ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಬೇರುಗಳನ್ನು ಗಟ್ಟಿಗೊಳಿಸಿದ ಕೆಲವೇ ಕೆಲವು ಮಹನೀಯರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು ಪಂಡಿತ್ ಆರ್.ಎ. ಶೇಷಾದ್ರಿ ಗವಾಯಿಗಳು (21 ಮಾರ್ಚ್ 1924 – 19 ಮಾರ್ಚ್ 2003). ಸಂಗೀತ ಶಿಕ್ಷಕ, ಹಾರ್ಮೋನಿಯಂ ವಾದಕ, ಗಾಯಕ, ವಾಗ್ಗೇಯಕಾರ, ಲೇಖಕ, ಪ್ರಸಾರಕ, ಸಂಘಟಕ ಮತ್ತು ಆಡಳಿತಗಾರರಾಗಿ ಅವರು ಸಲ್ಲಿಸಿದ ಸೇವೆ ಕನ್ನಡ ಸಂಗೀತ ಇತಿಹಾಸದಲ್ಲಿ ಅಜರಾಮರವಾಗಿದೆ.

ಸುಮಾರು ಐದು ದಶಕಗಳ ಕಾಲ ಅವರು ಬೆಂಗಳೂರನ್ನು ಹಿಂದೂಸ್ತಾನಿ ಸಂಗೀತದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ  ಪಂಡಿತ್ ಶೇಷಾದ್ರಿ ಗವಾಯಿಗಳ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಬಾಲ್ಯ ಮತ್ತು ಸಂಗೀತದತ್ತ ಮೊದಲ ಹೆಜ್ಜೆ

1924ರ ಮಾರ್ಚ್ 21ರಂದು ದಾವಣಗೆರೆಯಲ್ಲಿ ರಾಜಾಪುರ ವೆಂಕಟಸುಬ್ಬರಾವ್ ಹಾಗೂ ತಿಮ್ಮಮ್ಮ ದಂಪತಿಗಳ ಮಗನಾಗಿ ಶೇಷಾದ್ರಿ ಗವಾಯಿಗಳು ಜನಿಸಿದರು. ಬಾಲ್ಯದಿಂದಲೇ ಸಂಗೀತ ಮತ್ತು ರಂಗಭೂಮಿಯತ್ತ ಅವರಿಗೆ ವಿಶೇಷ ಆಕರ್ಷಣೆ ಇತ್ತು. ಕೇವಲ ಒಂಬತ್ತು ವರ್ಷದ ಬಾಲಕನಾಗಿದ್ದಾಗಲೇ ಅವರು ರಂಗಭೂಮಿಗೆ ಪ್ರವೇಶಿಸಿದರು. ವಾಮನರಾವ್ ಮಾಸ್ತರ ಕಂಪನಿ, ತಳಕಲ್ ವೆಂಕಟರೆಡ್ಡಿ ಕಂಪನಿ, ಹಂದಿಗನೂರು ಸಿದ್ಧರಾಮಪ್ಪ ಕಂಪನಿ ಹಾಗೂ ಕಲ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿಗಳಲ್ಲಿ ಬಾಲಕೃಷ್ಣ, ಪ್ರಹ್ಲಾದ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಬಾಲನಟನಾಗಿ ಪ್ರಸಿದ್ಧರಾದರು.

ಸಂಗೀತಕ್ಕಾಗಿ ಮನೆ ತೊರೆದ ಬಾಲಕ

1935ರ ಸುಮಾರಿಗೆ ಬೆಂಗಳೂರಿನ ಗಾಂಧಿನಗರದಲ್ಲಿದ್ದ ಗುಬ್ಬಿ ವೀರಣ್ಣ ರಂಗಮಂದಿರದ ಬಳಿ ಹಾದು ಹೋಗುತ್ತಿದ್ದ ಹನ್ನೊಂದು ವರ್ಷದ ಶೇಷಾದ್ರಿ, ನಾಟಕಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದ ಕಲ್ಕೋಟಿ ಚನ್ನಬಸವಯ್ಯ ಅವರ ವಾದನಕ್ಕೆ ಮಾರುಹೋದರು. ಅವರ ಹಿಂದೆ ದಿನವೂ ಸುತ್ತಾಡುತ್ತಿದ್ದ ಬಾಲಕನ ಆಸಕ್ತಿಯನ್ನು ಗುರುತಿಸಿದ ಚನ್ನಬಸವಯ್ಯ, ನನ್ನ ಜೊತೆ ಬಂದರೆ ಹಾರ್ಮೋನಿಯಂ ಕಲಿಸುತ್ತೇನೆ”ಎಂದು ಹೇಳಿದ ಕ್ಷಣವೇ, ಶೇಷಾದ್ರಿಯವರು ಮನೆಗೆ ತಿಳಿಸದೇ ಸಂಗೀತದ ಹಾದಿ ಹಿಡಿದರು. ಮನೆಯವರು ಹುಡುಕಿಹುಡುಕಿ ಸುಸ್ತಾಗಿ, ಮಗ ಬದುಕಿಲ್ಲವೆಂದು ಭಾವಿಸಿ ತಿಥಿಯನ್ನೂ ಮಾಡಿಬಿಟ್ಟರೆಂದು ಅವರ ಶಿಷ್ಯರು ನಂತರ ನೆನಪಿಸಿಕೊಂಡಿದ್ದಾರೆ.

