ಕಥೆ – ಆರ್. ಸುಲಕ್ಷಣಾ
ಶ್ಯಾಮರಾಯರು ತಮ್ಮ ದಿವಂಗತ ಪತ್ನಿಯ ಬ್ಲೌಸ್‌ಗಳಿಂದ ಕೂಡಿದ ಸೂಟ್‌ಕೇಸ್ ತೆರೆದು ನೋಡಿದಾಗ ಅದಕ್ಕೆ ಸಂಬಂಧಿಸಿದ ಸಂಗತಿಗಳು ಮತ್ತೆ ನೆನಪಾದವು. ಆದರೆ ಅವರು ಆ ಸೂಟ್‌ಕೇಸ್ ತೆಗೆದುಕೊಂಡು ಗುಡಿಸಲುಗಳ ಕಡೆಗೆ ಹೋಗುವಂತಾಗಲು ಅಂಥಾದ್ದೇನು ನಡೆಯಿತು ?
ಶ್ಯಾಮರಾಯರು ಪತ್ನಿಯ ಸಾವಿನ ನಂತರ ಮಗಳೊಂದಿಗೆ ಅಮೆರಿಕಾಗೆ ಹೋಗಿದ್ದರು. 65 ವರ್ಷದ ಪತ್ನಿ ವಿಮಲಾ ಕ್ಯಾನ್ಸರ್‌ನಿಂದಾಗಿ ಅವರನ್ನು ಅಗಲಿ ಹೋದಾಗ ರಾಯರ ಬದುಕಿನ ನೌಕೆ ಅಲ್ಲೋಲಕಲ್ಲೋಲವಾಗಿತ್ತು. ಈ ವಯಸ್ಸಿನಲ್ಲೇ ಪರಸ್ಪರರ ಅಗತ್ಯ ಹೆಚ್ಚಾಗಿರುತ್ತದೆ. ಇದೇ ಸಂದರ್ಭದಲ್ಲಿ ಅವರ ಪತ್ನಿ ಗಂಡನ ಕೈ ಬಿಡಿಸಿಕೊಂಡು ಬಾರದ ಲೋಕಕ್ಕೆ ಹೋಗಿದ್ದರು.
ತಂದೆಯ ಮಾನಸಿಕ ಸ್ಥಿತಿ ಕಂಡು ಅಮೆರಿಕಾದಲ್ಲಿದ್ದ ಇಬ್ಬರು ಗಂಡುಮಕ್ಕಳು ಅವರನ್ನು ಏಕಾಂಗಿಯಾಗಿ ಬಿಡುವುದು ಸರಿಯಲ್ಲ ಎಂದು ತಿಳಿದು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ದರು. ಅಮೆರಿಕಾದಲ್ಲಿ ಇಬ್ಬರು ಮಕ್ಕಳೂ ಬೇರೆ ಬೇರೆ ಊರುಗಳಲ್ಲಿದ್ದರು. ದೊಡ್ಡ ಮಗ ಸುಧೀರನ ಹೆಂಡತಿ ಭಾರತೀಯಳಾಗಿದ್ದಳು. ಅವರಿಗೊಬ್ಬ ಚಿಕ್ಕ ವಯಸ್ಸಿನ ಮಗನಿದ್ದ. ಕೆಲವು ದಿನಗಳು ಅವರ ಮನೆಯಲ್ಲಿ ಮಗುವಿನ ಆಟಪಾಠಗಳನ್ನು ನೋಡುವುದು ಅವರಿಗೆ ಪ್ರಿಯವಾಗಿತ್ತು. ಆದರೆ ಚಿಕ್ಕ ಮಗ ರಘುವಿನ ಮನೆಯಲ್ಲಿ 1 ವಾರಕ್ಕಿಂತ ಹೆಚ್ಚು ಕಾಲ ಇರಲಾಗಲಿಲ್ಲ. ಅವನ ಅಮೆರಿಕನ್ ಹೆಂಡತಿಯೊಂದಿಗೆ ಸರಿಯಾಗಿ ಮಾತನಾಡಲೂ ಆಗಲಿಲ್ಲ. ಇಡೀ ದಿನ ಮನೆಯಲ್ಲಿ ಒಂಟಿಯಾಗಿರಬೇಕಿತ್ತು. ಹೀಗಾಗಿ ಎರಡೇ ತಿಂಗಳಲ್ಲಿ ಅವರು ತಮ್ಮ ನಿರ್ಜನವಾದ ಮನೆಗೆ ವಾಪಸ್ ಬಂದಿದ್ದರು.
ಈಗ ಮನೆಯ ಒಂದೊಂದು ವಸ್ತು ಮಿಮಲಾರ ನೆನಪನ್ನು ತರುತ್ತಿತ್ತು. ಅವರು ಹೊರಗೆ ಕ್ಲಬ್‌ಗೆ ಹೋಗುತ್ತಿದ್ದರು. ಸ್ನೇಹಿತರೊಂದಿಗೆ ಹರಟುತ್ತಾ ಹಗಲು ಕಳೆದು ರಾತ್ರಿ ಮನೆಗೆ ಬಂದಾಗ ಮನೆಯೇ ಪರಕೀಯವೆನಿಸುತ್ತಿತ್ತು. ಈಗ ಒಬ್ಬರಿಗೆ ಅಷ್ಟು ದೊಡ್ಡ ಮನೆ ಅಗತ್ಯವಿರಲಿಲ್ಲ. ಹೀಗಾಗಿ 4 ಕೋಣೆಗಳ ಆ ಮನೆಯನ್ನು ಮಾರಿ 2 ಕೋಣೆಗಳ ಫ್ಲ್ಯಾಟ್‌ಗೆ ಹೋಗೋಣ ಎಂದುಕೊಂಡರು. ಇಷ್ಟು ದೊಡ್ಡ ಮನೆಯಲ್ಲಿ ನೆರೆಹೊರೆಯವರ ಶಬ್ದ ಕೇಳಿಸುವುದಿಲ್ಲ. ನಾಲ್ಕೂ ಕಡೆಯ ಗೋಡೆಗಳು ಒಂದು ಅಂತರವನ್ನು ಸೃಷ್ಟಿಸಿದ್ದವು. ಫ್ಲ್ಯಾಟ್ ಸಿಸ್ಟಂನಲ್ಲಿ ಎಲ್ಲ ಮನೆಗಳ ಗೋಡೆಗಳು ಮತ್ತು ಬಾಗಿಲುಗಳು ಹೇಗೆ ಸೇರಿಕೊಂಡಿರುತ್ತದೆ ಎಂದರೆ ಪಕ್ಕದ ಮನೆಯ ಗದ್ದಲವನ್ನು ಕೇಳಬಹುದು.
