ಕಥೆ -ಎಸ್‌. ಎನ್‌. ದಿವ್ಯಪ್ರಭಾ

ಆದರೆ ಆಶ್ರಮದಿಂದ ಹಿಂದಿರುಗಿದಾಗ ಗರ್ಭಪಾತವಾಗಲು ಕಾರಣವೇನು? ಅದು ಆ ಕಪಟ ಸ್ವಾಮೀಜಿಯ ಕೈವಾಡವೇ ಅಥವಾ ಬೇರೇನಾದರೂ ಆಯಿತೇ…..?

ನಿದ್ದೆ ಬಾರದೆ ಮತ್ತೊಂದು ಪಕ್ಕಕ್ಕೆ ಹೊರಳಿದೆ. ಕಿಟಕಿಯಾಚೆ ಆಗಸದಲ್ಲಿ ಮಿನುಗುತ್ತಿರುವ ತಾರೆಗಳು ಕಂಡವು. ಆದರೆ ನನ್ನ ಮನದ ಆಗಸದ ತಾರೆಗಳು ಮಸುಕಾಗಿದ್ದವು.

ಪಕ್ಕದಲ್ಲಿದ್ದ ಪ್ರಶಾಂತ್‌ ಆರಾಮವಾಗಿ ನಿದ್ರಿಸುತ್ತಿದ್ದರು. ಬಹುಶಃ ಅವರಿಗೆ ಮನಸ್ಸನ್ನು ಕದಡುವ ಯಾವುದೇ ಯೋಚನೆಗಳು ಇದ್ದಿರಲಾರವು. ಹಾಗೆ ನೋಡಿದರೆ ನನಗೂ ಅಂತಹ ತೊಂದರೆಗಳೇನೂ ಇರಲಿಲ್ಲ. ವಿನಾಕಾರಣ ಚಿಂತಿಸುವ ಅಭ್ಯಾಸ ನನ್ನದಿರಬಹುದೇನೋ! ಸಲ್ಲದ ಯೋಚನೆಗಳಿಂದಾಗಿ ರಾತ್ರಿ ಕಳೆಯುವುದೇ ನನಗೆ ಕಷ್ಟವಾಗುತ್ತಿದೆ. ನಿಶೆಯ ಈ ನೀರವತೆಯಲ್ಲಿ ನನ್ನ ಮನಸ್ಸಿನ ವಿಚಾರ ಲಹರಿಯನ್ನು ತಡೆಗಟ್ಟಲು ನನ್ನಿಂದಾಗುತ್ತಿಲ್ಲ. ನಾನು ನಿದ್ರೆ ಇಲ್ಲದೆ ರಾತ್ರಿಯನ್ನು ಕಳೆಯುತ್ತೇನೆಂಬ ಅರಿವೇ ಪ್ರಶಾಂತ್‌ಗೆ ಇಲ್ಲ.

ಮೊದಲಿನಿಂದಲೂ ನಾನು ಸ್ವಾಭಿಮಾನಿ ಹೆಣ್ಣು ಸ್ವತಂತ್ರ ಮನೋಭಾವದವಳು. ಪ್ರತಿಯೊಂದು ವಿಷಯವನ್ನು ಆಳವಾಗಿ ಯೋಚಿಸುತ್ತಿದ್ದೆ, ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದೆ. ಎಲ್ಲಾ ಮಾತಿನಲ್ಲೂ ಒಳಾರ್ಥವನ್ನು ಹುಡುಕಿ ಹೊರಗೆಳೆಯುತ್ತಿದ್ದೆ. ಹೀಗಾಗಿ ಎಲ್ಲರೂ ನನ್ನಿಂದ ಕೊಂಚ ದೂರವೇ ನಿಲ್ಲುತ್ತಿದ್ದರು. ಈಗ ಪ್ರಶಾಂತ್‌ ಕೂಡ ಹಾಗೆ ನನ್ನಿಂದ ಒಂದಿಷ್ಟು ದೂರವೇ ಉಳಿದು ಬಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಪ್ರಶಾಂತ್‌ ಏನೂ ಕೆಟ್ಟವರಲ್ಲ. ಅವರು ಎಲ್ಲ ವಿಷಯಗಳನ್ನು ನೇರವಾಗಿ ತೆಗೆದುಕೊಳ್ಳುವರು. ನಮ್ಮಿಬರ ಸ್ವಭಾವಗಳು ವಿಭಿನ್ನವಾಗಿವೆಯಷ್ಟೇ.

ಮದುವೆಗೆ ಮೊದಲು ಒಂದೆರಡು ಭೇಟಿಗಳ ಸಂದರ್ಭದಲ್ಲೇ ನನ್ನ ನೇರ ಮಾತಿನಿಂದ ಪ್ರಶಾಂತ್‌ ಮುಜುಗರ ಪಟ್ಟಿದ್ದರೆಂದು ತೋರುತ್ತದೆ.

“ಇದೇನಿದು ಶಿಲ್ಪಾ? ನೀನು ನನ್ನ ಹೆಸರು ಹಿಡಿದು ಮಾತನಾಡಿಸುತ್ತೀಯಲ್ಲ!” ಪ್ರಶಾಂತ್‌ ಅಸಮಾಧಾನದಿಂದ ಹೇಳಿದ್ದರು.

“ನೀವು ಅಷ್ಟೇ ತಾನೇ? `ಶಿಲ್ಪಾ’ ಎಂದೇ ನನ್ನನ್ನು ಕರೆಯುತ್ತಿದ್ದೀರಲ್ಲವೇ?” ನಾನು ತಡಬಡಾಯಿಸದೆ ಉತ್ತರಿಸಿದೆ.

ನನ್ನ ಮಹಿಳಾವಾದಿ ಧೋರಣೆಯು ನನಗೆ ಹೆಮ್ಮೆಯ ವಿಷಯವಾಗಿತ್ತು. ಆದರೆ ಪ್ರಶಾಂತ್‌ ಮುಖದಲ್ಲಿ ಬೇಸರ ಸ್ಪಷ್ಟವಾಗಿ ವ್ಯಕ್ತವಾಗಿತ್ತು.

ಮದುವೆಯ ಶಾಸ್ತ್ರ ಮುಗಿಸಿ ಬಂದ ಮೇಲಾಗಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಿತು. ಮನೆಯಲ್ಲಿ ಸಾಕಷ್ಟು ನೆಂಟರಿಷ್ಟರು ನೆರೆದಿದ್ದರು.

“ರತ್ನದಂತಹ ಹುಡುಗಿ ಕಣೋ ಪ್ರಶಾಂತು. ಒಂಟಿಯಾಗಿ ಎಲ್ಲೂ ಕಳಿಸಬೇಡಪ್ಪ,” ಚಿಕ್ಕಮ್ಮ ಹೇಳಿದರು.

“ಎಲ್ಲಾದರೂ ಉಂಟೇ ಚಿಕ್ಕಮ್ಮ. ಜೊತೆ ಇಲ್ಲದೆ ಕಳಿಸೋ ಪ್ರಶ್ನೆಯೇ ಇಲ್ಲ.”

ಈ ಮಾತು ಕೇಳಿ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ನಕ್ಕರು. ಅದೊಂದು ತಮಾಷೆಯ ಮಾತೆಂಬಂತೆ ನಾನೂ ನಸು ನಾಚಿ ಎಲ್ಲರ ನಗುವಿನಲ್ಲಿ ಭಾಗಿಯಾದೆ. ಆದರೆ ಅದು ಕೇವಲ ತಮಾಷೆಯ ಮಾತಲ್ಲ, ಹೆಣ್ಣಿನ ಬಗ್ಗೆ ಅವರ ಭಾವನೆ ಏನು ಎಂಬ ಅಂತರಾರ್ಥವನ್ನು ನಾನು ಆ ಮಾತಿನ ಆಳದಲ್ಲಿ ಹುಡುಕಿ ತೆಗೆದೆ. ಈ  ಕಾಲದಲ್ಲಿಯೂ ಹೆಣ್ಣಿನ ಸ್ಥಾನ ಪುರುಷನಿಗಿಂತಲೂ ಕೆಳಗಿನದು ಎಂಬ ಅವರ ಆಲೋಚನೆಯು ನನ್ನನ್ನು ನಾನು ಗಟ್ಟಿಗೊಳಿಸಿಕೊಳ್ಳಲು ಪ್ರೇರಣೆ ನೀಡಿತು.

ಹನಿಮೂನ್‌ ಸಂಭ್ರಮವೆಲ್ಲ ಮುಗಿಸಿ ವಿರಾಮ ಆದಾಗ ನಾನು ಪ್ರಶಾಂತ್‌ಗೆ ಹೇಳಿದೆ, “ಒಬ್ಬಳೇ ಮನೆಯಲ್ಲಿ ಕೂರೋದಕ್ಕೆ ಆಗೋಲ್ಲ. ನಾನು ಕೆಲಸಕ್ಕೆ ಸೇರುತ್ತೇನೆ.”

“ಕೆಲಸಕ್ಕೆ ಸೇರೋ ಅಗತ್ಯ ಏನಿದೆ? ನಾನು ಸಂಪಾದಿಸುತ್ತಾ ಇದ್ದೇನಲ್ಲ.” ಈ ಉತ್ತರ ಕೇಳಿ ಹಳೇ ಸಿನಿಮಾಗಳ ಗಡಸು ಮುಖದ ಪತಿಯ ಪಾತ್ರದ ಚಿತ್ರಗಳು ಕಣ್ಣಮುಂದೆ ಬಂದವು.

ನಾನು ಹೇಳಿದೆ, “ಮದುವೆಗೆ ಮೊದಲೂ ನಾನು ಕೆಲಸ ಮಾಡುತ್ತಿದ್ದೆ.”

“ಆಗ ಆದರೆ ನಿನ್ನ ಖರ್ಚನ್ನು ತೂಗಿಸೋದಕ್ಕೆ ನಿಮ್ಮ ಮನೆಯವರಿಗೆ ಆಗುತ್ತಿರಲಿಲ್ಲ ಅಂತ ಕಾಣುತ್ತೆ. ಈಗ ನೀನು ನನ್ನ ಜವಾಬ್ದಾರಿ. ನಿನ್ನನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನೋದು ನನಗೆ ಗೊತ್ತು. ಅಷ್ಟನ್ನು ತಿಳಿದುಕೊ.”

ನನ್ನ ತವರಿನ ಬಗೆಗೆಗಿನ ಅವರ ಟೀಕೆ ನನ್ನನ್ನೂ ಕೆರಳಿಸಿತು. “ನಾನು ಕೆಲಸ ಮಾಡುತ್ತಾ ಇದ್ದುದ್ದು ಹಣ ಸಂಪಾದನೆಗಲ್ಲ, ನನ್ನ ಸಂತೋಷಕ್ಕೆ! ಈಗಲೂ ನಾನು ಕೆಲಸಕ್ಕೆ ಸೇರೇ ಸೇರುತ್ತೇನೆ. ನಿಮ್ಮ ಹಣದ ಉಸಾಬರಿಯೇ ನನಗೆ ಬೇಡ.” ಎನ್ನುತ್ತಾ ನಾನು ಮೇಲೆದ್ದೆ.

