ಇತ್ತೀಚಿನ ವರ್ಷಗಳಲ್ಲಿ ಮದುವೆಯಾದ 2-3 ವರ್ಷಗಳಲ್ಲಿಯೇ ವಿಚ್ಛೇದನದ ಪ್ರಕರಣಗಳು ಹೆಚ್ಚುತ್ತ ಹೊರಟಿವೆ. ಮನೋತಜ್ಞರು ಹಾಗೂ ಸಮಾಜಶಾಸ್ತ್ರಜ್ಞರ ಪ್ರಕಾರ, ವಿವಾಹ ನಿಶ್ಚಿತಾರ್ಥ ಹಾಗೂ ಮದುವೆಯ ನಡುವಿನ 2-3 ತಿಂಗಳಲ್ಲಿ ಹಾಗೂ ವಿವಾಹವಾದ ಆರಂಭಿಕ 3 ತಿಂಗಳಲ್ಲಿ ಭಾವಿ ದಂಪತಿಗಳು ಅಥವಾ ವಿವಾಹ ಬಂಧನಕ್ಕೊಳಗಾದ ದಂಪತಿಗಳ ನಡುವೆ ಕಂಫರ್ಟೆಬಿಲಿಟಿ ತಿಳಿದುಬರುತ್ತದೆ. ಭಾವಿ ಅಥವಾ ವಿವಾಹ ಬಂಧನಕ್ಕೊಳಗಾದ ದಂಪತಿಗಳ ನಡುವಿನ ಈ `ಗೋಲ್ಡನ್‌ ಪೀರಿಯಡ್‌’ನಲ್ಲಿ ಪರಸ್ಪರ ಹೇಗೆ ಮಾತನಾಡುತ್ತಾರೆ, ಪರಸ್ಪರರ ಜೊತೆ ಹೇಗೆ ವರ್ತಿಸುತ್ತಾರೆ, ಇದರ ಮೇಲೆಯೇ ಸಂಬಂಧದ ಯಶಸ್ಸು ಅಥವಾ ವೈಫಲ್ಯತೆ ನಿಂತಿರುತ್ತದೆ.

ತಜ್ಞರ ಪ್ರಕಾರ, ಈ ಕೆಳಕಂಡ ಸಂಗತಿಗಳು ಈ ಸಂಬಂಧ ಹೆಚ್ಚು ದಿನ ಉಳಿಯುವಂಥದ್ದಲ್ಲ, ಒಂದು ವೇಳೆ ಉಳಿದರೂ ಅದರಲ್ಲಿ ಕಹಿ ಹೊರತುಪಡಿಸಿ ಬೇರೇನೂ ಇರದು ಎಂಬುದನ್ನು ಒತ್ತಿ ಹೇಳುತ್ತಾರೆ.

ವ್ಯಕ್ತಿತ್ವವನ್ನು ಕೀಳಾಗಿ ಪರಿಗಣಿಸುವುದು : ಸೈಕೊಥೆರಪಿಸ್ಟ್ ಹಾಗೂ ಲೇಖಕಿ ರಾಡ್‌ಮೆನ್‌ರ ಪ್ರಕಾರ, ಭಾವಿ ಪತಿ ಅಥವಾ ಪತ್ನಿ ಪರಸ್ಪರರ ವ್ಯಕ್ತಿತ್ವವನ್ನು ಕೀಳಾಗಿ ಪರಿಗಣಿಸುವುದು ಅಥವಾ ಅವರ ವ್ಯಕ್ತಿತ್ವವನ್ನು ಗೌರವಿಸದೇ ಇರುವುದು ಈ ಮುಂತಾದ ಲಕ್ಷಣಗಳು ಸಂಬಂಧಕ್ಕೆ ಒಳ್ಳೆಯದಲ್ಲ ಎಂದು ಭಾವಿಸಲಾಗುತ್ತದೆ. ಇಂತಹ ಜೋಡಿಗಳು ಜೀವನವಿಡೀ ದುರ್ವರ್ತನೆ ತೋರಿಸುತ್ತಿರುತ್ತವೆ. ಸಂಗಾತಿ ಮೇಲಿಂದ ಮೇಲೆ ಈ ರೀತಿಯ ಕೆಟ್ಟ ವರ್ತನೆ ತೋರಿಸುತ್ತಿದ್ದರೆ, ಸಂಗಾತಿಯ ಜೊತೆಗೆ ಬಾಳ್ವೆ ನಡೆಸುವುದು ಕಷ್ಟ ಎನಿಸುತ್ತದೆ. ಅವರ ಮನಸ್ಸಿನಲ್ಲಿ ಕೀಳರಿಮೆ ಮನೆ ಮಾಡುತ್ತದೆ. ಇದರ ಪರಿಣಾಮ ಎಂಬಂತೆ ಮನೆಯಲ್ಲಿ ಆಗಾಗ ಜಗಳಗಳಾಗುತ್ತವೆ.

