ಮಳೆಗಾಲ ಯಾವ ರೀತಿಯ ಫ್ಯಾಷನ್ ಹಾಗೂ ಮೇಕಪ್ ಮಾಡಿಕೊಂಡರೆ ನೀವು ಬ್ಯೂಟಿ ಕ್ಯೂನ್ ಎನಿಸುವಿರಿ ಎಂದು ವಿವರವಾಗಿ ಗಮನಿಸೋಣವೇ……..?

ಒಂದು ಕಾಲದಲ್ಲಿ ಕಾಡಿಗೆ, ಲಿಪ್‌ಸ್ಟಿಕ್‌, ಪೌಡರ್‌ ಲೇಪಿಸಿ ಇಂತಿಷ್ಟೇ ಮೇಕಪ್‌ ಎಂದು ಮುಗಿಸುತ್ತಿದ್ದರು. ಆದರೆ ಕಾಲಕ್ರಮೇಣ ಮೇಕಪ್‌ನಲ್ಲಿ ಈಗ ಭಾರಿ ಬದಲಾವಣೆ ಕಂಡುಬರುತ್ತದೆ. ಹಿಂದೆಲ್ಲ ಮೇಕಪ್‌ನಲ್ಲಿ ವೆರೈಟಿಯ ಕೊರತೆ ಇತ್ತು. ಅದರಿಂದಾಗಿ ಮೇಕಪ್‌ ಮಾಡಿಕೊಂಡವರೆಲ್ಲ ಎಲ್ಲಾ ಸಮಾರಂಭಗಳಲ್ಲೂ ಒಂದೇ ತರಹ ಕಾಣುತ್ತಿದ್ದರು. ಆದರೆ ಈಗ ಹಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಫ್ಯಾಷನ್‌ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ನಿರಂತರ ಬದಲಾವಣೆ. ಈಗ ಮಹಿಳೆಯರ ಉಡುಗೆತೊಡುಗೆಯಲ್ಲಿ ಎಷ್ಟು ವ್ಯತ್ಯಾಸಗಳಿವೆಯೋ, ಹಿಂದೆಲ್ಲ ಹಾಗಿರಲಿಲ್ಲ. ಸಾಂಪ್ರದಾಯಿಕ ಉಡುಗೆಗಳ ಜೊತೆಯಲ್ಲಿ ಈಗ ಪಾಶ್ಚಾತ್ಯ ಸಂಸ್ಕೃತಿಯ ಕಾರಣ ಅಥವಾ ಫ್ಯಾಷನ್‌ ಡ್ರೆಸ್‌ ಟ್ರೆಂಡ್‌ ಕಾರಣ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಫ್ಯಾಷನ್ನಿನ ಕಾರಣದಿಂದಲೇ ಇಂದು ಫ್ಯಾಷನ್‌ ಮೇಕಪ್‌ ಸಹ ಟ್ರೆಂಡ್‌ನಲ್ಲಿದೆ.

ಇದನ್ನೇ ಬ್ಯೂಟೀಷಿಯನ್‌ರ ವ್ಯಾಖ್ಯಾನದಲ್ಲಿ ಇಂಡೋ ವೆಸ್ಟರ್ನ್‌ ಮೇಕಪ್‌ ಎನ್ನುತ್ತಾರೆ. ಈ ಮೇಕಪ್‌ನ ವಿಶಿಷ್ಟ ವಿಧಾನಗಳನ್ನು ವಿವರವಾಗಿ ತಿಳಿದುಕೊಳ್ಳೋಣವೇ?

ಕನ್ಸೀಲರ್‌ ಏಕೆ ಅವಶ್ಯಕ?

ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ನಂತರ ಮುಖದ ಮೇಲೆ ಪ್ರೈಮರ್‌ ಹಚ್ಚಿ, ಎಷ್ಟೋ ಯುವತಿಯರು ಅದರ ಮೇಲೆಯೇ ಬೇಸ್‌ ಹಚ್ಚಿಬಿಡುತ್ತಾರೆ. ಆದರೆ ಪ್ರೈಮರ್‌ ನಂತರ ಮೇಕಪ್‌ನ ಮೂರನೇ ಮುಖ್ಯ ಸ್ಟೆಪ್‌ ಎಂದರೆ ಕನ್ಸೀಲಿಂಗ್‌. ನಾವು ಇಂಡೋವೆಸ್ಟರ್ನ್‌ ಮೇಕಪ್‌ ಬಗ್ಗೆ  ಮಾತನಾಡುವಾಗ, ಕನ್ಸೀಲರ್‌ ಹಚ್ಚುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಕನ್ಸೀಲರ್‌ 90%ನಷ್ಟು ಮುಖವನ್ನು ಕವರ್‌ ಮಾಡಿಬಿಡುತ್ತದೆ. ಇದರ ದೊಡ್ಡ ವಿಶೇಷ ಎಂದರೆ, ಮುಖದಲ್ಲಿನ ಕಲೆ, ಬೊಕ್ಕೆಗಳನ್ನು ಅಡಗಿಸುತ್ತದೆ. ಹಾಗೆಯೇ ಕಂಗಳ ಅಕ್ಕಪಕ್ಕದಲ್ಲಿನ ಕಪ್ಪು ವೃತ್ತಗಳನ್ನೂ ಮರೆಮಾಚುತ್ತದೆ. ಕನ್ಸೀಲರ್‌ ಹಚ್ಚಿದ ನಂತರ ಮುಖದ ಮೇಲೆ ಬಳಸಿದ ಬಣ್ಣ ಎದ್ದು ಕಾಣುತ್ತದೆ. ಮುಖ್ಯವಾಗಿ ಐ ಶೇಡ್ಸ್ ಬಣ್ಣ ಬಹಳ ಬ್ಯೂಟಿಫುಲ್ ಎನಿಸುತ್ತದೆ.

ಬೇಸ್‌ ಪರ್ಫೆಕ್ಟ್ ಆಗಿರಬೇಕು

ಕನ್ಸೀಲರ್‌ ನಂತರ 4ನೇ ಸ್ಟೆಪ್‌ ಅಂದರೆ ಮೇಕಪ್‌ ಬೇಸ್‌ ತಯಾರಿ. ಈ ಬೇಸ್‌ ಮೇಲೆಯೇ ಇಡೀ ಮೇಕಪ್‌ ನಿಂತಿದೆ, ಅದರ ಕಾಲಾವಧಿ ಕೂಡ. ಎಷ್ಟೋ ಸಲ ಯುವತಿಯರು ಕನ್ಸೀಲರ್‌ ಮೇಲೆಯೇ ನೇರವಾಗಿ ಕಾಂಪ್ಯಾಕ್ಟ್ ಪೌಡರ್‌ ಹಾಕಿಕೊಳ್ಳುತ್ತಾರೆ. ಆದರೆ ಇದರಿಂದ ಅವರ ಮೇಕಪ್‌ ಹೆಚ್ಚು ಕಾಲವೇನೂ ಉಳಿಯುವುದಿಲ್ಲ.

ಯಾವ ರೀತಿ ಒಂದು ವಸ್ತು ಅಂಟಿಕೊಳ್ಳಲು ಒಂದು ಆಧಾರ ಬೇಕಾಗುತ್ತದೋ, ಅದೇ ತರಹ ಮೇಕಪ್‌ ಹೆಚ್ಚು ಹೊತ್ತು ಬಾಳಿಕೆ ಬರಲು ಬೇಸ್‌ ಇರಬೇಕಾದುದು ಅವಶ್ಯಕ.

ಎಷ್ಟೋ ಸಲ ಗೌರವರ್ಣ ಹೊಂದುವ ಪ್ರಯತ್ನದಲ್ಲಿ ಯುವತಿಯರು ತಮ್ಮ ಸ್ಕಿನ್‌ ಟೋನ್‌ಗಿಂತ ಫೇರಾಗಿ ಕಾಣುವ ಬೇಸ್‌ ಬಳಸುತ್ತಾರೆ. ಆದರೆ ಅದು ನ್ಯಾಚುರಲ್ ಆಗಿರದೆ ಕೃತಕವೆನಿಸುತ್ತದೆ. ಇಂಡೋವೆಸ್ಟರ್ನ್‌ ಮೇಕಪ್‌ನ ಮೊದಲ ನಿಯಮವೆಂದರೆ, ಮೇಕಪ್‌ ಮಾಡಿಕೊಂಡಿರಬೇಕು, ಆದರದು ಕೃತಕವಾಗಿ ಕಾಣಬಾರದು! ಹೀಗಾಗಿ ಬೇಜ್‌ ಕಲರ್‌ನ ಬೇಸ್‌ ಆರಿಸಿ. ಇದು ಇಂಡಿಯನ್‌ ಸ್ಕಿನ್‌ ಟೋನ್‌ಗೆ ಅನುಸಾರವಾಗಿ ಇರುತ್ತದೆ. ಇಷ್ಟು ಮಾತ್ರಲ್ಲದೆ ಮತ್ತೊಂದು ಮುಖ್ಯ ವಿಷಯ ಎಂದರೆ, ಕನಿಷ್ಠ ಪ್ರಮಾಣದ ಬೇಸ್‌ನ್ನು ಮುಖಕ್ಕೆ ಬಳಸಿ, ಅದು ಕನ್ಸೀಲರ್‌ ಜೊತೆ ಚೆನ್ನಾಗಿ ಮರ್ಜ್‌ ಆಗುವಂತೆ ಮಾಡಿ.

