ನಮ್ಮ ಜೀವನದ ಪಯಣದಲ್ಲಿ ಎದುರಾಗುವ ಕೆಲವು ಅದ್ಭುತ ಗಳಿಗೆಗಳನ್ನು ಸೆರೆಹಿಡಿದು ನಮ್ಮ ಜೀವನದ ಉದ್ದಕ್ಕೂ ನೆನಪಿರುವಂತೆ ಕಾಪಾಡಿಕೊಳ್ಳುವ ಪ್ರಕ್ರಿಯೆಯೇ ಛಾಯಾಗ್ರಹಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವದ ಘಟ್ಟಗಳು ಬರುತ್ತವೆ. ಅಂತಹ ಘಟ್ಟಗಳಲ್ಲಿ ನಾವೆಲ್ಲರೂ ಅದನ್ನು ಎಂದಿಗೂ ಮರೆಯದಂತೆ ಇರಲು ಛಾಯಾಗ್ರಹಣ ನೆರವಿಗೆ ಬರಲಿದೆ, ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕಿ ಹೇಮಾ ನಾರಾಯಣ್‌.

ಸ್ಟ್ರೀಟ್‌ ಫೋಟೋಗ್ರಫಿ, ಲ್ಯಾಂಡ್‌ಸ್ಕೇಪ್‌ ಫೋಟೋಗ್ರಫಿ, ವೈಲ್ಡ್‌ ಲೈಫ್‌ ಫೋಟೋಗ್ರಫಿ, ಆ್ಯಸ್ಟ್ರೋ ಫೋಟೋಗ್ರಫಿ…. ಹೀಗೆ ನಾನಾ ವಿಧದ ಛಾಯಾಚಿತ್ರ ತೆಗೆಯುವುದರಲ್ಲಿ ಸಿದ್ಧಹಸ್ತರಾದ ಹೇಮಾ ನಾರಾಯಣ್‌ ಛಾಯಾಗ್ರಹಣದ ವಿವಿಧ ಮಜಲುಗಳ ಅನುಭವ ಹೊಂದಿದವರು. ಇವರು ದೇಶ ವಿದೇಶಗಳ ನಾನಾ ಜಾಲತಾಣಗಳಿಗೆ, ನಿಯತಕಾಲಿಕೆಗಳಿಗೆ, ಟಿ.ವಿ ಡಾಕ್ಯುಮೆಂಟರಿಗಳಿಗೆ ತಮ್ಮ ಕ್ಯಾಮೆರಾದ ಮೂಲಕ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುತ್ತಾರೆ. ಇದುವರೆಗೂ ದೇಶ ವಿದೇಶಗಳಲ್ಲಿ ಸಾಕಷ್ಟು ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿರುವ ಇವರನ್ನು ಗೃಹಶೋಭಾ ಮಾತಿಗೆ ಆಹ್ವಾನಿಸಿದಾಗ, ಆತ್ಮೀಯವಾಗಿ ಮಾತಿಗಿಳಿದ ಹೇಮಾ, ತಮ್ಮ ಬದುಕಿನ ಚಿತ್ರವನ್ನು ತೆರೆದಿಟ್ಟಿದ್ದು ಹೀಗೆ :

ನಾನು ಓದಿದ್ದು ಎಂಜಿನಿಯರಿಂಗ್‌. ಅದರಲ್ಲಿ ಮಾಸ್ಟರ್ಸ್‌ ಮುಗಿಸಿದಾಗ ನನಗೆ ಐಟಿ ಸಂಸ್ಥೆಯಲ್ಲಿ ಕೆಲಸ ದೊರಕಿತು. ಆಗೆಲ್ಲಾ ನಾನು ಕೆಲಸದ ಸಲುವಾಗಿ ದೂರದ ಊರುಗಳಿಗೆ, ವಿದೇಶಕ್ಕೆ ಪ್ರವಾಸ ಹೋಗಬೇಕಾಗುತ್ತಿತ್ತು. ಆಗೆಲ್ಲಾ ನನ್ನೊಂದಿಗೆ ಕ್ಯಾಮೆರಾ ಕೊಂಡೊಯ್ಯುತ್ತಿದ್ದೆ. ನಾನು ಭೇಟಿ ನೀಡಿದ ಸ್ಥಳದ ಸುಂದರ ದೃಶ್ಯಗಳನ್ನು ಸೆರೆಹಿಡಿದು ಅದನ್ನು ನನ್ನ ಸಂಗ್ರಹದಲ್ಲಿರಿಸಿಕೊಳ್ಳುತ್ತಿದ್ದೆ.

