ಕಥೆ – ಎ.ಎಂ. ನರಸಗೊಂಡ 

ಯಾವುದೋ ಆವೇಶದಲ್ಲಿ ತನ್ನ ಮೊದಲ ಮದುವೆಯಿಂದ ಹೊರಬಂದ ಅಮೃತಾ, ಆ ಗಂಡನ ಪ್ರೇಮವನ್ನು ಮುಂದೆ ಮರೆಯದಾದಳು. ತನ್ನ ಎರಡನೇ ಗಂಡನ ಆಪ್ತ ಗೆಳತಿಯ ಗಂಡನೇ ತನ್ನ ಮಾಜಿ ಗಂಡ ಎಂದು ಗೊತ್ತಾದಾಗ, ಅವರಿಬ್ಬರ ಕೊರತೆಯನ್ನು ಶಾಶ್ವತವಾಗಿ ನಿವಾರಿಸಲು ಅವಳು ಕೈಗೊಂಡ ನಿರ್ಧಾರವೇನು…..?

ಬುಸಬುಸನೆ ಸಿಗರೇಟಿನ ಹೊಗೆ ಬಿಡುತ್ತಾ, ಓರೆಗಣ್ಣಿನಲ್ಲಿ ಹೆಂಡತಿಯತ್ತ ನೋಡುತ್ತಾ ಕೇಳಿದ ಭಾಸ್ಕರ, “ನೀನವನನ್ನು ಇಷ್ಟಪಡ್ತಿದ್ದೀಯಾ ಅಲ್ವಾ….?”

“………..”

ಅಮೃತಾ ಸಶಬ್ದವಾಗಿ ಕೈಯಲ್ಲಿದ್ದ ಕಾಫಿ ಗುಟುಕರಿಸುತ್ತಾ, ಅವನ ಮಾತು ತನಗೆ ಕೇಳಿಸಿಯೇ ಇಲ್ಲವೆಂಬಂತೆ ಕಿಟಕಿಯಿಂದಾಚೆಗೆ ನೋಡುತ್ತಿದ್ದಳು. ಭಾಸ್ಕರನ ಮುಂದಿದ್ದ ಕಾಫಿ ಆರಿಹೋಗಿತ್ತು. ಅವನಿಗೆ ಕುಳಿತಿದ್ದ ಮೆತ್ತನೆಯ ಕುಶನ್‌ ಸೋಫಾ ಮುಳ್ಳಿನಂತೆ ಅನಿಸಿತು.

“ನಿನ್ನನ್ನೇ ಕೇಳ್ತಿರೋದು…. ಸೌರವ್ ಗೂ ನಿನಗೂ ಏನು ಸಂಬಂಧ?”

ತೀಕ್ಷ್ಣವಾದ ದೃಷ್ಟಿಯಿಂದ ಅವನತ್ತ ನೋಡುತ್ತಾ, “ಗಂಡು-ಹೆಣ್ಣಿನ ನಡುವೆ ಕೆಟ್ಟ ಸಂಬಂಧ ಬಿಟ್ಟು ಬೇರೆ ಭಾವನೆಗಳು ಇರಬಾರದು ಅಂತ ಏನಾದರೂ ಅಲಿಖಿತ ಮಾಡಿದ್ದೀರಾ….. ನೀವು ಗಂಡಸರು?” ಎಂದೆನ್ನುತ್ತಾ ಉತ್ತರಕ್ಕೂ ಕಾಯದೆ ಒಳಹೊರಟಳು. ಜಗಳ ವಾದ ವಿವಾದ ಈಗ ಅವಳಿಗಿಷ್ಟವಿರಲಿಲ್ಲ.

“ಅಮೃತಾ, ಸ್ವಲ್ಪ ನಿಲ್ಲು!” ಭಾಸ್ಕರನ ಈ ಪರಿ ಬಿರುನುಡಿ ಕೇಳಿ ಅಚ್ಚರಿಯಿಂದ ಕಣ್ಣರಳಿಸಿದಳು. ಮದುವೆಯಾದ ಮೂರು ವರ್ಷದ ತನಕ ಅವಳನ್ನು ಒಂದು ಸಲ ಅಮೃತಾ ಎಂದು ಹೆಸರಿಡಿದು ಕರೆದಿರಲಿಲ್ಲ. ಬದಲಾಗಿ ಪಾಪು ಇಲ್ಲವೇ  ಅಮ್ಮು ಎನ್ನುತ್ತಿದ್ದ.

“ಅಮೃತಾ, ನಮ್ಮಿಬ್ಬರ ಸಂಬಂಧ ಹಳಸಿ ತುಂಬಾ ದಿನಗಳಾಯಿತು. ಹಳಸಿದ್ದು ಅನಾರೋಗ್ಯಕ್ಕೆ ದಾರಿ ಮಾಡುತ್ತೆ. ಇಬ್ಬರೂ ಒಂದು ನಿರ್ಧಾರಕ್ಕೆ ಬರುವ ಸಮಯ ಆಯ್ತು ಅನ್ಸುತ್ತೆ,” ಎಂದು ಸಿಗರೇಟ್‌ ತುಂಡನ್ನು ಆ್ಯಶ್‌ಟ್ರೇಯಲ್ಲಿ ಹಾಕುತ್ತಾ ಹೇಳಿದ.

“ನಿಮಗಿಷ್ಟ ಬಂದ ಹಾಗೆ ಮಾಡಿ, ಸೈನ್‌ ಮಾಡಲು ನಾನು ಕೂಡ ಎಂದೋ ತಯಾರಾಗಿದ್ದೀನಿ,” ಎಂದವಳೇ ಅವನ ಮುಖದ ಭಾವನೆಗಳನ್ನು ಅವಳು ಅಳೆಯಲು ಹೋಗಲಿಲ್ಲ. ಬದಲಾಗಿ ತನ್ನ ಕಣ್ಣಂಚಿನಲ್ಲಿ ಎರಡು ಹನಿ ನೀರು ಕೂಡ ಬರದಿದ್ದಕ್ಕೆ ಆಶ್ಚರ್ಯಪಟ್ಟಳು.

`………. ಮನಸ್ಸು ಕೆಟ್ಟರೆ ವಜ್ರಕ್ಕಿಂತಲೂ ಕಠಿಣವಾಗುತ್ತೆ, ಸೋತರೆ ಬೆಣ್ಣೆಗಿಂತಲೂ ಮೃದುವಾಗುತ್ತದೆ….’ ರೇಡಿಯೋದಲ್ಲಿ ಚಿಂತನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.

ಇದೆಲ್ಲ ಆಗಿ ಈಗ್ಗೆ ಸುಮಾರು ಐದು ವರ್ಷಗಳಾಗಿ ಹೋಗಿವೆ. ಇಬ್ಬರೂ ಈಗ ವಿಚ್ಛೇದಿತರು ಮತ್ತು ಬೇರೆ ಬೇರೆ ಮದುವೆ ಕೂಡ ಆಗಿದ್ದಾರೆ.

ಅಮೃತಾ, ಸೌರವ್ ಗೆ ಕಾಫಿ ಕೊಡುತ್ತಾ, “ಸಂಜೆ ಬೇಗ ಮನೆಗೆ ಬಾ. ಮಕ್ಕಳನ್ನು ಕರೆದುಕೊಂಡು ತಿರುಗಾಡಲಿಕ್ಕೆ ಹೋಗೋಣ,” ಎಂದವಳ ಕಣ್ಣುಗಳಲ್ಲಿ ಮಿಂಚಿನ ಹೊಳಪಿತ್ತು, ಮುಖದಲ್ಲಿ ತಾಯ್ತನದ ಕಳೆ ತುಂಬಿ ತುಳುಕಾಡುತ್ತಿತ್ತು.

