ಕಥೆ – ಸಿ.ಕೆ. ಸ್ನೇಹಾ 

ಸತೀಶ್‌ ಒಮ್ಮೆ ನಿಟ್ಟುಸಿರು ಬಿಟ್ಟು ಹದಿನಾರು ವರ್ಷದ ಮಗಳು ಟೀನಾಳತ್ತ ದೃಷ್ಟಿ ಹರಿಸಿದರು.“ಇಲ್ಲ ಪಪ್ಪಾ…. ಇದು ಸಾಧ್ಯವಿಲ್ಲ. ನಿನಗೆ ಈ ವಯಸ್ಸಿನಲ್ಲಿ ಎರಡನೇ ಮದುವೆಯ ಆಲೋಚನೆ ಹೇಗೆ ಬಂದಿತು…?”

“ಟೀನಾ, ಪ್ಲೀಸ್‌ ಅರ್ಥ ಮಾಡಿಕೊ….”

“ಇಲ್ಲ ಪಪ್ಪಾ, ನನಗೆ ಏನೂ ಹೇಳಬೇಡ. ನಿನಗೆ ಅಮ್ಮನ ನೆನಪು ಇಷ್ಟು ಬೇಗ ಅಳಿಸಿಹೋಯಿತಲ್ಲವೇ? ಜೊತೆಗೆ ನಿನಗೆ ನನ್ನ ಬಗ್ಗೆಯೂ ಕೋಪವಿದೆ. ನಾನೇ ನನ್ನ ತಾಯಿಯನ್ನು ಕೊಂದೆನೆನ್ನುವ ಭಾವನೆ ನಿನ್ನದು. ಅದಕ್ಕೆ ನೀನು ನನ್ನನ್ನು ದೂರ ಮಾಡಿ ಎರಡನೇ ಮದುವೆಯಾಗುತ್ತಿದ್ದೀಯಾ?”

“ಹಾಗನ್ನಬೇಡ ಟೀನಾ, ನಿನ್ನನ್ನು ನೀನು ಹಳಿದುಕೊಳ್ಳುವುದು ತಪ್ಪು.”

ಟೀನಾ ಗೋಡೆಗೆ ತೂಗುಹಾಕಿದ್ದ ತಾಯಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, “ನಾನೆಂದೂ ನನ್ನ ತಾಯಿಯನ್ನು ನೋಡಿಲ್ಲ. ಆದರೆ ನೀನೇ ನನಗೆ ಹೇಳಿದ್ದೆಯಲ್ಲ…. ಅವಳು ಸುಂದರವಾಗಿದ್ದಳು, ಒಳ್ಳೆಯ ಗುಣದವಳು, ನಿನ್ನನ್ನು ಬಹಳ ಪ್ರೀತಿಸುತ್ತಿದ್ದಳು. ಅಂತ…. ನೀನೂ ಅವಳನ್ನು ಅಷ್ಟೇ ಪ್ರೀತಿಸುತ್ತಿದ್ದೆಯಲ್ಲವೇ? ಈಗ ಅದೆಲ್ಲವನ್ನೂ ಮರೆತು ಇನ್ನೊಬ್ಬ ಹೆಂಗಸಿನೊಡನೆ ಸಂಸಾರ ನಡೆಸಬೇಕು ಎಂಬ ಇಚ್ಛೆ ಹೇಗೆ ಮೂಡಿತು? ನನ್ನ ತಾಯಿಯ ಮೇಲೆ ನಿನಗಿದ್ದ ಪ್ರೀತಿ ಕೇವಲ ನಾಟಕದ ಪ್ರೀತಿ ಮಾತ್ರವೇ?”

