ದೇಶದಲ್ಲಿರುವ ಮಕ್ಕಳು ಆಗಾಗ ಭಾರತಕ್ಕೆ ಬರುತ್ತಾರೆ. ಅಂತೆಯೇ ತಂದೆ ತಾಯಿಯರು ಅವರಿದ್ದಲ್ಲಿಗೆ ಹೋಗುತ್ತಾರೆ. ಈ ಬಾರಿ ಅಮೇರಿಕಾಗೆ ಹೋದಾಗ ಈ ಹಿಂದೆ ಬಾಸ್ಟನ್ನಿನಲ್ಲಿದ್ದ ಮಗ ಸ್ಯಾನ್‌ ಫ್ರಾನ್ಸಿಸ್ಕೋಗೆ ಬಂದಿದ್ದ. ಅಲ್ಲಿ ಪ್ರಿಮಾಂಟ್‌ ಎನ್ನುವ ಸ್ಥಳದಲ್ಲಿದ್ದ. ಅಲ್ಲಿ ಮುಕ್ಕಾಲು ಮೂರು ಪಾಲು ನಮ್ಮ ಭಾರತೀಯರೇ. ನಾವು ಪ್ರತಿ ದಿನ ಅಲ್ಲಿನ ಪಾರ್ಕಿಗೆ ಹೋದರೆ ಬರೀ ನಮ್ಮವರೇ.

ಒಟ್ಟಿನಲ್ಲಿ ಭಾರತದಲ್ಲಿದ್ದಂತೆಯೇ ಭಾಸವಾಗುತ್ತಿತ್ತು. ಹವಾಮಾನ, ಶುದ್ಧವಾದ ಪರಿಸರ, ಚಂದದ ಮರಗಳು, ಹಸಿರು ಹುಲ್ಲು ಹಾಸು ಎಲ್ಲಾ ವಿದೇಶದ್ದಾದರೂ ಜನರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ. ಇಲ್ಲಿನ ಹವಾಮಾನಕ್ಕೆ ಮಾರುಹೋಗಿ ಮತ್ತು ಐಟಿ ಹಬ್‌ ಇಲ್ಲೇ ಇರುವುದರಿಂದ ಸಾಫ್ಟ್ ವೇರ್‌ ಹೈಕಳೆಲ್ಲಾ ಇಲ್ಲೇ ಇದ್ದಾರೆ. ಅಮೇರಿಕಾದ ಬೇರೆ ರಾಜ್ಯಗಳಿಗಿಂತ ಇಲ್ಲಿ ಬಾಡಿಗೆ ವಿಪರೀತ ಹೆಚ್ಚು, ಮನೆಗಳ ಬೆಲೆಯೂ ಅಷ್ಟೇ ತುಟ್ಟಿ. ಆದರೂ ಎಲ್ಲರೂ ಕೊಳ್ಳುತ್ತ ಇದ್ದಾರೆ. ಅಷ್ಟೊಂದು ಡಿಮ್ಯಾಂಡ್‌ ಹೆಚ್ಚಾಗಿ ಇರುವುದಕ್ಕೋ ಏನೋ ಬೆಲೆಯೂ ಹೆಚ್ಚಾಗುತ್ತಲೇ ಇದೆ. ಈವತ್ತು ನೋಡಿದ ಮನೆ ಸ್ವಲ್ಪ ಮೀನಾ ಮೇಷಾ ಮಾಡಿದರೆ ನಾಳೆಗೆ ಕೈ ತಪ್ಪಿ ಹೋಗುತ್ತದೆ. ಅಷ್ಟು ವೇಗದಲ್ಲಿ ರಿಯಲ್ ಎಸ್ಟೇಟ್‌ ಸಾಗುತ್ತಿತ್ತು. ನಮ್ಮ ಬೆಂಗಳೂರಿಗಿಂತಲೂ ವೇಗವೇ. ಸ್ವಂತ ಮನೆಗಾಗಿ ಎಲ್ಲರೂ ಯೋಚಿಸುವುದು ಹೀಗೆಯೇ. ಮನೆಯ ಬಾಡಿಗೆ ಕಟ್ಟಲೇ ಬೇಕು, ಅದಕ್ಕಿತ ಸ್ವಲ್ಪ ಹೆಚ್ಚಿಗೆ ತಿಂಗಳಿಗೆ ಖರ್ಚು ಮಾಡಿದರೆ ತಿಂಗಳ ಕಂತು ಕಟ್ಟಿದಂತೆ ಆಗುತ್ತದೆ. ಮನೆಯೂ ನಿಮ್ಮ ಸ್ವಂತದ್ದಾಗುತ್ತದೆ. ಅಲ್ಲೇ ಇರುವುದು ಖಾತ್ರಿ ಇಲ್ಲಾ ಎನ್ನುವ ಪ್ರಶ್ನೆಗೆ, ಹಿಂದಿರುಗುವಾಗ ಮಾರಿದರೆ ಆಯಿತು ಎನ್ನುವ ಸಮಾಧಾನ. ಒಟ್ಟಿನಲ್ಲಿ ಕೊಳ್ಳುವವರ ರೇಸ್‌ ಇಲ್ಲಿ ಬಹಳ ವೇಗವಾಗಿ ನಡೆಯುತ್ತಿದೆ ಎನಿಸಿತು.