A-Soul-Tribute_Hi_Res

ಆಗೆಲ್ಲಾ ಕ್ಯಾಮೆರಾ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೂ ಆಗ ತೆಗೆದ ಚಿತ್ರಗಳು ಉತ್ತಮವಾಗಿ ಮೂಡಿಬಂದಿದ್ದವು. 2005ರಲ್ಲಿ ಇನ್ನೂ ಐವರು ಛಾಯಾಗ್ರಾಹಕರೊಡನೆ ಸೇರಿ ಕರ್ನಾಟಕದ ವಿವಿಧ ಪ್ರಸಿದ್ಧ ಸ್ಮಾರಕಗಳ ಛಾಯಾಚಿತ್ರ ತೆಗೆದೆ. ಈ ಪ್ರಾಜೆಕ್ಟ್ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ನನಗೆ ಪ್ರಾಯೋಗಿಕವಾದ ಅನುಭವ ನೀಡಿತು. ಕ್ರಮೇಣ ಕ್ಯಾಮೆರಾದ ಕುರಿತು ಅನೇಕ ವಿಚಾರಗಳನ್ನು ಕಲಿತೆ. ಕಲಿಯುತ್ತಲೇ ಅದರಲ್ಲಿನ ಆಸಕ್ತಿ ಹೆಚ್ಚುತ್ತಾ ಸಾಗಿತು. ಕಡೆಗೆ 2009ರಲ್ಲಿ ಐಟಿ ಉದ್ಯೋಗ ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಛಾಯಾಗ್ರಹಣ ಮತ್ತು ಫೋಟೋಗ್ರಫಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ.

ಇಂದು ಹಲವಾರು ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿರುವ ಹೇಮಾ, ನ್ಯಾಷನಲ್ ಜಿಯೋಗ್ರಾಫಿಕ್‌ನ ಟ್ರಾವೆಲರ್‌ ಇಂಡಿಯಾ ಕಾರ್ಯಕ್ರಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಇದೆಲ್ಲದರೊಡನೆ `ವೈಡರ್‌ ಆ್ಯಂಗಲ್ಸ್’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಇದರ ಮೂಲಕವಾಗಿ ಫೋಟೋಗ್ರಫಿ ವರ್ಕ್‌ಶಾಪ್‌ಗಳನ್ನು ಸಹ ನಡೆಸುತ್ತಿದ್ದಾರೆ. ಜೊತೆಗೆ ಅನೇಕ ಬಾರಿ ಭಾರತ ಪ್ರವಾಸವನ್ನು ಆಯೋಜಿಸಿ ಫೋಟೋಗ್ರಫಿ ಕುರಿತಾಗಿ ಪ್ರಾತ್ಯಕ್ಷಿಕೆ ಏರ್ಪಡಿಸುತ್ತಾರೆ. ಇದರೊಡನೆ ಫೋಟೋಗ್ರಫಿಯಲ್ಲಿರುವ ನಾನಾ ಸಾಧ್ಯತೆಗಳನ್ನು ಸಹ ತಿಳಿಸಿ ಹೇಳುತ್ತಾರೆ. ದಿ ಇಂಟರ್‌ನ್ಯಾಷನಲ್ ಸ್ಕೂಲ್‌ ಆಫ್‌ ಬೆಂಗಳೂರು ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕುರಿತಂತೆ ಶಿಕ್ಷಣವನ್ನು ನೀಡುತ್ತಿರುವ ಹೇಮಾ, ಇದುವರೆಗೆ ಇಂಟೀರಿಯರ್ಸ್‌, ಲೈಫ್‌ಸ್ಟೈಲ್‌, ಟ್ರಾವೆಲರ್‌, ಹೋಮ್ ಡೆಕೋರ್‌, ಫುಡ್‌ ಫೋಟೋಗ್ರಫಿಗಳಂತಹಾ ಹೊಸ ವಿಧದ ಫೋಟೋಗ್ರಫಿ ವಿಭಾಗಗಳಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ.