ಯೋಚನೆ ಹವ್ಯಾಸ ವ್ಯತ್ಯಾಸವಾಗಿರುವುದು: ಹುಡುಗರು ಮತ್ತು ಹುಡುಗಿಯರು ಬೇರೆ ಬೇರೆ ವಿಷಯಗಳಲ್ಲಿ ವಿಭಿನ್ನ ಅಭಿಪ್ರಾಯ ಹೊಂದಿರುತ್ತಾರೆ. ಹವ್ಯಾಸಗಳು, ಪೋಷಾಕುಗಳ ಬಗೆಗಿನ ಆಸಕ್ತಿ, ಯೋಚನೆಗಳು ಬೇರೆಬೇರೆಯಾಗಿರುವುದರಿಂದ ಸಣ್ಣ ಪುಟ್ಟ ತಕರಾರುಗಳು ಸಹಜವೆ. ಆದರೆ ಅವೇ ಹೆಚ್ಚುತ್ತ ಹೋದರೆ ಕ್ರಮೇಣ ಮನಸ್ತಾಪ ಮತ್ತು ಜಗಳಗಳಲ್ಲಿ ಪರಿವರ್ತನೆ ಆಗಬಹುದು. ಹುಡುಗಿ ಅಗತ್ಯಕ್ಕಿಂತ ಹೆಚ್ಚು ಮಾಡರ್ನ್‌ ಆಗಿ ಬಿಂದಾಸ್‌ ಆಗಿದ್ದರೆ ಅದು ಹುಡುಗನಿಗೆ ಕಿರಿಕಿರಿ ಎನಿಸಬಹುದು. ಹುಡುಗನ ಸರಳ ಜೀನಶೈಲಿ ಅವನನ್ನು ಪೆದ್ದ, ಏನೂ ಗೊತ್ತಿಲ್ಲದವರ ಗುಂಪಿಗೆ ಸೇರಿಸಬಹುದು. ಹುಡುಗ/ಹುಡುಗಿ ಇಬ್ಬರಲ್ಲಿ ಒಬ್ಬರು ಮಾಂಸಾಹಾರಿ ಹಾಗೂ ಸಸ್ಯಾಹಾರಿ ಆಗಿದ್ದಲ್ಲಿ ಸಂಸಾರದ ದಾರಿ ಕಷ್ಟಕರವಾಗಿ ಪರಿಣಮಿಸಬಹುದು. ರಾಜಕೀಯ ಕುರಿತಾದ ಯೋಚನೆ ಹಾಗೂ ಮತಬೇಧ ಕೂಡ ಇಕ್ಕಟ್ಟಿನ ಸ್ಥಿತಿಗೆ ತಂದೊಡ್ಡಬಹುದು.