“ಎಸ್‌ ಬಾಸ್‌,” ಎನ್ನುತ್ತಾ ಅವಳ ಕೆನ್ನೆಗೆ ಹೂಮುತ್ತನ್ನಿಟ್ಟು ಹೊರಟವನಿಗೆ ಸಂಜಿತ್‌, ಸುಖಿತ್‌ ಕೂಡ ಟಾಟಾ ಮಾಡಿದರು.

ಅಮೃತಾ ಈಗ ಅಪ್ಪಟ ಗೃಹಿಣಿ. ಮನೆಯನ್ನು ಅಭಿಮಾನದಿಂದ ಸಿಂಗರಿಸುತ್ತಾಳೆ. ಗಂಡನ ಬೇಕು ಬೇಡಗಳನ್ನು, ಮಕ್ಕಳನ್ನು ಪ್ರೀತಿಯಿಂದ ಗಮನಿಸುತ್ತಾಳೆ. ಬದುಕೀಗ ತುಂಬಿದ ಕೊಡ. ಆದರೂ ಎಲ್ಲೋ ಬಿಂದಿಗೆ ತೂತಾಗಿ ನೀರು ಸೋರಿ, ಬಿಂದಿಗೆ ತುಳುಕುತ್ತಾ ಇದೆಯಾ? ಅನ್ನೋ ಸಂಶಯ ಅವಳದು. ಅವಳ ಮನದಲ್ಲೇನೋ ಅವ್ಯಕ್ತ ನೋವು, ವಿಷಾದ ಅದೇನೆಂದು ಗೊತ್ತಾಗುತ್ತಿಲ್ಲ.

ಸಂಜೆ ಸೌರವ್ ಬೇಗ ಮನೆಗೆ ಬಂದ. ಎಲ್ಲರೂ ಎಕ್ಸಿಬಿಷನ್‌ಗೆ ಹೋಗಲು ತಯಾರಾದರು. ಅಲ್ಲಿ ತೂಗು ತೊಟ್ಟಿಲು, ತಿರುಗು ಕುದುರೆ, ಏರುತ್ತಾ, ಇಳಿಯುತ್ತಾ ಹೋಗುವ ರೈಲು, ಇನ್ನೂ ಏನೇನೋ…. ಅವನ್ನೆಲ್ಲ ನೋಡುತ್ತಾ ಮಕ್ಕಳ ಕಣ್ಣುಗಳಲ್ಲಿ ಮಿಂಚಿನ ಸಂಚಲನ. ಎಲ್ಲಾ ಮುಗಿಸಿ ತಿಂಡಿಗಳ ಸ್ಟಾಲ್‌ನತ್ತ ಬಂದರು. ಪಾನಿಪೂರಿ, ಬೇಲ್‌ಪೂರಿ, ತರಹೆವಾರಿ ತಿನಿಸುಗಳು, ಮಿರ್ಚಿ ಬಜ್ಜಿ ಬಾಯಲ್ಲಿ ನೀರೂರಿಸುತ್ತಿತ್ತು. ಆರ್ಡರ್‌ ಮಾಡಿ ನಿಂತ ಸೌರವ್ ಗೆ ಹಿಂದಿನಿಂದ ಇಂಪಾದ, ಪರಿಚಿತ ಧ್ವನಿ ಕೇಳಿಸಿತು. ತಿರುಗಿ ನೋಡಿದಾಗ ಅದು ನಿಜವೇ ಆಗಿತ್ತು. ಅ ಧ್ವನಿ ಅವನ ಕಾಲೇಜ್‌ಮೇಟ್‌ ದಿಶಾಳದ್ದು. ಅಚ್ಚರಿಯಿಂದ ಪರಸ್ಪರ ಇಬ್ಬರೂ ಉಭಯ ಕುಶಲೋಪರಿ ಮಾಡಿಕೊಂಡರು. ಸೌರವ್ ಅಮೃತಾಳಿಗೆ  ಅವಳನ್ನು ಪರಿಚಯಿಸಿದ.

“ಇವಳು ನನ್ನ ಕಾಲೇಜ್‌ಮೇಟ್‌ ದಿಶಾ. ನನಗಿಂತಲೂ ಎರಡು ವರ್ಷ ಸೀನಿಯರ್‌. ನನ್ನ ಗುರು, ಮಾರ್ಗದರ್ಶಿ, ಆತ್ಮೀಯ ಗೆಳತಿ, ನನ್ನನ್ನು ಸರಿಯಾದ ದಾರಿಯಲ್ಲಿ ನಡೆಸಿದ ದೇವತೆ!”

“ಸೌರವ್, ನನ್ನನ್ನು ಹೊಗಳಿ, ಹೊಗಳಿ ಹೊನ್ನ ಶೂಲಕ್ಕೇರಿಸಬೇಕು ಅಂದುಕೊಂಡಿದ್ದೀಯಾ?” ದಿಶಾ ಮುನಿಸು ತೋರಿಸಿದಳು. ಅಮೃತಾ ಅವಳನ್ನು ಮನೆಗೆ ಆಹ್ವಾನಿಸಿದಳು.

“ಈಗ ಬೇಡ…. ಮತ್ತೊಮ್ಮೆ ಬರುತ್ತೇನೆ,” ಎಂದ ದಿಶಾ ಅವರ ಮನೆಯ ಅಡ್ರೆಸ್‌, ಫೋನ್‌ ನಂಬರ್‌ ತೆಗೆದುಕೊಂಡು, ತನ್ನ ವಿಳಾಸವನ್ನು ಅವರಿಗೆ ನೀಡಿ ಬೀಳ್ಕೊಂಡಳು.

ಅಮೃತಾ ಮತ್ತು ಮಕ್ಕಳು ತಮಗೆ ಬೇಕಾದ ಸಾಮಾನುಗಳನ್ನೆಲ್ಲ ಕೊಂಡರು. ದಿಶಾಳನ್ನು ಕಂಡಾಗಿನಿಂದ ಅಮೃತಾಳ ಮನದಲ್ಲಿ ಏನೋ ತಳಮಳ. ಸೌರವ್ ತಾನಾಗೇ ಏನೂ ಹೇಳಲಿಲ್ಲ ಅಥವಾ ಅವಳ ಮನಸ್ಸಿನ ಭಾವನೆಗಳು ಅವನಿಗೆ ಅರ್ಥವಾಗಲಿಲ್ಲವೇನೋ. ಪಾರ್ಕ್‌ ಮಾಡಿದ್ದ ಕಾರನ್ನು ತಂದು ಎಲ್ಲರನ್ನೂ ಕೂರಿಸಿಕೊಂಡ ಸೌರವ್ ಸಹಜವಾಗಿ ಹೇಳತೊಡಗಿದ, “ಅಮೃತಾ, ದಿಶಾ ಯಾರು ಗೊತ್ತಾ? ನನ್ನ ಸೀನಿಯರ್‌. ಕಾಲೇಜಿನ ಚರ್ಚಾ ಸ್ಪರ್ಧೆಯಲ್ಲಿ ಇಬ್ಬರೂ ಭೇಟಿಯಾದೆವು. ನಂತರ ನಾವಿಬ್ಬರು ಒಳ್ಳೆಯ ಸ್ನೇಹಿತರಾದ್ವಿ…..” ಮಾತು ನಿಲ್ಲಿಸಿ ಅವಳತ್ತ ನೋಡಿದ. ಅವಳು ನಿರ್ಭಾವುಕಳಾಗಿ ರಸ್ತೆಯತ್ತ ನೋಡುತ್ತಿದ್ದಳು. ಕಾರಿನ ವೇಗ ತುಸು ತಗ್ಗಿಸಿ ಅವಳ ಮುಖದತ್ತ ಕೈಯಾಡಿಸಿ, “ನಾನು ಹೇಳ್ತಿರೋದು ಕೇಳಿಸ್ತಿದೀಯಾ ಅಮ್ಮು?” ಎಂದ.

