ಸಾಮಾನ್ಯವಾಗಿ ಅಡುಗೆ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಆಗುತ್ತಾ ಇರುತ್ತವೆ. ಅಂದರೆ, ಪಲ್ಯಕ್ಕೆ ಹೋಳು ಅರೆ ಬೆಂದಿರುವುದು, ಇಡ್ಲಿ-ಢೋಕ್ಲಾ ಸ್ಪಾಂಜ್ ತರಹ ಮೃದು ಆಗದಿರುವುದು, ದಾಲ್ ಮಾಡುವಾಗ ನೀರಸ ಎನಿಸುವುದು…. ಇತ್ಯಾದಿ. ಬನ್ನಿ, ಇದನ್ನು ಸರಿಪಡಿಸುವುದು ಹೇಗೆ ಎಂದು ನೋಡೋಣ.
ಸಾಮಗ್ರಿ ಒಂದೇ ಹದದಲ್ಲಿ ಬೇಯದಿರುವುದು : ತರಕಾರಿ, ಬೇಳೆ ಅಥವಾ ಕಾಳು ಒಂದೇ ಹದದಲ್ಲಿ ಬೇಯದಿರಲು ಅದಕ್ಕೆ ಬೆರೆಸಿದ ನೀರು ಅಥವಾ ಹೋಳು ಹೆಚ್ಚಿದ ವಿಧಾನ ಸಮರ್ಪಕ ಇಲ್ಲದಿರಬಹುದು. ಹೀಗಾದಾಗ ಹೋಳು ಕೆಲವು ಬೆಂದಿರುತ್ತವೆ, ಕೆಲವು ಬೇಯುವುದಿಲ್ಲ. ಹುರುಳಿಕಾಯಿ, ಗೋರಿಕಾಯಿಯಂಥ ಗಟ್ಟಿ ಪದಾರ್ಥಗಳನ್ನು ಕುಕ್ಕರ್ ಬಟ್ಟಲಿನ ತಳಭಾಗದಲ್ಲಿಯೂ ಎಲೆಕೋಸಿನಂಥ ಮೃದು ಭಾಗ ಮೇಲ್ಭಾಗದಲ್ಲಿಯೂ ಬರಲಿ.
ಬಳಸಿದ ಎಣ್ಣೆಯ ಸತತ ಮರುಬಳಕೆ : ಒಮ್ಮೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಕರಿಯಲು ಬಳಸಿದರೆ, ಅದರಿಂದ ಬೇರೆ ಬೇರೆ ವ್ಯಂಜನ ತಯಾರಿಸಿದರೆ, ವ್ಯಂಜನದ ರುಚಿಯೂ ಕೆಡುತ್ತದೆ, ನೋಡಲಿಕ್ಕೂ ಚೆನ್ನಾಗಿರುವುದಿಲ್ಲ. ಹೀಗಾಗದಂತೆ ಎಚ್ಚರವಹಿಸಿ. ಒಮ್ಮೆ ಕರಿದ ಎಣ್ಣೆಯನ್ನು ದೋಸೆ, ಚಪಾತಿ ತಯಾರಿಗೆ ಮಾತ್ರ ಬಳಸಿಕೊಳ್ಳಿ.
ವ್ಯಂಜನ ಬಿಸಿ ಮಾಡುವಾಗ ತಣ್ಣೀರಿನ ಬಳಕೆ : ಸಾಮಾನ್ಯವಾಗಿ ದಾಲ್, ಸಾಂಬಾರ್, ಕೂಟು, ಹುಳಿ, ಗೊಜ್ಜು ಇತ್ಯಾದಿ ಮರುಬಿಸಿ ಮಾಡುವಾಗ, ಅದು ಗಟ್ಟಿಯಾಗಿದೆ ಎಂದು ತಣ್ಣೀರು ಬೆರೆಸಿ ಬಿಸಿ ಮಾಡುತ್ತಾರೆ. ಇದು ಸರಿಯಲ್ಲ. ಇದರಿಂದ ರುಚಿಕರ ವ್ಯಂಜನ ರಸಹೀನ ಆಗುತ್ತದೆ. ಆದ್ದರಿಂದ ಇಂಥ ಗ್ರೇವಿಗಳನ್ನು ಬಿಸಿ ಮಾಡುವಾಗ ಅಗತ್ಯವಿದ್ದಷ್ಟು ಬಿಸಿ ನೀರು ಬೆರೆಸಿಯೇ ಇದನ್ನು ಬಿಸಿ ಮಾಡಬೇಕು. ಹಿಂದಿನ ರಾತ್ರಿಯಿಡೀ ಇದು ಫ್ರಿಜ್‌ನಲ್ಲಿದ್ದರೆ, ಮಾರನೇ ದಿನ ಇಂಗು, ಜೀರಿಗೆ, ಟೊಮೇಟೊ ಸೇರಿಸಿ ಒಗ್ಗರಣೆ ಕೊಟ್ಟು, ಅದಕ್ಕೆ ಮೇಲೆ ಬಿಸಿ ನೀರು ಹಾಕಿ ಕುದಿಸಿ ನಂತರ ಗ್ರೇವಿ ಬೆರೆಸಿದರೆ ರುಚಿ ಕೊಡುತ್ತದೆ.