“ಪ್ರೀತಿ ಎನ್ನುವುದೇ ಹಾಗೆ. ಅದು ಯಾವಾಗ ಹೇಗೆ ಚಿಗುರುತ್ತದೆ ಯಾರೂ ಹೇಳಲಾರರು. ನಿನಗಿನ್ನೂ ಚಿಕ್ಕ ವಯಸ್ಸು. ನಾನಿದನ್ನು ಹೇಳಿದರೆ ನಿನಗೆ ಅರ್ಥೈಸಿಕೊಳ್ಳಲು ಆಗುವುದೆ? ನಿನ್ನ ತಾಯಿಯನ್ನು ನಾನು ನನ್ನ ಜೀವಕ್ಕೆ ಸಮನಾಗಿ ಪ್ರೀತಿಸುತ್ತಿದ್ದೆ. ಈಗಲೂ ಅವಳ ನೆನಪು ನನ್ನ ಎದೆಯಾಳದಲ್ಲಿ ಕೊರೆಯುತ್ತಿದೆ. ಆದರೆ ಈಗ ಅವಳಿಲ್ಲ. ಇಂತಹ ಸಮಯದಲ್ಲಿ ನನಗೆ ಸಿಕ್ಕಿದ್ದು ಆಕೆ……”

“ಪಪ್ಪಾ…. ನನ್ನ ಎದುರಿಗೆ ಬೇರೊಬ್ಬ ಹೆಂಗಸಿನ ವರ್ಣನೆ ಪ್ರಾರಂಭಿಸಬೇಡ,” ಟೀನಾ ಸತೀಶರ ಮಾತನ್ನು ಅರ್ಧಕ್ಕೇ ತುಂಡರಿಸಿದಳು.

“ನಿನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಅಮ್ಮನ ಸ್ಥಾನದಲ್ಲಿ ಬೇರೊಬ್ಬ ಹೆಂಗಸನ್ನು ತರುವುದಕ್ಕೆ ನೋಡುತ್ತಿಯಲ್ಲಾ….. ನನಗೊಬ್ಬ ಮಲತಾಯಿಯನ್ನು ತರಲು ಹವಣಿಸಿದ್ದೀಯಾ?”

“ಇಲ್ಲ ಟೀನಾ, ಅವಳು ನಿನಗೆ ನಿಜಕ್ಕೂ ಒಳ್ಳೆಯ ತಾಯಿ ಆಗಬಲ್ಲಳು.”

“ನಾನು ಹುಟ್ಟುವ ಸಮಯದಲ್ಲಿಯೇ ಅಮ್ಮ ಸಹಿಸಲಾರದ ಹೊಟ್ಟೆ ನೋವಿನಿಂದ ಸತ್ತು ಹೋದಳು. ಅವಳ ಸಾವಿಗೆ ನಾನೇ ಕಾರಣಳಾದೆ. ಇದರಿಂದ ನಿನಗೆ ನನ್ನನ್ನು ಕಂಡರೆ ಸಿಟ್ಟು, ಅಸಹನೆ ಇದೆ. ಇದೀಗ ನೀನು ಇನ್ನೊಂದು ಮದುವೆ ಮಾಡಿಕೊಳ್ಳುವ ಮೂಲಕ ನನ್ನ ಮೇಲೆ ಛಲ ಸಾಧಿಸುತ್ತಿರುವೆಯಾ?”

“ಇಲ್ಲ ಕಂದಾ, ನಿನ್ನ ಒಪ್ಪಿಗೆ ಇಲ್ಲದೆ ನಾನು ಇನ್ನೊಂದು ಮದುವೆ ಆಗಲಾರೆ. `ನನ್ನ ಅಮ್ಮನನ್ನು ನಾನೇ ಕೊಂದೆ,’ ಎಂದು ಹೇಳಬೇಡ. ಐ ಲವ್ ಯೂ ಮೈ ಸ್ವೀಟ್‌ ಡಾಟರ್‌…..” ಎಂದು ಸತೀಶ್‌ ಟೀನಾಳ ಕೈಯನ್ನು ಹಿಡಿದುಕೊಳ್ಳಲು ಮುಂದಾದರು. ಟೀನಾ ಮಾತ್ರ ಅವರನ್ನು ಬದಿಗೆ ಸರಿಸಿ ಬಾಗಿಲನ್ನು ಮುಂದೆ ಹಾಕಿಕೊಂಡು ಕಾಲೇಜಿಗೆ ಹೊರಟುಹೋದಳು.

ಸಂಜೆ ಕಾಲೇಜಿನಿಂದ ಬಂದವಳು ತಂದೆಯನ್ನು ಮಾತನಾಡಿಸದೆ ಪಕ್ಕದ ಮನೆಯಲ್ಲಿ ಮಹಿಮಾ ಟೀಚರ್‌ ಬಳಿ ಹೋದಳು. ಮಹಿಮಾ ಮದುವೆಯಾದ ಎರಡೇ ವರ್ಷಕ್ಕೇ ಪತಿಯನ್ನು ಕಳೆದುಕೊಂಡಿದ್ದರು. ಖಾಸಗಿ ಶಾಲೆಯಲ್ಲಿ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದ ಆಕೆ ಮತ್ತೆ ಮದುವೆಯಾಗಿರಲಿಲ್ಲ. ಯುವ ಮನಸ್ಸುಗಳನ್ನು ಚೆನ್ನಾಗಿ ಅರಿತಿದ್ದ ಮಹಿಮಾಗೆ ಅವರೊಂದಿಗೆ ಹೇಗೆ ಮಾತನಾಡಬೇಕೆನ್ನುವುದು ತಿಳಿದಿತ್ತು. ಟೀನಾಳನ್ನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದ ಮಹಿಮಾಗೆ ಅವಳ ಗುಣಸ್ವಭಾವದ ಪರಿಚಯ ಚೆನ್ನಾಗಿತ್ತು. ಅವಳ ಎಲ್ಲಾ ಸಮಸ್ಯೆಗೂ ಇವರಲ್ಲಿ ಪರಿಹಾರ ಇರುತ್ತಿತ್ತು.

ಇಂದು ಕೂಡಾ ಟೀನಾ ಅವಸರ ಅವಸರವಾಗಿ ಮಹಿಮಾಳ ಮನೆ ಹೊಕ್ಕವಳೇ, “ಆಂಟಿ, ನಾನು ಬಹಳ ಅಪ್‌ಸೆಟ್‌ ಆಗಿದ್ದೇನೆ…” ಎಂದಾಗ ಮಹಿಮಾ ಬಹಳ ಕೂಲ್ ಆಗಿ, “ಹೌದಾ? ಸರಿ ಕುಳಿತುಕೋ ಜೂಸ್‌ ತಂದು ಕೊಡ್ತೀನಿ, ಮಾತನಾಡೋಣ,” ಎಂದರು. ಟೀನಾ  ಸೋಫಾದ ಮೇಲೆ ಕುಳಿತರೂ ಅವಳ ಮನಸ್ಸಿನ ಆತಂಕ, ಗಾಬರಿ ಕಡಿಮೆ ಆಗಿರಲಿಲ್ಲ. ಮಹಿಮಾ ಆಕೆಗೆ ಜೂಸ್‌ ತಂದುಕೊಟ್ಟಾಗಲೂ ಒಂದೇ ಬಾರಿಗೆ ಅದನ್ನು ಕುಡಿದು ತನ್ನ ಮತ್ತು ತಂದೆಯ ನಡುವೆ ನಡೆದ ಸಂಭಾಷಣೆಯನ್ನೆಲ್ಲಾ ತಿಳಿಸಿದಳು. ಅದೆಲ್ಲವನ್ನೂ ಕೇಳಿದ ನಂತರ ಮಹಿಮಾ, “ಸರಿ ನಿನ್ನ ಮನಸ್ಸು ನನಗೆ ಅರ್ಥವಾಗುತ್ತದೆ. ನಿನ್ನ ತಂದೆಯೊಂದಿಗೆ ನಾನು ಮಾತನಾಡುತ್ತೇನೆ. ನೀನು ಚಿಂತಿಸಬೇಡ,” ಎಂದು ಅವಳನ್ನು ಸಮಾಧಾನಪಡಿಸಿದರು. ನಂತರ, “ನಿನ್ನ ಸ್ನೇಹಿತೆ ರಮ್ಯಾಳ ಬರ್ತ್‌ ಡೇ ಪಾರ್ಟಿ ಇದೆ ಎಂದಿದ್ದೆಯಲ್ಲವೇ? ಪಾರ್ಟಿಗೆ ಯಾವ ಡ್ರೆಸ್‌ ಹಾಕಿಕೊಳ್ಳುವುದೆಂದು ನಿರ್ಧರಿಸಿದ್ದೀಯಾ? ಪಾರ್ಟಿಗೆ ಎಲ್ಲಾ ತಯಾರಾಗಿದೆಯಾ?” ಎಂದರು ಮಹಿಮಾ.