ಚನ್ನಬಸವಯ್ಯನವರಿಂದ ಹಾರ್ಮೋನಿಯಂ ಕಲಿತ ಶೇಷಾದ್ರಿಯನ್ನು ನಂತರ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಬಳಿ ಕರೆದುಕೊಂಡು ಹೋಗಲಾಯಿತು. ಸುಮಾರು ಎಂಟು ವರ್ಷಗಳ ಕಾಲ ಗದಗದಲ್ಲಿ ಗುರುಕುಲ ಪದ್ಧತಿಯಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಆ ಕಾಲದ ಜೀವನ ಅತ್ಯಂತ ಸರಳವಾಗಿತ್ತು. ಒಂದು ಪಂಚೆಯಲ್ಲೇ ಜೀವನ ಸಾಗಿಸುತ್ತಿದ್ದ ಅವರು, ಬೆಳಗ್ಗೆ ಸಂಗೀತಾಭ್ಯಾಸ, ಮಧ್ಯಾಹ್ನ ಗುರುಸೇವೆ, ರಾತ್ರಿ ಮತ್ತೆ ಸಂಗೀತ ಎನ್ನುವ ತಪಸ್ವಿ ಜೀವನ ನಡೆಸಿದರು.

ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಭದ್ರ ಬುನಾದಿ

ಆ ಕಾಲದಲ್ಲಿ ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಭೀಮಸೇನ ಜೋಶಿ ಹಾಗೂ ಗಂಗೂಬಾಯಿ ಹಾನಗಲ್ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತದ ವೈಭವವನ್ನು ಹರಡುತ್ತಿದ್ದರೆ, ಶೇಷಾದ್ರಿ ಗವಾಯಿಗಳು 1944ರಲ್ಲಿ ಬೆಂಗಳೂರಿಗೆ ಬಂದು ಹಿಂದೂಸ್ತಾನಿ ಸಂಗೀತವನ್ನು ಮನೆಮನೆಗೂ ತಲುಪಿಸುವ ಕಾರ್ಯ ಆರಂಭಿಸಿದರು. ಅವರು ಸ್ಥಾಪಿಸಿದ “ಅರವಿಂದ ಸಂಗೀತ ವಿದ್ಯಾಲಯ” ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿತು. ಇದರಿಂದ ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಗಟ್ಟಿಯಾದ ನೆಲೆ ನಿರ್ಮಾಣವಾಯಿತು. ಅದರ ಮೂಲಕವೇ ಗಂಧರ್ವ ಮಹಾವಿದ್ಯಾಲಯ ಪರೀಕ್ಷೆಗಳೂ ನಡೆಯುತ್ತಿದ್ದವು. ಸಂಗೀತ ಪರೀಕ್ಷೆ ಬರೆಯುವ ನೂರಾರು ವಿದ್ಯಾರ್ಥಿಗಳಿಗಿದು ಅನುಕೂಲವಾಯಿತು.