ಈ ವಿಷಯನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ಮುಖದ 90% ಭಾಗವನ್ನು ಮೊದಲೇ ಕನ್ಸೀಲರ್‌ನಿಂದ ಕವರ್‌ ಮಾಡಿದ್ದರೆ, ಕೇವಲ 10% ಭಾಗವನ್ನು ಮಾತ್ರ ಬೇಸ್‌ನಿಂದ ಮಾಡಬೇಕು. ಜೊತೆಗೆ ಬೇಸ್‌ ಹಚ್ಚುವಾಗ, ಮುಖದ ಮೇಲೆ ಅಲ್ಲಲ್ಲಿ ಮೊಡವೆ, ಗುಳ್ಳೆಗಳಿಲ್ಲ ತಾನೇ ಎಂದು ಪರೀಕ್ಷಿಸಿ. ಅಕಸ್ಮಾತ್‌ ಇದ್ದರೆ, ಅದರ ಮೇಲೆ ಬೇಸ್‌ ಹಚ್ಚಬಾರದು.

ಸ್ಕಿನ್‌ಗೆ 3 ಬಣ್ಣಗಳು. ಕೆಂಪು, ನೀಲಿ, ಹಳದಿ. ಹೀಗಾಗಿ ಮೊಡವೆ ಗುಳ್ಳೆಗಳಿದ್ದರೆ ಅದಕ್ಕೆ ಹಸಿರು ಬಣ್ಣದ ಐ ಶ್ಯಾಡೋ ಹಚ್ಚಿರಿ. ಇದರಿಂದ ಕೆಂಪು ಬಣ್ಣದ ಗುಳ್ಳೆ ಮರೆಯಾಗುತ್ತದೆ.

ಐ ಮೇಕಪ್‌ ಫಂಡಾ

ಐ ಮೇಕಪ್‌ ಕುರಿತಾಗಿ ಯುವತಿಯರಲ್ಲಿ ಹೆಚ್ಚು ಗೊಂದಲಗಳಿವೆ. ಕೆಲವರು ಎಲ್ಲಾ ಉಡುಗೆಗಳಿಗೂ ಒಂದೇ ತರಹದ ಐ ಮೇಕಪ್‌ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಬಾರದು, ಉಡುಗೆಗೆ ತಕ್ಕಂತೆ ಐ ಮೇಕಪ್‌ ಮಾಡಿಕೊಂಡಾಗ ಮಾತ್ರ ಹೆಚ್ಚಿನ ಲುಕ್ಸ್ ಗಳಿಸಲು ಸಾಧ್ಯ.

ಅದರಲ್ಲೂ ಇಂಡೋ ವೆಸ್ಟರ್ನ್‌ ಮೇಕಪ್‌ ಮಾಡಿಕೊಳ್ಳುತ್ತಿರುವಾಗ, ಕಂಗಳ ಮೇಕಪ್‌ ಉತ್ಕೃಷ್ಟ ಆಗಿರಬೇಕು. ಇಂಥ ಮೇಕಪ್‌ನಲ್ಲಿ ಹೇಗಾದರೂ ಪ್ರಯತ್ನಪಟ್ಟು ಮ್ಯಾಟ್‌ ಲುಕ್‌ ನೀಡಲು ನೋಡಿ. ಕೇವಲ ಐ ಬಾಲ್ಸ್ ಗೆ ಮಾತ್ರ ಮೇಕಪ್‌ ಆಗಬೇಕು. ಇಂದಿನ ಯುವತಿಯರ ಡಿಮ್ಯಾಂಡ್‌ ಅಂದರೆ, ಮೇಕಪ್‌ ಮಾಡಿದ್ದರೂ, ಅದು ನೇರ ಮುಖಕ್ಕೆ ರಾಚುವಂತೆ ಕಾಣಬಾರದು ಎಂಬುದು, ಜೊತೆಗೆ ಫೋಟೋದಲ್ಲಿ ಚೆನ್ನಾಗಿ ಬರಬೇಕೆಂಬುದು. ಹೀಗಾಗಿ ಐ ಮೇಕಪ್‌ ಚೆನ್ನಾಗಿ ಮೂಡಿಬರಬೇಕು.

