ಕಥೆ – ಎಚ್‌. ಶೋಭಾ ಕಾಮತ್‌ 

ಆತ್ಮೀಯ ನೆರೆಹೊರೆಯವರಾಗಿ ಬಹು ಕಾಲದ ಗೆಳೆತನದ ನಂತರ, ಗಿಡಮರಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿದ್ದರೂ, ಅವಕ್ಕೆ ಅನಾಹುತ ಎದುರಾದಾಗ ಗಾಬರಿಗೊಂಡ ಲೇಖಕಿ ಗಿಡಮರ ಸಂರಕ್ಷಿಸಿಕೊಂಡಿದ್ದು ಹೇಗೆ…….?

ನಾನು ಸೋದರತ್ತೆಯ ಮಗನನ್ನೇ ಮದುವೆಯಾಗಿದ್ದೆ. ನಲ್ವತ್ತು ವರ್ಷಗಳ ಹಿಂದೆ ಬಿ.ಕಾಂ ಪದವೀಧರೆಯಾಗಿದ್ದರೂ, ಉದ್ಯೋಗವನ್ನರಸದೆ ಪತಿಯ ಇಚ್ಛೆಯಂತೆ ಗೃಹಿಣಿ ಪಟ್ಟವನ್ನು ಮೆಚ್ಚಿಕೊಂಡಿದ್ದೆ. ಪತಿ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಯಾದ್ದರಿಂದ ವೈಭೋಗದ ಜೀವನ ಸಾಧ್ಯವಿಲ್ಲದಿದ್ದರೂ, ಉತ್ತಮ ಮಟ್ಟದಲ್ಲಿ ದಿನ ಕಳೆಯುತ್ತಿದ್ದೆ. ಹೆಚ್ಚಿನ ಉಳಿತಾಯಕ್ಕೆ ಸಾಧ್ಯವಿಲ್ಲದಿದ್ದರೂ ಯಾವುದಕ್ಕೂ ಕಡಿಮೆ ಮಾಡುತ್ತಿರಲಿಲ್ಲ ನನ್ನವರು.1988-89ರ ಕಾಲವದು. ಆರ್ಥಿಕ ಪ್ರಗತಿ ಇಲ್ಲದ್ದರಿಂದ ವೇತನ ಕಡಿಮೆ. ತಿಂಗಳ ಖರ್ಚು ಕೂಡ ಅತಿರೇಕವಾಗುತ್ತಿರಲಿಲ್ಲ. ಪತಿಯೊಂದಿಗೆ ಕೆಲಸ ಮಾಡುತ್ತಿದ್ದವರಲ್ಲಿ ಕಡಿಮೆ ಸಂಬಳ ಪಡೆಯುತ್ತಿದ್ದ ಸಿಬ್ಬಂದಿಗಳು ಬ್ಯಾಂಕ್‌ನಿಂದ ಸಾಲ ಪಡೆದು ಮನೆ ಕಟ್ಟುತ್ತಿರುವಾಗ ಅಧಿಕಾರಿಯಾದ ತಾನೇಕೆ ಮನೆ ಕಟ್ಟಬಾರದೆಂಬ ಮನಸ್ಸಾಯ್ತು ನಮ್ಮವರಿಗೆ. ಇವರ ದೊಡ್ಡ ಅಣ್ಣ ಕೂಡ ಅದೇ ಆಲೋಚನೆಯಲ್ಲಿದ್ದರು. ಅಂತೂ ಆ ವರ್ಷದ ಮಳೆಗಾಲದ ಶುಭ ಮುಹೂರ್ತದಲ್ಲಿ ಇಬ್ಬರ ಮನೆಗಳಿಗೂ ಅಡಿಗಲ್ಲು ಇಟ್ಟು, ಗೃಹಸಾಲ, ಬಂಗಾರದ ಸಾಲ, ಸಂಬಳದ ಆಧಾರದಲ್ಲಿ ಹೆಚ್ಚು ಬಡ್ಡಿ ಸಾಲವೆಂದು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ 5 ಸೆಂಟ್ಸ್ ಜಾಗದಲ್ಲಿ ಮನೆ ಮಾಲೀಕರಾದೆವು.

