ನಟಿ

ಕಣ್ಣು ಕೋರೈಸುವ ಸಿನಿಮಾಲೋಕದಲ್ಲಿ ಗಟ್ಟಿಯಾಗಿ ತಳವೂರಿದ ನಂತರ ಅದಕ್ಕೆ ಗುಡ್‌ಬೈ ಹೇಳುವುದು ಹಾಗೂ ತಮ್ಮ ಇಡೀ ಜೀವನವನ್ನು ಅಗತ್ಯವಿರುವವರ ಸೇವೆಗಾಗಿ ಮುಡಿಪಿಡುವುದು, ಇಂಥದ್ದನ್ನು ಬಹುಶಃ ಟೀನಾರಂಥ ಅಪರೂಪದ ವ್ಯಕ್ತಿಗಳು ಮಾತ್ರ ಮಾಡಲು ಸಾಧ್ಯ…..!

`ದೇಸ್‌ ಪರದೇಸ್‌, ರಾಕಿ, ಸೌತನ್‌, ಕರ್ಜ್‌’ ಮುಂತಾದ ಡಝನ್‌ಗಟ್ಟಲೇ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಅತ್ಯುನ್ನತ ಹೆಸರು ಗಳಿಸಿದ ನಟಿ ಟೀನಾ, ಆ ಗ್ಲಾಮರ್‌ ಲೋಕವನ್ನು ಸಂಪೂರ್ಣವಾಗಿ ತ್ಯಜಿಸಿ ಖ್ಯಾತಿವೆತ್ತ ವಾಣಿಜ್ಯೋದ್ಯಮಿ ಅನಿಲ್ ಅಂಬಾನಿಯವರನ್ನು ಮದುವೆಯಾದರು. ನಂತರ ಇಬ್ಬರು ಗಂಡು ಮಕ್ಕಳಾದ ಜಯ್‌ ಅನ್ಮೋಲ್‌ ಹಾಗೂ ಜಯ್‌ ಅಂಶುಲ್ ರ ತಾಯಿಯಾದರು. ಮದುವೆಯಾದ ನಂತರ ಟೀನಾ ಕೇವಲ ತಮ್ಮ ಕುಟುಂಬಕ್ಕಷ್ಟೇ ಅಂಟಿ ಕೂರಲಿಲ್ಲ, ಬದಲಿಗೆ ಹಲವು ವಿಧದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದರು. ಆಕೆ ಮೊದಲು ವಯೋವೃದ್ಧರಿಗಾಗಿ `ಹಾರ್ಮನಿ ಫಾರ್‌ ಸಿಲ್ವರ್‌ ಫೌಂಡೇಶನ್‌’ ಸಂಸ್ಥೆ  ಆರಂಭಿಸಿದರು.

ಇದಾದ ಮೇಲೆ ಇದನ್ನು ಮತ್ತಷ್ಟು ಕಾರ್ಯೋನ್ಮುಖಗೊಳಿಸಲು, ಮುಂಬೈನಲ್ಲಿ ಕೋಕಿಲಾ ಬೇನ್‌ ಧೀರೂಬಾಯಿ ಅಂಬಾನಿ ಹಾಸ್ಪಿಟಲ್ ಸ್ಥಾಪಿಸಿದರು. ಈ ಆಸ್ಪತ್ರೆಯಲ್ಲಿ ಸಿಗದ ಅತ್ಯಾಧುನಿಕ ತಂತ್ರಜ್ಞಾನದ ಸೇವೆಗಳೇ ಇಲ್ಲ ಎನ್ನಬಹುದು.

ಆಕೆ ತಮ್ಮ ಸೆಕೆಂಡ್‌ ಇನ್ನಿಂಗ್ಸ್ ನಲ್ಲಿ  ಆರಂಭಿಸಿದ ಸೇವಾ ಕಾರ್ಯಗಳ ಕುರಿತಾಗಿ ಬಹಳ ಉತ್ಸಾಹಿತರಾಗಿದ್ದಾರೆ. ಆಕೆ ಗೃಹಶೋಭಾ ಜೊತೆ ಹಂಚಿಕೊಂಡ ಮಾತುಕಥೆಯ ಮುಖ್ಯಾಂಶಗಳು :

ಬಾಲಿವುಡ್‌ನಿಂದ ಒಮ್ಮೆಲೇ ನೀವು ಸಾಮಾಜಿಕ ಚಟುವಟಿಕೆಗಳು, ಹೆಲ್ಟ್ ಕೇರ್‌ ಇದಕ್ಕೆ ಹೇಗೆ ಎಂಟ್ರಿ ಪಡೆದಿರಿ?

