ಕಥೆ  – ಎಂ.ಕೆ. ಗೋದಾವರಿ 

 ಚಂದ್ರಲೇಖಾಳ ಮನೆ ಅಡುಗೆ ಕೆಲಸದವಳಾದ ಸರಸೂಳ ಒಬ್ಬಳೇ ಮಗಳು ಶಾಲಿನಿ. ಇಪ್ಪತ್ತು ವರ್ಷದವಳಾದ ಅವಳೀಗ ಬಿ.ಕಾಂ. ಪದವಿ ಮುಗಿಸಿ, ಬ್ಯಾಂಕಿಂಗ್‌ ಪರೀಕ್ಷೆ ಬರೆದಿದ್ದಳು. ಫಲಿತಾಂಶ ಉತ್ತಮವಾಗಿ ಬಂದಲ್ಲಿ ಒಳ್ಳೆಯ ಕಡೆ ಬ್ಯಾಂಕಿಂಗ್‌ ಉದ್ಯೋಗ ದೊರಕುತ್ತಿತ್ತು. ಆ ಕುರಿತು ಸರಸೂ ಮತ್ತು ಅವಳ ಗಂಡ ರಾಜುಗೆ ಅತ್ಯಂತ ಹೆಮ್ಮೆ. ಇದಕ್ಕೆ ಕಾರಣ ಇಲ್ಲದಿಲ್ಲ. ಅವರ ಮನೆ, ಕುಟುಂಬದವರಲ್ಲಿ ಇದುವರೆಗೂ ಯಾರೂ ಪದವಿ ವ್ಯಾಸಂಗ ಪೂರೈಸಿರಲಿಲ್ಲ.

ಇಷ್ಟಕ್ಕೂ ಕೆಲವು ಸಂಬಂಧಿಕರು ಶಾಲಿನಿ ಹೈಸ್ಕೂಲಿನಲ್ಲಿದ್ದಾಗಲೇ ವಿದ್ಯಾಭ್ಯಾಸ ಮುಂದುವರಿಸುವುದು ಬೇಡ, ಬೇಗ ಅವಳಿಗೊಂದು ಮದುವೆ ಮಾಡೆಂದು ಸಲಹೆ ನೀಡಿದ್ದರು. ಆದರೆ ಶಾಲಿನಿ 10ನೇ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್‌ ಆದಾಗ ರಾಜು ಅವಳನ್ನು ಕಾಲೇಜು ಸೇರಿಸಿದ್ದ. ಮುಂದೆ ಪಿಯುಸಿಯಲ್ಲಿಯೂ ವಿಶೇಷ ದರ್ಜೆಯಲ್ಲಿ ಪಾಸ್‌ ಆಗಿದ್ದ ಶಾಲಿನಿ ಬಿ.ಕಾಂ. ಪದವಿಗೆ ಸೇರಿ ಮುಂದೆ ಬ್ಯಾಂಕ್‌ ಉದ್ಯೋಗಿ ಆಗುವೆನೆಂದಾಗ ಪೋಷಕರಿಬ್ಬರೂ ಸಮ್ಮತಿಸಿದ್ದರು.