“ಇಷ್ಟೊಂದು ಹಠ ಇದ್ದರೆ ಹೋಗು, ಆಮೇಲೆ ಯಾವತ್ತೂ ನನ್ನಿಂದ ಒಂದು ಕಾಸೂ ನಿರೀಕ್ಷೆ ಮಾಡಬೇಡ,” ಬಾಗಿಲನ್ನು ದಾಟುವಾಗ ಪ್ರಶಾಂತರ ಕಠೋರ ಧ್ವನಿ ಕೇಳಿಸಿತು.

ಒಂದು ಕ್ಷಣ ನನ್ನ ಕಾಲುಗಳು ನಡುಗಿದವು. ಆದರೆ ಸ್ವಾಭಿಮಾನಿಯಾದ ನಾನು ಹಿಂದಿರುಗಿ ನೋಡದೆ ಕೊಠಡಿಯಿಂದ ಹೊರನಡೆದೆ.

ಮದುವೆಯ ನಂತರದ ಈಚಿನ ದಿನಗಳಲ್ಲಿ ನಾವಿಬ್ಬರೂ ಸಾಕಷ್ಟು ಬದಲಾಗಿದ್ದೇವೆ. ಪ್ರಶಾಂತ್‌ ನನ್ನ ಬಗ್ಗೆ ಭಾವನಾರಹಿತರಾಗಿ ಇದ್ದುಬಿಟ್ಟಿದ್ದಾರೆ. ನಾನು ಈಗ ಮೊದಲಿನಂತೆ ಎಲ್ಲ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಆದಷ್ಟು ನಿಲ್ಲಿಸಿದ್ದೇನೆ. ಇಬ್ಬರೂ ಹೆಚ್ಚಿನ ಸಮಯವನ್ನು ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ಆಫೀಸಿನಿಂದ ಸುಸ್ತಾಗಿ ಮನೆಗೆ ಹಿಂದಿರುಗಿ, ಊಟ ಮುಗಿಸಿ ನಮ್ಮ ನಮ್ಮ ಲ್ಯಾಪ್‌ಟಾಪ್‌ನಲ್ಲಿ ಮುಳುಗಿ ಹೋಗುತ್ತೇವೆ. ಒಮ್ಮೊಮ್ಮೆ ಪ್ರಶಾಂತ್‌ ನನ್ನ ಸಂಗ ಬಯಸಿ ಬಳಿ ಸರಿದಾಗ ನಾನು ಯಂತ್ರದಂತೆ ಅವರ ಬಯಕೆಯನ್ನು ಪೂರೈಸುತ್ತೇನೆ. ಅವರಿಗೆ ನನ್ನ ಇಷ್ಟಾನಿಷ್ಟಾಗಳ ಬಗ್ಗೆ ಏನೂ ಕಾಳಜಿಯಿಲ್ಲ.

ಈಚೆಗಂತೂ ಅವರೊಡನೆ ಜಗಳವಾಡಲು ಮನಸ್ಸಾಗುವುದಿಲ್ಲ. ಮೊದಲಿನಂತೆ ನಮ್ಮ ಜಗಳ ಈಗ ದಿನಗಟ್ಟಲೆ ಮುಂದುರಿಯುವುದಿಲ್ಲ. ಅಂದಿನದನ್ನು ಅಂದಿಗೇ ಮುಗಿಸಲು ನಾನೇ ಮುಂದಾಗುತ್ತೇನೆ. ಅಂದರೆ ಪ್ರಶಾಂತ್‌ ಹೇಳುವುದೆಲ್ಲವನ್ನು ನಾನು ಒಪ್ಪುತ್ತೇನೆಂದು ಅರ್ಥವಲ್ಲ. ಅವರು ಮಾಡುವುದನ್ನು ಅವರಿಗೇ ತೋರಿಸಿಕೊಟ್ಟು ಆ ಅಧ್ಯಾಯವನ್ನು  ಅಲ್ಲಿಗೇ ಮುಗಿಸುತ್ತೇನೆ.

ಆ ದಿನ ಪ್ರಶಾಂತರ ತಂಗಿ ರೇವತಿಯ ಮಗನ ಬರ್ತ್ ಡೇ ಪಾರ್ಟಿ ಇತ್ತು. ಸಂಜೆ ಆಫೀಸಿನಿಂದ ಬೇಗನೆ ಮನೆಗೆ ಬರುವಂತೆ ಪ್ರಶಾಂತ್‌ ನನಗೆ ಹೇಳಿದರು. ಅವರು ತಮ್ಮ ಮಾತು ಮುಗಿಸುವ ಮೊದಲೇ ನಾನು ತಣ್ಣನೆಯ ಸ್ವರದಲ್ಲಿ ಹೇಳಿದೆ, “ನನಗೆ ಆಫೀಸಿನಲ್ಲಿ ಕೆಲಸ ಹೆಚ್ಚಾಗಿದೆ, ನನ್ನನ್ನು ಕಾಯಬೇಡಿ. ನೀವೇ ಹೋಗಿ ಬನ್ನಿ.”

“ನಾನೊಬ್ಬನೇ ಹೇಗೆ ಹೋಗಲಿ? ಎಲ್ಲರೂ ಶಿಲ್ಪಾ ಯಾಕೆ ಬರಲಿಲ್ಲ ಅಂತ ಕೇಳುತ್ತಾರೆ. ಏನು ಹೇಳಲಿ?”

“ನನ್ನ ತವರುಮನೆ ಕಡೆಯ ಸಮಾರಂಭಗಳಿಗೆ ನಾನೊಬ್ಬಳೇ ಹೋದಾಗ ನಾನು ಏನು ಹೇಳಬೇಕಾಗುತ್ತದೋ ಅದನ್ನೇ ಹೇಳಿ,” ಎನ್ನುತ್ತಾ ನಾನು ಮುಂಬಾಗಿಲನ್ನು ಜೋರಾಗಿ ಎಳೆದುಕೊಂಡು ಆಫೀಸಿಗೆ ಹೊರಟೆ.

ಆ ಮಾತು ಹೇಳುವಾಗ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಆದರೆ ನನ್ನ ದೌರ್ಬಲ್ಯ ಅವರಿಗೆ ತಿಳಿಯಬಾರೆದೆಂದು ನಾನು ಬೇಗನೆ ಬಾಗಿಲು ಮುಚ್ಚಿ ಹೊರ ಬಂದಿದ್ದೆ.

ಇಂತಹ ಎದುರುತ್ತರಗಳಿಂದ ಪ್ರಶಾಂತ್‌ ತಮ್ಮ ತಪ್ಪನ್ನು ಅರಿತುಕೊಳ್ಳಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಅವರ ಕಾಳಜಿರಹಿತ ವರ್ತನೆಗೆ ನಾನು ನೀಡುವ ಒರಟು ಉತ್ತರಗಳು ನಮ್ಮ ನಡುವಿನ ಅಂತರವನ್ನೂ ಹೆಚ್ಚಿಸುತ್ತಿದ್ದವು ಅಷ್ಟೇ.  ಪ್ರೀತಿಯಿಂದ ಅವರಿಗೆ ತಿಳಿಸಿ ಹೇಳಿ ನಮ್ಮ ಬಾಂಧ್ಯವವನ್ನು ಬಿಗಿಗೊಳಿಸಲು ನಾನು ಎಷ್ಟೋ ಸಲ ಪ್ರಯತ್ನಿಸಿಯೂ ಇದ್ದೆ. ಆದರೆ ಎರಡೂ ಕಡೆಯಿಂದಲೂ ಇದು ನಡೆಯಬೇಕಾಗಿದೆ. ಆಗಲೇ ಪ್ರೀತಿಯ ಬೆಸುಗೆ ಸ್ಥಿರವಾಗುವುದು.

ನಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳುವ ಒಂದು ಅವಕಾಶ ನನಗೆ ದೊರೆಯಿತು. ನನ್ನ ಕಣ್ಣುಗಳು ತುಂಬಿ ಬಂದವು. ಪ್ರಶಾಂತರೊಡನೆ ಕಳೆದ ಸುಂದರ ಕ್ಷಣಗಳು ನೆನಪಾದವು…….

`ಪ್ರಶಾಂತ್‌…” ನಾನು ಮೆಲ್ಲನೆ ಉಸುರಿದೆ.

“ಹುಂ….” ಅವರು ಲ್ಯಾಪ್‌ಟಾಪನ್ನು ನೋಡುತ್ತಲೇ ಹೇಳಿದರು.

“ನಿಮ್ಮ ಜೊತೆ… ಸ್ವಲ್ಪ ಮಾತನಾಡೋದಿದೆ…”

“ಕೇಳಿಸುತ್ತಾ ಇದೆ. ಹೇಳು,” ಈಗಲೂ ಕತ್ತೆತ್ತದೇ ಹೇಳಿದರು.

“ಮತ್ತೆ…. ನಾನು…….” ನನ್ನ ಧ್ವನಿ ನಡುಗಿತು. ನನ್ನ ಮಾತಿಗೆ ಪ್ರಶಾಂತ್ ಪ್ರತಿಕ್ರಿಯೆ ಹೇಗಿರುತ್ತದೋ ಎಂಬ ಆತಂಕ ಅಲ್ಲಿ ಮನೆ ಮಾಡಿತ್ತು.

“ಹೇಳು ಶಿಲ್ಪಾ…..  ಏನು ವಿಷಯ…?” ನನ್ನ ಅಳುಕು ಅವರನ್ನು ಕತ್ತೆತ್ತಿ ನೋಡುವಂತೆ ಮಾಡಿತ್ತು.

“ಪ್ರಶಾಂತ್‌, ನಾನು…. ಗರ್ಭಿಣಿಯಾಗಿದ್ದೇನೆ,” ಈಗ ನಾನು ಕತ್ತು ಬಗ್ಗಿಸಿ ಹೇಳಿದೆ.

“ಹೌದಾ?” ತಕ್ಷಣ ಲ್ಯಾಪ್‌ಟಾಪ್‌ನ್ನು ಪಕ್ಕಕ್ಕೆ ಸರಿಸುತ್ತಾ ಪ್ರಶಾಂತ್‌ ಹೇಳಿದರು. ಅವರ ಮುಖ ನೋಡಿದೆ. ಪ್ರಶಾಂತರ ಮುಖದಲ್ಲಿ ಅಂತಹ ಸಂತೋಷವನ್ನು ನಾನೆಂದೂ ಕಂಡಿರಲಿಲ್ಲ.

ನನ್ನನ್ನು ಆಲಂಗಿಸುತ್ತಾ ಪ್ರಶಾಂತ್‌ “ಓಹ್‌, ಎಂತಹ ಶುಭಸುದ್ದಿ ಹೇಳಿದೆ ಶಿಲ್ಪಾ. ನಿಜಕ್ಕೂ ನಾನಿದನ್ನು ಸೆಲೆಬ್ರೇಟ್‌ ಮಾಡಬೇಕು,” ಎನ್ನುತ್ತಾ ಮತ್ತೆ ಮತ್ತೆ ನನ್ನ ಹಣೆಗೆ ಮುತ್ತಿಟ್ಟರು.