ನಾವು ಬೇರೆ ಊರಿನಲ್ಲಿರುವುದರಿಂದ ಮನೆಯ ಉಸ್ತುವಾರಿ, ತೆರಿಗೆ ಪಾವತಿ, ಬಾಡಿಗೆದಾರರನ್ನು ಹುಡುಕುವುದು, ಬಾಡಿಗೆ ವಸೂಲಿ, ಹೂಗಿಡಗಳ ನೆಡುವಿಕೆ, ಪೋಷಣೆ, ಆರೈಕೆ ಎಲ್ಲವನ್ನೂ ಇವರ ಅಣ್ಣನೇ ನೋಡಿಕೊಳ್ಳುತ್ತಿದ್ದರು. ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದಾಗಿ ಸ್ವಂತ ಮನೆಯಲ್ಲಿ ನಿಂತು ಕಾಲ ಕಳೆಯಬೇಕೆಂಬ ಭಾವನೆ ನಮ್ಮಿಬ್ಬರಿಗೂ ಬರಲೇ ಇಲ್ಲ. ವರ್ಗಾವಣೆಯ ನಿಮಿತ್ತ ಊರೂರು ಸುತ್ತತೊಡಗಿದೆವು. ಆ ಕಾಲದಲ್ಲಿ ವೇತನ ಕಡಿಮೆ. ಹಲವು ಸಾಲಗಳಿಗೆ ಕಂತಿನಂತೆ ಹಣ ಪಾವತಿ ಮಾಡುತ್ತಿದ್ದುದರಿಂದ ತಿಂಗಳ ಮನೆ ಬಾಡಿಗೆ ಹಣ ಅತ್ಯವಶ್ಯಕವಾಗಿತ್ತು. ಬಾಡಿಗೆ ಬರುವುದು ತಡವಾದರೆ ನಮ್ಮವರ ದಿನಚರಿಯಲ್ಲಿ ಅಲ್ಲೊಲಕಲ್ಲೋಲವಾಗುತ್ತಿತ್ತು.

ಸಿರ್ಸಿ, ಯಲ್ಲಾಪುರಗಳಂತಹ ತಕ್ಕಮಟ್ಟಿಗೆ ದೊಡ್ಡ ಊರು, ಮುಂಡಗೋಡುದಂತಹ ಸಾಮಾನ್ಯ ಊರುಗಳನ್ನೂ ಸುತ್ತಾಡಿದೆವು. ಎಲ್ಲಾ ಕಡೆಯೂ ಅನುಕೂಲವಾದ ಒಳ್ಳೆಯ ಬಾಡಿಗೆ ಮನೆಗಳು ಸಿಗುತ್ತಿದ್ದವು. ಮಾಲೀಕರು ಒಳ್ಳೆಯವರೇ ಆಗಿರುತ್ತಿದ್ದರು. ಅವರೊಂದಿಗೆ ನಮ್ಮ ಬಾಂಧವ್ಯ ಹೇಗಿರುತ್ತಿತ್ತೆಂದರೆ ಈಗಲೂ ದೂರವಾಣಿ ಮುಖಾಂತರ ಮಾತಾಡುತ್ತಿರುತ್ತೇವೆ. ನಾನು ಬಾಡಿಗೆ ಮನೆಯಲ್ಲಿದ್ದರೂ, ಮನೆಯನ್ನು ಚೆನ್ನಾಗಿ ಚೊಕ್ಕವಾಗಿ ಇಟ್ಟುಕೊಳ್ಳುತ್ತಿದ್ದೆ. ಬಾಡಿಗೆ ಮನೆಯಾದರೂ ನಮಗೆ ನಮ್ಮದೇ ಮನೆ ಎಂಬ ಭಾವನೆ ಇತ್ತು. ಎಲ್ಲಾ ಕಡೆ ಮನೆ ಮಾಲೀಕರು ನಾವು ಮನೆ ಇಟ್ಟುಕೊಳ್ಳುವ ರೀತಿ ಮೆಚ್ಚಿಕೊಳ್ಳುತ್ತಿದ್ದರು, ಜೊತೆಗೆ ನಮ್ಮೆದುರೇ ಇತರರನ್ನು ಹಳಿಯುತ್ತಿದ್ದರು.

ನಮ್ಮವರ ನಿವೃತ್ತಿ ಸಮೀಪವಾಗುತ್ತಿದ್ದಂತೆ ಮಂಗಳೂರಿಂದ 70 ಕಿ.ಮೀ. ದೂರದ ಹಳ್ಳಿಗೆ ಬಂದೆವು. ಅನುಕೂಲದ ದೃಷ್ಟಿಯಿಂದ ಉಡುಪಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡೆವು. ವಯಸ್ಸಿನ ನಿಮಿತ್ತ ಕಾಲು ಗಂಟಿನ ನೋವು ಆರಂಭವಾಗಿ ಮೊದಲಿನ ತರಹ ಮನೆ ಕೆಲಸ  ಮಾಡಲಾಗುತ್ತಿರಲಿಲ್ಲ. ಮೊದಲಿನಂತೆ ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಲು ಕಷ್ಟವಾಗುತ್ತಿತ್ತು. ಕೆಲಸದವಳು ಚೆನ್ನಾಗಿದ್ದರೆ ಬಚಾವ್.

