ರವಿ : ಹೆಂಡತಿ ಬಳಿ ವಾದ ಮಾಡುವುದು ಅಥವಾ ಸಾಫ್ಟ್ ವೇರ್ ಲೈಸೆನ್ಸ್ ಅಗ್ರಿಮೆಂಟ್ ಓದುವುದು ಎರಡೂ ಒಂದೇ ಅಂತೀನಿ.
ಶಶಿ : ಅದು ಹೇಗೆ ಸಾಧ್ಯ?
ರವಿ : ಎಲ್ಲವನ್ನೂ ಇಗ್ನೋರ್ ಮಾಡಿ ಕೊನೆಯಲ್ಲಿ `ಐ ಅಗ್ರಿ’ ಅಂತ ಕ್ಲಿಕ್ ಮಾಡಲೇಬೇಕಾಗುತ್ತೆ!
ಒಮ್ಮೆ ಮೋಹನ್ ತನ್ನ ಪ್ರಾಣಸ್ನೇಹಿತ ಕಿಶೋರ್‌ನನ್ನು ಸಂಜೆ 8 ಗಂಟೆ ಹೊತ್ತಿಗೆ ಹೆಂಡತಿಗೆ ಹೇಳದೆ ಕೇಳದೆ ಊಟಕ್ಕೆಂದು ಆಫೀಸ್‌ನಿಂದ ನೇರವಾಗಿ ಮನೆಗೆ ಕರೆತಂದಿದ್ದ.
ಮನೆಯಲ್ಲಿ ಮಕ್ಕಳು ಎಲ್ಲಾ ಕಡೆ ಬುಕ್ಸ್, ಬಟ್ಟೆ, ಆಟಿಕೆ ಹರಡಿದ್ದರು. ಒಟ್ಟಾರೆ ಮನೆ ದೊಡ್ಡಿಯಂತಿತ್ತು. ಹೆಂಡತಿ ರಾಧಾ ತಲೆ ಕೆದರಿಕೊಂಡು, ಹಳೆ ನೈಟಿಯಲ್ಲಿ ಅಡುಗೆಮನೆಯಲ್ಲಿ ಏನೋ ಅರೆಬರೆ ಬೇಯಿಸುತ್ತಿದ್ದಳು.
ಅತಿಥಿಯನ್ನು ಆ ಘಳಿಗೆಯಲ್ಲಿ ಕರೆತಂದ ಗಂಡನನ್ನು ಕಂಡು ಉಗ್ರ ಕಾಳಿಯಾದಳು. ರಾಧಾ : ಏನ್ರಿ ನೀವು… ಮದುವೆಯಾಗಿ 2 ಮಕ್ಕಳಾದರೂ ಯಾವಾಗ ಏನು ಕೆಲಸ ಮಾಡಬೇಕು ಅಂತ ಗೊತ್ತಾಗೋದಿಲ್ಲ. ಮನೆ ನೋಡಿ… ತಿಪ್ಪೆ ಗುಂಡಿ ಆಗಿದೆ. ನಾನು ಎಂಥ ಗೆಟಪ್‌ನಲ್ಲಿದ್ದೀನಿ… ತಲೆ ಬಾಚಿಲ್ಲ, ಮೇಕಪ್ ಮಾಡಿಕೊಂಡಿಲ್ಲ, ಅದೆಲ್ಲ ಹಾಳಾಗಲಿ, ಮೊನ್ನೆ ಸಾಂಬಾರು, ನಿನ್ನೆ ಉಳಿದ ಅನ್ನದಲ್ಲಿ ಏನೋ ಅಡ್ಜಸ್ಟ್ ಮಾಡೋಣಾಂತಿದ್ದೆ… ಈಗ ನಾನು ಯಾವ ಹೊಸ ಅಡುಗೆ ಮಾಡಲಿ?
ಮೋಹನ್ : ನೀನೇನೂ ಚಿಂತಿಸಬೇಡ… ಇರೋದನ್ನೇ ಹಾಕುವ… ಪೆದ್ದು ಮುಂಡೇದು, ಮದುವೆ ಆಗಬೇಕು ಅಂತ ಹೊರಟಿದೆ. ಪ್ರಾಕ್ಟಿಕಲ್ ಶಾಕ್ ಟ್ರೀಟ್‌ಮೆಂಟ್ ಕೊಡೋಣ ಅಂತ ಒಂದು ಡೆಮೋ ಕೊಡಲು ಹೀಗೆ ಕರೆತಂದೆ.
ಗಂಗಾಧರ್ : ಬೇಗ ಬಡಿಸ್ತೀಯಾ… ಹೊಟ್ಟೆ ತಾಳ ಹಾಕ್ತಿದೆ.
ಯಮುನಾ : ಇದೋ ಬಂದೆ…. ತಗೊಳ್ಳಿ, ಏನು ಅವಸರವಪ್ಪ!
