ಕಥೆ– ಕೌಸಲ್ಯಾ ರಾವ್

ಬೆಳಕಾಗಿತ್ತು. ರಕ್ಷಿತ್‌ ಕೋಣೆಯ ಕಿಟಕಿ ಪರದೆ ದೂರ ಸರಿಸಿದಾಗ ಸೂರ್ಯನ ಕಿರಣಗಳು ದೀಪಾಳ ಮುಖದ ಮೇಲೆ ಬಿದ್ದವು. ಆದರೂ ಅವಳು ಮಗ್ಗಲು ಬದಲಾಯಿಸಿ ಮಲಗಿಕೊಂಡಳು. ಆಗ ರಕ್ಷಿತ್‌ ಕಾಫಿ ಟ್ರೇಯನ್ನು ಟೀಪಾಯ್‌ ಮೇಲಿಟ್ಟು ಬೆಡ್‌ಶೀಟ್‌ ಎಳೆಯುತ್ತಾ, “ಮೇಡಂ ಕಣ್ಣು ಬಿಡಿ. ಬಿಸಿ ಬಿಸಿ ಕಾಫಿ ಕುಡೀರಿ….” ಎಂದ.

ರಕ್ಷಿತ್‌ ಹೇಳಿದ್ದು ದೀಪಾಳ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಅವಳನ್ನು ನೋಡಿದರೆ ಬೇಗನೆ ಏಳುವ ಹಾಗಿರಲಿಲ್ಲ. ದೀಪಾ ಏಳದಿದ್ದುದನ್ನು ಕಂಡು ಅವಳನ್ನು ತಟ್ಟಿ ಎಬ್ಬಿಸುತ್ತಾ,

“ನಿನ್ನ ಎಡಿಟರ್‌ ಸಾಹೇಬರು ಫೋನ್‌ ಮಾಡಿದ್ದರು. ಬಹುಶಃ ಅವರಿಗೆ ಎಲ್ಲಿಂದಲೋ ಯಾವುದೋ ಸ್ಟೋರಿ ವಾಸನೆ ಬಂದಿರಬೇಕು. ಅದಕ್ಕೆ ನಿನ್ನನ್ನು ಕರೀತಿದ್ದಾರೆ,” ಎಂದ.

ದೀಪಾ ಆಕಳಿಸುತ್ತಾ, ಕೈ ಕಾಲು ಜಾಡಿಸಿ ಎಚ್ಚರ ಮಾಡಿಕೊಂಡಳು. ನಂತರ ಎದ್ದು ಕುಳಿತು ಹೇಳಿದಳು, “ಈ ಎಡಿಟರ್‌ ಸಾಹೇಬ್ರಿಗೆ ನಿದ್ದೇನೇ ಬರಲ್ವಾ? ಬೆಳಗ್ಗೆ ಬೆಳಗ್ಗೇನೇ ಫೋನ್‌ ಮಾಡಿಬಿಡ್ತಾರೆ….” ಎನ್ನುತ್ತಾ ದೀಪಾ ಆರಾಮವಾಗಿ ಎದ್ದು ಬೇಸಿನ್‌ನಲ್ಲಿ ಹಲ್ಲುಜ್ಜಿ, ಮುಖ ತೊಳೆದು ಕಾಫಿ ಕುಡಿಯತೊಡಗಿದಳು.

“ಈ ನಿನ್ನ ಎಡಿಟರ್‌ ನನ್ನ ನಿದ್ದೇನೂ ಹಾಳು ಮಾಡ್ತಾರೆ. ಫೋನ್‌ ನಿನಗೆ, ಬೇಸರ ನನಗೆ,” ಎನ್ನುತ್ತಾ ರಕ್ಷಿತ್‌ ಕಾಫಿ ಕಪ್‌ ಹಿಡಿದುಕೊಂಡು ಟೋಸ್ಟರ್‌ನಲ್ಲಿ ಟೋಸ್ಟ್ ಹಾಕಿದ. ನಂತರ ಫ್ರಿಜ್‌ನಿಂದ ಬೆಣ್ಣೆ ತೆಗೆದ.

ಈ ನವವಿವಾಹಿತ ದಂಪತಿಗಳ ಬೆಳಗು ಸಾಮಾನ್ಯವಾಗಿ ಹೀಗೇ ಇರುತ್ತಿತ್ತು. ಇಬ್ಬರಲ್ಲೂ ಪ್ರೀತಿ ಬೆಳೆದಾಗ ತಂದೆತಾಯಿಯರ ಒಪ್ಪಿಗೆ ಪಡೆದು ಆರ್ಯಸಮಾಜದ ಪದ್ಧತಿಯಲ್ಲಿ ಮದುವೆಯಾಗಿದ್ದರು. ತಮ್ಮ ಮುಂದಿನ ಬದುಕನ್ನು ಹೇಗೆ ಸಾಗಿಸಬೇಕು ಎಂದು ಅವರೇನೂ ಯೋಚಿಸಿರಲಿಲ್ಲ. ಆದರೆ ಎಲ್ಲ ತಾನಾಗಿ ವ್ಯವಸ್ಥಿತವಾಯಿತು. ಬೆಳಗ್ಗೆ ಬೇಗ ಏಳುವುದು ದೀಪಾಗೆ ಹಿಂಸೆಯಾಗಿತ್ತು. ಆದರೆ ರಕ್ಷಿತ್‌ ಬೆಳಗ್ಗೆ ಬೇಗನೆ ಏಳುತ್ತಿದ್ದ. ತಡವಾಗಿ ಏಳುವ ದೀಪಾಳ ತಲೆಯ ಬಳಿ ಮ್ಯೂಸಿಕ್‌ ಸಿಸ್ಟಂ ಆನ್‌ ಮಾಡುತ್ತಿದ್ದ, ಕಿಟಿಕಿಗಳನ್ನು ತೆರೆದುಬಿಡುತ್ತಿದ್ದ. ಆದರೂ ದೀಪಾ ಎರಡೂ ಕಿವಿಗಳಿಗೆ ದಿಂಬುಗಳನ್ನು ಇಟ್ಟುಕೊಂಡು ಮಲಗಿರುತ್ತಿದ್ದಳು. ರಕ್ಷಿತ್‌ ಬೇಗನೆ ಎದ್ದು ಮನೆಯ ಕೆಲಸಗಳಲ್ಲಿ ತೊಡಗಿರುತ್ತಿದ್ದ. ಹಾಲು ತಂದು ಬಿಸಿ ಮಾಡುತ್ತಿದ್ದ. ಪೇಪರ್‌ ತಂದು ಕಣ್ಣಾಡಿಸಿ ನಂತರ ಒಳ್ಳೆಯ ಕಾಫಿ ಮಾಡುತ್ತಿದ್ದ. ತಾನೊಂದು ಕಪ್‌ ಕುಡಿದು ಇನ್ನೊಂದು ಕಪ್‌ ಕಾಫಿಯನ್ನು ದೀಪಾಳ ಬೆಡ್‌ ಪಕ್ಕದ ಟೀಪಾಯ್‌ ಮೇಲಿಟ್ಟು, “ಏಳಿ ಮೇಡಂ, ಬಿಸಿ ಬಿಸಿ ಕಾಫಿ ಕುಡೀರಿ,” ಎನ್ನುತ್ತಿದ್ದ.

