ಕಥೆ – ಆರ್‌. ಹೀರಾ

 ಇವಳ ಗೆಳತಿ ಅವರನ್ನು ರೆಸಾರ್ಟ್‌ನಲ್ಲಿ ಮಜವಾಗಿದ್ದರು ಎಂದು ಹೇಳಿದಾಗ ಯಾಕೋ ಸಂದೇಹ ಮೂಡಿತು. ಯಾವುದು ನಿಜ….? ಯಾವುದು ಸುಳ್ಳು…..?

“ಹಲೋ…… ಯಾರು ವೈದೇಹಿ ಮಾತನಾಡುವುದಾ?”

“ಹೌದು ನಾನೇ…. ನೀವು ಯಾರು?”

“ಇದೇನು? ನಾನು ನಿನ್ನ ಭಾವ ಪುರುಷೋತ್ತಮ ಮಾತನಾಡುವುದು ಗೊತ್ತಾಗ್ಲಿಲ್ವಾ? ನನ್ನ ಗಂಟಲು ಎರಡು ಮೂರು ದಿನಗಳಿಂದ ಸರಿ ಇಲ್ಲ. ಜ್ವರ, ಪಿತ್ತ ವಾಂತಿ. ಹೀಗಾಗಿ ಗೊತ್ತಾಗಿಲ್ಲವೇನೋ? ಈಗ ಸ್ವಲ್ಪ ಸುಮಾರು.”

“ಏನು ಭಾವ ಅಷ್ಟು ಅನಾರೋಗ್ಯವಿದ್ದರೂ ನಮಗೆ ಯಾಕೆ ವಿಷಯ ತಿಳಿಸಿಲ್ಲ ನೀವು? ಸುಚಿತ್ರಾಗೆ ಫೋನು ಮಾಡಲು ಏನಾಗಿತ್ತು? ನಾವೇನು ಬೇರೆಯವರೇ?”

“ಏನೋ ಅವಳು ಬೇಜಾರಿನಲ್ಲಿ ಇದ್ದಾಳೆ.”

“ಯಾಕೆ ಭಾವ?”

“ಮನೆಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಕೈಯಲ್ಲಿ ಕಾಸಿಲ್ಲ. ಅನಾರೋಗ್ಯ ಬೇರೆ. ಮನಸ್ಸಿಗೆ ತುಂಬಾ ಬೇಜಾರು ಮಾಡಿಕೊಂಡಿದ್ದಾಳೆ. ಇದಕ್ಕೆಲ್ಲ ಕೊನೆಯೇ ಇಲ್ಲವೇನೋ ಅನಿಸುತ್ತೆ,” ಎಂದು ಭಾವ ಹೇಳಿದಾಗ ನನಗೆ ಬೇಜಾರು ಆಗಿತ್ತು. ಅಕ್ಕ ಭಾವನದು ಸುಖದ ದಾಂಪತ್ಯ. ಯಾವುದಕ್ಕೂ ಕಮ್ಮಿ ಮಾಡದೇ ಅಕ್ಕನನ್ನು ಚೆನ್ನಾಗಿ ನೋಡಿಕೊಂಡಿದ್ದರು. ಪುಟಾಣಿ ಬೊಂಬೆಗಳಂತಹ  ವೈಭವ್, ವಿಕ್ರಮ್ ರನ್ನು ಮುದ್ದಿಸಿದಷ್ಟೂ ಸಾಲದು. ರಜೆಗಳಲ್ಲಿ ನಮ್ಮ ಮನೆಗೆ ಬಂದಾಗ ಅವರ ಠೀವಿ ನೋಡಿದರೆ ನನಗೆ ಅಚ್ಚರಿ ಆಗುತ್ತಿತ್ತು. ನಾನು ನಮ್ಮ ಯಜಮಾನರು ಇಷ್ಟೊಂದು ಸಂಪಾದಿಸಿದರೂ ನಮಗೆ ಅಷ್ಟು ಸಂತಸವಾಗಿರಲು ಆಗಲೇ ಇಲ್ಲವಲ್ಲ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಆದರೆ ಮನಸ್ಸಿಗೆ ಬೇಸರವಾಗಿರಲಿಲ್ಲ. ಅಕ್ಕ ಭಾವನ ಸಂಸಾರ ನೋಡಿ ಲೇವಡಿ ಮಾಡಲೇ ಇಲ್ಲ. ಅದಕ್ಕೆ ಬದಲಾಗಿ ಸಂತೋಷವೇ ಆಗಿತ್ತು.

