ಮಿನಿ ಕಥೆ – ಪ್ರೀತಿ ಆರ್. ಮುಧೋಳ
ಸುರೇಶ ಮತ್ತು ಸುಧಾಳ ಮದುವೆಯನ್ನು ಗುರುಹಿರಿಯರು ನಿಶ್ಚಯಿಸಿದ್ದರು. ಸುಧಾಳಿಗೆ 22 ವರ್ಷ, ಸುರೇಶನಿಗೆ 28 ವರ್ಷ. ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದುದ್ದರಿಂದ ಮದುವೆಯನ್ನು ಇಬ್ಬರಿಗೂ ಅನುಕೂಲವಾಗುವಂತೆ ಡಿಸೆಂಬರಿನಲ್ಲಿ ಇಟ್ಟುಕೊಂಡರೆ ರಜೆ ಸಿಗಲು ಸರಳವಾಗುವುದೆಂದು ಎರಡೂ ಪರಿವಾರದವರು ಡಿಸೆಂಬರ್ 25 ಕ್ಕೆ ನಿಗದಿಪಡಿಸಿದ್ದರು.
ಮದುವೆಗೆ ಇನ್ನೂ 8 ತಿಂಗಳಿತ್ತು. ಇಬ್ಬರ ಆಫೀಸು ಒಂದೇ ಕಡೆ ಇದ್ದುದ್ದರಿಂದ ಸುರೇಶ ಹಾಗೂ ಸುಧಾ ಇಬ್ಬರೂ ಒಟ್ಟಿಗೆ ಆಫೀಸಿಗೆ ಹೋಗಿ ಬರುತ್ತಿದ್ದರು. ಒಂದೇ ವಾರದಲ್ಲಿ ಇಬ್ಬರಲ್ಲಿ ಪ್ರೀತಿ ಅಂಕುರಿಸಿತು. ಸುರೇಶನು ವರದಕ್ಷಿಣೆ ಇಲ್ಲದೆಯೇ ಮದುವೆಯಾಗುತ್ತೇನೆಂದದ್ದು ಸುಧಾಳಿಗೆ ಬಹಳ ಹಿಡಿಸಿತ್ತು.
ಒಂದು ದಿನ ಇದ್ದಕ್ಕಿದ್ದಂತೆ ಸುರೇಶ್ ಸುಧಾಳ ಆಫೀಸಿಗೆ ಫೋನ್ ಮಾಡಿ ನಮ್ಮಿಬ್ಬರ ಮದುವೆ ಸಾಧ್ಯವಿಲ್ಲ, ನೀವು ದಯವಿಟ್ಟು ಬೇರೆ ಹುಡುಗನನ್ನು ಮದುವೆಯಾಗಿ ಎಂದು ಹೇಳಿಬಿಟ್ಟನು. ಸುಧಾ ಎಷ್ಟು ಕೇಳಿದರೂ ಅವನು ಕಾರಣವನ್ನು ಹೇಳಲಿಲ್ಲ.
ಮದುವೆ ನಿಶ್ಚಯವಾದಾಗಿನಿಂದ ಸುಧಾ ಸುರೇಶನನ್ನು ಗಂಡನೆಂದು ಮನಸಾ ಒಪ್ಪಿಕೊಂಡಿದ್ದಳು. ದಿನವಿಡೀ ಅವಳಿಗೆ ಆಫೀಸಿನಲ್ಲಿ ಕೆಲಸ ಮಾಡಲಾಗಲಿಲ್ಲ. ಮನೆಯಲ್ಲಿ ವಿಷಯ ತಿಳಿಸಿದರೆ ಎಲ್ಲರಿಗೂ ಆಘಾತವಾಗುವುದು. ಬಹಳ ಹೊತ್ತು ವಿಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದಳು. ತನ್ನ ಬಾಸ್‌ಗೆ ಹೇಳಿ ಅರ್ಧ ದಿವಸ ರಜೆ ತೆಗೆದುಕೊಂಡಳು. ಪರ್ಸ್ ಕೈಗೆತ್ತಿಕೊಂಡು ಹೋರಟೇಬಿಟ್ಟಳು. ಆಟೋ ಸುರೇಶನ ಆಫೀಸಿನ ಮುಂದೆ ನಿಂತಿತು. ಅವಳು ಮೊದಲನೇ ಸಲ ಅವನ ಆಫೀಸಿಗೆ ಬಂದಿದ್ದಳು. ಇದನ್ನು ನಿರೀಕ್ಷಿಸದ ಸುರೇಶ ದಿಗ್ಭ್ರಾಂತನಾದನು. ಜೊತೆಗಾರರಿಗೆ ಪರಿಚಯಿಸಬೇಕೆಂದರೆ ಅವತ್ತೇ ಅವಳೊಂದಿಗೆ ನಿಶ್ಚಯ ಮುರಿದುಕೊಂಡಿದ್ದನು. ಗಲಿಬಿಲಿಗೊಂಡು ಸುಮ್ಮನೆ ಕ್ಯಾಂಟೀನಿಗೆ ಸುಧಾಳನ್ನು ಕರೆದುಕೊಂಡು ಹೋದನು.