ಮದುವೆಗೆ ಮೊದಲು ಹೆಚ್ಚಿನ ಪುರುಷರಂತೆ ರಕ್ಷಿತ್‌ ಎಂದೂ ಅಡುಗೆಮನೆಯಲ್ಲಿ ಕಾಲಿಟ್ಟಿರಲಿಲ್ಲ. ಅಮ್ಮನಂತೂ ಅವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ರುಚಿರುಚಿಯಾದ  ಅಡುಗೆ ಮಾಡುತ್ತಿದ್ದರು. ಅಡುಗೆ ಮಾಡಲು ಅವರಿಗೆ ಆಲಸ್ಯವೆಂಬುದೇ ಇರಲಿಲ್ಲ. ಗಂಡ ಹಾಗೂ ಮಕ್ಕಳಿಗೆ ದಿನ ಹಬ್ಬದಡಿಗೆ ಮಾಡುತ್ತಿದ್ದರು. ಏನಾದರೂ ಸಹಾಯ ಮಾಡಬೇಕಾ ಎಂದು ಕೇಳಿದರೆ, “ಏನೂ ಬೇಡ, ನೀವು ಗಂಡಸರು ಇದರ ಬಗ್ಗೆ ನಿಮಗೇನು ಗೊತ್ತು?” ಎನ್ನುತ್ತಿದ್ದರು.

ರಕ್ಷಿತ್‌ನ ಅಣ್ಣ ಶ್ರೇಯಸ್‌ ಗ್ರೀನ್‌ಕಾರ್ಡ್‌ ಇದ್ದ ಹುಡುಗಿಯನ್ನು  ಮದುವೆಯಾಗಿ ಅಮೆರಿಕಾಗೆ ಹೊರಟುಹೋಗಿದ್ದ. ಆಗಿನಿಂದ ಅಪ್ಪ ಅಮ್ಮ ಕೊಂಚ ದುಃಖದಲ್ಲಿರುತ್ತಿದ್ದರು. ಚಿಕ್ಕ ಮಗ ರಕ್ಷಿತ್‌ ತಮ್ಮ ಬಳಿಯಲ್ಲೇ ಇರಲಿ, ತಮ್ಮದೇ ಜಾತಿಯ ಸಂಸ್ಕಾರವಂತ ಹುಡುಗಿಯನ್ನು ಮದುವೆಯಾಗಲಿ ಎಂದು ಅಮ್ಮ ಶೈಲಜಾ ಬಯಸುತ್ತಿದ್ದರು. ಮಗ ಮುಂದೆ ತಮ್ಮ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗಲಿ ಎಂದು ತಂದೆ ಬಯಸಿದ್ದರು. ಆದರೆ ರಕ್ಷಿತ್‌ಗೆ ತಂದೆಯ ವ್ಯಾಪಾರದಲ್ಲಿ ಆಸಕ್ತಿ ಇರಲಿಲ್ಲ. ಅವನಿಗೆ ಪತ್ರಿಕೆಗಳು ಮತ್ತು ಪುಸ್ತಕಗಳಲ್ಲಿ ಆಸಕ್ತಿ ಹೆಚ್ಚಾಗಿತ್ತು. ರಾತ್ರಿ ಅವನು ಯಾವುದಾದರೂ ಪುಸ್ತಕ ಓದುತ್ತಿದ್ದಾಗ ತಂದೆ ಮಗನ ಬಳಿ ಕುಳಿತು ವ್ಯಾಪಾರದ ಬಗ್ಗೆ ಮಾತನಾಡೋಣ ಎಂದುಕೊಳ್ಳುತ್ತಿದ್ದರು. ಆದರೆ ಮಗನ ಮೂಡ್‌ ಕಂಡು ಸುಮ್ಮನಾಗುತ್ತಿದ್ದರು. ಅವರ ಚಿಂತೆ ಕಂಡು ಶೈಲಜಾ, “ಏಕೆ ಯೋಚಿಸ್ತೀರಿ. ಅವನು ಓದೋ ಹಾಗಿದ್ರೆ ಓದಲಿ ಬಿಡಿ. ಅವನು ನಿಮ್ಮ ರಕ್ತ. ಒಂದಲ್ಲಾ ಒಂದು ದಿನ ನಿಮ್ಮ ವ್ಯಾಪಾರ ಸಂಭಾಳಿಸುತ್ತಾನೆ,” ಎಂದು ಸಮಾಧಾನ ಹೇಳುತ್ತಿದ್ದರು.

ಆದರೆ ಈ ವಿಷಯದಲ್ಲಿ ರಕ್ತದ ಮೇಲಿನ ನಂಬಿಕೆ ಸುಳ್ಳಾಯಿತು. ಓದು ಮುಗಿದ ಕೂಡಲೇ ರಕ್ಷಿತ್‌ ನೌಕರಿ ಹುಡುಕಿಕೊಂಡಿದ್ದ. ಅವನಿಗೆ ಒಂದು ಪ್ರತಿಷ್ಠಿತ ಪತ್ರಿಕೆಯಲ್ಲಿ ಉಪಸಂಪಾದಕನ ಕೆಲಸ ಸಿಕ್ಕಿತ್ತು. ಅವನು ಅಮ್ಮನ ಕೊರಳನ್ನು ಅಪ್ಪಿಕೊಂಡು ಖುಷಿಯಿಂದ ಕುಣಿದಾಗ  ತಂದೆ ತಾಯಿಗೆ ಮಗ ತಮ್ಮ ಕುಲ ಕಸುಬನ್ನು ಸಂಭಾಳಿಸುವುದಿಲ್ಲ ಎಂದು ಅರ್ಥವಾಯಿತು.

ಈ ಹೊಡೆತವನ್ನು ತಡೆದುಕೊಳ್ಳುವುದೇ ಶೈಲಜಾ ಮತ್ತು ಪ್ರಸಾದ್‌ರಿಗೆ ಬಹಳ ಕಷ್ಟವಾಗಿತ್ತು. ಅಷ್ಟರಲ್ಲಿ ರಕ್ಷಿತ್‌ ತಾನು ದೀಪಾಳನ್ನು ಪ್ರೀತಿಸುತ್ತಿರುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿ ಇನ್ನೊಂದು ದೊಡ್ಡ ಹೊಡೆತ ಕೊಟ್ಟ.

ರಕ್ಷಿತ್‌ನ ಜೊತೆ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಮಾಡಿದ ದೀಪಾ ಜೀನ್ಸ್ ಟೀಶರ್ಟ್‌ ತೊಟ್ಟು ಜಿಗಿಯುತ್ತಿದ್ದಳು. ಅವಳು ಇಂಗ್ಲೀಷ್‌ ಪತ್ರಿಕೆಯ ಪ್ರಸಿದ್ಧ ಪತ್ರಕರ್ತ ಉಮೇಶ್‌ರ ಮಗಳು. ಅವಳ ಅಮ್ಮ ಟೀಚರ್‌ ಆಗಿದ್ದರೆ, ಅಣ್ಣ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿದ್ದ. ಒಟ್ಟಿನಲ್ಲಿ ಅವಳು ಆಧುನಿಕ ವಿಚಾರಗಳ ಕುಟುಂಬದಿಂದ ಬಂದಿದ್ದವಳು.

ಶೈಲಜಾರಿಗೆ ರಕ್ಷಿತ್‌ ಮಾತಿನಿಂದ ಬೇಸರವಾಗಿತ್ತು. ಆದರೆ ಗಂಡ ಪ್ರಸಾದ್‌, “ಅವನೇನು ಮಾಡ್ತಾನೋ ಮಾಡಲಿ. ಅವನು ಖುಷಿಯಾಗಿದ್ರೆ ಕನಿಷ್ಠ ಪಕ್ಷ ಸಂಬಂಧಗಳಾದರೂ ಉಳಿಯುತ್ತವೆ. ಒಬ್ಬನಂತೂ ಮೊದಲೇ ನಮ್ಮನ್ನು ಬಿಟ್ಟು ಹೊರಟುಹೋದ. ಈಗ ಉಳಿದಿರೋದು ಇವನು. ಇವನು ಖುಷಿಯಾಗಿದ್ದರೆ ನಮ್ಮ ಕಣ್ಣೆದುರಿಗೇ ಇರ್ತಾನೆ,” ಎಂದು ತಿಳಿ ಹೇಳಿದರು.

