ಶಿಲೋದ್ಯಾನ ಅಥವಾ ಕಲ್ಲಿನ ತೋಟ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಹರಿಯಾಣ ರಾಜ್ಯದ ರಾಜಧಾನಿಯಾದ ಚಂಢೀಗಡದ ವಿನೂತನ ಕಲ್ಲಿನ ತೋಟದಂತೆ ಇರುವ ಕೇರಳದ ಮಲಪ್ಪುಳಾ ಕಲ್ಲಿನ ತೋಟದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣವೇ…..?

ಚಂಡೀಗಢ ಎಂದ ಕೂಡಲೇ ನೆನಪಾಗುವುದೇ ನೇಕ್‌ಚಂದ್‌ ಶಿಲೋದ್ಯಾನ ಅಥವಾ ಕಲ್ಲಿನ ತೋಟ. ಭಾರತದ ಮಟ್ಟಿಗಂತೂ ಇದೊಂದು ವಿಶಿಷ್ಟ ಮತ್ತು ವಿಸ್ಮಯಕಾರಿ ಸೃಷ್ಟಿ.  ವ್ಯರ್ಥವೆಂದು ಬಿಸಾಡಿದ ಕಲ್ಲು, ಲೋಹ, ಗಾಜು, ಪಿಂಗಾಣಿ ಮುಂತಾದ ಘನಪದಾರ್ಥಗಳಿಂದ ಮನಮೋಹಕ ಕಲಾಕೃತಿಗಳನ್ನು ರಚಿಸಿ ಸೊಬಗಿನ ಸೋಜಿಗದ ತೋಟವನ್ನು ನಿರ್ಮಿಸಬಹುದು ಎಂದು ಕಲಾವಿದ ಮತ್ತು ಎಂಜಿನಿಯರ್‌ ನೇಕ್‌ಚಂದ್‌ ಸೈನಿ ಅಂದು ತೋರಿಸಿಕೊಟ್ಟರು. ನಮ್ಮ ದೇಶದಲ್ಲಿ ತಾಜ್‌ಮಹಲ್ ನಂತರ ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಜನಪ್ರಿಯ ತಾಣವೆಂದರೆ ಚಂಡೀಗಢದ ನೇಕ್‌ಚಂದ್‌ ಕಲ್ಲಿನ ತೋಟ. ಈ ತೋಟದ ಅದ್ಭುತಗಳನ್ನು ಕಂಡು ಬೆರಗಾಗಿದ್ದ ನಮಗೆ ಅಂತಹುದೇ ಇನ್ನೊಂದು ಅನುಭವ ಕೇರಳದ ಮಲಪ್ಪುಳಾದಲ್ಲಿ ಆಯಿತು.

