ಕಲಿಕೆಯಲ್ಲಿ ಎಷ್ಟೇ ಪರಿಶ್ರಮಪಟ್ಟರೂ, ನೀವು ಬಯಸಿದ ಕಾಲೇಜು ಯಾ ಪ್ರೊಫೆಶನಲ್ ಕೋರ್ಸ್ ನಲ್ಲಿ ಅಡ್ಮಿಶನ್ ಸಿಗಲಿಲ್ಲವೇ? ಹಾಗಾದರೆ ಅದಕ್ಕಾಗಿ ಹೀಗೆ ತಯಾರಿ ಮಾಡಿಕೊಳ್ಳಿ……
ಸಂಧ್ಯಾಳಿಗೆ ಮೊದಲಿನಿಂದಲೂ ಟೀಚಿಂಗ್ ನಲ್ಲಿ ಬಹಳ ಆಸಕ್ತಿ. ತನ್ನ ಕಾಲೇಜಿನ ದಿನಗಳಿಂದಲೇ ವಠಾರದ ಎಲ್ಲಾ ಮಕ್ಕಳಿಗೂ ಟ್ಯೂಶನ್ ಹೇಳುತ್ತಿದ್ದಳು. ತಾನು ವಿದ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ಟೀಚರ್ ಆಗುವುದು ಅವಳ ಗುರಿ. ಸಕಾಲಕ್ಕೆ ಸರಿಯಾಗಿ ಅವಳು ಎಂಟ್ರೆನ್ಸ್ ಎಗ್ಸಾಮ್ ತೆಗೆದುಕೊಂಡಾಗ, ಅದರಲ್ಲಿ ಪಾಸಾಗಲಿಲ್ಲ. ಅದರ ಮಾರನೇ ವರ್ಷ ಅವಳು ಮತ್ತೆ ಪ್ರಯತ್ನಿಸಿದಳು. ಆದರೆ ಈ ಸಲ ಆಗಲಿಲ್ಲ. ಅಸಲಿಗೆ ಈ ಎಂಟ್ರೆನ್ಸ್ ಎಗ್ಸಾಮ್ ಗೆ ಹೇಗೆ ಸೂಕ್ತ ತಯಾರಿ ನಡೆಸಬೇಕಿತ್ತೋ, ಅವಳು ಹಾಗೆ ತಯಾರಿ ಮಾಡಿಕೊಂಡಿರಲಿಲ್ಲ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಎಂಟ್ರೆನ್ಸ್ ಪರೀಕ್ಷೆಗೆ ತಯಾರಿ ನಡೆಸುವಾಗ, ಅವರ ಗಮನ ರಿಸಲ್ಟ್ ಕಡೆ ಇರುವುದಿಲ್ಲ. ಅವರು ಸಿಲೆಬಸ್ ಪ್ರಕಾರ ಉರುಹೊಡೆದು ಸಿದ್ಧರಾಗುತ್ತಾರೆ, ಟೆಸ್ಟ್ ಬರೆಯುತ್ತಾರೆ. ಆದರೆ ಪ್ರೊಫೆಶನಲ್ ಪ್ರವೇಶ ಪರೀಕ್ಷೆಗಳು ಇಂಥ ವಿದ್ಯಾರ್ಥಿಗಳನ್ನು ಕಠಿಣಕರ ಪ್ರಶ್ನೆಗಳಿಂದ ಒರೆಹಚ್ಚುತ್ತದೆ. ಅವರು ಎಷ್ಟು ಮಾತ್ರ ಪ್ರಾಕ್ಟಿಕಲ್ ಆಗಿ ಯೋಚಿಸಬಲ್ಲರು, ಅಧಾರಣಾತ್ಮಕ ತಿಳಿವಳಿಕೆ, ಒತ್ತಡದಲ್ಲಿ ನಿರ್ಣಯ ತೆಗೆದುಕೊಳ್ಳುವ ಯೋಗ್ಯತೆ ಇದೆಯೇ ಎಂದು ನೋಡುತ್ತದೆ. ಈ ಆಧಾರದಿಂದಲೇ ಪ್ರಶ್ನೆಪತ್ರಿಕೆಗಳು ತಯಾರಾಗುತ್ತವೆ.