ಪತಿಯ ಎಚ್ಚರಿಕೆಯ ಮಾತುಗಳನ್ನು ಕೇಳಿದ ನಂತರ ಶೈಲಜಾಗೆ ತಾವು ಸಂಪ್ರದಾಯಗಳನ್ನು ದೂರವಿರಿಸಿ ಮಗ ಸಂತೋಷವಾಗಿರಲೆಂದು ಆಶೀರ್ವಾದ ಕೊಟ್ಟಿರುವುದು ತಿಳಿಯಿತು. ಆದರೆ ವಿಷಯ ಇಲ್ಲಿಗೇ ಮುಗಿಯಲಿಲ್ಲ. ಎಲ್ಲ ನಿರ್ಧಾರವಾದ ನಂತರ ರಕ್ಷಿತ್‌ ಅಮ್ಮನಿಗೆ ಹೇಳಿದ, “ಅಮ್ಮ, ನಮ್ಮ ಮದುವೆಗೆ ನಾವು ವಿಶೇಷವಾಗಿ ಏನನ್ನೂ ಖರೀದಿಸುವುದಿಲ್ಲ, ಖರ್ಚೂ ಮಾಡುವುದಿಲ್ಲ. ಮದುವೆಗೆ ನೀವೇನು ಖರ್ಚು ಮಾಡಬೇಕೆಂದಿದ್ದೀರೋ ಆ ಹಣ ನನಗೆ ಕೊಡಿ. ದೀಪಾ ಕೂಡ ಅವಳ ತಂದೆ ತಾಯಿಗೆ ಹಾಗೇ ಹೇಳಿದ್ದಾಳೆ. ನಾವಿಬ್ಬರೂ ಬೆಂಗಳೂರಿನಲ್ಲಿ ಒಂದು ಚಿಕ್ಕ ಫ್ಲ್ಯಾಟ್‌ ನೋಡಿದ್ದೇವೆ. ನೀವು ಕೊಡೋ ಹಣದಿಂದ ಆ ಫ್ಲ್ಯಾಟ್‌ ಖರೀದಿಸುತ್ತೇವೆ.”

ಶೈಲಜಾ ಕಣ್ಣು ಮಿಟುಕಿಸದೆ ರಕ್ಷಿತ್‌ನನ್ನೇ ನೋಡುತ್ತಾ ಅವನ ಮಾತುಗಳನ್ನು ಕೇಳುತ್ತಿದ್ದರು. ಅವರಿಗೆ ಆಘಾತಾಗಿತ್ತು. 1 ಕ್ಷಣಬಿಟ್ಟು  ನಿಧಾನವಾಗಿ ಹೇಳಿದರು,  “ಅಂದ್ರೆ ನೀನು ನಮ್ಮ ಜೊತೆಗೆ ಇರೋದಿಲ್ವಾ?”

“ಅಮ್ಮಾ, ನಾವು ನಿಮ್ಮನ್ನು ಬಿಟ್ಟು ಎಲ್ಲಿಗೆ ಹೋಗ್ತಿದ್ದೀವಿ? ನಾನು ನಿಮ್ಮಿಬ್ಬರ ಅನುಕೂಲಕ್ಕೆ ಹೀಗೆ ಮಾಡ್ತಿದ್ದೀನಿ. ನಮ್ಮಿಬ್ಬರ ಕೆಲಸ ಹೇಗಿದೆಯೆಂದರೆ ಇಬ್ಬರಿಗೂ ಹೋಗಿಬರೋಕೆ ನಿರ್ದಿಷ್ಟ ಸಮಯ ಇರಲ್ಲ. ನಿಮಗೆ ಯಾವುದೇ ರೀತಿಯ ತೊಂದರೆ ಆಗದಿರಲೀಂತ ಹೀಗೆ ಮಾಡ್ತಿದ್ದೀವಿ.”

ಬೇರೆ ವಿಷಯಗಳಂತೆ ಈ ವಿಷಯವನ್ನೂ ಶೈಲಜಾ ಅರ್ಥ ಮಾಡಿಕೊಂಡರು. ಒಂದು ರೀತಿಯಿಂದ ನೋಡಿದರೆ ಅದು ಸರಿಯಾಗಿಯೂ ಇತ್ತು. ಕಣ್ಣಿಗೆ ಕಾಣಲ್ಲ. ಬೇಸರ ಆಗಲ್ಲ. ಸೊಸೆ ಕಣ್ಮುಂದೆ ಜೀನ್ಸ್ ಟಾಪ್‌ ಧರಿಸಿ, ಮಗನ ಕೈಗೆ ಕೈ ಸೇರಿಸಿ `ಬೈ ಅತ್ತೆ’ ಎನ್ನುತ್ತಾ ಮನೆಯಿಂದ ಹೊರಡುತ್ತಾಳೆ. ಅದಕ್ಕಿಂತ ಅವಳು ದೂರವಿರೋದೇ ಒಳ್ಳೆಯದು. ಈ ವಿಷಯ ಅರಗಿಸಿಕೊಳ್ಳಲು ಪ್ರಸಾದ್‌ರಿಗೂ ಕಷ್ಟವಾಗಿತ್ತು. ಅವರೂ ಮನಸ್ಸು ಗಟ್ಟಿ ಮಾಡಿಕೊಂಡರು. ಅಷ್ಟಲ್ಲದೆ, ಇನ್ನೇನು ಮಾಡಲು ಸಾಧ್ಯ?

ಹೀಗೆ ರಕ್ಷಿತ್‌ ಮತ್ತು ದೀಪಾ ತಮ್ಮದೇ ಬೇರೊಂದು ಲೋಕ ಸ್ಥಾಪಿಸಿಕೊಂಡಿದ್ದರು. ಅವರು ಬೆಂಗಳೂರಿನಲ್ಲಿ ತಮ್ಮದೇ ಫ್ಲ್ಯಾಟ್‌ನಲ್ಲಿ ಇರತೊಡಗಿದರು. ಬೆಳಗಿನ ತಿಂಡಿ, ಕಾಫಿ ಒಟ್ಟಿಗೆ ತೆಗೆದುಕೊಳ್ಳುತ್ತಿದ್ದರು. ಪತ್ರಿಕೆಗಳನ್ನು ಬೇರೆ ಬೇರೆ ಓದುತ್ತಿದ್ದರು. ರಕ್ಷಿತ್‌ ಇಂಗ್ಲಿಷ್‌ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ದೀಪಾ ಕನ್ನಡ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಳು. ರಕ್ಷಿತ್‌ನ ಕೆಲಸ ಬೆಳಗ್ಗೆ 11 ರಿಂದ ರಾತ್ರಿ 7 ಗಂಟೆಯರೆಗೆ. ದೀಪಾ ಮಧ್ಯಾಹ್ನ ಮನೆಬಿಟ್ಟು ರಾತ್ರಿ 9 ಗಂಟೆಗೆ ಹಿಂತಿರುಗುತ್ತಿದ್ದಳು. ಹೀಗಾಗಿ ಬೆಳಗಿನ ಸಮಯ ಇಬ್ಬರಿಗೂ ಮಹತ್ವಪೂರ್ಣವಾಗಿರುತ್ತಿತ್ತು. ಮುಂದೆ ಫೋನ್‌ನ ಆಸರೆಯಲ್ಲೇ ಎಲ್ಲಾ ನಡೆಯುತ್ತಿತ್ತು.