ಪರಸ್ಪರರಿಗೆ ಸ್ಪೇಸ್‌ ಕೊಡದಿರುವುದು : ಮನೋತಜ್ಞ ಡಾ. ಅಮರ್‌ ಹೀಗೆ ಹೇಳುತ್ತಾರೆ, ಹುಡುಗ ಮತ್ತು ಹುಡುಗಿ ಮದುವೆ ಬಂಧನದಲ್ಲಿ ಸಿಲುಕುವ ನಿರ್ಧಾರ ಕೈಗೊಂಡಾಗ, ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು, ಪರಸ್ಪರರ ಮೇಲೆ ಹಕ್ಕು ಚಲಾಯಿಸುವುದು ಸಾಮಾನ್ಯ ಸಂಗತಿಗಳಾಗಿವೆ. ಆದರೆ ಒಬ್ಬ ಹುಡುಗ/ಹುಡುಗಿ ಪರಸ್ಪರರ ನಿಮಿಷ ನಿಮಿಷದ ಲೆಕ್ಕ ಕೇಳತೊಡಗಿದರೆ, ದಿನವಿಡೀ ತಮಗೆ ತಾವೇ ಮಾತನಾಡಿಕೊಳ್ಳುವುದು ಮತ್ತು ತಮ್ಮ ಮೇಲೆಯೇ ಗಮನ ಕೇಂದ್ರೀಕರಿಸುವ ಅಪೇಕ್ಷೆ ಹೊಂದಿದ್ದಲ್ಲಿ, ಹಾಗೊಮ್ಮೆ ಅದು ಈಡೇರದೇ ಹೋದಲ್ಲಿ, ಪರಸ್ಪರ ದೋಷಾರೋಪಣೆ, ಜಗಳದ ಸ್ಥಿತಿ ಉಂಟಾಗುತ್ತಿದ್ದಲ್ಲಿ, ಆ ಸಂಬಂಧ ದೀರ್ಘಕಾಲ ಮುಂದುವರಿಯುವುದು ಕಠಿಣ. ಎಷ್ಟೋ ಸಲ ಕಂಡುಬಂದ ಸಂಗತಿ ಎಂದರೆ, ಹುಡುಗ ಕೇಳುವ ಪ್ರಶ್ನೆಗಳಿಗೆ ಹುಡುಗಿ ಗಲಿಬಿಲಿಗೊಳ್ಳುತ್ತಾಳೆ. ಹುಡುಗ ಹುಡುಗಿಗೆ, “ಎಲ್ಲಿದ್ದೆ, ಏನ್ಮಾಡ್ತಿದ್ದೆ? ಫೋನ್‌ ಏಕೆ ಮಾಡಲಿಲ್ಲ?” ಎಂದು ಕೇಳಿದಾಗ, ನೀವು ತೋಚಿದಂತೆ ಉತ್ತರ ಕೊಟ್ಟರೆ ಸತ್ಯಾಸತ್ಯತೆ ಪರೀಕ್ಷಿಸಲು ಅವರು ಕ್ರಾಸ್‌ ವೆರಿಫಿಕೇಶನ್‌ ಮಾಡಬಹುದು. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಶುಷ್ಕ ಮತ್ತು ಶಿಷ್ಟಾಚಾರರಹಿತ ವರ್ತನೆ : ಮ್ಯಾರೇಜ್‌ ಫ್ಯಾಮಿಲಿ ಥೆರಪಿಸ್ಟ್ ಕ್ಯಾರಿಯಾ ಮ್ಯಾಕ್‌ಬ್ರೈಡ್‌ ಹೀಗೆ ಹೇಳುತ್ತಾರೆ, ಮದುವೆಯ ಬಳಿಕ ಹುಡುಗ-ಹುಡುಗಿ ಹೊರಗೆ ಸುತ್ತಾಡಲು ಹೋಗುತ್ತಾರೆ. ಹೋಟೆಲುಗಳಲ್ಲಿ ಊಟ ಕೂಡ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹುಡುಗ/ ಹುಡುಗಿ ಹೊರಗಿನವರ ಜೊತೆ ಹೇಗೆ ವ್ಯವಹರಿಸುತ್ತಾರೆ ಎನ್ನುವುದು ಸಹ ಮುಖ್ಯವಾಗುತ್ತದೆ. ಕೆಲವರು ತಮಗಿಂತ ಹೆಚ್ಚಾಗಿ ಸಮಾಜದ ಕೆಳ ದರ್ಜೆಯ ಜನರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿ ಮುಂಬರುವ ವರ್ಷಗಳಲ್ಲಿ ನಿಮ್ಮೊಂದಿಗೆ ಹಾಗೂ ನಿಮಗೆ ಹುಟ್ಟುವ ಮಗುವಿನ ಜೊತೆಗೆ ಅವರು ಹೇಗೆ ವರ್ತಿಸಬಹುದು ಎಂಬುದನ್ನು ಸರಿಯಾಗಿ ಊಹಿಸಬಹುದು.

