ಮಿನಿಕಥೆ – ಗೀತಾ ಪ್ರಸಾದ್‌ 

ವೇಣುಗೋಪಾಲ್ ಮನೆಗೆ ಕೆಲಸ ಕೇಳಿಕೊಂಡು ಬಂದ ಅಪರಿಚಿತನಿಗೆ  ಮಾಡಿದ ಸಹಾಯ ಮತ್ತು ಅದಕ್ಕೆ ಅವನು ತೋರಿದ ಕೃತಜ್ಞತೆ ಎಲ್ಲ ನಮ್ಮಲ್ಲಿರುವ ಮಾನವೀಯ ಗುಣಕ್ಕೆ ಒಂದು ಉದಾಹರಣೆಯಾಗುತ್ತದೆ…….!

ಅಂದು ಭಾನುವಾರದ ಒಂದು ಸಂಜೆ. ವೇಣುಗೋಪಾಲ್‌ ಮನೆಯ ವರಾಂಡದಲ್ಲಿ ಕುಳಿತು ಯಾವುದೋ ವಾಹನ ರಸ್ತೆಯ ತುದಿಯಲ್ಲಿ ಚಲಿಸುತ್ತಿದ್ದುದನ್ನು ನೋಡುತ್ತಿದ್ದ. ಅಂದು ಹೇಳಿಕೊಳ್ಳುವಂತಹ ಯಾವ ಕೆಲಸಗಳೂ ಇರಲಿಲ್ಲ. ಪತ್ನಿ ಪರಿಮಳಾ ಒಳಗೆಲ್ಲೋ ಇದ್ದಳು. ಮಕ್ಕಳು ಅವರ ಪಾಡಿಗೆ ಅವರು ಆಡಿಕೊಳ್ಳುತ್ತಿದ್ದರು.

ತಿಂಗಳ ಕೊನೆಯಾದ್ದರಿಂದ ಮುಂದಿನ ದಿನದಲ್ಲಿ ಸಂಬಳ ಆಗುವವರೆಗೂ ಇರುವ ಉಳಿತಾಯದಲ್ಲೇ ಜೀವನ ಸಾಗಬೇಕಿತ್ತು. ಹೀಗಾಗಿ ಮಾಲ್ ಗಳಿಗೆ ಹೋಗಿ ಶಾಪಿಂಗ್‌ ಅಥವಾ ಸಿನಿಮಾಗಾಗಲೀ ಹೋಗದೆ ಎಲ್ಲರೂ ಮನೆಯಲ್ಲಿಯೇ ಇದ್ದರು. ಹೀಗೆ ಎಲ್ಲರಲ್ಲಿಯೂ ಒಂದು ಬಗೆಯ ಆಲಸ್ಯ ಮನೆ ಮಾಡಿತ್ತು. ಇಂಥ ಸಂದರ್ಭದಲ್ಲಿ ಮನೆಯ ಮುಂಬಾಗಿಲು ಸದ್ದಾಯಿತು.

ಪರಿಮಳಾ ತಾನೇ ಮುಂದಾಗಿ ಬಾಗಿಲು ತೆರೆದಳು. ಎದುರಿಗೆ ಸುಮಾರು 24 ಪ್ರಾಯದ ಯುವಕ ನಿಂತಿದ್ದ. ತೊಟ್ಟಿದ್ದ ಬಟ್ಟೆ ಕೊಳೆಯಾಗಿತ್ತು. ಹಾಕಿದ್ದ ಚಪ್ಪಲಿ ಸವೆದು ಹೋಗಿತ್ತು. ಕೈಯಲ್ಲಿ ಕೆಲವು ಹಾಳೆಗಳಿರಬಹುದಾದ ಒಂದು ಚೀಲವಿತ್ತು. ಕಣ್ಣುಗಳು ಮಾತ್ರ ಚಿರಚೇತನದಿಂದ ಹೊಳೆಯುತ್ತಿದ್ದವು.

“ಏನಪ್ಪಾ, ಏನಾಗಬೇಕು?”

“ನಿಮ್ಮ ಹಸ್ಪೆಂಡ್‌ ಜೊತೆ ಮಾತನಾಡಬೇಕಿತ್ತು.”

“ಸರಿ ಇಲ್ಲೇ ಇರು ಇದೀಗ ಕರೆಯುತ್ತೇನೆ,” ಎಂದ ಪರಿಮಳಾ ಗಂಡನಿದ್ದಲ್ಲಿಗೆ ಬಂದು ವಿಚಾರ ತಿಳಿಸಿದಾಗ, ಅವನು ಯುವಕನಿದ್ದಲ್ಲಿ ಬಂದು ಮಾತಿಗೆ ಪ್ರಾರಂಭಿಸಿದ್ದ.