ಇವತ್ತು ಫೋನ್‌ ಬಂದ ನಂತರ ಮನಸ್ಸು ಕೆಟ್ಟು ಹೋಯಿತು. ಆಕಾಶದಿಂದ ಒಂದು ದೊಡ್ಡ ಹೊರೆ ಕಲ್ಲು ಬಿದ್ದ ಹಾಗೆ ಆಯಿತು. ಭಾವ ಏಕೆ ಹಾಗೆ ಹೇಳಿದರು? ಅಕ್ಕ ನನ್ನ ಬಳಿ ಅಷ್ಟು ಸಲಿಗೆಯಿಂದ ಇದ್ದರೂ, ಒಂದು ಮಾತು ತಿಳಿಸಬಾರದಾ ಅಂದುಕೊಂಡು ಎರಡು ಮೂರು ಸಲ ಮೊಬೈಲ್‌ಗೆ ಡಯಲ್ ಮಾಡಲು ಯೋಚನೆ ಮಾಡಿದೆ. ಒಳ ಮನಸ್ಸು ಮಾಡು ಎನ್ನುತ್ತಿತ್ತು. ಎಷ್ಟೆಂದರೂ ರಕ್ತ ಸಂಬಂಧಿ ಅಲ್ಲವೇ?

ಹೀಗೆ ಎರಡು ಮೂರು ದಿನಗಳ ನಂತರ ನಾನೇ ಭಾವನಿಗೆ ಫೋನ್ ಮಾಡಿದೆ, “ತುಂಬಾ ದುಡ್ಡಿನ ತಾಪತ್ರಯದಿಂದ ಸಂಸಾರದಲ್ಲಿ ದಿನಾಲೂ ಗಲಾಟೆ, ಜಗಳ. ಮಕ್ಕಳ ಭವಿಷ್ಯ ಯೋಚನೆ ಮಾಡಿ ತಲೆ ಕೆಟ್ಟು ಹೋಗುತ್ತೆ,” ಎಂದಾಗ ನನ್ನ ಎದೆ ದಸಕ್‌ ಎಂದಿತು. ನಾನು, “ಭಾವ ನೀವು ಯೋಚನೆ ಮಾಡಬೇಡಿ. ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ ಈಗಲೇ ಹಣ ಟ್ರಾನ್ಸ್ ಫರ್‌ ಮಾಡುತ್ತೇನೆ,” ಎಂದೆ. ಭಾವ ನಕ್ಕು “ಥ್ಯಾಂಕ್ಸ್” ಎಂದರು.

ಭಾವನ ವಿಷಯ ನಮ್ಮ ಯಜಮಾನರ ಬಳಿ ಹೇಳಿದಾಗ, “ನೀನು ಹಣ ಕಳುಹಿಸಿದ್ದು ಒಳ್ಳೆಯದಾಯಿತು,” ಎಂದರು.

ಇದು ಕಳೆದು ಒಂದು ತಿಂಗಳ ನಂತರ ನನ್ನ ಆಪ್ತ ಸ್ನೇಹಿತೆ ಸುಜಯಾಳ ಫೋನ್‌ ಬಂತು. ಅವಳು ಹೇಳಿದ ವಿಷಯ ಕೇಳಿ ಎರಡನೇ ಸಲ ನನ್ನ ಎದೆ ದಸಕ್‌ ಎಂದಿತು.

