ಮಿನಿಕಥೆ - ಜಿ. ವಿನುತಾ
ಅನಿತಾ ಮತ್ತು ಸಂಚಿತಾ ಚಿಕ್ಕ ವಯಸ್ಸಿನಿಂದಲೂ ಒಟ್ಟಿಗೇ ಬೆಳದವರು. ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರಲ್ಲಿ ಬಿಡಿಸಲಾಗದ ಸ್ನೇಹದ ನಂಟು ಏರ್ಪಟ್ಟಿತ್ತು. ಅನಿತಾ ಮತ್ತು ಸಂಚಿತಾ ಇಬ್ಬರೂ ನಮ್ಮಿಬ್ಬರಲ್ಲಿ ಯಾವ ರೀತಿಯ ಗುಪ್ತ ವಿಚಾರಗಳೂ ಇರಬಾರದು. ಹಾಗೆಂದು ಇಬ್ಬರೂ ಪ್ರಾಮಿಸ್ ಮಾಡಿಕೊಂಡಿದ್ದರು. ಇಬ್ಬರ ಮನೆಯವರಿಗೂ ಇವರ ಸ್ನೇಹ ವಿಶ್ವಾಸ ಕಂಡು ಅತ್ಯಂತ ಸಂತಸವಾಗಿತ್ತು.
ಹೀಗಿರುವಾಗ ಸಂಚಿತಾಳ ತಂದೆಗೆ ಬೇರೆ ಊರಿಗೆ ವರ್ಗಾವಣೆಯಾಯಿತು. ಐದನೇ ತರಗತಿಯಲ್ಲಿ ಓದುತ್ತಿದ್ದ ಸಂಚಿತಾಳನ್ನು ಕರೆದುಕೊಂಡು ಅವರು ಹೊರಟಾಗ ಅನಿತಾಳಿಗೆ ಬಹಳ ದುಃಖವಾಯಿತು. ಆದರೆ ಒಂದೇ ವರ್ಷದಲ್ಲಿ ಅವರು ವಾಪಸ್ಸು ಅದೇ ಊರಿಗೆ ಹಿಂತಿರುಗುವವರಿದ್ದರು. ಒಂಬತ್ತನೇ ತರಗತಿ ಓದುತ್ತಿರುವಾಗಲೂ ಪುನಃ ಸಂಚಿತಾ ತಂದೆಗೆ ವರ್ಗಾವಣೆಯಾಯಿತು. ಆದರೆ ಈ ಬಾರಿ ಅವಳ ಪೋಷಕರು ಅವಳನ್ನು ಅನಿತಾಳ ಪೋಷಕರ ಜವಾಬ್ದಾರಿಯ ಮೇಲೆ ಅದೇ ಊರಿನ ಹಾಸ್ಟೆಲ್‌ನಲ್ಲಿ ಬಿಟ್ಟುಹೋಗಿದ್ದರು. ಹೀಗೆ ಅನಿತಾ, ಸಂಚಿತಾ ಇಬ್ಬರೂ ಸ್ನೇಹಜೀವಿಗಳಾಗಿ ಒಟ್ಟಿಗೇ ಬೆಳೆದವರು.
ಶಾಲಾ ವಿದ್ಯಾಭ್ಯಾಸದ ನಂತರ ಅನಿತಾ ಕಲಾ ವಿಭಾಗ ಆಯ್ದುಕೊಂಡು ಇಂಗ್ಲಿಷ್ ಸಾಹಿತ್ಯದ ಮೇಜರ್ ಕಟ್ಟಿದಳು. ಬರವಣಿಗೆಯಲ್ಲಿ ಆಸಕ್ತಿ ಇದ್ದ ಅವಳಿಗೆ ಬಹು ಬೇಗ ಉನ್ನತಿ ಸಿಕ್ಕಿತು. ಇನ್ನು ಸಂಚಿತಾ ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ, ಮುಂದೆ ಎಂಜಿನಿಯರಿಂಗ್ ತೆಗೆದುಕೊಂಡು ಒಳ್ಳೆಯ ಕೆಲಸ ಗಿಟ್ಟಿಸಿದಳು. ಅವಳಿಗೆ ದುಬೈಗೆ ಹೋಗಿ ಕೆಲಸ ಮಾಡುವ ಅವಕಾಶ ದೊರಕಿತು. ಸಂಚಿತಾ ದುಬೈಗೆ ಹೊರಡುವುದಕ್ಕೆ ಮುನ್ನ ಅನಿತಾ ಬಳಿ ತಮ್ಮ ಪ್ರಾಮಿಸ್‌ನ್ನು ನೆನಪಿಸಿ ಅದನ್ನು ಮರೆಯಬಾರದೆಂದು ಮತ್ತೊಮ್ಮೆ ಎಚ್ಚರಿಸಿ ಹೋದಳು.