ಇಷ್ಟು ದೊಡ್ಡ ಮನೆಯಲ್ಲಿರುವುದು ಅಪಾಯವೆಂದು ಎಲ್ಲ ಮಿತ್ರರೂ ಸಲಹೆ ಕೊಟ್ಟರು. ದಿನ ಒಂದಿಲ್ಲೊಂದು ಮನೆಯಲ್ಲಿ ವೃದ್ಧ ಅಥವಾ ವೃದ್ಧೆಯನ್ನು ಕೊಂದು ಕಳ್ಳರು ಮನೆಯನ್ನು ದರೋಡೆ ಮಾಡಿದರೆನ್ನುವ ಸುದ್ದಿ ಬರುತ್ತಲೇ ಇರುತ್ತದೆ. ಆದ್ದರಿಂದ ಮನೆಯನ್ನು ಮಾರಿ ಚಿಕ್ಕ ಫ್ಲ್ಯಾಟ್ ಖರೀದಿಸಲು ಮನಸ್ಸು ಮಾಡಿ ಅವರು ನಿಧಾನವಾಗಿ ಮನೆಯಲ್ಲಿದ್ದ ಅನಗತ್ಯ ವಸ್ತುಗಳನ್ನು ಮಾರತೊಡಗಿದರು. ಹಳೆಯ ದೊಡ್ಡ ದೊಡ್ಡ ಫರ್ನೀಚರ್‌ಗಳನ್ನು ಕಡಿಮೆ ಬೆಲೆಗೆ ಮಾರಿದರು. ಹಳೆಯ ತಾಮ್ರ ಹಾಗೂ ಹಿತ್ತಾಳೆಯ ದೊಡ್ಡ ಪಾತ್ರೆಗಳನ್ನು ಅನಾಥಾಶ್ರಮಕ್ಕೆ ಕೊಟ್ಟುಬಿಟ್ಟರು. ಧೋಬಿ, ಆಳು, ಕೆಲಸದವಳು ಮತ್ತು ಡ್ರೈವರ್‌ಗೆ ಏನೇನು ಬೇಕಿತ್ತೋ ಕೊಟ್ಟುಬಿಟ್ಟರು. ಕೊನೆಯಲ್ಲಿ ಹೆಂಡತಿಯ ಬೀರು ಉಳಿಯಿತು. ಅವರು ಬೀರು ತೆರೆದಾಗ ಅದರಲ್ಲಿದ್ದ ಬಟ್ಟೆಗಳ ರಾಶಿ ನೋಡಿ ಗಾಬರಿಯಾದರು. ವಿಮಲಾಳ ಬಳಿ ಅಷ್ಟೊಂದು ಸೀರೆಗಳು, ಬ್ಲೌಸ್‌ಗಳು ಇದ್ದರೂ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದರು.
ಮೊದಲ ದಿನ ಅವರು ಬೀರುವನ್ನು ಮುಚ್ಚಿಬಿಟ್ಟರು. ಈ ಬಟ್ಟೆಗಳನ್ನು ಏನು ಮಾಡುವುದೆಂದು ಅವರಿಗೆ ತಿಳಿಯಲಿಲ್ಲ. ಇದರ ಮಧ್ಯೆ ಯಾವುದೋ ಕೆಲಸಕ್ಕಾಗಿ ಅವರು ಮೈಸೂರಿಗೆ ಹೋಗಬೇಕಾಯಿತು. ಅವರು ಕಾರಿನಲ್ಲಿ ಹೊರಟಿದ್ದರು. ವಾಪಸ್ ಬರುವಾಗ ಒಂದು ಕಡೆ ಅವರ ಕಾರು ಪಂಕ್ಚರ್ ಆಯಿತು. ಅಲ್ಲಿ ಕೆಲವು ಗಂಟೆಗಳ ಕಾಲ ನಿಲ್ಲಬೇಕಾಯಿತು. ಏನಾದರೂ ಸಹಾಯ ಸಿಗುವವರೆಗೂ, ಕಾರು ರಿಪೇರಿ ಆಗುವವರೆಗೆ ಕಾಯೋಣ ಎಂದು ಅಲ್ಲಿಯೇ ಸುತ್ತಾಡತೊಡಗಿದರು. ಪಕ್ಕದಲ್ಲೇ ರೈಲ್ವೆ ಲೈನ್‌ನಲ್ಲಿ ಕೆಲಸ ನಡೆಯುತ್ತಿತ್ತು. ಹತ್ತಿರದಲ್ಲಿ ಕೆಲಸದವರ ಗುಡಿಸಲುಗಳಿದ್ದವು.
ಈ ಬಡ ಕೆಲಸಗಾರರ ಜೀವನ ಎಷ್ಟು ಕಷ್ಟವೆಂದು ಶ್ಯಾಮರಾಯರು ನೋಡಿದರು. ಎಲ್ಲ ಕಡೆಯೂ ಅಭಾವವಿತ್ತು. ಕೆಲವು ಮಹಿಳೆಯರ ಹರಿದ ಬಟ್ಟೆಗಳಿಂದ ಅವರ ಮೈ ಕಾಣುತ್ತಿತ್ತು. ಒಬ್ಬ ಯುವತಿಯ ಹರಿದ ಬ್ಲೌಸ್ ನೋಡಿದಾಗ ಅವರಿಗೆ ಥಟ್ಟನೆ ತಮ್ಮ ಪತ್ನಿಯ ಬಟ್ಟೆಗಳ ನೆನಪಾಯಿತು. ಒಂದು ಕಡೆ ಅಗತ್ಯಕ್ಕಿಂತ ಹೆಚ್ಚು ಸಿಗುತ್ತದೆ. ಇನ್ನೊಂದು ಕಡೆ ಅಗತ್ಯಕ್ಕೆ ಸಾಲುವಷ್ಟು ಸಿಗುವುದಿಲ್ಲ ಎಂದು ಮರುಗಿದರು. ಅಷ್ಟರಲ್ಲಿ ಅವರ ಕಾರು ರಿಪೇರಿಯಾಗಿ ಅವರು ಮನೆಗೆ ಹಿಂತಿರುಗಿದರು.