“ಓಹೋ… ಆಂಟಿ ಪಾರ್ಟಿಗೆ ಹೋಗಬೇಕು. ನನ್ನ ಬಳಿ ಇರುವ ಯೆಲೋ ಕಲರ್‌ ಲಹೆಂಗಾ ಮತ್ತು ಅದೇ ಕಲರ್‌ ಟಾಪ್‌ ಧರಿಸಿ ಹೋಗಬೇಕೆಂದಿದ್ದೀನೆ,” ಎಂದಳು ಟೀನಾ.

“ಬೇಡ ಟೀನಾ, ನಿನ್ನ ಬಳಿ ರೆಡ್‌ ಕಲರ್‌ ಡ್ರೆಸ್‌ ಇರಬೇಕಲ್ಲ… ಅದನ್ನೇ ಪಾರ್ಟಿಗೆ ಹಾಕಿಕೋ ಚೆನ್ನಾಗಿರುತ್ತದೆ,” ಹೇಳಿದರು ಮಹಿಮಾ.

“ಸರಿ ಆಂಟಿ… ನಾನಿನ್ನೂ ಹೊರಡುತ್ತೇನೆ. ಪಾರ್ಟಿಗೆ ತಡವಾಗಿ ಹೋದರೆ ಚೆನ್ನಾಗಿರುವುದಿಲ್ಲ,” ಎನ್ನುತ್ತಾ ಟೀನಾ ಬಂದಷ್ಟೇ ವೇಗವಾಗಿ ಅಲ್ಲಿಂದ ಮನೆಗೆ ಹೊರಟಳು.

ಮುಂದಿನ ಭಾನುವಾರ ಟೀನಾಳ ನೆರೆಮನೆಯ ಆತ್ಮೀಯ ಗೆಳತಿ ಕೃತಿಕಾಳ ಮದುವೆ ಕಾರ್ಯಕ್ರಮವಿತ್ತು. ಅದಕ್ಕೆ ಟೀನಾ ಮತ್ತು ಅವಳ ಗೆಳತಿಯರು ಹೊರಟರು. ಅಲ್ಲಿ ಕೆಲವು ಹುಡುಗರೊಂದಿಗೆ ಮದುಮಗನ ಸಮೀಪವೇ ಸುಳಿದಾಡುತ್ತಿದ್ದ ಒಬ್ಬ ಹ್ಯಾಂಡ್‌ಸಂ ಬಾಯ್‌ ಮೇಲೆ ಟೀನಾಳ ದೃಷ್ಟಿ ಹರಿಯಿತು.

`ಓಹ್‌! ಅದೆಷ್ಟು ಚೆನ್ನಾಗಿದ್ದಾನೆ…!’ ಎಂದುಕೊಳ್ಳುತ್ತಾ ತಾನು ಅವನ ಕಣ್ಣಿಗೆ ಕಾಣುವಂತೆ ಅವನ ಅಕ್ಕಪಕ್ಕದಲ್ಲಿಯೇ ಸುಳಿದಾಡಿದಳು. ಆದರೆ ಅವನು ಮಾತ್ರ ಟೀನಾಳ ಬಗೆಗೆ ಯಾವುದೇ ಗಮನ ನೀಡಿದಂತೆ ಕಾಣಲಿಲ್ಲ.