ಇದೀಗ ಮಗಳು ಬಿ.ಕಾಂ. ಮುಗಿಸಿದ್ದು, ಇನ್ನೇನು ಬ್ಯಾಂಕ್‌ ಉದ್ಯೋಗ ಸಿಗುತ್ತದೆ ಎನಿಸಿದಾಗ ಸರಸೂ ಮತ್ತು ರಾಜುಗೆ ಮಗಳ ಮದುವೆ ಮಾಡಲು ಇದೇ ಸಕಾಲ ಎನಿಸಿತು. ಅದರಂತೆ ರಾಜು ತನಗೆ ತಿಳಿದ ಬಹಳಷ್ಟು ಜನರಿಗೆ ತಿಳಿಸಿದ್ದ. ಜೊತೆಗೆ ಕೆಲವು ವೈವಾಹಿಕ ನೋಂದಣಿ ಕೇಂದ್ರಗಳಲ್ಲಿಯೂ ನೋಂದಾವಣೆ ಮಾಡಿಸಿದ್ದ. ಸರಸೂ ಕೂಡ ತನ್ನ ಮಗಳಿಗೆ ಸೂಕ್ತವಾದ ವರನನ್ನು ಹುಡುಕುತ್ತಿದ್ದಳು. ಮಗಳು ಪದವೀಧರೆ, ಬ್ಯಾಂಕ್‌ ಕೆಲಸ ಸಿಗುವುದರಲ್ಲಿದೆ, ಇಂತಹವರಿಗೆ ಅವಳ ಹುದ್ದೆ, ಗೌರವಕ್ಕೆ ತಕ್ಕ ವರನನ್ನೇ ಹುಡುಕಬೇಕೆಂಬುದು ಸರಸೂ ಆಸೆಯಾಗಿತ್ತು.  ಹೀಗಾಗಿ ಅವಳು ಮಗಳಿಗೆ ಬಂದ ಕೆಲವು ಸುಮಾರಾದ ಸಂಬಂಧಗಳನ್ನು ತಾನಾಗಿಯೇ ತಿರಸ್ಕರಿಸಿದ್ದಳು.

ಸರಸೂಳ ಪರಿಚಯಸ್ಥರ ಮಗನೊಬ್ಬ ದುಬೈನಲ್ಲಿ ಎಲೆಕ್ಟ್ರೀಷಿಯನ್‌ ಆಗಿದ್ದ. ಒಳ್ಳೆಯ ದುಡಿಮೆ ಹಾಗೂ ಸಾಕಷ್ಟು ಸಂಬಳವಿದ್ದು ಉತ್ತಮ ರೀತಿಯಲ್ಲಿ ಜೀವನ ನಡೆಸಬಹುದಾದ ಈ ಸಂಬಂಧವನ್ನು ಸರಸೂ ನಿರಾಕರಿಸಿದ್ದಳು. ಶಾಲಿನಿ ಬಿ.ಕಾಂ. ಮಾಡಿದ್ದಾಳೆ. ಅವನು ಕೇವಲ ಹತ್ತನೇ ತರಗತಿ ಕಲಿತಿದ್ದಾನೆ. ಇದು ಶಾಲಿನಿಗೆ ಸರಿಯಾದ ಜೋಡಿಯಲ್ಲ ಎಂದು ಅವಳ ತೀರ್ಮಾನವಾಗಿತ್ತು.

ಇನ್ನೊಮ್ಮೆ ರಾಜುವಿನ ಸಂಬಂಧಿಕರಿಂದ ಶಾಲಿನಿಗೆ ವೈವಾಹಿಕ ಸಂಬಂಧ ಬಂದಿತ್ತು. ಹುಡುಗ ಎಂ.ಕಾಂ. ಮಾಡಿ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದ. ನೋಡಲು ಚೆನ್ನಾಗಿದ್ದು ಮನೆಯಲ್ಲಿಯೂ ಸಾಕಷ್ಟು ಅನುಕೂಲವಿತ್ತು. ಆದರೆ ಇದಕ್ಕೂ ಸರಸೂ ಒಪ್ಪಲಿಲ್ಲ. ಹುಡುಗನ ತಾಯಿ ಮಹಾ ಜಗಳಗಂಟಿ. ಅವಳು ಯಾರಿಗೂ ಅಷ್ಟು ಸುಲಭದಲ್ಲಿ ಹೊಂದಿಕೊಳ್ಳಲಾರಳು. ಅಂತಹವಳೊಂದಿಗೆ ಶಾಲಿನಿ ಹೇಗೆ ಜೀವನ ನಡೆಸಿಯಾಳು?  ಇದು ಅವಳ ವಾದ.

