ಮಿನಿ ಕಥೆ – ಎಸ್‌. ಪಂಕಜಾ

ಸುಮನಾಳದ್ದು ದೊಡ್ಡ ಕುಟುಂಬ. ಪತಿ ಪವನ್‌ಕುಮಾರ್‌, ಮಕ್ಕಳಾದ ನೀರಜ್‌ ಮತ್ತು ಸೂರಜ್‌ ಅವರಿಬ್ಬರ ಹೆಂಡತಿ ಮತ್ತು ಮಕ್ಕಳು. ಜೊತೆಗೆ ಪವನ್‌ ಕುಮಾರ್‌ರ ಕಸಿನ್‌ ಮತ್ತು ಅವರ ಕುಟುಂಬ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸೇರಿ ಒಂದಾಗಿ ವಾಸಿಸುತ್ತಿದ್ದರು.

ಅಂದು ಬೆಳಗ್ಗೆ  ಎಂದಿನಂತೆ ಬೇಗನೆ ಎದ್ದ ಸುಮನಾ ಮನೆಯ ಕೆಲಸದಲ್ಲಿ ತೊಡಗಿದ್ದಳು. ಅಷ್ಟರಲ್ಲಿ ಅವಳ ಹಿಂದೆ ಮನುಷ್ಯ ಆಕೃತಿಯೊಂದು ಹಾದುಹೋದಂತಾಯಿತು.

ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಸುಮನಾ ಮನೆಯವರನ್ನು ಕರೆಯಲು ಹೋದಳು. ಪವನ್‌ಕುಮಾರ್‌ ಮುಂದಾಗಿ ಅಡುಗೆಮನೆಗೆ ಹೋದ. ತಕ್ಷಣಕ್ಕೆ ಯಾವುದೇ ಅಪಾಯದ ಸೂಚನೆ ಸಿಕ್ಕಲಿಲ್ಲ. ಆದರೆ ಅರ್ಧ ನಿಮಿಷ ಕಳೆಯುವಷ್ಟರಲ್ಲಿ ನೆರಳೊಂದು ಆ ಮೂಲೆಯಿಂದ ಈ ಮೂಲೆಗೆ ತಿರುಗಿದಂತಾಯಿತು. ಆದರೆ ಯಾರೊಬ್ಬ ವ್ಯಕ್ತಿ ಸಹ ಕಾಣಲಿಲ್ಲ.

ಪವನ್‌ ಕುಮಾರ್‌ ಆ ಮೂಲೆಗೆ ಹೋಗುವಷ್ಟರಲ್ಲಿ ಮನೆಯವರೆಲ್ಲರೂ ಅಲ್ಲಿಗೆ ಬಂದರು. ಏನಾಗಿದೆ ಎನ್ನುವುದು ತಿಳಿಯದಿದ್ದರೂ ಏನೋ ಸಮಸ್ಯೆ ಇದೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈಗ ಎಲ್ಲರೂ ಸೇರಿ ಮತ್ತೆ ಅಡುಗೆ ಕೋಣೆಯತ್ತ ತೆರಳಿದರು.

ಈಗ  ಮನೆಯಲ್ಲಿ ಗದ್ದಲದ ವಾತಾರಣ ನಿರ್ಮಾಣವಾಗಿತ್ತು. ಎಲ್ಲರೂ ಆಗಂತುಕ ವ್ಯಕ್ತಿಗಾಗಿ ಹುಡುಕಲಾರಂಭಿಸಿದರು. ಒಬ್ಬೊಬ್ಬರು ಒಂದೊಂದು ಕಡೆ ಹುಡುಕುತ್ತಿರುವಾಗಲೇ ಆ ವ್ಯಕ್ತಿ ಹಿಂದಿನ ಬಾಗಿಲಿನಿಂದ ಓಡಲಾರಂಭಿಸಿದ. ಅಷ್ಟರಲ್ಲಿ ಅಲ್ಲಿಯೇ ಇದ್ದ ಸೂರಜ್‌ ಪತ್ನಿ ನಯನಾ ಅವನನ್ನು ಗುರುತಿಸಿ ಅಡ್ಡಗಟ್ಟಿದಳು. ಸೂರಜ್‌ ಸಹ ಅಲ್ಲೇ ಇದ್ದುದರಿಂದ ಅವನೂ ಕೂಡ ಆ ವ್ಯಕ್ತಿಯನ್ನು ಹಿಡಿದು ಮನೆಯೊಳಕ್ಕೆ ಎಳೆದುಕೊಂಡು ಬಂದ. ತಕ್ಷಣ ಎಲ್ಲರೂ ಸೇರಿ ಅವನನ್ನು ಸುತ್ತುವರಿದು ನಿಂತರು. ಪವನ್‌ ಕುಮಾರ್‌ ಮತ್ತು ಇತರರು ಸೇರಿ ಅವನನ್ನು ಕಂಬವೊಂದಕ್ಕೆ ಕಟ್ಟಿ ಹಾಕಿದರು.