ಟೀನಾ ಮತ್ತೆ ತನ್ನ ಗೆಳತಿಯರ ಗುಂಪಿಗೆ ಸೇರಿಕೊಂಡಳು. ಅಷ್ಟರಲ್ಲಿ ಅವಳಿಗೆ ಮಹಿಮಾ ಆಂಟಿ ಮದುವೆಯ ಮನೆಯಲ್ಲಿರುವುದು ಕಾಣಿಸಿತು. ಟೀನಾ ಮಹಿಮಾರ ಬಳಿ ಹೋಗಿ, “ಆಂಟಿ ಕೃತಿಕಾಳ ಹಸ್ಬೆಂಡ್‌ ಪಕ್ಕದಲ್ಲಿರುವ ಆ ಹ್ಯಾಡ್‌ಸಂ ಹುಡುಗ ಯಾರು? ನಿಮಗೇನಾದರೂ ಪರಿಚಯವೇ?”

“ಓಹೋ… ! ಅವನು ಅಗಸ್ತ್ಯ. ಐ.ಟಿ. ಕಂಪನಿಯಲ್ಲಿ ಮ್ಯಾನೇಜರ್‌. ನನಗೆ ಚೆನ್ನಾಗಿ ಗೊತ್ತು,” ಎನ್ನುತ್ತಿದ್ದಂತೆ ಅವಳ ಮುಖ ಅರಳಿತು, “ಆಂಟಿ, ನನಗೆ ಅವನನ್ನು ಪರಿಚಯ ಮಾಡಿಸಿ. ನಾನು ಅವನ ಗೆಳೆತನ ಬೆಳೆಸಬೇಕು… ಅವನು ನನ್ನ ಮನಸ್ಸನ್ನು ಸೆರೆಹಿಡಿದಿದ್ದಾನೆ….” ಎಂದಳು.

“ಹೌದಾ…?! ಒಳ್ಳೆಯದು, ನಾನು ಪರಿಚಯ ಮಾಡಿಸುತ್ತೇನೆ. ಆದರೆ ಈಗ ಬೇಡ ನಾಳೆ ಸಂಜೆ ಐದಕ್ಕೆ ನನ್ನ ಮನೆಗೆ ಬಾ….” ಎಂದರು ಮಹಿಮಾ. ಟೀನಾ ಒಪ್ಪಿಕೊಂಡಳು.

ಮರುದಿನ ಟೀನಾ, ಮಹಿಮಾ ಮನೆಗೆ ಹೋದಾಗ ಅವರ ಮನೆಯೆಲ್ಲ ಬೆಲೂನ್‌ ಮತ್ತು ಬಣ್ಣದ ಕಾಗದಗಳಿಂದ ಅಲಂಕೃತವಾಗಿತ್ತು. ಟೀನಾ ಒಳಬಂದ ಕೂಡಲೇ ಮಹಿಮಾ ಅವಳಿಗೆ ತಮ್ಮ ಕೋಣೆಗೆ ಬರುವಂತೆ ಹೇಳಿದರು. ಅಲ್ಲಿ ಅವಳಿಗಾಗಿ ತೆಗೆದಿರಿಸಿದ್ದ ವಿಶೇಷ ಜರಿಯಂಚಿನ ಸೀರೆ, ಮ್ಯಾಚಿಂಗ್‌ ಬ್ಲೌಸ್‌ ಹಾಗೂ ಜ್ಯೂವೆಲರಿಗಳೆಲ್ಲ ಇದ್ದವು.

ನಿಜಸಂಗತಿ ಎಂದರೆ ಟೀನಾಗೆ ಸೀರೆ ಉಟ್ಟು ಅಭ್ಯಾಸವಿರಲಿಲ್ಲ. ಮಹಿಮಾ ಆಂಟಿ ಎದುರು ಇದನ್ನು ಹೇಳಲು ಹಿಂಜರಿಕೆಯಾಯಿತು. ಬೇರೆ ದಾರಿ ಕಾಣದೆ, “ನನಗೆ ತಿಳಿಯುದಿಲ್ಲ,” ಎಂದಳು. ಆಗ ಮಹಿಮಾ ತಾವೇ ಅವಳಿಗೆ ಸೀರೆ ಉಡುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದಲ್ಲದೆ, ಟೀನಾಗೆ ಸೀರೆ ಉಡಿಸಿ ಕೈ ಮತ್ತು ಕಿವಿಗಳಿಗೆ ಆಭರಣಗಳನ್ನು ತೊಡಿಸಿದರು. ಆಗ ಟೀನಾಳ ಮನದಾಳದಲ್ಲಿ ಎಲ್ಲೋ ತಾಯಿಯ ಪ್ರೀತಿ ಕಂಡಂತಾಯಿತು. ಎಲ್ಲ ತಯಾರಾದ ಬಳಿಕ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ಟೀನಾಗೆ ಅವಳ ಕಣ್ಣೇ ನಂಬಲಾಗಲಿಲ್ಲ.

