ಕಿಚನ್‌ನ್ನು ದಿನ ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಎಲ್ಲರಿಗೂ ಕಷ್ಟ. ಕಿಚನ್ ಫ್ಲೋರ್ ಮತ್ತು ಕಿಚನ್ ವಾಲ್ ಟೈಲ್ಸ್ ಮೇಲೆ ಕೊಳೆ ಕೂರುತ್ತದೆ. ಅವನ್ನು ಸ್ವಚ್ಛಗೊಳಿಸುವ ಸರದಿ ಬಂದಾಗ ಹೇಗಪ್ಪಾ ಸ್ವಚ್ಛಗೊಳಿಸುವುದು ಅನ್ನಿಸುತ್ತದೆ. ಟೈಲ್ಸ್ ಮೇಲೆ ಜಮೆಯಾಗಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಸುಲಭ ಉಪಾಯಗಳನ್ನು ತಿಳಿಯೋಣ ಬನ್ನಿ :
ಕಿಚನ್ ಫ್ಲೋರ್‌ನ ಸ್ವಚ್ಛತೆ
ಕಿಚನ್ ಫ್ಲೋರ್ ಮೇಲೆ ದಿನ ಒರೆಸಿ. ಒರೆಸುವ ನೀರಿನಲ್ಲಿ ಡಿಟರ್ಜೆಂಟ್ ಅಥವಾ ಕೀಟನಾಶಕವನ್ನು ಅಗತ್ಯವಾಗಿ ಉಪಯೋಗಿಸಿ. ಯಾವ ಬಟ್ಟೆಯಿಂದ ಒರೆಸುತ್ತೀರೋ ಅದು ಸ್ವಚ್ಛವಾಗಿರಬೇಕು. ಉಪಯೋಗಿಸಿದ ಮೇಲೆ ಅದನ್ನು ಚೆನ್ನಾಗಿ ತೊಳೆಯಿರಿ.
– ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವೆಗಳಿದ್ದರೆ ಒರೆಸುವ ನೀರಿನಲ್ಲಿ 1 ದೊಡ್ಡ ಚಮಚ ಉಪ್ಪು ಸೇರಿಸಿ.
– ಒಂದು ವೇಳೆ ನೀವು ಹಲವು ದಿನಗಳ ನಂತರ ನೆಲ ಒರೆಸುತ್ತಿದ್ದರೆ ಒರೆಸುವ ಬಟ್ಟೆಯನ್ನು ಫ್ಲೋರ್ ಕ್ಲೀನರ್ ಬೆರೆಸಿದ ಬಿಸಿನೀರಿನಲ್ಲಿ ಅದ್ದಿಕೊಳ್ಳಿ.
– ಒರೆಸಿದ ನಂತರ ನೆಲವನ್ನು ಒಣಗಿದ ಬಟ್ಟೆಯಿಂದ ಒರೆಸಿ. ಅದರಿಂದ ನೆಲ ಹೊಳೆಯುತ್ತದೆ. ನೆಲದ ಮೇಳೆ ಧೂಳು ಜಮೆಯಾಗುವುದಿಲ್ಲ.
– ನೆಲದ ಮೇಲೆ ಏನಾದರೂ ಚೆಲ್ಲಿದ್ದರೆ ಅದನ್ನು ಕೂಡಲೇ ಸ್ವಚ್ಛಗೊಳಿಸಿ. ಕಲೆಯಾಗಲು ಬಿಡಬೇಡಿ.