ಭಾನುವಾರ ಅಥವಾ ರಜಾ ದಿನಗಳಂದು ಅವರಿಗೆ ಬೆಳಕಾಗುತ್ತಿದ್ದುದೇ ಮಧ್ಯಾಹ್ನದಲ್ಲಿ. ಸಂಜೆ ಇಬ್ಬರೂ ಯಾವುದಾದರೂ ಸಿನಿಮಾ ನೋಡುತ್ತಿದ್ದರು ಅಥವಾ ಯಾರಾದರೂ ಒಬ್ಬರ ತಂದೆತಾಯಿಯರನ್ನು ನೋಡಲು ಹೋಗುತ್ತಿದ್ದರು. ದೀಪಾಗೆ ತನ್ನ ಅತ್ತೆ ಮಾವನನ್ನು ನೋಡಲು ಹೋಗುವಾಗ ಕೊಂಚ ತೊಂದರೆಯಾಗುತ್ತಿತ್ತು. ಅತ್ತೆ ಹಾಗೂ ಗಂಡನ ಖುಷಿಗಾಗಿ ದೀಪಾ 3-4 ಪೇರ್‌ ಸಲ್ವಾರ್‌ ಸೂಟ್‌, 2-3 ಸೀರೆ ಖರೀದಿಸಿದ್ದಳು. “ನನ್ನ ಅಪ್ಪ ಅಮ್ಮ ಹಳೆಯ ವಿಚಾರದವರು. ಈಗ ಈ ವಯಸ್ಸಿನಲ್ಲಿ ಅವರನ್ನು ಬದಲಿಸಲಾಗುವುದಿಲ್ಲ. ಅವರು ತಮ್ಮ ಲೋಕದಲ್ಲಿ ಖುಷಿಯಾಗಿದ್ದಾರೆ. ನಾವು ನಮ್ಮ ಲೋಕದಲ್ಲಿ. ನಾವು ನಮ್ಮ ಮರ್ಜಿಗೆ ತಕ್ಕಂತೆ ಬದುಕುತ್ತಿದ್ದೇವೆ. ಅವರು ನಮಗೆ ಎಂದೂ ಯಾವುದೇ ರೀತಿಯ ಅಡ್ಡಿ ಉಂಟು ಮಾಡಲಿಲ್ಲ. ಹೀಗಿರುವಾಗ ಅವರಿಗೆ ಕೊಂಚ ಒಪ್ಪುವಂತೆ ನಡೆದುಕೊಂಡರೆ ಏನು ತೊಂದರೆ? ಅವರಿಗೂ ಖುಷಿಯಾಗುತ್ತದೆ. ನಾವು ಅವರ ಬಳಿ ಹೋಗುವಾಗ ನೀನು ಜೀನ್ಸ್ ಪ್ಯಾಂಟ್‌ ಟೀಶರ್ಟ್‌ ಬದಲು ಸೀರೆ ಉಟ್ಟು ಅಥವಾ ಸಲ್ವಾರ್‌ ಸೂಟ್‌ ಧರಿಸಿ, ಹಣೆಗೆ ಬಿಂದಿ ಇಟ್ಟುಕೊಂಡು, ಕೈಗೆ ಬಳೆಗಳನ್ನು ಹಾಕಿಕೋ,”  ಎಂದು ರಕ್ಷಿತ್‌ ಹೇಳುತ್ತಿದ್ದ. ದೀಪಾ ರಕ್ಷಿತ್‌ನ ಈ ಮಾತನ್ನು ಖುಷಿಯಿಂದ ಒಪ್ಪಿಕೊಂಡಿದ್ದಳು. ಅವಳು ಅತ್ತೆ ಮನೆಯವರು ಕೊಡುವ ಹಿಂಸೆ, ಶೋಷಣೆಯ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಳು. ಆದರೆ ಅವಳಿಗಂತೂ ಎಂದೂ ಅಂತಹ ಅನುಭವವಾಗಿರಲಿಲ್ಲ. ಸಲ್ವಾರ್‌ ಕಮೀಜ್‌ ತೊಟ್ಟಾಗ ದುಪಟ್ಟಾ ಅಂತೂ ಅವಳ ಹೆಗಲ ಮೇಲೆ ನಿಲ್ಲುತ್ತಿರಲಿಲ್ಲ. ಸೀರೆ ಉಟ್ಟಾಗ ಸೆರಗು ಗಾಳಿಯಲ್ಲಿ ಹಾರಾಡುತ್ತಿತ್ತು. ಸಡಿಲವಾದ ಕುರ್ತಾ ಎಲ್ಲಿ ಸಿಕ್ಕಿಕೊಳ್ಳುತ್ತದೋ ಎಂದು ಚಿಂತಿಸುತ್ತಿದ್ದಳು. ತಾಳಿಯಂತೂ ಅವಳಿಗೆ ಕುಣಿಕೆಯ ಹಗ್ಗವಾಗಿತ್ತು. ಅದರ ಬದಲಿಗೆ ಅವಳು ಚಿನ್ನದ ತೆಳುವಾದ ಸರ ಧರಿಸುತ್ತಿದ್ದಳು. ಮಗ ಸೊಸೆ ಮನೆಗೆ ಬರುವ ದಿನ ಶೈಲಜಾ ಮಧ್ಯಾಹ್ನದಿಂದಲೇ ಅಡುಗೆ ಮನೆಯಲ್ಲಿ ಬಗೆಬಗೆಯ ವ್ಯಂಜನಗಳನ್ನು ಮಾಡಿ ಇಡೀ ಡೈನಿಂಗ್‌ ಟೇಬಲ್ ತುಂಬಿಸುತ್ತಿದ್ದರು. ಅಷ್ಟೆಲ್ಲಾ ಅಡುಗೆಯನ್ನು ಅತ್ತೆಯೊಬ್ಬರೇ ಹೇಗೆ ಮಾಡಿದರೆಂದು ದೀಪಾಗೆ ಆಶ್ಚರ್ಯವಾಗುತ್ತಿತ್ತು.

“ಇದು ತಿನ್ನು, ಇದು ಹಾಕಿಸ್ಕೋ, ಚೂರು ಹಾಕ್ತೀನಿ,” ಎಂದು ಉಪಚಾರ ಮಾಡುತ್ತಾ ದೀಪಾಗೆ ತಿನ್ನಿಸುತ್ತಿದ್ದರು. ಮನೆಗೆ ಹೋಗುವಾಗ ತಿಂಡಿ ಪ್ಯಾಕ್‌ ಮಾಡಿ ಕೊಡುತ್ತಿದ್ದರು.

ರಕ್ಷಿತ್‌ ಅಷ್ಟು ತಿನ್ನುವುದನ್ನು ನೋಡಿ ದೀಪಾಗೆ ಆಶ್ಚರ್ಯವಾಗುತ್ತಿತ್ತು. ದೀಪಾ ಅತ್ತೆಯೊಂದಿಗೆ ಸ್ವಲ್ಪ ಹೊತ್ತು ಮಾತನಾಡುತ್ತಿದ್ದಳು. ಮಾವನೊಂದಿಗೆ ಮಾತುಕಥೆ ಬಹಳ ಅಪರೂಪವಾಗಿತ್ತು. ಆದರೆ ರಕ್ಷಿತ್‌ ಅಪ್ಪನೊಂದಿಗೆ ಬಹಳ ಹರಟುತ್ತಿದ್ದ.

ಅಲ್ಲಿಂದ ಬಂದ ಮೇಲೆ ದೀಪಾ ಒಮ್ಮೊಮ್ಮೆ ಹೇಳುತ್ತಿದ್ದಳು, “ನೋಡಿದ್ಯಾ ರಕ್ಷಿತ್‌, ಅತ್ತೆ ಮಾವನಿಗೆ ನನ್ನ ಮೇಲೆ ಪೂರ್ವಾಗ್ರಹ ಇದೆ. ಇಬ್ಬರೂ ನನ್ನ ಜೊತೆ ಮಾತನಾಡಲೇ ಇಲ್ಲ. ನೀನಂತೂ ಅವರ ಖುಷಿಗಾಗಿ ನನ್ನನ್ನು ಬೊಂಬೆ ತರಹ ಇಲ್ಲಿಗೆ ಕರ್ಕೊಂಡು ಬರ್ತೀಯ.”

