ಕೆಲವು ಪ್ರಮುಖ ಜವಾಬ್ದಾರಿಗಳನ್ನು ಹೊರಬೇಕಾಗಿದ್ದು, ಕವಿತಾ ತಮ್ಮ ಕೆರಿಯರ್ನ ವೇಗವನ್ನು ಕೊಂಚ ಕಡಿಮೆ ಮಾಡಬೇಕಾಯಿತು. ಆದರೆ ಅವರು ತಮ್ಮ ಗುರುತನ್ನು ಮೂಡಿಸುವ ಕನಸಿಗೆ ಎಂದೂ ಬ್ರೇಕ್ ಹಾಕಲಿಲ್ಲ.
ಭಾರತದ ಪುರುಷಪ್ರಧಾನ ಸಮಾಜದಲ್ಲಿ ಇಂದಿಗೂ ಮಹಿಳೆಯರನ್ನು 4 ಗೋಡೆಗಳ ಮಧ್ಯೆ ಬಂಧಿಸಿ ಒಲೆಗಳ ಮುಂದೆ ನಿಲ್ಲಿಸುವ ಪುರಾತನ ಆಲೋಚನೆ ಇದೆ. ಆದರೆ ಸಮಯ ಬಂದಾಗ ಹೆಣ್ಣುಮಕ್ಕಳೂ ಸಹ ಯಾವುದೇ ಕ್ಷೇತ್ರದಲ್ಲಾಗಲೀ ಗಂಡುಮಕ್ಕಳಿಗೆ ಹಿಂದೆ ಬೀಳುವುದಿಲ್ಲ. ಬಹಳಷ್ಟು ಹೆಣ್ಣುಮಕ್ಕಳು ಅವರ ಕ್ಷೇತ್ರಗಳಲ್ಲಿ ವಿಶ್ವ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ. ಹಿಂದೆ ಅವನ್ನು ಪುರುಷರ ಪ್ರಭಾವಿ ಕ್ಷೇತ್ರ ಎನ್ನಲಾಗುತ್ತಿತ್ತು.
ಬಾಕ್ಸಿಂಗ್ ಬಗ್ಗೆ ಹೀಗೆಯೇ ಹೇಳಲಾಗತ್ತದೆ. ಆದರೆ ಪುರುಷರ ಈ ಪ್ರಭಾವೀ ಆಟದಲ್ಲಿ ಭಾರತದ ಬಹಳಷ್ಟು ಮಹಿಳೆಯರು ಇಂಟರ್ ನ್ಯಾಷನಲ್ ಲೆವೆಲ್ನಲ್ಲಿ ಹೆಸರು ಮಾಡಿದ್ದಾರೆ. ಅವರಲ್ಲಿ ಒಬ್ಬರು ಕವಿತಾ ಚಹಲ್. 5 ಅಡಿ 9 ಇಂಚ್ ಎತ್ತರದ ಹರಿಯಾಣಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಈ ಸದೃಢ ಮಹಿಳೆ ಬಾಕ್ಸಿಂಗ್ನಲ್ಲಿ 2013ರಲ್ಲಿ `ಅರ್ಜುನ್ ಅವಾರ್ಡ್’ ಪಡೆದು ಜನರ ಗಮನ ಸೆಳೆದಿದ್ದರು. ಬನ್ನಿ, ಅವರ ಬಗ್ಗೆ ಅವರಿಂದಲೇ ವಿಸ್ತಾರವಾಗಿ ತಿಳಿಯೋಣ.
ರಿಂಗ್ನಲ್ಲಿ ಇಳಿಯಲು ಹೇಗೆ ಯೋಚಿಸಿದಿರಿ?
ನನ್ನ ತಂದೆ ಭೂಪಸಿಂಗ್ ಸೇನೆಯಲ್ಲಿ ಬಾಕ್ಸರ್ ಆಗಿದ್ದರು. ಒಂದು ದಿನ ಅವರು ಪ್ರ್ಯಾಕ್ಟೀಸ್ಗೆ ಹೋಗುತ್ತಿದ್ದಾಗ ಅವರಿಗೆ ಆ್ಯಕ್ಸಿಡೆಂಟ್ ಆಯಿತು. ಅವರಿಗೆ ಗಂಭೀರವಾದ ಗಾಯಗಳಾದವು. ಅವರು ಹಲವಾರು ದಿನಗಳವರೆಗೆ ಕೋಮಾದಲ್ಲಿದ್ದರು.