ಸೈಕಲ್ ಮೇಲೆ ಹಾರ್ಮೋನಿಯಂ ಹೊತ್ತು ಮನೆಮನೆಗೆ ತೆರಳಿ ಸಂಗೀತ ಪಾಠ

ವೈಯಕ್ತಿಕ ಬದುಕಿನಲ್ಲಿ ಗವಾಯಿಗಳು ಎಂದಿಗೂ ಆಡಂಬರವನ್ನು ಬಯಸಲಿಲ್ಲ. ಸರಳ ಜೀವನವೇ ಅವರ ಆದರ್ಶವಾಗಿತ್ತು. ಒಂದು ಪಂಚೆ ಮತ್ತು ಅದರ ಮೇಲೊಂದು ಜುಬ್ಬಾ—ಇಷ್ಟೇ ಅವರ ನಿತ್ಯದ ಉಡುಪು. ತಮ್ಮ ಬದುಕಿನ ಮೂಲಕವೇ ಸರಳತೆ ಮತ್ತು ಸೇವೆಯ ಮೌಲ್ಯವನ್ನು ಅವರು ಸಾರುತ್ತಿದ್ದರು. ಅವರ ಸಂಗೀತ ಪ್ರಚಾರದ ಒಂದು ವಿಶೇಷತೆ ಎಂದರೆ, ಅವರು ಸೈಕಲ್ ಮೇಲೆ ಹಾರ್ಮೋನಿಯಂ ಹೊತ್ತು ಮನೆಮನೆಗೆ ತೆರಳಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಆ ಕಾಲದಲ್ಲಿ ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸಿದ ಅಪರೂಪದ ಗುರುಗಳಲ್ಲಿ ಅವರು ಪ್ರಮುಖರು.

 

ಹಾರ್ಮೋನಿಯಂ ವಾದನದ ಅಪರೂಪದ ಸಾಧಕ

ಶೇಷಾದ್ರಿ ಗವಾಯಿಗಳು ಹಾರ್ಮೋನಿಯಂ ವಾದನದಲ್ಲಿ ದೇಶದ ಶ್ರೇಷ್ಠ ಸಹವಾದಕರಲ್ಲಿ ಒಬ್ಬರಾಗಿದ್ದರು. ಅವರು ಭಾರತದ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ಸಂಗಮೇಶ ಗುರವ್, ಸಿದ್ದರಾಮ ಜಂಬಲದಿನ್ನಿ, ಬೇಗಂ ಪರ್ವೀನ್ ಸುಲ್ತಾನ ಮುಂತಾದವರ ಕಾರ್ಯಕ್ರಮಗಳಿಗೆ ಹಾರ್ಮೋನಿಯಂ ಸಹವಾದನ ನೀಡಿದರು. ಕರ್ನಾಟಕ ಮಾತ್ರವಲ್ಲದೆ ದೆಹಲಿ, ಮುಂಬೈ, ಕೋಲ್ಕತ್ತಾ, ನಾಗಪುರ, ಹೈದರಾಬಾದ್ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದರು. ಅವರ ವಾದನ ಲಂಡನ್‌ನ ಭಾರತೀಯ ವಿದ್ಯಾಭವನದಲ್ಲೂ ಮೊಳಗಿತ್ತು.

ಸಂಗೀತ ಕಾರ್ಯಕ್ರಮಗಳಿಗೆ ಹಣವನ್ನು ಕೂಡಿಡುತ್ತಿದ್ದ ಪರಿ ನಿಜಕ್ಕೂ ಅದ್ಭುತ

ಬೆಂಗಳೂರಿನಲ್ಲಿಯೂ ಹಿಂದೂಸ್ತಾನಿ ಸಂಗೀತವನ್ನು ಬೆಳೆಸಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದ ಪಂಡಿತ್ ಶೇಷಾದ್ರಿ ಗವಾಯಿಗಳು, ದೇಶ–ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಬಾಲಮುರಳಿಕೃಷ್ಣ ಅವರಂತಹ ಆ ಕಾಲದ ಶ್ರೇಷ್ಠ ಸಂಗೀತಗಾರರನ್ನು ಆಹ್ವಾನಿಸಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಈ ಕಾರ್ಯಕ್ರಮಗಳ ವೆಚ್ಚವನ್ನು ಭರಿಸುವ ಅವರ ವಿಧಾನವೇ ವಿಶಿಷ್ಟವಾಗಿತ್ತು. ಅವರು ತಮ್ಮ ಬಳಿ ಒಂದು ಪ್ರತ್ಯೇಕ ಡಬ್ಬಿಯನ್ನು ಇಟ್ಟುಕೊಂಡಿದ್ದರು. ಶಿಷ್ಯರು ಸಂಗೀತ ಪಾಠದ ಶುಲ್ಕವನ್ನು ನೀಡಿದಾಗ, ಅದರಲ್ಲಿ ಸ್ವಲ್ಪ ಹಣವನ್ನು ಆ ಡಬ್ಬಿಯಲ್ಲಿ ಸಂಗ್ರಹಿಸುತ್ತಿದ್ದರು. ವರ್ಷಪೂರ್ತಿ ಹೀಗೆ ಕೂಡಿಸಿದ ಹಣವನ್ನೇ ಸಂಗೀತ ಕಾರ್ಯಕ್ರಮಗಳ ಆಯೋಜನೆಗೆ ಬಳಸುತ್ತಿದ್ದರು.