ರಕ್ಷಿತ್‌ ಅವಳಿಗೆ ಸಮಾಧಾನ ಮಾಡುತ್ತಿದ್ದ, “ಹಾಗೇನಿಲ್ಲ ದೀಪಾ, ನಮ್ಮಪ್ಪ ಅಮ್ಮ ನಮ್ಮಿಬ್ಬರನ್ನೂ ಸಮಾನವಾಗಿ ಪ್ರೀತಿಸುತ್ತಾರೆ. ಆದರೆ ಅವರು ಮುಗ್ಧರು. ಅವರಿಗೆ ತಮ್ಮ ಪ್ರೀತೀನ ಪ್ರದರ್ಶಿಸೋಕೆ ಬರಲ್ಲ. ಆಡಂಬರ ಗೊತ್ತಿಲ್ಲ.”

ಅತ್ತ ಸೊಸೆ ಹೋದ ನಂತರ ಶೈಲಜಾ ಗಂಡನಿಗೆ ಹೇಳುತ್ತಿದ್ದರು, “ನೋಡಿದ್ರಾ, ಇಷ್ಟು ಹೊತ್ತು ಮನೆಯಲ್ಲಿದ್ದಳು. ಒಂದು ಮಾತು ಆಡಲಿಲ್ಲ. ಇಷ್ಟೆಲ್ಲಾ ಅಡುಗೆ ಮಾಡಿ ತಿನ್ನಿಸಿದೆ ಆದರೂ ಏನೂ ಹೇಳಲಿಲ್ಲ. ಇವರಿಗೆ ಈ ತರಹ ಮಾಡಿ ಯಾರು ಬಡಿಸ್ತಾರೋ ಗೊತ್ತಿಲ್ಲ.”

ಮುಂದಿನ ಭಾನುವಾರ ಬರುತ್ತೇನೆಂದು ಹೇಳಿದ್ದ ರಕ್ಷಿತ್‌, ದೀಪಾ ಬರಲಿಲ್ಲ. ಅವರಿಂದ ಫೋನ್‌ ಕೂಡ ಬರಲಿಲ್ಲ. ನಿಧಾನವಾಗಿ ಕತ್ತಲಾಯಿತು. ಶೈಲಜಾ ಸಂಪೂರ್ಣ ಭರವಸೆಯಿಂದ ಅಡುಗೆ ಮಾಡಿಟ್ಟು ಕಾಯತೊಡಗಿದರು. ಕಾದು ಕಾದು ಬೇಸತ್ತ ಪ್ರಸಾದ್‌, “ನಡಿ, ನಾವು ಊಟ ಮಾಡೋಣ. ಬಹುಶಃ ಅವರು ಸಿನಿಮಾ ನೋಡೋಕೆ ಅಥವಾ ಎಲ್ಲಾದರೂ ಸುತ್ತಾಡೋಕೆ ಹೋಗಿರಬಹುದು,” ಎಂದರು. ಶೈಲಜಾರ ಕಣ್ಣು ತುಂಬಿಬಂದವು,

“ದೀಪಾಳಂತೂ ಬೇರೆ ಮನೆಯಿಂದ ಬಂದವಳು. ಆದರೆ ನಮ್ಮ ಮಗನಿಗೇ ಕಾಳಜಿ ಇಲ್ಲ. ನಮ್ಮ ಬಗ್ಗೆ ಚೂರೂ ಚಿಂತೆ ಇಲ್ಲ. ಮನೆಯಿಂದ ಆಗಲೇ ಬೇರೆ ಹೋದ. ಈಗ ಕೈಗಳಿಂದಲೂ ಜಾರಿದ್ದಾನೆ. ತಿಂಗಳಿಗೆ 1-2 ಬಾರಿ ಬಂದು 1 ಗಂಟೆಯಾದರೂ ಇದ್ದು ಮಾತನಾಡಿಸಿಕೊಂಡು ಹೋಗೋನು. ಈಗ ಅದೂ ಇಲ್ಲ. ಅವನಿಗೆ ನನ್ನ ಪ್ರೀತಿ ಬೇಡ. ಒಂದು ಸಾರಿ ಅವನಿಗೆ ಫೋನ್‌ ಮಾಡಿ,” ಇಷ್ಟು ಹೇಳುವಷ್ಟರಲ್ಲಿ ಅವರ ಕಂಠ ತುಂಬಿ ಬಂತು.

ಪ್ರಸಾದ್‌ರಿಗೂ ಅಷ್ಟೇ ದುಃಖವಾಗಿತ್ತು. ಅವರು ಕೂಡಲೇ, “ನೀನು ಹೇಳೋವರ್ಗೂ ನನಗೆ ಗೊತ್ತಾಗಲ್ವಾ? ಆಗ್ಲಿಂದ ಫೋನ್‌ ಮಾಡ್ತಾನೇ ಇದ್ದೀನಿ, ಅವನ ಫೋನ್‌ ಸ್ವಿಚ್‌ ಆಫ್‌ ಅಂತ ಬರ್ತಿದೆ,” ಎಂದರು.

ಶೈಲಜಾ ದೀರ್ಘವಾಗಿ ಉಸಿರೆಳೆದುಕೊಂಡು, “ನೀವಂತೂ ಲ್ಯಾಂಡ್‌ ಲೈನ್‌ ಫೋನ್‌ ತೆಗೆಸಿಬಿಟ್ರಿ. ಬೇಡಾಂದ್ರೂ ಕೇಳಲಿಲ್ಲ. ನಾನು ಹೇಳೋದು ನೀವು ಕೇಳೋದಿಲ್ಲ,” ಎಂದರು.

ಶೈಲಜಾ ಅಂದು ರಾತ್ರಿ ಹೊರಳಾಡುತ್ತಾ ಕಳೆದರು. ಮರುದಿನ 9 ಗಂಟೆಗೆ ಅವರು ಆಫೀಸಿಗೆ ಫೋನ್‌ ಮಾಡಿದಾಗ ಅವನು 3 ದಿನಗಳಿಂದ ಆಫೀಸಿಗೆ ಬಂದಿಲ್ಲ, ಅವನ ಹೆಂಡತಿಗೆ ಅನಾರೋಗ್ಯ ಎಂದು ತಿಳಿಯಿತು. ಶೈಲಜಾರಿಗೆ ಬಹಳ ಚಿಂತೆಯಾಯಿತು. ಏನಾಯಿತು ದೀಪಾಗೆ? ಪಾಪ, ರಕ್ಷಿತ್‌ಗೆ ಬಹಳ ತೊಂದರೆಯಾಗಿರಬೇಕು. ಅವನು ನನಗೆ ಹೇಳಲೇ ಇಲ್ಲ. ಅವರು ಬೇಗ ಅಡುಗೆ ಮಾಡಿ ಟಿಫಿನ್‌ ಬಾಕ್ಸಿನಲ್ಲಿ ಹಾಕಿಕೊಂಡು ಸಿದ್ಧರಾದರು. ಪ್ರಸಾದ್‌ಗೆ ಯಾವುದೋ ಅರ್ಜೆಂಟ್‌ ಕೆಲಸವಿತ್ತು. ಹೀಗಾಗಿ ಅವರು ತಮ್ಮ ಪರಿಚಿತ ಆಟೋದವನಿಗೆ ರಕ್ಷಿತ್‌ನ ಮನೆ ವಿಳಾಸ ಕೊಟ್ಟು ಶೈಲಜಾರನ್ನು ಅವನ ಜೊತೆ ಕಳಿಸಿದರು. ಶೈಲಜಾ ಬೆಲ್‌ ಮಾಡಿದಾಗ ರಕ್ಷಿತ್‌ ಬಂದು ಬಾಗಿಲು ತೆರೆದ. ಅಮ್ಮನನ್ನು ನೋಡಿ ಬೆಚ್ಚಿ, “ಅಮ್ಮಾ, ನೀವು?” ಎಂದ.