ಅವಳು ತಲೆ ಅಲ್ಲಾಡಿಸುತ್ತಾ, “ಮುಂದೆ ಹೇಳು,” ಎಂದಳು. ಕಾರನ್ನು ಬಲಬದಿಗೆ ತಿರುಗಿಸಿ, ಮುಂದೆ ಹೋಗುತ್ತಿದ್ದ ವಾಹನಕ್ಕೆ ಹಾರ್ನ್‌ ಬಾರಿಸಿ, ಸೈಡ್‌ನಲ್ಲಿ ಮುಂದೆ ಸಾಗಿದ ಸೌರವ್, “ಮುಂದೆ ಕೆಟ್ಟ ಸ್ನೇಹಿತರ ಸಹವಾಸದಿಂದ ನನಗೆ ಡ್ರಗ್ಸ್ ಸೇವನೆ ಅಭ್ಯಾಸವಾಯಿತು. ಅದು ದಿಶಾಗೆ ಗೊತ್ತಾಗಿ, ನನ್ನನ್ನು ಅದರಿಂದ ಮುಕ್ತನನ್ನಾಗಿಸಲು ಬಹಳ ಕಷ್ಟಪಟ್ಟಳು. ಅವಳ ಪ್ರಯತ್ನದ ಫಲವಾಗಿ ನಾನಿಂದು ಎಲ್ಲ ದುಶ್ಚಟಗಳಿಂದ ದೂರವಾಗಿ ಈ ಹಂತಕ್ಕೆ ಬಂದಿದ್ದೀನಿ. “ದಿಶಾಳ ದೂರದ ಸಂಬಂಧಿ ಫಲಿ ಜೊತೆ ನನ್ನ ಮದುವೆಯೂ ಆಯಿತು. ಆದರೆ ಪ್ರಾಚೀಯ ಹುಟ್ಟಿನ ಜೊತೆಗೆ ಅವಳ ಜೀವನ ಮುಗಿದು ಹೋಯಿತು. ಮಗುವನ್ನು ನನ್ನಮ್ಮ ಊರಿಗೆ ಕರೆದುಕೊಂಡು ಹೋದರು. ನಾನಿಲ್ಲಿ ದೇವದಾಸ ಆದೆ. ಪ್ರಾಚೀ ಅಲ್ಲಿ ಶಾಲೆಗೆ ಹೋಗಲು ಆರಂಭಿಸಿದಳು. ಹಳ್ಳೀಲಿ ಶಾಲೆ ಸರಿ ಇಲ್ಲ ಇಲ್ಲೇ ಸೇರಿಸೋಣವೆಂದರೆ, ನಾನು ಆಫೀಸ್‌ಗೆ ಹೋಗುವುದು, ಕೆಲಸಗಳ ನಡುವೆ ಮಗು ಒಂಟಿಯಾಗುತ್ತದೆ. ಕಾಯಿಲೆಯ ಅಮ್ಮ ಹಳ್ಳಿ ಬಿಟ್ಟು ಬರಲು ತಯಾರಿರಲಿಲ್ಲ. ಆಮೇಲೆ ನಿನ್ನ ಪರಿಚಯ, ಮದುವೆ ಎಲ್ಲಾ ಆಗೋಯ್ತು ನೋಡು. ನನಗೆ ಪ್ರಾಚೀಯನ್ನು ಮರೆಯಕ್ಕೇ ಆಗಲ್ಲ,” ಎಂದನು.

ಕಣ್ಣಂಚಿನಲ್ಲಿ ಬಂದ ನೀರನ್ನು ಪ್ರಯತ್ನಪೂರ್ವಕವಾಗಿ ತಡೆದದದ್ದನ್ನು ಅವಳು ಗಮನಿಸಿದಳು.

“ನಾವು ಪ್ರಾಚೀಯನ್ನು ಇಲ್ಲೇ ಕರೆದುಕೊಂಡು ಬರೋಣ,” ಎಂದಳು.

“ಆದರೆ ಅಮ್ಮನಿಗೂ ಅವಳಿಲ್ಲದೆ ಇರಲು ಆಗಲ್ಲ. ಒಂಟಿತನ ಕಾಡುತ್ತಲ್ಲ,” ಎಂದ. ಮುಂದೆ ಇಬ್ಬರೂ ಮಾತಾಡಲಿಲ್ಲ. ದಣಿವು ಆಗಿತ್ತು ಮನೆಗೆ ಹೋಗಿ ಮಲಗಿದರೆ ಸಾಕಾಗಿತ್ತು.

ಕಾಯಿಲೆಯ ತೀವ್ರತೆಯಿಂದ ಅಮ್ಮ ತೀರಿಕೊಂಡ ಸುದ್ದಿ ಬಂತು. ಸೌರವ್ ಕುಟುಂಬ ಸಮೇತನಾಗಿ ಊರಿಗೆ ಹೋಗಿ ಅಂತ್ಯಕ್ರಿಯೆಗಳನ್ನು ಮುಗಿಸಿದ. ಸುದ್ದಿ ಗೊತ್ತಾಗಿ ದಿಶಾ ಕೂಡ ಬಂದಿದ್ದಳು. ಅಜ್ಜಿಯನ್ನು ಕಳೆದುಕೊಂಡ 3ನೇ ಕ್ಲಾಸಿನ ಪ್ರಾಚೀಗೆ ದುಃಖ ತಡೆಯದೆ ಎಲ್ಲಾದರೂ ಮರೆಯಲ್ಲಿ ನಿಂತು ಒಬ್ಬಳೇ ಅಳುತ್ತಿದ್ದಳು. ಅವಳಿಗೆ ಅಪ್ಪನ ಜೊತೆಗೂ ಹೆಚ್ಚು ಸಲುಗೆ ಇರಲಿಲ್ಲ. ಇನ್ನು ಅಮೃತಾಳನ್ನು ಅಮ್ಮ ಎಂದು ಮಾನಸಿಕವಾಗಿ ಒಪ್ಪಿರಲಿಲ್ಲ. ಪ್ರಾಚೀಯ ಸ್ಥಿತಿ, ಅವಳ ದುಃಖ, ಅನ್ಯಮನಸ್ಕತೆ ಸೌರವ್ ಗೆ ಹಿಮದಂತೆ ಕೊರೆಯತೊಡಗಿತು. ತನ್ನ ಮಗಳನ್ನು ಅಮೃತಾ ಸ್ವಂತ ಮಗಳಾಗಿ ಕಾಣುತ್ತಾಳಾ? ಪುಟ್ಟಿಯ ಮನಸ್ಸು ಅಜ್ಜಿಯನ್ನು ಮರೆಯುತ್ತಾ? ಮುಂತಾಗಿ ಯೋಚಿಸಿ ತೀವ್ರ ಹಣ್ಣಾದ. ಇದನ್ನು ಅಮೃತಾ ಕೂಡ ಗಮನಿಸಿದಳು. ಮದುವೆ ಮುಂಚೆಯೇ ಸೌರವ್ ಗೆ ಪುಟ್ಟ ಪ್ರಾಚೀ ಎಂಬ ಮಗಳಿರುವುದು ಅಮೃತಾಗೆ ಗೊತ್ತಿತ್ತು. ಅದನ್ನ ಅವನು ಮುಚ್ಚಿಟ್ಟಿರಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಪ್ರಾಚೀಯನ್ನು ಕಂಡಾಗ ಹಿಂಡಿದಂತಾಗುತ್ತಿತ್ತು. ಇಬ್ಬರೂ ಆಪ್ತರಾಗಲು ಸಾಧ್ಯವಾಗುತ್ತಿಲ್ಲವಲ್ಲ ಎಂದುಕೊಳ್ಳುತ್ತಿದ್ದಳು.