ಹೀಗೆ ಅಲಂಕರಿಸಿಕೊಂಡು ಹೊರ ಬರುವಾಗಲೇ ಅಲ್ಲಿ ಅಗಸ್ತ್ಯನಿದ್ದ. ಅವನು ನೇರವಾಗಿ ಇವಳ ಸನಿಹಕ್ಕೆ ಬಂದು ಒಮ್ಮೆ ಅವಳ ಕಣ್ಣುಗಳನ್ನೇ ನೋಡಿದ. ಟೀನಾಳಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಕ್ಷಣಕ್ಕೆ ನಾಚಿಕೆಯಾಗಿ ಮೈ ಕಂಪಿಸಿತು. ಅವನು ಮೃದುವಾಗಿ ಅವಳ ಹಸ್ತವನ್ನು ಅದುಮಿದಾಗ ದೇಹದಲ್ಲಿ ಮಿಂಚಿನ ಸಂಚಾರವಾಯಿತು.

ಇಬ್ಬರೂ ಹೀಗೆ ಮೌನವಾಗಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಯ ನೋಟವನ್ನು ವಿನಿಮಯ ಮಾಡಿಕೊಳ್ಳುವಾಗಲೇ ಅಗಸ್ತ್ಯನನ್ನು ಹೊರಗಿನಿಂದ ಯಾರೋ ಕೂಗಿ, “ನೀನು ತಂದ ಹೂವನ್ನು ಎಲ್ಲಿಟ್ಟಿದ್ದೀಯಾ?” ಎಂದು ಅವನ ಸ್ನೇಹಿತ ಕೇಳಿದ.  ಅವನು ಆಚೆ ಹೋಗುವ ಮುನ್ನ ಅವಳ ಕಿವಿಯಲ್ಲಿ, “ಸುಂದರವಾದ ಈಗಷ್ಟೇ ಅರಳಿದ ಹೂ ಇಲ್ಲಿರಬೇಕಾದರೆ ಬೇರೆ ಸಾಧಾರಣ ಹೂಗಳ ಬಗ್ಗೆ  ಯಾಕೆ ತಲೆ ಕೆಡಿಸಿಕೊಂಡಿದ್ದಾರೆ?” ಎಂದ. ಟೀನಾಳ ಮುಖ ರಂಗೇರಿತು.

ಅಗಸ್ತ್ಯ ಅವಳನ್ನು ಬಿಟ್ಟು ಹೊರಟ. ಆಗ ಟೀನಾಳ ತಂದೆ ಸತೀಶ್‌ ಹೊರಗೆ ಒಂಟಿಯಾಗಿ ನಿಂತಿರುವುದು ಕಂಡಿತು. ಪ್ರಥಮ ಪ್ರೇಮದ ಗುಂಗಿನಲ್ಲಿದ್ದ ಟೀನಾಗೆ ತಂದೆಯ ಸ್ಥಿತಿ ಕಂಡು ಬೇಸರವಾಯಿತು. `ಪ್ರೀತಿಸುವವರಿಲ್ಲದೆ ಅವರು ಎಷ್ಟು ದುಃಖಿಸುತ್ತಿದ್ದಾರೆ? ಪ್ರೀತಿ ಎಂದರೆ ಇಷ್ಟು ಮಧುರವಾಗಿರುತ್ತದೆ ಎಂದು ತಿಳಿದೇ ಇರಲಿಲ್ಲ. ಪಪ್ಪಂಗೂ ಸಹ ಇದೆ ಭಾವನೆ ಇರಬಹುದು,’ ಅವಳು ಮನದಲ್ಲೇ ಯೋಚಿಸುತ್ತಿದ್ದಳು.

