ನೀವು ಆಸ್ಪತ್ರೆಯಿಂದ ನಿಮ್ಮ ಪುಟ್ಟ ಕಂದನನ್ನು ಮನೆಗೆ ಎತ್ತಿಕೊಂಡು ಬರುವಾಗ ನಿಮ್ಮ ಮನಸ್ಸಿನಲ್ಲಿ ಅದರ ಪಾಲನೆಪೋಷಣೆಗೆ ಸಂಬಂಧಪಟ್ಟಂತೆ ಹತ್ತು ಹಲವು ಪ್ರಶ್ನೆಗಳು ಏಳುತ್ತವೆ. ನಾನು ಇದನ್ನು ಹೇಗೆ ಬೆಳೆಸಿ ದೊಡ್ಡವನಾಗಿಸುವೆ? ಇದು ಯಾವಾಗ ಮಾತನಾಡಲು ಕಲಿಯುತ್ತದೆ? ಯಾವಾಗ ನಡೆಯುತ್ತದೆ? ಯಾವಾಗ ಇದು ನನ್ನ ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ? ಇತ್ಯಾದಿ.

ನಿಜ ಹೇಳಬೇಕೆಂದರೆ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದು ನಿಜಕ್ಕೂ ಒಂದು ಸವಾಲಿನ ಕೆಲಸವೇ ಸರಿ. ಅದು ಒಂದು ಜವಾಬ್ದಾರಿಯುತ ಕೆಲಸ. ಅದರ ದೈಹಿಕ ಹಾಗೂ ಮಾನಸಿಕ ಬೆಳಣಿಗೆಗಾಗಿ ಪ್ರೀತಿಯ ಪೋಷಣೆ ಅತ್ಯಗತ್ಯ. ನೀವು ಮಗುವಿನ ಯಾವುದೇ ಕೆಲಸ ಮಾಡಿದರೂ ಅದನ್ನು ಒಂದು ಡ್ಯೂಟಿ ಎಂಬಂತೆ ಮಾಡಬೇಡಿ. ಮಗುವನ್ನು ನಾನು ಅಪಾರವಾಗಿ ಪ್ರೀತಿಸುತ್ತೇನೆ, ಹಾಗಾಗಿ ಅದು ನನ್ನ ಪ್ರೀತಿಯ ಕೆಲಸ ಎಂದು ಭಾವಿಸಿ. ನಿಮ್ಮ ಈ ಭಾವನೆಯೇ ನಿಮ್ಮ ಮಗುವನ್ನು ಉತ್ತಮ ರೀತಿಯಲ್ಲಿ ಪೋಷಿಸಲು ಸಹಾಯವಾಗುತ್ತದೆ.

ಆಫೀಸೊಂದರಲ್ಲಿ ಕೆಲಸ ಮಾಡುವ ರಜನಿ ಹೀಗೆ ಹೇಳುತ್ತಾರೆ, “ನಾನು ಆಫೀಸಿನಿಂದ ಮನೆಗೆ ಬಂದಾಗ, ಮಗುವನ್ನು ನೋಡಿ ನನ್ನ ದಣಿವೆಲ್ಲ ಕ್ಷಣಾರ್ಧದಲ್ಲಿ ನಿವಾರಣೆ ಆಗಿಬಿಡುತ್ತದೆ. ನನ್ನ 3 ವರ್ಷದ ಮಗಳಲ್ಲಿ ನಾನು ಪ್ರತಿದಿನ ಏನಾದರೂ ಹೊಸತೊಂದನ್ನು ಕಾಣುತ್ತೇನೆ. ಅದರ ಗಮನ ಸೆಳೆಯುವ ರೀತಿ, ಮಾತನಾಡುವ ಪದ್ಧತಿ ಸ್ವಲ್ಪ ವಿಭಿನ್ನ ಎನಿಸುತ್ತದೆ.