ಗುರುವಿನ ಪಾತ್ರವನ್ನು ಅವರು ಹರಿಯುವ ನದಿಗೆ ಹೋಲಿಸುತ್ತಿದ್ದರು. ನದಿ ತನ್ನ ನೀರನ್ನು ಎಲ್ಲರಿಗೂ ಉಚಿತವಾಗಿ ನೀಡುವಂತೆ, ಗುರು ಕೂಡ ತನ್ನ ಜ್ಞಾನವನ್ನು ಯಾವುದೇ ಸ್ವಾರ್ಥವಿಲ್ಲದೆ ಹಂಚಬೇಕು. ಆ ಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಶಿಷ್ಯನ ಜವಾಬ್ದಾರಿ ಎಂದು ಅವರು ಆಗಾಗ ಹೇಳುತ್ತಿದ್ದರು. ಇದೇ ಅವರ ಬೋಧನಾ ತತ್ವವಾಗಿದ್ದು, ನೂರಾರು ಶಿಷ್ಯರ ಜೀವನಕ್ಕೆ ಬೆಳಕಾಯಿತು.

ಲೇಖಕ ಮತ್ತು ಸಂಪಾದಕರಾಗಿ

ಸಂಗೀತ, ಸಾಹಿತ್ಯ ಮತ್ತು ಕಲೆಯ ಬೆಳವಣಿಗೆಗಾಗಿ ಅವರು ಗಾಯನ ಗಂಗಾ ಎಂಬ ಸಂಗೀತ ಮಾಸಪತ್ರಿಕೆಯನ್ನು ಆರಂಭಿಸಿದರು. ಸುಮಾರು ನಾಲ್ಕೂವರೆ ದಶಕಗಳ ಕಾಲ ಈ ಪತ್ರಿಕೆಯನ್ನು ನಿರಂತರವಾಗಿ ನಡೆಸಿದರು. ಪ್ರತಿ ಸಂಚಿಕೆಯಲ್ಲೂ ಉರುಗಾಚಲ ಎಂಬ ಅಂಕಿತನಾಮದಲ್ಲಿ ಸಂಪಾದಕೀಯ ಬರೆಯುತ್ತಿದ್ದರು. ಸಂಗೀತ ಪತ್ರಿಕೆ ನಡೆಸುವುದು ಸುಲಭದ ಕೆಲಸವಾಗಿರಲಿಲ್ಲ. ಒಂದು ಸಂದರ್ಭದಲ್ಲಿ ಪತ್ರಿಕೆ ಪ್ರಕಟಿಸಲು ಹಣವಿಲ್ಲದ ಕಾರಣ ತಮ್ಮ ಬೆರಳಿನ ಉಂಗುರವನ್ನೇ ಅಡವಿಟ್ಟು ಪತ್ರಿಕೆ ಮುದ್ರಿಸಿದ ಘಟನೆ ಅವರ ಸಂಗೀತಪ್ರೇಮಕ್ಕೆ ಸಾಕ್ಷಿಯಾಗಿದೆ.

ಪ್ರಮುಖ ಕೃತಿಗಳು

ಅವರ ಸಾಹಿತ್ಯ ಮತ್ತು ಸಂಗೀತ ಕೃತಿಗಳಲ್ಲಿ ಪ್ರಮುಖವಾದವು: ಸಂಗೀತ ಕಲಾರವಿಂದ – ಭಾಗ 1 ಸಂಗೀತ ಕಲಾರವಿಂದ – ಭಾಗ 2 ತತ್ವಗಾನ ರತ್ನಾಕರ “ಸಂಗೀತ ಕಲಾರವಿಂದ”ದ ಎರಡೂ ಭಾಗಗಳಿಗೆ ಕರ್ನಾಟಕ ಸರ್ಕಾರದ ಪ್ರಶಸ್ತಿ ದೊರೆಯಿತು. “ತತ್ವಗಾನ ರತ್ನಾಕರ” ಸಂಗೀತ ವಿದ್ಯಾರ್ಥಿಗಳ ಬಹುಜನಪ್ರಿಯ ಗ್ರಂಥವಾಯಿತು.

ಪಂಚಾಕ್ಷರಿ ಪ್ರಶಸ್ತಿ ಸ್ಥಾಪನೆ

ತಮ್ಮ ಗುರುಗಳಾದ ಪಂಡಿತ್ ಪಂಚಾಕ್ಷರಿ ಗವಾಯಿಗಳ ಮೇಲಿನ ಅಪಾರ ಭಕ್ತಿಯಿಂದ ಅವರು ಗಾನಯೋಗಿ ಪಂಡಿತ್.ಪಂಚಾಕ್ಷರಿ ಗವಾಯಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ದೇಶದ ಶ್ರೇಷ್ಠ ಸಂಗೀತಗಾರರಿಗೆ ಪ್ರತಿಷ್ಠಿತ ಪಂಚಾಕ್ಷರಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು.