ಕಿಚನ್ ಟೈಲ್ಸ್ ಸ್ವಚ್ಛತೆ
ಕೆಳಗೆ ಕೊಟ್ಟಿರುವ ಗೃಹಬಳಕೆಯ ವಸ್ತುಗಳಿಂದ ನೀವು ಕಿಚನ್ ಟೈಲ್ಸ್ ನ್ನು ಸ್ವಚ್ಛಗೊಳಿಸಬಹುದು :
ವಿನಿಗರ್ : 2 ಕಪ್ ವಿನಿಗರ್ ಮತ್ತು 2 ಕಪ್ ನೀರು ಬೆರೆಸಿ ಸ್ಪ್ರೇ ಬಾಟಲ್ ನಲ್ಲಿ ತುಂಬಿ. ಅದನ್ನು ಟೈಲ್ಸ್ ಮೇಲೆ ಸ್ಪ್ರೇ ಮಾಡಿ ಮೈಕ್ರೋ ಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಿ. ಈ ಬಟ್ಟೆ ಬೇರಾವುದೇ ಬಟ್ಟೆಗೆ ಹೋಲಿಸಿದರೆ ಹೆಚ್ಚು ಕೊಳೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಇದರ ಮೇಲ್ಮೈನಲ್ಲಿ ಗೀರುಗಳೂ ಸಹ ಬೀಳುವುದಿಲ್ಲ.
ಬೇಕಿಂಗ್ ಸೋಡಾ : ಬೇಕಿಂಗ್ ಸೋಡಾ ಉಪಯೋಗಿಸಿ ಟೈಲ್ಸ್ ಮೇಲೆ ಬಿದ್ದಿರುವ ಕಲೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಬೇಕಿಂಗ್ ಸೋಡಾ ಮತ್ತು ನೀರಿನ ಪೇಸ್ಟ್ ಮಾಡಿಕೊಂಡು ಅದನ್ನು ಕಲೆಗಳ ಮೇಲೆ ಹಚ್ಚಿ 10-15 ನಿಮಿಷಗಳವರೆಗೆ ಒಣಗಲು ಬಿಡಿ. ನಂತರ ಒದ್ದೆ ಬಟ್ಟೆಯಿಂದ ಒರೆಸಿ. ಆಗಲೂ ಕಲೆ ಹೋಗದಿದ್ದರೆ ಹಳೆಯ ಟೂಥ್‌ಬ್ರಶ್ ಉಜ್ಜಿ ಸ್ವಚ್ಛಗೊಳಿಸಿ.
ಬ್ಲೀಚ್ ಅಥವಾ ಅಮೋನಿಯಾ : ನಿಮ್ಮ ಟೈಲ್ಸ್ ಮೇಲೆ ಕೀಟಾಣುಗಳು ಕಂಡುಬಂದರೆ ಬ್ಲೀಚ್ ಹಾಗೂ ನೀರನ್ನು ಸಮ ಪ್ರಮಾಣದಲ್ಲಿ ಬೆರೆಸಿ. ಈ ಮಿಶ್ರಣವನ್ನು ಕೀಟಾಣುಗಳಿರುವ ಮೇಲ್ಮೈ ಮೇಲೆ ಗೋಲಾಕಾರದಲ್ಲಿ ಹಚ್ಚಿ. ಈಗ ಟೈಲ್ಸ್ ನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸಿ. ನಂತರ ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸಿ. ನೆನಪಿಡಿ ಬ್ಲೀಚ್ ಉಪಯೋಗಿಸುವ ಮೊದಲು ಕೈಗಳಿಗೆ ಗವಸುಗಳನ್ನು ಹಾಕಿಕೊಳ್ಳಿ.
– ಸರಳಾ ಭಟ್
ಗಮನಿಸಿ : ಟೈಲ್ಸ್ ಸ್ವಚ್ಛಗೊಳಿಸಲು ಎಂದೂ ಆಮ್ಲ ಅಥವಾ ಇತರ ಹಾರ್ಡ್ ಲಿಕ್ವಿಡ್ ಕ್ಲೀನರ್ ಉಪಯೋಗಿಸಬೇಡಿ.
– ದಿನ ಕಿಚನ್ ವಾಲ್ ಟೈಲ್ಸ್ ಸ್ವಚ್ಛಗೊಳಿಸುವುದಿದ್ದರೆ ನೀರಿನಲ್ಲಿ ಕೊಂಚ ಡಿಟರ್ಜೆಂಟ್ ಸೇರಿಸಿ ಸ್ವಚ್ಛಗೊಳಿಸಿ.
– ಟೈಲ್ಸ್ ನ್ನು ಕೊರೆದ ಲೋಹದಿಂದ ಉಜ್ಜಿ ಸ್ವಚ್ಛಗೊಳಿಸಬೇಡಿ.