ಕಥೆ – ಕೌಸಲ್ಯಾ ಎಸ್‌. ರಾವ್

ರಾಧಿಕಾ ಆಫೀಸಿನಿಂದ ಹಿಂದಿರುಗುತ್ತಿದ್ದಳು. ಬಸ್ಸಿನ ವೇಗದೊಂದಿಗೆ ಅವಳ ಆಲೋಚನೆಗಳೂ ಅನಿಯಂತ್ರಿತ ವೇಗದಲ್ಲಿ ಓಡುತ್ತಿದ್ದವು. ಅಂದು ಅವಳಿಗೆ ಪ್ರಮೋಶನ್‌ ಲೆಟರ್‌ ಸಿಕ್ಕಿತ್ತು. ನಾಲ್ವರನ್ನು ಸೂಪರ್‌ಸೀಡ್‌ ಮಾಡಿ ಅವಳಿಗೆ ಬ್ರಾಂಚ್ ಮ್ಯಾನೇಜರ್‌ ಎಂದು ಪ್ರಮೋಶನ್‌ ಸಿಕ್ಕಿತ್ತು.  ಅವಳಿಗೆ ಯಶಸ್ಸು ಸಿಗುವ ಭರವಸೆ ಇತ್ತು. ಆದರೆ ಕೊಂಚ  ಅನುಮಾನವಿತ್ತು. ಏಕೆಂದರೆ ಅವಳಿಗಿಂತ ಸೀನಿಯರ್‌ ಆಗಿದ್ದ ನಾಲ್ವರು ಆ ಪದವಿಯ ಆಕಾಂಕ್ಷಿಗಳಾಗಿದ್ದರು. ಅವರೆಲ್ಲರನ್ನೂ ಸೂಪರ್‌ಸೀಡ್‌ ಮಾಡಿ ಈ ಪೋಸ್ಟ್ ಪಡೆಯುವುದು ದೊಡ್ಡ ಸ್ಥಾನ ಪಡೆದಂತಾಗಿತ್ತು. ಅವಳ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿ ಸ್ವೀಟ್‌ ಕೇಳಿದ್ದರು. ಅವಳು ಅಟೆಂಡರ್‌ನ್ನು ಕರೆದು ಸ್ವೀಟ್‌ ತರಿಸಿ  ಎಲ್ಲರ ಬಾಯಿ ಸಿಹಿ ಮಾಡಿಸಿದ್ದಳು. ಈ ಸಿಹಿಸುದ್ದಿಯನ್ನು ಎಲ್ಲರಿಗಿಂತ ಮುಂಚೆ ರಾಘವನಿಗೆ ಹೇಳಲು ಇಚ್ಛಿಸಿದ್ದಳು. ಫೋನ್‌ ಮಾಡಿ ತಿಳಿಸಿದರೆ ಅವರ ಪ್ರತಿಕ್ರಿಯೆ ನೋಡಿದಂತಾಗುವುದಿಲ್ಲ. ಅವಳು ಬಹಳ ಶ್ರಮವಹಿಸಿ ದುಡಿಯುತ್ತಿದ್ದಳು. ಮನೆಯಲ್ಲಿ ಆಫೀಸಿನಲ್ಲಿ ಯಾವಾಗಲೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಳು. ಒಬ್ಬನೇ ಮಗನ ಹೆಂಡತಿಯಾದುದರಿಂದ ಅತ್ತೆಮಾವನಿಗೆ ಅಚ್ಚುಮೆಚ್ಚಾಗಿದ್ದರೂ ಕರ್ತವ್ಯಗಳ ಅನೇಕಾನೇಕ ಎಳೆಗಳು ಅವಳನ್ನು ಸುತ್ತಿಕೊಳ್ಳಲು ಕಾತರದಿಂದಿದ್ದವು. ಮದುವೆಗೆ ಮುಂಚೆ ಅತ್ತೆ ಅವಳನ್ನು ಕೇಳಿದ್ದರು. “ಒಂದುವೇಳೆ ನಿನಗೆ ಉದ್ಯೋಗ ಅಥವಾ ಫ್ಯಾಮಿಲಿ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಲು ಬಿಟ್ಟರೆ ಯಾವುದಕ್ಕೆ ಮಹತ್ವ ಕೊಡುತ್ತೀಯಾ?”

“ಫ್ಯಾಮಿಲಿಗೆ,” ಅಮ್ಮ ಹೇಳಿಕೊಟ್ಟಿದ್ದ ಉತ್ತರ ಥಟ್ಟನೆ ಅವಳ ಬಾಯಿಂದ ಬಂದಿತ್ತು. ಅವಳು ಏನಾದರೂ ಪೆದ್ದು ಪೆದ್ದಾಗಿ ಮಾತಾಡಿ ಅಷ್ಟು ಒಳ್ಳೆಯ ಸಂಬಂಧ ಕೈ ಜಾರಿ ಹೋಗಬಾರದೆಂದು ಅಮ್ಮ ಎಚ್ಚರಿಸಿದ್ದರು.