ಮರುದಿನ ಫ್ರೆಶ್ ಆಗಿ ಶ್ಯಾಮರಾಯರು ಹೆಂಡತಿಯ ಬೀರು ತೆರೆದಾಗ ಒಪ್ಪವಾಗಿ ಜೋಡಿಸಿದ್ದ ಬ್ಲೌಸ್‌ಗಳ ಬಂಡಲ್ ಗಳು ಕಾಣಿಸಿತು. ಕೈಗೆ ಸಿಕ್ಕ ಮೊದಲ ಬಂಡಲ್ ನ್ನು ಕಂಡು ಅವರಿಗೆ ನಗು ಬಂತು. ಆ ಬ್ಲೌಸ್‌ಗಳು 30 ವರ್ಷಗಳಷ್ಟು ಹಳೆಯವು. ಕಸೂತಿ ಮಾಡಿದ ಅರಗಿನ ಬಣ್ಣದ ಆ ಬ್ಲೌಸ್‌ನ್ನು ಹೇಗೆ ಮರೆಯಲು ಸಾಧ್ಯ? ಮದುವೆಯ ನಂತರ ಅವರು ಹನೀಮೂನ್‌ಗೆ ಹೋದಾಗ ಒಂದು ದಿನ ವಿಮಲಾ ಆ ಬ್ಲೌಸ್‌ನ್ನೇ ಧರಿಸಿದ್ದರು. ಆ ಬ್ಲೌಸ್‌ಗೆ ಹುಕ್ಸ್ ಹಿಂದಿದ್ದವು. ವಿಮಲಾಗೆ ಸೀರೆ ಉಡುವ ಅಭ್ಯಾಸ ಅಷ್ಟಿರಲಿಲ್ಲ. ಕಾಲೇಜಿನಲ್ಲಿ ಅವರು ಚೂಡೀದಾರ್, ಸಲ್ವಾರ್ ಕಮೀಜ್‌ನ್ನು ತೊಡುತ್ತಿದ್ದರು. ಈಗ ಸೀರೆ ಉಡಲು ಅವರಿಗೆ ಬಹಳ ಸಮಯ ಹಿಡಿಯುತ್ತಿತ್ತು. ಅಂದು ಅವರು ಹೊರಗೆ ತಿರುಗಾಡಲು ಹೋಗುವಾಗ ಬೇಗ ಬಾ ಎಂದು ವಿಮಲಾಗೆ ಹೇಳಿ ಹೋಟೆಲ್ ನ ಲಾನ್‌ನಲ್ಲಿ ಬಂದು ಕೂತರು. ಸ್ವಲ್ಪ ಹೊತ್ತು ಪ್ರಕೃತಿಯ ದೃಶ್ಯಗಳನ್ನು ನೋಡುತ್ತಿದ್ದರು. ಅರ್ಧ ಗಂಟೆಯಾದರೂ ವಿಮಲಾ ಹೊರಬರಲಿಲ್ಲ. ಅವರು ಮತ್ತೆ ಕೋಣೆಗೆ ಹೋಗಿ ನೋಡಿದಾಗ ಅವರಿಗೆ ನಗು ಬಂತು. ವಿಮಲಾ ಕೋಣೆಯ ಬಾಗಿಲು ತೆರೆದು ಬಾಗಿಲ ಮರೆಯಲ್ಲಿ ಬೆಡ್‌ಶೀಟ್ ಹೊದ್ದು, ಅವಿತುಕೊಂಡಿದ್ದರು. “ಇನ್ನೂ ರೆಡಿಯಾಗಿಲ್ವಾ?” ಎಂದು ರಾಯರು ಕೇಳಿದರು.
“ಇಲ್ಲ. ನಾನು ನಿಮ್ಮನ್ನು ಕಾಯ್ತಿದ್ದೆ. ನಿಮ್ಮನ್ನು ಹೇಗೆ ಕರೆಯೋದೂಂತ ಗೊತ್ತಾಗ್ಲಿಲ್ಲ.”
“ಯಾಕೆ….. ಏನಾಯ್ತು?”
“ಬ್ಲೌಸ್ ಹುಕ್ ಹಾಕೋಕೆ ಆಗ್ತಿಲ್ಲ.”
“ಯಾಕೆ?”
“ಹುಕ್ಸ್ ಹಿಂದಿವೆ. ನನಗೆ ಹಾಕಲು ಆಗ್ತಿಲ್ಲ.”
“ಹಾಗಾದ್ರೆ ಬೇರೆ ಹಾಕ್ಕೋ.”
“ಮೊದಲು ಇದನ್ನು ತೆಗೀರಿ… ನಾನು ಇದರಲ್ಲಿ ಸಿಕ್ಕಿಕೊಂಡಿದ್ದೀನಿ.”
ವಿಮಲಾರ ಸ್ಥಿತಿ ನೋಡಿ ಅವರಿಗೆ ನಗು ಬಂತು. ನಂತರ ಅವರು ಬ್ಲೌಸ್‌ನ ಹಿಂದಿನ ಹುಕ್ ಹಾಕಿದರು. ನಂತರ ವಿಮಲಾ ಸೀರೆ ಉಟ್ಟರು. ಶ್ಯಾಮರಾಯರಿಗೆ ಬ್ಲೌಸ್‌ಗೆ ಹುಕ್ ಹಾಕಿದ್ದು ಮೊದಲ ಅನುಭವ. ಅವರು ಎಷ್ಟು ರೋಮಾಂಚಿತರಾದರೆಂದರೆ ವಿಮಲಾರ ಬ್ಲೌಸ್‌ನ ಹುಕ್‌ನ್ನು ಮತ್ತೆ ಬಿಚ್ಚಿದರು.
“ಎಷ್ಟು ಕಷ್ಟಪಟ್ಟು ಸೀರೆ ಉಟ್ಟಿದ್ದೆ. ನೀವು ಹಾಳು ಮಾಡಿಬಿಟ್ರಿ,” ಎಂದು ವಿಮಲಾ ರೇಗಿದರು. ನಂತರ ಆಕೆ ಈ ಬ್ಲೌಸ್ ಧರಿಸಿದಾಗಲೆಲ್ಲಾ ಇಬ್ಬರೂ ಚೆನ್ನಾಗಿ ನಗುತ್ತಿದ್ದರು.
