ಮದುವೆಯ ನಂತರದ ನಿಮ್ಮ ಮೊದಲ ಟ್ರಿಪ್ನ್ನು ಸ್ಮರಣೀಯಗೊಳಿಸಲು ಹ್ಯಾಪಿ ಹನಿಮೂನ್ನ ಈ ಟಿಪ್ಸ್ ನಿಮ್ಮದಾಗಿಸಿಕೊಳ್ಳಿ…..
ಮದುವೆ ನಿಶ್ಚಯವಾಗುತ್ತಲೆ ವಿನಯ್ನ ಹನಿಮೂನ್ ಕಲ್ಪನೆ ಮುಗಿಲು ಮುಟ್ಟಿತು. ಮನದಲ್ಲೇ ಅನೇಕ ರೀತಿಯ ಪ್ಲ್ಯಾನ್ಗಳನ್ನು ಮಾಡತೊಡಗಿದ. ಕೊನೆಗೆ ಹೆಂಡತಿಯನ್ನು ಕರೆದುಕೊಂಡು ಹನಿಮೂನ್ಗೆ ಹೋಗುವ ದಿನ ಬಂತು.
ಆದರೆ ಇಬ್ಬರೂ ಬೇಗನೇ ಮನೆಗೆ ವಾಪಸ್ಸಾದರು. ಇಬ್ಬರೂ ತಮ್ಮ ಪ್ರೋಗ್ರಾಂನ ಮೊದಲೇ ಮನೆಗೆ ಹಿಂದಿರುಗುವಂಥದ್ದು ಏನಾಯಿತು? ಅಸಲಿಗೆ ಹನಿಮೂನ್ನಲ್ಲಿ ವಿನಯ್ನಿಂದ ಕೆಲವು ತಪ್ಪುಗಳಾದವು. ಅದರಿಂದ ಅವರ ಹನಿಮೂನ್ನ ಮೋಜು ಹಾಳಾಯಿತು.
ಮದುವೆ ನಿಶ್ಚಯವಾಗುತ್ತಲೇ ಜನ ಹನಿಮೂನ್ನ ಕನಸು ಕಾಣತೊಡಗುತ್ತಾರೆ. ಆದರೆ ಹನಿಮೂನ್ ಸಂದರ್ಭದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದ್ದರಿಂದ ಹನಿಮೂನ್ ಸಂದರ್ಭದಲ್ಲಿ ಕೆಲವು ಅಗತ್ಯದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತಪ್ಪುಗಳಿಂದ ರಕ್ಷಿಸಿಕೊಳ್ಳಬಹುದು. ಉದಾಹರಣೆಗೆ : ಎಲ್ಲಿಗೆ ಹೋಗಬೇಕೆಂದು ಒಟ್ಟಿಗೆ ನಿರ್ಧರಿಸಿ : ಹನಿಮೂನ್ ಎಂದರೆ ಇಬ್ಬರೂ ಹೋಗಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಒಬ್ಬರೇ ನಿರ್ಧರಿಸಬೇಡಿ. ನೀವು ಹನಿಮೂನ್ಗೆ ಹೋಗುವ ಜಾಗ ನಿಮ್ಮ ಸಂಗಾತಿಗೆ ಇಷ್ಟವಾಗದಿರಬಹುದು. ವಾತಾವರಣಕ್ಕೆ ಅನುಗುಣವಾಗಿ ಆರಾಮದಾಯಕ, ಖುಷಿ ತರುವ ನೆಮ್ಮದಿಯ ತಾಣ ಹುಡುಕಿ.