ಆ ಹುಡುಗನ ಬಗ್ಗೆ ಮತ್ತೊಮ್ಮೆ ಯೋಚಿಸು. ಹುಡುಗ ಉತ್ತಮ ಗುಣ, ನಡತೆಯವನು ಎಂದು ರಾಜು, ಸರಸೂಗೆ ತಿಳಿಸಿದರೂ, ಸರಸೂ ಮಾತ್ರ ನೀವು ನಿಮ್ಮ ಸೋದರ ಸಂಬಂಧಿಕರ ಮಗನೆಂಬ ಸಲುಗೆಯಿಂದ ಮಾತಾಡುತ್ತಿದ್ದೀರಿ. ನಮ್ಮ ಶಾಲಿನಿ ಬಗ್ಗೆ ನಿಮಗಿಂತ ಹೆಚ್ಚು ನನಗೆ ಕಾಳಜಿ ಇದೆ ಎಂದು ಹೇಳಿದ್ದಲ್ಲದೆ ನಾನೆಂದಿಗೂ ಈ ಮದುವೆಗೆ ಒಪ್ಪಲಾರೆ ಎಂದು ಖಚಿತವಾದ ದನಿಯಲ್ಲಿ ಉತ್ತರಿಸಿದಳು. ಕೆಲವು ವಾರಗಳು ಕಳೆದವು. ಒಮ್ಮೆ ರಾಜು ನೋಂದಾಯಿಸಿದ್ದ ಒಂದು ವೈವಾಹಿಕ ಕೇಂದ್ರದಿಂದ ಶಾಲಿನಿಗೆ ಕರೆ ಬಂದಿತು. ಶಾಲಿನಿ ಮತ್ತು ರಾಜು ಹೋಗಿ ವಿಚಾರಿಸಲಾಗಿ ಹುಡುಗ ಬಿ.ಟೆಕ್‌ ಪೂರೈಸಿ ಪೂನಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಒಳ್ಳೆಯ ಸ್ಥಿತಿವಂತರಾಗಿದ್ದರು. ಹುಡುಗನ ಫೋಟೋ ನೋಡಿದ್ದ ಶಾಲಿನಿಗೂ  ಒಪ್ಪಿಗೆಯಾಯಿತು. ಮನೆಗೆ ಹಿಂದಿರುಗಿ ಸರಸೂಗೆ ತಿಳಿಸಿದಾಗ ಅವಳು ಮಾತ್ರ ಶಾಲಿನಿಯನ್ನು ಅಷ್ಟು ದೂರ ಕಳಿಸಲು ಒಪ್ಪಲೇ ಇಲ್ಲ.

ಮತ್ತೆ ಕೆಲವು ದಿನಗಳ ಬಳಿಕ ಬೆಂಗಳೂರಿನಲ್ಲೇ ಇದ್ದ ಹುಡುಗನೊಬ್ಬ ಶಾಲಿನಿಗೆ ತನ್ನ ಪ್ರಪೋಸ್‌ ಕಳಿಸಿದ್ದ. ಹುಡುಗ ಸರ್ಕಾರಿ ನೌಕರಿಯಲ್ಲಿದ್ದ. ಮನೆತನ ಚೆನ್ನಾಗಿತ್ತು. ಆದರೆ ಅವನದು ತುಂಬು ಸಂಸಾರ. ತಂದೆತಾಯಿ, ಒಬ್ಬ ತಮ್ಮನ ಜೊತೆಗೆ ಇಬ್ಬರು ತಂಗಿಯರೂ ಇದ್ದರು. ರಾಜುಗೆ ಸಂಬಂಧ ಕೂಡಿ ಬಂದರೆ ಶಾಲಿನಿ ಒಳ್ಳೆಯ ಮನೆ ಸೇರುತ್ತಾಳೆಂದು ಸಂತಸವಾಗಿತ್ತು. ಆದರೆ ಸರಸೂ ಈ ಸಂಬಂಧ ಬೇಡವೆಂದಳು. ಹುಡುಗನಿಗೆ ಇಬ್ಬರು ತಂಗಿಯರಿದ್ದಾರೆ. ನಾಳೆ ನನ್ನ ಮಗಳು ದುಡಿದದ್ದನ್ನೆಲ್ಲ ಅವನ ತಂಗಿಯರ ಮದುವೆಗೇ ಖರ್ಚು ಮಾಡಬೇಕಾಗುತ್ತದೆ. ನನಗೆ ಒಪ್ಪಿಗೆ ಇಲ್ಲ ಎಂದಳಾದುದರಿಂದ ಮಾತುಕಥೆಯ ಹಂತದಲ್ಲಿಯೇ ಸಂಬಂಧ ಮುರಿದುಬಿತ್ತು.

