ನೀವು ವಿವಾಹ ಬಂಧನದಲ್ಲಿ ಬಂಧಿಸಲ್ಪಟ್ಟಾಗ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರಿಸುತ್ತವೆ. ಜೀವನದಲ್ಲಿ ಪ್ರೀತಿಯ ಜೊತೆ ಜೊತೆಗೆ ಜವಾಬ್ದಾರಿಗಳು ಕೂಡ ಬೆಸೆದು ಕೊಂಡಿರುತ್ತವೆ. ನೀವು ಸಂಗಾತಿಯ ಜೊತೆ ಜೊತೆಗೆ ಅವರ ಕುಟುಂಬದವರನ್ನು ಕೂಡ ಹೃದಯಪೂರ್ವಕವಾಗಿ ಸ್ವೀಕರಿಸುತ್ತೀರಿ. ಆಗ ನಿಮ್ಮ ಜೀವನದಲ್ಲಿ ಎಂದೂ ಮುಗಿಯದ ಖುಷಿಯ ಆಗಮನವಾಗುತ್ತದೆ.
ಗಂಡಹೆಂಡತಿಯ ಸಂಬಂಧ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಅದರಲ್ಲಿ ಪ್ರೀತಿಯ ಜೊತೆ ಜೊತೆಗೆ ಒಳ್ಳೆಯ ಕೆಟ್ಟ ಮಾತುಗಳನ್ನು ಸ್ವೀಕರಿಸುವ ಭಾವನೆ ಕೂಡ ಇರುತ್ತದೆ. ಈ ಕುರಿತಂತೆ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಆದರೆ ಒಂದು ಮಾತಂತೂ ಸತ್ಯ. ನಿಮ್ಮ ಸಂಬಂಧದ ಮೇಲೆ ನಿಮ್ಮ ತಂದೆತಾಯಿಯ ಪರಸ್ಪರ ಸಂಬಂಧ ಹೇಗಿತ್ತು ಎನ್ನುವುದು ಕೂಡ ಪ್ರಭಾವ ಬೀರುತ್ತದೆ. ನಿಮ್ಮ ವ್ಯಕ್ತಿತ್ವದ ಮೇಲೆ ನಿಮ್ಮ ಪೋಷಕರ ಛಾಪು ಇದ್ದೇ ಇರುತ್ತದೆ. ಜೀವನದ ಬಗೆಗೆ ನಿಮ್ಮ ದೃಷ್ಟಿಕೋನದಲ್ಲಿ ಸಾಕಷ್ಟು ಮಟ್ಟಿಗೆ ನಿಮ್ಮ ಪೋಷಕರ ಪ್ರಭಾವ ಗೋಚರಿಸುತ್ತದೆ.
ಎಷ್ಟೋ ಸಲ ಇಷ್ಟವಿಲ್ಲದಿದ್ದಾಗ್ಯೂ ನೀವು ನಿಮ್ಮ ಪೋಷಕರ ದುಶ್ಚಟಗಳನ್ನು ಕಲಿತುಕೊಂಡು ಬಿಡುವಿರಿ. ಅವು ಗೊತ್ತಿದ್ದೊ ಗೊತ್ತಿಲ್ಲದೆಯೊ ನಿಮ್ಮ ಸಂಬಂಧದ ಮೇಲೆ ಪ್ರಭಾವ ಬೀರುತ್ತವೆ.
ಒಂದು ವೇಳೆ ನಿಮ್ಮಲ್ಲಿ ಪೋಷಕರ ಯಾವುದಾದರೂ ಅಭ್ಯಾಸದಿಂದ ಸಂಗಾತಿಯ ಜೊತೆಗೆ ಸಂಬಂಧದಲ್ಲಿ ಇರಸುಮುರುಸು ಉಂಟಾಗುತ್ತಿದ್ದರೆ, ಆ ಅಭ್ಯಾಸವನ್ನು ತೊರೆಯಲು ಪ್ರಯತ್ನಿಸಿ.