ಹೀಗಾಗಿ ಸಿಲೆಬಸ್ ಪ್ರಕಾರ ಉರು ಹೊಡೆಯುವುದರಿಂದ ಎಂಟ್ರೆನ್ಸ್ ನಲ್ಲಿ ಪಾಸಾಗುವುದು ಸುಲಭವಲ್ಲ. ಇದೇ ನೀತಿ ಬೇರೆ ಪರೀಕ್ಷೆಗಳಿಗೂ ಅನ್ವಯಿಸುತ್ತದೆ. ಹೀಗಿರುವಾಗ ಕಾಲೇಜುಗಳಲ್ಲಿ ಅಡ್ಮಿಶನ್ ತಯಾರಿ, ಕೇವಲ ಒಂದು ಪರೀಕ್ಷೆಯ ತಯಾರಿ ತರಹ ಅಲ್ಲ, ಬದಲಿಗೆ ಒಂದು ಮಾನಸಿಕ, ಸಾಮಾಜಿಕ ಹಾಗೂ ವೈಚಾರಿಕ ಜರ್ನಿ ಆಗುತ್ತದೆ. ನಾವು ಈ ತಯಾರಿಯನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೇವೆಯೇ?
ಗುರಿಯ ಆಯ್ಕೆ ಮುಖ್ಯ : ನಮ್ಮ ಗುರಿ ಯಾವುದಿರಬೇಕೆಂದು ಮೊದಲೇ ಸ್ಪಷ್ಟವಾಗಿ, ಪ್ರಾಮಾಣಿಕ ಪ್ರಯತ್ನಗಳಿಂದ ನಿಶ್ಚಯಿಸಿಕೊಂಡರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮೊದಲ ಪ್ರಮುಖ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಯಾವುದು ಹೆಚ್ಚು ಚಾಲ್ತಿಯಲ್ಲಿದೆಯೋ ವಿದ್ಯಾರ್ಥಿಗಳು ಅದನ್ನೇ ಆರಿಸಿಕೊಳ್ಳುತ್ತಾರೆ. ಹೆತ್ತನರು ಸುರಕ್ಷಿತ ಎಂಬುದನ್ನೇ ಅನುಸರಿಸುತ್ತಾರೆ. ಎಲ್ಲರೂ ಮಾಡುತ್ತಿದ್ದಾರೆ, ತಾನಿ ಎಂಜಿನಿಯರಿಂಗ್ ಮಾಡಬೇಕು, ಡಾಕ್ಟರ್ ಆದರೆ ಪ್ರೆಸ್ಟೀಜ್ ಹೆಚ್ಚು ಎಂದು ತಮಗೆ ಆ ವಿಷಯದಲ್ಲಿ ಆಸಕ್ತಿ ಇರಲಿ ಬಿಡಲಿ, ಇಂಥ ಪ್ರನೋಶ ಪರೀಕ್ಷೆಗಳಿಗೆ ಬಲವಂತದ ತಯಾರಿ ನಡೆಸುತ್ತಾರೆ. ಪ್ರೊಫೆಶನಲ್ ಕಾಲೇಜ್ ಗೆ ಸೇರಲು ತಯಾರಿ ಶುರು ಮಾಡುವ ಮೊದಲೇ, ನಿಮ್ಮನ್ನು ನೀವು, ನಿಮ್ಮ ಅಭಿರುಚಿಗೆ ತಕ್ಕಂತೆ ಇದು ಇದೆ ತಾನೇ ಎಂದು ಕೇಳಿಕೊಳ್ಳಿ. ಏಕೆಂದರೆ ಗುರಿಯೇ ತಪ್ಪಾಗಿರುವಾಗ, ಅದಕ್ಕೆ ಬೇಕಾದ ತಯಾರಿ ಎಲ್ಲವೂ ವ್ಯರ್ಥ ಆದೀತು, ಪ್ರತಿ ಖರ್ಚೂ ದಂಡ ಆದೀತು.
ಉತ್ತಮ ಕೋಚಿಂಗ್ ನ ನೆರವು : ಕೋಚಿಂಗ್ ಸಂಸ್ಥೆಗಳು ಇಂದು ಪ್ರೊಫೆಶನಲ್ ಕೋರ್ಸಿನ ತಯಾರಿಯ ಪರ್ಯಾಯ ಆಗಿ ಕೂತಿವೆ. ಕೋಚಿಂಗ್ ಜಾಯಿನ್ ಆಗುವುದರಿಂದ ವಿದ್ಯಾರ್ಥಿ ಕೇವಲ ಸಿಲೆಬಸ್ ಮಾತ್ರವಲ್ಲ, ಇಡೀ ಪರೀಕ್ಷಾ ವಿಧಾನದ ರೂಪುರೇಷೆ ಅರಿತುಕೊಳ್ಳಬೇಕು. ಯಾವ ಪ್ರಶ್ನೆಯನ್ನು ಎಷ್ಟು ನಿಮಿಷದಲ್ಲಿ ಉತ್ತರಿಸಬೇಕು, ಎಲ್ಲಿ ಸ್ಟ್ರಕ್ ಆಗಬಾರದು, ನೆಗೆಟಿವ್ ಮಾರ್ಕ್ಸ್ ಬರದಂತೆ ಎಚ್ಚರಿಕೆ ವಹಿಸುವುದು ಹೇಗೆ? ಇವೆಲ್ಲ ವಿಷಯಗಳೂ ಕೇವಲ ಪಠ್ಯಪುಸ್ತಕ ಓದುವುದರಿಂದಲ್ಲ, ಬದಲಿಗೆ ಸತತ ಪರಿಶ್ರಮ, ಅಭ್ಯಾಸ, ಗೈಡೆಡ್ ಟ್ರೇನಿಂಗ್ ನಿಂದ ಸಿಗುತ್ತದೆ. ನಿಯಮಿತ ಮಾಕ್ ಟೆಸ್ಟ್, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಅನುಭವೀ ಶಿಕ್ಷಕರ ರಣನೀತಿ ಇತ್ಯಾದಿ ಮಾತ್ರವೇ ವಿದ್ಯಾರ್ಥಿಗಳನ್ನು ವಾಸ್ತವಿಕ ಪರೀಕ್ಷೆಯ ಒತ್ತಡ ಎದುರಿಸಲು ಸಜ್ಜಾಗಿಸುತ್ತದೆ.