ಇನ್ನೊಮ್ಮೆ ಸರಸೂಳ ದೂರದ ಸಂಬಂಧಿಯ ಕಡೆಯಿಂದಲೇ ಸಂಬಂಧ ಬೆಳೆಯುವ ಇಚ್ಛೆ ವ್ಯಕ್ತವಾಯಿತು. ಹುಡುಗ ಒಳ್ಳೆಯ ನೌಕರಿಯಲ್ಲಿದ್ದ. ತಿಂಗಳಿಗೆ ಇಪ್ಪತ್ತೈದು ಸಾವಿರ ಸಂಬಳ ಬರುತ್ತಿತ್ತು. ನೋಡಲೂ ಚೆನ್ನಾಗಿದ್ದ. ಆದರೆ ಶಾಲಿನಿಗಿಂತ ನಾಲ್ಕು ವರ್ಷ ದೊಡ್ಡವನಾಗಿದ್ದ ಎನ್ನುವ ಕಾರಣದಿಂದ ಸರಸೂ ಈ ಸಂಬಂಧವನ್ನೂ ನಿರಾಕರಿಸಿದ್ದಳು.

ಇನ್ನೊಮ್ಮೆ ರಾಜುನ ಸ್ನೇಹಿತನ ಮಗ ಬಿ.ಎಡ್‌ ಓದಿ ಟೀಚರ್‌ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಅವನಿಗೆ ಶಾಲಿನಿಯನ್ನು ಕೊಟ್ಟು ಮದುವೆ ಮಾಡುವುದೆಂದು ಮಾತು ಬಂದಾಗಲೂ ಶಾಲಿನಿಗೆ ಮೊದಲೇ ಸರಸೂ ನಿರ್ದಾಕ್ಷಿಣ್ಯವಾಗಿ `ಬೇಡ’ ಎಂದಳು. ಅವನ ತಂದೆ ಕುಡುಕನಾಗಿದ್ದ. ಕುಡುಕನಾದ ಮಾವನ ಮನೆಯಲ್ಲಿ ಮಗಳು ಹೇಗಿರುತ್ತಾಳೆ ಎನ್ನುವುದು ಅವಳ ವಾದವಾಗಿತ್ತು.

ಇಷ್ಟೆಲ್ಲ ಆಗುವಾಗ ಒಂದು ದಿನ ಸರಸೂ ಕೆಲಸ ಮಾಡುವ ಮನೆಯ ಯಜಮಾನ ಯಶವಂತ್‌, “ನಿನ್ನ ಮಗಳಿಗೆ ಮದುವೆ ಸೆಟ್‌ ಆಯಿತಾ?” ಎಂದು ಕೇಳಿದ.

“ಇಲ್ಲ ಅಯ್ಯಾ…., ಸರಿಯಾದ ಹುಡುಗನೇ ಸಿಗುತ್ತಿಲ್ಲ,” ಎಂದಳು ಸರಸೂ.