ರಾಧಾಳ ಅಪ್ಪ ಅಮ್ಮನಿಗೂ ರಾಘವ್ ಬಹಳ ಇಷ್ಟವಾಗಿದ್ದರು. ಅವರ ಸ್ವಭಾವ, ನಡೆನುಡಿ, ಶಿಕ್ಷಣ, ಉನ್ನತ ಹುದ್ದೆ, ಒಳ್ಳೆಯ ವ್ಯಕ್ತಿತ್ವ ಎಲ್ಲರಿಗೂ ಹಿಡಿಸಿತ್ತು. ರಾಘವ್ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿದ್ದರು. ಅವಳು ಬ್ಯಾಂಕ್‌ನಲ್ಲಿ ಪ್ರೊಬೇಶನಲ್ ಆಫೀಸರ್‌ ಆಗಿದ್ದಳು. ಅವಳು ಎಂಥದೇ ಪರಿಸ್ಥಿತಿಯಲ್ಲೂ ಕೆಲಸ ಬಿಡಲು ಸಿದ್ಧಳಿರಲಿಲ್ಲ. ಆದರೆ ಅತ್ತೆಯಂತೂ ಅತ್ತೆಯೇ, ಒಬ್ಬ ಹುಡುಗಿಗೆ ಅವಳ ಮಹತ್ವಾಕಾಂಕ್ಷೆಗಿಂತಾ ಹೆಚ್ಚಾಗಿ ಅವಳ ಮನೆ, ಕುಟುಂಬ ಮುಖ್ಯ. ನಾವೆಷ್ಟು ಆಧುನಿಕರಾಗಿದ್ದರೂ ಮಾನಸಿಕತೆ ಬದಲಾಗುವುದಿಲ್ಲ. ಮಹಿಳೆ ಪುರುಷನಿಗಿಂತ ಹೆಚ್ಚು ಸಂಪಾದಿಸುತ್ತಿದ್ದರೂ ಅವಳ ಕೈ ಮತ್ತು ತಲೆ ಸದಾ ಕೆಳಗೇ ಇರಬೇಕು. ಈ ವಿಶೇಷತೆ ಮತ್ತು ನಮ್ರತೆಯ ಬಲದಿಂದಲೇ ಒಬ್ಬ ಸ್ತ್ರೀ ಎಲ್ಲರ ಹೃದಯಗಳನ್ನು ಆಳುವಲ್ಲಿ ಸಮರ್ಥಳಾಗುತ್ತಾಳೆ. ಇದೇ ಮಾನಸಿಕತೆ ಆಧಾರದಲ್ಲಿ ಚೆನ್ನಾಗಿ ಆಲೋಚಿಸಿ ಉತ್ತರಿಸಲು ರಾಧಿಕಾಳ ಅಮ್ಮ ತಿಳಿಸಿ ಹೇಳಿದ್ದರು. ರಾಧಿಕಾ ಹಾಗೇ ಉತ್ತರಿಸಿದ್ದಳು.

ಅತ್ತೆಗೆ ರಾಧಿಕಾಳ ಉತ್ತರದಿಂದ ಬಹಳ ಸಂತೋಷವಾಗಿತ್ತು.  ಅವರು ಅವಳನ್ನು ಸೊಸೆ ಮಾಡಿಕೊಳ್ಳಲು ತೀರ್ಮಾನಿಸಿದರು. ಮದುವೆಯ ನಂತರ ನಿಧಾನವಾಗಿ ಅವಳಿಗೂ ತನ್ನ ಕೆರಿಯರ್‌ಗಿಂತ ಮನೆ ಹಾಗೂ ಕುಟುಂಬವೇ ಮುಖ್ಯವಾಯಿತು. ಏಕೆಂದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇದ್ದರೆ ಆಫೀಸಿನಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಬಹುದೆಂದು ಅವಳು ತಿಳಿದಿದ್ದಳು.

ಅವರ ಅತ್ತೆಮನೆ ಒಟ್ಟು ಕುಟುಂಬವಾಗಿದ್ದು 4 ಬೆಡ್‌ರೂಮ್ ಗಳ ದೊಡ್ಡ ಮನೆ ಇತ್ತು. ಅವಳ  ಮದುವೆಯಾದ 2 ತಿಂಗಳಿಗೇ ಮಾವ ರಿಟೈರ್‌ ಆದರು. ನಾದಿನಿ ರಮಾಳ ಮದುವೆಯಾಗಿತ್ತು. ಅದೇ ಊರಿನಲ್ಲಿ ಇದ್ದುದರಿಂದ ಅವಳು ಬಂದು ಹೋಗುವುದೂ ನಡೆದಿತ್ತು. ಮದುವೆಯ ನಂತರ  ಎಲ್ಲ ಜವಾಬ್ದಾರಿಗಳನ್ನು ಅತ್ತೆ ಸೊಸೆಗೆ ವಹಿಸಿದರು. ಇದರಿಂದ ಒಂದು ಕಡೆ ಖುಶಿಯಾದರೂ ಒಮ್ಮೊಮ್ಮೆ ಬೇಸರ ಆಗುತ್ತಿತ್ತು. ಏಕೆಂದರೆ ಬೆಳಗಿನಿಂದ ಹಿಡಿದು ತಡರಾತ್ರಿಯವರೆಗೆ ಅವಳು ಅಡುಗೆಮನೆಯಲ್ಲಿಯೇ ಇರಬೇಕಾಗುತ್ತಿತ್ತು. ಹಾಗೆ ನೋಡಿದರೆ ಅಡುಗೆ ಮಾಡಲು ಒಬ್ಬಾಕೆ ಇದ್ದಳು. ಆದರೆ ಅವಳಿಗೆ ಗೈಡ್‌ ಮಾಡಲು ಸೂಪರ್‌ವೈಸ್‌ ಮಾಡಲು ಮನೆಯವರೆಲ್ಲರ ಇಚ್ಛೆಗೆ ತಕ್ಕಂತೆ ಅಡುಗೆ ಮಾಡಿಸಿ ಸರ್ವ್‌ ಮಾಡುವುದು ರಾಧಿಕಾಳ ಕೆಲಸವಾಗಿತ್ತು. ಬೆಳಗ್ಗೆ ಎಲ್ಲರಿಗೂ ಕಾಫಿ ಮಾಡಿಕೊಟ್ಟು ರಾತ್ರಿ ಎಲ್ಲರಿಗೂ ಬಿಸಿಹಾಲು ಕುಡಿಯಲು ಕೊಡುವುದು ಅವಳದೇ ಕೆಲಸವಾಗಿತ್ತು. ಅದು ಅವರವರ ಸಮಯಕ್ಕೆ ತಕ್ಕಂತೆ, ಮದುವೆಗೆ ಮೊದಲು ಅವಳು ತಾನಾಗಿ ಒಂದು ಲೋಟ ನೀರು ತೆಗೆದುಕೊಂಡು ಕುಡಿದಿರಲಿಲ್ಲ. ಬರೀ ಓದುವುದೇ ಅವಳ ಉದ್ದೇಶವಾಗಿತ್ತು. ಈಗ ಎರಡೆರಡು ಜವಾಬ್ದಾರಿಗಳನ್ನು ನಿಭಾಯಿಸುವುದು ಜೊತೆಗೆ ಎಲ್ಲರನ್ನೂ ಖುಷಿಯಾಗಿಡುವುದು ಯಾವುದೇ ಸವಾಲಿಗೆ ಕಡಿಮೆ ಇರಲಿಲ್ಲ. ಆದರೆ ಎಲ್ಲಿ ಇಚ್ಛೆ ಇದೆಯೋ ಅಲ್ಲಿ ದಾರಿ ಸಿಕ್ಕೇ ಸಿಗುತ್ತದೆ.