ಸುಧಾ, “ನಿಮ್ಮ ಜೊತೆಗೆ ಮದುವೆ ನಿಶ್ಚಯವಾದಾಗಿನಿಂದ ನಿಮ್ಮನ್ನೇ ಗಂಡನೆಂದು ತಿಳಿದಿದ್ದೇನೆ. ನನ್ನಿಂದ ಅಥವಾ ನಮ್ಮ ಮನೆಯವರಿಂದ ಏನಾದರೂ ತಪ್ಪಾಗಿದೆಯೇ ಅಥವಾ ಬೇರೆ ಯಾರನ್ನಾದರೂ ಪ್ರೀತಿಸುತ್ತಿದ್ದೀರಾ…. ದಯವಿಟ್ಟು ಮಾತನಾಡಿ,” ಎಂದು ಗೋಗರೆದಳು, ಕಣ್ಣೀರಿಟ್ಟಳು. ಏನೇ ಸಮಸ್ಯೆ ಇದ್ದರೂ ದಯವಿಟ್ಟು ಹೇಳಿರಿ ಎಂದು ಬಹಳ ಕೇಳಿಕೊಂಡಾಗ ಸುರೇಶ್ ಮೆಲ್ಲನೇ ಬಾಯಿಬಿಟ್ಟ. ಅವನು, “ನಿನ್ನನ್ನು ಮದುವೆಯಾಗುವುದು ನನ್ನ ಭಾಗ್ಯ. ಆದರೆ ಪರಿಸ್ಥಿತಿ ಸರಿಯಿಲ್ಲ. ಸ್ವಲ್ಪ ದಿನದಿಂದ ಕೆಮ್ಮು ಇತ್ತು. ಆದರೆ ಇವತ್ತು ಬೆಳಗ್ಗೆ ಒಮ್ಮೆಲೇ ಕೆಮ್ಮಿನ ಜೊತೆಗೆ ರಕ್ತ ಕಾಣಿಸಿತು. ನಮ್ಮಕ್ಕನಿಗೆ ಟಿ.ಬಿ. ಇತ್ತು. ಆದ್ದರಿಂದ ನಿನ್ನ ಜೀವನ ಹಾಳಾಗಬಾರದೆಂದು ಹಾಗೆ ಹೇಳಿದೆ…. ಕ್ಷಮಿಸು,” ಎಂದ.
ಸ್ವಲ್ಪ ಹೊತ್ತು ಸುಮ್ಮನಿದ್ದ ಸುಧಾ ನಕ್ಕುಬಿಟ್ಟಳು. “ಇಷ್ಟು ದಿವಸದಲ್ಲಿ ನನ್ನನ್ನು ತಿಳಿದುಕೊಂಡದ್ದು ಇಷ್ಟೇನಾ? ಟಿ.ಬಿ ಈಗ ಸಂಪೂರ್ಣ ಗುಣಮುಖವಾಗುತ್ತದೆ. ಈಗಲೇ ನಮ್ಮ ಫ್ಯಾಮಿಲಿ ಡಾಕ್ಟರ್ ಕಡೆಗೆ ನಡೆಯಿರಿ,” ಎಂದಳು.