ಅನೇಕ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಹೆಸರು, ಹಣ ಗಳಿಸಿದ್ದಾಯ್ತು. ನಂತರ ಮದುವೆ ಆಗಿ ಸೆಟಲ್ ಆದೆ. ಆಮೇಲೆ ಸೆಕೆಂಡ್‌ ಇನ್ನಿಂಗ್ಸ್ ಬಗ್ಗೆ ಯೋಚಿಸಿದಾಗ, ಹಿಂದಿನಿಂದ ಅಂದುಕೊಂಡಂತೆ ವಯೋವೃದ್ಧರಿಗಾಗಿ ಏನಾದರೂ ಮಾಡಲೇಬೇಕು ಎನಿಸಿತು. ಅದನ್ನು ನಿರ್ವಹಿಸುತ್ತಲೇ ಹೆಲ್ತ್ ಕೇರ್‌ ಕಡೆ ಗಮನಹರಿಸಿದೆ. ಹೀಗಾಗಿ ಆಸ್ಪತ್ರೆ ಶುರುವಾಯಿತು.

ಈ ಹೆಲ್ತ್ ಕೇರ್‌ ಕ್ಷೇತ್ರದಲ್ಲಿ ನಿಮಗೆ ಎಲ್ಲಿ ಹೆಚ್ಚಿನ ಕುಂದುಕೊರತೆ ಕಾಣಿಸಿತು?

ಭಾರತದಲ್ಲಿ ಹೆಲ್ತ್ ಕೇರ್‌ ಬಹಳ ಕಡಿಮೆ ಎಂದೇ ಹೇಳಬೇಕು. ಕೇವಲ ಕಡು ಬಡವರ ಮೇಲೆ ದೋಷಾರೋಪಣೆ ಹೊರಿಸುವುದರಿಂದ ಲಾಭವಿಲ್ಲ. ಅಂಥವರ ಬಳಿ ಹಣ, ಮಾಹಿತಿ ಏನೂ ಇರುವುದಿಲ್ಲ. ಹೀಗಾಗಿ ಅವರಿಗೆ ಸೂಕ್ತ ವೈದ್ಯರು ಸಿಗುವುದಿಲ್ಲ. ಅದೇ ರೀತಿ ಮಧ್ಯಮ ವರ್ಗದವರನ್ನು ನೋಡಿದರೆ ಅವರಿಗೆ ಹೆಲ್ತ್ ಕೇರ್‌ ಬಲು ಕಠಿಣ, ದುಬಾರಿ ಎನಿಸುತ್ತದೆ. ಉಚ್ಚ ವರ್ಗದ ಬಳಿ ಹಣವೇನೋ ಧಾರಾಳವಿದೆ, ಆದರೆ ನುರಿತ ವೈದ್ಯರ ಕೊರತೆ ಇದೆ. ಯಾರಾದರೂ ಸರ್ಕಾರಿ ಆಸ್ಪತ್ರೆಯ ಸೇವೆ ಬಯಸಿದರೆ ಅಲ್ಲಿ ಸದಾ ದೊಂಭಿ, ರಶ್‌ ಇರುತ್ತದೆ.  ಸಿಸ್ಟಮ್ ಸರಿ ಇರೋಲ್ಲ. ರೋಗಿಗಳು ಶುಶ್ರೂಷೆಗಾಗಿ ಎಷ್ಟೋ ಕಾಯಬೇಕು, ಪಾಡುಪಡುತ್ತಾರೆ, ಎಲ್ಲಾ ಬಗೆಯ ಸೌಲಭ್ಯಗಳೂ ಇರುವುದಿಲ್ಲ. ಜಾಗದ ಸಮಸ್ಯೆ, ತರಬೇತಿ ಪಡೆದ ವೈದ್ಯರು ಇಲ್ಲ ಎಂಬ ಸಮಸ್ಯೆ….. ಒಟ್ಟಾರೆ ಈ ಸಮಸ್ಯೆಗಳಿಗೆ ಕೊನೆ ಮೊದಲಿಲ್ಲ. ನಮ್ಮ ಹೆಲ್ತ್ ಕೇರ್‌ ಸಿಸ್ಟಮ್ ನಲ್ಲಿ ಬಹಳಷ್ಟು ಗ್ಯಾಪ್ಸ್ ಇವೆ. ಅವನ್ನು ನಾನು ಖುದ್ದಾಗಿ ಸರ್ಕಾರದ ಬಳಿ ಚರ್ಚಿಸಿ ತುಂಬಬೇಕಿದೆ. ಇದು ಖಂಡಿತಾ ಸುಲಭದ ಕೆಲಸವಲ್ಲ. ಇದರಲ್ಲಿ ಸಾಕಷ್ಟು ಕಠಿಣ ಸವಾಲುಗಳಿವೆ. ಆದರೆ ನಿಧಾನವಾಗಿ ಒಂದೊಂದೇ ಸರಿಹೋಗುತ್ತದೆ. ಹೆಚ್ಚು ಹೆಚ್ಚು ಜನ ಪ್ರಾಮಾಣಿಕವಾಗಿ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕಷ್ಟೆ.