ಆ ಯುವಕ ಮೂಲತಃ ಹೈದರಾಬಾದ್‌ನವನಾಗಿದ್ದ.  ಅಜರ್‌ ಎನ್ನುವ ಆ ಯುವಕ ಹಾರ್ಡ್‌ವೇರ್‌ ನೆಟ್‌ವರ್ಕಿಂಗ್‌ನಲ್ಲಿ ಡಿಪ್ಲೊಮಾ ಮಾಡಿಕೊಂಡಿದ್ದು ಹೈದರಬಾದ್‌ನ ಸಂಸ್ಥೆಯೊಂದರ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ.

ಆದರೆ ಕೆಲವು ತಿಂಗಳ ನಂತರ ಆ ಸಂಸ್ಥೆಯವರು ಇವನನ್ನು ಬೆಂಗಳೂರಿನ ಒಂದು ಸಂಸ್ಥೆಗೆ ಕಳಿಸಿದ್ದರು. ಅಲ್ಲಿ ಕೆಲಸ ಮಾಡುತ್ತಿರುವಾಗಲೇ ಮುಖ್ಯ ಶಾಖೆ ಇದ್ದ ಹೈದರಾಬಾದ್‌ನಲ್ಲಿ ಸಂಸ್ಥೆ ನಷ್ಟಕ್ಕೀಡಾಗಿ ಮುಚ್ಚಿಹೋಗಿತ್ತು. ಇದರ ಪರಿಣಾಮ ಬೆಂಗಳೂರಿನಲ್ಲಿ ದುಡಿಯುತ್ತಿದ್ದವರಿಗೂ ಸಂಬಳ ಬರದಂತಾಗಿ ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿತ್ತು.

“ಸರ್‌, ನಾನು ನಿಮ್ಮಲ್ಲಿ ಬಂದದ್ದು ಭಿಕ್ಷೆ ಬೇಡುವುದಕ್ಕಾಗಿ ಅಲ್ಲವೇ ಅಲ್ಲ. ಬದಲಾಗಿ ನನ್ನ ಪರಿಚಯಸ್ಥರೊಬ್ಬರು ನಿಮ್ಮ ವಿಳಾಸ ನೀಡಿ ಇವರ ಹತ್ತಿರ ಹೋದಲ್ಲಿ ಕೆಲಸ ಸಿಗುವುದೆಂದು ಹೇಳಿದ್ದರು.”

“ಓಹೋ….., ನಮ್ಮ  ವರ್ಕ್‌ಶಾಪ್‌ನಲ್ಲಿ ಸದ್ಯಕ್ಕೆ ಯಾವ ಕೆಲಸ ಖಾಲಿ ಇಲ್ಲವಲ್ಲ…….?”

“ಹಾಗೆನ್ನಬೇಡಿ, ನಿಮ್ಮನ್ನು ನಂಬಿ ನಾನು ಇಷ್ಟು ದೂರ ಬಂದಿದ್ದೇನೆ.”

ವೇಣುಗೋಪಾಲ್ ಕ್ಷಣಕಾಲ ಮೌನವಾದ. ನಂತರ ಒಂದು ಕ್ಷಣ ಇಲ್ಲೇ ಇರು ಎಂದು ಹೇಳಿ ಕೋಣೆಯತ್ತ ಹೆಜ್ಜೆ ಹಾಕಿದ. ಅಲ್ಲಿ ಪರಿಮಳಾ ಜೊತೆ ಚರ್ಚೆಯಲ್ಲಿ ತೊಡಗಿದ. ಈ ಯುವಕನಿಗೆ  ಏನು ಹೇಳುವುದು? ತಮ್ಮ ಸ್ನೇಹಿತರ ಕಡೆಯಿಂದಲೇ ಬಂದಿದ್ದಾನೆ. ಆದುದರಿಂದ ತಕ್ಷಣಕ್ಕೆ  ನಿರಾಕರಿಸಲೂ ಆಗುದಿಲ್ಲವಲ್ಲ…..?

ಹೀಗೆಯೇ ಚರ್ಚೆ ನಡೆಸಿ ಕಡೆಗೆ ಸದ್ಯ ಅವನಿಗೆ ಹೈದರಾಬಾದ್‌ನಲ್ಲಿರುವ ಪರಿಮಳಾಳ ಸಂಬಂಧಿಕರೊಬ್ಬರ ಸಂಸ್ಥೆಯಲ್ಲಿ ಕೆಲಸದ ಏರ್ಪಾಡು ಮಾಡಿಸುವುದು, ಈಗ ಅವನಿಗೆ ಹೈದರಾಬಾದ್‌ಗೆ ವಾಪಸ್ಸು ಹೋಗಲು ಹಣ ನೀಡಿ ಕಳಿಸುವುದು ಎಂದು ತೀರ್ಮಾನಿಸಿದರು.