”ಈ ಕುರಿತಂತೆ ಚೈಲ್ಡ್ ಸೈಕಾಲಜಿಸ್ಟ್ ಡಾ. ವಿನುತಾ ಹೀಗೆ ಹೇಳುತ್ತಾರೆ, “ಮಗುವೊಂದು 4 ವರ್ಷದ ತನಕ ತನ್ನ ಜೀವಿತಾವಧಿಯ ಶೇ.80ರಷ್ಟನ್ನು ಕಲಿತುಕೊಂಡುಬಿಡುತ್ತದೆ. ಉಳಿದ ಶೇ.20 ರಷ್ಟು ಮುಂದಿನ ದಿನಗಳಲ್ಲಿ ಕಲಿತುಕೊಳ್ಳುತ್ತದೆ. ಮಕ್ಕಳು ಒಂದು ರೀತಿಯಲ್ಲಿ ವಿಜ್ಞಾನಿಗಳ ಹಾಗೆ ಎಂದು ಹೇಳಿದ್ದರಲ್ಲಿ ತಪ್ಪೇನಿಲ್ಲ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಅವರಲ್ಲಿ ಮುಗ್ಧತೆ ಹಾಗೂ ಹೊಸದನ್ನು ಕಲಿಯಬೇಕೆಂಬ ತುಡಿತ ಗಮನಕ್ಕೆ ಬರುತ್ತದೆ. 1 ವರ್ಷಕ್ಕಿಂತ ಕಡಿಮೆ ಇರುವ ಮಗು ಪ್ರತಿಯೊಂದು ವಸ್ತುವನ್ನೂ ಬಾಯಿಗೆ ಹಾಕಿಕೊಳ್ಳುತ್ತದೆ. ಇದರ ಕಾರಣ ಇಷ್ಟೆ, ಆಗ ಮಗುವಿನ ರುಚಿಗ್ರಾಹ್ಯ ಅಂಗಗಳು ವಿಕಸಿತವಾಗುತ್ತಿರುತ್ತವೆ.

”ಮಗುವಿನ ಪೋಷಣೆಯ ಆನಂದ ಮಗು ತನ್ನ ಕಣ್ಣೆದುರೇ ಬೆಳೆಯುತ್ತಿರುವುದನ್ನು ನೋಡುವ ಅನುಭೂತಿ ವಿಭಿನ್ನವಾಗಿರುತ್ತದೆ. ಮೊದಲ ಬಾರಿ ನೀವು ಅದನ್ನು ನಿಮ್ಮ ಮಡಿಲಲ್ಲಿ ತೆಗೆದುಕೊಳ್ಳುತ್ತಿದ್ದರೆ, ಆಗ ನಿಮಗೆ ಇಡೀ ಜೀವನ ನಿಮ್ಮ ಮಡಿಲಲ್ಲಿರುವಂತೆ ಭಾಸವಾಗುತ್ತದೆ. ಹುಟ್ಟಿದಂದಿನಿಂದ ಹಿಡಿದು ದಿನದಿನ ನಿಮ್ಮ ಮಗುವಿನ ವರ್ತನೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಅದು ಬಹು ವೇಗದಲ್ಲಿ ಎಲ್ಲವನ್ನೂ ಕಲಿತುಕೊಳ್ಳುತ್ತದೆ.

ಮಗುವಿನ ಸಮರ್ಪಕ ಬೆಳಣಿಗೆಗೆ ಅವಶ್ಯಕವಾದುದೆಂದರೆ, ನೀವು ಅದರ ಪೋಷಣೆಯನ್ನು ಜವಾಬ್ದಾರಿಯಂತೆ ನೋಡದೆ, ಒಂದು ಸುಖಾನುಭವದ ರೀತಿಯಲ್ಲಿ ನೋಡುವಿಕೆ. ಮಗು ಅತ್ಯಂತ ಸೂಕ್ಷ್ಮ ಸ್ವಭಾವದ್ದಾಗಿರುತ್ತದೆ.  ಹೀಗಾಗಿ ಅದನ್ನು ಯಾವುದೇ ಕಾರಣಕ್ಕೂ ಗದರಿಸುವ ರೀತಿಯಲ್ಲಿ ಮಾತನಾಡಿಸಬೇಡಿ.