ಒಮ್ಮೆ ಒಲುಮೆ ಇನ್ನೊಮ್ಮೆ ಮುನಿಸು
ರಿಲೇಶನ್‌ಶಿಪ್ ಕೌನ್ಸೆಲರ್ ಡಾ. ಶಶಿಕಲಾ ಅವರ ಪ್ರಕಾರ, ಗಂಡಹೆಂಡತಿಯ ಸಂಬಂಧ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಅದು ಪ್ರೀತಿ ಮತ್ತು ಮುನಿಸು ಎರಡರ ಸಂಗಮವೇ ಹೌದು. ಆದರೆ ಈ ಮುನಿಸು ಅಥವಾ ದೂರುಗಳು ಮಿತಿ ಮೀರಿದಾಗ, ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಸಮಯ ಹಿಡಿಯುವುದಿಲ್ಲ. ವಾಸ್ತವ ಸಂಗತಿ ಏನೆಂದರೆ, ಗಂಡಹೆಂಡತಿಯ ಸಂಬಂಧ ತಮ್ಮ ಪೋಷಕರ ಹಾಗೆಯೇ ಇರಬೇಕೆಂದು ಬಯಸುತ್ತಾರೆ. ಈ ಕಾರಣದಿಂದಾಗಿಯೇ ಸಂಬಂಧದಲ್ಲಿ ನಿಕಟತೆ ದೂರವಾಗುತ್ತದೆ. ಗಂಡಹೆಂಡತಿ ಪರಸ್ಪರರ ಮೇಲೆ ದೋಷಾರೋಪಣೆ ಮಾಡಲು ಆರಂಭಿಸಿದಾಗ ಸಂಬಂಧದಲ್ಲಿ ಪ್ರೀತಿ ಉಸಿರುಗಟ್ಟತೊಡಗುತ್ತದೆ. ಆಗ ಸಣ್ಣಸಣ್ಣ ಮಾತಿಗೂ ಇಬ್ಬರೂ ವಾದವಿವಾದಕ್ಕೆ ಇಳಿಯತೊಡಗುತ್ತಾರೆ. ಸಾಮಾನ್ಯವಾಗಿ ಹೆಂಡತಿಯರು ಗಂಡ ತನಗೆ ಸಮಯ ಕೊಡುತ್ತಿಲ್ಲ ಎಂದು ದೂರುತ್ತಾರೆ. ಆಫೀಸಿನಿಂದ ಮನೆಗೆ ಬರುತ್ತಿದ್ದಂತೆ ಹೆಂಡತಿ ತನ್ನ ದೂರುಗಳ ಸರಮಾಲೆಯನ್ನೇ ಇಡುತ್ತಾಳೆನ್ನುವುದು ಗಂಡನ ತಕರಾರು ಆಗಿರುತ್ತದೆ. ಸಾಮಾನ್ಯವಾಗಿ ಗಂಡಹೆಂಡತಿಯರಲ್ಲೂ ಈ ತೆರನಾದ ಅಭ್ಯಾಸಗಳು ಅವರ ತಂದೆತಾಯಿಯರಿಂದಲೇ ಬರುತ್ತವೆ. ಒಂದುವೇಳೆ ಪೋಷಕರ ಅಭ್ಯಾಸಗಳನ್ನು ನಿಮ್ಮ ಮೇಲೆ ಹೇರಲಾಗುತ್ತಿದ್ದರೆ, ಇಷ್ಟವಿಲ್ಲದಿದ್ದರೂ ನೀವು ಅವುಗಳಿಗೆ ಶರಣಾಗಿಬಿಡುವಿರಿ. ಸುಖಮಯ ದಾಂಪತ್ಯಕ್ಕೆ ನೀವು ನಿಮ್ಮ ಸಂಗಾತಿಯ ಒಳಿತು ಕೆಡುಕುಗಳನ್ನು ಸಮನಾಗಿ ಸ್ವೀಕರಿಸಿ. ನಿಮ್ಮ ತಂದೆತಾಯಿಯರಲ್ಲಿದ್ದ ನಕಾರಾತ್ಮಕ ಸಂಗತಿಗಳು ನಿಮ್ಮ ಜೀವನದಲ್ಲಿ ಪ್ರವೇಶಿಸದಂತೆ ಎಚ್ಚರ ವಹಿಸಿ.