ಅವಳು ಹೇಳಿದ್ದು, “ಏನೇ…. ನಿನ್ನ ಅಕ್ಕ ಭಾವನನ್ನು ಮೊನ್ನೆ ರೆಸಾರ್ಟ್‌ನಲ್ಲಿ ನೋಡಿದೆ. ಮುದ್ದಾದ ದಂಪತಿಗಳು ಕಣೇ. ಅವರನ್ನು ನೋಡಿದರೆ ನಿನ್ನೆ ಮೊನ್ನೆ ಮದುವೆ ಆಗಿದ್ದಾರೆ ಅನಿಸುವಂತಿತ್ತು. ಮಕ್ಕಳು ಜೊತೆಯಲ್ಲಿ ಇರಲಿಲ್ಲ. ನನ್ನನ್ನು ಗಮನಿಸಲಿಲ್ಲ. ಅವರು ಅಷ್ಟು ಖುಷಿಯಾಗಿ ಅನ್ಯೋನ್ಯವಾಗಿದ್ದರು. ನೋಡಿ ತುಂಬಾ ಸಂತಸವಾಯಿತು. ನೀನೇ ಕಣೇ ಪೆದ್ದಿ. ಯಾವಾಗಲೂ ಮನೆ, ಆಫೀಸು ಅಂತೀಯ. ಸುತ್ತಾಡುವ ಸಮಯದಲ್ಲಿ ಸುತ್ತಾಡಬೇಕು. ಸಂಪಾದನೆ ಮಾಡುವುದಾದರೂ ಏಕೆ…..” ಎಂದು ಫೋನ್‌ ಇಟ್ಟಳು.

ನನಗೆ ತಲೆ ಗಿರ್‌ ಎನ್ನಲು ಶುರು ಆಯಿತು. ಯಜಮಾನರ ಬಳಿ ಹೇಳಿದರೆ ತವರುಮನೆ ಹರಾಜು ಹಾಕಿದಂತೆ. ಏನು ಮಾಡಲೂ ತೋಚದೆ ಅವರ ಬಳಿ ಹೋಗಿ, “ರೀ… ಈ ಶನಿವಾರ-ಭಾನುವಾರ ನೀವು ಹೇಗೂ ಶ್ರೀರಾಮ್ ಮನೆ ಗೃಹಪ್ರವೇಶಕ್ಕೆ ಹೋಗುತ್ತಿದ್ದೀರಲ್ವಾ…. ನಿಮ್ಮ ಗೆಳೆಯರ ಮನೆಗೆ ಬರಲು ನನ್ನದೇನು ಅಭ್ಯಂತರವಿಲ್ಲ. ಆದರೆ…..” ಎಂದೆ.

“ಹೇಳು ಏನು ಆದರೆ……” ಯಜಮಾನರು ಕೇಳಿದರು.

“ಏನಿಲ್ಲ…. ಅಕ್ಕ ಭಾವನವರನ್ನು ನೋಡಿಕೊಂಡು ಬರುತ್ತೇನೆ….” ಎಂದೆ.

“ಜರೂರು ಹೋಗಿ ಬಾ… ಸೋಮವಾರ ಅಲ್ಲಿಂದಲೇ ಆಫೀಸ್‌ಗೆ ಹೋಗು. ಸಾಯಂಕಾಲ ನಾನು ಆಫೀಸ್‌ನಿಂದ ಬರುವಾಗ ನಿನ್ನನ್ನು ಕರೆದುಕೊಂಡು ಬರುತ್ತೇನೆ,” ಎಂದರು. ನನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು ಎಂದುಕೊಂಡೆ.

ಶನಿವಾರ ಬಂತು. ಆಫೀಸ್‌ನಲ್ಲಿ ಕೆಲಸ ಮಾಡಲು ಆಗಲಿಲ್ಲ. ಕ್ಯಾಂಟೀನ್‌ಗೆ ಹೋಗಿ ಬಿಸಿ ಬಿಸಿ ಕಾಫಿಯೊಂದಿಗೆ ಒಂದು ಮಾತ್ರೆ ನುಂಗಿದೆ. ಮಾತು ಹೇಗೆ ಶುರು ಮಾಡುವುದು? ಸುಜಯಾ ಹೇಳಿದ ಬಗ್ಗೆ ಹೇಳಿದರೆ ಹೇಗೆ? ಬೇಡ ಅವರ ಬಾಯಿಂದ ಬರುತ್ತದೆಯಾ ನೋಡೋಣ…. ಹೀಗೆ ಮನಸ್ಸು ವಿಚಿತ್ರವಾಗಿ ಆಡತೊಡಗಿತು.

