ಕರ್ನಾಟಕದ ಪಶ್ಚಿಮಘಟ್ಟಗಳು ಜಾಗತಿಕ ಮಟ್ಟದಲ್ಲಿ ಅಮೂಲ್ಯವಾದ ಅಪರೂಪದ ವನ್ಯಜೀವಿಗಳ ತಾಣಗಳಾಗಿವೆ. ಅದರಲ್ಲಿ ಮೌಳಂಗಿ ಇಕೋ ಪಾರ್ಕ್ ಕೂಡ ಒಂದಾಗಿದೆ. ಅಲ್ಲಲ್ಲಿ ವನಪಾಲಕರ ಅರಣ್ಯ ಇಲಾಖೆಯ ರಕ್ಷಣಾ ಗೇಟ್, ದಾಂಡೇಲಿ…. ಹೀಗೆ ಎಲ್ಲ ಮಾರ್ಗಗಳಲ್ಲಿಯೂ ತಪಾಸಣಾ ಚೌಕಿಗಳಿಂದ ನಿರ್ಬಂಧಿತ ಪ್ರದೇಶವಾಗಿ ಈ ಸ್ಥಳಗಳು ರಕ್ಷಣೆಯ ಮೂಲಕ ಪರಿಸರ ಜಾಗೃತಿಯಲ್ಲಿ ತೊಡಗಿವೆ. ಹಳಿಯಾಳದಿಂದ ಬರ್ಚಿ ಮಾರ್ಗವಾಗಿ ದಾಂಡೇಲಿ ತಲುಪಿದರೆ ಅಲ್ಲಿಂದ 4 ಕಿ.ಮೀ. ಅಂತರದಲ್ಲಿ ಮೌಳಂಗಿ ಇಕೋ ಪಾರ್ಕ್ ಇದೆ.
ಧಾರವಾಡದಿಂದ ದಾಂಡೇಲಿ 70 ಕಿ.ಮೀ., ಬೆಳಗಾವಿಯಿಂದ 93 ಕಿ.ಮೀ., ಹುಬ್ಬಳ್ಳಿಯಿಂದ 74 ಕಿ.ಮೀ. ಅಂತರದಲ್ಲಿರುವ ಈ ಸ್ಥಳ ಪ್ರೇಮಿಗಳಿಗಂತೂ ಹೇಳಿ ಮಾಡಿಸಿದ ತಾಣ ಕುಟುಂಬ ಸಹಿತ ಬರುವವರಿಗೂ ಕೂಡ ಮಕ್ಕಳಿಗೆ ಆಟವಾಡಲು ಅಲ್ಲಲ್ಲಿ ಇಳಿಜಾರಿನ ಜಾರುಬಂಡಿ, ಜೋಕಾಲಿ, ಗುಡಿಸಿಲಿನ ಆಕಾರದ ಟೆಂಟ್, ಟೈರ್ ಹಗ್ಗ ಕಟ್ಟಿ ಜೋತು ಬೀಳಿಸಿದ್ದು ಅವುಗಳ ಮೂಲಕ ಜೀಕಬಹುದು.
ರಜೆಯ ಮಜ ಅನುಭವಿಸುವವರಿಗೆ ಇದೊಂದು ಹೇಳಿ ಮಾಡಿಸಿದ ಜಾಗ. ದಟ್ಟವಾದ ಕಾಡು ಇಲ್ಲಿನ ಅಪರಿಮಿತ ಪ್ರಕೃತಿ ಸೌಂದರ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನುವಂತೆ ಬೆಳೆದು ನಿಂತ ಹಸಿರುಟ್ಟ ಅರಣ್ಯರಾಶಿ. ವಿಶಾಲವಾದ ಜಾಗದಲ್ಲಿ ಹರಡಿರುವ ಕಾಳಿ ನದಿ ನೋಡುಗರನ್ನು ತನ್ನತ್ತ ಕೈ ಬೀಸಿ ಕರೆಯುವಂತೆ ಇದೊಂದು ಪ್ರವಾಸಿ ತಾಣವಾಗಿ ನಿರ್ಮಾಣವಾಗಿರುವುದು ವಿಶೇಷ.