ಯಾವ ಪೋಷಕರ ಅಭ್ಯಾಸಗಳು ಸಂಬಂಧಗಳನ್ನು `ಟೇಕನ್ ಫಾರ್ ಗ್ರ್ಯಾಂಟೆಡ್’ ಆಗಿದ್ದರೆ ಅವರ ಮಕ್ಕಳು ಕೂಡ ಅದನ್ನು ಹಾಗೆಯೇ ಭಾವಿಸುತ್ತಾರೆ. ಈ ತೆರನಾದ ಯೋಚನೆಗಳು ಸಂಬಂಧವನ್ನು ಚಿಗುರಲು ಅವಕಾಶ ಕೊಡುವುದಿಲ್ಲ. ಗಂಡಹೆಂಡತಿ ಪರಸ್ಪರರಿಗೆ ಪೂರಕವಾಗಿದ್ದರೆ, ಇಬ್ಬರೂ ಜೊತೆ ಜೊತೆಗೆ ಒಗ್ಗಟ್ಟಿನಿಂದ ಸಾಗುತ್ತಿದ್ದರೆ ಜೀವನದ ಗಾಡಿಯ ಓಟ ಸುಗಮವಾಗಿರುತ್ತದೆ. ಒಂದು ವೇಳೆ ಇಬ್ಬರ ಸಂಬಂಧದಲ್ಲಿ ಘರ್ಷಣೆ ಉಂಟಾದರೆ ಸಂಬಂಧದ ಎಳೆ ತುಂಡಾಗುವುದರಲ್ಲಿ ಸಂದೇಹವೇ ಇಲ್ಲ. ಸಂಬಂಧವನ್ನು ಸಹಜವಾಗಿ ಮುಂದುವರಿಸಿಕೊಂಡು ಹೋಗಲು, ಸಂಗಾತಿಯನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಅಂದುಕೊಳ್ಳುವ ತಪ್ಪು ಮಾಡಬೇಡಿ. ಸಂಗಾತಿಯನ್ನು ಸ್ನೇಹಿತ, ಸಹಪ್ರಯಾಣಿಕ ಎಂಬಂತೆ ಭಾವಿಸಿ, ಅವನೊಂದಿಗೆ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ.
ನಾನೇ ಸರಿ ಎನ್ನುವ ಭಾವನೆ ತಪ್ಪು
ಒಂದು ವೇಳೆ ನಿಮ್ಮ ಪೋಷಕರ ಅಭ್ಯಾಸ ಏನೇ ಮಾಡಿದರೂ `ನಾನೇ ಸರಿ’ ಎಂಬಂತಿದ್ದರೆ, ಗೊತ್ತಿದ್ದೊ ಗೊತ್ತಿಲ್ಲದೆಯೊ ಅದು ನಿಮ್ಮನ್ನು ಕೂಡ ಆವರಿಸಿಕೊಂಡಿರಬಹುದು. ನಿಮ್ಮ ಈ ತೆರನಾದ ಯೋಚನೆಯನ್ನು ಬದಲಿಸಿಕೊಳ್ಳಿ. ಇತ್ತೀಚಿನ ವರ್ಷಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಮನೆಯ ಜವಾಬ್ದಾರಿಗಳನ್ನು ಇಬ್ಬರೂ ಸೇರಿ ನಿಭಾಯಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಇಬ್ಬರ ಅಭಿಪ್ರಾಯಗಳಿಗೂ ಮಹತ್ವವಿದೆ. ನಿಮಗೂ ನಿಮ್ಮದೇ ಅಭಿಪ್ರಾಯ ಮುಖ್ಯ ಎಂಬ ಭಾವನೆಯಿದ್ದು, ಹೆಂಡತಿಯ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದರೆ ಆ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ನಿಮ್ಮ ಪ್ರತಿಯೊಂದು ಮಾತು ಸರಿಯಾಗಿರುತ್ತದೆ ಎಂದು ಹೇಳಲಾಗದು. ನಿಮ್ಮ ಸಂಗಾತಿಯ ಯೋಚನೆ ಹಾಗೂ ಮಾಡುತ್ತಿರುವ ಕೆಲಸ ಕೂಡ ಸರಿಯಾಗಿ ಇರಬಹುದು.