“ಯಾವ ರೀತಿಯ ಹುಡುಗ ಬೇಕೆನ್ನುತ್ತಿ? ನಿನ್ನ ಮಗಳನ್ನು ಕೇಳಿದ್ದೀಯಾ? ಈಗಿನ ಕಾಲದವರಿಗೆ ಅವರ ನಿರ್ಧಾರವೇ ಅಂತಿಮ. ಅಂತೆಯೇ ನೀನು ನೋಡುತ್ತಿರುವಂತೆ ನೂರಕ್ಕೆ ನೂರು ಸರಿಯಾಗಿರುವ ಹುಡುಗ ದೊರೆಯುವುದು ಕಷ್ಟ. ಯಾವುದೇ ಕುಟುಂಬ, ಮನೆಯಲ್ಲಿ ಒಂದಲ್ಲ ಒಂದು ರೀತಿಯ ಕೊರತೆ ಇದ್ದೇ ಇರುತ್ತದೆ. ಮದುವೆ ಆದ ಗಂಡುಹೆಣ್ಣು ತಾವು ಸಹ ಪರಸ್ಪರ ಹೊಂದಿಕೊಂಡು ಹೋಗುವುದೇ ಮುಖ್ಯ.

“ದುಡಿಮೆ ಚೆನ್ನಾಗಿರಬೇಕು, ವೈಭವೋಪೇತ ಜೀವನ ಬೇಕು ಎಂದು ನಿರೀಕ್ಷಿಸುವುದು ಸರಿಯೇ? ಹಾಗಿದ್ದವರಲ್ಲಿ ಏನೂ ಕೊರತೆ ಇರುವುದಿಲ್ಲ ಎಂದುಕೊಳ್ಳಬೇಡ. ಶ್ರೀಮಂತರ ಮನೆಯಲ್ಲಿಯೂ ದೊಡ್ಡ ಜಗಳವಾಗಿ ನೆಮ್ಮದಿ ಇಲ್ಲದಂತಿರುವ ಉದಾಹರಣೆಗಳು ಇಲ್ಲವೇ? ಹೀಗಾಗಿ ನೀನು ಹೆಚ್ಚು ಹೆಚ್ಚು ಹುಡುಕಿದಷ್ಟೂ ಇನ್ನಷ್ಟು ಜಿಗುಟಾಗುತ್ತದೆ. ನಿನ್ನ ಮಗಳಿಗೆ ಅವಳ ಇಚ್ಛೆಯನ್ನು ಕೇಳು. ಅವಳಿಷ್ಟಪಟ್ಟ ಹುಡುಗನೊಂದಿಗೇ ಅವಳ ಮದುವೆ ನೆರವೇರಿಸು. ಹೀಗಿಲ್ಲವಾದರೆ ನಿನ್ನ ಮಗಳಿಗೆ ಮದುವೆಯೇ ಇಲ್ಲವಾದೀತು ಎಚ್ಚರ!”

ಸರಸೂಗೆ ಇದಕ್ಕೂ ಮುನ್ನ ತನ್ನ ಯಜಮಾನ ಇಂತಹ ಮಾತುಗಳನ್ನು ಆಡಿದ್ದೇ ನೆನಪಿರಲಿಲ್ಲ. ಈಗ ಅವನ ಮಾತುಗಳನ್ನು ಕೇಳಿ ಸಣ್ಣದಾಗಿ ಬೆವೆತುಹೋದಳು. `ತಾನು ಇಷ್ಟೆಲ್ಲ ಮಾಡುತ್ತಿರುವುದು ನನ್ನ ಮಗಳು ಚೆನ್ನಾಗಿರಲಿ ಎಂದು…..ಆದರೆ ಅವಳಿಗೆ ಮದುವೆಯೇ ಇಲ್ಲವಾದರೆ?!’ ಅವಳಿಗೆ ಪ್ರತಿ ಹೇಳಲು ತೋಚಲಿಲ್ಲ. ಕಡೆಗೆ ಯಶವಂತನೇ ಹೇಳಿದ, “ನಾನು ನನ್ನ ಅನುಭವದಿಂದ ನಿನಗೆ ಹೇಳಿದೆ. ನೀನು ಅಂತಿಮವಾಗಿ ನಿನಗೆ ಏನು ತೋಚುವುದೋ ಹಾಗೆಯೇ ಮಾಡು.”