ಇದರಲ್ಲಿ ಮುಖ್ಯವಾಗಿ ಕಣ್ಣಿಗೆ ಕಾಡಿಗೆ ಹಚ್ಚಬಾರದು. ಆದರೆ ಐ ಲೈನರ್‌ ಖಂಡಿತಾ ಬೇಕು, ಅದರ ಆಕಾರ ಪರ್ಫೆಕ್ಟ್ ಆಗಿರಬೇಕು. ಇದರ ಜೊತೆ ಐ ಬ್ರೋಸ್‌ ಡಿಫೈನ್‌ ಮಾಡಿದ ನಂತರವೇ ಐ ಮೇಕಪ್‌ ಪೂರ್ತಿ ಆಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಐ ಬ್ರೋಸ್‌ ನ್ಯಾಚುರಲ್ ಆಗಿಯೇ ಕಾಣಿಸಬೇಕು. ಅದಕ್ಕೆ ಸದಾ ಬ್ಲ್ಯಾಕ್‌ ಬ್ರೌನ್‌ ಕಲರ್‌ ಮಿಕ್ಸ್ ಮಾಡಿ ಡಿಫೈನ್‌ ಮಾಡಬೇಕು. ಇದು ಕಂಗಳಿಗೆ ನ್ಯಾಚುರಲ್ ಲುಕ್‌ ನೀಡುತ್ತದೆ. ಐ ಲೈನರ್‌ನ್ನು ಸದಾ ಕಂಗಳ ಔಟ್‌ ಕಾರ್ನರ್‌ನಲ್ಲಿಯೇ ಹಚ್ಚಬೇಕು ಎಂಬುದನ್ನು ಗಮನಿಸಿ. ಏಕೆಂದರೆ ಈ ಸ್ಟೈಲ್ ನಲ್ಲಿ, ಔಟರ್‌ ಲೈನ್‌ ಥಿನ್‌ ಇನ್ನರ್‌ ಲೈನ್‌ ಥಿಕ್‌ ಆಗಿರುತ್ತದೆ.

ಲಿಪ್‌ ಮೇಕಪ್‌ ನಾಜೂಕಾಗಿರಲಿ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಿಪ್‌ ಮೇಕಪ್‌ನ ಸಾವಿರಾರು ಬಗೆಗಳು ಲಭ್ಯವಿವೆ. ಆದರೆ ಒಟ್ಟಾರೆ ಎಂಥ ಮೇಕಪ್‌ ಜೊತೆ ಯಾವ ಬಗೆಯ ಲಿಪ್‌ ಮೇಕಪ್‌ ಸೂಟ್‌ ಆಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅದರಲ್ಲೂ ಇಂಡೋವೆಸ್ಟರ್ನ್‌ ಮೇಕಪ್‌ನಲ್ಲಿ ಬಹು ಲೈಟ್‌ ಅಥವಾ ಬಹು ಡಾರ್ಕ್‌ ಶೇಡ್ಸ್ ಲಿಪ್‌ಸ್ಟಿಕ್‌ ಬಳಸುವಂತಿಲ್ಲ. ಆದರೆ ಅದು ಡ್ರೆಸ್‌ಗೆ ಕಾಂಪ್ಲಿಮೆಂಟ್‌ ಆಗುವಂತಿರಬೇಕು ಎಂಬುದೇ ಮುಖ್ಯ. ಲಿಪ್‌ಸ್ಟಿಕ್‌ನ್ನು ಸದಾ ಲಿಪ್‌ ಕಾರ್ನರ್‌ನಿಂದಲೇ ಹಚ್ಚಬೇಕು ಎಂಬುದನ್ನು ಗಮನಿಸಿ.

