ಕಥೆ - ಎ.ಎಂ. ನರಸಗೊಂಡ
ಯಾವುದೋ ಆವೇಶದಲ್ಲಿ ತನ್ನ ಮೊದಲ ಮದುವೆಯಿಂದ ಹೊರಬಂದ ಅಮೃತಾ, ಆ ಗಂಡನ ಪ್ರೇಮವನ್ನು ಮುಂದೆ ಮರೆಯದಾದಳು. ತನ್ನ ಎರಡನೇ ಗಂಡನ ಆಪ್ತ ಗೆಳತಿಯ ಗಂಡನೇ ತನ್ನ ಮಾಜಿ ಗಂಡ ಎಂದು ಗೊತ್ತಾದಾಗ, ಅವರಿಬ್ಬರ ಕೊರತೆಯನ್ನು ಶಾಶ್ವತವಾಗಿ ನಿವಾರಿಸಲು ಅವಳು ಕೈಗೊಂಡ ನಿರ್ಧಾರವೇನು.....?
ಬುಸಬುಸನೆ ಸಿಗರೇಟಿನ ಹೊಗೆ ಬಿಡುತ್ತಾ, ಓರೆಗಣ್ಣಿನಲ್ಲಿ ಹೆಂಡತಿಯತ್ತ ನೋಡುತ್ತಾ ಕೇಳಿದ ಭಾಸ್ಕರ, ``ನೀನವನನ್ನು ಇಷ್ಟಪಡ್ತಿದ್ದೀಯಾ ಅಲ್ವಾ....?''
``...........''
ಅಮೃತಾ ಸಶಬ್ದವಾಗಿ ಕೈಯಲ್ಲಿದ್ದ ಕಾಫಿ ಗುಟುಕರಿಸುತ್ತಾ, ಅವನ ಮಾತು ತನಗೆ ಕೇಳಿಸಿಯೇ ಇಲ್ಲವೆಂಬಂತೆ ಕಿಟಕಿಯಿಂದಾಚೆಗೆ ನೋಡುತ್ತಿದ್ದಳು. ಭಾಸ್ಕರನ ಮುಂದಿದ್ದ ಕಾಫಿ ಆರಿಹೋಗಿತ್ತು. ಅವನಿಗೆ ಕುಳಿತಿದ್ದ ಮೆತ್ತನೆಯ ಕುಶನ್ ಸೋಫಾ ಮುಳ್ಳಿನಂತೆ ಅನಿಸಿತು.
``ನಿನ್ನನ್ನೇ ಕೇಳ್ತಿರೋದು.... ಸೌರವ್ ಗೂ ನಿನಗೂ ಏನು ಸಂಬಂಧ?''
ತೀಕ್ಷ್ಣವಾದ ದೃಷ್ಟಿಯಿಂದ ಅವನತ್ತ ನೋಡುತ್ತಾ, ``ಗಂಡು-ಹೆಣ್ಣಿನ ನಡುವೆ ಕೆಟ್ಟ ಸಂಬಂಧ ಬಿಟ್ಟು ಬೇರೆ ಭಾವನೆಗಳು ಇರಬಾರದು ಅಂತ ಏನಾದರೂ ಅಲಿಖಿತ ಮಾಡಿದ್ದೀರಾ..... ನೀವು ಗಂಡಸರು?'' ಎಂದೆನ್ನುತ್ತಾ ಉತ್ತರಕ್ಕೂ ಕಾಯದೆ ಒಳಹೊರಟಳು. ಜಗಳ ವಾದ ವಿವಾದ ಈಗ ಅವಳಿಗಿಷ್ಟವಿರಲಿಲ್ಲ.
``ಅಮೃತಾ, ಸ್ವಲ್ಪ ನಿಲ್ಲು!'' ಭಾಸ್ಕರನ ಈ ಪರಿ ಬಿರುನುಡಿ ಕೇಳಿ ಅಚ್ಚರಿಯಿಂದ ಕಣ್ಣರಳಿಸಿದಳು. ಮದುವೆಯಾದ ಮೂರು ವರ್ಷದ ತನಕ ಅವಳನ್ನು ಒಂದು ಸಲ ಅಮೃತಾ ಎಂದು ಹೆಸರಿಡಿದು ಕರೆದಿರಲಿಲ್ಲ. ಬದಲಾಗಿ ಪಾಪು ಇಲ್ಲವೇ ಅಮ್ಮು ಎನ್ನುತ್ತಿದ್ದ.