ಸೌರವ್, ದಿಶಾಳನ್ನು ಏನೋ ವಿಷಯ ಹೇಳಲಿದೆ ಬಾ ಎಂದು ಕರೆದುಕೊಂಡು ತೋಟಕ್ಕೆ ಹೋದದ್ದನ್ನು ಗಮನಿಸಿದ ಅಮೃತಾ, ಕುತೂಹಲದಿಂದ ಅವರಿಗೆ ಗೊತ್ತಾಗದಂತೆ ಹಿಂಬಾಲಿಸಿದಳು. ಮನೆಯಲ್ಲಿ ಸಾಕಷ್ಟು ಬಂಧು ಬಳಗವಿದ್ದರು. ಸೌರವ್ ನ ತಂಗಿ ಮತ್ತು ಚಿಕ್ಕಮ್ಮಂದಿರು ಎಲ್ಲವನ್ನೂ ಸಂಭಾಳಿಸುತ್ತಿದ್ದರು.

ತೋಟದ ನಡುವೆ ಬದುವಿನ ಮೇಲೆ ನೆಟ್ಟಿರುವ ತೆಂಗಿನ ಮರಗಳ ನಡುವೆ ಕೂತ ಸೌರವ್, “ದಿಶಾ, ನಂಗೆ ಪ್ರಾಚೀದೇ ಚಿಂತೆ ಕಣೇ,” ಎಂದ.

“ಚಿಂತೆ ಯಾಕೋ ಅವಳನ್ನು ನಿನ್ನ ಜೊತೆ ಸಿಟಿಗೆ ಕರ್ಕೊಂಡು ಹೋಗು,” ಎಂದಳು ದಿಶಾ.

“ಆದ್ರೆ ಅಮೃತಾಗೂ ಪ್ರಾಚೀಗೂ ಹೊಂದಾಣಿಕೆ ಆಗ್ಬೇಕಲ್ವಾ?”

“ಏನೋ ನೀನು! ಇಷ್ಟು ದಿನ ಇಬ್ರೂ ದೂರ ಇದ್ರು. ಇಬ್ರರಿಗೂ ಅರ್ಥ ಮಾಡ್ಕೊಳ್ಳಲಿಕ್ಕೆ ಅವಕಾಶ ಸಿಕ್ಕಿರಲಿಲ್ಲ. ಒಂದೇ ಮನೆಯಲ್ಲಿ ಇದ್ದರೆ ಹತ್ರ ಆಗೇ ಆಗ್ತಾರೆ ಬಿಡು. ಒಂದು ಪ್ರಯತ್ನ ಮಾಡಿ ನೋಡು,” ಎಂದು ಮುಂದುವರಿದ ಅವಳು, “ಇಲ್ಲಾಂದ್ರೆ ನಾನು ಉಪಾಯ ಹೇಳ್ಲಾ? ಇದರಿಂದ ನನ್ನ ಸ್ವಾರ್ಥಾನೂ ಈಡೇರುತ್ತೇ….” ಎಂದಳು.

“ಏನು?! ನಿನ್ನ ಸ್ವಾರ್ಥಾನಾ? ನನಗರ್ಥವಾಗಲಿಲ್ಲ,” ಎಂದು ಪ್ರಶ್ನಾರ್ಥಕವಾಗಿ ಅಚ್ಚರಿಯಿಂದ ಅವಳನ್ನು ನೋಡಿದ.

“ಸೌರವ್, ನಿನ್ನ ಮಗಳನ್ನು ನನಗೆ ದತ್ತು ಕೊಟ್ಟುಬಿಡು…..” ಅವಳು ಗದ್ಗದಿತಳಾದಳು. ಅವಳ ಕಣ್ಣಿಂದ ಎರಡು ಹನಿ ಕಣ್ಣೀರು ಅವಳ ಮುಂಗೈ ಮೇಲೆ ಬಿತ್ತು.

ಸೌರವ್ ಉದ್ವೇಗದಿಂದ, “ನೀನು ಜೋಕ್‌ ಮಾಡ್ತಿದೀಯಾ ಅಥವಾ ಈ ರೀತಿ ಸಮಾಧಾನದ ಪರಿಹಾರ ಹೇಳ್ತಿದೀಯಾ?” ಕೇಳಿದ.

“ನಾನೊಂದು ಬಂಜರು ಭೂಮಿ ಕಣೋ. ನನಗೆ ಮಕ್ಕಳಾಗಲ್ಲ ಎಂದು ಡಾಕ್ಟರ್‌ ಹೇಳಿದ್ದಾರೆ. ನನ್ನ ಗಂಡ ಅದೇ ಕೊರಗಲ್ಲಿ ಕುಡಿಯೋದು ಕಲಿತಿದ್ದಾರೆ. ಜೀವನ ನರಕ ಆಗಿದೆ ಸೌರೂ….” ಬಿಕ್ಕಳಿಸಿದಳು ದಿಶಾ.

ತನ್ನ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಬಂದವನಿಗೆ ಈಗ ಹೊಸ ಸಮಸ್ಯೆ ಉದ್ಭವಿಸಿತ್ತು. ಈ ಸಮಸ್ಯೆಗೆ ಅವನು ಜವಾಬ್ದಾರಿಯಿಂದ ಪರಿಹಾರ ನೀಡಬೇಕಾಗಿತ್ತು. ಅವಳು ಅವನ ಆತ್ಮೀಯ ಗೆಳತಿ. ಜೀವನ, ಜೀವ ಉಳಿಸಿದ ಒಲುಮೆಯ ಸ್ನೇಹಿತೆ. ಈ ರೀತಿ ಧುತ್ತೆಂದು ಕಣ್ಮುಂದೆ ಬಂದ ಸಮಸ್ಯೆಗೆ ಅವನಿಗೆ ಕ್ಷಣ ಪ್ರತಿಕ್ರಿಯಿಸುವ ಪರಿ ತಿಳಿಯದೆ, ಸುಮ್ಮನಿರಲೂ ಆಗದೆ ಒದ್ದಾಡಿದ.

ಸ್ವಲ್ಪ ಹೊತ್ತಿನ ನಂತರ ಅವನೇ, “ದಿಶಾ, ಈ ಬಗ್ಗೆ ತಕ್ಷಣ ನಿರ್ಧಾರಕ್ಕೆ ಬರುವುದು ಬೇಡ. ನಿನ್ನ ಗಂಡನ ಜೊತೆ ಮಾತಾಡು. ಆಮೇಲೆ ಸರಿಯಾಗಿ ವಿಚಾರ ಮಾಡೋಣ ಕಣೇ,” ಎಂದು ಅವಳತ್ತ ಸಂತಾಪದಿಂದ ನೋಡಿದ.