ಮಗನ ವಿದ್ಯಾಭ್ಯಾಸಕ್ಕಾಗಿ ನಿವೃತ್ತಿ ಆದ ಮೇಲೂ ಉಡುಪಿಯಲ್ಲೇ ಇದ್ದೆವು. ಅದೊಂದು ದಿನ ನಮ್ಮವರ ಸ್ನೇಹಿತ ಗುಜ್ಜಾಡಿ ದಾರಿಯಲ್ಲಿ ಸಿಕ್ಕಿದರು. ಚಹಾಗೆಂದು ಪಕ್ಕದಲ್ಲಿದ್ದ ತಮ್ಮ ಮನೆಗೆ ಕರೆದರು. ಅವರ ಮನೆಗೆ ಹೋದೆವು. ಹೆಚ್ಚುಕಡಿಮೆ ನಮ್ಮ ಮನೆ ಕಟ್ಟಿದ ಸಮಯದಲ್ಲೇ ಅವರೂ ಮನೆ ಕಟ್ಟಿದ್ದರು. ಈಗ ಇನ್ನೂ ಕೆಲವು ಬದಲಾವಣೆಗಾಗಿ ಹಲವು ಲಕ್ಷ ಖರ್ಚು ಮಾಡಿದ್ದಾಗಿ ಹೇಳಿದರು. ಎಲ್ಲಾ ವ್ಯವಸ್ಥೆ ಇದ್ದು ಯಾವೊಂದು ತಾಪತ್ರಯ ಇಲ್ಲವೆಂದು ಹೆಮ್ಮೆಪಟ್ಟರು. ಮಾತಿನ ಮಧ್ಯೆ ನಮ್ಮ ಮನೆಯ ಬಗ್ಗೆ ಕೇಳಿದರು. ನಮ್ಮವರು ವಿಷಯ ತಿಳಿಸಿದ್ದೇ ಆಶ್ಚರ್ಯದಿಂದ ಎಂಥದು ಮಾರಾಯ ನೀವು ಸ್ವಂತ ಮನೆ ಕಟ್ಟಿ ಮೂವತ್ತು ವರ್ಷವಾದರೂ ಒಂದು ದಿನ ನಿಮ್ಮ ಮನೆಯಲ್ಲಿ ವಾಸವಿಲ್ಲವೆಂದರೆ? ಎನ್ನುತ್ತಾ ಹೆಂಡತಿಗೂ ವಿಷಯ ತಿಳಿಸಿದರು. ಮನೆ ಕಟ್ಟಿ ಐದಾರು ವರ್ಷದವರೆಗೂ ಕೆಲಸ ಬೇರೆ ಊರಿನಲ್ಲಿದ್ದರಿಂದ ಪ್ರತಿ ದಿನ ಬಸ್ಸಿನಲ್ಲಿ ಓಡಾಡುತ್ತಿದ್ದೆ. ಉತ್ತರ ಭಾರತಕ್ಕೆ ವರ್ಗವಾದಾಗ ಬಾಡಿಗೆಗೆ ಕೊಟ್ಟೆ, ಸ್ವಯಂನಿವುತ್ತಿ ತೆಗೆದುಕೊಂಡು ಪುನಃ ಕಟ್ಟಿದ ಮನೆಗೇ ಬಂದೆವೆಂದು ತಿಳಿಸಿದರು.

