ಒಬ್ಬರ ಬಗ್ಗೆ ಸಹಾನುಭೂತಿ ಹೊಂದುವುದು ಹಾಗೂ ಅಗತ್ಯಬಿದ್ದಾಗ ಸಹಾಯ ಮಾಡಲು ಧಾವಿಸುವುದು ಮನುಷ್ಯನ ಸಾಮಾಜಿಕ ಗುಣಗಳಾಗಿವೆ. ಇವೇ ಗುಣಗಳು ನಮ್ಮನ್ನು ಸಕ್ರಿಯವಾಗಿಡುತ್ತವೆ. ಆದರೆ, ಒಮ್ಮೊಮ್ಮೆ ಇದೇ ಒಳ್ಳೆಯ ಗುಣ ನಮ್ಮ ಶತ್ರುವಾಗಿ ಪರಿಣಮಿಸಬಹುದು. ಯಾರಾದರೂ ನಮ್ಮ ಒಳ್ಳೆಯ ಗುಣವನ್ನು ದುರುಪಯೋಗಪಡಿಸಿಕೊಂಡಾಗ ನಮಗೆ ಬಹಳ ದುಃಖವಾಗುತ್ತದೆ.
ಮೂರ್ಖರಾಗುತ್ತಿಲ್ಲ ತಾನೇ?
ಸ್ನೇಹಿತೆಯರು, ಸಂಬಂಧಿಕರು ಅಥವಾ ಸಹೋದ್ಯೋಗಿಗಳ ಕುಟುಂಬದವರೊಂದಿಗೆ ನಿಕಟತೆ ಹೊಂದುವುದು ಒಳ್ಳೆಯ ಸಂಗತಿ. ಆದರೆ ಕುಮುದಾಳಂತೆಯೆ ಆಗಿಬಿಟ್ಟರೆ ನೀವು ಮೂರ್ಖರಾದಂತೆಯೇ ಸರಿ. ಕುಮುದಾ ಸರಳ ಸ್ವಭಾವದ ಯಾರು ಕರೆದರೂ ಇಲ್ಲವೆನ್ನದೆ, ಯಾವುದೇ ಅಪೇಕ್ಷೆ ಇಟ್ಟುಕೊಳ್ಳದ ಮುಗ್ಧ ಮಹಿಳೆ. ಹೀಗಾಗಿ ಅಕ್ಕಪಕ್ಕದವರು, ಸಂಬಂಧಿಕರು, ಸ್ನೇಹಿತೆಯರು ಅವಳನ್ನು ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಕರೆಯುತ್ತಾರೆ.
ಕುಮುದಾ ಯಾವುದೇ ಗೊಣಗಾಟ ಇಲ್ಲದೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಾಳೆ. ಕ್ರಮೇಣ ಅವಳಿಗೆ ತನ್ನಿಂದ ಕೆಲಸ ತೆಗೆದುಕೊಂಡು, ತನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಅನಿಸಲಾರಂಭಿಸಿತು. ತನ್ನ ಸೇವೆಯ ಗುಣವೇ ತನ್ನ ವೈರಿಯಾಗುತ್ತಿದೆ ಎಂದು ಆಕೆಗೆ ಅನಿಸತೊಡಗಿತು.
ಒಂದು ಸಲವಂತೂ ಆಕೆ ತನ್ನ ಕುರಿತಾಗಿ ಅಭಿಪ್ರಾಯ ಕೇಳಿ ದಂಗಾಗಿ ಹೋದಳು. “ಕುಮುದಾಳಂಥವರು ಇರುವಾಗ ನಾವು ಕೆಲಸದ ಟೆನ್ಶನ್ ಏಕೆ ತಗೋಬೇಕು?”
ಆ ಮಾತುಗಳನ್ನು ಕೇಳಿಸಿಕೊಂಡ ಕುಮುದಾ ನಾನು ಇನ್ನಷ್ಚು ಮೂರ್ಖಳಾಗಬಾರದು ಎಂದು ಮನಸಾರೆ ನಿರ್ಧರಿಸಿದಳು. ಈಗ ಅವಳು ಮೊದಲಿನಂತಿಲ್ಲ. ಯಾರ ಬಗೆಗಾದರೂ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾಳೆ.
ಅವಳಿಗೆ ಕೆಲವೇ ಕೆಲವು ಜನರು ಸ್ನೇಹಿತರಿದ್ದಾರೆ, ಅವಳನ್ನು ಈಗ ಯಾರೊಬ್ಬರೂ ದುರುಪಯೋಗ ಮಾಡಿಕೊಳ್ಳುವುದಿಲ್ಲ, ತುಚ್ಛವಾಗಿ ಕಾಣುವುದಿಲ್ಲ.