ವಿಷಯ ತಿಳಿದ ನಂತರ ಪ್ರಶಾಂತ್‌ ಸಂಪೂರ್ಣ ಬದಲಾಗಿಬಿಟ್ಟರು. ನನ್ನೆಡೆಗೆ ಅವರು ತೋರುತ್ತಿದ್ದ ನಿರ್ಭಾವ ರಹಿತ ವರ್ತನೆ ಮಾಯವಾಗಿತ್ತು. ಪ್ರಶಾಂತ್‌ರಿಗೆ ಈ ವಿಷಯ ಕೇಳಿ ಕೋಪ ಬರಬಹುದೇನೋ ಎಂದು ನಾನು ಭಾವಿಸಿದ್ದೆ. ನಮ್ಮಿಬ್ಬರ ದುಡಿಮೆಯಿಂದ ನಮ್ಮ ಖರ್ಚು ಕಳೆಯುವಷ್ಟು ಹಣ ದೊರೆಯುತ್ತಿದ್ದರೂ ಹಣ ಸಾಲದೆಂಬ ರಾಗ ಅವರದಾಗಿತ್ತು.. ಈಗ ಇನ್ನೊಂದು ಹೊಸ ಸದಸ್ಯನ ಸೇರ್ಪಡೆಯ ಸುದ್ದಿ ಅವರಿಗೆ ಹಿತವಾಗಿರುದಿಲ್ಲವೇನೋ ಎಂಬುದು ನನ್ನ ಭಾವನೆಯಾಗಿತ್ತು. ಆದರೆ ಅವರ ಪ್ರತಿಕ್ರಿಯೆ ನನಗೆ ಸಂತಸ ತಂದಿತು. ಅತಿ ಹೆಚ್ಚಿನ ಸಂತೋಷ ನೀಡಿತು. ಈಗಂತೂ ಪ್ರಶಾಂತ್‌ ಬದಲಾಗಿದ್ದಾರೆಂದು ಅನ್ನಿಸುತ್ತಿತ್ತು. ದಿನನಿತ್ಯ ನನಗಾಗಿ ಹೂ ಹಣ್ಣು ಗಳನ್ನು ತರುತ್ತಿದ್ದರು. ನನ್ನ ಚೆಕ್‌ಅಪ್‌ಗಾಗಿ ವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು. ನನ್ನ ಊಟತಿಂಡಿ ಔಷಧಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಹಿಂದಿನಂತೆ ಆಫೀಸಿಗೆ ತಡವಾಯಿತೆಂದು ಅವಸರಿಸುತ್ತಿರಲಿಲ್ಲ. ನಾನು ತಿಂಡಿ ತಿಂದು ಮಾತ್ರೆ ತೆಗೆದುಕೊಂಡು ನಂತರವೇ ಆಫೀಸಿಗೆ ಹೊರಡುತ್ತಿದ್ದರು. ಆಗಾಗ ನನ್ನ ತಾಯಿಗೆ ಮತ್ತು ಅವರ ತಾಯಿಗೆ ಫೋನ್‌ ಮಾಡಿ ಸಲಹೆ ಪಡೆಯುತ್ತಿದ್ದರು.

ಪ್ರಶಾಂತರ ಈ ನಡವಳಿಕೆ ನನಗೆ ಹೊಸದಾಗಿತ್ತು. ಹಿತವಾಗಿಯೂ ಇತ್ತು. ಅವರು ಈ ರೀತಿ ನಡೆದುಕೊಳ್ಳಬಹುದೆಂದು ನಾನೆಂದೂ ಭಾವಿಸಿರಲೇ ಇಲ್ಲ. ಅವರ ಉತ್ಸಾಹ ಕಂಡು ನನ್ನ ಮನದ ನವಿಲು ಗರಿಗೆದರಿ ಕುಣಿದಿತ್ತು.

“ನನಗೆ ನಿನ್ನಂತೆ ಇರುವ ಒಂದು ಮುದ್ದಾದ ಹೆಣ್ಣುಮಗು ಬೇಕು,” ಒಂದು ರಾತ್ರಿ ಪ್ರಶಾಂತ್‌ ನನ್ನ ಕೂದಲನ್ನು ನೇವರಿಸುತ್ತಾ ಹೇಳಿದರು.

“ಆದರೆ ನನಗೆ ಗಂಡು ಮಗು ಆಗಲಿ ಅಂತ ಆಸೆ. ಯಾಕೆಂದರೆ ಮುಂದೆ ಅದಕ್ಕೆ ಗಂಡನ ಕಾಟ ಇರೋದಿಲ್ಲ,” ಅವರನ್ನು ಅಣಕಿಸುತ್ತಾ ಹೇಳಿದೆ.

“ಹೌದಾ? ಅವನೇನಾದರೂ ಮನೆ ಅಳಿಯನಾಗಿ ಹೊರಟುಹೋದರೆ ಏನು ಮಾಡೋದು?” ಅವರ ಈ ಮಾತಿಗೆ ಇಬ್ಬರೂ ನಕ್ಕೆವು.

“ತಮಾಷೆ ಇರಲಿ ಪ್ರಶಾಂತ್‌, ಆದರೆ ಅತ್ತೆಗೆ ಗಂಡುಮಗು ಬೇಕೆನ್ನಿಸಬಹುದು”, ನಾನು ಕೊಂಚ ಗಂಭೀರಳಾಗಿ ಹೇಳಿದೆ.

“ಅಮ್ಮನ ಚಿಂತೆ ಬಿಡು. ಮೊಮ್ಮಗಳು ಬೇಕು ಅಂತ ಅವರೇ ಹೇಳಿದ್ದಾರೆ.”

ನಿಜ ಹೇಳಬೇಕೆಂದರೆ ಅದು ಅತ್ತೆಯವರ ಸ್ವಂತ ಅಭಿಪ್ರಾಯವಾಗಿರಲಿಲ್ಲ. ಅವರು ತಮ್ಮ ಸ್ವಾಮೀಜಿಯ ಆದೇಶದಂತೆ ನಡೆದುಕೊಳ್ಳುತ್ತಿದ್ದರು. ಮನೆಗೆ ಹೆಣ್ಣು ಮಗು ಬಂದರೆ ಪ್ರಶಾಂತ್‌ಗೆ ಬಡ್ತಿ ದೊರೆಯುವುದೆಂದು ಸ್ವಾಮೀಜಿ ಹೇಳಿದ್ದರು. ಈ ಹಿಂದೆ ಅತ್ತೆ ನನ್ನನ್ನೂ ಆ ಸ್ವಾಮೀಜಿಯ ಬಳಿಗೆ ಕರೆದೊಯ್ದಿದ್ದರು. ನನಗೇನೂ ಅವರಲ್ಲಿ ಗೌರವ ಮೂಡಿರಲಿಲ್ಲ. ದೇವರಿಗಿಂತ ತಮ್ಮ ಸಿರಿವಂತ ಶಿಷ್ಯರ ಕಡೆಗೇ ಅವರ ಗಮನವಿರುತ್ತಿತ್ತು. ಅಲ್ಲಿಯ ವಾತಾವರಣವೇ ಕೊಂಚ ವಿಚಿತ್ರವಾಗಿರುಂತೆ ತೋರುತ್ತಿತ್ತು. ಆದರೆ ಅತ್ತೆಯವರ ಶ್ರದ್ಧೆ ಭಕ್ತಿಗಳನ್ನು ಕಂಡು ನಾನು ಮಾತನಾಡಲಿಲ್ಲ.

ಮನೆಯ ಪ್ರತಿಯೊಂದು ಸಣ್ಣ ಪುಟ್ಟ ಕೆಲಸಕ್ಕೆ ಮುನ್ನ ಸ್ವಾಮೀಜಿಯ ಸಲಹೆ ಪಡೆಯುವುದು ಈ ಮನೆಯ ಪದ್ದತಿಯಾಗಿತ್ತು. ಹೆಣ್ಣು ಮಗು ಆಗುವುದು ಶ್ರೇಯಸ್ಸೆಂದು ಸ್ವಾಮೀಜಿ ಹೇಳಿಬಿಟ್ಟಿದ್ದರಿಂದ ತಾಯಿ ಮಗ ಇಬ್ಬರೂ ಹೆಣ್ಣು ಮಗುವಿನ ಜಪ ಮಾಡುತ್ತಿದ್ದರು.

ನನ್ನ ಹೆರಿಗೆಗೆ ಇನ್ನೂ ಮೂರು ತಿಂಗಳು ಇರುವಾಗಲೇ ಅತ್ತೆಯವರು ಊರಿನಿಂದ ಬಂದರು. ನಾನು ಹೆರಿಗೆಗೆ ತವರು ಮನೆಗೆ ಹೋಗುವ ಬಯಕೆ ವ್ಯಕ್ತಪಡಿಸಿದಾಗ ಪ್ರಶಾಂತ್‌, “ನೀನಿಲ್ಲದೆ ನಾನು ಹೇಗಿರಲಿ ಶಿಲ್ಪಾ?” ಎಂದು ನಿರಾಕರಿಸಿಬಿಟ್ಟರು. ನನಗೆ ನಿರಾಸೆಯಾದರೂ ಏನೋ ಒಂದು ಬಗೆಯ ಸುಖಾನುಭವವಾಯಿತು. ಒಂದು ಸಂಜೆ ಪ್ರಶಾಂತ್‌ ಒಂದು ಪುಟ್ಟ ಮಕಮಲ್ ಡಬ್ಬಿಯನ್ನು ಹಿಡಿದುಕೊಂಡು ಬಂದರು. ಇಪ್ಪತ್ತು ನಿಮಿಷ ಕಾಡಿಸಿ, ನಂತರ ತೆರೆದು ತೋರಿಸಿದರು. ಅದರಲ್ಲಿ ಹೊಳೆಯುವ ನಕ್ಷತ್ರದ ಪೆಂಡೆಂಟ್‌ ಇದ್ದ ಚಿನ್ನದ ಸರವಿತ್ತು.

“ಯಾರಿಗೆ ಇದು?” ನಾನು ಕಣ್ಣರಳಿಸಿ ಕೇಳಿದೆ.

“ಮತ್ತಾರಿಗೆ? ನಮ್ಮ ಶೃತಿಗೆ.”

ಹುಟ್ಟಲಿರುವ ನಮ್ಮ ಮಗುವಿಗೆ ಶೃತಿ ಎಂದು ಹೆಸರಿಡಲು ಪ್ರಶಾಂತ್‌ ಇಷ್ಟಪಟ್ಟಿದ್ದರು.

“ಶೃತಿಯ ಬದಲು ಪ್ರದೀಪ್‌ ಬಂದರೆ…?” ನಾನು ಹುಬ್ಬು ಕುಣಿಸುತ್ತಾ ಕೇಳಿದೆ.