“ಅಜರ್‌, ಸದ್ಯ ನಮ್ಮಲ್ಲಿ  ಯಾವ ಕೆಲಸಗಳೂ ಇಲ್ಲ. ನೀನು ಹೈದರಾಬಾದ್‌ಗೆ ಹೋಗು, ಅಲ್ಲಿ ನಮಗೆ ಪರಿಚಯದವರಿದ್ದಾರೆ. ಅವರ ಹೆಸರು ಮನೋಜ್‌ಕುಮಾರ್‌. ಅವರ ಬಳಿ ಈ ಕಾಗದ ಕೊಡು. ಅವರು ನಿನಗೆ ನೆರವಾಗುತ್ತಾರೆ,” ಎಂದ ವೇಣುಗೋಪಾಲ್‌.

ಆ ಯುವಕ ಅವರು ನೀಡಿದ ಕಾಗದ ಮತ್ತು 800 ರೂ. ಹಣವನ್ನು ಪಡೆದು ಅಲ್ಲಿಂದ ಹೊರಟ.

ಹೀಗೆ ಆ ಭಾನುವಾರ ಅಪರಿಚಿತ ಯುವಕ ಹೋಗಿ ಆರು ತಿಂಗಳಾಗಿತ್ತು. ಯಾವುದೇ ಸುದ್ದಿಯಾಗಲಿ, ಫೋನ್‌ ಕಾಲ್,  ಕಾಗದವಾಗಲಿ ಇರಲಿಲ್ಲ. ವೇಣುಗೋಪಾಲ್ ದಂಪತಿಗಳಿಗೂ ಅವನ ವಿಚಾರವೇ ಮರೆತು ಹೋಗಿತ್ತು.

ಅದೊಂದು ದಿನ ಪರಿಮಳಾಳ ತಾಯಿ ಹೈದರಾಬಾದ್‌ನಿಂದ  ಕರೆ ಮಾಡಿ, ಒಬ್ಬ ಯುವಕ  ನಮ್ಮ ಮನೆಗೆ ಬಂದು 800 ರೂ. ಹಣ ಮತ್ತು ಒಂದು ರಟ್ಟಿನ ಪೆಟ್ಟಿಗೆ ತುಂಬಾ ಸಿಹಿಯಾದ ಮಾವಿನಹಣ್ಣನ್ನು ಕೊಟ್ಟು ಹೋದನೆಂದು, ಹೇಳಿದರು.

ಇದಾಗಿ ಕೆಲವು ದಿನಗಳ ನಂತರ ವೇಣುಗೋಪಾಲ್ ಹೆಸರಿನಲ್ಲಿ ಒಂದು ಪತ್ರ ಬಂದಿತು. ಅದರಲ್ಲಿ ಅವರು ಅಂದು ಮಾಡಿದ ಸಹಾಯಕ್ಕೆ ಕೃತಜ್ಞತೆ ವಾಕ್ಯಗಳನ್ನು ಬರೆಯಲಾಗಿತ್ತು. ಜೊತೆಗೆ ತಾನಿಂದು ಉತ್ತಮ ಆರ್ಥಿಕ ಸ್ಥಿತಿ ತಲುಪಿರುವುದಾಗಿಯೂ ನನಗೂ ಸಹ ಸಮಯಾವಕಾಶ ಒದಗಿದರೆ ಇನ್ನೊಬ್ಬರಿಗೆ ಸಹಾಯ ಮಾಡುತ್ತೇನೆಂದು ಅಜರ್‌ ತನ್ನ ಸಹಿಯೊಂದಿಗೆ  ಬರೆದಿದ್ದ.

ಇದಾದ ಪ್ರತಿ ತಿಂಗಳೂ ಅದು ಪರಿಮಳಾಳ ಪೋಷಕರು ಹೈದರಾಬಾದ್‌ ಬಿಡುವವರೆಗೂ ಅವರ ಮನೆಗೆ ಆಗಾಗ ಹಣ್ಣು ಹಂಪಲು ಕಳಿಸುವುದು ತಪ್ಪಿರಲಿಲ್ಲ.

ಹೀಗೆ ಒಬ್ಬ ಅಪರಿಚಿತ ವ್ಯಕ್ತಿ ವೇಣುಗೋಪಾಲ್ ಮತ್ತವನ ಕುಟುಂಬಕ್ಕೆ ಆತ್ಮೀಯ ಮಿತ್ರನಾಗಿ ಪರಿವರ್ತಿತನಾಗಿದ್ದ. ಇದು ನಮ್ಮ ಸಮಾಜದಲ್ಲಿರುವ ಮಾನವೀಯ ಗುಣಗಳಿಗೆ ಒಂದು ಸಣ್ಣ ಉದಾಹರಣೆ ಎಂದು ತಿಳಿಯಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