ಆದರೆ ಇಂದು ನಗುವವರು ಬಹಳ ದೂರ ಹೊರಟುಹೋಗಿದ್ದರು. ಹನಿಮೂನ್ ಸಂದರ್ಭದಲ್ಲಿ ಧರಿಸಿದ್ದ ಎಲ್ಲ ಬ್ಲೌಸ್‌ಗಳು ಅವರಿಗೆ ನೆನಪಾದವು. ಬಿಳಿಯ ಮುತ್ತುಗಳಿಂದ ಅಲಂಕೃತವಾದ ಕರಿಯ ಬ್ಲೌಸ್ ಅಂತೂ ವಿಮಲಾರ ಬಿಳಿಯ ಬಣ್ಣಕ್ಕೆ ಆಕರ್ಷಣೆಯಾಗಿತ್ತು. ವಿಮಲಾ ಆ ಬ್ಲೌಸ್ ಧರಿಸಿದ್ದಾಗ ಶ್ಯಾಮರಾಯರ ಕೈಬೆರಳುಗಳು ವಿಮಲಾರ ಬಿಳಿಯ ಬೆನ್ನಿನ ಮೇಲೆ ಆಟವಾಡುತ್ತಿದ್ದವು.
ಆಗ ಅವರು ಕೋಪದಿಂದ, “ಸಾಕು. ಹಾಗೆ ಸವರಿದ್ರೆ ನನಗೆ ಕಚಗುಳಿ ಇಟ್ಟಂತಾಗುತ್ತೆ,” ಎನ್ನುತ್ತಿದ್ದರು.
“ಅರೆ, ನನ್ನ ಹೆಂಡತಿ ಬೆನ್ನನ್ನು ನಾನು ಸವರ್ತಿದ್ದೀನಿ!”
“ಕಚಗುಳಿಯಾಗುತ್ತೇಂತ ಹೇಳಿದ್ನಲ್ರೀ….”
“ನಿನಗೆ ಬರೀ ಬೆನ್ನಲ್ಲಿ ಕಚಗುಳಿ ಆದ್ರೆ. ನನಗೆ ಇಡೀ ಮೈಯಲ್ಲಿ ಕಚಗುಳಿ ಇಟ್ಟಂಗಾಗುತ್ತೆ.”
“ಸಾಕು ನಿಮ್ಮ ತರಲೆ.”
ವಿಮಲಾರ ಕೋಪ ಕಂಡು ಶ್ಯಾಮರಾಯರು ಅವರನ್ನು ಬಾಹುಗಳಲ್ಲಿ ಬಿಗಿದಪ್ಪಿಕೊಂಡಿದ್ದರು.
ನೀಲಿ ಬ್ಲೌಸ್‌ನಲ್ಲಿ ವಿಮಲಾ ಬಹಳ ಸುಂದರವಾಗಿ ಕಾಣುತ್ತಿದ್ದರು. ನೀಲಿ ಸೀರೆಯೊಂದಿಗೆ ಅವರು ನೀಲಿ ಸರ ಮತ್ತು ನೀಲಿ ಬಳೆಗಳನ್ನೂ ಹಾಕಿಕೊಳ್ಳುತ್ತಿದ್ದರು. ಅವರ ಬಳೆಗಳ ಕಿಣಿಕಿಣಿ ಸದ್ದು ಶ್ಯಾಮರಾಯರನ್ನು ಪುಳಕಿತಗೊಳಿಸುತ್ತಿತ್ತು. ವಿಮಲಾ ಕೈ ಆಡಿಸಿದಾಗ ದಾರಿಯಲ್ಲಿ ಹೋಗುತ್ತಿದ್ದರು ಎಲ್ಲಿಂದ ಈ ಸದ್ದು ಬಂದಿತೆಂದು ತಿರುಗಿ ನೋಡುತ್ತಿದ್ದರು.
ಪತ್ನಿಯನ್ನು ರೇಗಿಸಲು, “ದಾರೀಲಿ ಹೋಗೋರನ್ನು ಆಕರ್ಷಿಸೋಕೆ ಈ ಬಳೆಗಳನ್ನು ಧರಿಸ್ತೀಯಾ? ಯಾರು ನೋಡಿದ್ರೂ ತಿರುಗಿ ನೋಡ್ತಾರೆ. ನನಗೆ ಸಹಿಸೋಕಾಗಲ್ಲ,” ಎನ್ನುತ್ತಿದ್ದರು ಶ್ಯಾಮರಾಯರು.
ಆಗ ವಿಮಲಾ ಜೋರಾಗಿ ನಕ್ಕು ಎಲ್ಲಾ ಬಳೆಗಳನ್ನೂ ಬಿಚ್ಚಿ ಶ್ಯಾಮರಾಯರಿಗೆ ಕೊಟ್ಟು, “ತಗೊಳ್ಳಿ, ಇನ್ನು ನೀವೇ ಸಂಭಾಳಿಸಿ,” ಎಂದರು.
ಒಂದು ಮರದ ನೆರಳಿನಲ್ಲಿ ಕುಳಿತ ಶ್ಯಾಮರಾಯರು ವಿಮಲಾರ ಬಿಳಿ ಕೈಗಳಿಗೆ ಮತ್ತೆ ಬಳೆಗಳನ್ನು ತೊಡಿಸಿದರು.
ಹೀಗೆ ಪ್ರೀತಿಯ ನೆನಪುಗಳ ಜಾಲದಲ್ಲಿ ಸಿಲುಕಿದ ಶ್ಯಾಮರಾಯರು ಒಂದೊಂದು ಬ್ಲೌಸನ್ನೂ ವಿಮಲಾ ತೊಟ್ಟಿದ್ದಾಳೆ ಎಂದು ಕಲ್ಪಿಸಿಕೊಂಡು ಸವರತೊಡಗಿದರು.
ಶ್ಯಾಮರಾಯರು ಬಹಳ ಕಷ್ಟದಿಂದ ನೆನಪುಗಳ ಜಾಲದಿಂದ ಹೊರಬಂದರು. ನಂತರ ಅವರು ಇನ್ನೊಂದು ಬಂಡಲ್ ಎತ್ತಿಕೊಂಡರು. ಅದರಲ್ಲಿನ ಹೆಚ್ಚು ಬ್ಲೌಸ್‌ಗಳು ಪ್ರಿಂಟೆಡ್ ಆಗಿದ್ದವು. ಒಂದು ಕಾಲದಲ್ಲಿ ಎಲ್ಲ ಹೆಂಗಸರೂ ಅಂತಹ ಪ್ರಿಂಟೆಡ್ ಬ್ಲೌಸ್‌ಗಳನ್ನು ತೊಡುತ್ತಿದ್ದರು. ಪ್ಲೇನ್ ಸೀರೆ ಮತ್ತು ಪ್ರಿಂಟೆಡ್ ಬ್ಲೌಸ್‌ನ ಫ್ಯಾಷನ್ ಅನೇಕ ವರ್ಷಗಳಿಂದ ನಡೆದಿತ್ತು. ಆ ಬಂಡಲ್ ನಲ್ಲಿದ್ದ ಕಪ್ಪು ಬಣ್ಣದ ಬ್ಲೌಸ್ ಮೇಲೆ ದೃಷ್ಟಿ ಹೋದಾಗ ಅದನ್ನು ಕೊಳ್ಳುವಾಗ ಅವರಿಬ್ಬರ ನಡುವೆ ಜಗಳವಾಗಿದ್ದು ನೆನಪಿಗೆ ಬಂತು. ವಿಮಲಾ ಒಂದು ಮದುವೆಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. “ರೀ ಸಂಜೆ ಬೇಗ ಬನ್ನಿ. ನಾನು ಮಾರ್ಕೆಟ್‌ಗೆ ಹೋಗಬೇಕು. ಶೀಲಾಳ ಮದುವೆಗೆ ಕಪ್ಪು ಸೀರೆ ಉಟ್ಕೋಬೇಕು. ಅದಕ್ಕೆ ಪ್ರಿಂಟೆಡ್ ಬ್ಲೌಸ್ ತಗೋಬೇಕು.”