ಮಗುವಿನ ಬೆಳವಣಿಗೆಯಲ್ಲಿ ಸ್ಪರ್ಶ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಹೊರಗಿನಿಂದ ಮನೆಗೆ ಬರುತ್ತಿದ್ದಂತೆ ಅದನ್ನು ತಬ್ಬಿಕೊಳ್ಳಿ. ಮೃದುವಾಗಿ ಚುಂಬಿಸಿ ಅದರ ಬೆನ್ನ ಮೇಲೆ ಕೈಯಾಡಿಸುತ್ತಾ ನೀನು ನನಗೆ ಯಥೇಚ್ಛ ಪ್ರೀತಿ ಕೊಟ್ಟವಳು, ನಿನ್ನ ಪ್ರೀತಿಯ ಧಾರೆ ನನಗೆ ಹೀಗೆಯೇ ದೊರೆಯುತ್ತಿರಲಿ ಎಂದು ಹೇಳಿ. ಆ ಪುಟ್ಟ ಕಂದ ನಿಮ್ಮ ಮಾತಿಗೆ ಪ್ರತಿಕ್ರಿಯೆ ಕೊಡದಿರಬಹುದು. ಆದರೆ ತನ್ನ ಪುಟ್ಟ ಬೆರಳುಗಳಿಂದ ಆಟ ಆಡುತ್ತಾ ನಿಮ್ಮ ಮೈಮನಕ್ಕೆ ಖುಷಿಯನ್ನಂತೂ ಕೊಡುತ್ತದೆ. ತನ್ನದೇ ಆದ ತೊದಲು ಭಾಷೆಯಲ್ಲಿ ಮಗು ಏನನ್ನೋ ಹೇಳುತ್ತಿರುವುದು ನಿಮ್ಮನ್ನು ಖುಷಿಯ ಅಲೆಯಲ್ಲಿ ತೇಲಿಸುತ್ತದೆ. ಮಗುವಿನ ಜೊತೆ ಆಗಾಗ ಮಾತನಾಡುತ್ತಲೇ ಇರಿ. ನೀವೆಷ್ಟು ಮಾತನಾಡುತ್ತೀರೋ, ಮಗು ಅಷ್ಟೇ ಬೇಗನೆ ಮಾತನಾಡಲು ಕಲಿಯುತ್ತದೆ.

ಪ್ರತಿದಿನ ಬೆಳೆಯುವ ಮಗು ಹುಟ್ಟಿದಂದಿನಿಂದ ಹಿಡಿದು 5 ವರ್ಷದ ತನಕ ಬಹಳ ವೇಗದಲ್ಲಿ ಬೆಳೆಯುತ್ತಿರುತ್ತದೆ. ಇದು ಅದರ ಕಲಿಯುವ, ತಿಳಿಯುವ ಕಾಲ ಹೌದು. ಈ ಹಂತದಲ್ಲಿ ಅದು ಕುಳಿತುಕೊಳ್ಳುವುದು, ನಡೆಯುವುದು, ಏಳುವುದು, ಮಾತನಾಡುವುದು ಹಾಗೂ ಇತರರೊಂದಿಗೆ ಸ್ನೇಹ ಮಾಡುವುದನ್ನು ಕಲಿಯುತ್ತದೆ. ಈ ಹಂತದಲ್ಲಿ ಮಗುವಿನಲ್ಲಿ ಪ್ರತಿ ದಿನ ಬದಲಾವಣೆ ಆಗುತ್ತಿರುತ್ತದೆ.

ಐದನೇ ವರ್ಷದ ಆಸುಪಾಸಿನಲ್ಲಿ ಮಕ್ಕಳಿಗೆ ತಿಳಿಯುವ, ಕಲಿಯುವ ಆಸಕ್ತಿ ಹೆಚ್ಚಾಗಿರುತ್ತದೆ. ಈ ಹಂತದಲ್ಲಿ ತಂದೆತಾಯಿಯರು ಮಕ್ಕಳ ಜಿಜ್ಞಾಸೆ ನಿವಾರಿಸಲು ಪ್ರಯತ್ನ ಮಾಡಬೇಕು. ಮಗುವಿನಿಂದ ನೀವು ಯಾವ ರೀತಿಯ ವರ್ತನೆ ಅಪೇಕ್ಷಿಸುತ್ತೀರೊ, ಅದೇ ರೀತಿಯ ವರ್ತನೆ ನಿಮ್ಮಿಂದ ಬಿಂಬಿತವಾಗಬೇಕು.