“ಒಳಗೆ ಬರೋಕೆ ಬಿಡ್ತಿಯೋ? ಬಾಗಿಲಲ್ಲೇ ಎಲ್ಲ ಪ್ರಶ್ನೆಗಳನ್ನೂ ಕೇಳ್ತಿಯೋ? ದೂರ ಬಂದ್ಬಿಟ್ಟೆ ನೀನು. ದೀಪಾಳ ಆರೋಗ್ಯ ಸರಿಯಿಲ್ಲಾಂತ ತಿಳೀತು. ಡಾಕ್ಟರ್‌ಗೆ ತೋರಿಸಿದೆಯಾ?”

ನಂತರ ಸ್ವಲ್ಪ ಹೊತ್ತಿನಲ್ಲೇ ಶೈಲಜಾರ ಅನುಭವಿ ಕೈಗಳು ಮನೆಯ ಜವಾಬ್ದಾರಿ ವಹಿಸಿಕೊಂಡವು. ಇಡೀ ಮನೆ ಅಸ್ತ್ಯವ್ಯಸ್ತವಾಗಿತ್ತು. ಜೊತೆಗೆ 3 ದಿನಗಳಿಂದ ಕೆಲಸದವಳು ಬಂದಿರಲಿಲ್ಲ. 3 ದಿನಗಳಿಂದ ದೀಪಾಗೆ ವಾಂತಿಯಾಗುತ್ತಿತ್ತು, ಹೊಟ್ಟೆ ನೋವಿತ್ತು. ಮನೆಯಲ್ಲಿ ಹರಡಿದ್ದ ವಸ್ತುಗಳನ್ನು ಜೋಡಿಸುತ್ತಾ ಶೈಲಜಾ ಹೇಳಿದರು, “ನನಗೆ ಒಂದು ಫೋನ್‌ ಮಾಡಿ ಹೇಳಬಹುದಾಗಿತ್ತು. ನಾನೇನು ಸತ್ತೋಗಿದ್ನಾ? ಇಂತಹ ಸಂದರ್ಭಗಳಲ್ಲಿ ಒಬ್ಬರ ಆಸರೆ ಬೇಕಾಗುತ್ತೆ,“ ಎಂದರು.

ರಕ್ಷಿತ್‌ ಎಷ್ಟು ಬೇಡವೆಂದರೂ ಕೇಳದೆ ಶೈಲಜಾ ಎಂಜಲು ಪಾತ್ರೆಗಳನ್ನೆಲ್ಲಾ ತೊಳೆದರು. ಮನೆಯನ್ನೆಲ್ಲಾ ಸ್ವಚ್ಛಗೊಳಿಸಿದರು. ಒದ್ದೆ ಬಟ್ಟೆಯಿಂದ ಒರೆಸಿದರು. ದೀಪಾಗೆ ತಿಳಿಸಾರು, ಗೊಜ್ಜು ತಯಾರಿಸಿ ಒಗೆಯುವ ಬಟ್ಟೆಗಳನ್ನು ಸೋಪು ನೀರಿನಲ್ಲಿ ನೆನೆಸಿದರು. ದೀಪಾ ಮಲಗಿಕೊಂಡೇ ಇದೆಲ್ಲವನ್ನೂ ನೋಡುತ್ತಿದ್ದಳು. ಮಧ್ಯಾಹ್ನದ ಊಟಕ್ಕೆ ಮೊದಲೇ ಶೈಲಜಾ ಇಡೀ ಮನೆಯನ್ನು ಹೊಳೆಯುವಂತೆ ಮಾಡಿದರು. ದೀಪಾಗೆ ಊಟ ತಿನ್ನಿಸಿ ಅವರು ಮತ್ತೆ ಕೆಲಸದಲ್ಲಿ ತೊಡಗಿದರು. ಇದೆಲ್ಲ ಮಾಡುತ್ತಾ, `ತಮ್ಮ ಮಗ ಎಂದೂ ತಾನೇ 1 ಲೋಟ ನೀರು ಹಿಡಿದುಕೊಂಡು ಕುಡಿಯುತ್ತಿರಲಿಲ್ಲ. ಆದರೆ ಈಗ ಆಫೀಸ್‌ಗೆ ರಜಾ ಹಾಕಿ ಹೆಂಡತಿಯ ಚಾಕರಿ ಮಾಡುತ್ತಿದ್ದಾನೆ,’ ಎಂದೂ ಯೋಚಿಸುತ್ತಿದ್ದರು.

ಅವರು ನೀರು ಕಾಯಿಸಿ ದೀಪಾಳ ತಲೆ, ಮೈ ಸ್ವಚ್ಛಗೊಳಿಸಿದರು. ಅವಳ ಬಟ್ಟೆ ಬದಲಿಸಿದರು. ಬೆಡ್‌ಶೀಟ್‌, ರಗ್‌ ಬದಲಿಸಿದರು. ಸಂಜೆಯೊಳಗಾಗಿ ಮನೆಯ ರೂಪವೇ ಬದಲಾಯಿತು. ಮನೆಗೆಲಸದ ನಂತರ ಶೈಲಜಾ ಸೊಸೆಯ ತಲೆಗೆ ಮಸಾಜ್‌ ಮಾಡತೊಡಗಿದರು. ದೀಪಾ ಅವರ ಕೈ ಹಿಡಿದು, “ಅತ್ತೆ, ನೀವು ಬಂದಿದ್ದು ಬಹಳ ಒಳ್ಳೆಯದಾಯಿತು. ಇವತ್ತು ರಾತ್ರಿ ಇಲ್ಲೇ ಇರಿ,” ಎಂದಳು.

“ನಾನೂ ಅದೇ ಯೋಚಿಸುತ್ತಿದ್ದೀನಿ. ಇಂತಹ ಸ್ಥಿತಿಯಲ್ಲಿ ನಿನ್ನನ್ನು ಬಿಟ್ಟು ಹೋಗೋದು ಸರಿಯಲ್ಲ. ರಕ್ಷಿತ್‌, ನಿಮ್ಮಪ್ಪನಿಗೆ  ಫೋನ್‌ ಮಾಡು. ನಿನ್ನೆ ಅವರು ನಿನಗೆ ಹಲವಾರು ಬಾರಿ ಫೋನ್‌ ಮಾಡಿದ್ದರು.”

“ಅಯ್ಯೋ, ಅಮ್ಮಾ, ದೀಪಾಳ ಚಿಂತೆಯಲ್ಲಿ ಫೋನ್‌ ಮಾಡೋದೇ ಮರೆತಿದ್ದೆ. ಫೋನ್‌ ಸ್ವಿಚ್‌ ಆಫ್‌ ಆಗಿದೆ ಸಾರಿ,” ಎಂದು ಫೋನ್‌ನ್ನು ಚಾರ್ಜಿಗೆ ಹಾಕಿದ.

ನಂತರ, “ನೀವು ಇವತ್ತು ಇಲ್ಲೇ ಉಳಿದುಕೊಳ್ತೀರೀಂತ ಅಪ್ಪನಿಗೆ ಹೇಳ್ತೀನಿ. ಅವರಿಗೆ ತೊಂದರೆ ಆಗಬಹುದು. ಆದರೆ…..” ಎಂದ.

“ಏನೂ ತೊಂದರೆ ಆಗಲ್ಲ…. ಹೋಟೆಲ್ನಲ್ಲಿ ತಿನ್ನೋ ಅವಕಾಶ ಸಿಗೋದ್ರಿಂದ ಅವರಿಗೆ ಖುಷಿಯಾಗುತ್ತೆ. ದೀಪಾ, ನಿನಗೆ ಸೂಪ್‌ ಮಾಡಿಕೊಡ್ಲಾ?” ಎಂದರು.