ಅವರು ನಿಧಾನವಾಗಿ ಸರಿಹೋದರು. ಒಂದು ದಿನ ಮನೆಯಲ್ಲಿ ವಿಶ್ರಮಿಸುತ್ತಾ ಟಿ.ವಿಯಲ್ಲಿ ಮಹಿಳೆಯರ ಬಾಕ್ಸಿಂಗ್ ನೋಡಿದರು. ಅವರು ನನ್ನನ್ನು ಬಾಕ್ಸಿಂಗ್ನಲ್ಲಿ `ದ್ರೋಣಾಚಾರ್ಯ’ ಪ್ರಶಸ್ತಿ ವಿಜೇತ ಜಗದೀಶ್ ಸಿಂಗ್ ಬಳಿ ಕರೆದೊಯ್ದರು. ಆಗ ನನಗೆ 18 ವರ್ಷ, ಶಾಲೆಯಲ್ಲಿ ಕಬಡ್ಡಿ ಆಡುತ್ತಿದ್ದೆ.
ನಂತರ ನಾನು 1 ತಿಂಗಳವರೆಗೆ ಹಳ್ಳಿಯಿಂದಲೇ ಭಿವಾನಿಗೆ ಪ್ರ್ಯಾಕ್ಟೀಸ್ಗೆ ಹೋಗುತ್ತಿದ್ದೆ. ನಂತರ ಭಿವಾನಿಯಲ್ಲಿ ಇರತೊಡಗಿದೆ. 2007ರಲ್ಲಿ ನಾನು ಬಾಕ್ಸಿಂಗ್ನ ನ್ಯಾಷನಲ್ ಕಾಂಪಿಟಿಶನ್ನಲ್ಲಿ ಗೋಲ್ಡ್ ಮೆಡಲ್ ಗೆದ್ದೆ. ಅದರಿಂದ ತಂದೆಯ ವಿಶ್ವಾಸ ಮತ್ತಷ್ಟು ಹೆಚ್ಚಿತು.
ಆರಂಭದಲ್ಲಿ ಹಳ್ಳಿಯ ಕೆಲವರು ಈ ಆಟಕ್ಕೆ ಸೇರಿ ಹಾಳಾಗ್ತೀಯ ಎಂದು ಹೇಳಿದರು. ಆದರೆ ನನಗೆ ಮೆಡಲ್ ಗಳು ಸಿಗತೊಡಗಿದಾಗ ಸಹಜವಾಗಿ ಯಾರೂ ಏನೂ ಹೇಳಲಿಲ್ಲ, ಬದಲಿಗೆ ಹೊಗಳತೊಡಗಿದರು. ಆರಂಭದಲ್ಲಿ 64 ಕೆ.ಜಿ. ತೂಕದವರೆಗೆ ಆಡುತ್ತಿದ್ದೆ.
ಮದುವೆಯ ನಂತರ ನಿಮ್ಮ ಬದುಕಿನಲ್ಲಿ ವಿಶೇಷವಾಗಿ ಯಾವ ಬದಲಾಣೆ ಬಂದಿತು?
ನನ್ನ ಮದುವೆ 2011ರ ಮಾರ್ಚ್ 7 ರಂದು ಆಯಿತು. ಅರೇಂಜ್ಡ್ ಮ್ಯಾರೇಜ್. ನನ್ನ ಗಂಡ ಸುಧೀರ್ ಮನೆಯವರು ಹಾಗೂ ತನ್ನ ಕುಟುಂಬದವರಿಗೆ ಮೊದಲೇ ಪರಿಚಯವಿತ್ತು. ವರದಕ್ಷಿಣೆಯಿಲ್ಲದೆ ನನ್ನ ಮದುವೆ ಆಯಿತು. ಅತ್ತೆ ಮನೆಯವರು 1 ರೂ.ನ ಸಂಬಂಧ ಮಾಡಿಕೊಂಡಿದ್ದರು. ಹೊಸ ಕುಟುಂಬಕ್ಕೆ ಹೋದನಂತರ ಜವಾಬ್ದಾರಿಗಳು ಹೆಚ್ಚಾದವು. ಮದುವೆಗೆ ಮೊದಲು ಹುಡುಗಿಯರು ಸುಲಭವಾಗಿ ಆಟ ಆಡುತ್ತಿರುತ್ತಾರೆ. ಆದರೆ ಮದುವೆಯಾಗಿ ಮಕ್ಕಳಾದ ನಂತರ ಅವರು ನಿಧಾನವಾಗಿ ಆಟಗಳನ್ನು ಬಿಡತೊಡಗುತ್ತಾರೆ. ಆದರೆ ನನ್ನ ಅತ್ತೆ, ಮಾವ ಮತ್ತು ಪತಿ ನನಗೆ ಬಹಳ ಸಪೋರ್ಟ್ ಮಾಡಿದರು. ಮದುವೆಯ ನಂತರ ನಾನು ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಸತತವಾಗಿ 4 ಬಾರಿ ಗೋಲ್ಡ್ ಮೆಡಲ್ ಗಳನ್ನು ಗೆದ್ದೆ. ನನಗೆ `ಅರ್ಜುನ್ ಅವಾರ್ಡ್’ ಸಿಕ್ಕಿತು. ನಾನು ರೌಂಡ್ ಚಾಂಪಿಯನ್ಶಿಪ್ ಮತ್ತು ಏಷಿಯಾ ಕಪ್ಗಳಲ್ಲೂ ಮೆಡಲ್ ಗೆದ್ದೆ.