ಜವಾಬ್ದಾರಿಗಳಲ್ಲೂ ಸಮಪಾಲು
ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕರು ಎಂತಹ ವಾತಾವರಣದಲ್ಲಿ ಬೆಳೆಯುತ್ತಾರೆಂದರೆ, ಆ ಕುಟುಂಬದಲ್ಲಿ ಪತಿಯ ಕೆಲಸ ಹಣ ಗಳಿಸುವುದು ಹಾಗೂ ಹೆಂಡತಿಯ ಕೆಲಸ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದಾಗಿರುತ್ತದೆ. ನಿಮ್ಮ ತಂದೆಯು ತಾಯಿಗೆ ಹಣ ಕೊಟ್ಟು ಜವಾಬ್ದಾರಿಗಳಿಂದ ಮುಕ್ತರಾಗುತ್ತಿದ್ದರು ಹಾಗೂ ನಿಮ್ಮ ತಾಯಿ ಅಗತ್ಯ ಬಿದ್ದಾಗಲೂ ಕೂಡ ತಾವು ಮಾಡಿದ ಉಳಿತಾಯದ ಹಣದಿಂದ ಒಂದಿಷ್ಟು ಮೊತ್ತ ಕೊಡಲು ಹಿಂದೇಟು ಹಾಕುತ್ತಿದ್ದರು. ನಿಮ್ಮ ಯೋಚನೆ ಕೂಡ ಇದೇ ತೆರನಾಗಿದ್ದರೆ ಅದರಲ್ಲಿ ಬದಲಾವಣೆ ತಂದುಕೊಳ್ಳುವ ಅಗತ್ಯವಿದೆ. ಏಕೆಂದರೆ ಬದಲಾಗುತ್ತಿರುವ ಸನ್ನಿವೇಶ ಸಂಬಂಧದಲ್ಲಿ ಗಾಢತೆ ತಂದುಕೊಳ್ಳಲು ಗಂಡಹೆಂಡತಿ ಜವಾಬ್ದಾರಿಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಮನೆಗೆಲಸ ಪತ್ನಿಯ ಜವಾಬ್ದಾರಿ ಎಂದು ಗಂಡ ಯೋಚಿಸಬಾರದು. ಅದೇ ರೀತಿ ಮನೆ ಖರ್ಚುಗಳನ್ನು ನಿಭಾಯಿಸುವುದು ಪತಿಯ ಹೊಣೆಗಾರಿಕೆ ಎಂದು ಪತ್ನಿ ಯೋಚಿಸಬಾರದು.