ರಾಧಿಕಾ ಗರ್ಭಿಣಿಯಾದಾಗ ಮನೆಯಲ್ಲಿ ಖುಶಿಯ ವಾತಾವರಣ ಮೂಡಿತು. ಅತ್ತೆ ಅವಳ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಂಡರು. ಈಗ ಊಟ ತಿಂಡಿಗಳನ್ನು ಮಾಡಿಸುವ ಹೊಣೆ ಅವರದ್ದು. ಅಂದು ಭಾನುವಾರ. ಸಂಜೆ ಎಲ್ಲರೂ ಕೂತು ಕಾಫಿ ಕುಡಿಯುತ್ತಿದ್ದರು. ಇದ್ದಕ್ಕಿದ್ದಂತೆ ಮಾವ ಎದೆ ನೋವೆಂದು ಹೇಳಿದರು. ರಾಘವ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದ. ಆದರೆ ಅವರು ಉಳಿಯಲಿಲ್ಲ. ಇದ್ದಕ್ಕಿದ್ದಂತೆ ನಡೆದ ಈ ದುರ್ಘಟನೆಯನ್ನು ಅತ್ತೆ ಸಹಿಸಿಕೊಳ್ಳಲಿಲ್ಲ. ಪದೇ ಪದೇ ಮೂರ್ಛಿತರಾದರು. ವೈದ್ಯರು ಅವರಿಗೆ ನಿದ್ದೆ ಮಾತ್ರೆಗಳನ್ನು ಕೊಟ್ಟರು. ನಂತರದ ಶಾಸ್ತ್ರಗಳಲ್ಲಿ ಅತ್ತೆ ಎದುರಿಗೆ ಇದ್ದೂ ಇಲ್ಲದಂತಿದ್ದರು. ಎಷ್ಟಾದರೂ 34 ವರ್ಷಗಳ ಸಾಂಗತ್ಯ. ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ. ಮನೆಯಲ್ಲಿ ಎಲ್ಲ ಅಸ್ತವ್ಯಸ್ತವಾಗಿತ್ತು. ಒಮ್ಮೊಮ್ಮೆ ಉದ್ಯೋಗಕ್ಕೆ ರಾಜೀನಾಮೆ ಕೊಡಬೇಕೆಂದು ರಾಧಿಕಾ ಯೋಚಿಸುತ್ತಿದ್ದಳು. ಆದರೆ ಸ್ವಲ್ಪ ಹೊತ್ತಿನಲ್ಲೇ ಇಂತಹ ತೊಂದರೆಗಳು ಎಲ್ಲರ ಬದುಕಿನಲ್ಲಿ ಬರುತ್ತವೆ. ಅದರಿಂದ ಪಲಾಯನ ಮಾಡುವುದು ಸರಿಯಲ್ಲ. ನೌಕರಿ ಬಿಡಬಾರದು ಎಂದು ತೀರ್ಮಾನಿಸಿದಳು.