``ಅಮೃತಾ, ನಮ್ಮಿಬ್ಬರ ಸಂಬಂಧ ಹಳಸಿ ತುಂಬಾ ದಿನಗಳಾಯಿತು. ಹಳಸಿದ್ದು ಅನಾರೋಗ್ಯಕ್ಕೆ ದಾರಿ ಮಾಡುತ್ತೆ. ಇಬ್ಬರೂ ಒಂದು ನಿರ್ಧಾರಕ್ಕೆ ಬರುವ ಸಮಯ ಆಯ್ತು ಅನ್ಸುತ್ತೆ,'' ಎಂದು ಸಿಗರೇಟ್ ತುಂಡನ್ನು ಆ್ಯಶ್‌ಟ್ರೇಯಲ್ಲಿ ಹಾಕುತ್ತಾ ಹೇಳಿದ.
``ನಿಮಗಿಷ್ಟ ಬಂದ ಹಾಗೆ ಮಾಡಿ, ಸೈನ್ ಮಾಡಲು ನಾನು ಕೂಡ ಎಂದೋ ತಯಾರಾಗಿದ್ದೀನಿ,'' ಎಂದವಳೇ ಅವನ ಮುಖದ ಭಾವನೆಗಳನ್ನು ಅವಳು ಅಳೆಯಲು ಹೋಗಲಿಲ್ಲ. ಬದಲಾಗಿ ತನ್ನ ಕಣ್ಣಂಚಿನಲ್ಲಿ ಎರಡು ಹನಿ ನೀರು ಕೂಡ ಬರದಿದ್ದಕ್ಕೆ ಆಶ್ಚರ್ಯಪಟ್ಟಳು.
`.......... ಮನಸ್ಸು ಕೆಟ್ಟರೆ ವಜ್ರಕ್ಕಿಂತಲೂ ಕಠಿಣವಾಗುತ್ತೆ, ಸೋತರೆ ಬೆಣ್ಣೆಗಿಂತಲೂ ಮೃದುವಾಗುತ್ತದೆ....' ರೇಡಿಯೋದಲ್ಲಿ ಚಿಂತನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.
ಇದೆಲ್ಲ ಆಗಿ ಈಗ್ಗೆ ಸುಮಾರು ಐದು ವರ್ಷಗಳಾಗಿ ಹೋಗಿವೆ. ಇಬ್ಬರೂ ಈಗ ವಿಚ್ಛೇದಿತರು ಮತ್ತು ಬೇರೆ ಬೇರೆ ಮದುವೆ ಕೂಡ ಆಗಿದ್ದಾರೆ.
ಅಮೃತಾ, ಸೌರವ್ ಗೆ ಕಾಫಿ ಕೊಡುತ್ತಾ, ``ಸಂಜೆ ಬೇಗ ಮನೆಗೆ ಬಾ. ಮಕ್ಕಳನ್ನು ಕರೆದುಕೊಂಡು ತಿರುಗಾಡಲಿಕ್ಕೆ ಹೋಗೋಣ,'' ಎಂದವಳ ಕಣ್ಣುಗಳಲ್ಲಿ ಮಿಂಚಿನ ಹೊಳಪಿತ್ತು, ಮುಖದಲ್ಲಿ ತಾಯ್ತನದ ಕಳೆ ತುಂಬಿ ತುಳುಕಾಡುತ್ತಿತ್ತು.
``ಎಸ್ ಬಾಸ್,'' ಎನ್ನುತ್ತಾ ಅವಳ ಕೆನ್ನೆಗೆ ಹೂಮುತ್ತನ್ನಿಟ್ಟು ಹೊರಟವನಿಗೆ ಸಂಜಿತ್, ಸುಖಿತ್ ಕೂಡ ಟಾಟಾ ಮಾಡಿದರು.
ಅಮೃತಾ ಈಗ ಅಪ್ಪಟ ಗೃಹಿಣಿ. ಮನೆಯನ್ನು ಅಭಿಮಾನದಿಂದ ಸಿಂಗರಿಸುತ್ತಾಳೆ. ಗಂಡನ ಬೇಕು ಬೇಡಗಳನ್ನು, ಮಕ್ಕಳನ್ನು ಪ್ರೀತಿಯಿಂದ ಗಮನಿಸುತ್ತಾಳೆ. ಬದುಕೀಗ ತುಂಬಿದ ಕೊಡ. ಆದರೂ ಎಲ್ಲೋ ಬಿಂದಿಗೆ ತೂತಾಗಿ ನೀರು ಸೋರಿ, ಬಿಂದಿಗೆ ತುಳುಕುತ್ತಾ ಇದೆಯಾ? ಅನ್ನೋ ಸಂಶಯ ಅವಳದು. ಅವಳ ಮನದಲ್ಲೇನೋ ಅವ್ಯಕ್ತ ನೋವು, ವಿಷಾದ ಅದೇನೆಂದು ಗೊತ್ತಾಗುತ್ತಿಲ್ಲ.