“ನೀನೇ ಹೋಗಿ ತಗೊಂಡು ಬಾ.”
“ಇಲ್ಲ. ನೀವು ಬನ್ನಿ. ಅವುಗಳ ಜೊತೆ ಮ್ಯಾಚಿಂಗ್ ಜ್ಯೂವೆಲರಿ ಕೂಡ ತಗೋಬೇಕು.”
“ಸರಿ ಟ್ರೈ ಮಾಡ್ತೀನಿ.”
“ಟ್ರೈ ಮಾಡೋದಲ್ಲಾ. ಬರ್ಲೇಬೇಕು.”
“ಓ.ಕೆ. ಮೇಡಂ. ನಿಮ್ಮ ಆರ್ಡರ್‌ಗೆ ಬದ್ಧ.”
ಆದರೆ ಸಂಜೆಯಾಗುತ್ತಿದ್ದಂತೆ ಶ್ಯಾಮರಾಯರು ಈ ವಿಷಯವನ್ನೇ ಮರೆತುಬಿಟ್ಟರು. ರಾತ್ರಿ ಅವರು ಮನೆಗೆ ಬಂದಾಗ ಚಂಡಿರೂಪದ ವಿಮಲಾ ಎದುರಾದರು. ಆಗ ತಾವು ಹೇಳಿದ್ದ ಮಾತು ನೆನಪಾಯಿತು. ತಮ್ಮ ತಪ್ಪನ್ನು ತಿದ್ದಿಕೊಳ್ಳಲು, “ಇನ್ನೂ ಅರ್ಧ ಗಂಟೆ ಇದೆ ಮಾರ್ಕೆಟ್ ಮುಚ್ಚೋಕೆ. ಬೇಗ ಹೊರಡು,” ಎಂದರು.
“ಇಲ್ಲ. ನಾನು ಎಲ್ಲಿಗೂ ಬರಲ್ಲ. ಅರ್ಧ ಗಂಟೇಲಿ ಏನಾದ್ರೂ ಕೊಳ್ಳೋಕಾಗುತ್ತಾ?”
“ನೀನು ಮೊದಲು ಹೊರಡು. ನಿನಗೋಸ್ಕರ ಬೇಕಾದ್ರೆ ಮತ್ತೆ ಅಂಗಡಿಗಳನ್ನು ತೆಗಿಸ್ತೀನಿ,” ಎಂದರು.
“ಸುಮ್ಮನೆ ಮಾತಾಡಬೇಡ್ರಿ. ಈಗೀಗ ನೀವು ನನ್ನನ್ನು ಪ್ರೀತಿಸೋದಿಲ್ಲ. ಇಡೀ ದಿನ ಕೆಲಸ. ಆಮೇಲೆ ಫ್ರೆಂಡ್ಸ್. ನಿಮಗೆ ಅವರೇ ಸರ್ವಸ್ವ.”
“ಇದೇ ವಿಷಯ ನಾನೂ ನಿನಗೆ ಹೇಳಿದ್ರೆ ಹೇಗಿರುತ್ತೆ? ಈಗ ನಿನಗೆ ನಿನ್ನ ಮಕ್ಕಳೇ ಹೆಚ್ಚು. ನನ್ನನ್ನು ಗಮನಿಸೋದೇ ಇಲ್ಲ.”
“ರೀ ಹೀಗೆ ಹೇಳೋಕೆ ನಿಮಗೆ ನಾಚಿಕೆ ಆಗಲ್ವಾ? ನನಗೆ ಮಾತ್ರ ಮಕ್ಕಳಾ ಅವರು?” ವಿಮಲಾರ ಕಣ್ಣುಗಳಲ್ಲಿ ನೀರು ಕಂಡು ಅವರು ಸುಮ್ಮನಾಗಿ ಹೇಳಿದರು,
“ಈಗ ಬೇಗ ಹೊರಡು. ಆಮೇಲೆ ಜಗಳ ಆಡೋಣ,” ಶ್ಯಾಮರಾಯರು ವಿಮಲಾರನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿಕೊಂಡು ಮಾರ್ಕೆಟ್‌ಗೆ ಹೊರಟರು.
ಮೊದಲ ಅಂಗಡಿಯಲ್ಲೇ ಆ ಕಪ್ಪು ಬಣ್ಣದ ಪ್ರಿಂಟೆಡ್ ಬ್ಲೌಸ್ ಬಟ್ಟೆ ಸಿಕ್ಕಿತು. ನಂತರ ಜ್ಯೂವೆಲರಿ ಶಾಪ್‌ನಲ್ಲಿ ಬಿಳಿ ಹಾಗೂ ಕಪ್ಪು ಬಣ್ಣದ ಮುತ್ತುಗಳುಳ್ಳ ಮ್ಯಾಚಿಂಗ್ ಜ್ಯೂವೆಲರಿಯೂ ಸಿಕ್ಕಿತು. ನಂತರ ಇಬ್ಬರೂ ಅಲ್ಲಿಯೇ ಹೋಟೆಲ್ ನಲ್ಲಿ ಊಟ ಮಾಡಿದರು.