ಒಂದು ವೇಳೆ ಹುಡುಗ/ಹುಡುಗಿ ರೆಸ್ಟೋರೆಂಟ್‌ನಲ್ಲಿ ವೇಟರ್‌ ಜೊತೆಗೆ, ಆಟೋರಿಕ್ಷಾ /ಟ್ಯಾಕ್ಸಿ ಡ್ರೈವರ್‌ ಜೊತೆಗೆ ಶಿಷ್ಟಾಚಾರಪೂರ್ವಕವಾಗಿ ಮಾತನಾಡಿದರೆ, ಅದೇ ಅವನ/ಅವಳ ನೈಜ ವರ್ತನೆ ಎಂದು ಭಾವಿಸಬೇಕು.

ಪ್ರತಿಯೊಂದರ ಬಗೆಗೂ ಟೀಕೆ : `ಮ್ಯಾರೀಡ್‌ ಪೀಪಲ್ ಸ್ಟೇಯಿಂಗ್‌ ಇನ್‌ ಏಜ್‌ ಆಫ್‌ ಡೈವೋರ್ಸ್‌’ನ ಲೇಖಕಿ ಫ್ರಾನ್ಸಿಸ್‌ ಕ್ಲ್ಯಾಗ್ಸ್

ಬ್ರೂನ್‌ ತಮ್ಮ ಪುಸ್ತಕದ ಸಂಶೋಧನೆಯ ಸಂದರ್ಭದಲ್ಲಿ ಸುಮಾರು 87 ಜೋಡಿಗಳ ಜೊತೆ ಮಾತನಾಡಿದರು. ಅವರು 15 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಸುಖಿ ದಾಂಪತ್ಯ ಜೀವನ ನಡೆಸಿದ್ದರು. ಫ್ರಾನ್ಸಿಸ್‌ ಅವರ ಯಶಸ್ವಿ ವೈವಾಹಿಕ ಜೀವನದ ರಹಸ್ಯಗಳನ್ನು ಅರಿಯಲು ಸಂದರ್ಶನ ಮಾಡಿದರು. ಆಗ ಹೊರಬಂದ ಮಹತ್ವದ ಸಂಗತಿ ಎಂದರೆ, ಪರಸ್ಪರರನ್ನು ಆದರಿಸುವುದು, ಸಂಗಾತಿಯನ್ನು ಅವರ ಹವ್ಯಾಸಗಳೊಂದಿಗೆ ಸ್ವೀಕರಿಸುವುದು. ಫ್ರಾನ್ಸಿಸ್‌ ಹೀಗೆ ಹೇಳುತ್ತಾರೆ, ಪರಸ್ಪರರನ್ನು ಗೌರವಿಸುವುದು ಪ್ರೀತಿಯ ಒಂದು ಕಲೆ. ಅದು ಪ್ರತಿಯೊಬ್ಬ ದಂಪತಿಗಳಿಗೂ ಕರಗತವಾಗಬೇಕು. ತಿಳಿವಳಿಕೆಯುಳ್ಳ ದಂಪತಿಗಳು ಪರಸ್ಪರರಲ್ಲಿನ ಕೊರತೆಗಳನ್ನಲ್ಲ, ವೈಶಿಷ್ಟ್ಯತೆಗಳನ್ನು ಶೋಧಿಸುತ್ತಾರೆ. ಆದರೆ ತಿಳಿವಳಿಕೆ ಇಲ್ಲದ ದಂಪತಿಗಳು ಪರಸ್ಪರರನ್ನು ದೂಷಿಸುತ್ತಾರೆ, ಹವ್ಯಾಸಗಳಲ್ಲಿ ತಪ್ಪು ಹುಡುಕುತ್ತಾರೆ. ಅಷ್ಟೇ ಅಲ್ಲ, ಗೊತ್ತಿದ್ದೊ, ಗೊತ್ತಿಲ್ಲದೆಯೋ ಭಾವನೆಗಳಿಗೆ ಧಕ್ಕೆ ತರುತ್ತಾರೆ. ಇಂತಹ ಜೋಡಿಗಳ ಸಂಬಂಧ ಬಹಳ ವರ್ಷಗಳ ತನಕ ಉಳಿಯುವುದಿಲ್ಲ.