ಆಡಳಿತ ಮತ್ತು ಸಂಘಟನಾ ಸೇವೆ

ಶೇಷಾದ್ರಿ ಗವಾಯಿಗಳು ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಅವರ ಆಡಳಿತದಲ್ಲಿ ಅನೇಕ ಸಂಗೀತ ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ದೊರೆಯಿತು.

ಪ್ರಶಸ್ತಿ ಮತ್ತು ಗೌರವಗಳು

ಶೇಷಾದ್ರಿ ಗವಾಯಿಗಳು 500ಕ್ಕೂ ಹೆಚ್ಚು ಭಕ್ತಿಗೀತೆಗಳಿಗೆ ಸ್ವರ ಸಂಯೋಜಿಸಿದರು. ವಿಶೇಷವಾಗಿ ಬಸವಣ್ಣ ಹಾಗೂ ಶರಣರ ವಚನಗಳನ್ನು ಹಿಂದೂಸ್ತಾನಿ ಶೈಲಿಯಲ್ಲಿ ಜನಮನ ತಲುಪಿಸಿದ ಕಾರಣ ಅವರಿಗೆ ವಚನ ಗಾಯನ ವಿಭೂಷಣ ಎಂಬ ಗೌರವ ದೊರೆಯಿತು. ಅವರ ಸಾಧನೆಗಾಗಿ ಅನೇಕ ಗೌರವಗಳು ದೊರೆಯುವಂತಾಯಿತು.

  • ಸಂಗೀತ ಸಾಗರ
  • ಸಂಗೀತ ಕಲಾರತ್ನ
  • ಸಂಗೀತ ವಿಶಾರದ
  • ಸಂಗೀತ ಸುಧಾರ್ಣವ
  • ನಾದಶ್ರೀ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಕೆಂಪೇಗೌಡ ಪ್ರಶಸ್ತಿ
  • ಚಂದ್ರಹಾಸ ಪ್ರಶಸ್ತಿ
  • ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ
  • ಭಾರತೀಯ ಗಾಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಮಹೋಪಾಧ್ಯಾಯ ಬಿರುದು

ಇದರ ಜೊತೆಗೆ ಅನೇಕ ಸಂಗೀತ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಗೌರವ ಗಳಿಸಿದರು.

ಚಿತ್ರ:Sharada with sheshadri gawai.jpg - ವಿಕಿಪೀಡಿಯ

ಸುಮಾರು ಐದು ದಶಕಗಳ ಕಾಲ ಸಂಗೀತದ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ ಈ ಮಹಾನ್ ಸಂಗೀತ ತಪಸ್ವಿ 2003ರ ಮಾರ್ಚ್ 19ರಂದು, ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಬೆಳೆಸಿದ ಶಿಷ್ಯ ಪರಂಪರೆ, ಸ್ವರ ಸಂಯೋಜಿಸಿದ ನೂರಾರು ಭಕ್ತಿಗೀತೆಗಳು, ವಚನ ಗಾಯನದ ಸಂಪ್ರದಾಯ, ಸ್ಥಾಪಿಸಿದ ಸಂಗೀತ ವಿದ್ಯಾಲಯ, ಗಾಯನ ಗಂಗಾ ಪತ್ರಿಕೆ ಹಾಗೂ ಪಂಚಾಕ್ಷರಿ ಪ್ರಶಸ್ತಿ ಇಂದಿಗೂ ಅವರ ಹೆಸರನ್ನು ಅಮರಗೊಳಿಸಿವೆ. ಹಿಂದೂಸ್ತಾನಿ ಸಂಗೀತವನ್ನು ಉತ್ತರ ಕರ್ನಾಟಕದ ಗಡಿಯಿಂದ ಬೆಂಗಳೂರಿನ ಮನೆಮನೆಗೂ ತಲುಪಿಸಿದ ಅಪರೂಪದ ಗುರು, ಸಂಗೀತದ ನಿಜವಾದ ತಪಸ್ವಿ ಮತ್ತು ಕನ್ನಡ ನಾಡಿನ ಹೆಮ್ಮೆಯ ಕನ್ನಡದ ಕಲಿಗಳೇ ಪಂಡಿತ್ ಶೇಷಾದ್ರಿ ಗವಾಯಿಗಳು.

ಏನಂತೀರೀ?
ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