“ಇಲ್ಲವೇ ಇಲ್ಲ, ಸ್ವಾಮೀಜಿ ಹೇಳಿದ ಮೇಲೆ ಹೆಣ್ಣು ಮಗುವೇ ಹುಟ್ಟುವುದು,” ಪ್ರಶಾಂತ್‌ ದೃಢ ಸ್ವರದಲ್ಲಿ ಹೇಳಿದರು.

“ಓಹ್‌! ಸ್ವಾಮೀಜಿ ಅಂದಾಗ ನೆನಪಾಯಿತು. ನಾಳೆ ನಾವು ಆಶ್ರಮಕ್ಕೆ ಹೋಗಬೇಕು, ಸ್ವಾಮೀಜಿ ನಿನಗೆ ಆಶೀರ್ವಾದ ಮಾಡೋದಕ್ಕೆ ಬರ ಹೇಳಿದ್ದಾರೆ.”

ನಾನು ಏನೊಂದೂ ಮಾತನಾಡದೆ ಮಲಗಿದೆ. ಆಶ್ರಮ ಅತ್ತೆಯವರ ಊರಿನ ಹತ್ತಿರವಿತ್ತು. ನಮ್ಮ ಮನೆಯಿಂದ 50 ಕಿಲೋಮೀಟರ್‌ ದೂರದ ಪ್ರಯಾಣ. ಆ ಪರಿಸ್ಥಿತಿಯಲ್ಲಿ ಅಷ್ಟು ದೂರದ ಪ್ರಯಾಣ ನನಗೆ ಪ್ರಯಾಸಕರವೆನ್ನಿಸಿತು. ಆದರೆ ಅತ್ತೆಯವರ ಮುಂದೆ ಹೇಳಿ ಪ್ರಯೋಜನವಿಲ್ಲವೆಂದು ಗೊತ್ತಿತ್ತು. ಪ್ರಶಾಂತ ಕೂಡ ತಾಯಿಯ ಮಾತಿಗೆ ಚಕಾರವೆತ್ತುವವರಲ್ಲ.

ಮರುದಿನ ಬೆಳಗ್ಗೆ 9 ಗಂಟೆಯ ಹೊತ್ತಿಗೆ ನಾವು ಆಶ್ರಮ ತಲುಪಿದೆವು. ಅಲ್ಲಿ ಸಮಾರಂಭವೆಂಬಂತೆ ಸಿದ್ಧತೆ ನಡೆಯುತ್ತಿತ್ತು.

“ಸ್ವಾಮೀಜಿ ನಮಗೋಸ್ಕರ ವಿಶೇಷ ಪೂಜೆ ಇಟ್ಟುಕೊಂಡಿದ್ದಾರೆ.” ಅತ್ತೆಯವರು ಹೇಳಿದರು.

ನಾವು ತಲುಪಿದ ಸ್ವಲ್ಪ ಹೊತ್ತಿಗೆ ಹೋಮಪೂಜಾದಿಗಳು ಪ್ರಾರಂಭಾದವು. ನನಗೆ ಅವೆಲ್ಲ ನಾಟಕೀಯವಾಗಿ ತೋರಿದವು. `ಈ ಕಪಟ ಸ್ವಾಮೀಜಿ ಪ್ರಶಾಂತ್‌ರಿಂದ ಎಷ್ಟು ಹಣ ವಸೂಲಿ ಮಾಡಿದ್ದಾರೋ ಗೊತ್ತಿಲ್ಲ. ಪ್ರಶಾಂತ್‌ ಏನೋ ಬುದ್ಧಿವಂತರೇ, ಇಲ್ಲ, ಇಲ್ಲ. ತಾಯಿ ಹೇಳಿದರೆ ಸಾಕು. ಕಣ್ಣು ಮುಚ್ಚಿಕೊಂಡು ತಲೆಯಾಡಿಸುತ್ತಾರೆ,’ ನನ್ನ ಆಲೋಚನೆ ಸಾಗುತ್ತಿತ್ತು.

ಪೂಜೆ ಮುಗಿದ ಮೇಲೆ ಸಾಮೀಜಿ ತೀರ್ಥ ಪ್ರಸಾದ ನೀಡಿದರು. ನಂತರ ಅವರ ಉಪನ್ಯಾಸ ಪ್ರಾರಂಭವಾಯಿತು. ಅದನ್ನು ಕೇಳುತ್ತಾ ನನಗೆ ತೂಕಡಿಕೆ ಬಂದಿತು.

ನಾನು ಪ್ರಶಾಂತರಿಗೆ ಈ ವಿಷಯ ಹೇಳುತ್ತಿದ್ದುದನ್ನು ಕಂಡು ಅತ್ತೆ, “ನಿದ್ರೆ ಬರುತ್ತಿದ್ದರೆ ಒಳಗಡೆ ವಿಶ್ರಾಂತಿ ತಗೋ. ಇಲ್ಲಿ ಬಹಳ ಶಾಂತವಾಗಿದೆ,” ಎಂದರು.

“ಬೇಡ ಅತ್ತೆ, ನಾನು ಮನೆಗೆ ಹೋಗಿ ಮಲಗುತ್ತೇನೆ,” ನಾನು ಸಂಕೋಚದಿಂದ ಹೇಳಿದೆ.

“ಅಯ್ಯೋ, ಇಂಥ ಸಮಯದಲ್ಲಿ ಆರೋಗ್ಯದ ಕಡೆ ಗಮನ ಕೊಡಬೇಕು. ನಾನು ಸ್ವಾಮೀಜಿಗೆ ಹೇಳಿ ವ್ಯವಸ್ಥೆ ಮಾಡಿಸುತ್ತೇನೆ.”

ಕೆಲವೇ ನಿಮಿಷಗಳಲ್ಲಿ ಇಬ್ಬರು ಶಿಷ್ಯೆಯರು ನನ್ನನ್ನು ವಿಶ್ರಾಂತಿ ಗೃಹದ ಕಡೆಗೆ ಕರೆದೊಯ್ದರು. ಕೋಣೆಯಲ್ಲಿ ಬೆಳಕಿರಲಿಲ್ಲ. ನನ್ನ ಕಣ್ಣು ಎಳೆಯುತ್ತಿತ್ತು. ದಿಂಬಿನ ಮೇಲೆ ತಲೆ ಇಟ್ಟೊಡನೆ ನಿದ್ರೆ ಆವರಿಸಿತು.

ಕಣ್ಣು ತೆರೆದಾಗ ನನ್ನ ತಲೆ ಭಾರವಾಗಿರುವಂತೆ ತೋರುತಿತ್ತು. ಕೋಣೆಯಲ್ಲಿ ಬೇರೆ ಯಾರೂ ಇರಲಿಲ್ಲ. ಪ್ರಶಾಂತ್‌ ಬಾಗಿಲ ಬಳಿಯೇ ನಿಂತಿದ್ದರೋ, ಏನೋ, ನಾನು ಕರೆದ ಶಬ್ದ ಕೇಳಿದ ಕೂಡಲೇ ಒಳಗೆ ಬಂದರು.

ನಾವು ಆಶ್ರಮದಿಂದ ಸ್ವಲ್ಪದೂರ ಹೋಗುವಷ್ಟರಲ್ಲಿ ನನಗೆ ಹೊಟ್ಟೆಯಲ್ಲಿ ಸಂಕಟವಾಗತೊಡಗಿತು. ಜೊತೆಗೆ ಜೋರು ನೋವು ಪ್ರಾರಂಭವಾಯಿತು. ಪ್ರಶಾಂತರ ಮುಖದಲ್ಲಿ ಚಿಂತೆ ಸ್ಪಷ್ಟವಾಗಿತ್ತು. ಅತ್ತೆಯವರು ನನಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದರು. ನನಗಂತೂ ನೋವಿಗಿಂತ ಹೆಚ್ಚಾಗಿ ಮಗುವಿನ ಚಿಂತೆ ಬಾಧಿಸುತ್ತಿತ್ತು. ಮುಂದೇನಾಯಿತೋ, ಒಂದೂ ತಿಳಿಯಲಿಲ್ಲ. ಪ್ರಜ್ಞೆ ಬಂದಾಗ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದೆ.

ಸಾಯಂಕಾಲ ಅತ್ತೆಯವರು ನನ್ನನ್ನು ನೋಡಲು ಬಂದರು. ನನ್ನ ದೃಷ್ಟಿ ಪ್ರಶಾಂತರನ್ನು ಹುಡುಕುತ್ತಿತ್ತು.

“ಅವನು ಯಾವುದೋ ಕೆಲಸದಲ್ಲಿ ಸಿಕ್ಕಿಕೊಂಡಿದ್ದಾನೆ. ನಾಳೆ ಬೆಳಿಗ್ಗೆ ಬರುತ್ತಾನೆ.” ಅತ್ತೆಯವರು ಸಮಾಧಾನ ಹೇಳಿದರು.

ಹೊಟ್ಟೆಯಲ್ಲಿದ್ದ ಕಂದನನ್ನು ಕಳೆದುಕೊಂಡಿದ್ದೇನೆಂದು ನನಗೆ ತಿಳಿಯಿತು. ಅದು ಹೇಗಾಯಿತೆಂದು ನನಗೆ ಅರ್ಥವಾಗಲಿಲ್ಲ. ನಾನು ಆರೋಗ್ಯಪೂರ್ಣಳಾಗಿಯೇ ಇದ್ದೆ. ಯಾವುದೇ ಪೆಟ್ಟು ತಗುಲಿರಲಿಲ್ಲ. ಹಾಗಿರುವಾಗ ಮಗು ಹೋಗಿದ್ದಾದರೂ ಹೇಗೆ? ಪ್ರಶಾಂತ್‌ 2 ದಿನಗಳ ನಂತರ ಬಂದರು. ಕಳೆದ ಕೆಲವು ತಿಂಗಳಿನಿಂದ ತೋರುತ್ತಿದ್ದ ಆದರ ಪ್ರೀತಿಪರ ನಡವಳಿಕೆ ಮಾಯವಾಗಿತ್ತು. ನನ್ನೊಡನೆ ಮುಖಕೊಟ್ಟು ಮಾತನಾಡುತ್ತಿರಲಿಲ್ಲ. ಅತ್ತೆಯವರೂ ಸಂಕೋಚದಿಂದ ವ್ಯವಹರಿಸುತ್ತಿರುವಂತೆ ಭಾಸವಾಗುತ್ತಿತ್ತು. ನಾನು ಆಸ್ಪತ್ರೆಯಿಂದ ಮನೆಗೆ ಬಂದ ಕೆಲವು ದಿನಗಳ ನಂತರ ಅತ್ತೆಯವರು ಊರಿಗೆ ಹೊರಟುಹೋದರು. ಪ್ರಶಾಂತ್‌ ಮತ್ತು ನಾನು ಒಂದೇ ಮನೆಯಲ್ಲಿ ಮಾತುಕಥೆ ಇಲ್ಲದೆ ಅಪರಿಚಿತ ವ್ಯಕ್ತಿಗಳಂತೆ ಇರತೊಡಗಿದೆವು. ಪ್ರಶಾಂತ್‌ ಮಗುವಿನ ಬರುವಿಕೆಗೆ ಅತ್ಯಂತ ಕಾತರರಾಗಿದ್ದರು. ಅತೀ ನಿರಾಶೆ ಅವರನ್ನು ಮೆಟ್ಟಿಬಿಟ್ಟಿರಬಹುದು. ಅವರನ್ನು ಮಾತಿಗೆಳೆಯಲು ಅನೇಕ ಬಾರಿ ಪ್ರಯತ್ನಿಸಿ ನಾನು ಸೋತೆ. ಮೌನದ ಕವಚದೊಳಗೆ ಅವರು ತಮ್ಮನ್ನು ಹುದುಗಿಸಿಕೊಂಡಿದ್ದರು.