ಸ್ವಂತ ಮನೆ ಕಟ್ಟಿ ಸ್ವಂತ ಮನೆಯಲ್ಲಿ ವಾಸ ಮಾಡಲಿಲ್ಲವೆಂದು ಮನಸ್ಸಿಗೆ ಈವರೆಗೆ ಅಸಮಾಧಾನವಾಗಿಲ್ಲ. ಅಲ್ಲದೆ, ಎಲ್ಲಾ ಕಡೆ ಒಳ್ಳೆಯ ಮನೆ ಮಾಲೀಕರೇ ಸಿಕ್ಕಿದ್ದರು. ತೃಪ್ತಿಯಿಂದ ಇದ್ದೆವು ಎಂದು ಗುಜ್ಜಾಡಿಗೆ ಹೇಳಿದರು. ನಮ್ಮವರಿಗೆ ಗುಜ್ಜಾಡಿ ಹೇಳಿದ ವಿಷಯ ಹೌದೆನಿಸಿದರೂ ನನಗೆ ಸ್ವಲ್ಪ ಬೇಸರವೇ ಅಸಮಾಧಾನವೇ ಇಲ್ಲವೆಂದು ಅವರಿಗೆ ಸ್ಪಷ್ಟಪಡಿಸಿದೆ.

ಮಗನ ವಿದ್ಯಾಭ್ಯಾಸ ಮುಗಿದು ಬೆಳಗಾವಿ ಅಥವಾ ಮೈಸೂರಲ್ಲಿ ಕೆಲಸ ಸಿಗುವುದರಲ್ಲಿತ್ತು. ಅವನ ಜೊತೆಯೇ ಹೋಗುವುದೆಂದು ನಿರ್ಧರಿಸಿದೆವು. ಏತನ್ಮಧ್ಯೆ ಮಂಗಳೂರಲ್ಲಿಯೇ ಉದ್ಯೋಗಾವಕಾಶ ದೊರೆಯಿತು. ಸಂಬಳಕ್ಕೆ ಪ್ರಾಮುಖ್ಯತೆ ಕೊಡದೆ ಅನುಕೂಲತೆಗೆ ಹೆಚ್ಚು ಒತ್ತು ಕೊಟ್ಟು ಮಂಗಳೂರಿನ ಕೆಲಸವನ್ನು ಒಪ್ಪಿಕೊಂಡ ಮಗ. ಇದ್ದ ಬಾಡಿಗೆದಾರಿಗೆ ವಿಷಯ ತಿಳಿಸಿದೆವು. ಅವರು ಒಪ್ಪಿಕೊಂಡು ಹೇಳಿದ ಸಮಯಕ್ಕೆ ಸರಿಯಾಗಿ ಮನೆ ಖಾಲಿ ಮಾಡಿಕೊಟ್ಟರು. ಮನೆ ತಕ್ಕ ಮಟ್ಟಿಗೆ ಸುಸ್ಥಿತಿಯಲ್ಲಿತ್ತು. ಚಿಕ್ಕಪುಟ್ಟ ಬದಲಾವಣೆಗಳಿದ್ದರೂ ನಂತರ ನೋಡಿಕೊಂಡರಾಯ್ತು ಎಂದು ಇದ್ದ ಸ್ಥಿತಿಯಲ್ಲೆ ವಾಸ್ತವ್ಯಕ್ಕೆ ಹೋದೆವು. ಮನೆ ಖರ್ಚಿಗೆ ಬೇಕಾದ ತೆಂಗಿನಕಾಯಿ ಅಣ್ಣನವರು ನೆಟ್ಟು ಬೆಳೆಸಿದ ತೆಂಗಿನಮರದಿಂದ ಸಿಗುತ್ತಿತ್ತು. ದೈನಂದಿನ ಪೂಜೆಗೆ ಅಣ್ಣ ಮತ್ತು ಹಿಂದಿನ ಬಾಡಿಗೆದಾರರು ನೆಟ್ಟು ಬೆಳೆಸಿದ ದಾಸವಾಳ, ಸುಗಂಧಿ, ರತ್ನಗಂಧಿ, ಜಾಜಿ ಹೂಗಳು, ತುಳಸಿ ಎಲ್ಲ ಸಿಗುತ್ತಿತ್ತು. ಗಿಡದಲ್ಲಿ ಬಿಟ್ಟ ಹೂಗಳಿಗೆ ಚಿಟ್ಟೆ, ಪತಂಗ, ದುಂಬಿಗಳು ಮಕರಂದ ಹೀರಲು ಬಂದು ಅ ಹೂವಿಂದ ಹೂವಿಗೆ ಹಾರುವ ನೋಟ ಕಾಣಿಸುತ್ತಿತ್ತು. ಅಂತಹ ಸವಿ ಅನುಭವಿಸದೆ ಹಲವಾರು ವರ್ಷಗಳಾಗಿತ್ತು. ಅದೂ ಅಲ್ಲದೆ ಬಣ್ಣ ಬಣ್ಣದ ಪತಂಗಗಳನ್ನು ನೋಡದೆ ಹಲವಾರು ವರ್ಷಗಳಾಗಿದ್ದವು.

