ದೆಹಲಿಯ ಹೊರವಲಯದ ಗುರ್‌ಗಾಂವ್‌ನ ತುಂಬಾ ಬರಿಯ ಮಾಲ್ಗಳು, ಆದರೆ ಕನಸುಗಳ ರಾಜಧಾನಿ ಎನಿಸಿಕೊಂಡ ಈ ಮಾಲ್ ವಿಶಿಷ್ಟವಾದುದು. `ಕಿಂಗ್ಡಮ್ ಆಫ್‌ ಡ್ರೀಮ್ಸ್’ ಹೆಸರೇ ಹೇಳುವಂತೆ ರಾಜರ ಬೆಲೆಯೇ! ಟಿಕೆಟ್‌ಗಾಗಿ ಅಷ್ಟೊಂದು ದರ ಕೊಟ್ಟು ನೋಡುವುದೇನು ಎನಿಸಿದರೂ ನೋಡುವ ಕುತೂಹಲ ನಮ್ಮನ್ನು ಅಲ್ಲಿಗೆ ಎಳೆದುಕೊಂಡು ಹೋಯಿತು. ನಾವಿದ್ದ ಸ್ಥಳದಿಂದ ಬಹಳ ದೂರವೇ, ಮುಕ್ಕಾಲು ಗಂಟೆಯ ಪ್ರಯಾಣ. ಪ್ರಯಾಣದ ಆಯಾಸದಿಂದ ಬಸವಳಿದಿದ್ದರೂ ಒಳ ಹೊಕ್ಕೊಡನೆಯೇ ದೊಡ್ಡ ಅರಮನೆಯ ದರ್ಶನವಾದಂತೆನಿಸುತ್ತದೆ. ಅಲ್ಲಿನ ರಚನಾ ವಿನ್ಯಾಸ, ಕೆತ್ತನೆ, ಕುಸುರಿ ಕೆಲಸ ಎಲ್ಲ ಮನಸೆಳೆದುಬಿಡುತ್ತದೆ. ಅಷ್ಟು ಸುಂದರ ಮನಮೋಹಕ  ತಾಣಕ್ಕೆ ಇಂಬು ಕೊಟ್ಟಂತೆ ಹಸಿರು ಗಿಡಗಳು, ಹುಲ್ಲು ಹಾಸು ಹೊರಗೆ ಬಿಸಿಲು ಸುಡುತ್ತಿದ್ದರೂ ಒಳಗೆ ತಣ್ಣನೆಯ ಗಾಳಿ… ಹವಾ ನಿಯಂತ್ರಿತ ಮಾಲ್ ಅಲ್ಲವೇ?

ನಾವು ಶೋನ ಟಿಕೆಟ್‌ ತೆಗೆದುಕೊಂಡಿದ್ದರಿಂದ ನಮಗೆ ಪ್ರವೇಶಕ್ಕೆ ಹಣವಿಲ್ಲ. ಒಳ ಹೊಕ್ಕೊಡನೆಯೇ ತಲೆ ಎತ್ತಿದರೆ ನೀಲಾಕಾಶ. ಅಲ್ಲಲ್ಲಿ ನಕ್ಷತ್ರಗಳು, ತಣ್ಣನೆಯ ಗಾಳಿ ತಂಪನೆಯ ನೀಲಾಕಾಶ ಹೊರಗಿನ ಸುಡುವ ಬಿಸಿಲನ್ನು ಮರೆಸೇಬಿಡುತ್ತದೆ. ಥೇಟ್‌ ನೀಲಾಕಾಶದಂತಿರುವ ಸೂರು, ಅಲ್ಲಲ್ಲಿ ಮೋಡಗಳು ತಂಪಾದ ಅಂಗಳದಲ್ಲಿದ್ದೇವೇನೋ ಎಂದು ಭಾಸವಾಗುತ್ತದೆ. ಮೆಕಾವ್ ಮತ್ತು ಲಾಸ್‌ ವೇಗಾಸ್‌ನ ವಿನೇಷಿಯಾ ಮತ್ತು ಜೊಹಾನ್ಸ್ ಬರ್ಗ್‌ನ ಮಾಲ್‌, ದುಬೈನ ಮಾಲ್ ಆಫ್‌ ಎಮಿರೇಟ್ಸ್ ಅನ್ನು ನೆನಪಿಸುತ್ತದೆ. ಅವುಗಳೆಲ್ಲಾ ಗಾತ್ರದಲ್ಲಿ ಬಲು ದೊಡ್ಡವು, ಇದನ್ನು ಅದರ ಒಂದು ತುಣುಕು ಎನ್ನಬಹುದು. ಒಳ ಹೊಕ್ಕರೆ ನಿಮಗಾಗುವುದು ಭಾರತದ ದರ್ಶನ. ಒಂದೊಂದು ರಾಜ್ಯವನ್ನು ಪ್ರತಿನಿಧಿಸುವ ಹೋಟೆಲ್‌ಗಳ ಹೊರಭಾಗದ ರಚನಾ ವಿನ್ಯಾಸ, ಕೆತ್ತನೆಗಳು, ಅಲ್ಲಿನ ಸಂಸ್ಕೃತಿಯನ್ನು ನೆನಪಿಗೆ  ತರಿಸುತ್ತದೆ. ಪಂಜಾಬಿನ ವಿಭಾಗದ ಹೊರಗೆ ಟ್ರಕ್‌ ನಿಲ್ಲಿಸಿದ್ದರೆ, ಕೇರಳ ಮುಂಭಾಗದಲ್ಲಿ ಅಲ್ಲಿನ ಕಥಕ್ಕಳಿ ನೃತ್ಯದ ಗೊಂಬೆ. ಪಕ್ಕದಲ್ಲೇ ಅಸ್ಸಾಮ್, ಹೈದರಾಬಾದ್‌, ಚೆನ್ನೈ, ಕರ್ನಾಟಕ, ಆದರೆ ಕರ್ನಾಟಕದ ಕೌಂಟರ್‌ನಲ್ಲಿರುವವರಿಗೆ ಕನ್ನಡದ ಒಂದು ಅಕ್ಷರ ಅರ್ಥವಾಗುವುದಿಲ್ಲ. ನಮ್ಮ ಬೆಂಗಳೂರಿನ ಮಾಲ್ಗಳಲ್ಲೇ ಕನ್ನಡದ ಸುಳಿವಿಲ್ಲ. ಇನ್ನು ದೆಹಲಿಯಲ್ಲಾದರೂ ಹೇಗೆ ಇರಲು ಸಾಧ್ಯ ಅಲ್ಲವೇ?

ಅಲ್ಲಿಂದ ಮುಂದೆ ಹೋದರೆ ಗೋವಾದ ಬೀಚ್‌…. ಈ ರೀತಿ ಆಯಾ ರಾಜ್ಯದ ಸಂಸ್ಕೃತಿಯನ್ನು ನೆನಪಿಸುವ ರಚನಾ ವಿನ್ಯಾಸದ ಕಟ್ಟಡದೊಳಗೆ ಅಲ್ಲಿನ ಸೊಗಡನ್ನು ಸೂಸುವ ತಿನಿಸುಗಳು, ಅಲ್ಲಿನ ತಿಂಡಿ ಸವಿಯುತ್ತಾ ಇದ್ದಾಗ ಇದ್ದಕ್ಕಿದ್ದಂತೆ ಪಂಜಾಬಿನ ಭಲ್ಲೇ ಭಲ್ಲೇ ನೃತ್ಯ ಆರಂಭವಾಗಿಬಿಡುತ್ತದೆ. ಎಲ್ಲರ ಗಮನ ಅಲ್ಲಿ, ಅರ್ಧ ಗಂಟೆಯ ನಂತರ ರಾಜಸ್ಥಾನಿ ಗೊಂಬೆಯಾಟ, ತಮಿಳುನಾಡಿನ ನಾದ ಸ್ವರ, ಎಲ್ಲಾ ರಾಜ್ಯಗಳ ಸಂಗೀತ ನೃತ್ಯಗಳನ್ನು ಕಂಡು ಆನಂದಿಸಬಹುದು.