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಒಂದು ರಮಣೀಯ ಸ್ಥಳವೆಂದರೆ ಮಲಪ್ಪುಳಾ. ಇಲ್ಲಿ ದೊಡ್ಡ ಅಣೆಕಟ್ಟು ಇದೆ. ಅದಕ್ಕೆ ಆತುಕೊಂಡಂತೆ ಪ್ರವಾಸಿಗರು ವಿಹರಿಬಲ್ಲ ಹಸಿರು ಉದ್ಯಾನನವಿದೆ. ರೋಪ್‌ವೇ ಈ ಉದ್ಯಾನವನದ ಪ್ರಮುಖ ಆಕರ್ಷಣೆ.  ಮಲಪ್ಪುಳಾ ನಗರದಲ್ಲಿ ಇನ್ನೊಂದು ಅತಿ ಮುಖ್ಯ ಪ್ರೇಕ್ಷಣೀಯ ಸ್ಥಳವೆಂದರೆ ಕಲ್ಲಿನ ತೋಟ. ಅಣೆಕಟ್ಟೆಯಿಂದ 800 ಮೀ.ಗಳಷ್ಟು ದೂರದಲ್ಲಿರುವ ಈ ತೋಟ ಥಟ್ಟನೆ ಚಂಡೀಗಢದ ತೋಟವನ್ನು ನೆನಪಿಸಿದರೂ ತನ್ನದೇ ರೀತಿಯಲ್ಲಿ ವಿಭಿನ್ನ ಎನಿಸುತ್ತದೆ. ಇದನ್ನು ಸಂದರ್ಶಿಸದೆ ಮಲಪ್ಪುಳಾದ ಪ್ರವಾಸ ಪೂರ್ಣವಾಗುವುದಿಲ್ಲ. ನಾವು ನಿಶ್ಶಬ್ದವಾಗಿ ಕಲ್ಲಿನ ತೋಟದ ಒಳಹೊಕ್ಕೊಡನೆ ಮೂರು ಆಯಾಮದ ಆಕೃತಿಗಳು ಒಂದೊಂದಾಗಿ ಅನಾವರಣಗೊಳ್ಳುತ್ತಾ ಸಾಗುತ್ತವೆ. ಗ್ರಾನೈಟ್‌ ಕಲ್ಲು, ಟೈಲ್ಸ್ ನ ತುಣುಕುಗಳು, ವಿದ್ಯುತ್ತಿನ ಫ್ಯೂಸು, ಇನ್ಸುಲೇಟರ್‌ಗಳು, ಗಾಜಿನ ಬಳೆಗಳು, ಪ್ಲಾಸ್ಟಿಕ್‌, ಡಬ್ಬಿ, ಪಿಂಗಾಣಿ, ಮೆಲಮೈನ್‌ಗಳ ಚೂರುಗಳು. ಹೀಗೆ ತೊಟ್ಟಿ, ಗಟಾರ, ಚರಂಡಿಗಳನ್ನು ಸೇರಬೇಕಿದ್ದ ವ್ಯರ್ಥ ಪದಾರ್ಥಗಳೆಲ್ಲಾ ಬಗೆಬಗೆಯ ಸ್ಛೂರ್ತಿಗಳಿಂದ ಸಂಯೋಜಿಸಲ್ಪಟ್ಟು ಚಿತ್ತಾರಗಳಾಗಿ ಭಿತ್ತಿಗಳ ಮೇಲೆ ಕಂಗೊಳಿಸುತ್ತವೆ. ಬರೀ ಫ್ಯೂಸನ್ನಷ್ಟೇ ಅಳವಡಿಸಿದ ಒಂದು ಗೋಡೆಯಂತೂ ನವ್ಯ ಕಲೆಯಂತೆ ನಳನಳಿಸುತ್ತದೆ!

ಇರುವೆ, ಪ್ರಾಣಿಪಕ್ಷಿಗಳು, ಗುಹಾವಾಸಿ ಕಾಡು ಮನುಷ್ಯರು, ಆದಿವಾಸಿಗಳು, ನರ್ತಿಸುವವರು, ಕಥಕ್ಕಳಿ ಕಲಾವಿದ, ನಿತ್ಯದ ಕೆಲಸದಲ್ಲಿ ತೊಡಗಿರುವವರು, ದೋಣಿ ನಡೆಸುವವರು, ಇನ್ನೇನು ಜೀವತಳೆದು ನಮ್ಮನ್ನು ಹಿಂಬಾಲಿಸಬಹುದು ಎಂದು ಭಾಸವಾಗುತ್ತದೆ. ದೊಡ್ಡಕಲ್ಲನ್ನು ಎತ್ತಿ ಹಿಡಿದ ದೈತ್ಯ ಮನುಷ್ಯನೊಬ್ಬ ಅದನ್ನು ನಮ್ಮ ತಲೆ ಮೇಲೆ ಎತ್ತಿ ಹಾಕಿಬಿಟ್ಟರೆ ಕಥೆ ಏನು ಎಂದು ದಿಗಿಲಾಗುತ್ತದೆ. ಕೇರಳದ ಸಂಸ್ಕೃತಿಯ ದಟ್ಟ ಛಾಯೆಯನ್ನು ವಿನ್ಯಾಸ ಮತ್ತು ಆಕೃತಿಗಳಲ್ಲಿ  ನಾವು ಕಾಣಬಹುದಾಗಿದೆ. ಡೈನೋಸಾರ್‌, ಜಿರಾಫೆ, ಕಾಂಗರೂ, ಪೆಂಗ್ವಿನ್‌ಗಳಿಗೂ ಇಲ್ಲಿ ತಾಣವಿದೆ. ಸುಮಾರು ಒಂದು ಗಂಟೆಯ ಅವಧಿಯಲ್ಲಿ ವೀಕ್ಷಿಸಿಬಹುದಾದ ಈ ಕಲ್ಲಿನ ತೋಟ ಚಂಡೀಗಢ ತೋಟದಷ್ಟು ದೊಡ್ಡದಲ್ಲದಿದ್ದರೂ ಅಚ್ಚಳಿಯದ ಪ್ರಭಾವ ಬೀರುವಲ್ಲಿ ಹಿಂದೆ ಬೀಳುವುದಿಲ್ಲ. ಮಕ್ಕಳಿಗಂತೂ ಇಲ್ಲಿ ವಿಹರಿಸುವುದು ಬಹಳ ಸಂತೋಷ ಕೊಡುತ್ತದೆ. ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಹ ಕೋನಗಳು ಮತ್ತು ಮಗ್ಗುಲುಗಳನ್ನು ನಾವಿಲ್ಲಿ ಕಂಡುಕೊಳ್ಳಬಹುದು.