“ಅತ್ತೆ, ಮನೆಯಲ್ಲಿ ಯಾವ ತರಕಾರಿ ಇಲ್ಲ. ಏನು ಸೂಪ್‌ ಮಾಡಿಕೊಡ್ತೀರಾ?”

“ಅದರ ಬಗ್ಗೆ ಏನೂ ಯೋಚಿಸಬೇಡ. ನಾನೆಲ್ಲಾ ತಂದಿದ್ದೀನಿ.”

ಸೊಸೆ ರಾತ್ರಿ ಅಲ್ಲೇ ತಂಗಲು ಹೇಳಿದಾಗ ಶೈಲಜಾರಿಗೆ ಖುಷಿಯಾಯಿತು. ಮಗನ ಮನೆಗೆ ಬಂದಾಗ ಅವರಿಗೆ ಬಹಳ ಕೋಪ ಬಂದಿತ್ತು. ಸೊಸೆಗೆ ಮನೆಯನ್ನು ಸಂಭಾಳಿಸೋಕೆ ಆಗಲ್ಲ. ಮನೆಯಲ್ಲಿ ಒಂದು ಪದಾರ್ಥ ಅದರದರ ಜಾಗದಲ್ಲಿ ಇಲ್ಲ. ರಕ್ಷಿತ್‌ ಅಂತೂ ಹೆಂಡತಿಯ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಅವಳ ಕೂದಲು ನೇವರಿಸುತ್ತಾನೆ. ಅವಳ ಕಾಲ್ಲೊತ್ತುತ್ತಾನೆ. ಇವೆಲ್ಲ ಮಾಡೋಕೆ ಅವನಿಗೆ ಒಂದು ಚೂರೂ ನಾಚಿಕೆ ಆಗಲ್ಲ. ಸೊಸೇನೂ ಗೌನು ಧರಿಸಿ ಮಲಗಿರುತ್ತಾಳೆ. ಆದರೆ ಮಗನ ಕಷ್ಟಸುಖಗಳಲ್ಲಿ ಅಮ್ಮ ಪಾಲ್ಗೊಳ್ಳದಿದ್ದರೆ ಅವಳಿದ್ದೂ ಏನು ಪ್ರಯೋಜನ? ಹೀಗಾಗಿ ಮನಸ್ಸಿನ ವಿಷಯಗಳನ್ನು ಹೊರಗೆ ಹೇಳಿಕೊಳ್ಳಲಿಲ್ಲ.

ಶೈಲಜಾ ಅಲ್ಲಿಗೆ ಬಂದಾಗಿನಿಂದ ಒಂದು ಕ್ಷಣ ಕೂರಲಿಲ್ಲ. ಅವರು ರಕ್ಷಿತ್‌ ಮತ್ತು ದೀಪಾರ ಬಗ್ಗೆ ಕಾಳಜಿ ವಹಿಸಿದ್ದರು. ಸಂಜೆ ಅವರು ದೀಪಾಳ ಬಳಿ ಕೂತು, “ರಾತ್ರಿ ಊಟಕ್ಕೆ ಏನು ಮಾಡಲಿ? ಅನ್ನ, ತೊವ್ವೆ ಅಥವಾ ರೊಟ್ಟಿ, ಪಲ್ಯ? ನಿನಗೆ ಯಾವುದಿಷ್ಟ?” ಎಂದು ಕೇಳಿದರು.

“ಅತ್ತೆ, ನೀವು ಬಂದಾಗಿನಿಂದ ದುಡಿಯುತ್ತಿದ್ದೀರಿ. ಸ್ವಲ್ಪ ಹೊತ್ತು  ರೆಸ್ಟ್ ತಗೊಳ್ಳಿ. ರಕ್ಷಿತ್‌ ಹೋಟೆಲ್‌ನಿಂದ……”

“ಈ ಸ್ಥಿತೀಲಿ ಯಾರಾದ್ರೂ ಹೋಟೆಲ್‌ ತಿಂಡಿ ತಿಂತಾರಾ? ನಿನಗೆ ಮನೆಯಲ್ಲಿ ಶುದ್ಧವಾಗಿ ಮಾಡಿದ ಪೌಷ್ಟಿಕ ಆಹಾರವೇ ಸರಿ. ಕುಕ್ಕರ್‌ ಇಡೋಕೆ ಎಷ್ಟು ಹೊತ್ತಾಗುತ್ತೆ? ನೀನು ಎದ್ದು ಕೂತರೆ ತಲೆಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡ್ತೀನಿ. ನಿನಗೆ ಆರಾಮವಾಗುತ್ತೆ. ಈಗಿನ ಹುಡುಗಿಯರು ಫ್ಯಾಷನ್‌ ಅಂತ ತಲೆಗೆ ಎಣ್ಣೆ ಹಚ್ಚಲ್ಲ.”

ರಕ್ಷಿತ್‌ ನಗುತ್ತಾ, “ಅಮ್ಮಾ, ನನ್ನನ್ನು ಮರೀಬೇಡ. ದೀಪಾ, ಅಮ್ಮನಿಂದ ಎಣ್ಣೆ ಹಚ್ಚಿಸಿಕೊಳ್ಳೋಕೆ ನಾವು ಅಣ್ಣತಮ್ಮಂದಿರು ಮತ್ತು ಅಪ್ಪ ಪರಸ್ಪರ ಜಗಳ ಆಡ್ತಿದ್ವಿ. ಪ್ರತಿ ಭಾನುವಾರ ಇದೇ ಕಾರ್ಯಕ್ರಮ. ಅಪ್ಪನಂತೂ ದಿನ ಎಣ್ಣೆ ಹಚ್ಚಿಸಿಕೊಳ್ಳುತ್ತಿದ್ದರು,” ಎಂದು ಹೇಳಿದ.

ದೀಪಾ ಎಣ್ಣೆ ಹಚ್ಚಿಸಿಕೊಳ್ಳುತ್ತಾ ನಿದ್ದೆ ಮಾಡಿಬಿಟ್ಟಳು. ಸ್ವಲ್ಪ ಹೊತ್ತಿನ ನಂತರ ಕಣ್ಣುಬಿಟ್ಟಾಗ ರಕ್ಷಿತ್‌ ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದನ್ನು ಕಂಡಳು, ಅವನ ಕೂದಲಲ್ಲಿ ಬೆರಳಾಡಿಸುತ್ತಾ ಅಮ್ಮ ಹೇಳುತ್ತಿದ್ದರು, “ರಕ್ಷಿತ್‌, ನಮ್ಮ ಮನೆ ಬಿಟ್ಟು ಇಲ್ಲಿ ಎಷ್ಟು ದಿನ ಇರೋಕೆ ಸಾಧ್ಯ? ಈ ಪರಿಸ್ಥಿತಿಯಲ್ಲಿ ದೀಪಾಳೊಬ್ಬಳನ್ನೇ ಬಿಟ್ಟು ಹೋಗೋಕೂ ಆಗಲ್ಲ. ಅವಳು ಬಹಳ ಮುಗ್ಧಳು. ನಿನ್ನ ಮನೆಯಲ್ಲಿ ಯಾವ ಸಾಮಾನೂ ಇಲ್ಲ. ಹಣದ ಸಮಸ್ಯೆ ಇರಬೇಕು. ಪಾಪ, ಅವಳಿಗೆ ಏನೂ ಆಸೆ ಇಲ್ಲ. ನನಗೆ ಅದು ಬೇಕು, ಇದು ಬೇಕು ಅಂತ ಕೇಳಲ್ಲ. ನಾನು ವಾಪಸ್‌ ಹೊರಟೋದ್ರೆ ಈ ಮನೆ ಚೆನ್ನಾಗಿರಲ್ಲ ಅಂತಿದ್ಲು.” ಸ್ವಲ್ಪ ಹೊತ್ತು ಸುಮ್ಮನಿದ್ದ ನಂತರ ಶೈಲಜಾ ಸಂಕೋಚದಿಂದ, “ದೀಪಾಳನ್ನು ಯಾಕೆ ನಮ್ಮ ಮನೆಗೆ ಕರೆತರಲ್ಲ? ಅಲ್ಲಿದ್ರೆ ಅವಳನ್ನು ಚೆನ್ನಾಗಿ ಗಮನಿಸಿಕೊಳ್ಳಬಹುದು. ಈಗ ಅವಳ ಆಹಾರ, ಪಾನೀಯಗಳನ್ನು ಚೆನ್ನಾಗಿ ಗಮನಿಸಿಕೊಳ್ಳಬೇಕು. ಅದು ನಿನ್ನ ಕೈಯಲ್ಲಿಲ್ಲ. ನನ್ನ ಜೊತೆಯಲ್ಲಿದ್ರೆ ಅವಳನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಅವಳು ಅಲ್ಲಿಗೆ ಬಂದರೆ ಅಪ್ಪನಿಗೂ ಖುಷಿಯಾಗುತ್ತೆ,” ಎಂದರು.