 

Moonscapes_of_Ladakh_Hema_MG_1908_hi_Res

ನ್ಯೂಯಾರ್ಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫೋಟೋಗ್ರಫಿ ಸಂಸ್ಥೆಯಲ್ಲಿ ಪದವಿ ಪಡೆದಿರುವ ಹೇಮಾರಿಗೆ ನ್ಯಾಷನಲ್ ಜಿಯೋಗ್ರಫಿ ಮತ್ತು ಜೆಟ್‌ ಏರ್‌ ವೇಸ್‌ ಜಂಟಿಯಾಗಿ ನಡೆಸುವ ಮಹಿಳಾ ಛಾಯಾಗ್ರಾಹಕಿಯರ ವಿಶೇಷ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫೋಟೋಗ್ರಫಿ ಕುರಿತಂತೆ ನಡೆಯುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗಹಿಸುವ ಹೇಮಾ, ಅಲ್ಲಿ ತಮ್ಮ ಪ್ರಬಂಧ, ಭಾಷಣಗಳನ್ನು ಮಂಡಿಸಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಫೋಟೋಗ್ರಫಿಯಲ್ಲಿ ಹಲವಾರು ವಿಧಾನಗಳಿವೆ ಎನ್ನುವ ಹೇಮಾ, ಇತ್ತೀಚೆಗೆ ವನ್ಯಜೀವಿ ಮತ್ತು ಆ್ಯಸ್ಟ್ರೋ ಛಾಯಾಗ್ರಹಣಗಳ ಕುರಿತು ಹೆಚ್ಚಿನ ಮಟ್ಟಿಗೆ ಪ್ರಯೋಗ ಮಾಡುತ್ತಿರುವುದಾಗಿ ಹೇಳುತ್ತಾರೆ.

ವನ್ಯಜೀವಿ ಛಾಯಾಗ್ರಹಣದ ಸಲುವಾಗಿ ಆಫ್ರಿಕಾದ ಕಾಡುಗಳಲ್ಲಿ ದಿನಗಟ್ಟಲೆ, ವಾರಗಟ್ಟಲೆ ಅಲೆದಾಡಿದ್ದ ಇವರು, ಕೀನ್ಯಾ ಮೊದಲಾದ ಆಫ್ರಿಕಾದ ರಾಷ್ಟ್ರಗಳನ್ನು ಸುತ್ತಿ ಅಲ್ಲಿನ ಕಾಡು ಪ್ರಾಣಿಗಳ ಸುಂದರ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ನಾನು ಕಾಡಿನಲ್ಲಿ ಸಫಾರಿ ಹೊರಡುವ ಮುನ್ನ ನನ್ನೆರಡೂ ಭುಜಗಳಿಗೆ ಒಂದೊಂದು ಕ್ಯಾಮೆರಾಗಳನ್ನು ಫಿಕ್ಸ್ ಮಾಡಿಕೊಳ್ಳುತ್ತಿದ್ದೆ. ಅದಲ್ಲದೆ, ಹಣೆಯ ಮೇಲೆ ಪಟ್ಟಿಯಂತೆ ಕಟ್ಟಿಕೊಂಡು ಅಲ್ಲಿಯೂ ಒಂದು ಪುಟ್ಟ ಕ್ಯಾಮೆರಾ ಇರಿಸಿಕೊಳ್ಳುತ್ತಿದ್ದೆ. ನನ್ನ ದಾರಿಯಲ್ಲಿ ಯಾವ ದಿಕ್ಕಿನಿಂದ ಪ್ರಾಣಿಗಳು ಬಂದರೂ ಆ ದಿಕ್ಕಿನ ಕ್ಯಾಮೆರಾವನ್ನು ತಕ್ಷಣ ಫೋಕಸ್‌ ಮಾಡಿ ನಿಮಿಷ ಮಾತ್ರದಲ್ಲಿ ಚಿತ್ರ ಸೆರೆಹಿಡಿಯಬೇಕಾಗಿತ್ತು. ವನ್ಯಜೀವಿ ಛಾಯಾಗ್ರಹಣ ನಿಜಕ್ಕೂ ಸವಾಲಿನ ಕ್ಷೇತ್ರ ಎಂದು ತಮ್ಮ ಪ್ರವಾಸದ ಅನುಭವವನ್ನು ಮೆಲುಕುಹಾಕುತ್ತಾರೆ.

