಏರ್ಪಡಿಸಿದ್ದರು. ಅದರಲ್ಲಿ ನಾನೂ ಪಾಲ್ಗೊಂಡಿದ್ದೆ. ನಂತರ ನಮಗೆ ಎರಡು ಜೇನು ಪೆಟ್ಟಿಗೆಗಳ ಜೊತೆಗೆ ಜೇನು ಹುಳುಗಳನ್ನು ಕೊಟ್ಟಿದ್ದರು. ದಿನಕಳೆದಂತೆ ನಾನು ಪೆಟ್ಟಿಗೆಯ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದೆ. ಒಂದು ಸಲಕ್ಕೆ 30-35 ಕೆ.ಜಿ. ತುಪ್ಪ ಸಿಗುತ್ತದೆ. ಅದನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿಡುತ್ತೇನೆ. ಸೊಸೈಟಿಯವರು, ಪರಿಚಯಸ್ಥರು ಎಂದು ಬೇರೆ ಬೇರೆ ಕಡೆಗಳಿಂದ ಖರೀದಿಸುತ್ತಾರೆ. ಇದರ ಜೊತೆ ಹೈನುಗಾರಿಕೆಯೂ ಇದೆ.

ನಿಮ್ಮ ಮನೆಯಲ್ಲಿ ಕೊಟ್ಟಿಗೆ, ದನಕರುಗಳನ್ನೂ ನೋಡಿದೆ. ಇಂದು ಮನೆಯ ಖರ್ಚಿಗಿಂತ ಕೊಟ್ಟಿಗೆಯದೇ ಜಾಸ್ತಿ ಇರುತ್ತೆ ಎಂದು ಲೆಕ್ಕಾಚಾರ ಹಾಕಿ ತುಂಬಾ ಜನರು ದನಕರುಗಳನ್ನು ಸಾಕುವುದನ್ನೇ ಬಿಡುತ್ತಿದ್ದಾರೆ. ಇದು ಅನಿವಾರ್ಯತೆಯೂ ಇರಬಹುದು. ನಿಮ್ಮ ಅನುಭವದ ಅನಿಸಿಕೆ ಹೇಳಿ.