ಸಾಯಂಕಾಲ ಅಕ್ಕನ ಮನೆಗೆ ಬಂದು ಕಾಲಿಂಗ್‌ ಬೆಲ್‌ ಒತ್ತಿದರೆ ಯಾರೂ ಬಾಗಿಲು ತೆಗೆಯಲಿಲ್ಲ. ನಿರಾಸೆಯಿಂದ ವಾಪಸ್‌ ಹೋಗೋಣ ಎಂದು ಬೆನ್ನು ತಿರುಗಿಸಿದರೆ ಅಕ್ಕ-ಭಾವ ಕಾರಿನಿಂದ ಇಳಿದು ರಾಶಿ ರಾಶಿ ಸಾಮಾನು ಇಳಿಸುತ್ತಿದ್ದರು. ನನ್ನನ್ನು ನೋಡಿ ದಂಗು ಬಡಿದಂತಾಗಿತ್ತು ಅವರ ಮುಖ. ನಾನು ಏನನ್ನೂ ಹೇಳದೇ ಅವರ ಬಳಿ ಹೋಗಿ ಸಾಮಾನಿನ ಚೀಲ ಹಿಡಿದುಕೊಂಡು ಒಳಗಡೆ ಬಂದೆ. ಅಕ್ಕ ಮುಖ ತೊಳೆದು ಬಂದು ಕಾಫಿ ಕೊಟ್ಟಳು. ಭಾವ ಹೇಳಿದಂತೆ ಅಕ್ಕನ ಮನಸ್ಸು ಸರಿ ಇಲ್ಲ ಎಂದು ಹೇಳಿದ್ದು ತಪ್ಪು ಅನಿಸಿತು. ಭಾವನ ಮುಖದಲ್ಲಿ ಲವಲವಿಕೆ ಇತ್ತು. ಅವರಿಗೆ ಮೈ ಹುಷಾರಿಲ್ಲವೆಂದು ಹೇಳಲು ಅಸಾಧ್ಯವಾಗಿತ್ತು. ನನಗೆ ನಾನೇ ಮೋಸ ಹೋಗಿರುವ ಅನುಭವವಾಯಿತು.

ಕಾಫಿ ಕುಡಿಯುತ್ತಾ, “ಅಕ್ಕಾ ನಾನು ಇಲ್ಲೇ ಇರುತ್ತೇನೆ. ಸೋಮವಾರ ಇಲ್ಲಿಂದಲೇ ಆಫೀಸ್‌ಗೆ ಹೋಗುತ್ತೇನೆ,” ಎಂದಾಗ  ಅಕ್ಕ-ಭಾವ ಮುಖ ಮುಖ ನೋಡಿದಾಗ ನನಗೆ ಮುಜುಗರವಾದರೂ ನಾನು ಏನೊಂದು ಭಾವನೆ ತೋರಿಸಿಕೊಳ್ಳಲಿಲ್ಲ. ಅಮ್ಮ ಅಪ್ಪ ಸತ್ತಾಗ ನನ್ನನ್ನು ನೋಡಿಕೊಂಡಿರುವವರೇ ಅವರಿಬ್ಬರು. ಇಷ್ಟೊಂದು ಸಂಶಯ ಸಲ್ಲದು ಎಂದು ಸುಮ್ಮನಾದೆ.

“ಬಾರೇ… ವೈದೇಹಿ ರೂಮಿಗೆ ಹೋಗೋಣ. ಸುತ್ತಾಡಿ ಸುತ್ತಾಡಿ ಸುಸ್ತಾಗಿದೆ ಒಂದು ಹತ್ತು ನಿಮಿಷ ರಿಲ್ಯಾಕ್ಸ್ ಮಾಡೋಣ,” ಎಂದಳು.

ಕೂಡಲೇ ಭಾವ, “ನಿನಗೆ ಸುಸ್ತಾದರೆ ಹೋಟೆಲ್‌ನಿಂದ ಊಟ ಆರ್ಡರ್‌ ಮಾಡೋಣ,” ಎಂದರು.