ಮಗು ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಿದ್ದರೆ, ನೀವು ಕೂಡ ಅದಕ್ಕೆ ಮತ್ತಷ್ಟು ಪ್ರೇರಣೆ ದೊರೆಯುವಂತೆ ವರ್ತಿಸಬೇಕು. ಎಂದೂ ಮಗುವಿನ ಮುಂದೆ ಕಿರುಚುವ ರೀತಿಯಲ್ಲಿ ಮಾತನಾಡಬೇಡಿ ಹಾಗೂ ಅಪಶಬ್ದಗಳನ್ನು ಬಳಸಬೇಡಿ. ಒಂದು ವಾಸ್ತವ ಸಂಗತಿ ಎಂದರೆ, ಮಗು ಹಸಿ ಮಣ್ಣಿನ ರೀತಿ ಇರುತ್ತದೆ. ಅದಕ್ಕೆ ಉತ್ತಮ ಸಂಸ್ಕಾರ ಕೊಡುವುದು ನಿಮ್ಮ ಕರ್ತವ್ಯ. ಅದರ ಊಟತಿಂಡಿಯ ಅಭ್ಯಾಸದಿಂದ ಹಿಡಿದು, ಬೇರೆಯವರ ಜೊತೆ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ಅದನ್ನು ತಿದ್ದಿ ತೀಡುವುದೂ ನಿಮ್ಮದೇ ಜವಾಬ್ದಾರಿ.

ಆಹಾರ ಸಂಬಂಧಿ ಅಭ್ಯಾಸಗಳು

ಮಗುವಿಗೆ ಹಾಲಿನ ಹೊರತಾಗಿ ಎಲ್ಲ ಬಗೆಯ ಆಹಾರ ಅಭ್ಯಾಸಗಳನ್ನು ರೂಢಿಸುವುದು ಅಗತ್ಯ. ಮಗುವಿಗೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಮನೆಯಲ್ಲಿ ತಯಾರಿಸುವ ಎಲ್ಲ ಬಗೆಯ ಪದಾರ್ಥಗಳನ್ನೂ ತಿನ್ನಿಸುತ್ತ ಹೋಗಿ. ಇದು ಮನೆಯ ತಿಂಡಿಗಳನ್ನು ತಿನ್ನಲು ರೂಢಿಸುತ್ತದೆ.

ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳು ಮಗುವಿನ ದೈಹಿಕ, ಮಾನಸಿಕ ಪೋಷಣೆಗೆ ಅಗತ್ಯ. ಮಾರುಕಟ್ಟೆಯಲ್ಲಿ ದೊರೆಯುವ ಹುರಿದ, ಕರಿದ ಪದಾರ್ಥಗಳನ್ನು ತಿನ್ನಿಸುವ ಅಭ್ಯಾಸ ಮಾಡಿಸಬೇಡಿ. ಒಂದು ಸಲ ಇಂತಹ ಪದಾರ್ಥಗಳ ಅಭ್ಯಾಸ ಅಂಟಿಕೊಂಡರೆ ಆಮೇಲೆ ಅದನ್ನು ಬಿಡಿಸುವುದು ಕಷ್ಟವಾಗುತ್ತದೆ.

ಸುರಕ್ಷಿತ ವಾತಾವರಣ

ಮಗುವಿನ ಸಮಗ್ರ ಬೆಳವಣಿಗೆಗೆ ಮನೆಯ ವಾತಾವರಣ ಸುರಕ್ಷಿತವಾಗಿರುವುದು ಅತ್ಯಗತ್ಯ. ಮಗು ಚಿಕ್ಕದಿರುವಾಗ ನಿಮ್ಮ ಮನೆಯಲ್ಲಿ ಪೀಠೋಪಕರಣಗಳು ಅತಿ ಎತ್ತರವಾಗಿ ಹಾಗೂ ಅವುಗಳ ಅಂಚು ಮೊನಚಾಗಿಯೂ ಇರಬಾರದು. ಸಾಮಾನ್ಯವಾಗಿ ಮಕ್ಕಳು ಮಂಚದಿಂದ ಬೀಳುತ್ತಾರೆ. ಅದರಿಂದಾಗಿ ಅವರಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ತಲೆಗೆ ಏನಾದರೂ ಏಟು ತಗುಲಿದ್ದರೆ ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಿ. ಮಕ್ಕಳು ಗಾಬರಿಯಿಂದ ಮಾತನಾಡದೆ ಇದ್ದಾಗ ತಬ್ಬಿಕೊಂಡು ಸುರಕ್ಷತೆಯ ಅನುಭವ ಕೊಡಿ.

ಮಗುವನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು ಹೋಗುವ ಪ್ರಯತ್ನ ಮಾಡಬೇಡಿ. ಮನೆಯ ವಿದ್ಯುತ್‌ ಪ್ಲಗ್‌ ಮುಂತಾದವುಗಳಿಗೆ ಟೇಪ್‌ ಅಂಟಿಸಿ. ಏಕೆಂದರೆ ಮಗು ಅದರಲ್ಲಿ ಬೆರಳು ತೂರಿಸುವ ಸಾಧ್ಯತೆ ಇರುತ್ತದೆ. ಮೊಬೈಲ್ ಚಾರ್ಜರ್‌ ಪ್ಲಗ್‌ನಲ್ಲಿ ಹಾಗೆಯೇ ಬಿಟ್ಟುಬಿಡಬೇಡಿ. ಅವನ್ನು ಮಕ್ಕಳು ಬಾಯಿಗೆ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಅಡುಗೆಮನೆಯಲ್ಲಿ ಚಾಕು, ಕತ್ತರಿ ಮುಂತಾದವನ್ನು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ. ಗ್ಯಾಸ್‌ನ್ನು ಬಳಸಿದ ಬಳಿಕ ಆಫ್‌ ಮಾಡಲು ಮರೆಯಬೇಡಿ.

ಆಟಿಕೆಗಳು ಮತ್ತು ಸ್ನೇಹಿತರು

ಮಗು 1 ವರ್ಷಕ್ಕಿಂತ ಕಡಿಮೆ ಇದ್ದರೆ ಆಟಿಕೆಗಳನ್ನು ಬಾಯಿಗೆ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಳ್ಳೆಯ ಗುಣಮಟ್ಟದ ಆಟಿಕೆಗಳನ್ನು ತಂದುಕೊಡಿ. ನಿಮಗೆ ಸಮಯ ಸಿಕ್ಕಾಗ ಮಗುವನ್ನು ಪಾರ್ಕಿಗೆ ಕರೆದುಕೊಂಡುಹೋಗಿ. ಅಲ್ಲಿ ಅದು ತನ್ನ ಇಷ್ಟದಂತೆ ಆಟ ಆಡಲು ಅವಕಾಶ ಕೊಡಿ. ಮುಕ್ತ ವಾತಾವರಣದಲ್ಲಿ ಆಟ ಆಡುವುದರಿಂದ ಮಗುವಿನ ದೈಹಿಕ ಮಾನಸಿಕ ಬೆಳಣಿಗೆಗೆ ಸಹಾಯವಾಗುತ್ತದೆ. ಅದೇ ರೀತಿ ಮಗುವಿಗೆ ತನ್ನ ಸಮವಯಸ್ಕ ಮಕ್ಕಳ ಜೊತೆ ಆಟ ಆಡಲು ಅವಕಾಶ ಕೊಡಿ. ಇದರಿಂದ ಮಗು ಇತರರ ಜೊತೆ ಬೆರೆಯಲು ಕಲಿತುಕೊಳ್ಳುತ್ತದೆ.

– ಟಿ. ರಾಜಲಕ್ಷ್ಮಿ

ಈ ಕಡೆ ಗಮನ ಕೊಡಿ

ಮಗುವಿನ ಸಮರ್ಪಕ ದೈಹಿಕ, ಮಾನಸಿಕ ಬೆಳವಣಿಗೆ ಈ ಸಲಹೆಗಳತ್ತ ಗಮನಹರಿಸಿ :

– ಮಗುವಿಗೆ ಸದಾ ಪೌಷ್ಟಿಕ ಆಹಾರವನ್ನೇ ಸೇವಿಸಲು ಕೊಡಿ. ಅದರ ಆಹಾರದಲ್ಲಿ ಋತುಮಾನದ ಹಣ್ಣು ಹಾಗೂ ಹಸಿರು   ತರಕಾರಿಗಳನ್ನು ಅಗತ್ಯವಾಗಿ ಸೇರಿಸಿ. ಜೊತೆಗೆ ಹಾಲು, ಮೊಸರು, ಪನೀರ್‌ ಇತ್ಯಾದಿ ಸಹ ಕೊಡುತ್ತಿರಿ.