ಅದೇ ಬಂಡಲ್ ನಲ್ಲಿ ಅವರಿಗೆ ಹಳದಿ ಬಣ್ಣದ ಚುಕ್ಕೆಗಳುಳ್ಳ ಸ್ಲೀವ್ ಲೆಸ್ ಬ್ಲೌಸ್ ಕಾಣಿಸಿತು. ಮೊದಲ ಬಾರಿಗೆ ವಿಮಲಾ ಅದನ್ನು ಧರಿಸಿದಾಗ ರಾಯರು ಆಶ್ಚರ್ಯದಿಂದ ಹೆಂಡತಿಯನ್ನು ನೋಡತೊಡಗಿದರು. ಒಂದು ಕಡೆ ವಿಮಲಾರ ಬಿಳಿಯ ಗುಂಡನೆಯ ತೋಳುಗಳನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಇನ್ನೊಂದು ಕಡೆ ಅವರಲ್ಲಿ ಅಸೂಯೆಯ ಭಾವನೆಯೂ ಉಂಟಾಯಿತು. ಅವರು ವಿಮಲಾರ ಬಗ್ಗೆ ಬಹಳ ಪೊಸೆಸಿವ್ ಆಗಿಬಿಟ್ಟಿದ್ದರು. ಅವರು ವಿಮಲಾರಿಗೆ, “ಈ ಬ್ಲೌಸ್ ಧರಿಸಿ ಹೊರಗೆ ಹೋಗಬೇಡ. ಜನರ ಕಣ್ಣು ಬೀಳುತ್ತೆ,” ಎಂದರು.
“ಏನೇನೋ ಮಾತಾಡಬೇಡಿ. ನನ್ನ ಫ್ರೆಂಡ್ಸ್ ಎಲ್ಲಾ ಹಾಕ್ಕೋತಾರೆ. ಅವರು ಯಾರಿಗೂ ದೃಷ್ಟಿ ಆಗಿಲ್ಲ. ಸ್ವಲ್ಪ ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ಸಂಕುಚಿತ ಭಾವನೆ ಬೇಡ.”
“ನಾನು ಹೇಳೋದು ಹೇಳಿದ್ದೀನಿ. ಆಮೇಲೆ ನಿನ್ನಿಷ್ಟ,” ಎಂದು ರಾಯರು ಸುಮ್ಮನಾದರು.
ವಿಮಲಾ ಹಾಗೆ ಹೇಳಿದರೂ ಮತ್ತೆಂದೂ ತೋಳಿಲ್ಲದ ಬ್ಲೌಸ್ ತೊಡಲಿಲ್ಲ. ಅದೇ ಬಂಡಲ್ ನಲ್ಲಿ ಸ್ಲೀವ್ ಲೆಸ್ ಬ್ಲೌಸ್‌ಗಳು 20 ಇದ್ದವು. ಬಹುಶಃ ವಿಮಲಾ ಒಟ್ಟಿಗೇ ಅಷ್ಟೂ ಬ್ಲೌಸ್‌ಗಳನ್ನು ಹೊಲಿಸಿರಬೇಕು. ಈಗ ಅವನ್ನು ನೋಡಿದಾಗ ಅವನ್ನೆಂದೂ ಧರಿಸಿಲ್ಲ ಎಂದು ತಿಳಿಯುತ್ತಿತ್ತು.
ಈಗ ಅವರು ಮುಂದಿನ ಬಂಡಲ್ ಎತ್ತಿಕೊಂಡರು. ಅದರಲ್ಲಿ ವಿಧವಿಧವಾದ ಬ್ಲೌಸ್‌ಗಳಿದ್ದವು. ಕೆಲವು ರೆಡಿಮೇಡ್ ಬ್ಲೌಸ್‌ಗಳಿದ್ದವು. ಕೆಲವು ಡಿಸೈನರ್ ಬ್ಲೌಸ್‌ಗಳು, ಕೆಲವು ಉಲ್ಲನ್‌ನ ಮತ್ತು ಕೆಲವು ಮಕ್‌ಮಲ್ ನವು ಇದ್ದವು.
ಕಪ್ಪು ಮಕಮಲ್ ಬ್ಲೌಸ್‌ನ್ನು ರಾಯರು ಸವರಿದಾಗ ಬಹಳ ಭಾವುಕರಾದರು. ವಿಮಲಾ ಆ ಕಪ್ಪು ಬ್ಲೌಸ್ ಧರಿಸಿದಾಗ ರಾಯರ ದೃಷ್ಟಿ ಅವರ ಬಿಳಿಯ ಬೆನ್ನು ಮತ್ತು ತೋಳುಗಳ ಮೇಲೆ ಹೋಗುತ್ತಿತ್ತು.
40 ವರ್ಷ ದಾಟಿದ್ದ ವಿಮಲಾ ಗಂಡನ ದೃಷ್ಟಿಯಿಂದ ವಿಚಲಿತರಾಗಿ, “ಏನು ಹಾಗೆ ನೋಡ್ತಿದ್ದೀರಿ? ಇದಕ್ಕೆ ಮುಂಚೆ ಎಂದೂ ನೋಡೇ ಇಲ್ವಾ?” ಎಂದರು.
“ಎಷ್ಟೋ ಸಾರಿ ನೋಡಿದ್ದೀನಿ. ಆದರೆ ಮಕಮಲ್ ಬ್ಲೌಸ್‌ನಲ್ಲಿ ನಿನ್ನ ಬಿಳಿ ಬಣ್ಣ ಎದ್ದು ಕಾಣುತ್ತಿದೆ. ಹೀಗೆ ನೋಡ್ತಾನೇ ಇರೋಣ ಅನ್ನಿಸ್ತಿದೆ.”
“ಬೇಡ ಅಂದೋರು ಯಾರು?” ಅವರು ಒಯ್ಯಾರದಿಂದ ಹೇಳಿದರು.
ಕೆಲವು ಸೀರೆಗಳು ಬ್ಲೌಸ್ ಸಹಿತವಾಗಿ ಹ್ಯಾಂಗರ್‌ಗಳಲ್ಲಿ ತೂಗುತ್ತಿದ್ದವು. ಒಂದು ಪೇಂಟಿಂಗ್ ಸೀರೆಯನ್ನು ಶ್ಯಾಮರಾಯರು ಹ್ಯಾಂಗರ್ ಜೊತೆಗೆ ಎತ್ತಿಕೊಂಡರು. ತೆಳು ಹಳದಿಯ ಸೀರೆಯ ಮೇಲೆ ಗಾಢ ಹಳದಿ ಬಣ್ಣದ ಗುಲಾಬಿ ಹೂಗಳಿದ್ದವು. ಈ ಸೀರೆಯನ್ನು ಉಟ್ಟಾಗ 50 ವರ್ಷದಲ್ಲೂ ವಿಮಲಾ ಚಿಕ್ಕ ವಯಸ್ಸಿನವರಂತೆ ಕಾಣುತ್ತಿದ್ದರು. ಆ ವಯಸ್ಸಿನಲ್ಲೂ ಒಳ್ಳೆಯ ರೂಪ, ಲಾವಣ್ಯಗಳಿಂದ ಕೂಡಿದ್ದರು. ಅವರು ತಮ್ಮ ಶರೀರವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಕೊಂಚ ಮೇಕಪ್ ಮಾಡಿಕೊಂಡರಂತೂ ತಮ್ಮ ನಿಜವಾದ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣುತ್ತಿದ್ದರು.