ದಿನ ಕಳೆದಂತೆ ರಾಧಿಕಾಗೆ ಮಗಳು ಹುಟ್ಟಿದಳು. ಅವಳಿಗೆ ಕವಿತಾ ಎಂದು ಹೆಸರಿಡಲಾಯಿತು. ರಾಧಿಕಾ 6 ತಿಂಗಳು ಹೆರಿಗೆ ರಜಾ ಪಡೆದಳು. ನಂತರ ಆಫೀಸಿಗೆ ಹೊರಟಾಗ ಅತ್ತೆ ಗೊಣಗತೊಡಗಿದರು. ಅದೇನು ಮಗೂನೋ ಸದಾ ಅಳ್ತಿರ್ತಾಳೆ. ಇದೇನು ಬದುಕು ನಮ್ಮದು? ನಮ್ಮ ಮಕ್ಕಳನ್ನು ನೋಡಿಕೊಂಡಾಯ್ತು, ಈಗ ಮೊಮ್ಮಗಳನ್ನು ನೋಡಿಕೊಳ್ಳಬೇಕಾಗಿದೆ. ಇದೆಲ್ಲನ್ನೂ ಕೇಳಿ ರಾಧಿಕಾಗೆ ಬೇಸರವಾದರೂ ಅತ್ತೆ ಇನ್ನೂ ತಮ್ಮ ದುಃಖದಿಂದ ಹೊರಬಂದಿಲ್ಲವೆಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಳು. ಆಫೀಸ್‌ ತಲುಪಲು ಕೊಂಚ ತಡವಾದರೂ ಸಹೋದ್ಯೋಗಿಗಳು ಈ ಹೆಂಗಸರು ಕೆಲಸ ಮಾಡೋಕೆ ಆಫೀಸಿಗೆ ಬರಲ್ಲ, ಮೋಜು ಉಡಾಯಿಸಲು ಬರ್ತಾರೆ  ಎಂದು ವ್ಯಂಗ್ಯವಾಡುತ್ತಿದ್ದರು. ನಿಧಾನವಾಗಿ ಸಮಯ ಕಳೆಯಿತು. ಕವಿತಾ ಸ್ಕೂಲ್‌ಗೆ ಹೋಗಲಾರಂಭಿಸಿದಳು. ಅತ್ತೆಯು ತಮ್ಮನ್ನು ಸಂಭಾಳಿಸಿಕೊಂಡರು. ಕವಿತಾ ಶಾಲೆಯಿಂದ ಬಂದ ನಂತರ ಅವಳಿಗೆ ಹಾಲು, ತಿಂಡಿ ಕೊಟ್ಟು ಅವಳೊಂದಿಗೆ ಹೊರಗೆ ಹೋಗಲಾರಂಭಿಸಿದರು.

ಮನೆಯ ವಾತಾರಣ ಮಾಮೂಲಿಯಾಗಿ, ಕವಿತಾಗೆ ಕೊಂಚ ತಿಳಿವಳಿಕೆ ಬಂದಾಗ ಅವಳ ಕಂಪನಿಗೆ ಇನ್ನೊಂದು ಮಗುವನ್ನು ಪಡೆಯಬೇಕೆಂದು ರಾಘವ್ ಗೆ ಅನ್ನಿಸಿತು. ರಾಧಿಕಾಗೂ ಮನಸ್ಸಾದರೂ ಮೊದಲಿದ್ದ ತೊಂದರೆ ಹಾಗೂ ಅಸ್ತವ್ಯಸ್ತ ಬದುಕನ್ನು ನೆನೆಸಿಕೊಂಡು ಅಷ್ಟು ದೊಡ್ಡ ತೀರ್ಮಾನ ಕೈಗೊಳ್ಳಲು ಹಿಂಜರಿಯುತ್ತಿದ್ದಳು. ಆದರೂ ಮುಂದೆ ದಿನಗಳು ಉರುಳುತ್ತಿದ್ದಂತೆ ತೊಂದರೆಗಳು ಇನ್ನಷ್ಟು ಹೆಚ್ಚುತ್ತವೆ. ಹೀಗೆಂದು ಈಗಲೇ ಮಗು ಪಡೆಯುವುದು ಉಚಿತವೆಂದುಕೊಂಡಳು. ಅವಳು ಗರ್ಭ ಧರಿಸಿದ ಸುದ್ಧಿ ತಿಳಿದು ಅತ್ತೆ ಉಬ್ಬಿಹೋದರು. “ರಾಧಿಕಾ, ಈ ಬಾರಿ ಗಂಡು ಮಗುವನ್ನು ಹಡೆಯಬೇಕು,” ಎಂದರು.

ಅಮ್ಮಾ, ಅದು ನನ್ನ ಕೈಯಲ್ಲಿಲ್ಲ ಎಂದು ಹೇಳಬೇಕೆಂದುಕೊಂಡರೂ ಸಾಧ್ಯವಾಗಲಿಲ್ಲ. ಎಷ್ಟೇ ಸುಶಿಕ್ಷಿತರಾದರೂ, ಆಧುನಿಕರೆಂದು ಹೇಳಿಕೊಂಡರೂ ಹುಡುಗ, ಹುಡುಗಿಯರಲ್ಲಿ ಇನ್ನೂ ವ್ಯತ್ಯಾಸ ಇದ್ದೇ ಇದೆ ಎಂದುಕೊಂಡಳು. ಈ ಬಾರಿ ಅವಳಿಗೆ ಮಗನೇ ಹುಟ್ಟಿದ. ಆದರೆ ಹಿಂದಿನಂತೆ ಈ ಬಾರಿಯೂ ಅಡಚಣೆಗಳಾದವು. ಆದರೆ ರಾಧಿಕಾ ತನ್ನ ಗುರಿಯಲ್ಲಿ ಅಚಲಳಾಗಿದ್ದಳು. ತನ್ನ ಕೆಲಸ ಹಾಗೂ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆನೆಂದು ತೀರ್ಮಾನಿಸಿದ್ದಳು. ಅವಳ ಏಕಾಗ್ರತೆ ಹಾಗೂ ಯಶಸ್ಸಿಗೆ ಇದೇ ಮೂಲಮಂತ್ರವಾಗಿತ್ತು.