ಮನೆಯ ಇತರೆ ಸದಸ್ಯರಿಗೆ ಗೌರವ ಕೊಡದೆ ಇರುವುದು : ಮನೋತಜ್ಞೆ ಹಾಗೂ ಸಲಹೆಗಾರ್ತಿ ರೂಪಾ ಹೀಗೆ ಹೇಳುತ್ತಾರೆ, ಮದುವೆಯ ಬಳಿಕ ಹೆಂಡತಿಯು ಪತಿಯ ಮನೆಯ ಎಲ್ಲ ಸದಸ್ಯರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ ಹಾಗೂ ಅವರಿಗೆ ಸೂಕ್ತ ಗೌರವ ಕೊಡಲೇಬೇಕಾಗುತ್ತದೆ. ಅದೇ ರೀತಿ ಪತಿಗೂ ಕೂಡ ಹೆಂಡತಿಯ ಮನೆಯ ಸರ್ವ ಸದಸ್ಯರ ಭಾವನೆಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಆದರೆ ಗಂಡ ಅಥವಾ ಹೆಂಡತಿ ಪರಸ್ಪರರ ಕುಟುಂಬದ ಸದಸ್ಯರ ಚರ್ಚೆಗಳಿಗೆ ಮುಖ ಸಿಂಡರಿಸುತ್ತಿದ್ದರೆ, ಅವರಿಗೆ ಗೌರವಪೂರ್ವಕ ಶಬ್ದಗಳನ್ನು ಬಳಸದೆ ಇದ್ದಲ್ಲಿ, ಮಾತು ಮಾತಿಗೆ ಅವರ ವಿಚಾರಗಳು, ಪೋಷಾಕುಗಳು, ಹವ್ಯಾಸಗಳ ಬಗ್ಗೆ  ಟೀಕೆ ಮಾಡುತ್ತಿದ್ದಲ್ಲಿ ಆ ಸಂಬಂಧ ಬಹಳ ವರ್ಷಗಳ ಕಾಲ ಸ್ಥಿರವಾಗಿ ಉಳಿಯುವುದು ಕಷ್ಟ. ಏಕೆಂದರೆ ಮದುವೆಯ ಬಳಿಕ ಗಂಡ/ಹೆಂಡತಿಯ ಸಂಬಂಧದ ಹೊರತಾಗಿಯೂ ಬೇರೆ ಸಂಬಂಧಗಳು ಕೂಡ ಅಷ್ಟೇ ಮಹತ್ವ ಪಡೆದುಕೊಳ್ಳುತ್ತವೆ.