ನಿಮ್ಮ ಪ್ರವೇಶದ ಟಿಕೆಟ್‌ಗಾಗಿ ಕೊಟ್ಟ ಹಣವನ್ನು ತಿನ್ನುವುದಕ್ಕೆ ಬಳಸಬಹುದು. ಪ್ರವೇಶ ದರ 50 ರೂ.ಗಳಷ್ಟೆ ಮಿಕ್ಕಿದ್ದನ್ನು ತಿನ್ನಲು ಉಪಯೋಗಿಸಬಹುದು ಅಥವಾ ಕೇರಳದ ತರುಣಿಯರಿಂದ ಮಸಾಜ್‌ ಮಾಡಿಸಿಕೊಳ್ಳಬಹುದು ಮತ್ತೂ ಹಣ ಉಳಿದರೆ ಅಲ್ಲಿರುವ ಮಳಿಗೆಗಳಲ್ಲಿ ಏನನ್ನು ಬೇಕಾದರೂ ಖರೀದಿಸಬಹುದು. ಎಲ್ಲವನ್ನೂ ನೋಡುತ್ತಾ ಮುಂದೆ ಸಾಗಿದರೆ ಅಲ್ಲೊಂದು ಕೃತಕ ಬೀಚ್‌, ಒಂದು ಹಡಗು. ಎಲ್ಲರೂ ಹಡಗಿನ ಮುಂದೆ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮಕ್ಕಳು ಮರಳಿನಲ್ಲಿ ಮನೆ ಕಟ್ಟುವುದರಲ್ಲಿ ನಿರತರು. ಈ ರೀತಿ ವಿಭಿನ್ನ ಚಟುವಟಿಕೆಗಳ ತಾಣ. ಮಧ್ಯಾಹ್ನದ ಹನ್ನೆರಡರಿಂದ ರಾತ್ರಿ ಹನ್ನೊಂದರವರೆಗೆ ತೆರೆದಿರುತ್ತದೆ. ಅಷ್ಟೊಂದು ದುಬಾರಿಯಾದರೂ ಜನರ ಮೇಳವೇ ಅಲ್ಲಿ ನೆರೆದಿರುತ್ತದೆ. ಇದೆಲ್ಲಾ ಮಾಲಿನ ಒಳಗಿನ ಗಮ್ಮತ್ತು. ಪಕ್ಕದಲ್ಲೇ ಥಿಯೇಟರ್‌, ಅದು ಅಂತಿಂತಹುದಲ್ಲ. ವಿಶ್ವ ಮಟ್ಟದ್ದು ವರ್ಲ್ಡ್ ಕ್ಲಾಸ್‌ ಎನ್ನಬಹುದು. ನೀವು ಕೊಟ್ಟ ಹಣಕ್ಕನುಸಾರವಾದ ಸೀಟುಗಳು, ಎರಡೂವರೆ ಗಂಟೆಯ ಶೋ, ನಾವು ನೋಡಿದ್ದು ಒಬ್ಬ ಅಲೆಮಾರಿ ರಾಜಕುಮಾರನ ಕಥೆ, ಒಬ್ಬ ರಾಜಕುಮಾರ ಚಿಕ್ಕಂದಿನಲ್ಲಿ ಮಂತ್ರಿಯ ಕುತಂತ್ರದಿಂದ ಕಳೆದುಹೋಗಿ  ಒಬ್ಬ ಅಲೆಮಾರಿ ಪಂಗಡದ ಕೈಗೆ ಸಿಕ್ಕು ನಂತರ ದೊಡ್ಡವನಾದ ಮೇಲೆ ರಾಜ್ಯ ವಾಪಸ್‌ ಪಡೆದು ರಾಜಕುಮಾರನಾಗುವ ಕಥೆ. ಇದು ಕಥೆಯ ಹಂದರ. ಅದಕ್ಕನುಸಾರವಾಗಿ ನೃತ್ಯಗಳು, ರಾಜನ ಹುಟ್ಟುಹಬ್ಬದ ಸಲವಾಗಿ ನಡೆಯುವ ನೃತ್ಯ ಪ್ರದರ್ಶನದ ಸಮಯದಲ್ಲಿ ರಾಜ ರಾಣಿ ಕುಳಿತ ಸಿಂಹಾಸನ ಪೂರ್ಣ ಮೇಲಕ್ಕೆ ಆಗಸದೆತ್ತರಕ್ಕೆ ಹೋಗಿಬಿಡುತ್ತದೆ. ಇದ್ದಕ್ಕಿದ್ದಂತೆ ವೇದಿಕೆ ಕೆಳಗಿಳಿಯುತ್ತದೆ. ನರ್ತಕರು ನಿಮ್ಮ ಅಕ್ಕಪಕ್ಕದಿಂದ ಓಡೋಡಿ ವೇದಿಕೆಯನ್ನು ಪ್ರವೇಶಿಸುತ್ತಾರೆ. ರಾಜಕುಮಾರ ಪಕ್ಷಿಯ ಮೇಲೆ ಕುಳಿತು ಸೂರಿನಿಂದ ವೇದಿಕೆಗೆ ಬಂದಿಳಿಯುತ್ತಾನೆ. ದಾರಗಳ ಸಹಕಾರದಿಂದ ತೇಲಾಡುತ್ತಾ ಅಂತರಿಕ್ಷದಲ್ಲಿ ರಾಜಕುಮಾರ ರಾಜಕುಮಾರಿಯರ ನೃತ್ಯ, ವೇದಿಕೆಯ ಹಿಂಭಾಗದಲ್ಲಿ ಒಮ್ಮಿಂದೊಮ್ಮೆಲೇ ಕಥೆಗನುಸಾರವಾಗಿ ಅರಣ್ಯದ ನೋಟ, ಮತ್ತೊಮ್ಮೆ ನೀಲ ನೀರಿನೊಳಗೆ ತೊನೆದಾಡುವ ಮೀನು, ಜಲಚರಗಳು, ಲಂಬಾಣಿಯರ ಕೇರಿ, ವೇದಿಕೆಯ ಹಿಂದಿನ ದೃಶ್ಯಗಳು ಮುಂದುವರಿದು ಅಕ್ಕಪಕ್ಕದ ಗೋಡೆಗಳನ್ನು ಆರಿಸಿ ದೃಶ್ಯಗಳ ನೈಜತೆಯನ್ನು ಮೂಡಿಸುತ್ತದೆ.