ನೈಸರ್ಗಿಕವಾಗಿ ಸೂಪಾ ಅಣೆಕಟ್ಟೆಯಿಂದ ಹರಿದು ಬರುವ ಕಾಳಿ ನದಿಯ ಎರಡು ಬದಿಯ ಬೆಟ್ಟದ ನಡುವಿನ ವಿಶಾಲವಾದ ಕಲ್ಲುಬಂಡೆಗಳಿಂದ ಕೂಡಿದ ಸ್ಥಳದಲ್ಲಿ ಜುಳುಜುಳು ನಿನಾದ ಮಾಡುತ್ತ ಹರಿದು ಸಾಗುವ ಸ್ಥಳವಿದು. ಸುತ್ತಲೂ ಬಿದಿರು ಬೊಂಬುಗಳು, ಹಸಿರುಟ್ಟ ಗಿಡಮರಗಳು ಆಕಾಶವನ್ನು ಚುಂಬಿಸುತ್ತಿವೆಯೇನೋ ಎನ್ನುವಂತೆ ಕಂಡು ಬರುವ ಪ್ರಕೃತಿ ನೋಡುಗರನ್ನು ಮಂತ್ರಮುಗ್ಧವಾಗಿಸುತ್ತದೆ. ಇಲ್ಲಿಗೆ ಬಂದೊಡನೆ ಪ್ರವೇಶ ದ್ವಾರ ಕಾಣಸಿಗುತ್ತದೆ. ಅಲ್ಲಿ ನಿಮ್ಮ ಪ್ರವೇಶ ಖಚಿತಪಡಿಸಿಕೊಂಡು ವಾಹನ ತಂದಿದ್ದಲ್ಲಿ ಅಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಕೂಡ ಇದ್ದು ಒಂದೆಡೆ ನಿಲ್ಲಿಸಿ. ಇಲ್ಲವೇ ಯಾವುದೇ ಹೋಟೆಲ್ ಅಥವಾ ತಿಂಡಿತಿನಿಸುಗಳು ಸಿಗುವುದಿಲ್ಲ. ಹೀಗಾಗಿ ಬರುವಾಗ ದಾಂಡೇಲಿಯಲ್ಲಿಯೇ ಏನಾದರೂ ತಿನ್ನಲು ಅಥವಾ ಒಂದೆಡೆ ಮನೆಮಂದಿಯೆಲ್ಲ ಕುಳಿತು ಊಟ ಮಾಡಲು ಅವಕಾಶ ಸಾಕಷ್ಟಿದ್ದು ಮುಂಚಿತವಾಗಿಯೇ ತಮಗೇನು ಬೇಕೋ ಅದನ್ನು ತಂದಿದ್ದರೆ ಒಳ್ಳೆಯದು. ಹಾಗೆ ಗೇಟ್ ದಾಟಿ ಒಳಗೆ ಬಂದರೆ ಜುಳು ಜುಳು ನಿನಾದದ ಕಾಳಿ ಒಂದೆಡೆ ಕಂಡು ಬಂದರೆ ಮತ್ತೊಂದೆಡೆ ಕಾಡು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಕಾಡಿನೊಳಗಡೆ ಸಂಚರಿಸುತ್ತ ಪ್ರಕೃತಿಯನ್ನು ಆಸ್ವಾದಿಸುತ್ತ ನದಿಯೆಡೆಗೆ ಬಂದರೆ ಮಕ್ಕಳ ಜೊತೆಗೆ ಬಂದಿದ್ದರೆ ಅವರನ್ನು ನದಿಯೆಡೆಗೆ ಬಿಡದಂತೆ ಜಾಗರೂಕತೆ ಕೂಡ ವಹಿಸತಕ್ಕದ್ದು.