ಇತ್ತ ಶ್ಯಾಮರಾಯರು ಎಂದೂ ತಮ್ಮ ಶರೀರದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಬೊಜ್ಜು ಬೆಳೆದಿತ್ತು. 40ನೇ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗತೊಡಗಿತ್ತು. ಅವರು ಕೂದಲಿಗೆ ಡೈ ಹಾಕಲಿಲ್ಲ. ಬಿಳಿ ಕೂದಲು ಹಾಗೂ ಬೊಜ್ಜಿನಿಂದಾಗಿ ಅವರು ತಮ್ಮ ವಯಸ್ಸಿಗಿಂತ 10 ವರ್ಷ ದೊಡ್ಡವರಾಗಿ ಕಾಣುತ್ತಿದ್ದರು.
ಒಂದು ದಿನ ಅವರ ಒಬ್ಬ ಗೆಳೆಯ ಮನೆಗೆ ಬಂದಾಗಂತೂ ಅನಾಹುತವಾಯಿತು. ಅವರು ಬಂದಾಗ ವಿಮಲಾ ಡ್ರಾಯಿಂಗ್ ರೂಂಗೆ ಬಂದು ನಮಸ್ಕಾರ ಹೇಳಿ ಕಾಫಿ ತರಲು ಒಳಹೋದರು. ಅಂದು ವಿಮಲಾ ಇದೇ ಹಳದಿ ಸೀರೆ ಉಟ್ಟಿದ್ದರು. ಅವರು ಕಾಫಿ ಟ್ರೇ ಇಟ್ಟು ಒಳಹೋದರು.
ಅರ್ಧ ಗಂಟೆಯ ನಂತರ ಗೆಳೆಯ ಹೊರಡುವಾಗ, “ಎಲ್ಲಪ್ಪಾ, ನಿಮ್ಮ ವೈಫ್ ಕಾಣಲೇ ಇಲ್ಲ,” ಎಂದರು.
“ಈಗ್ತಾನೇ ನಮಸ್ಕಾರ ಹೇಳಿ ಕಾಫಿ ಇಟ್ಟು ಹೋದ್ರಲ್ಲಾ.”
“ಅವರು ನಿಮ್ಮ ವೈಫಾ? ನಾನು ನಿಮ್ಮ ಮಗಳು ಅಂದ್ಕೊಂಡಿದ್ದೆ.”
“ಸರಿ. ನೀವು ಹೋಗಿ ಬನ್ನಿ.”
“ನನಗೆ ಅನ್ನಿಸಿದ್ದು ನಾನು ಹೇಳಿದೆ. ತಪ್ಪು ತಿಳ್ಕೋಬೇಡಿ. ಚಿಕ್ಕ ವಯಸ್ಸಿನ ಹುಡುಗೀನ ಮದುವೆ ಆದರೆ ಅಪ್ಪ ಮಗಳ ತರಹಾನೇ ಕಾಣ್ತೀರಿ.”
“ಸಾಕು ಹೊರಡಿ. ನಿಮ್ಮದು ಜಾಸ್ತಿ ಆಯ್ತು.”
ಇಬ್ಬರ ಮಾತುಗಳನ್ನು ಕೇಳಿ ವಿಮಲಾ ಡ್ರಾಯಿಂಗ್‌ರೂಂಗೆ ಬಂದು ನಗುತ್ತಾ, “ಏನ್ರೀ ನಮ್ಮ ಯಜಮಾನ್ರಿಗೆ ತಮಾಷೆ ಮಾಡ್ತೀರಾ? ಬಿಳಿ ಕೂದಲು, ಕರೀ ಕೂದಲಿನಿಂದ ವಯಸ್ಸು ಹೇಳೋಕಾಗಲ್ಲ. ನಿಮ್ಮ ಕಣ್ಣು ಟೆಸ್ಟ್ ಮಾಡಿಸ್ಕೊಳ್ಳಿ,” ಎಂದರು.
ಮೂವರೂ ಜೋರಾಗಿ ನಗತೊಡಗಿದರು. ಆದರೆ ವಾಸ್ತವ ಎಂದರೆ ವಿಮಲಾ ತಮ್ಮ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣುತ್ತಿದ್ದರು. ರಾಯರು ತಮ್ಮ ವಯಸ್ಸಿಗಿಂತ 10 ವರ್ಷ ದೊಡ್ಡವರಾಗಿ ಕಾಣುತ್ತಿದ್ದರು.
ಚಿಕ್ಕ ಮಗನ ಮದುವೆಯಲ್ಲಿ ಹೊಲಿಸಿದ ಬ್ಲೌಸ್ ಅಂತೂ ಅವರನ್ನು ವ್ಯಗ್ರರನ್ನಾಗಿಸಿತ್ತು. ವಿಮಲಾ ಹೆಚ್ಚಾಗಿ ತಾವೇ ಖರೀದಿ ಮಾಡುತ್ತಿದ್ದರು ಮತ್ತು ತಾವೇ ಬಿಲ್ ಕೊಡುತ್ತಿದ್ದರು. ಆದರೆ ಅಂದು ಟೈಲರ್ ಅಂಗಡಿಯ ಹುಡುಗ ಹೊಲಿದಿದ್ದ ಬ್ಲೌಸ್ ತಂದುಕೊಟ್ಟು 1800 ರೂ. ರಸೀದಿ ಕೊಟ್ಟು ಹಣ ಕೊಡೀಂದ. 1 ಬ್ಲೌಸ್ ಹೊಲಿಯೋಕೆ ಕೂಲಿ 1800 ರೂ. ಎಂದು ತಿಳಿದು ಅವರಿಗೆ ಕೋಪ ಬಂತು. ಅವರು ಹುಡುಗನಿಗೆ 1800 ರೂ. ಕೊಟ್ಟು ಕಳುಹಿಸಿ ನಂತರ ವಿಮಲಾರ ಬಳಿ, “ನಿನ್ನ ಬ್ಲೌಸ್ ಹೊಲಿಯೋಕೆ 1800 ರೂ.ನಾ?” ಎಂದು ಕೇಳಿದರು.