ದಿಶಾಗೆ ತಾಯ್ತನದ ಭಾಗ್ಯ ಇಲ್ಲವೆಂಬುದನ್ನು ನಂಬದವನಂತೆ ಅವಳನ್ನೇ ಎವೆಯಿಕ್ಕದೆ ನೋಡಿದ. ಇಬ್ಬರೂ ಮೌನವಾಗಿದ್ದರು. ಹೊತ್ತು ಸರಿಯುತ್ತಿದ್ದಂತೆ ಹೊಟ್ಟೆ ಚುರುಗುಡಲಾರಂಭಿಸಿತು. ಇಬ್ಬರೂ ಎದ್ದು ಮೌನವಾಗಿ ಮನೆ ಕಡೆ ಹೊರಟರು.

ಮರೆಯಲ್ಲಿ ನಿಂತು ಎಲ್ಲನ್ನೂ ಕೇಳಿಸಿಕೊಂಡ ಅಮೃತಾಗೂ ಇದು ಹೊಸ ಸಮಸ್ಯೆಯಾಯ್ತು. `ಸೌರವ್ ಪ್ರಾಚೀಯನ್ನು ದತ್ತು ಕೊಡ್ತಾನಾ? ನನ್ನನ್ನು ಒಂದು ಮಾತೂ ಕೇಳೋದಿಲ್ವಾ? ನನ್ನ ಅಧಿಕಾರ ಇಷ್ಟೇನಾ?’ ಮನಸ್ಸು ಪ್ರಶ್ನೆಗಳ ಗೂಡಾಗಿತ್ತು. ಇವಕ್ಕೆಲ್ಲ ಕಾಲವೇ ಉತ್ತರ ಹೇಳುತ್ತದೆ ಎಂದುಕೊಳ್ಳುತ್ತಾ ಅವಳು ಮನೆಯ ಕಡೆ ನಡೆದಳು. ದಿಶಾಳನ್ನು ಪರ್ಸನಲ್ಲಾಗಿ ಭೇಟಿಯಾಗಬೇಕೆಂದು ನಿರ್ಧರಿಸಿದಳು.

ರಾತ್ರಿಯೂಟ ಆದ ಮೇಲೆ ಹಿತ್ತಲಲ್ಲಿ ಕೈ ತೊಳೆಯಲು ಬಂದ ದಿಶಾಳನ್ನು ತಡೆದ ಅಮೃತಾ, “ನಿಮ್ಮ ಪರಿಚಯವೇನೋ ಆಯಿತು. ಆದರೆ ನಿಮ್ಮ ಯಜಮಾನರನ್ನು ಎಂದು ಪರಿಚಯ ಮಾಡಿಸುತ್ತೀರಿ ಸೌರವ್ ಗೆ….?” ಎಂದಳು.

“ಆಯ್ತು. ನೀವಿಬ್ಬರೂ ಒಮ್ಮೆ ನಮ್ಮನೆಗೆ ಬನ್ನಿ,” ಎಂದ ಧ್ವನಿಯಲ್ಲಿ ಒಂದು ಬಗೆಯ ಹಿಂಜರಿತ, ಅಳುಕು ಸ್ಪಷ್ಟವಾಗಿ ಗೋಚರಿಸಿತು ಅಮೃತಾಳಿಗೆ.

ಬಹುಶಃ ಗಂಡನ ಕುಡಿತದ ದೆಸೆಯಿಂದ ಇರಬೇಕು. ಆದರೂ ಪಟ್ಟು ಬಿಡದೆ ಮನೆಯ ಅಡ್ರೆಸ್‌ನ್ನು ಮತ್ತೆ ಕೇಳಿ ಮರೆಯದೆ ಬರೆದುಕೊಂಡಳು. ಮೊದಲನೇ ಸಲ ಮರೆತು ಬಿಟ್ಟಂತೆ ಈ ಸಲ ಮರೆಯಬಾರದೆಂಬುದು ಅವಳ ಉದ್ದೇಶವಾಗಿತ್ತು. ನಂತರ ನೆಮ್ಮದಿಯಿಂದ ನಿದ್ರಿಸಿದಳು.

ಕಾಲಕ್ಕೆ ಯಾರ ಪರಿವೆಯೂ ಇಲ್ಲ. ಯಾರ ನೋವು, ನಲಿವು, ದುಃಖ, ಸುಖದ ಬಗ್ಗೆ ಅದು ಯೋಚಿಸುವುದಿಲ್ಲ. ತನ್ನ ಪಾಡಿಗೆ ತಾನು ನಿರ್ಲಿಪ್ತವಾಗಿ ಯೋಗಿಯಂತೆ ಹೋಗುತ್ತಲೇ ಇರುತ್ತದೆ.

ಪ್ರಾಚೀ ಹೊಸ ಅಮ್ಮನೊಂದಿಗೆ ಫ್ರೀಯಾಗಿ ಇರುತ್ತಿರಲಿಲ್ಲ. ಅಮೃತಾಗೂ ಅವಳನ್ನು ಗದರಿಸಲು, ಒತ್ತಾಯಿಸಲು ಹೆದರಿಕೆಯಿಂದ ಹಿಂಜರಿಯುತ್ತಿದ್ದಳು. ಪ್ರಾಚೀ ಸ್ವಲ್ಪ ದಿನ ಸೌರವ್ ನೊಂದಿಗೆ ಮಲಗುತ್ತಿದ್ದಳು. ನಂತರ ಸುಖಿತ್‌, ಸಂಜಿತ್‌ರೊಂದಿಗೆ ಸ್ನೇಹ ಬೆಳೆದಂತೆ ಅವರ ಜೊತೆ ಮಲಗಲಾರಂಭಿಸಿದಳು. ಸ್ವಲ್ಪ ಸ್ವಲ್ಪವಾಗಿ ಹೊಂದಿಕೊಳ್ಳಲಾರಂಭಿಸಿದಳು.ಈ ನಡುವೆ ಅಮೃತಾಗೆ ದಿಶಾ ನೆನಪಾದಳು. ಒಂದು ಮಧ್ಯಾಹ್ನ ಸೌರವ್ ಆಫೀಸ್‌ಗೆ ಹೋಗಿದ್ದ, ಪ್ರಾಚೀ, ಸುಖಿತ್‌ ಶಾಲೆಗೆ ಹೋಗಿದ್ದರಿಂದ ಅವಳಿಗೆ ಬಿಡುವಿತ್ತು. ಸೌರವ್ ಗೂ ಹೇಳದೆ ದಿಶಾಳ ಮನೆಯ ಅಡ್ರೆಸ್‌ ಹುಡುಕಿಕೊಂಡು ಸಂಜಿತ್‌ನೊಂದಿಗೆ ಹೊರಟಳು. ಆಟೋ ಹತ್ತಿ ಅವಳ ಮನೆಯ ಬಳಿ ಇಳಿದಳು. ದಿಶಾಗೆ ಮುಂಚಿತವಾಗಿ ತಿಳಿಸಬೇಕಾಗಿತ್ತೇನೋ ಅಂದುಕೊಂಡಳು. ತಕ್ಷಣವೇ ತಲೆ ಕೊಡವಿ ಅವಳನ್ನು ಆಶ್ಚರ್ಯಪಡಿಸಿದರಾಯ್ತು ಎಂದುಕೊಳ್ಳುತ್ತಾ ಕಾಲಿಂಗ್‌ ಬೆಲ್‌ ಒತ್ತಿದಳು. ಬಾಗಿಲು ತೆರೆಯಿತು. ಅವಳು ದಿಶಾ ಆಗಿರದೆ ಬೇರೊಬ್ಬ ಹೆಣ್ಣುಮಗಳು. “ಇದು ದಿಶಾ ಅವರ ಮನೆ ತಾನೇ?” ಎಂದಳು.