ಹೌದು. ಲೆಕ್ಕಾಚಾರದಂತೆ ಮಾಡುವುದಕ್ಕೆ ಹೋದರೆ ಇದರಲ್ಲಿ ಲಾಭವಿಲ್ಲ ಎನ್ನುವುದು ಸತ್ಯ. ಒಂದು ಒಳ್ಳೆ ಜಾತಿಯ ಆಕಳಿಗೆ 45-50 ಸಾವಿರ ಹೇಳುತ್ತಾರೆ. ಅದರ ಮೇಲಿಗೆ ಹುಲ್ಲು, ಹಿಂಡಿ, ಕಲಗಚ್ಚಿನ ಬೂಸಾ ಎಂದು ಇವುಗಳ ರೇಟು ಗಗನಕ್ಕೇರಿವೆ. ಮೊದಲಿನಂತೆ ದನಗಳನ್ನು ಮೇವಿಗೆ ಹೊರಗಡೆ ಬಿಡುವ ರೂಢಿ ತಪ್ಪಿ ಹೋಗಿದೆ. ಸಹಜ ಹಸಿ, ಒಣ ಹುಲ್ಲುಗಳಿಂದ ಅವುಗಳ ಹೊಟ್ಟೆ ತುಂಬಲಾರದು. ಹಾಲೂ ಸಿಗಲಾರದು. ಬೆಲೆ ಎಷ್ಟೇ ಆಗಲಿ ಹಿಂಡಿಯನ್ನು ತರುವುದು ಅನಿವಾರ್ಯ. ನಾವು ದನಕರಗಳ ಕೆಲಸಕ್ಕೆಂದು ಕೆಲಸದವರನ್ನು ಇಟ್ಟುಕೊಂಡರೆ ಅವರಿಗೆ ಪಗಾರು ಕೊಡಬೇಕಾಗುತ್ತದೆ. ಅದಕ್ಕೆ ಬದಲಾಗಿ ದನಕರುಗಳ ಕೆಲಸವನ್ನು ಅಂದರೆ ಕೊಟ್ಟಿಗೆಯಲ್ಲಿ ಸೆಗಣಿ ತೆಗೆಯುವುದು, ತೊಳೆಯುವುದು, ಹಾಲು ಹಿಂಡುವುದು, ಹುಲ್ಲು ತರುವುದು ಇವುಗಳನ್ನೆಲ್ಲಾ ನಾವೇ ಮಾಡಬೇಕು. ಅಲ್ಲದೇ, ಮನೆ ಖರ್ಚಿಗೆ ಉಳಿಸಿಕೊಂಡು ಹೆಚ್ಚುವರಿ ಹಾಲನ್ನು ಡೈರಿಗೆ ಕೊಡಬೇಕು. ತುಪ್ಪಾದರೆ ಅದನ್ನೂ ಮಾರಾಟ ಮಾಡಬೇಕು. ಆಗ ಹಿಂಡಿಯ ಖರ್ಚಾದರೂ ನಮಗೆ ಸಿಗುತ್ತದೆ. ಅಲ್ಲದೇ ಇದರ ಸೆಗಣಿಯಿಂದ ಗೋಬರ್‌ ಗ್ಯಾಸ್‌ ತಯಾರಿಸಿಕೊಂಡರೆ ನಮಗೆ ಅದೂ ಉಳಿತಾಯ. ಕೊಟ್ಟಿಗೆಯ ಗೊಬ್ಬರ ನಮ್ಮ ತೋಟದ ಅಡಿಕೆ, ತೆಂಗು, ಬಾಳೆ ಗಿಡಗಳಿಗೆ ಹಾಕುವುದು ಅನುಕೂಲವಾಗುತ್ತದೆ. ನಮ್ಮ ಹಳ್ಳಿ ಮನೆಯಲ್ಲಿ ದನಕರುಗಳು ಇಲ್ಲಿಂದರೆ, ನಮಗೆ ಏನೋ ಕಳೆದುಕೊಂಡ ಭಾವ. ಆ ಮೂಕಪ್ರಾಣಿಗಳ ಜೊತೆ ನಮ್ಮ ಪ್ರೀತಿ ಅಕ್ಕರೆಯ ಭಾವಗಳ ನಂಟು ನಮ್ಮ ಮನಸ್ಸಿಗೆ ಹಿತವನ್ನು ಕೊಡುತ್ತವೆ.

IMG-20251202-WA0015

ಒಟ್ಟಿನಲ್ಲಿ ನಿಮ್ಮದು ಸ್ವಾವಲಂಬನೆಯ ಬದುಕು. ನೀವು ಗೃಹಿಣಿಯಾಗಿ ಇಷ್ಟೊಂದು ಕೆಲಸಗಳ ಜೊತೆ ಮನೆಯನ್ನೂ ನಿರ್ವಹಿಸುತ್ತಿದ್ದೀರಿ. ಇವಕ್ಕೆಲ್ಲಾ ಸಮಯವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ…..? ಮುಂದೆ ಇವನ್ನೆಲ್ಲಾ ನಿಮ್ಮ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಾರಾ….? ಅವರಿಗೆ ಇದರಲ್ಲಿ ಆಸಕ್ತಿ ಇದೆಯೇ…..?