ಇಡ್ಲಿ-ಢೋಕ್ಲಾ ಮೃದುವಾಗಲಿಲ್ಲವೇ….? : ಸಾಮಾನ್ಯವಾಗಿ ರವೆ ಇಡ್ಲಿ ಅಥವಾ ಢೋಕ್ಲಾ ತಯಾರಿಸುವಾಗ, ಫ್ರಿಜ್‌ನಿಂದ ತೆಗೆದ ಮೊಸರನ್ನು ನೇರವಾಗಿ ಇದಕ್ಕೆ ಬೆರೆಸುತ್ತಾರೆ. ಹಾಗೆ ಮಾಡುವುದರಿಂದ ಇದು ಸ್ಪಾಂಜಿ ಆಗುವುದಿಲ್ಲ. ಫ್ರಿಜ್‌ನಿಂದ ತೆಗೆದ ಮೊಸರು, ಅರ್ಧ ಗಂಟೆ ಹೊರಗಿರಿಸಿ, 30 ಸೆಕೆಂಡ್ ಮೈಕ್ರೊವೇವ್‌ನಲ್ಲಿ ಬಿಸಿ ಮಾಡಿ ನಂತರ ಬಳಸುವುದು ಲೇಸು. (ಮೈಕ್ರೋವೇವ್ ಇಲ್ಲದಿದ್ದರೆ 45-50 ನಿಮಿಷ ಹೊರಗಿಡಿ).
ಸೊಪ್ಪು ಬ್ಲಾಂಚ್ ಮಾಡಿದ ನಂತರ ಹಿಂದಿನ ಸಹಜ ಬಣ್ಣ ಉಳಿಯದೆ ಹೋದರೆ…. : ಎಲೆಕೋಸು ಅಥವಾ ಸೊಪ್ಪು ಇತ್ಯಾದಿ ಬ್ಲಾಂಚ್ (ಬಿಸಿ ನೀರಲ್ಲಿ 2 ನಿಮಿಷ ಕುದಿಸುವುದು) ಮಾಡಿದಾಗ, ತಕ್ಷಣ ಫ್ರಿಜ್ ನೀರಿಗೆ ಇದನ್ನು ರವಾನಿಸಿ. ಆಗ ಸಹಜ ಹಸಿರು ಬಣ್ಣ ಕುಂದುವುದಿಲ್ಲ.
ಮೈಕ್ರೋವೇವ್‌ನಲ್ಲಿ ಉಷ್ಣತೆ ಸೆಟ್ ಮಾಡಿದ ನಂತರ, ಅದನ್ನು ಆಫ್ ಮಾಡಿ ತಕ್ಷಣ ಅದರ ಬಾಗಿಲನ್ನು ತೆರೆದಿಡುವುದು : ಯಾವಾಗ ಮೈಕ್ರೋವೇವ್‌ನಲ್ಲಿ ಏನಾದರೂ ತಯಾರಿಸಿದಾಗ ಅಥವಾ ಬಿಸಿ ಮಾಡಿದಾಗ, ಅದು ಆಫ್ ಆದ ತಕ್ಷಣ ಅದರ ಬಾಗಿಲು ತೆರೆಯಲು ಹೋಗಬೇಡಿ. ಅದಾದ ಮೇಲೂ ಒಳಗಿನ ಆಹಾರ ಬಿಸಿ ಆಗುತ್ತಿರುತ್ತದೆ ಎಂಬುದು ನೆನಪಿರಲಿ. 5 ನಿಮಿಷ ಸ್ಟ್ಯಾಂಡರ್ಡ್ ಟೈಂ ಇರುತ್ತದೆ, ನಂತರ ಬಾಗಿಲು ತೆರೆಯಿರಿ.