ಕಾಂಪ್ಯಾಕ್ಟ್ ಬಳಸುವ ವಿಧಾನ

ಬೇಸ್‌ ಮೇಲೆ ಕಾಂಪ್ಯಾಕ್ಟ್ ಪೌಡರ್‌ ಉದುರಿಸಿ ಮುಖಕ್ಕೆ ಬೆಟರ್‌ ಲುಕ್ಸ್ ನೀಡಿ. ಬೇಸ್‌ ನಂತರ ಕಾಂಪ್ಯಾಕ್ಟ್ ಹಚ್ಚುವುದು ಮೇಕಪ್‌ನ ಒಂದು ಮುಖ್ಯ ನಿಯಮವಾಗಿದೆ. ಆದರೆ ಬಹಳಷ್ಟು ಯುವತಿಯರು ಈ ನಿಯಮವನ್ನು ಸರಿಯಾಗಿ ಪಾಲಿಸುವುದಿಲ್ಲ. ಬೇಸ್‌ ಎಷ್ಟೇ ಚೆನ್ನಾಗಿರಲಿ, ಕಾಂಪ್ಯಾಕ್ಟ್ ನ್ನು ಸರಿಯಾಗಿ ಅಪ್ಲೈ ಮಾಡದಿದ್ದರೆ, ಪೂರ್ತಿ ಮೇಕಪ್‌ ಹಾಳಾಗುತ್ತದೆ. ಎಷ್ಟೋ ಯುವತಿಯರು ಕಾಂಪ್ಯಾಕ್ಟ್ ನ್ನು ಬ್ರಶ್ಶಿನಲ್ಲಿ ತೆಗೆದುಕೊಂಡು ಡೈರೆಕ್ಟಾಗಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಮುಖದಲ್ಲಿ ಒಂದು ಕಡೆ ಪೌಡರ್‌ ತುಸು ಕಡಿಮೆ ಅಥವಾ ಜಾಸ್ತಿ ಆಗುವ ಸಾಧ್ಯತೆಗಳಿವೆ. ಇದರ ಬದಲು ಕಾಂಪ್ಯಾಕ್ಟ್ ನ್ನು ಅಂಗೈ ಮೇಲೆ ಉದುರಿಸಿಕೊಂಡು, ಬ್ರಶ್ಶನ್ನು ಅದರಲ್ಲಿ ಹೊರಳಿಸಿ, ನಿಧಾನವಾಗಿ ಮುಖಕ್ಕೆ ಹಚ್ಚುವುದರಿಂದ, ಪೌಡರ್‌ ಬೇಸ್‌ ಜೊತೆ ಸಹಜವಾಗಿ ವಿಲೀನವಾಗುತ್ತದೆ.

ಕಂಟೂರಿಂಗ್‌ ರಹಿತ ಮೇಕಪ್‌

ಕಂಟೂರಿಂಗ್‌ ಅಂದರೆ ತಿದ್ದಿ ತೀಡುವುದು. ಹಿಂದೆಲ್ಲ ಫೋಟೋ ತೆಗೆದ ನಂತರ, ಕಂಪ್ಯೂಟರ್‌ನಲ್ಲಿ ಅದನ್ನು ತುಸು ಎಡಿಟ್‌ ಮಾಡಿ ಓರೆಕೋರೆಗಳನ್ನು ತಿದ್ದಿ ತೀಡುತ್ತಿದ್ದರು. ಅದೇ ಮೇಕಪ್‌ನಲ್ಲಿ ಕಂಟೂರಿಂಗ್‌ ಬಂದ ನಂತರ ಫೋಟೋ ಎಡಿಟಿಂಗ್‌ ಬೇಕಾಗುವುದೇ ಇಲ್ಲ. ಕಂಟೂರಿಂಗ್‌ ಸಹಿತ ಮೇಕಪ್‌ನಿಂದ ಪರ್ಫೆಕ್ಟ್ ಫೋಟೋಫಿನಿಶ್‌ ಲುಕ್ಸ್ ದೊರಕುತ್ತದೆ.