ರಕ್ಷಿತ್‌ ಎದ್ದು ಕುಳಿತ. ಅವನು ಅಮ್ಮನ ಕೈ ಒತ್ತಿ ಹೇಳಿದ, “ನಾನು ನಿಮ್ಮ ಮನದ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೇನೆ. ಆದರೆ ದೀಪಾಳನ್ನು ಒಂದು ಮಾತು ಕೇಳದೆ….?”

ಅಷ್ಟರಲ್ಲಿ ಕುಕ್ಕರ್‌ ಸೀಟಿ ಹೊಡೆಯಿತು. ಶೈಲಜಾ ಎದ್ದು ಅಡುಗೆಮನೆಗೆ ಹೋದರು. ಅಲ್ಲಿಂದ ಹಿಂತಿರುಗಿದಾಗ ದೀಪಾ ಎದ್ದು ಕೂರುತ್ತಾ, “ಅತ್ತೆ, ನೀವು ಎಣ್ಣೆ ಹಚ್ಚಿದ್ದು ಚಮತ್ಕಾರವನ್ನೇ ಮಾಡಿತು. ನಾನು ನಿದ್ದೆ ಮಾಡಿಬಿಟ್ಟೆ. ನೀವು ತಪ್ಪು ತಿಳಿದುಕೊಳ್ಳಲ್ಲಾಂದ್ರೆ ಒಂದು ಮಾತು ಹೇಳ್ತೀನಿ,” ಎಂದಳು.

“ಹೇಳು.”

“ಅತ್ತೇ, ಒಂದುವೇಳೆ ನಾವು ನಿಮ್ಮ ಜೊತೆ ಇದ್ದರೆ ನಿಮಗೇನೂ ತೊಂದರೆ ಆಗಲ್ವಾ? ನಾವು ಅಲ್ಲಿಗೆ ಬಂದರೆ ನಿಮಗೆ ಕೆಲಸ ಹೆಚ್ಚಾಗುತ್ತೆ. ನಿಮ್ಮ ಜೊತೇಲಿದ್ದರೆ ನಾನು ಖುಷಿಯಾಗಿರ್ತೀನಿ. ನಾನು ಬಂದ್ರೆ ಮಾವನವರಿಗೂ ಖುಷಿಯಾಗುತ್ತಲ್ವಾ…..?” ಎಂದಳು.

“ಏನು ಮಾತಾಡ್ತೀಯಾ ದೀಪಾ, ಅದೂ ನಿನ್ನ ಮನೆಯೇ! ನಡಿ ರಕ್ಷಿತ್‌, ಎಲ್ಲಾ ಪ್ಯಾಕಿಂಗ್‌ ಮಾಡ್ಕೋ, ನಾವು ಬೆಳಗ್ಗೆನೇ ಹೊರಡೋಣ. ಬೆಳಗಿನ ತಿಂಡಿ ಅಲ್ಲೇ ತಿನ್ನೋಣ. ಅಪ್ಪನಿಗೆ ಫೋನ್‌ ಮಾಡು. ದೀಪಾ, ತುಂಬಾ ಅಗತ್ಯವಿರುವ ಬಟ್ಟೆಗಳನ್ನು ಎತ್ತಿಟ್ಕೋ. ಮಿಕ್ಕಿದ್ದು ಆಮೇಲೆ  ರಕ್ಷಿತ್‌ ತರ್ತಾನೆ. ಮರೆಯದೆ ನಿನ್ನ ಗೌನ್‌ ಎತ್ತಿಟ್ಕೋ.”

ರಕ್ಷಿತ್‌ ಮತ್ತು ದೀಪಾ ಪರಸ್ಪರ ಮುಖ ನೋಡಿಕೊಂಡರು. ಶೈಲಜಾ ಸಿಡುಕುತ್ತಾ, “ಹೀಗ್ಯಾಕೆ ಮುಖ ನೋಡ್ಕೋತೀರಾ? ನನ್ನ ಸೊಸೆಯೇನೂ ಹಳ್ಳಿ ಗುಗ್ಗು ಅಲ್ಲ. ಪತ್ರಿಕೇಲಿ ಕೆಲಸ ಮಾಡ್ತಾಳೆ. ಅವಳಪ್ಪ ವಿದೇಶಗಳಲ್ಲಿ ಲೆಕ್ಚರ್‌ ಕೊಡ್ತಾರೆ,” ಎಂದರು.

ರಕ್ಷಿತ್ ಉತ್ಸಾಹದಿಂದ ಪ್ಯಾಕ್‌ ಮಾಡಿ ಅಮ್ಮನಿಗೆ ಕೊಡತೊಡಗಿದ. ಅವರು ಜೋಡಿಸತೊಡಗಿದರು. ಮರುದಿನ ಬೆಳಗ್ಗೆ ಶೈಲಜಾ ದೀಪಾಳನ್ನು ಎಬ್ಬಿಸಿ, ಅವಳಿಗೆ ಬಟ್ಟೆ ಧರಿಸಲು ಸಹಾಯ ಮಾಡಿದರು. ರಕ್ಷಿತ್‌ ಬ್ಯಾಗುಗಳನ್ನು ಎತ್ತಿಕೊಂಡು ಆಚೆ ಹೊರಟಾಗ ಶೈಲಜಾ ಕೂಡ ದೀಪಾಳ ಕೈ ಹಿಡಿದು ಹೊರಟರು. ಆಚೆ ಬಂದಾಗ ದೀಪಾ, “ತಗೊಳ್ಳಿ ಕೀ, ಬೀಗ ಹಾಕಿಬಿಡಿ,” ಎಂದಳು.

ಶೈಲಜಾ ಬೀಗ ಹಾಕಿ ಕೀ ವಾಪಸ್‌ ಕೊಡಲು ಹೋದಾಗ, “ಅಮ್ಮಾ, ನೀವಿರುವಾಗ ಅದರ ಮೇಲೆ ನನಗೆ ಯಾವುದೇ ಹಕ್ಕಿಲ್ಲ. ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ,” ಎಂದಳು ದೀಪಾ.

ಶೈಲಜಾ ಸೊಸೆಯನ್ನು ಪ್ರೀತಿಯಿಂದ ನೋಡುತ್ತಾ  ಹೇಳಿದರು, “ಅಮ್ಮ ಅಂದಿದ್ದೀಯ. ಈಗ ಇದನ್ನು ನನ್ನ ಬಳಿಯೇ ಇಟ್ಟುಕೊಳ್ಳಬೇಕು,” ಎಂದು ಅವಳ ಕೈ ಹಿಡಿದು ಮೆಟ್ಟಿಲು ಇಳಿಯತೊಡಗಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