ಕಾಲಕ್ಕೆ ತಕ್ಕಂತೆ ಬದಲಾಗಿ
ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಗಾಢತೆ ತಂದುಕೊಳ್ಳಲು ನೀವು ಕೆಲವು ಹಳೆಯ ವಿಚಾರಗಳಿಂದ ಹೊರಗೆ ಬರಬೇಕು. ನಿಮ್ಮ ತಾಯಿ ಯಾವ ರೀತಿಯ ಸೀರೆ ಉಡುತ್ತಿದ್ದರೊ, ಅದೇ ರೀತಿ ನಿಮ್ಮ ಪತ್ನಿ ಕೂಡ ಉಡಬೇಕೆಂದು ಯೋಚಿಸುವುದು ತಪ್ಪು. ಕೂದಲು ಬಾಚಿಕೊಳ್ಳುವ ಸ್ಟೈಲ್ ಅಮ್ಮನ ಹಾಗೆಯೇ ಇರಬೇಕು ಎಂದು ಯೋಚಿಸುವುದು ಕೂಡ ಸರಿಯಲ್ಲ. ಹೆಂಡತಿಗೆ ತನ್ನದೇ ಆದ ರೀತಿಯಲ್ಲಿ ಜೀವಿಸುವ ಸ್ವಾತಂತ್ರ್ಯ ಕೊಡಿ. ಮನೆಗೆ ಸಂಬಂಧಪಟ್ಟ ಬಾಹ್ಯ ಜವಾಬ್ದಾರಿಗಳ ಹೊಣೆಗಾರಿಕೆ ಕೇವಲ ಗಂಡನೊಬ್ಬನದೇ ಅಲ್ಲ ಎಂಬುದನ್ನು ಕೂಡ ಹೆಂಡತಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ತಂದೆ ಮನೆಯ ಹೊರಗಿನ ಕೆಲಸಗಳನ್ನು ತಾವೊಬ್ಬರೇ ನಿರ್ವಹಿಸುತ್ತಿದ್ದರು. ಹಾಗೆಂದು ಈಗ ಆ ಜವಾಬ್ದಾರಿಗಳನ್ನು ನಿಮ್ಮ ಪತಿಯೂ ನಿರ್ವಹಿಸಬೇಕೆಂದು ಅಪೇಕ್ಷಿಸುವುದು ಸಮಂಜಸವಾದುದಲ್ಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಯೋಚನೆಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕೆಂಬ ಸತ್ಯವನ್ನು ಪತಿ ತಿಳಿದುಕೊಳ್ಳಬೇಕು.
ಜಗಳ ಬೇಡ
ನಿಮ್ಮ ತಂದೆತಾಯಿ ಸಣ್ಣ ಪುಟ್ಟ ಸಂಗತಿಗಳಿಗೆ ಜಗಳವಾಡುತ್ತಿದ್ದರು ಎನ್ನುವುದು ಒಳ್ಳೆಯ ಸಂಗತಿಯೇನಲ್ಲ. ನೀವು ಗಂಡಹೆಂಡತಿ ಮಾತು ಮಾತಿಗೆ ಕಿತ್ತಾಡುತ್ತಿದ್ದರೆ ಅದು ನಿಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡುತ್ತದೆ.
ವಾಸ್ತವ ಸಂಗತಿ ಏನೆಂದರೆ, ನೀವಿಬ್ಬರು ಪರಸ್ಪರರ ಭಾವನೆಗಳನ್ನು ಗೌರವಿಸಿ. ಆಗ ನೀವು ಹೆಚ್ಚು ಖುಷಿಯಿಂದ ಇರಲು ಸಾಧ್ಯವಾಗುತ್ತದೆ.
ಪ್ರೀತಿಯಲ್ಲಿ ಗಾಢತೆ ಇರಲಿ
ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ತಂದೆ ತಾಯಿಯ ವಿಚಾರವೇ ಗಿರಕಿ ಹೊಡೆಯುತ್ತಿದ್ದರೆ ಅದನ್ನು ಬದಿಗೊತ್ತಿ. ಒಂದು ಅಥವಾ ಎರಡು ಮಕ್ಕಳಾದ ಬಳಿಕ ಗಂಡಹೆಂಡತಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ತಪ್ಪು ಎಂದು ಭಾವಿಸಿದ್ದರೆ ಆ ವಿಚಾರವನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ.