ತಕ್ಷಣ ಪವನ್‌ ಕುಮಾರ್‌ ಮೊಮ್ಮಗ ಅಂಕಿತ್‌ ಆಗಂತುಕನ ಶರ್ಟ್‌ ಮತ್ತು ಪ್ಯಾಂಟ್‌ನಲ್ಲಿ ಗನ್‌ ಅಥವಾ ಬೇರೆ ಯಾವುದಾದರೂ ಮಾರಕಾಸ್ತ್ರಗಳಿವೆಯೇ ಎಂದು ಹುಡುಕಲಾರಂಭಿಸಿದ. ಅಂತಹ ಅಸ್ತ್ರಗಳೇನೂ ಸಿಗದಿದ್ದರೂ ಪ್ಯಾಂಟ್‌ನ ಹಿಂದಿನ ಜೇಬಿನಲ್ಲಿ ಕಾಗದದಲ್ಲಿ ಸುತ್ತಿದ ಒಂದು ದಪ್ಪ ಕಟ್ಟೊಂದು ಸಿಕ್ಕಿತು.

ಮನೆಯ ಪ್ರತಿಯೊಬ್ಬರೂ ಅವನನ್ನು ಚೆನ್ನಾಗಿ ಥಳಿಸಿದರು. ಕಡೆಗೆ ಪವನ್‌ ಕುಮಾರ್‌ ಪೊಲೀಸರಿಗೆ ಕರೆ ಮಾಡಿ ಮನೆಗೆ ಕಳ್ಳ ನುಗ್ಗಿರುವ ವಿಚಾರ ತಿಳಿಸಿದ. ಪೊಲೀಸರು ಬಂದೊಡನೆ ಅವನನ್ನು ಅವರಿಗೆ ಹಸ್ತಾಂತರಿಸಲಾಯಿತು.

ಇದಾಗಿ ಮೂರು ದಿನಗಳ ನಂತರ ಪವನ್‌ ಕುಮಾರ್‌ ಕುಟುಂಬದವರು ಕೋರ್ಟ್‌ಗೆ ಬರುವಂತೆ ಕರೆ ಬಂದಿತು. ಅಂದು ಆಗಂತುಕನನ್ನು ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸುವವರಿದ್ದರು. ವಿಚಾರಣೆ ನಡೆದು ತೀರ್ಪು ನೀಡುವ ಸಮಯ ಬಂದಾಗ ನ್ಯಾಯಾಧೀಶರು ಅಪರಾಧಿ ಸ್ಥಾನದಲ್ಲಿದ್ದ ವ್ಯಕ್ತಿಗೆ ನೀನೇನಾದರೂ ಹೇಳುವುದಿದ್ದರೆ ತಿಳಿಸು ಎಂದು ಸೂಚಿಸಿದರು.

“ಸ್ವಾಮಿ, ನಾನು ಕಳೆದ ಹತ್ತು ಹನ್ನೆರಡು ವರ್ಷಗಳಿಂದಲೂ ಇದೇ ದಂಧೆ ನಡೆಸಿಕೊಂಡು ಬಂದಿದ್ದೇನೆ. ಆದರೆ ಮೊನ್ನೆ ಆದಂತೆ ಹಿಂದೆಂದೂ ಆಗಿರಲಿಲ್ಲ. ನಾನು ಸಿಕ್ಕೊಡನೆ ನನ್ನನ್ನು ಕಂಬಕ್ಕೆ ಕಟ್ಟಿ ಮನೆಯವರೆಲ್ಲಾ ಸೇರಿ ನನ್ನನ್ನು ಚೆನ್ನಾಗಿ ಹೊಡೆದರು ಅದರಲ್ಲಿ ಒಬ್ಬ ನನ್ನ ಶರ್ಟ್‌ ಮತ್ತು ಪ್ಯಾಂಟ್‌ ಜೇಬುಗಳನ್ನು ಹುಡುಕಿ ನನ್ನ ಬಳಿ ಇದ್ದ ಹತ್ತು ಸಾವಿರ ರೂಪಾಯಿಗಳನ್ನು ಲಪಟಾಯಿಸಿದ. ನಾನು ದರೋಡೆ ಮಾಡಲು ಇವರ ಮನೆಗೆ ನುಗ್ಗಿದೆ…. ಆದರೆ ಈ ಮನೆಯವರೇ ನನ್ನನ್ನು ದರೋಡೆ ಮಾಡಿದಂತಲ್ಲವೇ….?” ಎಂದ.