ಅವಳು “ಹೌದು,” ಎಂದಾಗ ಒಳಬಂದಳು.

ದಿಶಾಳನ್ನು ಕರೆಯಲು ಆ ಹೆಣ್ಣುಮಗಳು ಒಳಹೋದಳು. ಸೋಫಾದ ಮೇಲೆ ಕುಳಿತ ಅಮೃತಾ ಮನೆಯನ್ನೊಮ್ಮೆ ಅವಲೋಕಿಸಿದಳು. ಬೆಲೆಬಾಳುವ ಫರ್ನೀಚರ್‌, ನೆಲ ಹಾಸು, ಅಲಂಕಾರಿಕ ವಸ್ತುಗಳು, ಗೋಡೆಯ ಮೇಲಿನ ಅತ್ಯಂತ ಸುಂದರವಾದ ಪೇಂಟಿಂಗ್ಸ್ ಇವೆಲ್ಲ ಶ್ರೀಮಂತಿಕೆಯನ್ನು ಸಾರುತ್ತಿದ್ದವು. ಅವುಗಳಲ್ಲಿ ರಾಜರ ಕಾಲವನ್ನು ಸಾರುವ ಪೇಂಟಿಂಗ್ಸ್ ಗಳು ಅವಳನ್ನು ಆಕರ್ಷಿಸಿದವು. ಅವಳಿಗೆ ಎಲ್ಲೋ ಕಳೆದು ಹೋದಂತಾಯ್ತು.

“ಸರ್‌ಪ್ರೈಸ್‌ ಆಗಿ ಬಂದ್ರಲ್ಲ?! ಒಬ್ಬರೇ ಬಂದ್ರಾ?” ಎಂದು ದಿಶಾ ಎಚ್ಚರಿಸುವ ತನಕ ಅಮೃತಾ ಕಳೆದೇ ಹೋಗಿದ್ದಳು. ಹೃದಯದಲ್ಲಿ ಏನೋ ಅವ್ಯಕ್ತ ನೋವು, ವಿಷಾದ ಏನೆಂದು ಗೊತ್ತಾಗುತ್ತಿಲ್ಲ. ದಿಶಾ ಸಂಜಿತ್‌ನನ್ನು ಎತ್ತಿಕೊಂಡಳು. ಅವಳಿಂದ `ಪೇನ್‌ ಬಾಮ್’ ವಾಸನೆ ಬಂತು.

“ಸುಮ್ನೆ ಭೇಟಿಯಾಗೋಣ ಎಂದು ಬಂದೆ. ಇವತ್ತು ಹೊತ್ತೇ ಹೋಗ್ತಿರಲಿಲ್ಲ,” ಎನ್ನುತ್ತಾ ದಿಶಾಳನ್ನೊಮ್ಮೆ ಸೂಕ್ಷ್ಮವಾಗಿ ದಿಟ್ಟಿಸಿದಳು.

ಕೂದಲು ಸ್ವಲ್ಪ ಕೆದರಿತ್ತು, ಕಣ್ಣುಗಳು ಕೆಂಪಾಗಿದ್ದವು. ಅವಳಿಗೆ ತಲೆ ನೋವು ಬಂದಿದ್ದು ಗೊತ್ತಾಯಿತು.

“ನಿಮ್ಮ ಆರೋಗ್ಯ ಸರಿ ಇಲ್ಲ ಎನಿಸುತ್ತಿದೆ. ನಾವು ಈಗ ಬರಬಾರದಿತ್ತೇನೋ, ನಿಮಗೆ ತೊಂದರೆ ಕೊಟ್ಟೆ,” ಎಂದು ಹಳಹಳಿಸುತ್ತಾ ಹೇಳಿದಳು.

“ಛೇ….ಛೇ…. ಹಾಗೇನಿಲ್ಲ. ನಿಜ ಹೇಳಬೇಕೆಂದರೆ ನೀವು ಬಂದಿದ್ದು ಒಳ್ಳೇದಾಯ್ತು. ನಂಗೂ ಬೋರಾಗುತ್ತಿತ್ತು. ಈ ತಲೆ ನೋವು ನನಗೆ ಸಾಮಾನ್ಯವಾಗಿ ಬರುತ್ತಿರುತ್ತದೆ. ಬಹುಶಃ ಕನ್ನಡಕ ಬಂದಿರಬೇಕು. ಒಂದ್ಸಲ ಚೆಕಪ್‌ಗೆ ಹೋಗಬೇಕು,” ಎಂದು ಹೇಳುತ್ತಿರುವಾಗಲೇ ಆ ಹೆಣ್ಣುಮಗಳು ಟ್ರೇಯಲ್ಲಿ ಟೀ ಮತ್ತು ಬಿಸ್ಕತ್‌ ತಂದಿಟ್ಟಳು.

ಮಾತಾಡುತ್ತಾ ಟೈಂ ಹೋದದ್ದೇ ಗೊತ್ತಾಗಲಿಲ್ಲ. 5 ಗಂಟೆ ಬೆಲ್‌ ಆದಾಗಲೇ ಅಮೃತಾಗೆ ಎಚ್ಚರ.

“ಓಹ್‌! ಮಕ್ಕಳು ಬರೋ ಹೊತ್ತಾಯ್ತು ನಾನು ಹೊರಡ್ತೀನಿ,” ಎಂದು ಧಡಕ್ಕನೆ ಎದ್ದಳು. ಅಷ್ಟರಲ್ಲಿ ಸಂಜಿತ್‌ ಸ್ಟ್ಯಾಂಡ್‌ನಲ್ಲಿದ್ದ ಫೋಟೋವನ್ನು ಕೆಳಗೆ ಬೀಳಿಸಿದ. ಅದರ ಗಾಜು ಒಡೆಯಿತು. ಅವನಿಗೆ ಎರಡೇಟು ಕೊಟ್ಟವಳ ಕೈಯಿಂದ ಸಂಜಿತ್‌ನನ್ನು ಬಿಡಿಸಿದ ದಿಶಾ ಅವಳನ್ನು ಸಮಾಧಾನಪಡಿಸಿದಳು.

“ಫ್ರೇಮ್ ಒಡದಿದೆ ಮತ್ತೆ ಹಾಕಿಸಿದರಾಯಿತು ಮಗೂಗೆ ಹೊಡೀಬೇಡಿ,” ಎಂದಳು ದಿಶಾ.

“ಹಾಗಾದರೆ ನಾನೇ ಫ್ರೇಂ ಹಾಕಿಸಿ ತರುತ್ತೇನೆ. ನೀವು ಇಲ್ಲ ಅನ್ಬೇಡಿ,” ಎಂದಳು ಅಮೃತಾ.