ಗಂಗಾಧರ್ : ಅದ್ಸರಿ, ಇವತ್ತು ಇದೇನು ಮಾಡಿದ್ದಿ ಮಹರಾಯ್ತಿ?
ಯಮುನಾ : ಏನೋ ಒಂದು… ಹೆಸರು, ವಿವರ ಬೇಕೇ?
ಗಂಗಾಧರ : ಅಟ್‌ಲೀಸ್ಟ್ ಈ ಹೊಸ ರುಚಿಯ ಹೆಸರು ಗೊತ್ತಾದ್ರೆ… ನಾಳೆ ಎಡವಟ್ಟಾಗಿ ಡಾಕ್ಟರ್ ಬಳಿ ಹೋದಾಗ, `ಏನು ತಿಂದಿದ್ರಿ?’ ಅಂದರೆ ಹೇಳೋಕ್ಕೆ ಅದರ ಹೆಸರು ಗೊತ್ತಾಗಬೇಕು ತಾನೇ….?
ಗಿರೀಶ್ : ಯಾವ ವಿಷಯವನ್ನು ಹೆಂಡತಿ ಎಂದೂ ತನ್ನದು ಎಂದು ಒಪ್ಪಿಕೊಳ್ಳುವುದಿಲ್ಲ?
ಸತೀಶ್ : ತಪ್ಪು ಆದದ್ದನ್ನು!
ಗುಂಡ : ಎಲ್ಲಿ ಹಾಳಾಗಿ ಹೋಗಿದ್ಯೆ ಇಷ್ಟು ಹೊತ್ತು?
ಗುಂಡಿ : ಏ…. ಶಾಪಿಂಗ್ ಹೋಗಿದ್ದೆ ಕಣ್ರಿ, ಏನೋ 4-5 ಗಂಟೆ ತಡ ಆಯ್ತಪ್ಪ, ಅದಕ್ಕೆ ಹೀಗೆ ಕೂಗಿಕೊಳ್ಳುವುದೇ?
ಗುಂಡ : ಹಾಳಾಗಿ ಹೋಗಲಿ…. ಏನೇನು ತಗೊಂಡೆ?
ಗುಂಡಿ : 2 ಕ್ಲಿಪ್ ಹೇರ್‌ಪಿನ್ಸ್…. 4-5 ಸೆಲ್ಛಿ!
ಡಾಕ್ಟರ್ : ಐ ಆ್ಯಮ್ ವೆರಿ ಸಾರಿ ಮಹೇಶ್….. ಹೆಚ್ಚೆಂದರೆ ನಿಮ್ಮ ಹೆಂಡತಿ ಇನ್ನೊಂದು ವಾರ ಉಳಿಯಬಹುದು ಅಷ್ಟೆ…
ಮಹೇಶ್ : ಇದರಲ್ಲಿ ಸಾರಿ ಹೇಳುವುದಕ್ಕೇನಿದೆ ಡಾಕ್ಟರ್? 27 ವರ್ಷಗಳ ವೈವಾಹಿಕ ಜೀವನದ ದೀರ್ಘಾವಧಿ ಶಿಕ್ಷೆ ಅನುಭವಿಸಿದ್ದೇನೆ… ಇನ್ನೊಂದು ವಾರ ತಾನೇ…? ಮುಂದೆಲ್ಲ `ಅಚ್ಛೆ ದಿನ್’ ಅಂತ ಸಹಜವಾಗಿ ತೆಗೆದುಕೊಳ್ತೀನಿ!
ರಾಮಣ್ಣ ಟ್ರಂಕಿನಿಂದ ಹಳೆಯ ಕಾಗದ ಪತ್ರಗಳನ್ನು ಹುಡುಕಿ ತೆಗೆದು ಎಲ್ಲಾ ಹರಡಿಕೊಂಡು ಪರಿಶೀಲಿಸುತ್ತಿದ್ದರು. ಏನೇನೋ ಪತ್ರಗಳ ಮಧ್ಯೆ ಹೆಂಡತಿಯ ಹಳೆ ಜಮಾನಾದ 10ನೇ ತರಗತಿಯ ಕ್ಯಾರೆಕ್ಟರ್ ಸರ್ಟಿಫಿಕೇಟ್ ದೊರಕಿತು. ಅದರಲ್ಲಿ ಕೆಳಗೆ ಬರೆದಿದ್ದನ್ನು ಓದಿ ಜ್ಞಾನ ತಪ್ಪಿದವರು ಇನ್ನೂ ಎದ್ದಿಲ್ಲವಂತೆ!
ಅಂಥಾದ್ದು ಅದರಲ್ಲಿ ಏನಿತ್ತಂತೆ? `ಈಕೆ ಮೃದುಭಾಷಿ… ಶಾಂತ ಸ್ವಭಾವದವಳ!’