ಅಷ್ಟರಲ್ಲಿ ಮಹಿಮಾ ಆಂಟಿ ಸಹ ಪಪ್ಪನ ಪಕ್ಕದಲ್ಲೇ ಇದ್ದರೆನ್ನುವುದು ತಿಳಿಯಿತು. ಇಬ್ಬರೂ ಪರಸ್ಪರ ಏನೋ ಸಂಭಾಷಣೆ ನಡೆಸುತ್ತಿದ್ದಾರೆ ಎಂದುಕೊಂಡು ಅವರ ಬಳಿ ಹೋದಳು.“ಪಪ್ಪಾ, ನೀನು ಎರಡನೇ ಮದುವೆ ಆಗಬೇಕೆಂದು ಹೇಳುತ್ತಿದ್ದೆಯಲ್ಲ…. ಈಗ ನಾನು ಹೇಳುತ್ತಿದ್ದೇನೆ, ನೀನು ನಿನ್ನ ಇಷ್ಟದಂತೆ ಮದುವೆ ಆಗಬಹುದು. ಆದರೆ ನೀನು ಮಹಿಮಾ ಆಂಟಿಯನ್ನೇ ಮದುವೆ ಆಗಬೇಕು….!”

ಹೀಗೆನ್ನುತ್ತಿದ್ದಂತೆ ಮಹಿಮಾ-ಸತೀಶ್‌ ಪರಸ್ಪರ ಮುಖ ನೋಡಿಕೊಂಡರು. “ನೀನೇನಾದರೂ ನಮ್ಮ ವಿಚಾರ ಟೀನಾಗೆ ಹೇಳಿದೆಯೇನು?” ಎಂದರು ಸತೀಶ್‌

“ಇಲ್ಲ… ನೀವು…..?”

“ಇಲ್ಲವಲ್ಲ…..”

ಅಷ್ಟರಲ್ಲಿ ಟೀನಾ ಹೇಳಿದಳು, “ನೀವು ಇಬ್ಬರೂ ಹೇಳಲಿಲ್ಲ. ಆದರೆ ನಿಮ್ಮ ಕಣ್ಣುಗಳಲ್ಲಿಯೇ ಸತ್ಯ ಗೋಚರಿಸುತ್ತಿದೆಯಲ್ಲ…?” ಎಂದಾಗ ಇಬ್ಬರೂ ಮುಗುಳ್ನಕ್ಕರು.

ಇದಾದ ತುಸು ಹೊತ್ತಿನಲ್ಲಿಯೇ ಅಗಸ್ತ್ಯ ಟೀನಾಳನ್ನು ಹುಡುಕಿಕೊಂಡು ಅಲ್ಲಿಗೆ ಬಂದ. ಟೀನಾ ಅವನಿಗೆ ಸತೀಶ್‌ ಮತ್ತು ಮಹಿಮಾರನ್ನು ತೋರಿಸಿ ಇವರು ನನ್ನ ಪೋಷಕರು ಎಂದು ಪರಿಚಯಿಸಿದಳು.

ಸತೀಶ್‌ ಕಡೆ ತಿರುಗಿದ ಅಗಸ್ತ್ಯ, “ಸರ್‌ ನನಗೆ ನಿಮ್ಮ ಮಗಳು ಬಹಳ ಹಿಡಿಸಿದ್ದಾಳೆ. ಅವಳಿಗಾಗಿ ನಾನು ಇನ್ನೂ ಐದು ವರ್ಷಗಳು ಕಾಯಲು ಸಿದ್ಧನಿದ್ದೇನೆ… ನೀವು ನನ್ನನ್ನೇ ನಿಮ್ಮ ಅಳಿಯನನ್ನಾಗಿ ಸ್ವೀಕರಿಸಬೇಕು,” ಎಂದಾಗ ಎಲ್ಲರ ಮುಖದಲ್ಲಿ ಸಂತಸ, ಸಂಭ್ರಮದ ನಗು ಚಿಮ್ಮಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