ಸ್ವಚ್ಛತೆ ಕಾಪಾಡದೇ ಇರುವುದು : ಡಾ. ಸುಂದರನಾಥ್‌ ಹೇಳುತ್ತಾರೆ, ಯಾವ ಹುಡುಗ/ಹುಡುಗಿಯರು ಸ್ವಚ್ಛವಾಗಿಲ್ಲದೆ, ಹೈಜೀನ್‌ ಮೇಂಟೇನ್‌ ಮಾಡುವುದಿಲ್ಲವೋ ಅವರ ಸಂಬಂಧ ಹೆಚ್ಚು ಕಾಲ ಮುಂದುವರಿಯುವುದು ಕಷ್ಟ. ಯಾವ ವ್ಯಕ್ತಿ ಸ್ವಚ್ಛತೆ ಕಾಪಾಡುವುದಿಲ್ಲವೋ ಅಂತಹ ವ್ಯಕ್ತಿಯ ಜೊತೆ ನೀವು ಅಂತರಂಗದ ಕ್ಷಣಗಳನ್ನು ಖುಷಿಯಿಂದ ಕಳೆಯಲು ಆಗುತ್ತದೆಯೇ? ಸಮಾಗಮವೇ ವೈವಾಹಿಕ ಜೀವನದ ಒಂದು ಮಹತ್ವದ ಸಂಗತಿ ಎಂಬುದು ನಿಮ್ಮ ಗಮನದಲ್ಲಿರಲಿ.

ಮಹತ್ವದ ವಿಷಯ ತಿಳಿಸದೇ ಇರುವುದು : ಡಾ. ಅಮರನಾಥ್‌ ಹೀಗೆ ಹೇಳುತ್ತಾರೆ, ಭಾವಿ ಪತಿ/ಪತ್ನಿಯ ಜೀವನದಲ್ಲಿ ಯಾವುದಾದರೂ ಮಹತ್ವದ ಘಟನೆ ಘಟಿಸಿದ್ದರೆ, ಹೊಸ ಉದ್ಯೋಗ ಸಿಕ್ಕಿದ್ದರೆ, ಉದ್ಯೋಗದಲ್ಲಿ ಭಾರಿ ನಷ್ಟ ಉಂಟಾಗಿದ್ದರೆ, ಕುಟುಂಬದಲ್ಲಿ ಯಾರದ್ದಾದರೂ ಹುಟ್ಟುಹಬ್ಬವಿದ್ದರೆ ಅಥವಾ ಇತರೆ ಯಾವುದಾದರೂ ವಿಷಯಗಳ ಬಗ್ಗೆ ನಿಮ್ಮ ಭಾವಿ ಪತಿ/ಪತ್ನಿಗೆ ಗೊತ್ತಾಗದೇ ಇದ್ದರೆ, ಆ ವಿಷಯ ಫೇಸ್‌ಬುಕ್‌ ಸ್ಟೇಟಸ್‌ ಅಥವಾ ಮ್ಯೂಚ್ಯುವಲ್‌ ಫ್ರೆಂಡ್ಸ್ ಗಳಿಂದ ತಿಳಿದರೆ ಆಗ ಭಾವನೆಗಳಿಗೆ ಧಕ್ಕೆ ತಗುಲುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಸಂಗಾತಿಯ ದೃಷ್ಟಿಯಲ್ಲಿ ಮಹತ್ವದ ಸ್ಥಾನದಲ್ಲಿಲ್ಲ, ಗೌಪ್ಯತೆ ಕಾಪಾಡುವವರಲ್ಲ ಎಂಬುದು ಖಚಿತವಾಗಿ ಬಿಡುತ್ತದೆ. ಒಂದು ಸಂಗತಿ ಗಮನದಲ್ಲಿರಲಿ, ಕೊರತೆಗಳ ಕಾರಣದಿಂದಲೇ ಸಂಬಂಧಗಳಲ್ಲಿ ಬಿರುಕು ಕಾಣಿಸುತ್ತದೆ.

– ಅಂಜನಾ ಜೈನ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