ಸಮಯ ನಿರ್ವಹಣೆ ಎನ್ನುವುದು ನಾವು ಮಾಡಿಕೊಳ್ಳುವುದು ಎನ್ನುವುದಕ್ಕಿಂತ ನಮಗೆ ಕೆಲಸದಸಲ್ಲಿ ಆಸಕ್ತಿ ಇದ್ದಾಗ, ವೇಳೆಯ ಹೊಂದಾಣಿಕೆ ತಾನಾಗೇ ಆಗುತ್ತದೆ. ನಮ್ಮ ಮಕ್ಕಳು ಇಬ್ಬರಿಗೂ ಕೃಷಿಯಲ್ಲಿ ಆಸಕ್ತಿ ಇಲ್ಲ. ಪೇಂಟಿಂಗ್‌, ಕ್ರಾಫ್ಟಿಂಗ್‌ ನಂತಹ ಕಲೆ ಆನುವಂಶೀಯವಾಗಿ ಬಂದಿದ್ದರೂ ಅದಕ್ಕೆಲ್ಲಾ ಅವರಿಗೆ ಸಮಯ ಇರುವುದಿಲ್ಲ, ಶಹರದ ಧಾವಂತದ ಬದುಕಿನ ಜೊತೆ ಒಗ್ಗಿಕೊಂಡಿದ್ದಾರೆ. ನಮ್ಮ ಕೈಯಲ್ಲಿ ಸಾಧ್ಯವಾಗುವತನಕ ಮಾಡುವುದು ಅಷ್ಟೇ…. ಮುಂದೆ ಹೇಗೆ….? ಎಂಬ ಆಲೋಚನೆ ಮಾಡಿದರೆ ಮನಸ್ಸು ಕೆಡಿಸಿಕೊಂಡಂತಾಗುತ್ತದೆ. ಕಾಲವೇ ಎಲ್ಲದಕ್ಕೂ ಉತ್ತರ ಎನ್ನಬಹುದು.

IMG-20251202-WA0028

ಕೊನೆಯದಾಗಿ ಒಂದು ಪ್ರಶ್ನೆ. ಇಂದಿನ ಯುವ ಪೀಳಿಗೆಯವರಿಗೆ ಹಳ್ಳಿಯ ಬದುಕು ಕಷ್ಟ ಎನ್ನುವುದರ ಜೊತೆಗೆ ಕೃಷಿಯಲ್ಲಿ ಲಾಭವಿಲ್ಲ ಎನ್ನುವ ಅಭಿಪ್ರಾಯವಿದೆ. ಮುಂದಿನವರಿಗಾಗಿ ನಿಮ್ಮ ಸಲಹೆ ಏನು?

ಹಳ್ಳಿಯ ಬದುಕು ಕಷ್ಟ ಎನ್ನುವುದು ತಪ್ಪು ಅಭಿಪ್ರಾಯ. ಕಷ್ಟ ಎನ್ನುವುದು ಹಳ್ಳಿ, ನಗರ ಎರಡೂ ಕಡೆ ಇದೆ. ಬದುಕು ರೀತಿ ಬೇರೆ ಬೇರೆ ಅಷ್ಟೆ. ಇಲ್ಲಿ ಹೆಚ್ಚಿನ ಲಾಭ ಇರದೇ ಇದ್ದರೂ ನಗರದಂತೆ ಧಾವಂತ ಇರುವುದಿಲ್ಲ. ಮುಖ್ಯವಾಗಿ ಬೇಕಾಗಿದ್ದು ಆಸಕ್ತಿ. ನಾವು ಮನಸ್ಸು ಮಾಡಿದರೆ ನಗರಕ್ಕಿಂತಲೂ ಸುಂದರ ಹಾಗೂ ನೆಮ್ಮದಿಯ ಬದುಕನ್ನು ಇಲ್ಲಿ ಕಟ್ಟಿಕೊಳ್ಳಬಹುದು.

ಹೌದು, ಜಯಾ ಹೇಳುವುದು ಸತ್ಯವಾದ ಮಾತು. ಇವರಿಗೆ ಇನ್ನಷ್ಟು ಅವಕಾಶಗಳು ಸಿಕ್ಕಿ ಅವರ ಮುಂದಿನ ಬದುಕು ಭವಿಷ್ಯ ಉಜ್ವಲವಾಗಲೆಂದು ಗೃಹಶೋಭಾ ಹಾರೈಸುತ್ತಾಳೆ.

– ಕಲ್ಪನಾ ಹೆಗಡೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