ಈ ಆಲೋಚನೆಯ ಸುಳಿಯಲ್ಲಿರುವಾಗ ಇದ್ದಕ್ಕಿದ್ದಂತೆ ಉಕ್ಕಿ ಬಂದ ಕೆಮ್ಮು ನನ್ನ ವಿಚಾರಸರಣಿಯನ್ನು ತುಂಡರಿಸಿತು. ಎದೆಯಲ್ಲೇನೋ ಒಂದು ಬಗೆಯ ನೋವು ನನ್ನ ಶರೀರವನ್ನು ಹಿಡಿದೆಳೆಯುವ ಅನುಭವ. ನೀರು ಕುಡಿದರೂ ನಿಲ್ಲದ ಕೆಮ್ಮು.

`ಮಲಗಿದ್ದರೆ ಹೀಗೇ. ಪ್ರಶಾಂತರಿಗೆ ತಿಂಡಿ ತಯಾರಿಸಬೇಕು. ಆಫೀಸಿಗೆ ತಡವಾಗುತ್ತದೆ’ ಎಂದು ಮೇಲೆದ್ದೆ. ತಿಂಡಿ ಮಾಡುವಾಗಲೂ ಕೆಮ್ಮು ಬರುತ್ತಿತ್ತು.

“ಈಚೆಗೆ ನಿನಗೆ ಕೆಮ್ಮು ಜಾಸ್ತಿಯಾಗಿದೆ. ರಾತ್ರಿಯಲ್ಲಿ ಕೆಮ್ಮುತ್ತಾ ಇರುತ್ತೀಯಾ,” ಡೈನಿಂಗ್‌ ಟೇಬಲ್ ಮುಂದೆ ಕೂರುತ್ತಾ ಪ್ರಶಾಂತ್‌ ಹೇಳಿದರು.

ಅವರ ಧ್ವನಿ ಕೇಳಿ ನನಗೆ ಬೆಚ್ಚುವಂತಾಯಿತು. ಕಳೆದ ದಿನಗಳಿಂದ ಅವರ ಧ್ವನಿಯೇ ನನಗೆ ಮರೆತಂತಾಗಿತ್ತು.

“ಏನಿಲ್ಲ ಬಿಡಿ. ಕಷಾಯ ಕುಡಿದರೆ ಸರಿಹೋಗುತ್ತದೆ.” ನಾನು ನಗುನಗುತ್ತಾ ಹೇಳಿದೆ.

“ಎಷ್ಟೊಂದು ಸೊರಗಿ ಹೋಗಿದ್ದೀಯ, ರಾತ್ರಿಯಲ್ಲಿ ನಿದ್ರೆ ಮಾಡುತ್ತಿಲ್ಲ ನೀನು,” ಪಕ್ಕದಲ್ಲಿ ನಿಂತಿದ್ದ ನನ್ನ ಹಣೆ ಮುಟ್ಟಿ, “ಅಯ್ಯೋ, ಜ್ವರ ಸುಡುತ್ತಾ ಇದೆ. ನಡಿ ಡಾಕ್ಟರ್‌ ಹತ್ತಿರ ಹೋಗೋಣ.” ಎಂದರು.

“ಅಂಥದ್ದೇನಿಲ್ಲ ಪ್ರಶಾಂತ್‌…..” ನನ್ನ ಮಾತು ಕೇಳಿಸದವರಂತೆ ಪ್ರಶಾಂತ್‌ ತಿಂಡಿಯನ್ನೂ ಅರ್ಧಕ್ಕೆ ಬಿಟ್ಟು ಎದ್ದು ನಿಂತರು.

ಡ್ರೈವ್ ಮಾಡುತ್ತಿರುವಾಗಲೂ ಅವರ ಮುಖದ ಮೇಲೆ ಚಿಂತೆ ಎದ್ದು ಕಾಣುತ್ತಿತ್ತು.  ನನ್ನ ಬಗೆಗಿನ ಕಾಳಜಿ ಕಂಡು ನನ್ನ ಮುದುಡಿದ ಮನಸ್ಸಿಗೆ ಆನಂದವಾಯಿತು.

ನನ್ನನ್ನು ಪರೀಕ್ಷೆ ಮಾಡಿದ ಡಾಕ್ಟರು ಟೆಸ್ಟ್ ಗಳ ಒಂದು ಪಟ್ಟಿಯನ್ನೇ ಬರೆದುಕೊಟ್ಟರು. ಆ ಟೆಸ್ಟ್ ಗಳಿಗಾಗಿ ಪ್ರಶಾಂತ್‌ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರು. ಅವರು ನನಗಾಗಿ ಹೀಗೆ ಓಡಾಡುವುದನ್ನು ನೋಡುತ್ತಿದ್ದ ನನಗೆ ಬ್ಲಡ್‌ ಟೆಸ್ಟ್ ಗೆಂದು ಸೂಜಿ ಚುಚ್ಚುತ್ತಿದ್ದುದೂ ಅರಿವಿಗೆ ಬರಲಿಲ್ಲ. ಮರುದಿನ ಟೆಸ್ಟ್ ರಿಪೋರ್ಟ್‌ ದೊರೆಯಿತು. ಪ್ರಶಾಂತ್‌ ಆಫೀಸಿಗೆ ಫೋನ್‌ ಮಾಡಿ 3 ದಿನಗಳ ರಜೆ ಪಡೆದುಕೊಂಡರು.

ಕಾಫಿ ಮಾಡಿ ತರುತ್ತೇನೆಂದು ಅಡುಗೆಮನೆಯ ಕಡೆ ಹೊರಟ ಪ್ರಶಾಂತ್‌ರನ್ನು ತಡೆಯುತ್ತಾ ನಾನು ಹೇಳಿದೆ, “ಅಷ್ಟು ದಿನ ರಜೆ ಯಾಕೆ ಪ್ರಶಾಂತ್‌? ಮನೆ ಕೆಲಸ ಮಾಡೋದಕ್ಕೆ ನನಗೆ ಆಗುತ್ತೆ.”

“ನೀನು ಸುಮ್ಮನೆ ಮಲಗು ಹೋಗು. ಏನು ಮಾಡಬೇಕು ಅನ್ನೋದು ನನಗೆ ಗೊತ್ತು.”

“ಆಯಿತಪ್ಪ, ನಾನು ಮಲಗುತ್ತೇನೆ. ಅತ್ತೆಯವರನ್ನಾದರೂ ಕೆಲವು ದಿನಗಳ ಮಟ್ಟಿಗೆ ಬಂದಿರೋದಿಕ್ಕೆ ಹೇಳು,” ನಾನು ಸಲಹೆ ನೀಡಿದೆ.

ಪ್ರಶಾಂತ್‌ ಕಾಫಿ ಬೆರೆಸುತ್ತಾ ಸ್ವಲ್ಪ ಹೊತ್ತು ಸುಮ್ಮನಿದ್ದರು. ನಿಧಾನವಾಗಿ “ಅಮ್ಮನಿಗೇಕೆ ಸುಮ್ಮನೆ ತೊಂದರೆ ಕೊಡೋದು. ಒಬ್ಬಳು ಕೆಲಸದವಳನ್ನು ಗೊತ್ತು ಮಾಡಿಕೊಳ್ಳೋಣ,”  ಎಂದರು.

ಪ್ರಶಾಂತ್‌ ಕೆಲಸದವಳನ್ನು ಇರಿಸಿಕೊಳ್ಳೋದಿಕ್ಕೆ ಯೋಚಿಸತ್ತಿದ್ದೀರಾ ಎಂದು ನಾನು ಆಶ್ಚರ್ಯಗೊಂಡೆ.

ಹಿಂದೊಂದು ಸಲ ಮನೆಗೆಲಸಕ್ಕೆ ಒಬ್ಬಳನ್ನು ಗೊತ್ತುಮಾಡಿಕೊಳ್ಳುತ್ತೇನೆ ಎಂದಿದ್ದಕ್ಕೆ, ಪ್ರಶಾಂತ್‌ ಸಿಡುಕಿದ್ದರು, “ಕೆಲಸದವರು ಎಲ್ಲವನ್ನೂ ಹಾಳು ಮಾಡುತ್ತಾರೆ. ಇಷ್ಟು ದಿನ ಕೆಲಸ ಮಾಡೋದಕ್ಕೆ ನಿನಗೇನೂ ಕಷ್ಟ ಇರಲಿಲ್ಲ. ಈಗ ಇದ್ದಕ್ಕಿದ್ದಂತೆ ಏನಾಯಿತು?”

“ಪ್ರಶಾಂತ್‌, ನಿಮಗೇ ಗೊತ್ತಲ್ಲ ನನಗೆ ಸರ್ವೈಕಲ್ ಪೇನ್‌ ಇದೆ ಅಂತ. ನೋವಿನಿಂದಾಗಿ ರಾತ್ರಿಯಲ್ಲಿ ನಿದ್ರೆ ಬರೋಲ್ಲ.” ನಾನೂ ಜೋರಾಗಿ ಹೇಳಿದ್ದೆ.

“ನೋಡು ಶಿಲ್ಪಾ, ಕೆಲಸದವಳಿಗೆ ಸಂಬಳ ಕೊಡೋ ಅಷ್ಟೊಂದು ದುಡ್ಡು ನನಗಿಲ್ಲ.” ಪ್ರಶಾಂತ್‌ ಸ್ವರ ತಗ್ಗಿಸಿ ಹೇಳಿದ್ದರು.

ಏನು ಹೇಳಬೇಕೆಂದು ಅನ್ನೋದನ್ನು ನಾನು ಮೊದಲೇ ಸಿದ್ಧ ಮಾಡಿಕೊಂಡಿದ್ದೆ, “ಅವಳಿಗೆ ನನ್ನ ಹಣದಿಂದ ಸಂಬಳ ಕೊಡುತ್ತೇನೆ ಬಿಡಿ.” ಎಂದಿದ್ದೆ.

ನನ್ನ ಮಾತು ಕೇಳಿ ಪ್ರಶಾಂತ್‌ ಸಿಟ್ಟಾಗಿದ್ದರು. “ಓಹೋ, ನಿನ್ನ ಹಣದ ಜಂಭ ತೋರಿತ್ತೀಯೋ?”