“ಸರಿ ನಿಮ್ಮಿಷ್ಟ,” ಎಂದು ನಕ್ಕಳು ದಿಶಾ. ಅವಳ ತಲೆನೋವು ಮಯವಾಗಿ ಮನಸ್ಸು ಹಗುರವಾಗಿತ್ತು. ಕೆಳಗೆ ಬಿದ್ದ ಫೋಟೋವನ್ನು ಎತ್ತಿದ ಅಮೃತಾಗೆ ಅದು ಹಾವೇನೋ ಅನ್ನುವಂತೆ ಬೆಚ್ಚಿಬಿದ್ದಳು. ಆದರೂ ಅದನ್ನು ತೋರಗೊಡದೆ ತಕ್ಷಣ ಸಾವರಿಸಿಕೊಂಡು ಅದನ್ನು ವ್ಯಾನಿಟಿಬ್ಯಾಗ್‌ನಲ್ಲಿ ಹಾಕಿಕೊಂಡು ಗಾಜನ್ನು ಎತ್ತಲು ಹೋದಳು. ದಿಶಾ ಅವಳನ್ನು ತಡೆದು ಅದನ್ನು ಕೆಲಸದವಳು ತೆಗೆಯುತ್ತಾಳೆಂದಳು. ಇಬ್ಬರೂ ಬೀಳ್ಕೊಂಡರು.

ಸಂಜೆ ಮನೆಗೆ ಬಂದ ಅಮೃತಾಳಿಗೆ ಮಕ್ಕಳು, ಗಂಡನನ್ನು ಸರಿಯಾಗಿ ಗಮನಿಸಲು ಆಗಲಿಲ್ಲ. ಸಂಜಿತ್‌ನಿಂದ ದಿಶಾಳ ಮನೆಗೆ ಹೋದ ವಿಷಯ ತಿಳಿದುಕೊಂಡ ಸೌರವ್ ಕಕ್ಕುಲತೆಯಿಂದ ಅವಳನ್ನು ಅಪ್ಪಿಕೊಂಡು ಕೇಳಿದ, “ಯಾಕೆ ಅಮ್ಮು, ಒಂಥರಾ ಇದೀಯಾ? ಇತ್ತು ಕಾಫಿಗೆ ಸಕ್ಕರೆ ಹಾಕ್ದೆ ಕೊಟ್ಟೆ ನಂಗೆ! ಆದ್ರೂ ನಿನ್ನ ಕೈಯಿಂದ ಕೊಟ್ಟಿದ್ದು ಸಿಹಿಯಾಗೇ ಇತ್ತು ಬಿಡು! ನೀನು ಎಲ್ಲೋ ಕಳೆದು ಹೋಗಿದ್ದೀಯಾ ಅನ್ನಿಸ್ತಾ ಇದೆ ಕಣೇ, ಏನೇ ವಿಷಯ? ನನಗೆ ಹೇಳಲ್ವಾ?” ಪ್ರಶ್ನೆಗಳ ಮಳೆಯನ್ನೇ ಸುರಿಸಿದ. ಅವಳು ಮಾತನಾಡದೆ ಕಿಟಕಿ ಬಳಿ ನಿಂತಳು. ಸೌರವ್ ಅವಳನ್ನು ಹಿಂದಿನಿಂದ ಬಳಸಿದ. ಅವನಿಂದ ಬಿಡಿಸಿಕೊಂಡ ಅಮೃತಾ ವ್ಯಾನಿಟಿ ಬ್ಯಾಗ್‌ ತಂದಳು.

“ಒಂದು ಫೋಟೋಗೆ ಫ್ರೇಂ  ಹಾಕಿಸಿಕೊಡಿ. ನಿಮ್ಮ ಮಗ ಅದನ್ನು ಒಡೆದಾಕಿದ್ದಾನೆ.”

“ಆಯಿತು. ಯಾವ ಫೋಟೋ ಕೊಡು.”

ಬ್ಯಾಗ್‌ನಿಂದ ಒಂದು ಫೋಟೋ ತೆಗೆದುಕೊಟ್ಟು ಗಂಡನ ಮುಖವನ್ನೇ ನೋಡತೊಡಗಿದಳು. ಸೌರವ್ ನ ಮುಖಭಾವ ಬದಲಾಯಿತು. ಅವನು ಆಘಾತಕ್ಕೆ ಒಳಗಾದವನಂತೆ ಅಮೃತಾಳ ಮುಖವನ್ನು ನೋಡಿದ. ಅವಳದೂ ಅದೇ ಸ್ಥಿತಿ. ಎಷ್ಟೋ ಹೊತ್ತಿನ ಅಸಹನೀಯ ಮೌನವನ್ನು ಸೌರಭನೇ ಮುರಿದು, “ಋಣಾನುಬಂಧ ಅಂದ್ರೆ ಇದೇ. ಹಣೆಬರಹಾನಾ ಯಾರಿಂದಲೂ ಬದಲಾಯಿಸಲಿಕ್ಕೆ ಆಗಲ್ಲ. ಭಾಸ್ಕರ ದಿಶಾಳ ಗಂಡ ಆಗ್ಬೇಕು ಅಂದ್ರೇನು? ಅವಳ ಹಣೇಲಿ ಅವನೇ ಗಂಡ ಅಂತ ಬರೆದಿತ್ತು ಅಂತ ಕಾಣುತ್ತೆ, ಹಾಗೇ ಆಗಿದೆ. ನಾವ್ಯಾಕೆ ತಲೆ ಕೆಡಿಸಿಕೊಳ್ಳವುದು ಬಿಡು,” ಎಂದು ಸಮಾಧಾನಿಸಿದರೂ ಅವನ ಮನದಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಅವನು ಹೆಚ್ಚು ಮಾತು ಬೆಳೆಸದೆ ವರಾಂಡಕ್ಕೆ ಹೋಗಿ ಸಿಗರೇಟು ಹೊತ್ತಿಸಿದ. ಅಮೃತಾ ಟೆರೇಸ್‌ ಮೇಲೆ ಹೋದಳು. ಅವಳ ಮನದಲ್ಲಿ ತುಂಬಿದ್ದ ಅವ್ಯಕ್ತ ನೋವು ಯಾವುದೆಂದು ಈಗ ಗೊತ್ತಾಯಿತು. ಮನದ ದುಗುಡವೆಲ್ಲಾ ಕಣ್ಣೀರಾಗಿ ಹರಿಯಿತು. ಈ ಬದಲಾವಣೆಗೆ ಅವಳೇ ಆಶ್ಚರ್ಯಪಟ್ಟಳು. ಭಾಸ್ಕರನನ್ನು ಬಿಟ್ಟು ಬರುವಾಗ ಒಂದು ಹನಿ ಕಣ್ಣೀರು ಬರದೇ ಇದ್ದುದು ಈಗ ಹೊಳೆಯಾಗಿ ಹರಿಯತೊಡಗಿತು. ಬಹುಶಃ ಮೊದಲ ಪ್ರೇಮ ಮರೆಯಕ್ಕಾಗಲ್ಲ ಎಂದು ಇದಕ್ಕೇ ಹೇಳ್ತಾರೇನೋ? ತಾನು ಮರೆತಿದ್ದೀನಿ ಎಂದುಕೊಂಡದ್ದು ಸುಪ್ತಮನಸ್ಸಲ್ಲಿ ಜಾಗೃತವಾಗಿದೆ ಎಂದುಕೊಂಡಳು. ಮತ್ತೆ ಕಳೆದುಹೋದ ದಿನಗಳು ಮನದ ನೆನಪಿನಂಗಳದಲ್ಲಿ ಮೂಡತೊಡಗಿತು.