ಬಾಣಲೆಗೆ ವ್ಯಂಜನ ಮೆತ್ತಿಕೊಂಡಿದ್ದಾಗ : ತಣ್ಣಗಿನ ಎಣ್ಣೆಗೆ ತರಕಾರಿ ಬೆರೆಸಿ ಕೆದಕಲು ಹೋದಾಗ ಅಥವಾ ಇಡಿಯಾದ ವ್ಯಂಜನ ಮುಗಿಸಿದಾಗ ಎಷ್ಟೋ ಸಲ ಅದು ಬಾಣಲೆಗೆ ಗಡದ್ದಾಗಿ ಮೆತ್ತಿಕೊಂಡು, ಬಿಡುವುದೇ ಇಲ್ಲ. ಹೀಗಾಗದಿರಲು ಎಣ್ಣೆ ಚೆನ್ನಾಗಿ ಬಿಸಿ ಆದ ನಂತರವೇ ಹೆಚ್ಚಿದ ತರಕಾರಿ ಚೆನ್ನಾಗಿ ಹರಡಿ ಅದನ್ನು ಬಾಡಿಸಬೇಕು. ಮಧ್ಯೆ ನೀರು ಚಿಮುಕಿಸುತ್ತಾ ಬೆಂದಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.
ಅನ್ನ, ಪಲಾವ್, ಪೊಂಗಲ್ ಇತ್ಯಾದಿ ಬಿಸಿ ಮಾಡಬೇಕಾದಾಗ : ನಿಮ್ಮ ಬಳಿ ಮೈಕ್ರೋವೇವ್ ಇಲ್ಲದಿದ್ದರೆ, ಇಂಥವನ್ನು ಬಾಣಲೆಗೆ ಹಾಕಿ ಕೆದಕಿದರೆ ಅದು ಚೆನ್ನಾಗಿ ಮೆತ್ತಿಕೊಳ್ಳುವ ಸಂಭವವಿದೆ. ಅದರ ಬದಲು ಎಂದಿನಂತೆ ಕುಕ್ಕರ್‌ನ ಅಡಿಭಾಗದಲ್ಲಿ ತುಸು ನೀರಿಟ್ಟು, ಕಂಟೇನರ್‌ಗಳಿಗೆ ಇವನ್ನು ಹಾಕಿ ಒಂದು ಸೀಟಿ ಬರುವಂತೆ ಬಿಸಿ ಮಾಡಿ. ಪಲಾವ್, ಪೊಂಗಲ್ ಬೇಗ ಬಿಸಿಯಾಗುತ್ತದೆ.
ಕೇಕ್ ತಯಾರಿಸಲು ಫ್ರಿಜ್‌ನಿಂದ ಹೊರತೆಗೆದ ಬೆಣ್ಣೆ-ಹಾಲಿನ ಬಳಕೆ : ಫ್ರಿಜ್‌ನಿಂದ ನೇರವಾಗಿ ತೆಗೆದ ಬೆಣ್ಣೆ, ಹಾಲು ಬಳಸಿ ಕೇಕ್ ಮಾಡುವುದರಿಂದ ಅದು ಮೃದುವಾಗದೆ ಗಟ್ಟಿ ಆಗುವ ಸಾಧ್ಯತೆಗಳಿವೆ. ಹೀಗಾಗಿ ಕೇಕ್ ತಯಾರಿಸಲು ಈ ವಸ್ತುಗಳನ್ನು ಫ್ರಿಜ್‌ನಿಂದ ಹೊರತೆಗೆದು ಸಾಮಾನ್ಯ ತಾಪಮಾನಕ್ಕೆ ಬಂದ ನಂತರ ಕೇಕಿಗೆ ಬಳಸಬೇಕು.
ರಾಯ್ತಾಗೆ ಮೊದಲೇ ಉಪ್ಪು ಬಳಸುವುದರಿಂದ : ರಾಯ್ತಾ ತಯಾರಿಸುವಾಗ ಮೊದಲೇ ಉಪ್ಪು ಹಾಕಿಟ್ಟುಬಿಟ್ಟರೆ, ಅದು ಹುಳಿ ಆಗುತ್ತದೆ. ಆದ್ದರಿಂದ ಬಡಿಸುವಾಗ ಮಾತ್ರ, ಉಪ್ಪು ಸೇರಿಸಬೇಕು, ಮೊದಲೇ ಬೇಡ.
ಪನೀರ್ ವ್ಯಂಜನ ತಯಾರಿಸುವಾಗ ಅದು ಗಟ್ಟಿ ಆದರೆ ಅಥವಾ ಮುರಿದರೆ : ಸಾಮಾನ್ಯವಾಗಿ ಗೃಹಿಣಿಯರು ಪನೀರ್ ಗ್ರೇವಿ ಇತ್ಯಾದಿ ತಯಾರಿಸುವಾಗ, ಅದನ್ನು ಹೆಚ್ಚು ಹೊತ್ತು ಕುದಿಸುತ್ತಾರೆ. ಇದರಿಂದ ಪನೀರ್ ಗಟ್ಟಿಯಾಗುತ್ತದೆ. ಒಮ್ಮೊಮ್ಮೆ ಪನೀರ್ ಗ್ರೇವಿ/ಪಲ್ಯ ಮಾಡುವ ಮೊದಲೇ, ಪನೀರ್ ತುಂಡುಗಳನ್ನು ಒಂದು ಅಳ್ಳಕ ತಟ್ಟೆಯಲ್ಲಿರಿಸಿ ಅದರ ಮೇಲೆ ಬಿಸಿ ನೀರು (ಮುಳುಗುವಂತೆ) ಸುರಿದು, ಚಿಟಕಿ ಉಪ್ಪು, ಅರಿಶಿನ ಹಾಕಬೇಕು. ಗ್ರೇವಿ/ಪಲ್ಯ ತಯಾರಿಸುವಾಗ ಈ ನೀರನ್ನು ಬಸಿಯಿರಿ. ಇದರಿಂದ ಪನೀರ್ ತುಂಬಾ ಗಟ್ಟಿಯಾಗದೆ, ಮುರಿಯದೆ ಉಳಿಯುತ್ತದೆ.
ನಾನ್‌ಸ್ಟಿಕ್ ಕೋಟಿಂಗ್ ಬೇರ್ಪಡುವುದು : ಕೋಟಿಂಗ್ ಬೇರ್ಪಟ್ಟ ನಾನ್‌ಸ್ಟಿಕ್ ಪ್ಯಾನ್‌ನ್ನು ಬಳಸಲೇಬಾರದು. ಏಕೆಂದರೆ ಇದರಿಂದ ಫುಡ್ ಪಾಯಿಸನಿಂಗ್ ಆಗುವ ಸಾಧ್ಯತೆಗಳಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಬಿಸಿ ಪ್ಯಾನ್‌ನ್ನು ತಕ್ಷಣ ತೊಳೆಯಬೇಕೆಂಬ ಅವಸರದಲ್ಲಿ ಅದರ ಮೇಲೆ ತಣ್ಣೀರು ಸುರಿದಿಡುತ್ತೇವೆ, ಚಮಚ, ಪೋರ್ಕ್‌ನ್ನು ಒರಟಾಗಿ ಅದರಲ್ಲಿ ಬಳಸುವುದರಿಂದಲೂ ಕೂಡ.
ಮ್ಯಾರಿನೇಶನ್ ಸಮಯದಲ್ಲಿ ಪೂರ್ತಿ ಉಪ್ಪು ಹಾಕುವುದು : ಮ್ಯಾರಿನೇಶನ್ ಸಮಯದಲ್ಲಿ ಪೂರ್ತಿ ಉಪ್ಪು ಹಾಕಬೇಡಿ. ಇದರಿಂದ ಡಿಶ್‌ನ ಸೀಸನಿಂಗ್ ಸರಿಯಾಗಿ ಆಗದು. ಸದಾ ಸ್ವಲ್ಪ ಉಪ್ಪು ಮ್ಯಾರಿನೇಶನ್ ಸಂದರ್ಭದಲ್ಲಿ ಉಳಿದದ್ದು, ಬೇಯಿಸುವಾಗ ಎಂದು ಬೇರ್ಪಡಿಸಿ.