“ಹಾಗಲ್ಲ ಪ್ರಶಾಂತ್‌……”

ನನ್ನ ಮಾತು ಮುಗಿಯುವ ಮೊದಲೇ ಅವರು, “ಈ ಮನೆಗೆ ಯಾವ ಕೆಲಸದವಳೂ ಬರೋ ಹಾಗಿಲ್ಲ, ಹಾಗೇನಾದರೂ ಅಗತ್ಯ ಬಿದ್ದರೆ ಅಮ್ಮನನ್ನೂ ಕರೆಸಿದರಾಯಿತು,” ಎಂದು ಹೇಳಿ ಮಗ್ಗಲು ಬದಲಿಸಿ ಮಲಗಿಬಿಟ್ಟಿದ್ದರು.

ಈಗ ಅದೇ ಪ್ರಶಾಂತ್‌ ತಾಯಿಯನ್ನು ಕರೆಯುವ ಬದಲು ಕೆಲಸದ ಹೆಂಗಸನ್ನು ಗೊತ್ತು ಮಾಡೋಣ ಅನ್ನುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರಶಾಂತ್‌ ನನ್ನೊಡನೆ ಮಾತು ನಿಲ್ಲಿಸಿದಂತೆ ತಮ್ಮ ತಾಯಿಯೊಂದಿಗೂ ವ್ಯವಹಾರ ಕಡಿಮೆ ಮಾಡಿದ್ದಾರೆ. ಅತ್ತೆಯವರಿಂದ ಫೋನ್‌ ಬಂದಾಗಲೂ ಒಂದೆರಡು ಮಾತನಾಡಿ ಲೈನ್‌ ಕಟ್‌ ಮಾಡುತ್ತಾರೆ.

ಯಾವುದು, ಎಲ್ಲಿ ವ್ಯತ್ಯಾಸವಾಯಿತೆಂದು ನನಗೆ ಅರ್ಥವಾಗುತ್ತಿಲ್ಲ. ತಮ್ಮ ಕುಡಿ ಕೈತಪ್ಪಿಹೋಗಲು ನಾನು ಕಾರಣಳೆಂದು ನನ್ನೊಡನೆ ವಿಮುಖರಾಗಿರಬಹುದು, ಆದರೆ ಅವರಿಗೆ ಅತ್ತೆಯರ ಮೇಲೆ ಏಕೆ ಕೋಪ ಎಂದು ತಿಳಿಯುತ್ತಿಲ್ಲ. ಮರುದಿನ ಬೆಳಗ್ಗೆ ಅತ್ತೆಯವರಿಂದ ಫೋನ್‌ಕಾಲ್ ಬಂದಿತು. ಪ್ರಶಾಂತ್‌ ಸ್ನಾನ ಮಾಡುತ್ತಿದ್ದುದರಿಂದ ನಾನೇ ಮಾತಾಡಿದೆ.

“ಹಲೋ ಶಿಲ್ಪಾ ಹೇಗಿದ್ದೀಯಾ?”

“ಚೆನ್ನಾಗಿದ್ದೇನೆ ಅತ್ತೆ, ನೀವು ಹೇಗಿದ್ದೀರಿ?”

“ಸ್ವಾಮೀಜಿಯ ಆಶೀರ್ವಾದ ಮಗಳೇ. ಪ್ರಶಾಂತ್‌ನಿಗೆ ಫೋನ್‌ ಕೊಡು,” ಅತ್ತೆಯವರ ಸ್ವರ ಗಂಭೀರವಾಗಿತ್ತು. ಅಷ್ಟರಲ್ಲಿ ಪ್ರಶಾಂತ್‌ ಸ್ನಾನ ಮುಗಿಸಿ ಬಂದರು. ನಾನು ಮೊಬೈಲ್‌‌ನ್ನು ಅವರ ಕೈಗಿತ್ತೆ.

ಅವರು ಮೊಬೈಲ್‌ ಸ್ವಿಚ್‌ಆಫ್‌ ಮಾಡಿದ ಮೇಲೆ ನಾನು ಕೇಳಿದೆ,” ಏನಾಯಿತು…. ಅತ್ತೆಯವರು ಚಿಂತೆಯಲ್ಲಿರೋ ಹಾಗೆ ಇತ್ತಲ್ಲ?”

“ಅವರಿಗೆಂಥ ಚಿಂತೆ, ಅವರನ್ನು ಕಾಪಾಡೋದಕ್ಕೆ ಊರು ತುಂಬ ಸ್ವಾಮಿಗಳು ಇದ್ದಾರಲ್ಲ,”  ಪ್ರಶಾಂತ್‌  ಕಹಿಯಾಗಿ ಉತ್ತರಿಸಿದರು.

“ಅದು ಅವರವರ ನಂಬಿಕೆ ಪ್ರಶಾಂತ್‌. ಇದರಲ್ಲಿ ಸಿಟ್ಟು ಮಾಡಿಕೊಳ್ಳೋವಂಥದ್ದು ಏನಿದೆ? ಅವರು ಬಹಳ ವರ್ಷಗಳಿಂದ ಇಂಥ ವಿಶ್ವಾಸಗಳಲ್ಲೇ ಬಾಳಿದ್ದಾರೆ. ನಿಮಗೂ ಕೂಡ ಆ ಬಗ್ಗೆ ಏನೂ ದೂರು ಇರಲಿಲ್ಲವಲ್ಲ. ಈಗ ಇದ್ದಕ್ಕಿದ್ದ ಹಾಗೆ ಏನಾಯಿತು?” ನಾನು ಶಾಂತವಾಗಿ ಕೇಳಿದೆ.

“ಇನ್ನೊಬ್ಬರ ಪ್ರಾಣ ತೆಗೆಯೋ ಅಂಥ ವಿಶ್ವಾಸ ಯಾರಿಗೆ ಬೇಕಾಗಿದೆ?”

“ಪ್ರಾಣನಾ….  ಏನು ಮಾತನಾಡುತ್ತೀರಿ? ಅತ್ತೆಯವರು ಪ್ರಾಣ ತೆಗೆಯೋ ಕೆಲಸ ಮಾಡುತ್ತಾರಾ?” ನಾನು ಅಚ್ಚರಿಯಿಂದ ಕೇಳಿದೆ.

“ಅಮ್ಮ ಅಲ್ಲ, ಆದರೆ ಈ ಅಂಧವಿಶ್ವಾಸ ಒಂದು ಪ್ರಾಣವನ್ನು ಕಳೆದಿದೆ,” ಪ್ರಶಾಂತರ ಸ್ವರ ಗಂಭೀರವಾಗಿತ್ತು. ಅವರು ನನ್ನನ್ನೇ ದೃಷ್ಟಿಸುತ್ತಾ ಮಾತನಾಡಿದ್ದರು. ಅವರ ಕಣ್ಣುಗಳಲ್ಲಿದ್ದ ನೋವು ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಾನು ಮೌನನಾಗಿದ್ದೆ. ಕಳೆದ ಕೆಲವು ದಿನಗಳಿಂದ ನನ್ನ ಮನಸ್ಸನ್ನು ಕೊರೆಯುತ್ತಿದ್ದ ವಿಷಯ ನಗ್ನವಾಗಿ ನನ್ನೆದುರು ಬಂದು ನಿಲ್ಲುವುದು ನನಗೆ ಬೇಕಿರಲಿಲ್ಲ.

ನನ್ನ ಮೌನವನ್ನು ಗಮನಿಸುತ್ತಾ ಪ್ರಶಾಂತ್‌ ಹೇಳತೊಡಗಿದರು. “ನಾವು ನಮ್ಮ ಮಗುವನ್ನು ಕಳೆದುಕೊಂಡಿದ್ದು ಒಂದು ಆಕಸ್ಮಿಕವಲ್ಲ ಶಿಲ್ಪಾ, ಅದು ಅಮ್ಮನ ಅಂಧವಿಶ್ವಾಸದ ಪರಿಣಾಮದಿಂದಾಗಿ. ನಾನೂ ಕುರುಡನಂತೆ ಅಮ್ಮ ಹೇಳಿದ್ದನ್ನೆಲ್ಲಾ ಮಾಡುತ್ತಾ ಹೋದೆ. ನಾವು ಆ ದಿನ ಆಶ್ರಮಕ್ಕೆ ಹೋದಾಗ ನಿನ್ನ ಹೊಟ್ಟೆಯಲ್ಲಿರುವ ಮಗುವಿನ ಲಿಂಗದ ಪತ್ತೆ ಮಾಡುವುದಕ್ಕಾಗಿ ನಿನಗೆ ಪ್ರಸಾದದಲ್ಲಿ ಏನನ್ನೋ ಸೇರಿಸಿ ನಿನಗೆ ಪ್ರಜ್ಢೆ ತಪ್ಪುವಂತೆ ಮಾಡಲಾಗಿತ್ತು.

“ಅಲ್ಲಿ ಏನು ನಡೆಯುತ್ತಿದೆಯೆಂದು ನನಗೆ ಗೊತ್ತಿರಲಿಲ್ಲ. ಪೂಜೆಗಾಗಿ ಕೆಲವು ಸಾಮಾನುಗಳನ್ನು ತರಬೇಕೆಂದು ನನ್ನನ್ನು ಪೇಟೆಗೆ ಕಳುಹಿಸಿದರು. ನಾನು ಹಿಂದಿರುಗಿ ಬಂದ ಮೇಲೆ ನಿನಗೆ ಪ್ರಜ್ಢೆ ಬಂದಿತು. ಆಮೇಲೆ ನಡೆದದ್ದೆಲ್ಲ ನಿನಗೇ ಗೊತ್ತಲ್ಲ,” ಪ್ರಶಾಂತರ ಕಣ್ಣಲ್ಲಿ ನೀರು ತುಂಬಿತ್ತು.

“ಆದರೆ ಇದರಲ್ಲಿ ಅತ್ತೆಯವರದ್ದೇನು ತಪ್ಪು? ನೀವು ಸುಮ್ಮನೆ ಊಹಿಸಿಕೊಂಡು ಅವರ ಮೇಲೆ ಆರೋಪ ಹೊರಿಸುತ್ತೀದ್ದೀರಿ,” ನಾನು ಅವರ ಮುಖವನ್ನು ಬೊಗಸೆಯಲ್ಲಿ ತುಂಬಿಕೊಂಡು ಹೇಳಿದೆ.

ಪ್ರಶಾಂತ್‌ ಕೊಂಚ ಸಂಭಾಳಿಸಿಕೊಂಡು ಹೇಳಿದರು, “ಇದು ನನ್ನ ಊಹೆಯಲ್ಲ ಶಿಲ್ಪಾ ನಿನ್ನನ್ನು ಆಸ್ಪತ್ರೆಗೆ ಸೇರಿಸಿದ ದಿವಸ ರಾತ್ರಿ ಅಮ್ಮ ಸ್ವಾಮೀಜಿಗೆ ಫೋನ್‌ನಲ್ಲಿ `ಥ್ಯಾಂಕ್ಸ್’ ಹೇಳುತ್ತಿದ್ದರು, `ನಿಮ್ಮ ಕೃಪೆಯಿಂದ ನಮ್ಮ ಮನೆಗೆ ಕವಿದಿದ್ದ ಆಪತ್ತು ನಿವಾರಣೆಯಾಯಿತು,” ಎಂದರು.