“ಹೌದು. ಅದು ನಿಮಗ್ಯಾಕೆ? ನನ್ನ ಮಗನ ಮದುವೆ. ನಾನೂ ಸಿಂಗರಿಸಿಕೋಬೇಕಲ್ವಾ?”
“ಅಷ್ಟು ಕಾಸ್ಟ್ಲೀ ಬ್ಲೌಸ್ ಇದ್ರೇನೇ ನೀನು ಹುಡುಗನ ತಾಯಿ ಅನ್ನಿಸಿಕೊಳ್ಳೋದಾ?”
“ಇದುವರೆಗೆ ನನ್ನ ಖರ್ಚಿನ ಬಗ್ಗೆ ಎಂದೂ ಕೇಳಲಿಲ್ಲ. ಮಗನ ಮದುವೆ ಟೈಂನಲ್ಲಿ ಯಾಕೆ ಕೇಳ್ತಿದ್ದೀರಿ?” ನಗುತ್ತಾ ವಿಮಲಾ ಹೇಳಿದರು.
ರಾಯರಿಗೆ ಆ ಬ್ಲೌಸ್‌ನಲ್ಲಿ ಯಾವುದೇ ವಿಶೇಷತೆ ಕಾಣಲಿಲ್ಲ. ಆದರೆ ವಿಮಲಾರ ಗೆಳತಿಯರ ನಡುವೆ ಆ ಭಾರಿ ಡಿಸೈನರ್ ಬ್ಲೌಸ್ ಚರ್ಚೆಯ ವಿಷಯವಾಗಿತ್ತು. ಆ ಬ್ಲೌಸ್‌ನ್ನು ನೋಡಿದಾಗ ಅವರಿಗೆ ಹೆಂಡತಿಯ ಸುಂದರ ಮುಖ ನೆನಪಾಯಿತು. ಮಗನ ಮದುವೆಯ ಖುಷಿಯಲ್ಲಿ ಅದು ಹೊಳೆಯುತ್ತಿತ್ತು.
ನಂತರ ಅವರ ದೃಷ್ಟಿ ಇನ್ನೂ ಕೆಲವು ಬ್ಲೌಸ್‌ಗಳ ಮೇಲೆ ಬಿತ್ತು. ಅವನ್ನು ಎಂದೂ ಧರಿಸಿಯೇ ಇಲ್ಲ ಎಂದೂ ಅನಿಸುತ್ತಿತ್ತು. ವಿಮಲಾರಿಗೆ ಬ್ಲೌಸ್ ಹೊಲಿಸಿಕೊಳ್ಳುವ ಶೋಕಿ ಬಹಳ ಇತ್ತು. ಅಷ್ಟೊಂದು ಬ್ಲೌಸ್‌ಗಳನ್ನು ನೋಡಿ ರಾಯರಿಗೆ ಹುಚ್ಚು ಹಿಡಿದಂತಾಗುತ್ತಿತ್ತು. ಮಹಿಳೆಯರ ಮನೋಧರ್ಮ ಅರ್ಥ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ವಿಷಾದವೆಂದರೆ ಯಾವ ವಿಮಲಾರಿಗೆ ಹೆಚ್ಚು ಬ್ಲೌಸ್‌ಗಳನ್ನು ಹೊಲಿಸಿಕೊಳ್ಳುವ ಗೀಳಿತ್ತೋ ಅದೇ ವಿಮಲಾರ ಕೊನೆ ದಿನಗಳಲ್ಲಿ ಅವರಿಗೆ ಬ್ಲೌಸ್ ಧರಿಸಲು ಸಾಧ್ಯವಾಗುತ್ತಿರಲಿಲ್ಲ. 2 ವರ್ಷದ ಹಿಂದೆ ಅವರಿಗೆ ಸ್ತನ ಕ್ಯಾನ್ಸರ್ ಬಂದು ಅದಕ್ಕೆ ಚಿಕಿತ್ಸೆ ಶುರುವಾಗುವಷ್ಟರಲ್ಲಿ ತೋಳುಗಳಲ್ಲಿ ಹರಡಿಬಿಟ್ಟಿತ್ತು. ಹೀಗಾಗಿ ತಮ್ಮ ತೋಳುಗಳನ್ನು ಮೇಲೆತ್ತಲೂ ಅವರಿಗೆ ಆಗುತ್ತಿರಲಿಲ್ಲ. ಕಾಯಿಲೆ ಹಾಗೂ ಕೀಮೋಥೆರಪಿ ಅವರ ಬಿಳಿಯ ಬಣ್ಣವನ್ನು ಕಪ್ಪು ಮಾಡಿತ್ತು. 3 ತಿಂಗಳಲ್ಲಿ ಅವರು ಬದುಕಿಗೆ ವಿದಾಯವನ್ನೂ ಹೇಳಿದ್ದರು.
ಇಂದು ಶ್ಯಾಮರಾಯರು ಅದೇ ಬ್ಲೌಸ್‌ಗಳ ಸಂಗ್ರಹಾಲಯದಲ್ಲಿ ಕುಳಿತು ನೆನಪು ಮಾಡಿಕೊಳ್ಳುತ್ತಾ ಕೆಲವು ಜೀವಂತ ಕ್ಷಣಗಳಿಗೆ ಮತ್ತೆ ಜೀವ ಕೊಡಲು ಪ್ರಯತ್ನಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರು ಎದ್ದು ತಮ್ಮ ನೌಕರನನ್ನು ಕರೆದು, “ಈ ಬೀರುವಿನಲ್ಲಿರುವ ಎಲ್ಲ ಬಟ್ಟೆಗಳನ್ನೂ ಪೆಟ್ಟಿಗೆಗಳಲ್ಲಿ ಇಟ್ಟು ಕಾರಿನಲ್ಲಿ ಇಡು,” ಎಂದರು.
ಬೆಳಗ್ಗೆ ರಾಯರು ಕಾರಿನಲ್ಲಿ ಆ ರೈಲ್ವೆ ಲೈನ್‌ಗೆ ಹೋಗಿ ಎರಡೂ ಪೆಟ್ಟಿಗೆಗಳನ್ನು ಅಲ್ಲಿದ್ದ ಕೂಲಿಯವರಿಗೆ ಹಂಚಿ ಕೊಟ್ಟು ಬಹಳ ಹಗುರವಾದ ಮನಸ್ಸಿನಿಂದ ಮನೆಗೆ ಹಿಂದಿರುಗಿದರು. ವಿಮಲಾರ ಉಡುಪುಗಳಿಂದ ಕೆಲವರ ನಗ್ನತೆಯಾದರೂ ಮುಚ್ಚುತ್ತದೆ ಎಂದುಕೊಂಡರು.