ಕೇಕ್ ಸರಿಯಾಗಿ ಆಗದಿದ್ದರೆ : ಕೇಕ್ ತಯಾರಿಸುವಾಗ ಮೈದಾವನ್ನು ಬೇಕಿಂಗ್ ಪೌಡರ್ ಜೊತೆ ಜರಡಿ ಆಡದಿದ್ದರೆ, ಕೇಕ್ ಸರಿಯಾಗಿ ಬರುವುದಿಲ್ಲ. ಆದ್ದರಿಂದ ಅಗತ್ಯವಾಗಿ 3 ಸಲ ಜರಡಿಯಾಡಿ. ಕೇಕ್ ಬೇಕ್ ಆಗುತ್ತಿರುವಾಗ ನಡುನಡುವೆ ಬೇಕೆಂದೇ ಮೈಕ್ರೋವೇವ್ ಡೋರ್ ತೆಗೆದು ನೋಡುವುದೂ ಸರಿಯಲ್ಲ.
ಕುದಿಯುತ್ತಿರುವ ವ್ಯಂಜನಕ್ಕೆ ಮೇಲಿನಿಂದ ಮಸಾಲೆ ಹಾಕುವಾಗ ಗಂಟು ಆಗುವುದು : ಕುದಿಯುತ್ತಿರುವ ವ್ಯಂಜನದಲ್ಲಿ ಒಮ್ಮೊಮ್ಮೆ ಮೇಲಿನಿಂದ ಮಸಾಲೆ ಉದುರಿಸುವಾಗ, ಅದು ಸಹಜವಾಗಿ ಬೆರೆತುಕೊಳ್ಳದೆ ಗಂಟುಗಳಾಗುವ ಸಾಧ್ಯತೆ ಇದೆ. ಮಸಾಲೆಗಳನ್ನು ಹೀಗೆ ಮೇಲಿನಿಂದ ಸೇರಿಸಬೇಕಿದ್ದರೆ, ತುಸು ನೀರಿನಲ್ಲಿ ಕದಡಿಕೊಂಡು ಹಾಕಿ.
ಸಲಾಡ್ ಚೆನ್ನಾಗಿ ಸಿದ್ಧವಾಯಿತು, ಮೊದಲೇ ಉಪ್ಪು ಸೇರಿತಲ್ಲ…. : ಮೊದಲೇ ಸಲಾಡ್ ತಯಾರಿ ಮಾಡಿಕೊಳ್ಳಿ, ತೊಂದರೆಯಿಲ್ಲ. ಆದರೆ ಬೇಗ ಉಪ್ಪು ಹಾಕಿಡಬೇಡಿ. ಅದನ್ನು ಬಡಿಸುವಾಗ ಉಪ್ಪು ಸೇರಿಸಿದರೆ ಸಾಕು, ಇಲ್ಲದಿದ್ದರೆ ಅದು ನೀರು ಬಿಟ್ಟುಕೊಳ್ಳುತ್ತದೆ.
ತರಕಾರಿ ಕತ್ತರಿಸುವ ಚಾಕು ಮೊಂಡಾದಾಗ : ಸಲಾಡ್, ಪಲ್ಯ ಯಾವುದಕ್ಕೇ ಆಗಲಿ, ತರಕಾರಿ ಸಮರ್ಪಕವಾಗಿ ಹೆಚ್ಚಿದ್ದರೆ ಮಾತ್ರ ಒಳ್ಳೆಯದು. ಇಂಥ ಕಡೆ ಮೊಂಡಾದ ಚಾಕು ಬಳಸಲೇಬಾರದು. ಜೊತೆಗೆ ಮಣೆ ಅಥವಾ ಚಾಪಿಂಗ್ ಬೋರ್ಡ್ ಮೇಲೆ ಮಾತ್ರ ಮಾಡಬೇಕು.
ಕೃತಕ ಬಣ್ಣಗಳ ಬಳಕೆ : ಆರೋಗ್ಯದ ದೃಷ್ಟಿಯಿಂದ ಅಡುಗೆಗೆ ಕೃತಕ ಬಣ್ಣಗಳ ಬಳಕೆ ಒಳ್ಳೆಯದಲ್ಲ. ಹಸಿರು, ಗುಲಾಬಿ, ಹಳದಿ ಇತ್ಯಾದಿಗಳಿಗೆಲ್ಲ ತರಕಾರಿ ರಸದ ಬಣ್ಣ, ಅರಿಶಿನ, ಕೇಸರಿ ಇತ್ಯಾದಿ ನೈಸರ್ಗಿಕ ಸಾಮಗ್ರಿ ಬಳಸಿರಿ. ಇದನ್ನೂ ನಾಜೂಕಾಗಿ ಬಳಸಿರಿ.
– ಕೆ. ನೀರಜಾ