“ನಾನು ಅಮ್ಮನೊಂದಿಗೆ ಈ ವಿಷಯವಾಗಿ ಬಹಳ ವಾದ ಮಾಡಿದೆ. ನಮ್ಮ ಮಗುವಿನ ವಿಷಯದಲ್ಲಿ ಅಮ್ಮ ಹೀಗೆ ಮಾಡಬಹುದೆಂದು ನಾನು ಭಾವಿಸಿರಲಿಲ್ಲ.”

ಈಗ ಪ್ರಶಾಂತರಿಗೆ ನನ್ನ ದೃಷ್ಟಿಯನ್ನು ಎದುರಿಸುವ ಚೈತನ್ಯವಿರಲಿಲ್ಲ. ನನ್ನ ಕಣ್ಣುಗಳು ಉರಿಯುತ್ತಿದ್ದವು. ನನಗೆ ಕುಸಿದು ಹೋಗುತ್ತಿರುವ ಭಾಸವಾಗುತ್ತಿತ್ತು. ನಾನು ನಡುಗುವ ಸ್ವರದಲ್ಲಿ ಕೇಳಿದೆ, “ಆದರೆ ಎಲ್ಲ ಅವರ ಇಚ್ಛೆಯಂತೆಯೇ ನಡೆಯುತ್ತಿತ್ತಲ್ಲವೇ? ಸ್ವಾಮೀಜಿಯ ಪ್ರಕಾರ ನನ್ನ ಹೊಟ್ಟೆಯಲ್ಲಿ ಹೆಣ್ಣು ಮಗು ಇರಲಿಲ್ಲವೇ?”

ಪ್ರಶಾಂತ್‌ ಮಾತನಾಡದೆ ನನ್ನನ್ನು ದೃಷ್ಟಿಸಿದರು. ಆಮೇಲೆ ಸೋಫಾಗೆ ಒರಗಿ ಕಣ್ಣು ಮುಚ್ಚಿ ಹೇಳತೊಡಗಿದರು. “ಅದು ಹೆಣ್ಣು ಮಗುವೇ ಶಿಲ್ಪಾ, ನಮ್ಮ ಶೃತಿಯೇ ಅದು. ಆದರೆ ನಾವದನ್ನು ಕಳೆದುಕೊಂಡು ಬಿಟ್ಟೆವು. ನಮ್ಮ ಮೂರ್ಖತನದಿಂದಾಗಿ ಅದು ನಮ್ಮಿಂದ ದೂರ ಹೊರಟು ಹೋಯಿತು,” ಪ್ರಶಾಂತ್‌ ಹೆಂಗಸಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಇಷ್ಟು ದಿನ ಅವರು ಮನಸ್ಸಿನಲ್ಲಿ ಹುದುಗಿಟ್ಟಿದ್ದ ನೋವು ಕಣ್ಣೀರಿನ ರೂಪದಲ್ಲಿ ಹರಿಯತೊಡಗಿತು.

“ಸ್ವಾಮೀಜಿ ಹೆಣ್ಣು ಮಗು ಆಗಬೇಕು ಎಂದಿದ್ದರು, ಮತ್ತೆ ಅತ್ತೆಯವರೂ ಅದೇ ಆಗಲಿ ಎನ್ನುತ್ತಿದ್ದರಲ್ಲ.” ನನಗೆ ವಿಷಯ ಸ್ಪಷ್ಟವಾಗಲಿಲ್ಲ.

“ಇಲ್ಲ ಶಿಲ್ಪಾ, ನೀನು ತಿಳಿದುಕೊಂಡಿದ್ದೇ ಸರಿ. ಅಮ್ಮನಿಗೆ ಹೆಣ್ಣುಮಗು ಬೇಕಿರಲೇ ಇಲ್ಲ. ಮೊಮ್ಮಗ ಬರಲಿ ಎಂದೇ ಆಸೆ ಇತ್ತು. ಸ್ವಾಮೀಜಿ ಹೆಣ್ಣುಮಗುವಿನ ವಿಷಯ ಹೇಳಿದಾಗಿನಿಂದ ಅವರು ಬೇಸರದಲ್ಲಿದ್ದರು. ಆಗಾಗ ಸ್ವಾಮೀಜಿಯ ಹತ್ತಿರ ಹೋಗಿ ತಮ್ಮ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು. ಸ್ವಾಮೀಜಿಗೆ ಅದರಿಂದ ಹಣ ಕೀಳಲು ಉಪಾಯ ಹೊಳೆಯಿತು. ಅವರು ಅಮ್ಮನಿಗೆ , `ಇದ್ದಕ್ಕಿದ್ದಂತೆ ಗ್ರಹಗಳ ಸ್ಥಿತಿಗತಿಗಳು ಬದಲಾಗಿವೆ… ಒಂದು ಗಂಡು ಮಗುವಿನ ಜನನದಿಂದ ಅಪಾಯವನ್ನು ತಪ್ಪಿಸಲು ಸಾಧ್ಯ’ ಎಂದರು.

“ಒಂದು ವಿಶೇಷ ಪೂಜೆಯ ಮೂಲಕ ಗಂಡು ಮಗುವಿನ ಜನನವನ್ನೂ ನಿಶ್ಚಯ ಪಡಿಸಿಕೊಳ್ಳಬಹುದು” ಎಂದು ಹೇಳಿದರು. ಅಮ್ಮನಿಗೂ ಅದೇ ಬೇಕಾಗಿತ್ತಲ್ಲವೇ. ನನಗೆ ಒಂದೂ ಗೊತ್ತಾಗದಂತೆ ಎಲ್ಲ ಏರ್ಪಾಟು ಮಾಡಿದರು.

“ಪೂಜೆಯ ದಿನ ನನ್ನನ್ನು ಹೊರಗೆ ಕಳಿಸಿದ ನಂತರ ಅವರ ಶಿಷ್ಯರ ಮೂಲಕ ಸ್ವಾಮೀಜಿ ಭ್ರೂಣದ ಲಿಂಗ ಪತ್ತೆ ಮಾಡಿಸಿದರು. ಅದು ಹೆಣ್ಣು ಎಂದು ತಿಳಿದಾಗ ತಮ್ಮ ಢೋಂಗಿತನ ಬಯಲಾಗಿ ಭಯವಾಯಿತು. ಅವರು ಅಮ್ಮನಿಗೆ `ಹೆಣ್ಣು ಕೂಸು ಅಪಾಯಕಾರಿಯೆಂದು ಗ್ರಹಗತಿ ಹೇಳುತ್ತಿದೆ. ಗರ್ಭಪಾತ ಮಾಡಿಸದಿದ್ದರೆ ನಿಮ್ಮ ಪರಿವಾರವೇ ಹಾಳಾಗಿ ಹೋಗುತ್ತದೆ’ ಎಂದು ಹೆದರಿಸಿದರು. ಅವರು ಹೇಳಿದಕ್ಕೆಲ್ಲ ಅಮ್ಮ ಹ್ಞೂಂಗುಟ್ಟಿದ್ದರು. ನನ್ನ ಅರಿವಿಲ್ಲದೆಯೇ ನಮ್ಮ ಮಗುವನ್ನು ಕಳೆದುಕೊಂಡು ಬಿಟ್ಟೆವು.” ಪ್ರಶಾಂತ್‌ ತಮ್ಮ ಕೈಗಳಿಂದ ಮುಖವನ್ನು ಮುಚ್ಚಿಕೊಂಡರು.

ನಾನು ಜಡವಾಗಿ ಕುಳಿತುಬಿಟ್ಟೆ. ಒಬ್ಬ ತಾಯಿಯಾಗಿ ಅವರು ಇಂತಹ ಕೆಲಸವನ್ನು ಹೇಗೆ ಮಾಡಿದರು? ಅವರ ರಕ್ತವೇ ಆ ಮಗುವಿನಲ್ಲಿ ಹರಿಯುತ್ತಿತ್ತು. ಆ ಕಪಟ ಸ್ವಾಮಿ ಹಣಕ್ಕಾಗಿ ಒಂದು ಜೀವವನ್ನು ಕೊನೆಗಾಣಿಸಲು ಮುಂದಾದರೆ ಅತ್ತೆಯವರು ಹೇಗೆ ತಾನೇ ಒಪ್ಪಿದರು?

“ಮತ್ತೆ ಅತ್ತೆಯವರು ನಿಮಗೆ ಸ್ವಾಮೀಯ ಹತ್ತಿರ ಹೋಗೋದಕ್ಕೆ ಹೇಳುತ್ತಿದ್ದರಲ್ಲ.“ ನಾನು ಏನನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ.

“ಇಲ್ಲ ಈಗ ಅವರು ಬೇರೆ ಸ್ವಾಮೀಜಿಯನ್ನು ಹುಡುಕಿಕೊಂಡಿದ್ದಾರೆ. ಅದರ ಪ್ರಸಾದ ಸೇವನೆಯಿಂದ ಎಲ್ಲ ಕಷ್ಟಗಳಿಗೂ ಮುಕ್ತಿ ದೊರೆಯುತ್ತದೆಯಂತೆ.”

“ಹಾಗಾದರೆ ಅತ್ತೆಯವರಿಗೆ ಮೊದಲಿನ ಸ್ವಾಮೀಜಿಯದು ಕಪಟ ನಾಟಕ ಅಂತ ಅರ್ಥವಾಗಿದೆಯಾ?”

ಪ್ರಶಾಂತ್‌ ಗಂಭೀರ ಭಾವದಿಂದ ಉತ್ತರಿಸಿದರು, “ಇಲ್ಲ, ಆ ಕಪಟ ಸ್ವಾಮೀಯನ್ನು ಬಿಡಲೇಬೇಕಾಗಿ ಬಂತು. ಏಕೆಂದರೆ ಆ ಸ್ವಾಮಿ ಈಗ ಜೈಲಿನಲ್ಲಿದ್ದಾರೆ. ಆ ರಾತ್ರಿ ವಾಸ್ತವಿಕತೆ ತಿಳಿದಾಗ ನಾನು ತಕ್ಷಣ ಪೊಲೀಸರ ಹತ್ತಿರ ಹೋದೆ. ನಮ್ಮ ಮಗುವನ್ನು ಮುಗಿಸಿದವರನ್ನು ಹಾಗೇ ಬಿಡಲು ನನಗಾಗಲಿಲ್ಲ. ಮಾರನೆಯ ಬೆಳಗ್ಗೆ ಪೊಲೀಸರು ಆಶ್ರಮದ ಮೇಲೆ ಧಾಳಿ ಮಾಡಿದರು. ಅಲ್ಲಿ ಲಕ್ಷಾಂತರ ರೂಪಾಯಿ ಹಣದ ಜೊತೆಗೆ ಸೊನೊಗ್ರಫಿ ಮೆಶೀನ್‌ ಕೂಡ ದೊರೆಯಿತು. ಸ್ವಾಮೀಜಿ ಮತ್ತು ಅವರ ಶಿಷ್ಯರನ್ನು ಪೊಲೀಸರು ಬಂಧಿಸಿದರು. ಅವರನ್ನು ಕೊರ್ಟಿಗೆ ಹಾಜರು ಪಡಿಸಿದಾಗ ಸಾಕ್ಷಿ ಹೇಳಲು ನಾನು ಓಡಾಡುತ್ತಿದ್ದುದರಿಂದ ಎರಡು ದಿನ ನಿನ್ನನ್ನು ನೋಡಲು ಆಸ್ಪತ್ರೆಗೆ ಬರಲು ನನಗೆ ಸಾಧ್ಯವಾಗಲಿಲ್ಲ.