– ನಿಮ್ಮ ಸ್ಪರ್ಶದಿಂದ ಅದಕ್ಕೆ ನೀವು ಎಷ್ಟು ಪ್ರೀತಿಸುತ್ತೀರಿ ಎಂಬುದರ ಮನವರಿಕೆ ಮಾಡಿಕೊಡಿ.

– ಮಗು ಮಲಗಿದ್ದಾಗ ಪರಿಪೂರ್ಣ ನಿದ್ದೆ ಪಡೆದಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ.

– ಮಗುವಿಗೆ ನೀವು ಬಾಟಲಿನಿಂದ ಹಾಲು ಕುಡಿಸುವುದಾದರೆ, ಖಾಲಿ ಬಾಟಲನ್ನು ಕುದಿವ ನೀರಿಗೆ ಹಾಕಿ ಸ್ಟೆರಿಲೈಸ್‌ ಮಾಡಿ. ಬಾಟಲನ್ನು ಚೆನ್ನಾಗಿ ಶುದ್ಧಿ ಮಾಡಿದ ನಂತರವೇ ಅದರಲ್ಲಿ ಕಾದಾರಿದ ಹಾಲು ತುಂಬಿಸಿ ಮಗುವಿಗೆ ಕುಡಿಸಬೇಕು.

– ಮಗುವಿನ ಬಳಿ ಚೂಪಾದ, ಹಾನಿ ಉಂಟುಮಾಡುವ ಯಾವ ವಸ್ತುಗಳನ್ನೂ ಇರಿಸಲೇಬೇಡಿ.

– ಬೆಳೆಯುವ ಮಗು ತನ್ನ ಸಮವಯಸ್ಕ ಮಕ್ಕಳೊಂದಿಗೆ ಆಟವಾಡಿಕೊಳ್ಳಲು ಅವಕಾಶ ಕಲ್ಪಿಸಿ.

– ಮಗುವಿಗೆ ಯಾವಾಗಲೂ ಶುಭ್ರ ಕಾಟನ್‌ ಬಟ್ಟೆಗಳನ್ನೇ ತೊಡಿಸಬೇಕು.

– ಮಗುವಿನ ನ್ಯಾಪಿಗಳನ್ನು ಡೆಟಾಲ್‌ ಬೆರೆಸಿದ ನೀರಿನಲ್ಲಿ ಜಾಲಾಡಿಸಿ ಒಣಗಿಸಿ.

– ಮಗುವಿಗೆ ಸದಾ ಅತ್ಯುತ್ತಮ ಬೇಬಿ ಪ್ರಾಡಕ್ಟ್ಸ್ ಬಳಸಬೇಕು. ಅದು ಕ್ರೀಂ, ಮಸಾಜ್‌ ಆಯಿಲ್‌, ಶ್ಯಾಂಪೂ, ಸೋಪ್‌, ಪೌಡರ್‌ ಏನೇ ಇರಲಿ.

– ಅವಕಾಶ ಸಿಕ್ಕಿದಾಗೆಲ್ಲ ಮಗುವನ್ನು ಹೊರಗಿನ ಗಾಳಿ, ಬಿಸಿಲಿಗೆ ಕರೆದೊಯ್ಯಿರಿ.

– ಮಗುವಿನೊಂದಿಗೆ ಸದಾ ಮುದ್ದು ಮಾತುಗಳನ್ನಾಡಿ. ಅದನ್ನು ನೀವೆಷ್ಟು ಪ್ರೀತಿಸುತ್ತೀರಿ ಎಂದು ಆಗಾಗ ಹೇಳುತ್ತಿರಿ.

– ಯಾರ ಬಳಿ ಮಗುವಿಗೆ ಹಿತಕರ ಅನಿಸುವುದಿಲ್ಲವೋ ಅಂಥವರ ಬಳಿ ಬಲವಂತವಾಗಿ ಅದನ್ನು ಇರಗೊಡಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