ಡಾಕ್ಟರರಿಗೆ ಸುರೇಶನನ್ನು ತನ್ನ ವುಡ್‌ಬಿ ಎಂದು ಪರಿಚಯಿಸಿದಳು. ಹಾಗೂ ಡಿಸೆಂಬರಿನಲ್ಲಿ ತಮ್ಮ ಮದುವೆಗೆ ಖಂಡಿತ ಬರಬೇಕೆಂದು ಹೇಳಿದಳು. ಅವಳ ಧೃಡನಿಶ್ಚಯವನ್ನು ನೋಡಿ ಸುರೇಶನಿಗೆ ಆನಂದವಾಯಿತು. ತನ್ನ ಭಾಗ್ಯದ ಬಗ್ಗೆ ಸಂತೋಷಪಟ್ಟನು. ಡಾಕ್ಟರ್ ಅವನನ್ನು ಪರೀಕ್ಷಿಸಿದರು.
ರಿಪೋರ್ಟ್ ಬರುವವರೆಗೆ ಇಬ್ಬರೂ ಹೊರಗೆ ಕುಳಿತಿದ್ದರು. ಆಗ ಸುರೇಶ್, “ಇನ್ನೂ ಸಮಯವಿದೆ…. ನಮ್ಮ ಮದುವೆಯ ಬಗ್ಗೆ ನೀನು ನಿರ್ಧಾರ ತೆಗೆದುಕೊಳ್ಳಬಹುದು. ನಾನೇನೂ ತಪ್ಪು ತಿಳಿದುಕೊಳ್ಳುವುದಿಲ್ಲ,” ಎಂದನು. ಅದಕ್ಕೆ ಸುಧಾ ಧೃಡವಾಗಿ ಒಂದೇ ಉತ್ತರ ಕೊಟ್ಟಳು, “ನನ್ನ ಕೈಯಲ್ಲಿದ್ದರೆ ಮೊದಲು ಮದುವೆ ಮಾಡಿಕೊಂಡು ಆಮೇಲೆ ನಿಮ್ಮ ಚೆಕ್‌ಅಪ್‌ಗೆ ಬರುತ್ತಿದ್ದೆ. ಆದರೆ ತಂದೆ ತಾಯಿಯ ಆಶೀರ್ವಾದ ಬೇಕಲ್ಲ,” ಅಂದಳು. ಅವನು ಹಾಗೂ ಅವಳ ಮನಸ್ಸುಗಳು ಅಂದೇ ಒಂದಾದವು.
ಸ್ವಲ್ಪ ಹೊತ್ತಿನಲ್ಲಿ ಡಾಕ್ಟರ್ ಹೊರಗೆ ಬಂದು ನಗುತ್ತಾ, “ನಿನಗೇನಾಗಿಲ್ಲಪ್ಪ. ಸುಮ್ಮನೇ ಹೆದರಬೇಡ. ಬಹಳ ದಿನದಿಂದ ಕೆಮ್ಮು ಇದ್ದದ್ದರಿಂದ ಗಂಟಲಿನಲ್ಲಿ ಗಾಯವಾಗಿದೆ ಅಷ್ಟೆ. ಇಬ್ಬರೂ ಹೋಗಿ ಮದುವೆ ತಯಾರಿ ಮಾಡಿರಿ,” ಎಂದರು. ಇಬ್ಬರೂ ನಗುತ್ತ ಮನೆಗೆ ಬಂದರು.
ಇಪ್ಪತ್ತು ವರ್ಷಗಳ ನಂತರ ಸುರೇಶ ಇದನ್ನು ನೆನೆಸಿಕೊಂಡು ಸಂತೋಷಪಡುತ್ತಾನೆ. ತಮ್ಮಿಬ್ಬರ ಅನುರಾಗದ ಅನುಬಂಧ ಹೀಗೇ ಶಾಶ್ವತವಾಗಿ ಇರಲೆಂದು ದೇವರಲ್ಲಿ ಕೇಳಿಕೊಳ್ಳುತ್ತಾನೆ.