lifestyle

ಎಲ್ಲ ಭಾರತೀಯರಂತೆ ನನ್ನ ಮಗನ ಭಾವನೆ, ಹಾಗೆ ನೋಡಿದರೆ ನನ್ನ ಸೋದರ ಮಾವನ ಮಗ ಬಾಸ್ಟನ್ನಿನಲ್ಲಿ ಮನೆ ಕೊಂಡುಕೊಂಡ. ನಂತರ ಅದನ್ನು ಮಾರಿ ಫಿಲಿಡೆಲ್ಛಿಯಾಗೆ ಹೋದ. ಅಲ್ಲೂ ಮನೆಯನ್ನು ಕೊಂಡುಕೊಂಡಿದ್ದಾನೆ. ಆದರೆ ಅದಕ್ಕೂ ಧೈರ್ಯ ಬೇಕು. ಆದರೆ ನನ್ನ ಮಗ ಸ್ವಲ್ಪ ನಿಧಾನವೇ. ಅವರ ತಂದೆಯಂತೆ ಎಷ್ಟು ಯೋಚಿಸುತ್ತಾನೆಂದರೆ ನಿರ್ಧಾರಕ್ಕೆ ಬರುವುದು ಬಹಳ ನಿಧಾನ. ಸಾಧ್ಯ ಸಾಧ್ಯತೆಗಳನ್ನು ಯೋಚಿಸುವುದು ಸ್ವಲ್ಪ ಹೆಚ್ಚೇ ಎನಿಸುತ್ತದೆ. ಆದರೆ ಅದು ಅವರವರ ಸ್ವಭಾವಕ್ಕೆ ಬಿಟ್ಟಿದ್ದು ಅಲ್ಲವೇ. ಅಂತೂ ಮಗ ಮನೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ. ನಾವು ಬರುವ ಮೊದಲೇ ಮನೆ ನೋಡಲು ಪ್ರಾರಂಭಿಸಿದ್ದ. ನಾವು ಇಲ್ಲಿಗೆ ಬಂದ ನಂತರ ನಾವು ಅವನು ಎಲ್ಲಿಗೆ ಹೋದರೂ ಅವನ ಬಾಲವೇ. ಅವನ ಹಿಂದೆ ಹಿಂದೆ ಹೋಗುತ್ತಿದ್ದೆವು.

ಚಿಕ್ಕಚೊಕ್ಕ ಮನೆಗಳು

ಅಲ್ಲಿಯ ಮನೆಗಳು ಚಿಕ್ಕವೇ, ಅಂದರೆ ಸೈಟಿನ ಸ್ಥಳ ಸಣ್ಣದೇ. ಆದರೆ ಅದರಲ್ಲಿ ಕೆಳಗಿನ ಅಂತಸ್ತಿನಲ್ಲಿ ಒಂದು ರೂಮ್ ಮತ್ತು ಗ್ಯಾರೇಜ್‌ ಅಥವಾ ಅನೇಕ ಮನೆಗಳಲ್ಲಿ ಒಂದು ರೂಮೂ ಇರುತ್ತಿರಲಿಲ್ಲ. ಮೊದಲನೇ ಮಹಡಿಯಲ್ಲಿ ಲಿವಿಂಗ್‌, ಡೈನಿಂಗ್‌ ಮತ್ತು ಅಡುಗೆ ಮನೆ. ಅದನ್ನು ಎಷ್ಟು ಅಚ್ಚುಕಟ್ಟಾಗಿ ರೂಪಿಸಿರುತ್ತಾರೆಂದರೆ ನೋಡಿದ ತಕ್ಷಣ ನಿಜಕ್ಕೂ ದಂಗಾಗಿ ಬಿಡಬೇಕು. ಬಹಳ ಆಕರ್ಷಣೀಯವಾಗಿ ಮಾಡಿರುತ್ತಾರೆ. ಪ್ರತಿಯೊಂದು ಫಿನಿಷಿಂಗ್‌ ನೋಡಿದಾಗ ಬಹಳ ಖುಷಿಯಾಗುತ್ತದೆ. ಅದರ ಮೇಲಿನ ಮಹಡಿಯಲ್ಲಿ ಮೂರು ರೂಮುಗಳು, ಅವುಗಳಿಗೆ ಅಟ್ಯಾಚ್‌ ಬಾತ್‌ರೂಮ್. ಆ ಬಾತ್‌ರೂಮಿನ ಚಂದವನ್ನು ಕಂಡರೆ ಖಂಡಿತ ಮಾರು ಹೋಗೇ ಹೋಗುತ್ತೀರಿ. ಒಟ್ಟಾರೆ ಮೂರು ಅಂತಸ್ತಿನ ಮನೆ.ಕಟ್ಟಲು ಇಟ್ಟಿಗೆ ಸಿಮೆಂಟ್‌ ಬೇಕಿಲ್ಲ…