2015ರ ಡಿಸೆಂಬರ್ 8 ರಂದು ನನಗೆ ವಿರಾಜ್ ಹುಟ್ಟಿದ. ಎಲ್ಲ ತಾಯಿ ಮಗನಂತೆ ಅವನು ಹಾಗೂ ನನ್ನ ಬಾಂಡಿಂಗ್ ಅದ್ಭುತವಾಗಿದೆ. ಅವನು ಯಾವಾಗಲೂ ನನ್ನ ಸಮೀಪ ಇರುತ್ತಾನೆ. ನಾನು ಮನೆಯಲ್ಲಿ ಇರುವಾಗ ಅವನೊಂದಿಗೆ ಆಡುತ್ತೇನೆ. ಗಂಡ ಹಾಗೂ ಮನೆಯವರೊಂದಿಗೆ ಸಮಯ ಕಳೆಯುತ್ತೇನೆ.
ಪ್ರೆಗ್ನೆನ್ಸಿಯಿಂದಾಗಿ ನಾನು ಸುಮಾರು 2 ವರ್ಷಗಳವರೆಗೆ ಬಾಕ್ಸಿಂಗ್ನಿಂದ ದೂರ ಇರಬೇಕಾಯಿತು. ವಿರಾಜ್ ಹುಟ್ಟಿದ ನಂತರ ಮತ್ತೆ ರಿಂಗ್ನಲ್ಲಿ ಇಳಿಯುವುದು, ಒಂದರ ನಂತರ ಒಂದು ಚಾಂಪಿಯನ್ಶಿಪ್ ಆಡುವುದು ಹಾಗೂ ನಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಸುಲಭವಲ್ಲ. ಸುಮಾರು ಎರಡು ವರ್ಷದ ಮಗನನ್ನು ಮನೆಯವರೊಂದಿಗೆ ಬಿಟ್ಟು ನಾನು ಮತ್ತೆ ಸಿದ್ಧತೆ ನಡೆಸುತ್ತಿದ್ದೇನೆ. ಇವೆಲ್ಲದರಲ್ಲಿ ಸುಧೀರ್ ನನಗೆ ಸಹಾಯ ಮಾಡುತ್ತಿದ್ದಾರೆ. ನನಗೆ ಬದುಕಿನ ರಿಂಗ್ನಲ್ಲಿ ಸದೃಢವಾಗಿರಲು ಕಲಿಸಿದರು.
ಈ ಕಾರಣದಿಂದ ಕೇವಲ 1 ತಿಂಗಳು ಪ್ರ್ಯಾಕ್ಟೀಸ್ನ ನಂತರ ನಾನು 2 ಸಲ ಹರಿಯಾಣಾ ಸ್ಟೇಟ್ ಚಾಂಪಿಯನ್ಶಿಪ್ನಲ್ಲಿ ಆಡಿದೆ ಮತ್ತು ಎರಡರಲ್ಲೂ ಗೋಲ್ಡ್ ಮೆಡಲ್ ಗೆದ್ದೆ. ನಂತರ ಪಾಟ್ನಾದಲ್ಲಿನ ಆಲ್ ಇಂಡಿಯಾ ಪೊಲೀಸ್ ಆಟಗಳಲ್ಲಿಯೂ ಗೋಲ್ಡ್ ಮೆಡಲ್ ಗೆದ್ದೆ.
ಭವಿಷ್ಯದ ಗುರಿ?
ನನ್ನ ಟಾರ್ಗೆಟ್ ಸೆಪ್ಟೆಂಬರ್ ಅಕ್ಟೋಬರ್ನಲ್ಲಿ ನಡೆಯಲಿರುವ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಮೆಡಲ್ ಗೆಲ್ಲುವುದು, ಅದಕ್ಕಾಗಿ ಪರಿಶ್ರಮಪಡುತ್ತಿದ್ದೇನೆ.
– ಸುನೀತಾ ಶರ್ಮ