ಭಾರತದಲ್ಲಿ ವಿಶ್ವಮಟ್ಟದ ಫುಟ್‌ಬಾಲ್ ಮೂಲಸೌಕರ್ಯ ನಿರ್ಮಾಣದ ಮಹತ್ವಾಕಾಂಕ್ಷೆ ಭಾಗವಾಗಿ, ಬೆಂಗಳೂರು ಎಫ್‌ಸಿ ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ತನ್ನ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಯಲಹಂಕದಲ್ಲಿ ಉದ್ಘಾಟಿಸಿದೆ.
ಹೈಬ್ರಿಡ್ ಪಿಚ್ ಎಂದರೆ ಪ್ರಾಕೃತಿಕ ಹುಲ್ಲು ಮತ್ತು ಸಿಂಥೆಟಿಕ್ ಶಕ್ತಿಸಾಧನಗಳನ್ನು ಒಗ್ಗೂಡಿಸುವ ಮೈದಾನ. ಈ ಹೈಬ್ರಿಡ್ ಪಿಚ್ ಜೊತೆ ನೈಸರ್ಗಿಕ ಹುಲ್ಲಿನ 9-ಎ-ಸೈಡ್ ಪಿಚ್ ಕೂಡ ಇರುತ್ತದೆ. ತರಬೇತಿ ಕೇಂದ್ರದಲ್ಲಿ ಕೇವಲ ಪಿಚ್‌ಗಳು ಮಾತ್ರವಲ್ಲದೆ, ಶಕ್ತಿ ಮತ್ತು ಶಾರೀರಿಕ ಸ್ಥಿತಿಗತಿಯ ಅಭ್ಯಾಸಕ್ಕೆ ಸಂಪೂರ್ಣ ಸಲಕರಣೆಗಳಿರುವ ಜಿಮ್ನೇಷಿಯಂ, ಪ್ರೊಫೆಷನಲ್ ಮಟ್ಟದ ತರಬೇತಿ, ಪಂದ್ಯ ದಿನದ ಡ್ರೆಸ್ಸಿಂಗ್ ರೂಮ್ ಸಹ ಅಳವಡಿಸಲಾಗಿದೆ. ಆಟಗಾರರ ಪುನರುಜ್ಜೀವನಕ್ಕಾಗಿ ಐಸ್-ಬಾತ್ ಮತ್ತು ರಿಕವರಿ ರೂಮ್ಗಳು ಇವೆ. ಬೆಂಗಳೂರು ಎಫ್‌ಸಿ ಮಾಲೀಕ ಪಾರ್ಥ್ ಜಿಂದಾಲ್ ಮಾತನಾಡಿ, ಭಾರತೀಯ ಫುಟ್‌ಬಾಲ್ ಎದುರಿಸುತ್ತಿರುವ ಅಸಹಜ ಪರಿಸ್ಥಿತಿಗಳ ನಡುವೆ ನಮ್ಮ ಫುಟ್‌ಬಾಲ್ ಅಭಿವೃದ್ಧಿಗೆ ಪ್ರಯತ್ನವು ಸ್ಥಿರವಾಗಿದೆ. ರಾಷ್ಟ್ರೀಯ ತಂಡ ಈ ಸೌಲಭ್ಯದಲ್ಲಿ ತರಬೇತಿ ನಡೆಸಿ ಯಶಸ್ವಿ CAFA ನೇಶನ್ಸ್ ಕಪ್ಗಾಗಿ ತಯಾರಿ ನಡೆಸಿತು. ಭವಿಷ್ಯದಲ್ಲಿ ಈ ಸ್ಥಳವು ಭಾರತ ತಂಡದ ಪ್ರಮುಖ ತರಬೇತಿ ಕೇಂದ್ರವಾಗುತ್ತದೆ ಎಂಬ ನಿರೀಕ್ಷೆಯಿದೆ. ಸಿಎಎಫ್ಸಿ ನೇಶನ್ಸ್ ಕಪ್‌ಗೆ ನಮ್ಮ ತಂಡದಿಂದ 6 ಆಟಗಾರರು ಭಾರತೀಯ ತಂಡದಲ್ಲಿ ಭಾಗಿಯಾಗಿದ್ದು, ಎಎಫ್ಸಿ ಏಷಿಯನ್ ಕಪ್ ಅರ್ಹತಾ ಪಂದ್ಯಗಳಿಗೆ ಯು23 ತಂಡದಲ್ಲಿ 7 ಆಟಗಾರರು ಸೇರಿದ್ದಾರೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, ತರಬೇತಿ ಕೇಂದ್ರವು ಪಾಕಶಾಲೆ ಮತ್ತು ಪ್ಯಾಂಟ್ರಿಯ ಮೂಲಕ ಆಹಾರ ಸೇವನೆ ಪ್ರದೇಶಕ್ಕೆ ಪೋಷಣಾ ಪ್ರಕಾರದ ಆರೋಗ್ಯಕರ ಆಹಾರವನ್ನು ಆಟಗಾರರು ಮತ್ತು ಸಿಬ್ಬಂದಿಗೆ ಪೂರೈಸಲಾಗುತ್ತದೆ. ಪಿಚ್‌ನ ಹೊರಗೆ ವಿಶ್ರಾಂತಿ ಕೋಣೆ, ಟ್ಯಾಕ್ಟಿಕಲ್ ಚರ್ಚೆ, ವೀಡಿಯೋ ವಿಶ್ಲೇಷಣೆ ಹಾಗೂ ತಂಡದ ಮೀಟಿಂಗ್ ರೂಮ್ ವ್ಯವಸ್ಥೆಯಾಗಿದೆ.
ಸಿಎಸ್ಇ ಸಂಸ್ಥೆಯ ಸ್ಥಾಪಕ ವಿವೇಕ್ ಕುಮಾರ್ ಮಾತನಾಡಿ, “ಯಶಸ್ವಿ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಬೆಂಗಳೂರು ಎಫ್‌ಸಿ, ವಿಶ್ವಮಟ್ಟದ ಅರ್ಹತೆ ಹೊಂದಿದೆ. ಅವರಿಗೆ ಮೀಸಲಾದ ಅತ್ಯಾಧುನಿಕ ಫುಟ್ಬಾಲ್ ತರಬೇತಿ ಸೌಲಭ್ಯ ಒದಗಿಸಲು ನಮಗೆ ಹೆಮ್ಮೆ ಇದೆ. ಈ ಜೋಡಣೆ ಮೂಲಕ ಭಾರತೀಯ ಫುಟ್ಬಾಲ್ ಅಭಿವೃದ್ಧಿಗೆ ಸಹಾಯ ಮಾಡಲು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.