ಮನೆಯೆಲ್ಲಾ ಇಷ್ಟು ಸುಂದರವಾಗಿದ್ದರೂ ಇಲ್ಲಿ ಮನೆಗಳನ್ನು ಕಟ್ಟುವುದು ಇಟ್ಟಿಗೆ ಸಿಮೆಂಟ್‌ಗಳಿಂದ ಅಲ್ಲ, ಮರದ ಹಲಗೆಗಳನ್ನು ಜೋಡಿಸಿ ಮನೆಯ ಹಂದರವನ್ನು ಅರ್ಥಾತ್‌ ಅಸ್ಥಿಪಂಜರವನ್ನು ಕಟ್ಟುತ್ತಾರೆ. ನಂತರ ಅದರ ಹಿಂದೆ ಮುಂದೆ ಅದೊಂದು ವಿಶೇಷವಾದ ಸಿಮೆಂಟ್‌ ಅಥವಾ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ನಂತಹ ವಸ್ತುವನ್ನು ಬಳಸಿ ಅದಕ್ಕೆ ಗೋಡೆಯ ರೂಪ ಕೊಡುತ್ತಾರೆ. ಅಲ್ಲೂ ಅದರ ಫಿನಿಷಿಂಗ್‌ ಬಹಳ ಚಂದವಿರುತ್ತದೆ. ಅಡುಗೆಮನೆಯ ಸ್ಟವ್ ಸುತ್ತ ಇರುವ ಮೆಟಲ್ ಫ್ರೇಮ್ ಬೆಳ್ಳಗೆ ನುಣುಪಾಗಿರುತ್ತದೆ. ಆದರೆ ಅದರ ಮೇಲೆ ಎಂತಹ ಜಿಡ್ಡಾಗಲೀ ಕರೆಯಾಗಲೀ ಉಳಿಯುವುದಿಲ್ಲ. ಒಟ್ಟಿನಲ್ಲಿ ಸಾರಾಂಶ, ನಿರ್ವಹಣೆ ಬಹಳ ಸುಲಭ. ಅಂತಹ ಮೆಟೀರಿಯಲ್ಸ್ ಬಳಸಿದರೆ ನಮಗೆ ಹೆಂಗಸರಿಗೆ ಕೆಲಸ ಕಡಿಮೆ ಎಂದು ನನ್ನ ಭಾವನೆ.

life

ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಭೂಕಂಪಗಳು ಆಗಾಗ ಆಗುವುದರಿಂದ ಅಥವಾ ಇಲ್ಲಿನ ತಂಪು ವಾತಾವರಣಕ್ಕೆ ಅನುಗುಣವಾಗಿ ಮನೆಯ ನಿರ್ಮಾಣ ಮರಗಳನ್ನು ಬಳಸಿಯೇ ಮಾಡಲಾಗುತ್ತದೆ. ಮೂಲಭೂತ ವಸ್ತು ಮರ. ಎರಡು ಮರಗಳ ಫ್ರೇಮಿನ ಮಧ್ಯೆ ಮನೆಯನ್ನು ಬೆಚ್ಚಗಿಡುವ ಉದ್ದೇಶದಿಂದ ಇನ್ಸುಲೇಟ್‌ ಮಾಡಿರುತ್ತಾರೆ. ನಂತರ ಅದಕ್ಕೆ ಪೂರಕವಾಗಿ ಅದಕ್ಕೊಂದು ಆಕಾರ ನೀಡಲಾಗುತ್ತದೆ. ನಮ್ಮ ಭಾರತದ ಮನೆಗಳಂತೆ ಸಿಕ್ಕಾಪಟ್ಟೆ ಮಜಬೂತಾಗಿರುವುದಿಲ್ಲ. ಕಳ್ಳರಿಗೆ ಕನ್ನ ಕೊರೆಯಲು ಸುಲಭ. ಆದ್ದರಿಂದಲೇ ಮನೆಯ ಭದ್ರತೆಗೆ ಅನುಕೂಲಗಳನ್ನು ಮಾಡಿಕೊಂಡಿರುತ್ತಾರೆ. ಎಲ್ಲಕ್ಕೂ ಅಲಾರಮ್.  ಫೈರ್‌ ಅಲಾರಮ್, ಬರ್ಗಲರಿ ಅಲಾರಮ್ ಇತ್ಯಾದಿ.