ನಮ್ಮ ಮನೆಯ ಹಿಂದಿನ ಮನೆಯಲ್ಲಿ ಪ್ರಭು ಫ್ಯಾಮಿಲಿ ಇತ್ತು. ಅವರಿಬ್ಬರೂ ನಮಗಿಂತ ಸ್ವಲ್ಪ ವಯಸ್ಸಾದವರು, ಅವರ ಮಕ್ಕಳು ನೌಕರಿಯಲ್ಲಿದ್ದು ಆಗಾಗ ಸಂಸಾರ ಸಮೇತ ಬಂದು ಇಲ್ಲಿದ್ದು ಹೋಗುತ್ತಿದ್ದರು. ಪ್ರಭು ದಂಪತಿಗಳು ಮಕ್ಕಳ ಬಳಿ ಹೋಗುವುದು ಕಡಿಮೆ. ಪ್ರಭುಗೆ ಎಪ್ಪತ್ತರ ಆಸುಪಾಸಾದರೂ ತೋಟಗಾರಿಕೆಯಲ್ಲಿ ವಿಪರೀತ ಹುಚ್ಚು. 5 ಸೆಂಟ್ಸ್ ಜಾಗದಲ್ಲಿ ಮನೆಯ ಸುತ್ತ ಎಲ್ಲಾ ವಿವಿಧ ಹೂಗಿಡಗಳನ್ನು ಬೆಳೆಸಿದ್ದರು. ಮನೆಯ ಹಿಂಬದಿ ಒಂದು ಕಡೆ ಪಾರಿಜಾತ ಮತ್ತೊಂಡು ಕಡೆ ನಂದಿಬಟ್ಟಲು ಗಿಡಗಳು ಚೆನ್ನಾಗಿ ಬೆಳೆದು ಮರದಂತೆ ಕಾಣುತ್ತಿದ್ದವು. ಅವೆರಡೂ ಮರಗಳು ನಮ್ಮ ಮನೆಯ ಹಿಂಭಾಗದಲ್ಲಿ ಚೆನ್ನಾಗಿ ಆವರಿಸಿಕೊಂಡಿದ್ದವು.

ಪಾರಿಜಾತ ಹೂ ಬಿಟ್ಟಾಗಂತೂ ನಮ್ಮ ಕಾಂಪೌಂಡ್‌ ಹಿಂಭಾಗ ಸುಗಂಧಭರಿತವಾಗುತ್ತಿತ್ತು. ನಂದಿಬಟ್ಟಲು ವರ್ಷವಿಡೀ ಹೂ ಬಿಡುವ ಗಿಡ. ಹಳೆ ಹೂವುಗಳ ಪುಷ್ಪ ವೃಷ್ಟಿಯ ಫೋಟೋ ಸೆರೆಹಿಡಿಯುವುದು ನನ್ನ ಮಗನ ಕೆಲಸವಾಯ್ತು. ಮನೆಯ ತಾರಸಿಯಲ್ಲಿ ತಿಂಗಳ ಬೆಳಕಿನಲ್ಲಿ ಹೂ ಉದುರುವ ನೋಟ, ಗಾಳಿಗೆ ಅವು ಹಾರಾಡುವ ಚೆಂದ ನೋಡಲು ರಮ್ಯವಾಗಿತ್ತು. ಅದನ್ನು ನೋಡುವಾಗ ಕೆಲವೊಮ್ಮೆ ಸಿನಿಮಾ ದೃಶ್ಯಗಳು ನೆನಪಾಗುತ್ತಿತ್ತು. ಆ ಹೂಗಿಡಗಳಿಂದ ನಮ್ಮ ಕುಟುಂಬಕ್ಕಾಗುವ ಮನೋಲ್ಲಾಸದ ಬಗ್ಗೆ ಆಗಾಗ ಪ್ರಭು ದಂಪತಿಗಳಿಗೆ ಧನ್ಯವಾದ ಹೇಳುತ್ತಿದ್ದೆವು.