ನಾನು “ಅಯ್ಯೋ, ನಾನು ಬಂದು ನಿಮಗೆ  ತೊಂದರೆ ಆಯ್ತೇನೊ ಪಾಪ….. ನಿಮ್ಮದೇನೂ ಅಭ್ಯಂತರ ಇಲ್ಲದಿದ್ದರೆ ನಾನೇ ಅನ್ನ ಹುಳಿ ಮಾಡುತ್ತೇನೆ,” ಎಂದೆ. ನನಗೂ ಆಫೀಸ್‌ನಿಂದ ಬಂದು ಸುಸ್ತಾಗಿತ್ತು. ಹೋಟೆಲ್‌ ಊಟ ತಿನ್ನುವ ಆಸೆಯೂ ಆಗಿತ್ತು. ಅವರ ಬಳಿ ಹೇಗೆ ಹೇಳಲಿ? ಭಾವ ತೊಂದರೆ ಎಂದಿದ್ದಾರೆ. ನಾಟಕ ಆಡಿದೆ.

ಭಾ ಸುಮ್ಮನಿರದೇ, “ಛೇ….ಛೇ…. ಎಲ್ಲಾದರೂ ಉಂಟೇ,” ಎಂದವರೇ ಕೂಡಲೇ ಪಲಾವ್, ವೆಜಿಟೆಬಲ್ ಕುರ್ಮಾ, ಗೋಬಿ ಮಂಚೂರಿ, ಐಸ್‌ಕ್ರೀಂ ಆರ್ಡರ್‌ ಮಾಡಿ ತರಿಸಿದರು. ನನಗೆ ಭಾವನ ಮಾತೇ ಕಿವಿಯಲ್ಲಿ ಗುಣುಗುಟ್ಟುತ್ತಿತ್ತು. ನನಗೆ ಹೇಳಿದ್ದು ಭಾವನಿಗೆ ಮರೆತುಹೋಗಿದೆಯೇ ಅನಿಸುತ್ತಿತ್ತು. ನಾನು ತುಟಿ ಪಿಟಕ್ಕೆನ್ನಲ್ಲಿಲ್ಲ. ಮಕ್ಕಳನ್ನು ಭಾವನ ತಾಯಿ ಮನೆಗೆ ಕಳುಹಿಸಿದ್ದರಂತೆ. ನಾನು ಕೇಳುವ ಮುಂಚೆ ಅಕ್ಕನೇ ಹೇಳಿದಾಗ ನನಗೆ ಅಚ್ಚರಿಯಾಯಿತು. ಇದೆಲ್ಲಾ ಹೇಗೆ ಸಾಧ್ಯ ಎಂದುಕೊಂಡೆ.

ಊಟ ಮಾಡಿ ಮಲಗಿದಾಗ  ಅಕ್ಕ ನನ್ನ ರೂಮಿಗೆ ಬಂದು ಎಬ್ಬಿಸಿದಳು. ನನಗೆ ಅವಳ ಕಣ್ಣೀರು ಕಂಡು ತುಂಬಾ ಬೇಸರವಾಯಿತು.

“ಏನೇ ಅಳುತ್ತಿದ್ದೀಯಾ? ಏನಾಯಿತು?” ಎಂದಾಗ, ಭಾವ ಫೋನ್‌ ಮಾಡಿ ನನ್ನ ಬಳಿ ಹೇಳಿದ ವಿಚಾರ ತಿಳಿಸಿದಳು. ಇವಳಿಗಾದರೂ ಮನಸ್ಸು ಬೇಜಾರಾಗಿದೆ. ಭಾವನಿಗೆ ಆಗಲೇ ಇಲ್ಲವಲ್ಲ ಎಂದುಕೊಂಡೆ.