ಅಳಿಯ : ಏನು ಹೇಳಲಿ…. ಮದುವೆ ಆಗಿ ಒಂದು ವರ್ಷದಲ್ಲಿ ನಿಮ್ಮ ಮಗಳು ನನ್ನ ಜೀವನವನ್ನು ನಿತ್ಯ ನರಕವಾಗಿಸಿದ್ದಾಳೆ… ಸಾಕಪ್ಪ ಈ ಜೀವನ, ಬೇಗ ಕಣ್ಣು ಮುಚ್ಚಿದರೆ ಸಾಕು ಅಂತಾಗಿದೆ… ನೀವಾದರೂ ಅವಳಿಗೆ ಬುದ್ಧಿ ಹೇಳಿ, ನಾನು ನೆಮ್ಮದಿಯಾಗಿರಲು ಉಪಾಯ ಹುಡುಕಬಾರದೇ?
ಮಾವ : ಸಮಾಧಾನ ಮಾಡಿಕೊಳ್ಳಪ್ಪ… ಒಬ್ಬ ಗಂಡನ ಸಂಕಟ ಇನ್ನೊಬ್ಬ ಗಂಡನಿಗೆ ಮಾತ್ರ ಗೊತ್ತಾಗುತ್ತೆ… ಏನು ಹೇಳಲಿ… ನಿನ್ನ ಬಳಿ ಇರುವ ಬಟ್ಟೆ ಪೀಸಿನ ಒರಿಜಿನಲ್ ಥಾನ್… ಗೊತ್ತಾಯ್ತಲ್ಲ, ಥಾನ್ ನನ್ನ ಬಳಿ ಇದೆ. ಮತ್ತೆ ನಾನು ಹೇಗೆ ಬದುಕಿರಬೇಕು ಅಂತ ನೀನೇ ಹೇಳು!
ಗುಂಡ-ಗುಂಡಿ ಒಂದೇ ಸಮ ಕಿತ್ತಾಡಿದರು. ಆ ಬೇಸರಕ್ಕೆ ದಿನವಿಡೀ ಮಾತನಾಡಲಿಲ್ಲ. ಮಾರನೇ ದಿನ ಬೆಳಗಾದಾಗ…
ಗುಂಡಿ : ನೋಡ್ರಿ, ಇದು ಸರಿಹೋಗಲ್ಲ. ಇಬ್ಬರೂ ಒಂದು ಸಂಧಾನಕ್ಕೆ ಬರೋಣ, 50-50 ಆಯ್ತಾ?
ಗುಂಡ : ಸರಿ, ಮೊದಲು ನಾನು ಏನು ಮಾಡಬೇಕು?
ಗುಂಡಿ : ನೀವು ಕ್ಷಮೆ ಕೇಳಿ, ನಾನು ನಿಮ್ಮನ್ನು ಕ್ಷಮಿಸಿಬಿಡ್ತೀನಿ!
ನಡುವಯಸ್ಸಿನ ದಂಪತಿಗಳು ಯಾವುದೋ ಪಾರ್ಟಿಗೆ ಹೋಗಿದ್ದರು. ಬಹಳ ದಿನಗಳಾದ ಮೇಲೆ ಪಾರ್ಟಿ ರುಚಿ ಕಂಡಿದ್ದ ಗಂಡ, ಮೈಮರೆತು ಅದರಲ್ಲಿ ತಲ್ಲೀನನಾಗಿದ್ದ. ಅಷ್ಟರಲ್ಲಿ ದೂರದಿಂದ ಹೆಂಡತಿ ತನ್ನ ತೋರು ಬೆರಳು ತೋರಿ, ಬಳಿ ಬರುವಂತೆ ಸನ್ನೆ ಮಾಡಿ ಕರೆದಳು. ಗಂಡನಿಗಂತೂ ರೇಗಿಹೋಯಿತು. ಇಲ್ಲಿಯೂ ನೆಮ್ಮದಿಯಾಗಿರಲು ಬಿಡುವುದಿಲ್ಲವಲ್ಲ ಅಂತ ಸಿಟ್ಟೇರಿತು. ಅವಳ ಹತ್ತಿರ ಬಂದ ಗಂಡ, “ಏನೇ ಅದು ನಿನ್ನ ಗೋಳು?” ಎಂದು ಕೇಳಿದ.
“ಏನಿಲ್ಲ… ಇಷ್ಟು ವರ್ಷಗಳ ನಂತರ ಈ ಬೆರಳಿನ ತಾಕತ್ತು ಕುಗ್ಗಿಲ್ಲ ತಾನೇ ಎಂದು ಪರೀಕ್ಷಿಸುತ್ತಿದ್ದೆ!” ಎಂದಾಗ ಅವನ ಮತ್ತೆಲ್ಲ ಒಂದೇ ಕ್ಷಣದಲ್ಲಿ ಇಳಿದುಹೋಗಿತ್ತು.