ಇನ್ನೂ ಆ್ಯಸ್ಟ್ರೋ ಫೋಟೋಗ್ರಫಿ ಕುರಿತಂತೆ ಹೇಳುವುದಾದರೆ ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಪುಂಜ, ಮಿಲ್ಕಿವೇ ಗ್ಯಾಲೆಕ್ಸಿ ಹಾಗೂ ಅನಿಲದ ಚಲನೆಯನ್ನು ಸೆರೆಹಿಡಿಯುವುದು, ಈ ಶೈಲಿಯ ಮುಖ್ಯ ಉದ್ದೇಶ. ಪ್ರತಿನಿತ್ಯ ಆಗಸದಲ್ಲಿ ಕತ್ತಲ ರಾತ್ರಿಯ ಸಮಯ ಹಲವಾರು ನಕ್ಷತ್ರಗಳು ಕಾಣುತ್ತವೆ. ಭೂಮಿಯ ಚಲನೆಗೆ ತಕ್ಕಂತೆ ನಕ್ಷತ್ರದ ಮಾದರಿ (ಪ್ಯಾಟರ್ನ್‌) ಬದಲಾಗುವಂತೆ ಕಾಣುವುದರಿಂದ ನಾವು ಕ್ಯಾಮೆರಾವನ್ನು ಫೋಕಸ್‌ ಮಾಡಿ ನಿರ್ದಿಷ್ಟ ಕಾಲದವರೆಗೆ ಕಾಯ್ದು ಚಿತ್ರವನ್ನು ಸೆರೆಹಿಡಿಯಬೇಕು. ಹಾಗೆ ಸೆರೆಹಿಡಿದ ಚಿತ್ರವನ್ನು ಒಟ್ಟಿಗೆ ಸ್ಯಾಕ್‌ (ಒಂದುಗೂಡಿಸುವುದು) ಮಾಡಿದರೆ ನಕ್ಷತ್ರದ ಪ್ಯಾಟರ್ನ್‌ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿ ಮೂಡಿರುತ್ತದೆ. ಅದು ಮಿಂಚುಕೋಲಿನಂತೆ ಕಾಣುತ್ತದೆ. ಇದಕ್ಕಾಗಿ ವಿಶೇಷವಾದ ಜಾಗದ ಅವಶ್ಯಕತೆ ಇದೆ. ಕೃತಕ ಬೆಳಕಿಲ್ಲದ, ವಾಯುಮಾಲಿನ್ಯವಿಲ್ಲದ, ಮೋಡವಿಲ್ಲದ, ಸ್ವಚ್ಛ ಆಕಾಶವಿರುವ ಕಡೆ ಮಾತ್ರವೇ ಆ್ಯಸ್ಟ್ರೋ ಫೋಟೋಗ್ರಫಿ ಸಾಧ್ಯವಾಗುತ್ತದೆ.

ಟೆಲಿ ಫೋಟೋ ಲೆನ್ಸ್ ಬಳಸಿ ತೆಗೆದ ಚಿತ್ರವನ್ನು ಸ್ಟಾರ್‌ ಸ್ಟ್ಯಾಕಿಂಗ್‌, ಸ್ಟಾರ್‌ ಗೇಜಿಂಗ್‌ ಇತ್ಯಾದಿ ಸಾಫ್ಟವೇರ್‌ಗಳನ್ನು ಬಳಸಿ ನೂರಾರು ಫೋಟೋಗಳನ್ನು ಒಗ್ಗೂಡಿಸಿ ಒಂದು ಚಿತ್ರವನ್ನು ತಯಾರಿಸುತ್ತಾರೆ. ಹೀಗೆ ಮಾಡಿದಾಗ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್‌ ಚಲಿಸಿರುವುದು ಗೋಚರಿಸಿರುತ್ತದೆ.