ಮನೆ ತೋರುವ ಬ್ರೋಕರುಗಳು  ಮನೆಗಳು ಬಹಳ ಚಂದವೇ! ಆದರೆ ನಮ್ಮಲ್ಲಿಯಂತೆಯೇ ಅಲ್ಲಿಯೂ ಮನೆಗಳನ್ನು ಕಟ್ಟುವ ತಾಣಗಳಲ್ಲಿಯೇ ಅವರ ಕಛೇರಿ. ಮನೆಗಳ ಬಗ್ಗೆ ಪೂರ್ಣವಾಗಿ ವಿವರ ನೀಡುವ ಬ್ರೋಕರ್‌ಗಳು ಮತ್ತು ಎಲ್ಲವನ್ನೂ ವಿವರವಾಗಿ ತಿಳಿಸಲು ಸಿಬ್ಬಂದಿ ಇರುತ್ತಾರೆ. ಅಲ್ಲಿಯೇ ಮಾಡೆಲ್ ಮನೆಗಳು ಇರುತ್ತವೆ. ನೀವು ಕೊಳ್ಳುವ ಮನೆ ಹೇಗಿರುತ್ತದೆ ಎನ್ನುವ ಚಿತ್ರಣ ಪಡೆಯಲು ಅವುಗಳನ್ನು ನೋಡಬಹುದು. ನಾವು ಹೋದಾಗ ಅಲ್ಲಿ ಬಹಳ ಬಿಸಿಲು, ಬೇಸಿಗೆ ಕಾಲ. ಹಾಗಾಗಿ ನೀರಿನ ಬಾಟಲುಗಳನ್ನು ಪಡೆದು ಕುಡಿಯಬಹುದು. ಒಂದು ಕಡೆಯಂತೂ ಬಂದವರಿಗೆಲ್ಲಾ ಐಸ್‌ ಕ್ರೀಮ್ ಮತ್ತು ಐಸ್‌ ಟೀ ಕೊಟ್ಟರು, ಅವು ಬಿಸಿಲಿಗೆ ನಿಜಕ್ಕೂ ಪರಮಾನಂದವಾಯಿತು. ನಾವು ಮನೆ ಕಟ್ಟಿದ್ದೇವೆನ್ನುವ ವಿಷಯ ಹೇಳುವಾಗ ಪ್ರತಿಯೊಂದು ಇಟ್ಟಿಗೆಗಳು ಇಲ್ಲವೇ ಇಲ್ಲ ಅಥವಾ ಬಹಳ ವಿರಳ.

ಕಟ್ಟುವ ಬಗೆ ಬೇರೆಯಾದರೂ ಜಗತ್ತಿನ ಎಲ್ಲ ಮಾನವ ಜೀವಿಗಳಿಗೂ ಮನೆ ಖಂಡಿತ ಅಗತ್ಯ. ಆದರೆ ಅದರ ರೂಪುರೇಷೆ. ಕಟ್ಟುವ ವಿಧಾನ, ಬಳಸುವ ವಸ್ತುಗಳು ಬೇರೆ ಇರಬಹುದು. ಆದರೆ ಎಲ್ಲರ ಮನದಲ್ಲೂ ಇರುವ ಭಾವವಂತೂ ಒಂದೇ. ದೂರದ ಬೆಟ್ಟದಲ್ಲಿ ಪುಟ್ಟ ಮನೆ ಇರಬೇಕು, ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು. ಅದಂತೂ ಇಲ್ಲಿ ಖಂಡಿತ ಸಾಧ್ಯ. ಏಕೆಂದರೆ ಇಲ್ಲಂತೂ ಹಸಿರೋ ಹಸಿರು! ಆದರೆ ಅದಕ್ಕೆ ಖರ್ಚು ಎಷ್ಟಾಯಿತೆಂದು ಕೇಳಬೇಡಿ, ಅಷ್ಟೇ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