ಬಹಳ ದಿನಗಳ ನಂತರ ಬೋರೇಗೌಡರು ಡಾಕ್ಟರ್‌ನ್ನು ಕಾಣಲು ಬಂದರು. ಅವರನ್ನು ವೈದ್ಯರು ಆಮೂಲಾಗ್ರವಾಗಿ ಪರೀಕ್ಷಿಸಿದರು.
ಡಾಕ್ಟರ್ : ಇದೇನು ಗೌಡ್ರೆ… ಯಾವುದೋ ಹಳೆಯ ಕಾಯಿಲೆ ನಿಮ್ಮನ್ನು ಬಹಳ ದಿನಗಳಿಂದ ಒಳಗೊಳಗೇ ಕೊರೆಯುತ್ತಿದೆ ಅನಿಸುತ್ತೆ!
ಗೌಡರು : ಅಯ್ಯೋ…. ಮೆಲ್ಲಗೆ ಹೇಳಿ ಡಾಕ್ಟ್ರೆ… ಇವಳು ಇಲ್ಲೇ ಹೊರಗೆ ಕೂತಿದ್ದಾಳೆ!
ಗಿರೀಶ : ತಾಯಿಯ ಆರೈಕೆಗೂ ಹೆಂಡತಿಯ ಆರೈಕೆಗೂ ಅಜಗಜಾಂತರ ವ್ಯತ್ಯಾಸವಿದೆ… ಗೊತ್ತಾ?
ಸತೀಶ್ : ಅದು ಹೇಗೆ….?
ಗಿರೀಶ : ಮಗ ಬೆಳೆಯತೊಡಗಿದಂತೆ ತಾಯಿ ಅವನ ತಲೆಗೂದಲಲ್ಲಿ ಕೈಯಾಡಿಸಿ, ಎಣ್ಣೆ ಹಚ್ಚಿ, ಬಾಚಿ ಕಳುಹಿಸಿದಂತೆ, ಅದು ದಟ್ಟವಾಗಿ ಚೆನ್ನಾಗಿ ಬೆಳೆಯುತ್ತದೆ.
ಮದುವೆ ಆದಮೇಲೆ ಹೆಂಡತಿ ಕೈಗೆ ಜುಟ್ಟು ಒಪ್ಪಿಸಿಬಿಟ್ಟರೆ ಆಯ್ತು, ಅವಳು ಒಮ್ಮೆ ಕೈ ಆಡಿಸಿದ ಮೇಲೆ ಸೈಟೋ ಸೈಟು….!
ವಿಮಲಾ : ಗಂಡನಿಗೆ ಏನಾದ್ರೂ ಅಫೇರ್ ಇದ್ಯಾ ಅಂತ ತಿಳಿದುಕೊಳ್ಳುವುದು ಹೇಗೇ?
ಕಮಲಾ : ತುಂಬಾ ಸುಲಭ…. ಆತ ಒಳ್ಳೆಯ ಮೂಡ್‌ನಲ್ಲಿ ಇರುವಾಗ ಅವನ ಎದೆಗೆ ತಲೆಯಾನಿಸಿ, `ಡಾರ್ಲಿಂಗ್, ನಿನ್ನ ಜೀವನದಲ್ಲಿ ಬೇರೊಬ್ಬ ಹೆಣ್ಣು ಇಲ್ಲ ತಾನೇ?’ ಅಂತ ಕೇಳು.
ವಿಮಲಾ : ಹೂಂ…ಹೂಂ… ಆಮೇಲೆ?
ಕಮಲಾ : ಆತನ ಎದೆಬಡಿತ ನಾರ್ಮಲ್ ಆಗಿದ್ದರೆ ಏನೂ ಎಡವಟ್ಟಿಲ್ಲ ಅಂತ ಅರ್ಥ. ಅದೇ ಬಹಳ ಹೆಚ್ಚಿದ್ದರೆ ಏನೋ ನಡೀತಿದೆ ಅಂತರ್ಥ…..
ಅದೆಲ್ಲ ಸರಿ, ಪ್ರವಾಸದಲ್ಲಿ ದರ್ಶನೀಯ ಸ್ಥಾನಗಳ ಲಿಸ್ಟ್ ಮಾಡುವಾಗ ಯಾವ ಜಾಗದ ಪಕ್ಕ ಧಾರಾಳವಾಗಿ ಶಾಪಿಂಗ್‌ಗೆ ಅವಕಾಶವಿದೆಯೋ ಅದಕ್ಕೆ ಮಾತ್ರ ಪ್ರಾಶಸ್ತ್ಯ ಕೊಡಬೇಕು!