ವಿಷಯ ಹೀಗಿತ್ತು. ಭಾವನ ತಾಯಿ ಮನೆಯಲ್ಲಿ ಆಸ್ತಿಗಾಗಿ ಪರದಾಟ. ಭಾವನಿಗೆ ಬರುವ ವರಮಾನ ಬಾಡಿಗೆ ಹಣ ಅದು ಸುಮಾರು ವರ್ಷಗಳಿಂದ ಬರುತ್ತಿತ್ತು. ಈ ಗಲಾಟೆಯಲ್ಲಿ ಬಾಡಿಗೆ ಬರುವುದು ನಿಂತಾಗ, ಅವರಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಭಾವನ ಆರೋಗ್ಯ ತೀರ ಹದಗೆಟ್ಟಾಗ ಇವಳೇ ನನಗೆ ಫೋನ್‌ ಮಾಡಲು ಹೇಳಿದಳಂತೆ. ಮಕ್ಕಳನ್ನು ಅತ್ತೆ ಮನೆಗೆ ಕಳುಹಿಸಿದಳಂತೆ. ಇದನ್ನು ಕೇಳಿ ನನ್ನ ಕಣ್ಣೀರು ನೋಡಿ ಅಕ್ಕ, ನಾವು ಇದನ್ನೇ ಯೋಚನೆ ಮಾಡಿ ಕುಳಿತರೆ ನಿನ್ನ ಭಾವ ಅನಾರೋಗ್ಯಕ್ಕೆ ಹಾಸಿಗೆ ಹಿಡಿದರೆ ಕಷ್ಟ ಎಂದು ಡಾಕ್ಟರ್‌ ಬಳಿ ಕರೆದುಕೊಂಡು ಹೋದಾಗ ಅವರು, “ಮೊದಲು ಅವರ ಮನಸ್ಸಿನ ವ್ಯಥೆ ದೂರ ಮಾಡಿರಿ,”  ಎಂದರು. ನನಗೆ ಅರ್ಥವಾಗಲಿಲ್ಲ. ನಂತರ ಅವರು ನೀವಿಬ್ಬರು ಒಂದು ನಾಲ್ಕೈದು ದಿನ ಹೊರಗಡೆ ಹೋಗಿ ಅನ್ಯೋನ್ಯವಾಗಿ ಸುತ್ತಾಡಿ ಬನ್ನಿರಿ, ಎಲ್ಲ ಸರಿಹೋಗುತ್ತದೆ ಎಂದರು.

ಮನೆಗೆ ಬಂದಾಗ ನಿನಗೆ ಫೋನ್‌ ಮಾಡಿರುವ ವಿಚಾರ ತಿಳಿಸಿದರು. ನಿನ್ನ ಮನೆಗೆ ಹೊರಟು ಬರುವವಳಿದ್ದೆ. ಡಾಕ್ಟರ್‌ ಹೇಳಿದ ನೆನಪು ಬಂತು. ಕೂಡಲೇ ರೆಸಾರ್ಟ್‌ ಬುಕ್‌ ಮಾಡಿ ಊರಿಗೆ ಹೋದೆವು. ಮನಸ್ಸಿಗೆ ತುಂಬಾ ನೆಮ್ಮದಿ ಆಯಿತು. ಮನೆಗೆ ವಾಪಸ್ಸು ಬಂದೆ, ಏನೂ ಸಾಮಾನಿರಲಿಲ್ಲ. ಹೀಗಾಗಿ ಬೇಕಾದದ್ದನ್ನೆಲ್ಲಾ ಕೊಂಡು ತಂದೆ. ನಿನ್ನನ್ನು ನೋಡಿ ತುಂಬಾ ಸಂತೋಷ ಆಯಿತು. ಸುಮಾರು ತಿಂಗಳ ನಂತರ ಬರುತ್ತಿದ್ದೀಯಾ ಅದಕ್ಕೆ ಹೋಟೆಲ್‌ ಊಟ ಆರ್ಡರ್‌ ಮಾಡಿದ್ದು ಕಣೇ,” ಎಂದು ನನ್ನ ತೊಡೆಯ ಮೇಲೆ ತಲೆ ಇಟ್ಟು ಅತ್ತಳು.