ಸರ್ಕಲ್ ನಲ್ಲಿ ಕೆಂಪು ದೀಪ ನೋಡಿದ ಕೂಡಲೇ ಅವಳ ವಿಚಾರಗಳಿಗೆ ಬ್ರೇಕ್‌ ಬಿತ್ತು. ಅಲ್ಲಿಂದ ಮನೆ ತಲುಪಲು 10 ನಿಮಿಷ. 4 ಜನರನ್ನು ಸೂಪರ್‌ಸೀಡ್‌ ಮಾಡಿ ಬ್ರ್ಯಾಂಚ್‌ ಮ್ಯಾನೇಜರ್‌ ಆಗಿದ್ದು ಅವಳ ಬದುಕಿನ ಮಹತ್ವದ ತಿರುವು ಆಗಿತ್ತು. ಯಾರು ಏನೇ ಪ್ರತಿಕ್ರಿಯೆ ಹೇಳಲಿ, ಅವಳು ಆ ಖುಷಿಯನ್ನು ಎಲ್ಲರೊಂದಿಗೆ ಶೇರ್‌ ಮಾಡಿಕೊಳ್ಳಲು ಇಚ್ಛಿಸುತ್ತಿದ್ದಳು.

ರಾಧಿಕಾ ಮನೆಗೆ ತಲುಪಿದ ಕೂಡಲೇ ರಾಘವ್ ಹೇಳಿದ, “ಬಂದೆಯಾ ರಾಧಿಕಾ, ನಾಳೆ ಆಫೀಸ್‌ ಕೆಲಸಕ್ಕೆ ಮುಂಬೈಗೆ ಹೋಗಬೇಕು. ಬೆಳಗ್ಗೆ 6 ಕ್ಕೆ ಫ್ಲೈಟ್‌ ಇದೆ. ಸ್ವಲ್ಪ ನನ್ನ ಸೂಟ್‌ಕೇಸ್‌ ಪ್ಯಾಕ್‌ ಮಾಡಿ ಕೊಡು. ನಾಳೆ ಅಮ್ಮನನ್ನು ಡಾ.ಪ್ರಸಾದ್‌ ಬಳಿ ಕರೆದುಕೊಂಡು ಹೋಗು. ಅಪಾಯಿಂಟ್‌ಮೆಂಟ್‌ ಇದೆ. ನನ್ನನ್ನು ಡಿಸ್ಟರ್ಬ್‌ ಮಾಡ್ಬೇಡ. ಅಲ್ಲಿ ಪ್ರೆಸೆಂಟೇಶನ್‌ಗೆ ಸಿದ್ಧತೆ ಮಾಡ್ಕೋಬೇಕು.”

ರಾಘವನಿಗೆ ಇದು ದಿನನಿತ್ಯದ ಕೆಲಸ. ಮನೆಯಲ್ಲೂ ಆಫೀಸಿನ ಕೆಲಸ ಹಚ್ಚಿಕೊಂಡು ವ್ಯಸ್ತನಾಗಿರುತ್ತಿದ್ದ. ಪ್ರೆಸೆಂಟೇಶನ್‌, ಕಾನ್‌ಫೆರನ್ಸ್, ಇಲ್ಲಾಂದರೆ ಟೂರ್‌, ಫೋನ್‌ನಲ್ಲಿ ಮಾತುಕಥೆ. ಈಗಂತೂ ಕಂಪನಿಯ ಸಿಇಓ ಬೇರೆ. ಇಂದು ರಾಧಿಕಾ ತನಗಾಗಿ ಅವನ ಸಮಯದ ಒಂದು ತುಂಡು ಕೇಳುತ್ತಿದ್ದಾಳೆ. ಆದರೆ ಅದೂ ಸಿಗಲಿಲ್ಲ.

ಮದುವೆಗೆ ಮೊದಲು ರಾಧಿಕಾ ತಾನಾಗಿ ಒಂದು ಲೋಟ ನೀರು ತೆಗೆದುಕೊಂಡು ಕುಡಿದಿರಲಿಲ್ಲ.  ಬರೀ ಓದುವುದೇ ಅವಳ ಉದ್ದೇಶ.

“ರಾಧಿಕಾ, ನನಗೆ ಸ್ವಲ್ಪ ಶುಂಠಿ ಕಾಫಿ ಕೊಡು, ತಲೆ ನೋಯ್ತಿದೆ,” ಅತ್ತೆ ಹೇಳಿದರು.

ರಾಧಿಕಾ ಅತ್ತೆಗೆ ಕಾಫಿ ಕೊಟ್ಟು ಹಿಂತಿರುಗುತ್ತಿದ್ದಳು. ಅಷ್ಟರಲ್ಲಿ ಪ್ರಜ್ವಲ್ ಹೇಳಿದ, “ ಅಮ್ಮಾ, ಇವತ್ತು ನನ್ನ ಫ್ರೆಂಡ್‌ ಶೇಖರನ ಬರ್ತ್‌ಡೇ. ಅವನು ಪಾರ್ಟಿ ಕೊಡಿಸ್ತಿದ್ದಾನೆ. ಬರೋದು ಲೇಟಾಗುತ್ತೆ.”