ಸರಸೂ ಅಂದು ಮನೆಗೆ ಬಂದ ಬಳಿಕ ಅದೇ ಯೋಚನೆಗಳಲ್ಲಿ ತೊಳಲಾಡಿದಳು.

ಹೀಗೆಯೇ ಕೆಲವು ದಿನಗಳು ಕಳೆದವು. ಶಾಲಿನಿ ಬ್ಯಾಂಕ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣಳಾದಳು. ಅವಳಿಗೆ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗ ದೊರಕಿತು. ಇದರಿಂದ ಸರಸೂ ಮತ್ತು ರಾಜುಗೆ ಇನ್ನಷ್ಟು ಸಂತಸವಾಯಿತು. ಆದರೆ ಆ ಸಂತಸ ಬಹುಕಾಲ ಉಳಿಯಲಿಲ್ಲ.

ಅದೊಂದು ದಿನ ಬ್ಯಾಂಕ್‌ನಿಂದ ಎಲ್ಲರೂ ಪ್ರವಾಸ ಹೋಗುತ್ತಿದ್ದೇವೆಂದು ಲಗೇಜ್‌ ಪ್ಯಾಕ್‌ ಮಾಡಿಕೊಂಡು ಹೊರಟ ಶಾಲಿನಿ ತಿರುಗಿ ಬರಲಿಲ್ಲ. ಎರಡು ದಿನಗಳ ನಿರೀಕ್ಷೆಯ ನಂತರ ಸರಸೂ ಮನೆಗೆ ಒಂದು ಅನಾಮಧೇಯ ಪತ್ರ ಬಂದಿತ್ತು. ಪತ್ರ ಒಡೆದು ಓದಿದ ರಾಜು ಮತ್ತು ಸರಸೂ ಹಾಗೇ ಕುಸಿದು ಕುಳಿತರು. ಅದು ಶಾಲಿನಿಯದೇ ಪತ್ರವಾಗಿದ್ದು, ಅದರ ಸಾರಾಂಶ ಹೀಗಿತ್ತು “ಅಪ್ಪಅಮ್ಮನಿಗೆ ನಮಸ್ಕಾರಗಳು,

ನಿನ್ನ ಮಗಳು ಶಾಲಿನಿ ನಿಮಗೆ ಮೋಸ ಮಾಡುತ್ತಿದ್ದಾಳೆಂದು ಭಾವಿಸಬೇಡಿ. ನಾನು ನನ್ನ ಇಷ್ಟದಂತೆ ಬದುಕಲು ಬಯಸಿದ್ದೇನೆ ಅಷ್ಟೆ. ನನ್ನ ಸ್ನೇಹಿತ ಅಂಜನ್‌ ನನ್ನನ್ನು ಮದುವೆಯಾಗುವುದಾಗಿ ಹೇಳಿ ನನ್ನನ್ನು ದುಬೈಗೆ ಕರೆದೊಯ್ಯುತ್ತಿದ್ದಾನೆ. ನಾನು ಅವನೊಂದಿಗೆ ಮುಂದಿನ ಜೀವನ ನಡೆಸಬೇಕೆನ್ನುವುದು ನನ್ನ ಬಯಕೆ. ಹೀಗಾಗಿ ನೀವೆಂದೂ ನನ್ನನ್ನು ಹುಡುಕಬೇಡಿ. ನಾನು ಚೆನ್ನಾಗಿರಲಿ ಎಂದು ಆಶೀರ್ವದಿಸುವಿರೆಂದು ನಂಬಿದ್ದೇನೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ. ಸಂತಸದಿಂದಿರಿ…”

ವಂದನೆಗಳೊಂದಿಗೆ ನಿಮ್ಮ ಪ್ರೀತಿಯ ಶಾಲಿನಿ ಅಂಜನ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