ಇದರ ಹೊರತಾಗಿ ಕೋಚಿಂಗ್ ಸಂಸ್ಥೆಗಳ, ಒಂದು ವಿಧದ ಪೈಪೋಟಿ ಪ್ರತಿಸ್ಪರ್ಧೆ ಒಡ್ಡುತ್ತವೆ. ತನ್ನಂತೆಯೇ ಇವರು ಇತರ ಸಾವಿರಾರು ವಿದ್ಯಾರ್ಥಿಗಳ ಜೊತೆ ಕುಳಿತು, ಪರೀಕ್ಷೆಯ ತಯಾರಿ ನಡೆಸಿದಾಗ, ತಾನು ಯಾವ ಮಟ್ಟದ ಆಳದಲ್ಲಿದ್ದೇನೆ ಎಂಬುದು ಸ್ವತಃ ಅರಿವಾಗುತ್ತದೆ. ತಾನು ಎಲ್ಲಿದ್ದೇನೆ, ಯಾವ ರೀತಿಯ ಸುಧಾರಣೆ ಬೇಕು ಇತ್ಯಾದಿ ಎಲ್ಲದರ ಪ್ರೇರಣೆಯಿಂದ ಪರೀಕ್ಷೆಗಳನ್ನು ಎದುರಿಸಲು ಧೈರ್ಯ ಬರುತ್ತದೆ.
ಇಂದಿನ ದೊಡ್ಡ ಅವಶ್ಯಕತೆ ಎಂದರೆ ವಿದ್ಯಾರ್ಥಿಗಳು ಕೋಚಿಂಗ್ ಕ್ಲಾಸ್ ನ್ನು ಊರುಗೋಲಾಗಿ ಭಾವಿಸದೆ, ಒಂದು ಆಯುಧವಾಗಿ ಬಳಸಿಕೊಳ್ಳಬೇಕು. ಇದರಿಂದ ನಿಮ್ಮ ತಿಳಿವಳಿಕೆ ಹೆಚ್ಚಬೇಕು, ರಣನೀತಿ ಚುರುಕಾಗಬೇಕು, ಆತ್ಮವಿಶ್ವಾಸ ತುಂಬಿ ತುಳುಕಬೇಕು. ಆದರೆ ಎಲ್ಲೂ ನಿಮ್ಮ ತಿಳಿವಳಿಕೆಯ ಸ್ವತಂತ್ರ ಹಾಗೂ ಸ್ವಾಧ್ಯವಾದ ಕುಶಲತೆ ತಗ್ಗಬಾರದು. ಎಂಟ್ರೆನ್ಸ್ ಪರೀಕ್ಷೆ ಅಂದ್ರೆ ಕೇವಲ ಟೈಂ ಮ್ಯಾನೇಜ್ ಮೆಂಟ್‌ಟ್ರಿಕ್ಸ್ ಮಾತ್ರವಲ್ಲ, ಪರಿಜ್ಞಾನ, ಧೈರ್ಯ, ನಿರ್ಧಾರಗಳ ಸಾಮಥ್ಯ ಅಳೆಯುವ ಸಾಧನವಾಗಿದೆ.