ಮೊದಲು ಬಜೆಟ್ ತಯಾರಿಸಿ : ಹನಿಮೂನ್ಗೆ ಹೋಗುವ ಮೊದಲು ಬಜೆಟ್ ತಯಾರಿಸಿ. ಮುಂದೆ ನಿಮಗೆ ಸಮಸ್ಯೆ ಉಂಟಾಗಬಾರದು. ತೋರಿಕೆಗಾಗಿ ವಿದೇಶಕ್ಕೆ ಹೋಗುವುದು ಅಥವಾ ಹೈಫೈ ಜಾಗದಲ್ಲಿ ತಂಗುವ ಪ್ಲ್ಯಾನ್ ಮಾಡಬಾರದು. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಜೆಟ್ ನಿಮ್ಮ ಹನಿಮೂನ್ನಲ್ಲಿ ತೊಂದರೆಯಾಗಬಹುದು. ನಿಮ್ಮ ಬಜೆಟ್ನಲ್ಲಿ ಮಾಡಿದ ಹನಿಮೂನ್ ಟೂರ್ ನಿಜವಾದ ಆನಂದ ತರುತ್ತದೆ.
ಅಡ್ವೆಂಚರ್ ಟೂರ್ ಮಾಡಬೇಡಿ : ಕೆಲವು ದಂಪತಿಗಳು ತಮ್ಮ ಹನಿಮೂನ್ ಟೂರ್ನ್ನು ಅಡ್ವೆಂಚರ್ ಟೂರ್ ಮಾಡಿಕೊಳ್ಳುತ್ತಾರೆ. ಅವರಿಗೆ ಎಷ್ಟು ಆಯಾಸವಾಗಿರುತ್ತದೆಂದರೆ ಹಾಸಿಗೆಗೆ ಹೋದ ಕೂಡಲೇ ನಿದ್ದೆ ಬಂದುಬಿಡುತ್ತದೆ. ಅದರಿಂದ ಹನಿಮೂನ್ನ ಮಜಾ ಹಾಳಾಗುತ್ತದೆ.
ವ್ಯರ್ಥ ಮಾತುಗಳು ಬೇಡ : ಸುತ್ತಾಡುವಾಗ ವ್ಯರ್ಥ ಮಾತುಗಳು ಬೇಡ. ಯಾವುದಾದರೂ ಗಾರ್ಡನ್ ಅಥವಾ ಶಾಂತ ಪ್ರದೇಶದಲ್ಲಿ ಕೂತು ರೊಮ್ಯಾಂಟಿಕ್ ಆಗಿ ಮಾತಾಡಿ ಅಥವಾ ಕಣ್ಣುಗಳಲ್ಲೇ ಮಾತಾಡಿ.
ಬೇರೆ ದಂಪತಿಗಳನ್ನು ನೋಡಬೇಡಿ : ಅನೇಕ ಹುಡುಗರು ಹನಿಮೂನ್ ಟೂರ್ನಲ್ಲಿ ಇತರ ಕಪಲ್ ಗಳನ್ನು ವಿಶೇಷವಾಗಿ ಹುಡುಗಿಯರನ್ನು ದುರುಗುಟ್ಟಿ ನೋಡುತ್ತಾರೆ. ಅಸಲಿಗೆ ಹುಡುಗಿಯರ ಮೇಲೆ ಕಣ್ಣು ಹಾಕುವುದು ಹುಡುಗರ ಸ್ವಭಾವ. ಆದರೆ ಅವರು ಬ್ಯಾಚುಲರ್ ಲೈಫ್ನಿಂದ ಮ್ಯಾರೇಜ್ ಲೈಫ್ಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗ ಸಂಗಾತಿಗೆ ನಿಮ್ಮ ಈ ಅಭ್ಯಾಸ ಕೆಟ್ಟದೆನಿಸುತ್ತದೆ.