ರಾಧಿಕಾಳ ಪ್ರಮೋಷನ್‌ ಲೆಟರ್‌ ಪರ್ಸ್‌ನಲ್ಲಿಯೇ ಉಳಿದುಬಿಟ್ಟಿತು. ಎಲ್ಲರೂ ತಮ್ಮದೇ ಕೆಲಸಗಳಲ್ಲಿ ವ್ಯಸ್ತರಾಗಿರುವುದು ಹಾಗೂ ಅತ್ತೆಯ ಹಳೆಯ ಮಾತುಗಳನ್ನು ನೆನೆಸಿಕೊಂಡು ಅವಳ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು. ತನ್ನ ಯಶಸ್ಸಿನ ಗುರುತಾದ ಪ್ರಮೋಶನ್‌ ಲೆಟರ್‌ನ್ನು ಯಾರಿಗೂ ತೋರಿಸಲು ಮನಸ್ಸಾಗಲಿಲ್ಲ. ಅವಳು ಕುಗ್ಗಿದ ಮನಸ್ಸಿನಿಂದ ಅಡುಗೆಮನೆಗೆ ಹೋದಳು. ಅಡುಗೆ ತಯಾರಿಯೊಂದಿಗೆ ಗಂಡನ ಸೂಟ್‌ಕೇಸ್‌ನ್ನೂ ಸಿದ್ಧಪಡಿಸಬೇಕಿತ್ತು.

“ಅಮ್ಮಾ ಹಪ್ಪಳ ಕರೀತೀನಿ ತಿಂತೀರಾ?” ಕವಿತಾ ಕೇಳಿದಳು.

ರಾಧಿಕಾ ಏನೂ ಹೇಳದಿದ್ದಾಗ ಕವಿತಾ ಅವಳನ್ನು ಅಲ್ಲಾಡಿಸಿ ಮತ್ತೆ ಪ್ರಶ್ನೆ ಹಾಕಿದಳು. ಆಗಲೂ ಉತ್ತರಿಸದಿದ್ದಾಗ ಅವಳನ್ನು ತನ್ನತ್ತ ತಿರುಗಿಸಿಕೊಂಡು, “ಏನಾಯ್ತಮ್ಮಾ , ಹುಷಾರಿಲ್ವಾ?” ಎಂದು ಕೇಳಿದಳು.

“ಹುಷಾರಾಗಿದ್ದೀನಿ, ನಿನಗೆ ಹಪ್ಪಳ ಕರ್ಕೊ. ನನಗೆ ಊಟ ಮಾಡೋಕೆ ಮನಸ್ಸಿಲ್ಲ.”

“ಅಮ್ಮಾ, ಏನೋ ವಿಷಯ ಇದೆ. ಇಲ್ಲದಿದ್ರೆ ನೀವು ಊಟ ಬೇಡ ಅಂತಿರಲಿಲ್ಲ.”

“ಯಾವ ವಿಷಯವೂ ಇಲ್ಲ.”

“ಖಂಡಿತಾ ಇದೆ. ನನಗೆ ಹೇಳೋಕೆ ನಿಮಗಿಷ್ಟವಿಲ್ಲ. ವಿ ಆರ್‌ ಫ್ರೆಂಡ್ಸ್, ನೀವೇ ಹೇಳ್ತಿದ್ರಿ.”

ಕವಿತಾ ಅಷ್ಟು ಆಗ್ರಹಿಸಿದಾಗ ರಾಧಿಕಾ ಮಣಿಯಲೇಬೇಕಾಯಿತು. ಅವಳು ತನ್ನ ಪ್ರಮೋಷನ್‌ ಬಗ್ಗೆ ತಿಳಿಸಿದಳು.

“ವಾವ್‌, ಕಂಗ್ರಾಚ್ಯುಲೇಶನ್‌! ಯು ಆರ್‌ ಗ್ರೇಟ್‌. ಐ ಆ್ಯಮ್ ಪ್ರೌಡ್‌ ಆಫ್‌ ಯೂ. ನಾನು ಈಗ್ಲೇ ಅಪ್ಪನಿಗೆ ಹೇಳ್ತೀನಿ.”

“ಅವರನ್ನು ಡಿಸ್ಟರ್ಬ್‌ ಮಾಡಬೇಡ ಕವಿತಾ. ಅವರಿಗೆ ಅರ್ಜೆಂಟ್‌ ಕೆಲಸ ಇದೆ. ನಾಳೆ ಮುಂಬೈಗೆ ಹೋಗ್ತಿದ್ದಾರೆ.”

“ಪ್ರಜ್ವಲ್……”

“ಅವನು ಫ್ರೆಂಡ್‌ ಬರ್ತ್‌ಡೇಗೆ ಹೋಗಿದ್ದಾನೆ.”

“ಸರಿ, ಅಜ್ಜಿಗೆ ಹೇಳಿ ಬರ್ತೀನಿ.”

“ಬೇಡ. ಅವರಿಗೆ ತುಂಬಾ ತಲೆ ನೋಯ್ತಿದೆ. ಅವರಿಗೆ ಮಾತ್ರೆ, ಕಾಫಿ ಕೊಟ್ಟು ಬಂದೆ. ಅವರು ಮಲಗಿರಬೇಕು,”

“ಆಯ್ತು, ಊಟದ ಸಮಯದಲ್ಲಿ ಈ ಸಂತೋಷದ ಸುದ್ದೀನ ಎಲ್ಲರಿಗೂ ಹೇಳ್ತೀನಿ. ಒಂದು ನಿಮಿಷ ಬರ್ತೀನಿ.”

ರಾಧಿಕಾ ಏನಾದರೂ ಹೇಳುವ ಮೊದಲೇ ಅವಳು ಹೊರಟು ಹೋಗಿದ್ದಳು.