ಅಂದಹಾಗೆ ನಮ್ಮ ಆತ್ಮಗೌರವ ಹೇಗೆ ಮಣ್ಣು ಪಾಲಾಗುತ್ತಿದೆ ಎಂಬುದನ್ನು ನಾವೇ ಸ್ವತಃ ಗಮನಿಸಬೇಕು. ಸೂಕ್ಷ್ಮ ಸಂಗತಿಗಳು ಕ್ರಮೇಣ ಗೊತ್ತಾಗುತ್ತ ಹೋಗುತ್ತವೆ. ಸುತ್ತಮುತ್ತಲಿನ ಜಗತ್ತನ್ನು ಕಾಣುವ ನಮ್ಮ ದೃಷ್ಚಿಕೋನ ಬದಲಾಗುತ್ತಾ ಹೋಗುತ್ತದೆ. ಒಂದು ವೇಳೆ ನಾವು ಬೇರೆಯವರ ಎದುರು ನಮ್ಮ ನಡೆ ನುಡಿಯನ್ನು ಬದಲಿಸಿಕೊಂಡರೆ ನಮ್ಮನ್ನು ಯಾರೊಬ್ಬರೂ ಸುಲಭವಾಗಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ.
ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಗಳು, ಪರಿಸ್ಥಿತಿ ನಿರ್ವಹಣೆ ಮಾಡುವ ಸಾಮರ್ಥ್ಯ ಇದ್ದೇ ಇರುತ್ತದೆ, ಹೀಗಾಗಿ ಇತರರ ಜವಾಬ್ದಾರಿಯನ್ನು ಅತಿಯಾಗಿ ಹೊತ್ತುಕೊಳ್ಳುವ ಹುಚ್ಚು ಸಾಹಸ ಮಾಡಬೇಡಿ.
ಇತರರ ಮನಸ್ಸು ಅರಿಯಿರಿ
ನಿಮ್ಮ ಸಾಮಾಜಿಕ ಕಳಕಳಿಯನ್ನು ತೊರೆದು, ಒಮ್ಮೆಲೇ ಸ್ವಾರ್ಥಿಯಾಗಬೇಕು ಎಂದು ಹೇಳುತ್ತಿಲ್ಲ, ಬೇರೆಯವರ ಸ್ವಭಾವ ಅರಿತು ಅವರಿಗೆ ತಕ್ಕಂತೆ ನಿಮ್ಮ ಧೋರಣೆ ಬದಲಿಸಿಕೊಂಡರೆ ಸಾಕಷ್ಟು ಉಪಯೋಗವಾಗುತ್ತದೆ.
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಆದರೆ ಇತರರ ಎದುರು ನಿಮ್ಮನ್ನು ನೀವು ದುರ್ಬಲರೆಂಬಂತೆ ಬಿಂಬಿಸಿಕೊಳ್ಳಬೇಡಿ. ಬೇರೆಯವರು ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಕೊಡಬೇಡಿ. ಇದರಿಂದ ನಿಮ್ಮ ಸಾಮಾಜಿಕ ಮಟ್ಟ ಕುಸಿಯುತ್ತದೆ.
ನೀವು ನಿಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದರೆ ಹಾಗೂ ನೀವು ಸ್ವಾಭಿಮಾನಿಯಾಗಿದ್ದರೆ ಯಾರೂ ನಿಮ್ಮನ್ನು ತಲೆ ತಗ್ಗಿಸುವಂತೆ ಮಾಡಲು ಆಗುವುದಿಲ್ಲ. ನಿಮ್ಮ ದೃಢ ನಿರ್ಧಾರ ಕಂಡು ನಿಮ್ಮಿಂದ ಮುಖ ತಿರುಗಿಸಿ ಹೋಗುವವರ ಧೂರ್ತ ಸಂಭಾಷಣೆ, ಹಾವಭಾವ, ಬಣ್ಣದ ಮಾತುಗಳನ್ನು ಅರಿತುಕೊಳ್ಳಿ. ಇಂಥವರಿಗೆ `ಇಲ್ಲ’ ಎಂದು ಹೇಳಲು ಕಲಿಯಿರಿ. ಯಾರಿಗೆ ನಿಜಾಗಿಯೂ ಅಗತ್ಯವಿದೆಯೋ ಅವರಿಗೆ ನೆರವಾಗಿ.
– ಜಿ. ರಾಗಿಣಿ