ಮೊಬೈಲ್ ಆಫ್ ಮಾಡಿ : ಈಗ ಹೆಚ್ಚು ಜನ ಮೊಬೈಲ್ ಕಾಲ್, ನೆಟ್ ಅಥವಾ ಗೇಮ್ ನಲ್ಲಿ ಬಿಜಿಯಾಗಿರುತ್ತಾರೆ. ಮೊಬೈಲ್ ನಲ್ಲಿ ವ್ಯಸ್ತರಾಗಿರುವಾಗ ಪರಸ್ಪರ ಗಮನ ದೂರವಾಗುತ್ತದೆ. ಹನಿಮೂನ್ ಸಂದರ್ಭದಲ್ಲಿ ಮೊಬೈಲ್ ಆಫ್ ಮಾಡಿ. ಮನೆಯವರೊಂದಿಗೆ ಮಾತಾಡಬೇಕಿದ್ದರೆ ಸ್ವಲ್ಪ ಹೊತ್ತು ಆನ್ ಮಾಡಿಕೊಳ್ಳಿ.
ಶೂಟ್ ಮಾಡಬೇಡಿ : ಕೆಲವು ದಂಪತಿಗಳು ಎಷ್ಟು ಎಕ್ಸೈಟೆಡ್ ಆಗಿರುತ್ತಾರೆಂದರೆ ತಮ್ಮ ಫಸ್ಟ್ ನೈಟ್ನ ಕಲಾಪಗಳನ್ನು ಶೂಟ್ ಮಾಡುತ್ತಾರೆ. ರೋಮಾಂಚಕ ಕ್ಷಣಗಳನ್ನು ಶೂಟ್ ಮಾಡುವುದು ಒಳ್ಳೆಯದಲ್ಲ.
ಕೆಲ ದಿನಗಳ ಹಿಂದೆ ಇಂದೋರ್ನ ಒಂದು ಜೋಡಿ ಮುಂಬೈಗೆ ಹನಿಮೂನ್ಗೆ ಹೋಗಿದ್ದರು. ಅವರು ತಮ್ಮ ಫಸ್ಟ್ ನೈಟ್ನ್ನು ಲೈವ್ ಶೂಟಿಂಗ್ ಮಾಡತೊಡಗಿದರು. ಅವರ ಫೋನ್ ಆಟೋ ಮೋಡ್ನಲ್ಲಿತ್ತು. ಅವರ ಇಡೀ ಶೂಟಿಂಗ್ ಆನ್ಲೈನ್ ಆಗಿಹೋಯಿತು. ಅವರ ಆನ್ಲೈನ್ ಫ್ರೆಂಡ್ಸ್ ಎಲ್ಲಾ ಅದರ ಮೋಜು ಸವಿದರು. ಒಬ್ಬ ತಿಳಿವಳಿಕೆಯುಳ್ಳ ಗೆಳೆಯ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಆಗ ಇಬ್ಬರೂ ನಾಚಿ ನೀರಾದರು.
ಟಿವಿ ಆಫ್ ಮಾಡಿ : ಮೊಬೈಲ್ ಬಳಿಕ ಹೆಚ್ಚಿನ ಜನಕ್ಕೆ ಟಿವಿ ನೋಡುವ ಶೋಕಿ ಇರುತ್ತದೆ. ಹನಿಮೂನ್ ಸಂದರ್ಭದಲ್ಲಿ ಟಿವಿ ನೋಡುತ್ತಾ ನಿಮ್ಮ ರೊಮ್ಯಾಂಟಿಕ್ ಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬೇಡಿ. ರೂಮಿನೊಳಗೆ ಹೋದನಂತರ ಮೊದಲಿಗೆ ರಿಮೋಟ್ ಎಲ್ಲಿಯಾದರೂ ಬಚ್ಚಿಡಿ. ಟಿವಿ ಆನ್ ಮಾಡುವ ಅವಕಾಶ ಕೊಡಬೇಡಿ.
ಲೈಟ್ ಮ್ಯೂಸಿಕ್ ಕೇಳಿ : ರೊಮ್ಯಾಂಟಿಕ್ ಹಾಡು ಕೇಳುವುದು ಚೆನ್ನಾಗಿರುತ್ತದೆ. ಆದರೆ ಆ ಸುಂದರ ಕ್ಷಣಗಳಲ್ಲಿ ಹಾಡು ಕೇಳುವುದು ಸರಿಯಲ್ಲ. ಆದರಿಂದ ಗಮನ ಬೇರೆಯಾಗುತ್ತದೆ ಮತ್ತು ಸೆಕ್ಸ್ ನ ಮೋಜು ಹಾಳಾಗುತ್ತದೆ. ಅಂತಹ ಸಮಯದಲ್ಲಿ ಮತ್ತು ಬರಿಸುವ ಲೈಟ್ ಮ್ಯೂಸಿಕ್ ಚೆನ್ನಾಗಿರುತ್ತದೆ.
ಸೆಕ್ಸ್ ನಲ್ಲೇ ಮುಳುಗಿರಬೇಡಿ : ಹನಿಮೂನ್ನ ಮೋಜಿನಲ್ಲಿ ಮುಳುಗಿರುವುದು ಒಳ್ಳೆಯದು. ಆದರೆ ಯಾವಾಗಲೂ ಸೆಕ್ಸ್ ನಲ್ಲಿ ಮುಳುಗಿರುವುದು ಒಳ್ಳೆಯದಲ್ಲ. ಮದುವೆಯ ನಂತರ ಸೆಕ್ಸ್ ಎಂಜಾಯ್ ಮಾಡುವ ಸಾಧನವೇನೋ ಹೌದು. ಆದರೆ ಅದಕ್ಕಾಗಿ ಇಡೀ ಜೀವನ ಇದೆ. ಮೋಜು ಮಾಡಿ. ಆದರೆ ಮಿತಿ ಇರಲಿ. ಆಗ ಅದರ ಆನಂದವೇ ಬೇರೆ.
ಹಳೆಯದನ್ನು ಕೆದಕಬೇಡಿ : ವಿನಯ್ ಮತ್ತು ಪ್ರತಿಮಾ ಹನಿಮೂನ್ಗೆ ಹೋಗಿದ್ದರು. ರೋಮಾಂಚನ, ಮೋಜಿನ ಸಂದರ್ಭದಲ್ಲಿ ವಿನಯ್ ತನ್ನ ಪತ್ನಿಯ ಹಿಂದಿನ ಅನುಭವಗಳಲ್ಲಿ ಇಣುಕಿ ನೋಡಲು ಪ್ರಯತ್ನಿಸಿದ. ನಿನಗೆಷ್ಟು ಬಾಯ್ಫ್ರೆಂಡ್ಸ್ ಇದ್ದಾರೆ? ಅವರೊಂದಿಗೆ ಎಂದಾದರೂ ಬೆಡ್ ಶೇರ್ ಮಾಡಿದ್ದೀಯಾ? ಎಂದು ಕೇಳಿದ. ವಿನಯ್ನ ಮಾತು ಕೇಳಿ ಪ್ರತಿಮಾಗೆ ಆಘಾತವಾಯಿತು. ಅವಳ ಉತ್ಸಾಹ ಎಲ್ಲಾ ಕ್ಷಣಾರ್ಧದಲ್ಲಿ ಮಾಯಾಯಿತು.
ತನ್ನ ಮಾತು ಕೇಳಿ ಪ್ರತಿಮಾಗೆ ಆಘಾತವಾಯಿತೆಂದು ತಿಳಿದು ವಿನಯ್ಗೆ ತನ್ನ ತಪ್ಪಿನ ಅರಿವಾಯಿತು. ಇದೆಲ್ಲ ತಾನು ತಮಾಷೆಗೆ ಕೇಳಿದ್ದು ಎಂದು ಅವಳ ಕ್ಷಮೆ ಕೇಳಿದ. ಆದರೆ ಪ್ರತಿಮಾಳ ಮನಸ್ಸಿಗೆ ಆಳವಾದ ಗಾಯ ಆಗಿತ್ತು. ಎಷ್ಟೋ ವರ್ಷ ಕಳೆದರೂ ಅವಳು ಈ ಮಾತನ್ನು ಮರೆಯಲಿಲ್ಲ. ಆದ್ದರಿಂದ ಸಂಗಾತಿಯೊಂದಿಗೆ ಇಂತಹ ವಿಷಯಗಳನ್ನು ಮಾತಾಡಬೇಡಿ. ಅದರಿಂದ ಜೀವನ ಪರ್ಯಂತ ಪಶ್ಚಾತ್ತಾಪಪಡುವಂತಾಗಬಾರದು.
ಅವಸರಿಸಬೇಡಿ : ಬೆಡ್ನಲ್ಲಿ ಸೆಕ್ಸ್ ಮಾಡುವಾಗ ಅವಸರಿಸಬೇಡಿ. ಅವಸರದ ಕೆಲಸ ಸೈತಾನನದು ಎಂಬ ಮಾತು ಕೇಳಿರಬಹುದು. ಒಳ್ಳೆಯ ಉತ್ಸಾಹದಿಂದ ಸೆಕ್ಸ್ ನಲ್ಲಿ ಬಹಳಷ್ಟು ಆನಂದ ಹೊಂದಿ.
ಸಹಜವಾಗಿರಿ : ಮುಂದೆ ಏನಾದರೂ ತೊಂದರೆ ಆಗಬಹುದೆಂದು ಹೆದರಬೇಡಿ. ಹೆದರಿಕೆ ಮತ್ತು ಗಾಬರಿಯಿಂದ ಏನಾದರೂ ತೊಂದರೆ ಆಗಬಹುದು. ಆದ್ದರಿಂದ ಸಹಜವಾಗಿರಿ. ಕೆಲವು ಹುಡುಗಿಯರು ತಮ್ಮನ್ನು ಬಹಳ ನಾಚಿಕೆ ಸ್ವಭಾವದವರು ಅಥವಾ ಪೂರ್ಣ ಬಿಂದಾಸ್ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅವೆರಡೂ ತಪ್ಪು. ನೀವಿದ್ದಂತೆಯೇ ಸಂಗಾತಿಯ ಎದುರು ಇರಲು ಪ್ರಯತ್ನಿಸಿ.
ನಖರಾ ಮಾಡಬೇಡಿ : ಸೆಕ್ಸ್ ಸಂದರ್ಭದಲ್ಲಿ ಗಂಡನ ಎದುರು ಹೆಚ್ಚು ಒಯ್ಯಾರ ಮಾಡುವುದು ಸರಿಯಲ್ಲ. ಅದರಿಂದ ಅವರಿಗೆ ಕೋಪ ಬರಬಹುದು. ನಾಚಿಕೊಳ್ಳುವುದು, ಒಯ್ಯಾರ, ಡೌಲು ಹೆಣ್ಣಿನ ಲಕ್ಷಣಗಳು. ಆದರೆ ಸೂಕ್ಷ್ಮ ಸಮಯದಲ್ಲಿ ಹಾಗೆ ಮಾಡಿದರೆ ಗಂಡನ ಮೂಡ್ ಹಾಳಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಗಂಡನಿಗೆ ಸಂಪೂರ್ಣ ಸಹಕಾರ ನೀಡಿ.
ಎಕ್ಸ್ ಪೆರಿಮೆಂಟ್ ಮಾಡಬೇಡಿ : ಹನಿಮೂನ್ ಸಂದರ್ಭದಲ್ಲಿ ಸೆಕ್ಸ್ ಸಂಬಂಧದ ಬಗ್ಗೆ ಹೆಚ್ಚು ಪ್ರಯೋಗಗಳನ್ನು ಮಾಡಬೇಡಿ. ಕೆಲವು ಸ್ನೇಹಿತರು ಹೇಳಿದ ಟಿಪ್ಸ್, ಅಗ್ಗದ ಪುಸ್ತಕಗಳು ಅಥವಾ ವೆಬ್ಸೈಟ್ನಲ್ಲಿ ಕೊಟ್ಟಿರುವ ಅಸಡ್ಡಾಳ ಟಿಪ್ಸ್ ಪ್ರಯೋಗಿಸುತ್ತಾರೆ. ಅಂತಹ ಪ್ರಯೋಗಗಳಿಂದ ಸಂಗಾತಿಗೆ ಬೇಸರವಾಗುತ್ತದೆ.
ಜಬ್ಬಲ್ ಪುರದ ಒಂದು ಹೋಟೆಲ್ ನಲ್ಲಿ ಹನಿಮೂನ್ ಸಂದರ್ಭದಲ್ಲಿ ಒಬ್ಬ ಯುವಕ ತನ್ನ ಪತ್ನಿಯನ್ನು ಉಲ್ಟಾ ತೂಗಾಡಿಸಿ ಸೆಕ್ಸ್ ಮಾಡಲು ಪ್ರಯತ್ನಿಸಿದ. ಆ ವಿಧಾನದಿಂದ ಮೊದಲ ಬಾರಿ ಸೆಕ್ಸ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವನ ಗೆಳೆಯನೊಬ್ಬ ಹೇಳಿದ್ದ. ಹಾಗೆ ತೂಗಾಡುತ್ತಿದ್ದ ನವಿವಿವಾಹಿತೆಯ ಉಸಿರಾಟಕ್ಕೆ ತೊಂದರೆಯಾಯಿತು. ಅಷ್ಟರಲ್ಲಿ ಯುವಕ ಅವಳ ಪರಿಸ್ಥಿತಿ ಕಂಡು ಬೇಗನೆ ಅವಳನ್ನು ಇಳಿಸಿದ. ಅಷ್ಟರಲ್ಲಿ ಅವಳು ಮೂರ್ಛಿತಳಾದಳು. ಯುವಕ ಬೇಗನೇ ಡಾಕ್ಟರ್ನ್ನು ಕರೆಸಿ ಎಲ್ಲ ವಿಷಯ ತಿಳಿಸಿದ. ಡಾಕ್ಟರ್ ಪರೀಕ್ಷಿಸಿ ಮೆದುಳಿನಲ್ಲಿ ರಕ್ತ ಸಂಚಾರ ಹೆಚ್ಚಾಗಿದ್ದರಿಂದ ಅವಳು ಮೂರ್ಛಿತಳಾದಳು. ಇನ್ನೂ ಸ್ವಲ್ಪ ಹೊತ್ತು ತೂಗಾಡುತ್ತಿದ್ದರೆ ಅವಳ ಪ್ರಾಣ ಹೋಗುತ್ತಿತ್ತು ಎಂದರು.
ಚೆನ್ನಾಗಿ ಪರೀಕ್ಷಿಸಿ : ಹೋಟೆಲ್ ಎಷ್ಟೇ ದುಬಾರಿಯಾಗಿರಬಹುದು. ಇಡೀ ಕೋಣೆಯನ್ನು ಚೆನ್ನಾಗಿ ಚೆಕ್ ಮಾಡಿ. ಬಾಥ್ರೂಮ್, ಬೆಡ್ರೂಮ್, ಅಲ್ಮೇರಾ, ಟ್ಯೂಬ್ಲೈಟ್, ಸ್ವಿಚ್ಬೋರ್ಡ್, ಫ್ಯಾನ್ ಇತ್ಯಾದಿ ಜಾಗಗಳಲ್ಲಿ ಪತ್ತೆ ಮಾಡಿ. ಚೆಕ್ ಮಾಡಲು ಸುಲಭ ಉಪಾಯವೆಂದರೆ ಅವುಗಳ ಬಳಿ ಮೊಬೈಲ್ ತೆಗೆದುಕೊಂಡು ಹೋಗಿ. ಎಲ್ಲಾದರೂ ಕ್ಯಾಮೆರಾ ಇಟ್ಟಿದ್ದರೆ ಮೊಬೈಲ್ ನ ನೆಟ್ವರ್ಕ್ ಇರುವುದಿಲ್ಲ.
ಕ್ಯಾಮೆರಾ ಪತ್ತೆ ಮಾಡಲು ಇನ್ನೊಂದು ಉಪಾಯ, ಆ ರೂಮಿನ ಎಲ್ಲ ಲೈಟ್ಗಳನ್ನು ಆಫ್ ಮಾಡಿ. ನಂತರ ನಿಮ್ಮ ಸ್ಮಾರ್ಟ್ಫೋನ್ನ ಕ್ಯಾಮೆರಾ ಆನ್ ಮಾಡಿ. ಅದರ ಫ್ಲ್ಯಾಶ್ ಆಫ್ ಮಾಡಿ. ನಂತರ ಕ್ಯಾಮೆರಾದಲ್ಲಿ ಕೆಂಪು ಡಾಟ್ಸ್ ಕಾಣುತ್ತದೆಯೇ ನೋಡಿ. ಒಂದು ವೇಳೆ ಕಂಡರೆ ಹಿಡನ್ ಕ್ಯಾಮೆರಾ ಇಟ್ಟಿದ್ದಾರೆಂದು ಅರ್ಥ.
ಹನಿಮೂನ್ಗೆ ಒಳ್ಳೆಯ ಹೋಟೆಲ್ ಆರಿಸಿಕೊಳ್ಳಿ. ಕಡಿಮೆ ರೇಟ್ನ ಹೋಟೆಲ್ ಗಳಲ್ಲಿ ಸ್ಪೈ ಕ್ಯಾಮೆರಾ ಇಟ್ಟಿರುವ ಚಾನ್ಸ್ ಹೆಚ್ಚು. ಏಕೆಂದರೆ ಅಲ್ಲಿ ಕೆಲಸ ಮಾಡುವ ಕೆಲಸಗಾರರ ಸಂಬಳ ಕಡಿಮೆ. ಆಗ ಅವರು ಬೇರೆ ರೀತಿಯಿಂದ ಸಂಪಾದಿಸಲು ಇಂತಹ ಕೆಲಸಗಳನ್ನು ಮಾಡುತ್ತಾರೆ.
ಆಫೀಸಿನ ಚಿಂತೆ : ಹನಿಮೂನ್ ದಿನಗಳಲ್ಲಿ ನಿಮ್ಮ ಆಫೀಸಿನ ತಲೆನೋವನ್ನು ಜೊತೆಗೆ ಒಯ್ಯಬೇಡಿ. ಹೀಗಿರುವಾಗ ಸಂಪೂರ್ಣ ಗಮನ ನವವಧುವನ್ನು ಬಿಟ್ಟು ಆಫೀಸ್ ಅಥವಾ ನಿಮ್ಮ ಬಿಸ್ನೆಸ್ ಮೇಲಿರುತ್ತದೆ. ಆಗ ಹನಿಮೂನ್ ಮೋಜು ಹಾಳಾಗುತ್ತದೆ. ಫೋನ್ ಅಟೆಂಡ್ ಮಾಡುವುದು, ಮೇಲ್ ಚೆಕ್ ಮಾಡುವುದು, ಫೋನ್ ಮಾಡಿ ಕೆಲಸಗಾರರಿಗೆ ನಿರ್ದೇಶನ ಕೊಡುವುದು ಇತ್ಯಾದಿ ನಿಮ್ಮ ಸಂಗಾತಿಗೆ ಡಿಸ್ಟರ್ಬ್ ಮಾಡುತ್ತದೆ. ಹನಿಮೂನ್ ಸಂದರ್ಭದಲ್ಲಿ ಎಲ್ಲ ವಿಷಯ ಮರೆತು ನಿಮ್ಮ ಫೋಕಸ್ ಸಂಗಾತಿಯ ಮೇಲೆ ಇರುವಂತೆ ನೋಡಿಕೊಳ್ಳಿ.
– ವಿನುತಾ ಭಟ್