ಸಾರು ಪಲ್ಯ ಮಾಡಿದ ನಂತರ ರಾಧಿಕಾ ಗಂಡನ ಸೂಟ್‌ಕೇಸ್‌ ಪ್ಯಾಕ್‌ ಮಾಡಲು ಹೋದಳು. 1 ಗಂಟೆಯ ನಂತರ ಬಂದು ಡೈನಿಂಗ್‌ ಟೇಬಲ್ ಮೇಲೆ ಅಡುಗೆ ಇಡತೊಡಗಿದಳು. ಅಷ್ಟರಲ್ಲಿ, ಕವಿತಾ ಒಂದು ದೊಡ್ಡ ಪ್ಯಾಕೆಟ್‌ ಕೈಯಲ್ಲಿ ಹಿಡಿದು ಬಂದಿದ್ದನ್ನು ನೋಡಿದಳು.

“ಇದೇನು ಕವಿತಾ?”

“ಸರ್‌ಪ್ರೈಸ್‌!”

“ಏನು ಸರ್‌ಪ್ರೈಸ್‌?”

“ಒಂದು ನಿಮಿಷ ತಾಳಿ ಅಮ್ಮ….”

ಅಷ್ಟರಲ್ಲಿ ಓಡೋಡುತ್ತಾ ಬಂದ ಪ್ರಜ್ವಲ್, “ಅಮ್ಮಾ, ಅಕ್ಕ ನನಗೆ ಫೋನ್‌ ಮಾಡಿ ಬೇಗ ಮನೆಗೆ ಬರೋಕೆ ಹೇಳಿದಳು, ಕಾರಣ ತಿಳಿಸಲಿಲ್ಲ. ಏನಾಯ್ತಮ್ಮಾ?” ಎಂದು ಕೇಳಿದ. ಅವನ ಮುಖದಲ್ಲಿ ಚಿಂತೆಯಿತ್ತು.

“ಅಮ್ಮಾ ನೀವು ಒಳಗೆ ಹೋಗಿ, ನಾನು ಕರೆದಾಗ ಬರಬೇಕು,” ಎಂದು ಅವಳ ಕೈಯಿಂದ ಅನ್ನದ ಬಟ್ಟಲನ್ನು ತೆಗೆದುಕೊಂಡು ಕವಿತಾ ಹೇಳಿದಳು,

“ಅಮ್ಮಾ, ಪ್ಲೀಸ್‌, ಎರಡೇ ನಿಮಿಷ….” ಆಶ್ಚರ್ಯದಿಂದ ನೋಡುತ್ತಿದ್ದ ಅಮ್ಮನಿಗೆ ಹೇಳಿದಳು. ರಾಧಿಕಾ ಒಳ ಹೋದಳು. ಸ್ವಲ್ಪ ಹೊತ್ತಿನ ನಂತರ ಕವಿತಾ ಎಲ್ಲರನ್ನೂ ಕರೆದಳು.

“ಕೇಕ್‌, ಇವತ್ತು ಯಾರ ಬರ್ತ್‌ಡೇ?” ಡೈನಿಂಗ್‌ ಟೇಬಲ್ ಮೇಲೆ ಇಟ್ಟಿದ್ದನ್ನು ನೋಡಿ ಅತ್ತೆ ಕೇಳಿದರು. ರಾಘವ್ ಹಾಗೂ ಪ್ರಜ್ವಲ್ ಕೂಡ ಕವಿತಾಳತ್ತ ಆಶ್ಚರ್ಯದಿಂದ ನೋಡುತ್ತಿದ್ದರು.

“ಒಂದ್ನಿಮಿಷ ಅಮ್ಮಾ… ನೀವು ಇಲ್ಲಿ ಬನ್ನಿ,” ಎಂದು ಕವಿತಾ ರಾಧಿಕಾಳ ಕೈ ಹಿಡಿದು ಅವಳನ್ನು ಡೈನಿಂಗ್‌ ಟೇಬಲ್ ಬಳಿ ಕರೆದುಕೊಂಡು ಹೋದಳು. ಅವಳ ಕೈಗೊಂದು ಚಾಕು ಕೊಟ್ಟು, “ಅಮ್ಮಾ, ಕೇಕ್‌ ಕಟ್‌ ಮಾಡಿ,” ಎಂದಳು.

ಕವಿತಾಳ ಮಾತು ಕೇಳಿ ಅತ್ತೆ, ರಾಘವ್ ಹಾಗೂ ಪ್ರಜ್ವಲ್ ಆಶ್ಚರ್ಯದಿಂದ ಕವಿತಾಳನ್ನು ನೋಡತೊಡಗಿದರು.

“ಇವತ್ತು ನಮ್ಮಮ್ಮನ ಹುಟ್ಟಿದ ಹಬ್ಬ. ಅಂದರೆ ನಮ್ಮ ಅಮ್ಮನ ಕೆರಿಯರ್‌ನಲ್ಲಿ ಹೊಸ ಜನ್ಮದಿನ,” ಎಲ್ಲರೂ ಆಶ್ಚರ್ಯದಿಂದಿರುವುದನ್ನು ಕಂಡು ಹೇಳಿದಳು.

“ಕೆರಿಯರ್‌ನ ಹೊಸ ಜನ್ಮದಿನ… ಏನು ಹೇಳ್ತಿದ್ದೀಯಾ ಅಕ್ಕಾ?” ಪ್ರಜ್ವಲ್ ಆಶ್ಚರ್ಯದಿಂದ ಕೇಳಿದ.