ಸಾಮಾನ್ಯವಾಗಿ ಮಗು ಜನಿಸಿದ ಬಳಿಕ ಹೆಂಡತಿಯ ಸಂಪೂರ್ಣ ಗಮನ ಮಗುವಿನ ಕಡೆಯೇ ಇರುತ್ತದೆ. ಆ ಕಾರಣದಿಂದ ಗಂಡ ಸ್ವಲ್ಪ ಅಸಮಾಧಾನಗೊಳ್ಳುತ್ತಾನೆ. ಮಗುವಿನ ಆಗಮನದ ಬಳಿಕ ಗಂಡ ಹೆಂಡತಿ ಪರಸ್ಪರರ ಜೊತೆ ಸಮಯ ಕಳೆಯಿರಿ. ಎಂದಾದರೂ ಹೊರಗೆ ಸುತ್ತಾಡಲು ಹೋಗುವುದು ಹಾಗೂ ಪರಸ್ಪರರ ಬಗ್ಗೆ ಪ್ರೀತಿ ವ್ಯಕ್ತಪಡಿಸುವುದು ನಿಮ್ಮ ಸಂಬಂಧಕ್ಕೆ ಮತ್ತಷ್ಟು ಗಾಢತೆ ಕೊಡುತ್ತದೆ. ಮಗುವಿನ ಜವಾಬ್ದಾರಿಗಳನ್ನು ಇಬ್ಬರೂ ಸೇರಿಯೇ ನಿಭಾಯಿಸಿ. ಮಗುವಿನ ಜವಾಬ್ದಾರಿ ಕೇವಲ ಹೆಂಡತಿಯದು ಮಾತ್ರ ಎಂಬ ಹಳೆಯ ವಿಚಾರದಿಂದ ಹೊರ ಬನ್ನಿ.
– ಜಿ. ಪೂರ್ಣಿಮಾ
ಈ ಸಂಗತಿಗಳನ್ನೂ ಗಮನದಲ್ಲಿಡಿ……
– ನಿಮ್ಮ ತಂದೆ, ನಿಮ್ಮ ತಾಯಿಯ ಮನೆಯವರನ್ನು ಗೌರವದಿಂದ ನಡೆಸಿಕೊಳ್ಳುತ್ತಿರಲಿಲ್ಲ ಎಂದಾದರೆ, ನೀವು ಕೂಡ ಅದೇ ರೀತಿ ನಿಮ್ಮ ಹೆಂಡತಿಯ ತವರಿನವರ ಜೊತೆ ದುರ್ವರ್ತನೆ ತೋರಿ ಎಂದಲ್ಲ. ನಿಮ್ಮ ಅತ್ತೆ ಮನೆಯವರನ್ನು ಗೌರವಿಸಿ. ಹಾಗೆ ಮಾಡುವುದರಿಂದ ಪತ್ನಿಯ ಮನಸ್ಸಿನಲ್ಲಿ ನಿಮ್ಮ ಬಗೆಗಿನ ಪ್ರೀತಿ ಹೆಚ್ಚುತ್ತದೆ. ಆಕೆ ನಿಮ್ಮ ಪೋಷಕರಿಗೆ ಅಷ್ಟೇ ಗೌರವ ತೋರಿಸುತ್ತಾಳೆ.
– ಮಾತು ಮಾತಿಗೂ ಚೀರುವ ಅಭ್ಯಾಸ ನಿಮಗಿದ್ದರೆ, ಅದನ್ನು ಬಿಟ್ಟುಬಿಡಿ. ಆಗ ಸೌಹಾರ್ದ ವಾತಾವರಣ ನೆಲೆಸುತ್ತದೆ.
– ಮನೆಯ ಜವಾಬ್ದಾರಿಗಳನ್ನು ಇಬ್ಬರೂ ಜೊತೆಗೂಡಿ ನಿಭಾಯಿಸಿ.
– ನಿಮ್ಮ ಸಂಗಾತಿಗೆ ಸಂಪೂರ್ಣ ಸ್ಪೇಸ್ ಕೊಡಿ.
– ಒಂದು ವೇಳೆ ನಿಮ್ಮಿಬ್ಬರ ನಡುವೆ ಯಾವುದೊ ಮಾತಿಗೆ ಮನಸ್ತಾಪ ಉಂಟಾಗಿದ್ದರೆ, ಆಗ ಅರಚಾಡುವ ಬದಲು ಮೌನವಾಗಿರಲು ಅಭ್ಯಾಸ ಮಾಡಿಕೊಳ್ಳಿ.
– ಸುಖಮಯ ದಾಂಪತ್ಯಕ್ಕೆ ಪರಸ್ಪರರ ಮೇಲೆ ತಪ್ಪುಗಳನ್ನು ಹೊರಿಸುವ ಬದಲು ನಿಮ್ಮ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಕಲಿಯಿರಿ.