ವಾಷಿಂಗ್ ಮೆಷಿನ್ ನಲ್ಲಿ ಯಾಂತ್ರಿಕವಾಗಿ ಬಟ್ಟೆ ತುರುಕಿ ಒಗೆಯುವ ಬದಲು ಅದರ ಸುದೀರ್ಘ ಬಾಳಿಕೆಗೆ ಯಾವ ಟಿಪ್ಸ್ ಅನುಸರಿಸಬೇಕೆಂದು ಗಮನಿಸೋಣವೇ ?

ಬಟ್ಟೆಗಳ ಸರಿಯಾದ ಒಗೆಯುವಿಕೆಯ ಜೊತೆ ಜೊತೆಗೆ ಅವುಗಳ ಕ್ವಾಲಿಟಿಯನ್ನೂ ಹೇಗೆ ಸದೃಢವಾಗಿಡಬಹುದೆಂದು ನಿಮಗೆ ಗೊತ್ತೇ? ಇಲ್ಲದಿದ್ದರೆ ಚಿಂತಿಸಬೇಡಿ. ಬಟ್ಟೆಗಳನ್ನು ಸರಿಯಾಗಿ ಒಗೆಯುವುದು ಹೇಗೆಂದು ತಿಳಿಸಿಕೊಡುತ್ತಿದ್ದೇವೆ.

– ಬಟ್ಟೆಗಳನ್ನು ಒಗೆಯುವ ಮೊದಲು ಅವನ್ನು ವಿಂಗಡಿಸಿ. ಹೆಚ್ಚು ಕೊಳೆ ಬಟ್ಟೆಗಳನ್ನು ಬೇರೆ ಒಗೆಯಿರಿ. ಕಡಿಮೆ ಕೊಳೆ ಬಟ್ಟೆಗಳನ್ನು ಬೇರೆ ಒಗೆಯಿರಿ. ಹೀಗೆಯೇ ಉಣ್ಣೆ ಬಟ್ಟೆಗಳು ಮತ್ತು ಹತ್ತಿಯ ಬಟ್ಟೆಗಳನ್ನು ಬೇರೆ ಬೇರೆ ಮಾಡಿ. ಶರ್ಟ್‌ಗಳು, ಪ್ಯಾಂಟುಗಳು, ಹೊಸ ಹತ್ತಿಯ ಉಡುಪುಗಳು ಇತ್ಯಾದಿಗಳನ್ನು ಒಗೆಯಿರಿ. ಬೆಡ್‌ಶೀಟ್‌ಗಳನ್ನು, ಟವೆಲ್ ಗಳನ್ನು ಮತ್ತು ನೈಟ್‌ಸೂಟ್‌ಗಳನ್ನು ಬೇರೆಯಾಗಿ ಒಗೆಯಿರಿ. ಎಲ್ಲ ಬಟ್ಟೆಗಳನ್ನೂ ಒಟ್ಟಿಗೇ ಮೆಷಿನ್‌ನಲ್ಲಿ ತುಂಬಿಸುವುದು ಸರಿಯಲ್ಲ.

– ಮೆಷಿನ್‌ನಲ್ಲೂ ಬಟ್ಟೆಗಳನ್ನು ಹಾಕಲು ಒಂದು ವಿಧಾನವಿದೆ. ದೊಡ್ಡ ಬಟ್ಟೆಗಳನ್ನು ಎಲ್ಲಕ್ಕೂ ಮೊದಲು. ನಂತರ ಅವಕ್ಕಿಂತ ಚಿಕ್ಕ, ನಂತರ ಇನ್ನೂ ಚಿಕ್ಕ. ಬಟ್ಟೆಗಳ ಮಡಿಕೆಗಳನ್ನು ಬಿಚ್ಚಿ. ಒಂದುವೇಳೆ ಬಟ್ಟೆಗಳನ್ನು ಹಾಗೆಯೇ ಮೆಷಿನ್‌ಗೆ ಹಾಕಿದರೆ ಅವು ಒಂದಕ್ಕೊಂದು ಸಿಕ್ಕಿಕೊಳ್ಳುತ್ತವೆ. ಮೆಷಿನ್‌ ಸ್ಪಂಜ್‌ ಮಾಡುವಾಗ ಬಟ್ಟೆಗಳು ಹರಿಯುವ ಮತ್ತು ಮೆಷಿನ್‌ನಲ್ಲಿ ಎರರ್‌ ಬಂದು ನಿಂತು ಹೋಗುವ ಸ್ಥಿತಿ ಉತ್ಪನ್ನವಾಗುತ್ತದೆ.

– ಯಾವುದೇ ಹೊಸಬಟ್ಟೆ ಹಾಕುವ ಮೊದಲು ಅದರ ಬಣ್ಣ ಹೋಗುತ್ತದೆಯೇ ಎಂದು ಪರೀಕ್ಷಿಸಿ. ಏಕೆಂದರೆ ಬಣ್ಣ ಹೋಗುವ ಬಟ್ಟೆ ಇದ್ದರೆ, ಮೆಷಿನ್‌ನಲ್ಲಿರುವ ಎಲ್ಲ ಬಟ್ಟೆಗಳೂ ಹಾಳಾಗುತ್ತವೆ.

– ಡಿಟರ್ಜೆಂಟ್‌ ಪೌಡರ್‌ ಅಥವಾ ಸಾಬೂನಿನ ಉಪಯೋಗವನ್ನು ಬಟ್ಟೆಗಳಿಗೆ ತಕ್ಕಂತೆ ಮಾಡಿ. ಹೆಚ್ಚು ಡಿಟರ್ಜೆಂಟ್‌ ಉಪಯೋಗಿಸಿದರೆ ಉಣ್ಣೆ ಮತ್ತು ರೇಷ್ಮೆ ಬಟ್ಟೆಗಳಿಗೆ ಹಾನಿ ಉಂಟಾಗುತ್ತದೆ.

– ಪ್ರತಿ ಮೆಷಿನ್‌ಗೂ ಡಿಟರ್ಜೆಂಟ್‌ ತೆಗೆದುಕೊಳ್ಳಲು ತನ್ನದೇ ಆದ ಸಾಮರ್ಥ್ಯ ಇರುತ್ತದೆ. ಒಂದುವೇಳೆ ಮೆಷಿನ್‌ನಲ್ಲಿ 1 ಮುಚ್ಚಳ ಡಿಟರ್ಜೆಂಟ್‌ ಹಾಕಲು ಬರೆದಿದ್ದರೆ ಅಷ್ಟೇ ಹಾಕಿ.

– ಅನೇಕ ಮೆಷಿನ್‌ಗಳ ಬುಕ್‌ಲೆಟ್‌ಗಳಲ್ಲಿ ನಾರ್ಮಲ್ ಡಿಟರ್ಜೆಂಟ್‌ ಜೊತೆಗೆ ಅರ್ಧ ಮುಚ್ಚಳ ಮೆಷಿನ್‌ ಡಿಟರ್ಜೆಂಟ್‌ನ್ನು ಹಾಕಿ ಎಂದು ಬರೆದಿರಲಾಗುತ್ತದೆ. ಅದನ್ನು ಬೇರೆ ಕೊಳ್ಳಬೇಕು. ಆದರೆ ಮಹಿಳೆಯರು ಅದನ್ನು ಕೊಳ್ಳುವ ಅಗತ್ಯವೇನಿದೆ ಎಂದು ಯೋಚಿಸುತ್ತಾರೆ. ಆದರೆ ಹಾಗೆ ಯೋಚಿಸುವುದು ಸರಿಯಲ್ಲ. ಏಕೆಂದರೆ ಆ ಡಿಟರ್ಜೆಂಟ್‌ನಿಂದಲೇ ಬಟ್ಟೆ ಹೆಚ್ಚು ಸ್ವಚ್ಛವಾಗುತ್ತದೆ.

– ಡಿಟರ್ಜೆಂಟ್‌ ಆರಿಸುವಾಗ ಪೌಡರ್‌ ಬಳಸುತ್ತೀರೋ ಅಥವಾ ಲಿಕ್ವಿಡ್‌ ಡಿಟರ್ಜೆಂಟ್‌ ಬಳಸುತ್ತೀರೋ ಎಂದು ನಿರ್ಧರಿಸಿ. ಲಿಕ್ವಿಡ್‌ ಡಿಟರ್ಜೆಂಟ್‌ ಬಹಳ ದುಬಾರಿಯಾಗುತ್ತದೆ. ನೀವು ಬಟ್ಟೆ ಒಗೆಯಲು ತಣ್ಣೀರು ಬಳಸಿದರೆ ನೀರಿನಲ್ಲಿ ಪೌಡರ್‌ ಸುಲಭವಾಗಿ ಕರಗುವುದಿಲ್ಲ. ಬಹಳ ಮೃದುವಾದ ಬಟ್ಟೆಗಳನ್ನು ಒಗೆಯಲು ಲಿಕ್ವಿಡ್‌ ಡಿಟರ್ಜೆಂಟ್‌ ಉಪಯೋಗಿಸಿ.

– ಡಿಟರ್ಜೆಂಟ್‌ ಉಪಯೋಗಿಸುವಾಗ ಫ್ಯಾಬ್ರಿಕ್‌ನ್ನೂ ಗಮನಿಸಿ. ರೇಷ್ಮೆ ಅಥವಾ ಉಣ್ಣೆ ಬಟ್ಟೆಗಳನ್ನು ಒಗೆಯಲು ಬಹಳ ಮೃದುವಾದ ಡಿಟರ್ಜೆಂಟ್‌ ಉಪಯೋಗಿಸಿ. ಮಕ್ಕಳ ಉಡುಪುಗಳನ್ನು ಒಗೆಯಲು ಇನ್ನೂ ಹೆಚ್ಚು ಮೃದುವಾದ ಡಿಟರ್ಜೆಂಟ್‌ ಉಪಯೋಗಿಸಿ. ಏಕೆಂದರೆ ಮಕ್ಕಳ ತ್ವಚೆ ಬಹಳ ಸಂವೇದನಾಶೀಲವಾಗಿರುತ್ತದೆ. ಬಿಳಿ ಬಟ್ಟೆಗಳನ್ನು ಒಗೆಯಲು ಬ್ಲೀಚ್‌ ಫಾರ್ಮುಲಾ ಇರುವ ಡಿಟರ್ಜೆಂಟ್‌ ಉಪಯೋಗಿಸಿ. ಬಣ್ಣದ ಬಟ್ಟೆಗಳನ್ನು ಒಗೆಯಲು ಬಟ್ಟೆಗಳಲ್ಲಿ ಹೊಳಪು ತರುವಂತಹ ಡಿಟರ್ಜೆಂಟ್‌ ಉಪಯೋಗಿಸಿ.

– ವಾಷಿಂಗ್‌ ಮೆಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಮೊದಲು ಡಿಟರ್ಜೆಂಟ್‌ ಹಾಕಿ ನಂತರ ಬಟ್ಟೆ ಹಾಕಿ. ಏಕೆಂದರೆ ಬಟ್ಟೆಗಳ ಮೇಲೆ ಡಿಟರ್ಜೆಂಟ್‌ ಹಾಕುವುದರಿಂದ ಬಟ್ಟೆಗಳಿಗೆ ಡಿಟರ್ಜೆಂಟ್‌ ಅಂಟಿಕೊಳ್ಳುತ್ತದೆ. ಬಟ್ಟೆಗಳ ಬಣ್ಣ ಹೋಗುತ್ತದೆ.

– ಬಟ್ಟೆಗಳನ್ನು ವಾಷಿಂಗ್‌ ಮೆಷಿನ್‌ನಲ್ಲಿ ಹಾಕುವ ಮೊದಲು ಅವುಗಳ ಮೇಲಿರುವ ಕಲೆಗಳನ್ನು ಕೈಗಳಿಂದ ತೆಗೆಯಿರಿ. ವಾಷಿಂಗ್‌ ಮೆಷಿನ್‌ನಲ್ಲಿ ಕಲೆ ಇರುವ ಬಟ್ಟೆಗಳನ್ನು ನೇರವಾಗಿ ಹಾಕುವುದರಿಂದ ಕಲೆ ಇನ್ನಷ್ಟು ಗಾಢವಾಗುತ್ತದೆ.

– ಒಂದುವೇಳೆ ವಾಷಿಂಗ್‌ ಮೆಷಿನ್‌ ಸೆಮಿ ಆಟೋಮ್ಯಾಟಿಕ್‌ ಆಗಿದ್ದರೆ, ಬಟ್ಟೆಗಳು ಸ್ವಚ್ಛವಾದ ನಂತರ ಅಲಾರಂ ಹೊಡೆಯುತ್ತದೆ. ಆಗ ಬಟ್ಟೆಗಳಿಂದ ನೀರು ತೆಗೆಯಲು ಡ್ರೈಯರ್‌ನಲ್ಲಿ ಬಟ್ಟೆಗಳನ್ನು ಹಾಕಬೇಕು. ಅದಕ್ಕೆ 5-10 ನಿಮಿಷಗಳು ಬೇಕು. ನಂತರ ಬಟ್ಟೆಗಳನ್ನು ಒಣಗಲು ಹಾಕಿ.

– ಬಟ್ಟೆಗಳನ್ನು ಒಗೆದ ನಂತರ ವಾಷಿಂಗ್‌ ಮೆಷಿನ್‌ನ ಡಿಟರ್ಜೆಂಟ್‌ ಬಾಕ್ಸ್ ಕೂಡ ಸ್ವಚ್ಛಗೊಳಿಸುವುದು ಅಗತ್ಯ. ಅದರಲ್ಲಿ ಉಳಿದಿರುವ ವಾಷಿಂಗ್‌ ಪೌಡರ್‌ ಅಗತ್ಯವಾಗಿ ತೆಗೆಯಿರಿ ಮತ್ತು ಚೆನ್ನಾಗಿ ಸ್ವಚ್ಛಗೊಳಿಸಿ. ಸಾಧ್ಯವಾದರೆ ಇಡೀ ಬಾಕ್ಸ್ ನ್ನು ಹೊರಗೆ ತೆಗೆದು ಹಳೆಯ ಟೂಥ್‌ಬ್ರಶ್‌ನಿಂದ ಸ್ವಚ್ಛಗೊಳಿಸಿ.

– ವಾಷಿಂಗ್‌ ಮೆಷಿನ್‌ನ ಒಳಗಿನ ಡ್ರಮ್ ಕೂಡ ಸ್ವಚ್ಛಗೊಳಿಸುತ್ತಿರಿ. ಅದರಿಂದ ಮೆಷಿನ್‌ ಸ್ವಚ್ಛವಾಗುತ್ತದೆ. ಅದರಲ್ಲಿ ಬಹಳಷ್ಟು ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಅವುಗಳಲ್ಲಿ ಕೀಟಾಣುಗಳು ಸೇರಿಕೊಳ್ಳುತ್ತವೆ. ಪ್ರತಿ ತಿಂಗಳೂ ಖಾಲಿ ಮೆಷಿನ್‌ನ್ನು ಚಲಾಯಿಸುವುದು ಉತ್ತಮ. ಅದಕ್ಕೆ ಡಿಶ್‌ವಾಶರ್‌ ಟ್ಯಾಬ್ಲೆಟ್‌ ಮತ್ತು ಬಿಸಿನೀರು ಉಪಯೋಗಿಸಿ.

– ವಾಷಿಂಗ್‌ ಮೆಷಿನ್‌ಗೆ ಅಗತ್ಯವಾಗಿ ಎಎಂಸಿ ಮಾಡಿಸಿ. ಇಲ್ಲದಿದ್ದರೆ ಮೆಷಿನ್‌ ರಿಪೇರಿ ಆದಾಗ ಸರ್ವೀಸಿಂಗ್‌ಗಾಗಿ ದುಬಾರಿ ಚಾರ್ಜ್‌ ತೆರುವುದು ತಪ್ಪುತ್ತದೆ. ಜೊತೆಗೆ ಎಎಂಸಿ ಇರುವುದರಿಂದ 3-4 ತಿಂಗಳಿಗೊಮ್ಮೆ ಅಗತ್ಯವಾಗಿ ಕಂಪನಿ ಕಡೆಯವರೇ ಬಂದು ಸರ್ವೀಸಿಂಗ್‌ ಮಾಡಿಕೊಟ್ಟು, ಮೇಂಟೆನೆನ್ಸ್ ಗೆ ಸಲಹೆ ಸೂಚಿಸುತ್ತಾರೆ. ಯಾವುದೇ ಬಿಡಿ ಭಾಗ ಹೋಗಿದ್ದರೂ ಬದಲಾಯಿಸುತ್ತಾರೆ. ವರ್ಷಕ್ಕೊಮ್ಮೆ ಇಂತಿಷ್ಟು ಎಂದು ನೀವು ಹಣ ಕಟ್ಟಬೇಕಷ್ಟೆ. ಮುಖ್ಯವಾಗಿ ಫುಲ್ಲಿ ಆಟೋಮ್ಯಾಟಿಕ್‌ ಇರುವ ಮೆಷಿನ್‌ಗೆ ಇದು ಕಡ್ಡಾಯ.

– ಎಂ. ಸರಳಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