ಇಂತಹ ರಮಣೀಯ ದೃಶ್ಯ, ಆನಂದ ವರ್ಷವಿಡೀ ಸಿಗುವಾಗ ಗಿಡಗಳಿಂದ ಬೀಳುವ ಹಣ್ಣೆಲೆ, ಬಾಡಿದ ಹೂವಿನ ಕಸ ನಗಣ್ಯ. ಒಮ್ಮೆ ಪ್ರಭುರವರ ಪತ್ನಿ ಆ ಬಗ್ಗೆ ಪ್ರಸ್ತಾಪಿಸಿದಾಗ  ಪ್ರಭು ಮಾಯಿ, ಹಣ್ಣೆಲೆ, ಬಾಡಿದ ಹೂಗಳು ಕಸವಲ್ಲ. ನಾನು ಅವನ್ನೆಲ್ಲ ಒಟ್ಟು ಮಾಡಿ ತೆಂಗಿನಮರದ ಬುಡದಲ್ಲಿ ಹಾಕುವೆ. ಮರಕ್ಕೆ ಒಳ್ಳೆ ಗೊಬ್ಬರ ಆಗುತ್ತದೆ, ನೀವು ಅದರ ಬಗ್ಗೆ ಆಲೋಚಿಸಬೇಡಿರೆಂದು ತಿಳಿಸಿದೆ. ಅದೊಂದು ದಿನ ನಾನು, ಪ್ರಭುಗಳು ನಮ್ಮ ತೋಟದಲ್ಲಿ ಅವರ ಮರಗಳಿಂದ ಉದುರಿದ ಕಸವನ್ನೆಲ್ಲ ಒಟ್ಟು ಮಾಡಿ ತೆಗೆಯುವುದನ್ನು ನೋಡಿದೆ.  ನಾನಂದೆ  ಪ್ರಭು ಮಾಯಿ, ನಾವು ಬರುವ ಮುಂಚೆ ಹೇಗಿತ್ತೊ ನನಗೆ ಗೊತ್ತಿಲ್ಲ. ಅದು ನನಗೆ ಬೇಡ. ಈಗ ಮಾತ್ರ ಇಂತಹ ಕೆಲಸ ಮಾಡಬೇಡಿ. ನಿಮ್ಮ ಎರಡೂ ಮರಗಳಿಗೆ ನಾವೆಷ್ಟು ಋಣಿಗಳೆಂದು ಹೇಳಲಸಾಧ್ಯ. ಕಸದ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಪ್ರಭು ಮಾಯಿಗೆ ಈ ಬಗ್ಗೆ ನಾನು ಹೇಳಿದ್ದೇನೆ. ಪ್ರತಿದಿನ ನನ್ನ ಸ್ನಾನದ ಮುಂಚೆ ಕಸ ತೆಗೆಯುವ ರೂಢಿ ಮಾಡಿಕೊಂಡಾಗಿದೆ. ಮಳೆಗಾಲದಲ್ಲಿ ಮಳೆ ಬರುತ್ತಿದ್ದರೆ ಆ ಸಮಯ ಬದಲಾವಣೆ ಆಗುತ್ತದೆ. ನೀವೇ ಈ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಡಿರೆಂದು ಸಮಾಧಾನಪಡಿಸಿ ಕಳುಹಿಸಿದೆ.

ಇದರಿಂದ ಎರಡೂ ಮನೆಯವರು ತುಂಬಾ ಹತ್ತಿರವಾದೆವು. ಪ್ರಭು ಮಾಯಿ ಅವರ ಮನೆಯ ತೋಟದ ಕನಕಾಂಬರ, ಮಲ್ಲಿಗೆ ಇನ್ನಿತರ ಹೂಗಳನ್ನು ಆಗಾಗ ನಮಗೆ ಕೊಡುತ್ತಿದ್ದರು. ಅವರ ಪಾರಿಜಾತ ಹೂಗಳನ್ನು ನಾವೇ ಕಿತ್ತು ಅವರಿಗೆ ಕೊಡುತ್ತಿದ್ದೆವು. ಎರಡೂ ಮನೆಯ ಬಾಂಧವ್ಯ ಮುಂದುವರಿದು ಅಪರೂಪದ ಖಾದ್ಯಗಳು ಆಚೆ ಈಚೆ ಆಗತೊಡಗಿದವು. ಪ್ರಭು ಕುಟುಂಬ ರಾತ್ರಿಯಲ್ಲಿ ಮನೆಯಲ್ಲಿ ಇರದ ಸಂದರ್ಭದಲ್ಲಿ ನಮಗೆ ಮುನ್ಸೂಚನೆ ಕೊಡುತ್ತಿದ್ದರು.