ಇಂತಹ ಛಾಯಾಗ್ರಹಣವಂತೂ ನಿಜಕ್ಕೂ ಮನುಷ್ಯ ಪ್ರಯತ್ನವನ್ನು ಮೀರಿದ್ದಾಗಿದೆ! ನಾನೊಮ್ಮೆ ಲಡಾಕ್‌ ಪ್ರವಾಸ ಕೈಗೊಂಡ ಸಮಯದಲ್ಲಿ ಸೂರ್ಯನ ಬೆಳಕಲ್ಲಿ ಹೊಳೆಯುವ, ಬಣ್ಣದಿಂದ ಕೂಡಿದ ಮೋಡವನ್ನು ಕಂಡಿದ್ದೆ. `ಮದರ್‌ ಆಫ್‌ ಪರ್ಲ್’ ಎನ್ನುವ ಹೆಸರಿನ ಆ ಮೋಡ ಗೋಚರಿಸಿದ್ದು ಕೇವಲ 15 ನಿಮಿಷ! ಆ ಕ್ಷಣಕ್ಕೆ ನಮ್ಮ ಬಳಿ ಕ್ಯಾಮೆರಾ ಇರಬೇಕು. ತೆಗೆದ ಶಾಟ್‌ ಸರಿಯಾಗಿ ಬಂದಿರಬೇಕು! ತುಸುವೇ ಹೆಚ್ಚು ಕಮ್ಮಿಯಾದರೂ ಮತ್ತೆ ಅಂತಹ ಅವಕಾಶ ದೊರೆಯಲಾರದು.

ಹೀಗೆ ತಮ್ಮ ಅನುಭವದೊಡನೆ ಫೋಟೋಗ್ರಫಿಯ ನಾನಾ ವಿಧಾನದ ಕುರಿತು ವಿವರಿಸುವ ಹೇಮಾ, ಛಾಯಾಗ್ರಹಣ ಒಂದು ಕಲೆ. ಇಂದಿನ ಜಮಾನಾದಲ್ಲಿ ಎಲ್ಲರ ಬಳಿಯೂ ಕ್ಯಾಮೆರಾ, ಕ್ಯಾಮೆರಾ ಮೊಬೈಲ್ ಗಳಿರುತ್ತವೆ. ಪ್ರತಿಯೊಬ್ಬರೂ ಫೋಟೋಗ್ರಾಫ್‌ ತೆಗೆದುಕೊಳ್ಳುವಲ್ಲಿ ತೊಡಗಿರುತ್ತಾರೆ. ಆದರೆ ಕೆಲವು ವಿಶೇಷ ಸನ್ನಿವೇಶ, ಸ್ಥಳಗಳನ್ನು ವೈವಿಧ್ಯಮಯ ಆ್ಯಂಗಲ್ಸ್ ನಿಂದ ಸೆರೆಹಿಡಿಯುವುದನ್ನು ಕಲಿತಾಗ ಯಾರಾದರೂ ಉತ್ತಮ ಛಾಯಾಗ್ರಾಹಕರಾಗಬಲ್ಲರು. ಓರ್ವ ಛಾಯಾಗ್ರಾಹಕನಾಗಲು ಮುಖ್ಯವಾಗಿ ತಾಳ್ಮೆ ಇರಬೇಕು. ಸದಾ ಕುತೂಹಲ, ಚುರುಕು ಬುದ್ಧಿ, ತಕ್ಷಣವೇ ಅಲರ್ಟ್‌ ಆಗುವ ಸ್ವಭಾವವಿರಬೇಕು ಎನ್ನುತ್ತಾರೆ.

– ರಾಘವೇಂದ್ರ ಅಡಿಗ ಎಚ್ಚೆನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