ಮಕ್ಕಳಿಗಾಗಿ ಇರುವ ಜಾರುಬಂಡಿ, ಟೈರ್ ಜೋಕಾಲಿ ಇತ್ಯಾದಿಗಳೆಡೆಗೆ ಅವರನ್ನು ಉಲ್ಲಾಸಭರಿತರಾಗಿ ಆಡಲು ಬಿಡಿ. ನದಿಯಲ್ಲಿ ಈಜು ಬಂದರಿದ್ದರೆ ಇಲಾಖೆಯವರಿಂದ ಅನುಮತಿ ಪಡೆಯಿರಿ. ಅಲ್ಲಲ್ಲಿ ಎಚ್ಚರಿಕೆಯ ನಾಮಫಲಕ ಕೂಡ ಇವೆ. ಇಲ್ಲದ್ದಿದ್ದಲ್ಲಿ ದಡದಲ್ಲಿಯೇ ಸ್ನಾನ ಮಾಡಬಹುದು.
ಹೀಗೆ ದೇಹದ ಆಯಾಸವನ್ನೆಲ್ಲ ತಣಿಸಿಕೊಂಡು ಮನಮೋಹಕ ದೃಶ್ಯದಲ್ಲಿ ಕಾಳಿ ನದಿಯ ಹಾಗೂ ಸುತ್ತಲಿನ ಬೆಟ್ಟಗುಡ್ಡಗಳ ಪ್ರಕೃತಿ ರಾಶಿಯನ್ನು ಗಮನಿಸುತ್ತ ಒಂದೆಡೆ ಬಂದು ಕುಳಿತುಕೊಂಡು ಊಟ, ತಿಂಡಿ, ತಿನಿಸುಗಳ ಸವಿಯನ್ನು ಸವಿಯಿರಿ. ನಿಜಕ್ಕೂ ಇದೊಂದು ಅದ್ಭುತ ಪ್ರಕೃತಿ ತಾಣ. ಈ ಸ್ಥಳದಲ್ಲಿ ಹೆಚ್ಚು ಜನಸಂದಣಿ ಇರುವ ಸಮಯವೆಂದರೆ ಮಕರ ಸಂಕ್ರಾಂತಿ ಹಾಗೂ ಮಹಾ ಶಿವರಾತ್ರಿ ಈ ಸಂದರ್ಭದಲ್ಲಿ ದಾಂಡೇಲಿ ಸುತ್ತಮುತ್ತಲಿನ ಜನರೆಲ್ಲ ಇಲ್ಲಿಗೆ ಬಂದು ಸ್ನಾನ ಮಾಡಿ ಹೋಗುವುದು ವಾಡಿಕೆ.ಇನ್ನುಳಿದಂತೆ ಪ್ರತಿದಿನ ಪ್ರವಾಸಿಗರು, ಪ್ರೇಮಿಗಳು ಭೇಟಿ ನೀಡುವುದಂತೂ ಸಾಮಾನ್ಯ. ವರ್ಷವಿಡೀ ಯಾವುದೇ ಸಮಯದಲ್ಲಿ ಬಂದರೂ ಈ ಸ್ಥಳ ವೀಕ್ಷಣೆಗೆ ಲಭ್ಯ. ಆದರೆ ಕಾಳಿ ನದಿಯ ನೀರನ್ನು ಅಣೆಕಟ್ಟೆಯಿಂದ ಹೊರಬಿಟ್ಟಾಗಲಂತೂ ಇದರ ಸೌಂದರ್ಯ ಇಮ್ಮಡಿಗೊಂಡಿರುತ್ತದೆ. ಆ ಸಮಯ ಹೊಂದಿಸಿಕೊಂಡು ಅಂದರೆ ಮಳೆಗಾಲದ ಅವಧಿ ಜೂನ್ನಿಂದ ಡಿಸೆಂಬರ್ವರೆಗೂ ಬಂದಲ್ಲಿ ಇನ್ನೂ ಹೆಚ್ಚಿನ ಪ್ರಕೃತಿ ನಿರ್ಮಿತ ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
– ವೈ.ಬಿ. ಕಡಕೋಳ