ನವರಾತ್ರಿಯ ಹಬ್ಬದ ಸಮಯ. ನಮ್ಮ ಮನೆಗೂ ಪ್ರಭು ದಂಪತಿಗಳ ಮನೆಗೂ ನೆಂಟರಿಷ್ಟರು ಬಂದು ಹೋಗುತ್ತಿದ್ದರು. ನಮ್ಮ ಮನೆಗೆ ಬಂದ ಹೆಂಗಸರು ಕಾಂಪೌಂಡ್‌ ಸುತ್ತುತ್ತಾ ಹೂ ಗಿಡಗಳನ್ನು ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದರು. ಇಡೀ ನವರಾತ್ರಿ ಮುಗಿಯುವವರೆಗೂ ನಮಗೆ ಮನೆ ಬಿಟ್ಟ ಹೊರಗೆ ಹೋಗಲಾಗಲಿಲ್ಲ. ಅದೊಂದು ರಾತ್ರಿ ಪ್ರಭುಗಳ ಮನೆಯಲ್ಲಿ ದೀಪ ಇರಲಿಲ್ಲ. ಮಲಗುವ ಸಮಯದವರೆಗೂ ದೀಪದ ಸುಳಿವಿಲ್ಲ. ಪ್ರಭು ದಂಪತಿಗಳು ನಮಗೇಕೆ ಏನೂ ತಿಳಿಸಲಿಲ್ಲವೆನ್ನುವುದು ನನ್ನ ಕಳವಳ. ನೆಂಟರ ಗಡಿಬಿಡಿ, ಕೆಲಸದ ಆಯಾಸ, ದಣಿವಿನಿಂದಾಗಿ ಪ್ರಭು ಮಾಯಿಯನ್ನೂ ಫೋನ್‌ನಲ್ಲೂ ಸಂಪರ್ಕಿಸಲಾಗಲಿಲ್ಲ. ಅದೇ ನನ್ನಿಂದಾದ ಮಹತ್ತರ ತಪ್ಪು.

ಮಾರನೇ ದಿನ ನಾನು ತೋಟದ ಹಿಂಬಾಗಕ್ಕೆ ಹೋದೆ. ಕೆಲಸದವನೊಬ್ಬ ಪ್ರಭುಗಳ ಮನೆ ಬಳಿ ಕೆಲಸಕ್ಕೆ ತಯಾರಾಗುತ್ತಿದ್ದ. ಕೆಲಸವೇನೆಂದು ವಿಚಾರಿಸಿದೆವು, ಮರ/ಗಿಡಗಳನ್ನು ಕಡಿಯಲು ತಿಳಿಸಿದ್ದಾರೆಂದ. ನಾನು ಕಂಗಾಲಾದೆ! ಯಾವ ಗಿಡಗಳೆಂದು ವಿಚಾರಿಸಿದೆ. ಪಾರಿಜಾತ ಮತ್ತು ನಂದಿಬಟ್ಟಲು ಮರಗಳೆರಡನ್ನು ಮುಟ್ಟಿ ತೋರಿಸಿದ. ಗಾಬರಿಯಿಂದ ನಾನು ನಮ್ಮವರಿಗೆ ವಿಷಯ ತಿಳಿಸಿದೆ.

ಒಮ್ಮಿಂದೊಮ್ಮೆಲೆ ಪ್ರಭುಗಳು ಹೀಗೇಕೆ ನಿರ್ಧಾರ ತೆಗೆದುಕೊಂಡರೆಂದು ತಿಳಿಯದಾಯ್ತು.  ನಮ್ಮವರು ಆಳಿನೊಡನೆ ಮಾತನಾಡಿ ಕೂಲಿ ವಿವರ ಕೇಳಿ, ಬಂದುದಕ್ಕೆ ಕೂಲಿಕೊಟ್ಟು ಅವನನ್ನು ಸಾಗಹಾಕಿದರು.