ಆಗ ಇಡೀ ನ್ಯಾಯಾಲಯವೇ ಸ್ತಬ್ಧವಾಯಿತು.

“ನೀವೇನು ಹೇಳುತ್ತೀರಿ?” ಎಂದು ನ್ಯಾಯಾಧೀಶರು ಪವನ್‌ ಕುಟುಂಬದವರನ್ನು ಕೇಳಿದರು.

“ಛೇ! ನಮಗೇನೂ ಸಿಗಲಿಲ್ಲ ಸ್ವಾಮಿ, ಅವನೇ ಸುಳ್ಳು ಹೇಳುತ್ತಿದ್ದಾನೆ. ಅವನ ದುಡ್ಡು ಕಳವು ಮಾಡಿದ್ದೇವೆ ಎನ್ನಲು ಸಾಕ್ಷಿ ಏನಿದೆ?” ಎಂದರು ಪವನ್‌ ಕುಟುಂಬದವರು.

ಪವನ್‌ ಕುಮಾರ್‌ ಕುಟುಂಬದ ಪರವಾಗಿ ವಾದ ಮಾಡಿದ ವಕೀಲರು ಕೇಳಿದರು, “ಸಾಕ್ಷಿ?”

“ಇಲ್ಲ…. ಆದರೆ ಅದೇ ಸತ್ಯ.”

“ಸಾಕ್ಷಿ ಇಲ್ಲದೆ ನ್ಯಾಯಾಲಯಕ್ಕೆ ಒಪ್ಪಿಗೆ ಆಗದು,” ಎಂದ ನ್ಯಾಯಾಧೀಶರು ಆ ವ್ಯಕ್ತಿಯೇ ಅಪರಾಧಿ ಎಂದು ತೀರ್ಮಾನಿಸಿ ಆರು ತಿಂಗಳ ಕಠಿಣ ಸಜೆ ವಿಧಿಸಿದರು. ಪವನ್‌ ಕುಮಾರ್‌ಗೆ ನೆನಪು ಅರೆ ಕ್ಷಣ ಮೂರು ದಿನಗಳ ಹಿಂದಕ್ಕೋಡಿತು….

ದರೋಡೆಕೋರನನ್ನು ಪೊಲೀಸರಿಗೆ ಒಪ್ಪಿಸಿದ ದಿನವೇ ಅಂಕಿತ್‌ ದೊಡ್ಡದಾದ ಮೂಟೆಯೊಂದನ್ನು ಹೊತ್ತು ತಂದ. ಪವನ್‌ ಅದೇನೆಂದು ಕೇಳಿದರು, “ಅದು ನಮ್ಮ ಮನೆಗೆ ನೆಲಹಾಸು, ರತ್ನಗಂಬಳಿ. ನಮ್ಮ ಮನೆಗೆ ಬರುವ ಅತಿಥಿಗಳ ಸ್ವಾಗತಕ್ಕಾಗಿ ತಂದಿದ್ದೇನೆ,” ಎಂದು ಉತ್ತರಿಸಿದ.

“ಇದಕ್ಕೆ ಹಣವೆಲ್ಲಿತ್ತು…?”

“ಅದೇ ಇಂದು ಬೆಳಗ್ಗೆ ಆ ವ್ಯಕ್ತಿ ಜೇಬಿನಲ್ಲಿ ಸಿಕ್ಕಿತಲ್ಲವೇ…. ದಪ್ಪ ಕಟ್ಟು…. ಅದೇ….?” ಎಂದಾಗ ಪವನ್‌ ಕುಮಾರ್‌ ಮುಖದಲ್ಲಿ ಸಣ್ಣಗೆ ನಗು ಮೂಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