ನೀವು ನಿಮ್ಮ `ಸ್ಟಾರ್‌ಡಮ್’ ಮಿಸ್‌ ಮಾಡ್ತಿದ್ದೀರಾ? ಮುಂದೆ ಸಿನಿಮಾದಲ್ಲಿ ಮತ್ತೆ ನಟಿಸುವಾಸೆ ಇದೆಯೇ?

ಜೀವನದಲ್ಲಿ 4 ಘಟ್ಟ ಇರುತ್ತದೆ….. ಬಾಲ್ಯ, ಯೌವನ, ಪ್ರೌಢಾವಸ್ಥೆ, ವೃದ್ಧಾಪ್ಯ. ನೀವು ಒಂದು ಘಟ್ಟದಲ್ಲಿ ಬದುಕುತ್ತಾ ಮುಂದಿನದಕ್ಕೆ ಸಾಗಿಹೋಗುತ್ತೀರಿ. ನಾನು ಸದಾ ಮುಂದಿನ ಘಟ್ಟ ಬೇಗ ತಲುಪ ಬಯಸುತ್ತೇನೆ, ಹಿಂದೆ ಹೋಗಲು ಬಯಸುವುದಿಲ್ಲ. ಆ ಘಟ್ಟವನ್ನು ನಾನು ಚೆನ್ನಾಗಿ ಎಂಜಾಯ್‌ ಮಾಡಿದ್ದೇನೆ, ಇನ್ನೇನಿದ್ದರೂ ಮುಂದುವರಿಯುತ್ತಿರುವುದಷ್ಟೇ!

ನಿಮ್ಮ ಪ್ರಕಾರ ಮಹಿಳೆಯರು ಪ್ರೆಸೆಂಟೆಬಲ್ ಆಗಿರುವುದು ಎಷ್ಟು ಮುಖ್ಯ?

ವ್ಯಕ್ತಿ ತನಗೋಸ್ಕರ ತಾನು ಸಿದ್ಧನಾಗಬೇಕು. ಯಾರೇ ಆಗಲಿ ನೀಟಾಗಿ, ಡೀಸೆಂಟ್‌ ಆಗಿ, ಅಟ್ಟುಕಟ್ಟಾಗಿ ಅಲಂಕರಿಸಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದರೆ ಅದರಲ್ಲಿ ತಪ್ಪೇನು? ಸಮರ್ಪಕ ಉಡುಗೆತೊಡುಗೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ನಮ್ಮ ಮಹಿಳಾ ಓದುಗರಿಗೆ ನಿಮ್ಮ ಸಂದೇಶವೇನು?

ನಾನು ಗೃಹಶೋಭಾ ಪತ್ರಿಕೆಯ ಎಲ್ಲಾ ಓದುಗರಲ್ಲೂ ಮಾಡಿಕೊಳ್ಳುವ ಮನವಿ ಇಷ್ಟೆ, ಎಂದೂ ನಿಮ್ಮ ಆರೋಗ್ಯದ ಬಗ್ಗೆ ಉದಾಸೀನರಾಗಿ ಇರಬೇಡಿ! ಆರೋಗ್ಯವೇ ಭಾಗ್ಯ! ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. ಮಹಿಳೆಯರು ಬ್ರೆಸ್ಟ್ ಕ್ಯಾನ್ಸರ್‌ ತಪ್ಪಿಸಲು ಪ್ರತಿ ವರ್ಷ ಮೆಮೊಗ್ರಫಿ ಮಾಡಿಸಬೇಕು. ಅದರಿಂದ ಅಕಸ್ಮಾತ್‌ ರೋಗ ತೀರಾ ಮೊದಲ ಹಂತದಲ್ಲಿದ್ದರೆ, ಸುಲಭವಾಗಿ ಚಿಕಿತ್ಸೆ ಪಡೆಯಬಹುದು. ಸದಾ ಆರೋಗ್ಯಕರ, ಪೌಷ್ಟಿಕ ಆಹಾರವನ್ನೇ ಸೇವಿಸಿ. ಫಾಸ್ಟ್ ಫುಡ್‌, ಜಂಕ್‌ಫುಡ್‌ ಇತ್ಯಾದಿ ತ್ಯಜಿಸಿ ಸ್ಥೂಲತೆ ಕಾಡದಂತೆ ನೋಡಿಕೊಳ್ಳಿ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