ನನಗೆ ಏನು ಹೇಳಬೇಕೆಂದು ಆ ಕ್ಷಣ ತಿಳಿಯಲಿಲ್ಲ. ಅಕ್ಕನ ತಲೆ ಸವರುತ್ತಾ ಅವಳನ್ನು ಸಮಾಧಾನ ಮಾಡಿದೆ. ನನಗೆ ಏನು ಹೇಳುವುದಕ್ಕೂ ತಿಳಿಯದಾಯಿತು. ಕಣ್ಣು ಮುಚ್ಚಿದಾಗ ಗಂಟೆ ರಾತ್ರಿ ಎರಡಾಗಿತ್ತು. ಅಕ್ಕ ಯಾವಾಗ ಮಲಗಿದಳೋ ತಿಳಿಯಲೇ ಇಲ್ಲ. ಅವಳ ಆಗಿನ ಮುಗ್ಧ  ಮುಖ, ಈಗಿನ ಸೊರಗಿದ ಮುಖ ನೋಡಿ, ಕಣ್ಣೀರು ಧಾರಾಕಾರವಾಗಿ ಸುರಿಯಿತು. ಆಗಲೇ ನಾನು ಅಂದುಕೊಂಡೆ ಎಲ್ಲರೂ ಸಂಸಾರದಲ್ಲಿ ಕಷ್ಟ ಸುಖ ಗಾಡಿಯ ಎರಡು ಚಕ್ರದಂತೆ ಅನುಭವಿಸುತ್ತಿದ್ದಾರೆ. ಒಟ್ಟಾರೆ ಸಂಸಾರದಲ್ಲಿ ಸುಖವೇ ಇರುತ್ತದೆ. ಹೋಟೆಲ್, ಸಿನಿಮಾ, ಕಂಡ ಕಂಡ ಅಂಗಡಿಗಳಿಂದ ಸೀರೆ, ಚಿನ್ನ ಅವರಿಗೆ ಇದರಲ್ಲಿ ತೃಪ್ತಿ.

ಇನ್ನೂ ಕೆಲವರ ಮನೆಯಲ್ಲಿ ಒಂದು ಹೊತ್ತಿಗೂ ತೊಂದರೆ. ಹೋಟೆಲ್‌ ಅಂತೂ ಕನಸು. ಚಿನ್ನ ಬರೀ ಪತ್ರಿಕೆಗಳಲ್ಲಿ ಬರುವ ಚಿತ್ರಗಳನ್ನು ನೋಡಿ ಸಂತಸಪಡುವರು ಇದ್ದಾರೆ. ವ್ಯಥೆ ಪಡುವವರು ಇದ್ದಾರೆ. ಹಾಗಿದ್ದ ಮಾತ್ರಕ್ಕೆ ಕಷ್ಟ ಇರುವವರು ಅವರ ಕೈಯಲ್ಲಿ ಸ್ವಲ್ಪ ದುಡ್ಡು ಬಂದರೆ ಹೋಟೆಲ್‌, ರೆಸಾರ್ಟ್‌ ಅಂತ ಹೋಗಬಾರದೇ? ಹೋಗಿದ್ದರಲ್ಲಿ ತಪ್ಪು ಏನಿದೆ ಅನಿಸಿತು. ನಾಳೆ ಪರಿಸ್ಥಿತಿ ಏನೋ, ಹೇಗೋ ಅವರಿಬ್ಬರೂ ಹೋಗಿ ಬಂದಾಗಿದೆ. ಅವರಿಬ್ಬರ ಮನಸ್ಸು ನಿರಾಳವಾಗಿದೆ. ಅಕ್ಕನಿಗೆ ಸಂತೋಷವಾಗಿದೆ.  ಭಾವ ಅಕ್ಕನನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಅವಳ ಮಾತಿನಿಂದಲೇ ಅರ್ಥವಾಗಿದೆ. ನಾನು ಅವರಿಬ್ಬರ ಮೇಲೆ ತುಂಬಾ ಸಂಶಯಪಟ್ಟೆನಲ್ಲಾ ಎಂದು ಮನಸ್ಸಿಗೆ ಬೇಸರವಾಯಿತು. ಬೆಳಗ್ಗೆ ಎದ್ದು ಮನೆಗೆ ಹೊರಡುವ ತಯಾರಿ ಮಾಡೋಣ ಎಂದುಕೊಂಡು ಪುಟ್ಟದಾದ ಪತ್ರ ಬರೆದೆ….