ಅಷ್ಟರಲ್ಲಿ ಪ್ರಭು ಮಾಯಿಗೆ ಫೋನ್‌ ಮಾಡಿದೆ. ದಂಪತಿಗಳು ಬಸ್‌ನಲ್ಲಿದ್ದ ಕಾರಣ ಮಾತನಾಡಲು ಆಗುವುದಿಲ್ಲವೆಂದು ಹತ್ತಿರದ ನಿಲ್ದಾಣದಲ್ಲಿದ್ದೇವೆಂದು ತಿಳಿಸಿದರು. ಅರ್ಧ ಗಂಟೆ ನಂತರ ಪ್ರಭು ದಂಪತಿಗಳು ಮನೆಗೆ ಬಂದರು. ನಾನು ಪ್ರಭು ಮಾಯಿಯವರೊಡನೆ ಮರ ಕಡಿಯುವ ಬಗ್ಗೆ ವಿಚಾರಿಸಿದೆ. ಉತ್ತರವಾಗಿ ಪ್ರಭು ಮಾಯಿ  ಹೌದು ಶೋಭಾ, ನಿಮಗೆ ಅವುಗಳಿಂದಾಗಿ ತುಂಬಾ ಉಪದ್ರವವಾಗುತ್ತಿದೆ. ಅದಕ್ಕಾಗಿ ನನ್ನವರಿಗೆ ತಡೆಯಲಾಗಲಿಲ್ಲ. ಆಳನ್ನು ಕರೆದು ದರ ನಿಗದಿ ಮಾಡಿ ಜವಾಬ್ದಾರಿ ಕೊಟ್ಟಿದ್ದೆವು. ಇಷ್ಟರೊಳಗೆ ಅವನು ಕೆಲಸ ಪೂರ್ತಿ ಮಾಡಬೇಕಿತ್ತು ಎನ್ನುವಾಗ ನನ್ನ ತಲೆ ಮೇಲೆ ಬಂಡೆ ಕಲ್ಲು ಹಾಕಿದ ಹಾಗಾಯ್ತು. ನಾನೆಂದೆ, ಪ್ರಭು ಮಾಯಿ, ಹಾಗೇಕೆ ಹೇಳುತ್ತೀರಿ? ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮೆಯರ ಪಾರಿಜಾತದ ಕಥೆಯಂತೆ. ಹೂವಿನ ಭಾಗ್ಯ ರುಕ್ಮಿಣಿಯಂತೆ ನಮಗೆಂದು ಯಾವಾಗಲೂ ಹೇಳುತ್ತಿದೆ. ಬಾಡಿದ ಎಲೆ, ಹೂಗಳೆಲ್ಲ  ರಸಗೊಬ್ಬರವಾಗುತ್ತಿದೆ. ನಾವಿರುವವರೆಗೆ ಗಿಡದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರೆಂದು ಪ್ರಭುಗಳಿಗೆ ತಿಳಿಸಿದ್ದೇವೆ. ಇಷ್ಟೆಲ್ಲಾ ಹೇಳಿಯೂ ನಮಗೆ ಉಪದ್ರವವೆಂದು ನಿಮ್ಮ ತಲೆಗೆ ಹೇಗೆ ಹೋಯ್ತೆಂದು ನಮಗೆ ತಿಳಿಯುತ್ತಿಲ್ಲ ದಯವಿಟ್ಟು ನಾವಿರುವವರೆಗೂ ಮರಗಳನ್ನು ಕಡಿಯಬಾರದೆಂದು ಇಬ್ಬರ ಕಾಲಿಗೆರಗಿ ಬೇಡಿಕೊಂಡೆ. ಪ್ರಭು ದಂಪತಿಗಳು ಕಂಗಾಲಾದರು.

ಆದದ್ದು ಇಷ್ಟು.ನಮ್ಮ ಮನೆಗೆ ಬಂದ ನೆಂಟರು ಕಾಂಪೌಂಡನಲ್ಲಿ ತಿರುಗಾಡುತ್ತಾ ಮರದ ಬಳಿ ನಿಂತು ಮರದಿಂದುರುವ ಕಸದ ಬಗ್ಗೆ ಅವರವರೆ ಮಾತಾಡಿಕೊಳ್ಳುವಾಗ ಪ್ರಭುಗಳ ಮೊಮ್ಮಕ್ಕಳು, ಅವರ ಗೆಳಯರು ಅದನ್ನು ಕೇಳಿ ಅಪಾರ್ಥ ಮಾಡಿಕೊಂಡು ನಾವೇ ದೂರುತ್ತಿದ್ದೇವೆಂದು ಪ್ರಭುಗಳಿಗೆ ತಿಳಿಸಿರಬೇಕು. ಪ್ರಭುಗಳಿಗಂತೂ ಎದುರು ಕೋಪ, ಹೆಂಡತಿಗೂ ವಿಷಯ ತಿಳಿಸದೆ ಖಡಕ್‌ ನಿರ್ಧಾರ ತೆಗೆದುಕೊಂಡು ನಿಧಾನವಾಗಿ ಪತ್ನಿಗೆ ತಿಳಿಸಿರಬೇಕು. ಅಂತೂ ಕಡೆಗೆ ಎಲ್ಲ ಸುಖಾಂತ್ಯವಾಯ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