ಎರಡು, ಮೂರು ವರ್ಷಗಳಲ್ಲಿ ಅನಿತಾ ಸಹ ಒಳ್ಳೆಯ ನ್ಯೂಸ್ ಪೇಪರ್ ಆಫೀಸ್‌ಗೆ ಸೇರಿ ಪ್ರಧಾನ ಅಂಕಣಗಾರ್ತಿಯಾದಳು. ಜೊತೆಗೆ ಒಂದೆರಡು ಕಾದಂಬರಿಗಳನ್ನೂ ಪ್ರಕಟಿಸಿ ತನ್ನದೇ ಓದುಗ ಬಳಗವನ್ನು ಸೃಷ್ಚಿಸಿಕೊಂಡಳು.
ಈಗ ಇಬ್ಬರ ಮನೆಯವರೂ ತಮ್ಮ ಮಕ್ಕಳಿಗೆ ಸರಿಯಾದ ವರಾನ್ವೇಷಣೆ ಪ್ರಾರಂಭಿಸಿದರು. ಇದರಿಂದ ಅನಿತಾಗೆ ಚಿಂತೆ ಶುರುವಾಯಿತು. ಇಷ್ಟು ದಿನ ತಾವಿಬ್ಬರೂ ಒಟ್ಟಿಗಿದ್ದೆವು. ಇನ್ಮು ಮದುವೆಯ ನಂತರ ನಾವು ಹೀಗೆ ಇರಲು ಸಾಧ್ಯವೇ? ತಮ್ಮಿಬ್ಬರ ನಡುವಿನ ಒಪ್ಪಂದದ ಕಥೆ ಏನು? ಎಂದು ಅನಿತಾ ಯೋಚಿಸುತ್ತಿರುವಾಗಲೇ, ಸಂಚಿತಾ ಭಾರತಕ್ಕೆ ಹಿಂತಿರುಗಿತ್ತಿರುವುದಾಗಿಯೂ ಜೊತೆಗೆ ತಾನೇ ಆಯ್ಕೆ ಮಾಡಿಕೊಂಡ ಹುಡುಗನೂ ಬರುತ್ತಿದ್ದು, ತಾವಿಬ್ಬರೂ ಅತಿ ಬೇಗ ವಿವಾಹವಾಗುತ್ತಿರುವುದಾಗಿ ತಿಳಿಸಿದಳು.
ಅನಿತಾ ಕೂಡ ಇದೇ ಕ್ಷಣಕ್ಕೆ ಕಾಯುತ್ತಿದ್ದಳು. ತಾನೂ ಆಯ್ಕೆ ಮಾಡಿಕೊಂಡಿದ್ದ ಹುಡುಗನನ್ನು ಅವಳಿಗೆ ಪರಿಚಯಿಸಿ ಸರ್‌ಪ್ರೈಸ್ ನೀಡಬೇಕೆಂದು ನಿರ್ಧರಿಸಿದಳು.
ಕಡೆಗೂ ಆ ದಿನ ಬಂದೇಬಿಟ್ಟಿತು. ಅಂದು ಅನಿತಾ ಮನೆಗೆ ಸಂಚಿತಾ ಮತ್ತು ಅವಳ ಮನೆಯವರು ಜೊತೆಗೆ ಆ ಹುಡುಗ ಎಲ್ಲರೂ ಬರುವುದೆಂದು ನಿರ್ಧಾರವಾಗಿತ್ತು. ಸಂಚಿತಾ ಮೊದಲೇ ಬಂದಿದ್ದಳು. ಮತ್ತೆ ಇಬ್ಬರೂ ಗೆಳತಿಯರೂ ಕೂಡಿ ಗಂಟೆಗಟ್ಟಲೆ ಹರಟೆ ಹೊಡೆದರು. ಮಾತಿನ ನಡುವೆ ಸಂಚಿತಾ ಅನಿತಾಗೆ ನಿನ್ನ ಹುಡುಗನ ಫೋಟೋ ತೋರಿಸೆಂದಳು. ಅನಿತಾ ಸಂತಸದಿಂದ ತನ್ನ ಮೊಬೈಲ್‌ನಲ್ಲಿದ್ದ ಅವಳ ಮೆಚ್ಚಿನ ಹುಡುಗ ಕಿರಣ್‌ನ ಫೋಟೋ ತೋರಿಸಿದಳು.