ಅಕ್ಕ ಭಾವ…..ನಾನು ನಿಮ್ಮನ್ನು ಅಪಾರ್ಥ ಮಾಡಿಕೊಂಡೆ. ನೀವು ನನ್ನ ಬಳಿ ಫೋನ್‌ನಲ್ಲಿ ಮಾತನಾಡಿದ್ದು. ನನ್ನ ಗೆಳತಿ ನಿಮ್ಮಿಬ್ಬರನ್ನು ರೆಸಾರ್ಟ್‌ನಲ್ಲಿ ನೋಡಿದ್ದು ನನ್ನ ಮನಸ್ಸು ತುಂಬಾ ಗಲಿಬಿಲಿಗೊಂಡಿತು. ನಿಮ್ಮ ಬಳಿ ಈ ವಿಷಯ ಕೇಳಲೆಂದೇ ಬಂದೆ. ಅಕ್ಕ ನೀನಾಗಿ ವಿಷಯ ತಿಳಿಸಿರುವಿ. ನಿಮ್ಮಿಬ್ಬರ ಅನ್ಯೋನ್ಯ ದಾಂಪತ್ಯ, ನಿನಗೆ ಭಾವನ ಆರೋಗ್ಯದ ಮೇಲೆ ಕಾಳಜಿ. ಇದನ್ನೆಲ್ಲಾ ಕಂಡು ನನಗೆ ತಲೆ ತಗ್ಗಿಸುವ ತರಹ ಆಗಿದೆ. ಕಷ್ಟ ಇದ್ದಾಗಲೂ ಸಿನಿಮಾ, ಹೋಟೆಲ್ ಹೋಗಿ ಮನಸ್ಸು ಸಂತಸ ಪಡುವುದರಲ್ಲಿ ಏನೂ ತೊಂದರೆ ಇಲ್ಲ. ಅನ್ಯೋನ್ಯ ದಾಂಪತ್ಯಕ್ಕಿಂತ ಮೇಲಾದದ್ದೂ ಯಾವುದೂ ಇಲ್ಲ. ನಾನು  ಸಂಶಯಪಟ್ಟಿದ್ದಕ್ಕೆ ಕ್ಷಮಿಸಿ.

ಇಂತಿ ವೈದೇಹಿ.

ಅದನ್ನು ಕವರ್‌ನಲ್ಲಿ ಹಾಕಿ ಮೇಜಿನ ಮೇಲಿಟ್ಟೆ.  ಬೆಳಗ್ಗೆ ಅಡುಗೆಮನೆಗೆ ಹೋಗಿ ಅಕ್ಕನ ಬಳಿ, “ಮನೆಯಲ್ಲಿ ಅವರೂ ಇಲ್ಲ. ನಾನು ಮಧ್ಯಾಹ್ನ ಊಟ ಮಾಡಿ ಹೋಗುತ್ತೇನೆ,” ಎಂದಾಗ  ಅಕ್ಕನ ಮುಖದಲ್ಲಿ ತುಂಬಾ ಅಸಮಾಧಾನ ಕಂಡುಬಂತು. ಊಟದ ನಂತರ ಮನೆಗೆ ಹೊರಟೆ. ಬೀಗ ನನ್ನನ್ನು ಸ್ವಾಗತಿಸುತ್ತಿತ್ತು. ಕೈಕಾಲು ತೊಳೆದು ಆರಾಮಾಗಿ ಕುರ್ಚಿಯಲ್ಲಿ ಕೂತು ಎಲ್ಲ ವಿಷಯಗಳನ್ನು ಮೆಲುಕು ಹಾಕುತ್ತಿದ್ದೆ. ನಾನು ಸಂಶಯಪಟ್ಟಿದ್ದು ತಪ್ಪು ಅನಿಸುತ್ತಿತ್ತು. ಇಷ್ಟು ಹೊತ್ತಿಗಾಗಲೇ ಅಕ್ಕ ಪತ್ರ ಓದಿರಬಹುದು ಅಂದುಕೊಂಡು ಅಲ್ಲೇ ಸ್ವಲ್ಪ ಹೊತ್ತು ಕುಳಿತೆ. ಸಾಲ ಮಾಡಿ ರೆಸಾರ್ಟ್‌ ಹೋಗುವುದು ತಪ್ಪೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