ಮೇಕಪ್‌ನಲ್ಲಿ ಕಂಟೂರಿಂಗ್‌ನ ಕೆಲಸವೆಂದರೆ, ಮುಖದಲ್ಲಿನ ಬೋನ್‌ಸ್ಟ್ರಕ್ಚರ್‌ನ್ನು ನೀಟಾಗಿ ಪ್ರಸ್ತುತಪಡಿಸುವುದಾಗಿದೆ. ಇಂಡಿಯನ್‌ ಟ್ರೆಡಿಷನ್‌ ಮೇಕಪ್‌ನಲ್ಲಿ ಈ ಕುರಿತಾಗಿ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಇಂಡೋವೆಸ್ಟರ್ನ್‌ ಮೇಕಪ್‌ ಚಾಲೂ ಆದಾಗಿನಿಂದ, ಕಂಟೂರಿಂಗ್‌ ರಹಿತ ಮೇಕಪ್‌ ಅಪೂರ್ಣ ಅನಿಸುತ್ತದೆ. ಹೀಗಾಗಿ ಕಂಟೂರಿಂಗ್‌ ಮಾಡುವಾಗ ಈ ಅಂಶಗಳತ್ತ ಗಮನಹರಿಸಿ :

– ಕಂಟೂರಿಂಗ್‌ ಮುಖಕ್ಕೆ  3D ಲುಕ್‌ ನೀಡುತ್ತದೆ. ಇದನ್ನು 2 ವಿಧಗಳಲ್ಲಿ ಮಾಡಬಹುದು. ಮೊದಲು ಚೀಕ್‌ಬೋನ್‌ ಕಂಟೂರಿಂಗ್‌ ಆಗುತ್ತದೆ, ಇನ್ನೊಂದು ಡೌನ್‌ ಚಿಕ್‌ ಕಂಟೂರಿಂಗ್‌. ಚೀಕ್‌ಬೋನ್‌ ಕಂಟೂರಿಂಗ್‌ನಿಂದ ಕೆನ್ನೆ ಮೇಲೆ ತುಂಬಿಕೊಂಡ ಫ್ಯಾಟ್‌ನ್ನು ಕಡಿಮೆ ಮಾಡಲು ಬಳಸುತ್ತಾರೆ ಹಾಗೂ ಡೌನ್‌ಚಿನ್‌ ಕಂಟೂರಿಂಗ್‌ ಡಬಲ್ ಚಿನ್‌ವುಳ್ಳ ಯುವತಿಯರಿಗೆ ಮಾಡಬಹುದಾಗಿದೆ.

– ಚೀಕ್‌ಬೋನ್‌ ಕಂಟೂರಿಂಗ್‌ನಲ್ಲಿ ಇಯರ್‌ ಟು ಚೀಕ್‌ ಲೈನ್‌ ಡ್ರಾ ಮಾಡಲಾಗುತ್ತದೆ. ಯಾವ ಯುವತಿಯ ಕೆನ್ನೆ ತುಂಬಿಕೊಂಡಿದೆಯೋ, ಅದರ ಮೇಲ್ಭಾಗದಲ್ಲಿ ಬ್ಲಾಂಡಿಂಗ್‌ ಆಗುತ್ತದೆ. ಯಾರ ಚಿನ್‌ ತುಂಬಿಕೊಂಡಿರುತ್ತದೋ, ಅವರಿಗೆ ಒಳಗಿನ ಭಾಗದ ಕಡೆಗೆ ಕಂಟೂರಿಂಗ್‌ ಮಾಡಲಾಗುತ್ತದೆ.

– ಕಂಟೂರಿಂಗ್‌ನ ಲೈನ್ಸ್ ಅಡಗಿಸಲು, ಕಟ್ಸ್ ನ್ನು ತಿದ್ದಿ ಸರಿಪಡಿಸಲು ಬೇಸ್‌ನ್ನು ಮತ್ತೊಮ್ಮೆ ಬಳಸಲಾಗುತ್ತದೆ.

– ಯಾರ ಮೂಗಿನ ಆಕಾರ ಸರಿ ಇಲ್ಲವೋ, ಅಂಥವರಿಗೆ ನೋಸ್‌ ಕಂಟೂರಿಂಗ್‌ ಮಾಡಲಾಗುತ್ತದೆ. ಇದರಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಕಂಟೂರಿಂಗ್‌ ಪರ್ಫೆಕ್ಟ್ ಆಗಿ ಮಾಡದಿದ್ದರೆ, ಮುಖದಲ್ಲಿ ಪ್ರೌಢ ಕಳೆ ಎದ್ದು ತೋರುತ್ತದೆ.

– ಸಿ. ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