“ಹೌದು ನಾನು ಸರಿಯಾಗಿಯೇ ಹೇಳ್ತಿದ್ದೀನಿ. ಇವತ್ತು ಅಮ್ಮನಿಗೆ ಆಫೀಸಿನಲ್ಲಿ ಪ್ರಮೋಶನ್‌ ಸಿಕ್ಕಿದೆ. ಅವರು ಬ್ರ್ಯಾಂಚ್‌ ಮ್ಯಾನೇಜರ್‌ ಆಗಿದ್ದಾರೆ. ಅಮ್ಮ ಪ್ಲೀಸ್‌, ಈ ಸಂತೋಷದ ಸಂದರ್ಭದಲ್ಲಿ ಕೇಕ್‌ ಕತ್ತರಿಸಿ ನಮ್ಮೆಲ್ಲರ ಬಾಯಿಯನ್ನು ಸಿಹಿ ಮಾಡಿ,” ಕವಿತಾ ಅಮ್ಮನನ್ನು ಆಗ್ರಹಿಸಿದಳು.

“ಕಂಗ್ರಾಚ್ಯುಲೇಷನ್‌ ಅಮ್ಮ. ಐ ಆ್ಯಮ್ ಪ್ರೌಡ್‌ ಆಫ್‌ ಯೂ!” ಪ್ರಜ್ವಲ್ ಅಮ್ಮನನ್ನು ಅಪ್ಪಿಕೊಂಡು ಹೇಳಿದ.

“ನಿನಗೆ ಪ್ರಮೋಶನ್‌ ಸಿಕ್ಕಿದೇಂತ ನನಗೆ ಹೇಳಲಿಲ್ಲ,” ರಾಘವ್ ಹೇಳಿದರು.

“ನೀವು ಬಿಝಿಯಾಗಿದ್ದಿರಿ.”

“ಕಂಗ್ರಾಟ್ಸ್… ಯಾವಾಗ ರಿಪೋರ್ಟ್‌ ಮಾಡ್ಕೋತೀಯಾ?”

“ನಾಳೇನೇ.”

“ ಕಂಗ್ರಾಟ್ಸ್ ರಾಧಿಕಾ. ದೊಡ್ಡ ಪೋಸ್ಟ್. ದೊಡ್ಡ ಜವಾಬ್ದಾರಿ. ಆದರೆ ಆಫೀಸ್‌ ಕೆಲಸಗಳಲ್ಲೇ ಸದಾ ಮುಳುಗಿರಬೇಡ. ಮನೇಲೂ ಸೊಸೆ ರೂಪದಲ್ಲಿ ನೀನು ಯಶಸ್ವಿಯಾಗಬೇಕು.”

“ಅಮ್ಮಾ ನೀವು ನಿಶ್ಚಿಂತರಾಗಿರಿ. ನಾನು ಆಫೀಸಿನಲ್ಲಿ ಬ್ರ್ಯಾಂಚ್‌ ಮ್ಯಾನೇಜರ್‌. ಮನೆಯಲ್ಲಂತೂ ನಿಮ್ಮ ಸೊಸೇನೇ,” ರಾಧಿಕಾ ಅತ್ತೆಯ ಕಾಲಿಗೆ ನಮಸ್ಕರಿಸುತ್ತಾ ಹೇಳಿದಳು.

“ನಾನು ಸುಮ್ಮನೆ ಹಾಗೆ ಹೇಳಿದ್ದು ರಾಧಿಕಾ. ನಿಜ ಹೇಳಬೇಕೆಂದರೆ ನೀನು ಮನೆಯ ಜವಾಬ್ದಾರಿಗಳೆಲ್ಲದರ ಜೊತೆ ಹೊರಗಿನ ಜವಾಬ್ದಾರಿಗಳನ್ನೂ ಚೆನ್ನಾಗಿ ನಿಭಾಯಿಸಿದ್ದೀಯ. ಅದಕ್ಕೆ ನಿನ್ನ ಕೆಲಸ ಮೆಚ್ಚಿ ಪ್ರಮೋಶನ್‌ ಕೊಟ್ಟಿದ್ದಾರೆ. ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ.  ನನಗೆ ನೀನು ಎಷ್ಟೊಂದು ಸೇವೆ ಮಾಡಿದ್ದೀಯ, ನನ್ನ ಮಗಳಿಂದಲೂ ಅಷ್ಟು ಮಾಡೋಕೆ ಸಾಧ್ಯವಿಲ್ಲ.”

“ಹಾಗೆ ಹೇಳಬೇಡಿ ಅಮ್ಮ . ನೀವು ನನಗೂ ಅಮ್ಮನೇ. ಒಂದು ವೇಳೆ ನೀವು ಹೆಜ್ಜೆ ಹೆಜ್ಜೆಗೂ ನನಗೆ ಸಪೋರ್ಟ್‌ ಮಾಡದಿದ್ದರೆ ನನಗೆ ಯಶಸ್ಸು ಸಿಗುತ್ತಿರಲಿಲ್ಲ. ನನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸೋಕೆ ಆಗುತ್ತಿರಲಿಲ್ಲ.”

“ಅಮ್ಮಾ ಕೇಕ್‌,” ಕವಿತಾ ಹೇಳಿದಳು.

“ಬಂದೆ ಕವಿತಾ….”

ಅತ್ತೆ ಹಾಗೂ ಗಂಡನ ಕಣ್ಣುಗಳಲ್ಲಿ ತನ್ನ ಬಗ್ಗೆ ಹೆಮ್ಮೆಯ ಭಾವನೆ ಕಂಡು ರಾಧಿಕಾಳ ಮನದಲ್ಲಿ ಸೇರಿಕೊಂಡಿದ್ದ ಮಂಜು ಕರಗತೊಡಗಿತು. ಪ್ರತಿಯೊಂದು ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ಹೋಗುವುದೇ ಅವಳ ಜೀವನದ ಗುರಿಯಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