“ಓಹ್‌! ಪ್ರಶಾಂತ್‌” ಎಂದು ನಾನು ಅದುವರೆಗೆ ತಡೆದುಹಿಡಿದಿದ್ದ ದುಃಖ, ಆಕ್ರೋಶಗಳನ್ನು ಹೊರಗೆ ಹರಿಸುತ್ತಾ ಅವರನ್ನು ತಬ್ಬಿಕೊಂಡೆ. ಅವರ ನೋವಿನ ನುಡಿ, ಸ್ಪರ್ಶಗಳು ನನ್ನ ಕಣ್ಣೀರಿನ ಕಟ್ಟೆಯೊಡೆಯುವಂತೆ ಮಾಡಿದವು.

“ಮತ್ತೆ ಇಷ್ಚು ದಿನಗಳು ಯಾಕೆ ಮೌನವಾಗಿದ್ದಿರಿ?” ನನ್ನ ಕಣ್ಣೀರಿನ್ನು ತಹಬದಿಗೆ ತಂದುಕೊಳ್ಳುತ್ತಾ ಕೇಳಿದೆ.

“ನಿನ್ನ ದೃಷ್ಟಿ ಎದುರಿಸುವ ಚೈತನ್ಯ ನನಗಿರಲಿಲ್ಲ. ನಡೆದಿದ್ದರಲ್ಲಿ ನನ್ನ ತಪ್ಪು ಇತ್ತು. ವಿದ್ಯಾವಂತನಾಗಿದ್ದೂ ಅಮ್ಮ ಹೇಳಿದ್ದನ್ನೆಲ್ಲ ಕಣ್ಣು ಮುಚ್ಚಿ ನಡೆಸುತ್ತಾ ಹೋದೆ. ನನಗೆ ನನ್ನ ಮೇಲೇ ಅಸಹ್ಯ ಬಂದಿದೆ. ಇದಕ್ಕೆ ನನಗೆ ನಾನೇ ಶಿಕ್ಷೆ ಕೊಟ್ಟುಕೊಳ್ಳಬೇಕಾಗಿದೆ.”

ಅವರ ದ್ವನಿಯಲ್ಲಿ ನೋವು, ಅಸಹಾಯಕತೆ ಎದ್ದು ತೋರುತ್ತಿತ್ತು. ನಾನು ಏನೊಂದೂ ಮಾತನಾಡದೆ ಅವರ ಎದೆಯಲ್ಲಿ ಮುಖ ಹುದುಗಿಸಿದೆ. ಸಾಯಂಕಾಲ ನಾವು ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದೆವು. ನನ್ನ ಟೆಸ್ಟ್ ರಿಪೋರ್ಟ್‌ನಲ್ಲಿ ನನಗೆ ಟಿ.ಬಿ ಇದೆಯೆಂದು ನಮೂದಾಗಿತ್ತು. ಅದಕ್ಕಾಗಿ ನಾನು ತೆಗೆದುಕೊಳ್ಳಬೇಕಿದ್ದ ಇಂಜೆಕ್ಷನ್‌, ಮಾತ್ರೆ, ಔಷಧಿಗಳ ಬಗ್ಗೆ ಡಾಕ್ಟರ್‌ ಒತ್ತಿ ತಿಳಿಸಿದರು. ಕಾಲಕಾಲಕ್ಕೆ ಪೌಷ್ಟಿಕ ಆಹಾರಪಾನೀಯಗಳನ್ನು ಸೇವಿಸಬೇಕೆಂದು ಎಚ್ಚರಿಸಿದರು. ಹೀಗಾಗಿ ಕಾರಿನಲ್ಲಿ ನಾವಿಬ್ಬರೂ ನಮ್ಮ ನಮ್ಮ ಆಲೋಚನೆಯಲ್ಲಿ ಮುಳುಗಿ ಮೌನವಾಗಿದ್ದೆವು, ನಮ್ಮ ಆತಂಕವನ್ನು ಪರಸ್ಪರ ಮರೆಮಾಚಲು ಪ್ರಯತ್ನಿಸುತ್ತಿದ್ದೆವು.

ಆಗ ಫೋನ್‌ ಕರೆ ಬಂದಿತು. ಅತ್ತೆಯವರಿಂದ ಬಂದ ಕರೆ ಅದು, “ಪ್ರಶಾಂತ್‌ ಏನಿದು? ಶಿಲ್ಪಾಳಿಗೆ ಟಿ.ಬಿ. ಕಾಯಿಲೆಯಂತೆ?”

ಆಸ್ಪತ್ರೆಯಲ್ಲಿದ್ದಾಗ ರೇವತಿಯ ಫೋನ್‌ ಕರೆ ಬಂದಿತ್ತು. ಆಗ ಪ್ರಶಾಂತ್‌ ತಂಗಿಯೊಡನೆ ತಮ್ಮ ಚಿಂತೆಯನ್ನು ಹಂಚಿಕೊಂಡಿದ್ದರು.  ಇಷ್ಟು ಬೇಗ ಅವಳು ಅತ್ತೆಯವರಿಗೆ ನನ್ನ ಕಾಯಿಲೆಯ ಸುದ್ದಿ ಮುಟ್ಟಿಸಿರಬಹುದು.

“ಮೊದಲು ಆ ಅಪಶಕುನದ ಮಗುವಿನ ಕಥೆ ಆಯ್ತು, ಈಗ ಈ ಹಾಳು ಕಾಯಿಲೆನಾ…? ನಾನು ನಿನಗೆ ಹೇಳಿದ್ದೆ ನೋಡು, ಈ ಹುಡುಗಿ ನಮ್ಮ ಮನೆಗೆ ಆಗಿ ಬರೋದಿಲ್ಲ ಅಂತ….”

ಪ್ರಶಾಂತರ ಮುಖ ಗಡುಸಾಯಿತು. “ಅಮ್ಮಾ, ಶಿಲ್ಪಾಳನ್ನು ನನಗಾಗಿ ಆರಿಸಿ ಮದುವೆ ಮಾಡಿಸಿದ್ದು ನೀವೇ. ಆಗ ನಿಮಗೆ ಏನೂ ಆಗಬಾರದ್ದು ಕಂಡಿರಲಿಲ್ಲ. ಈಗೇನಾಯಿತು? ಪ್ರಪಂಚದಲ್ಲಿ ಯಾವುದೇ ಮಗು ತಂದೆ ತಾಯಿಗೆ ಅಪಶಕುನವಾಗೋದಿಕ್ಕೆ ಸಾಧ್ಯವಿಲ್ಲ ಬಿಡಿ,” ಎಂದರು.

ಅತ್ತೆಯವರು ಕೊಂಚ ಮೆದುವಾಗಿ ಹೇಳಿದರು, “ಹಾಗಲ್ಲಪ್ಪ, ಅವಳ ಕಾಯಿಲೆ ನೋಡು… ನಾನು ಹೇಳೋದು ಏನು ಅಂದರೆ ಅವಳಿಗೆ ಒಮ್ಮೆ ಸ್ವಾಮೀಜಿಯ ಪ್ರಸಾದ ಕೊಡಿಸೋಣ. ಎಲ್ಲ ಸರಿಹೋಗುತ್ತದೆ.”

ಪ್ರಶಾಂತ್‌ ಕೋಪದಲ್ಲಿ ಏನೋ ಹೇಳುವವರಿದ್ದರು, ನಾನು ಮೆಲ್ಲನೆ ಅವರ ಕೈ ಅದುಮಿದೆ. ಅವರು ಕೊಂಚ ಶಾಂತರಾಗಿ ಹೇಳಿದರು, “ಇನ್ನು ನಾನು ಶಿಲ್ಪಾಳನ್ನು ಯಾವ ಕಳ್ಳ ಸ್ವಾಮೀಜಿ ಹತ್ತಿರಾನೂ ಕರೆದುಕೊಂಡು ಹೋಗೋದಿಲ್ಲ. ನೀವು ಕೂಡ ಅಂಥವರಿಂದ ದೂರ ಇರೋದು ಒಳ್ಳೆಯದು. ಶಿಲ್ಪಾಳಿಗೆ ಶಾರೀರಿಕ ದೌರ್ಬಲ್ಯದಿಂದ ಈ ಕಾಯಿಲೆ ಬಂದಿದೆ. ಇಷ್ಟು ದಿನ ನಾನು ಅವಳನ್ನು ಅಲಕ್ಷ್ಯ ಮಾಡಿದ್ದರಿಂದ ಹೀಗಾಗಿದೆ. ಅವಳು ಇದುವರೆಗೂ ಒಬ್ಬ ಒಳ್ಳೇ ಪತ್ನಿಯಂತೆಯೇ ನಡೆದುಕೊಂಡು ಬಂದಿದ್ದಾಳೆ.  ಆದರೆ ನಾನು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಈಗ ನಾನು ಪತಿಯ ಕರ್ತವ್ಯ ನಿಭಾಯಿಸಬೇಕಾಗಿದೆ. ಅವಳನ್ನು ಚೆನ್ನಾಗಿ ನೋಡಿಕೊಂಡು ಬೇಗನೆ ಕಾಯಿಲೆ ಗುಣಪಡಿಸಬೇಕಾಗಿದೆ.”

ಅತ್ತೆಯವರು ಫೋನ್‌ ಆಫ್‌ ಮಾಡಿಬಿಟ್ಟರು. ದಾರಿಯಲ್ಲಿ, ಪ್ರಶಾಂತ್‌ ಮತ್ತೆ ಮತ್ತೆ ಪ್ರೀತಿಭರಿತರಾಗಿ ನನ್ನನ್ನು ನೋಡುತ್ತಿದ್ದರು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿತು. ನಮ್ಮ ಮುದ್ದು ಮಗು ಶೃತಿ ನಮ್ಮ ಕೈತಪ್ಪಿ ಹೋದರೂ ನಮ್ಮ ಬಾಂಧವ್ಯದಲ್ಲಿ ಪ್ರೇಮರಾಗದ ಶ್ರುತಿಯು ಹರಿದು ಬರುತ್ತಿರುವ ಅನುಭವವಾಗಿ ನಾನು ಪುಳಕಿತಳಾದೆ.

Tags:
COMMENT