1996ರ ಜನವರಿ 7ರಂದು ಮಲಫ್ಪುಳಾದ ಕಲ್ಲಿನ ತೋಟ ಉದ್ಘಾಟನೆಗೊಂಡಿತು. ತೋಟದ ಒಳಗೆ ಮತ್ತು ಹೊರಗಿನ ಆವರಣವನ್ನು ಸ್ವಚ್ಛವಾಗಿ ಇಡಲಾಗಿದೆ. ಇನ್ನು ಪ್ರವಾಸಿಗರಾದ ನಮಗೂ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂಬ ತಿಳಿವಳಿಕೆಯ ಅಗತ್ಯವಿದೆ. ಕಸವನ್ನು ಕಲಾಕೃತಿಯಾಗಿಸಿದ ಕಡೆ ಕಸವನ್ನು ಎಸೆದು ವಿಕೃತಿಗಳನ್ನು ಸೃಷ್ಟಿಸುವುದು ಸುತರಾಂ ಒಪ್ಪಲಾಗದ ವಿಷಯ. ಕಲೆ ಖುಷಿ ಕೊಡುವುದು ಅದು ಸುಂದರ, ಸ್ವಚ್ಛ ಆವರಣದಲ್ಲಿ ಅರಳಿದಾಗ ಮಾತ್ರ. ತೋಟದಲ್ಲಿ ಜೀವಂತ ಗಿಡಮರಗಳೇ ಇರಬೇಕೆಂಬ ಸಾಮಾನ್ಯ ಗ್ರಹಿಕೆಗೆ ಭಿನ್ನವಾದ ಕಲ್ಲಿನ ತೋಟಗಳಿಗೆ ನಮ್ಮ ಕಲ್ಲು ಹೃದಯಗಳನ್ನು ಕರಗಿಸುವ ಸಾಮರ್ಥ್ಯವಿದೆ. ನೀವು ಮಲಪ್ಪುಳಾಕ್ಕೆ ಭೇಟಿಕೊಟ್ಟರೆ ಕಲ್ಲಿನ ತೋಟಕ್ಕೊಂದು ಹಾಜರಾತಿ ಹಾಕಲು ಮರೆಯದಿರಿ.

ಅಂದಹಾಗೆ ದಕ್ಷಿಣ ಭಾರತದ ಮೊಟ್ಟಮೊದಲ ಕಲ್ಲಿನ ತೋಟವೆಂದು ಹೆಸರಾಗಿರುವ ಈ ತೋಟವನ್ನು ಕಲ್ಪಿಸಿ ಸೃಜಿಸಿದವರು ಯಾರು ಗೊತ್ತೇ? ನೇಕ್‌ಚಂದ್‌ ಸೈನಿಯವರೇ, ಪಾಲಕ್ಕಾಡಿನ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮತಿಯ ಕೋರಿಕೆಯ ಮೇರೆಗೆ ಹಲವು ತಿಂಗಳು ದುಡಿದು ದಕ್ಷಿಣ ಭಾರತದಲ್ಲೂ ತಮ್ಮ ಛಾಪು ಮೂಡಿಸಿದ ನೇಕ್‌ಚಂದ್‌ ಅವರನ್ನು ಕೃತಜ್ಞತೆಯಿಂದ ನೆನೆಯೋಣ. ಅಂದಹಾಗೆ ದೇಶದ ಪ್ರತಿ ತಾಲ್ಲೂಕಿನಲ್ಲೂ ಒಂದೊಂದು ಪುಟ್ಟ ಕಲ್ಲಿನ ತೋಟಗಳು ಅರಳಿದರೆ ಟನ್ನುಗಟ್ಟಲೆ ವ್ಯರ್ಥ ವಸ್ತುಗಳು ಕಣ್ಮನ ಸೆಳೆಯುವ ಕಲಾಕೃತಿಗಳಾಗುತ್ತವೆ. ಈ ಕನಸು ಭವಿಷ್ಯದಲ್ಲಿ ನಿಜವಾಗಲಿ ಎನ್ನೋಣವೇ?

– ಕೆ. ಎಸ್‌. ರವಿಕುಮಾರ್‌

Tags:
COMMENT