ಮಾನಸಿಕ ಆರೋಗ್ಯ ಸದೃಢವಾಗಿರಲಿ : ಈ ಇಡೀ ಪರೀಕ್ಷಾ ತಯಾರಿಯಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಗುರಿಯಾಗುವುದೆಂದರೆ ಮಾನಸಿಕ ಆರೋಗ್ಯ! ಸತತ ಘಂಟೆಗಳ ತಯಾರಿ, ಮತ್ತೆ ಮತ್ತೆ ಮಾರ್ಕ್ ಟೆಸ್ಟ್, ವೈಫಲ್ಯದ ಭಯ, ಕುಟುಂಬದವರ ಅತಿಯಾದ ಅಪೇಕ್ಷೆಗಳು ಇತ್ಯಾದಿಗಳೆಲ್ಲ ಬೆರೆತು ವಿದ್ಯಾರ್ಥಿಯನ್ನು ಒಳಗಿಂದೊಳಗೇ ಕೊರೆಯುತ್ತಿರುತ್ತದೆ. ಇತ್ತೀಚೆಗೆ ಎಲ್ಲೆಲ್ಲೂ ಫೇಲ್ಯೂರ್ ಆದ ವಿದ್ಯಾರ್ಥಿಗಳು ಹತಾಶೆ, ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗುವ ಘೋರ ನಿರ್ಧಾರ ತಳೆಯುತ್ತಾರೆ. ಅಂಥ ಅವಘಡ ಏನೂ ಸಂಭವಿಸದಂತೆ ತೀವ್ರ ಎಚ್ಚರಿಕೆಯಲ್ಲಿರಬೇಕು. ಹೀಗಾಗಿ ಇಂಥ ಪ್ರೊಫೆಶನಲ್ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಮಾನಸಿಕವಾಗಿ 100% ಸದೃಢರಾಗಬೇಕು, ಒಂದು ಪಕ್ಷ ಈ ವರ್ಷ ಹೋದರೂ ಮುಂದಿನ ವರ್ಷ ಪರೀಕ್ಷೆ ಬರೆದು ಗೆಲ್ಲಬಹುದು ಎಂಬ ದೃಢ ಸಂಕಲ್ಪ ಇರಲಿ. ವೈಫಲ್ಯ ಯಾರಿಗೆ ಯಾವಾಗ ಬೇಕಾದರೂ ಕಾಡುತ್ತದೆ, ಅದಕ್ಕೆ ಅಷ್ಟೊಂದು ಬೆಲೆ ಕೊಡಬೇಡಿ, ಜೀವಕ್ಕಿಂತಲೂ ಮಿಗಿಲು ಯಾವುದೂ ಅಲ್ಲ! ಜೀವನ ಎಂಬುದು ಎಲ್ಲಕ್ಕಿಂತಲೂ ಅಮೂಲ್ಯವಾದುದು ಎಂಬುದನ್ನು ಅರಿತು ಕ್ಷಣಿಕ ಆವೇಶಕ್ಕೆ ಬಲಿಯಾಗದೆ, ಸದೃಢಮನಸ್ಕರಾಗಿ ಮುಂದುವರಿಯಿರಿ.
ಆಲಸ್ಯ ಎಂದಿಗೂ ಬೇಡ : ಯಾವುದೇ ಕೋರ್ಸಿನ ತಯಾರಿ ಇರಲಿ ಶಿಸ್ತು ಸಂಯಮ ಅತಿ ಮುಖ್ಯ. ಇಂಥ ಸಂದರ್ಭದಲ್ಲಿ ಆಲಸ್ಯ, ಸೋಮಾರಿತನ ಖಂಡಿತಾ ಸಲ್ಲದು. ಇವತ್ತು ಬೇಡ ನಾಳೆ ಓದೋಣ ಎಂಬ ಭಾವ ಬಿಟ್ಟು, ಈ ಕ್ಷಣವೇ ಓದಿ ಮುಗಿಸಬೇಕು ಎಂಬ ದೃಢತೆ ಇಟ್ಟುಕೊಳ್ಳಿ. ಒಂದೇ ವಿಧದ ಪಠ್ಯಪುಸ್ತಕಗಳ ಅಧ್ಯಯನ, ಒಂದೇ ರೊಟೀನ್, ಅದೇ ಪುನರಾವರ್ತನೆಯ ವಿಧಾನ ಕೆಲಸಕ್ಕೆ ಬಾರದಿದ್ದರೆ, ಬೇಕಾದಂತೆ ಬದಲಾವಣೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ತಂತಮ್ಮ ದೌರ್ಬಲ್ಯ ಗುರುತಿಸಿಕೊಂಡು ಅದರಿಂದ ಹೊರಬಂದು, ಶಿಸ್ತಿನ ಸಿಪಾಯಿಗಳಾಗಿ ಮುನ್ನುಗ್ಗಬೇಕು. ರಣನೀತಿ ಬದಲಿಸಲು ಹೆದರದಿರಿ, ಪರಸ್ಪರ ಚರ್ಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ.
– ಪ್ರತಿನಿಧಿ