ಕಥೆಯ ಮಧ್ಯೆ ಮಧ್ಯೆ ಬಾಲಿವುಡ್‌ನ ಜನಪ್ರಿಯ ಹಾಡುಗಳ ನೃತ್ಯಗಳು. ನಾವು ಕಾಲು ತಲೆಯನ್ನಾಡಿಸುವಂತೆ ಮಾಡುತ್ತವೆ. ಈಗ ಬೇರೆ ಬೇರೆಯ ಶೋಗಳನ್ನೂ  ಪ್ರಾರಂಭಿಸುತ್ತಿದ್ದಾರೆ.  ನಿಜಕ್ಕೂ ನಮ್ಮ ದೇಶದಲ್ಲೇ ಇದು ಮೊದಲ ಪ್ರಯತ್ನ ಎನಿಸುತ್ತದೆ. ಪ್ಯಾರಿಸ್‌ನ ಲಿಡೋ ಶೋ, ಲಾಸ್‌ ವೆಗಾಸ್‌ನ ಸರ್ಕ್ಯುಸೋಲ್, ಮೆಕಾವ್ ‌ನ ಸಿಟಿ ಲೈಟ್‌ನ ಶೋ ಈ ರೀತಿ ಎಲ್ಲ ಕಡೆಯ ತುಣುಕುಗಳ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದಕ್ಕೆ ನಮ್ಮತನ ನಮ್ಮ ದೇಸೀಯ ಸೊಗಡನ್ನು ಪ್ರತಿಬಿಂಬಿಸಿ ಮಧ್ಯೆ ಮಧ್ಯೆ ಹಾಸ್ಯದ ತುಣುಕುಗಳು, ಜನಪ್ರಿಯ ಹಾಡುಗಳು ಮನಕ್ಕೆ ಮುದವನ್ನೀಯುತ್ತವೆ. ನಮ್ಮ ಭಾಷೆ, ನಮ್ಮ ಹಾಡುಗಳು ಮತ್ತೂ ಮನಸೆಳೆಯುತ್ತವೆ. ಇಲ್ಲಿ ಯಾರನ್ನೋ ಈ ಶೋ ಬಗ್ಗೆ ವಿಚಾರಿಸಿದಾಗ ನಿಮ್ಮ ಪೈಸಾ ವಸೂಲ್ ಖಂಡಿತ ಆಗುತ್ತದೆ ಎಂದರು. ಶೋ ನೋಡಿ ಹೊರ ಬಂದ ಮೇಲೆ ಅದು ನಿಜವೆನಿಸಿತು. ಮತ್ತೊಂದಷ್ಟು ಹೊತ್ತು ಹೊರ ಬಂದು ಮಾಲಿನ ಉಚಿತ ನೃತ್ಯ, ಮ್ಯಾಜಿಕ್‌ ನೋಡುತ್ತಾ ಕಾಲ ಕಳೆದವು. ದಿನ ಕಳೆದೇಹೋಯಿತು.

ಕನಸಿನ ಪ್ರಪಂಚದಿಂದ ಹೊರ ಬರಲೇಬೇಕಾಯಿತು. ಕಥೆ ಚಿತ್ರಗಳಲ್ಲಷ್ಟೇ ಅಲ್ಲವೇ, ಯಕ್ಷಿಣಿ ಪ್ರಪಂಚ ಕನಸಿನ ಕುದುರೆಯನ್ನೇರುವುದು…? ಬೆಳಗಾದರೆ ಅದೇ ಟ್ರಾಫಿಕ್‌, ಅದೇ ಬಿಸಿಲು ಮತ್ತದೇ ಪ್ರಪಂಚದಲ್ಲಿ ನಿಲ್ಲದ ಓಡಾಟ, ಜೀವನದ ಹೋರಾಟ. ಮನೆಗೆ ತಲುಪುವಷ್ಟರಲ್ಲಿ ಟ್ರಾಫಿಕ್‌ನ ಸದ್ದು ಗದ್ದಲದಲ್ಲಿ ಮತ್ತೊಂದು ಗಂಟೆ ಕಳೆದೇಹೋಯಿತು.

ಏನೇ ಇರಲಿ ಒಳ್ಳೆಯ ಮಜಾ ಕೊಡುವ ಶೋ, ವಿದೇಶಕ್ಕೆ ಹೋಗಿ ಶೋ ನೋಡಲಾಗದಿದ್ದವರಿಗೆ, ನೋಡಿದವರಿಗೂ ಸಹ ಖಂಡಿತ ಇದೊಂದು ಒಳ್ಳೆಯ ಮಸ್ತ್ ಮನರಂಜನಾ ಕೂಟ ಎನ್ನುವುದರಲ್ಲಿ ಎರಡು ಮಾತಿಲ್ಲ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