ಕಾಲೇಜು ಮುಗಿದ ತಕ್ಷಣ ಭಾಸ್ಕರನೊಡನೆ ಅಮೃತಾಳ ಮದುವೆ. ಮದುವೆಯಾದ ಒಂದೆರಡು ವಾರ ಬಂಧು ಬಳಗದವರ ಮನೆ ಎಂದು ತಿರುಗಾಟವೆಲ್ಲ ಮುಗಿದು ತಮ್ಮದೇ ಆದ ಮನೆ ಮಾಡಿದ ಮೇಲೆ, ಭಾಸ್ಕರ ಆಸೆ ವ್ಯಕ್ತಪಡಿಸಿದ್ದ. ವರ್ಷ ತುಂಬುವುದರೊಳಗಾಗಿ ಒಂದು ಮಗು ಬೇಕೆಂದು. ಅವನಿಗೆ ಮಕ್ಕಳ ಮೇಲೆ ಅತೀ ಪ್ರೀತಿ ಇರುವುದನ್ನು ಅವಳು ಈಗೀಗ ಕಂಡುಕೊಂಡಿದ್ದಳು. ಆದರೂ, “ಎರಡು ವರ್ಷ ಹಾಯಾಗಿ ಇದ್ದುಬಿಡೋಣ. ಆಮೇಲೆ ಅವೆಲ್ಲ ಇದ್ದೇ ಇದೆಯಲ್ಲ,” ಎಂದು ಪರಿಪರಿಯಾಗಿ ಓಲೈಸಿ ಅವನನ್ನು ಒಪ್ಪಿಸಿದ್ದಳು. ಆದರೆ ಅವನು ಮನಃಪೂರ್ವಕವಾಗಿ ಒಪ್ಪಿಲ್ಲ ಎನ್ನುವುದು ಅವಳಿಗೂ ಗೊತ್ತು. ಆದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.

ಅವಳಿನ್ನೂ ಹುಡುಗಾಟದ ಹುಡುಗಿ. ಇನ್ನೂ ಜವಾಬ್ದಾರಿಗಳು ಗೊತ್ತಿಲ್ಲ. ಹಾಯಾಗಿ ತಿಂದುಂಡು ಬೆಳೆದವಳು. ಇದೇ ಮುಂದೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲು ಪೂರಕವಾದವು. ಏಕೆಂದರೆ ಭಾಸ್ಕರ ಸ್ವಲ್ಪ ಗಂಭೀರ ಸ್ವಭಾವದ ಮನುಷ್ಯ, ಜವಾಬ್ದಾರಿಯುಳ್ಳವನು. ಇವಳು ಅದಕ್ಕೆ ತದ್ವಿರುದ್ಧ. ಹೊಂದಿಕೊಂಡು ಹೋಗಲೂ ಇಬ್ಬರಿಗೂ ತಿಳಿಯಲಿಲ್ಲ. ಬಹುಶಃ ಈಗೋ ಅಂತಾರಲ್ಲ ಅದಿರಬೇಕು. ಒಂದು ಮಗು ಆಗಿದ್ದರೆ ಕಥೆ ಬೇರೆಯೇ ಆಗಿರುತ್ತಿತ್ತೇನೋ? ಈಗ ಅವರಿಬ್ಬರೂ ಎಷ್ಟು ದ್ವೇಷಿಸುತ್ತಿದ್ದರೆಂದರೆ ಮಗು ಅವರ ಕಲ್ಪನೆಯಲ್ಲಿ ಕೂಡ ಹುಟ್ಟಲಿಲ್ಲ. ಪರಿಣಾಮ ವಿಚ್ಛೇದನ. ಆದರೆ ನಿಜ ಹೇಳಬೇಕೆಂದರೆ ಭಾಸ್ಕರ ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಕಾಳಜಿ ವಹಿಸುತ್ತಿದ್ದ. ಇದು ಅವಳಿಗೂ ಗೊತ್ತಿತ್ತು.

ವಿಚ್ಛೇದನವಾದ ಮೇಲೆ ಅವಳಿಗೆ ಎಲ್ಲಾ ನೆನಪಾಗಿ ಮನಸ್ಸು ಮುದುಡುತ್ತಿತ್ತು. ತಾನು ದುಡುಕಿದೆ ಎನಿಸುತ್ತಿತ್ತು. ಆದರೆ ಹಾಲು ಒಡೆದಿತ್ತು. ಏನೂ ಮಾಡುವ ಹಾಗಿರಲಿಲ್ಲ. ಭಾಸ್ಕರನನ್ನು ಕಾಂಟಾಕ್ಟ್ ಮಾಡಲು ಅವನು ಎಲ್ಲಿ ಹೋದ ಎಂದೇ ಗೊತ್ತಾಗಲಿಲ್ಲ. ತನ್ನ ಮತ್ತು ಸೌರಭನ ಸ್ನೇಹವನ್ನು ತಪ್ಪಾಗಿ ಭಾವಿಸುವ ಹಾಗಿತ್ತು.

ಎಲ್ಲಾ ವಿಧಿಬರಹವೇ, ಸ್ವಯಂಕೃತ ಅಪರಾಧವೇ ತಲೆ ಕೆಟ್ಟುಹೋಗಿತ್ತು. ಭಾಸ್ಕರನ ಒಳ್ಳೆಯ ಗುಣ ಗೊತ್ತಿದ್ದ ತಂದೆತಾಯಿ, ಅಕ್ಕ, ಅಣ್ಣಅತ್ತಿಗೆಯ ಚುಚ್ಚು ಮಾತುಗಳನ್ನು ಕೇಳಲಿಕ್ಕಾಗದೆ ಆತ್ಮಹತ್ಯೆಯ ವಿಚಾರ ಬಂದಿತ್ತು.

ಇದೆಲ್ಲ ಗೊತ್ತಾದ ಸೌರವ್ ಅವಳಿಗೆ ಸಮಾಧಾನ ಹೇಳಿ, ಆಸರೆಯಾದ. ಮದುವೆಯ ಆಹ್ವಾನವನ್ನೂ ಇತ್ತ. ಅದನ್ನೊಪ್ಪದೆ ಅಮೃತಾಳಿಗೆ ಬೇರೆ ದಾರಿಯೇ ಇರಲಿಲ್ಲ. ಭಾಸ್ಕರನ ಮೇಲಿನ ದ್ವೇಷ ಕರಗಿತ್ತು. ಹಾಗೆಯೇ ಅವನನ್ನು ಪ್ರಯತ್ನಪೂರ್ವಕವಾಗಿ ಮರೆತಿದ್ದಳು. ಈಗ ಭಾಸ್ಕರನ ಬಗ್ಗೆ ಗೊತ್ತಾಗಿದೆ. ಅವನು ಮದುವೆಯಾಗಿದ್ದಾನೆ. ಅವನ ಹೆಂಡತಿ ದಿಶಾಗೆ ತೊಂದರೆ ಇರುವುದರಿಂದ ಅವನಿಗೆ ಮಕ್ಕಳ ಭಾಗ್ಯವಿಲ್ಲ.

ಅವಳಿಗೆ ದುಃಖ ಉಕ್ಕಿ ಬಂತು. ತಕ್ಷಣ ಅವಳಿಗೆ ಸುಖಿತ್‌, ಸಂಜಿತ್‌, ಪ್ರಾಚೀ ನೆನಪಿಗೆ ಬಂದರು. ಜೊತೆಗೆ ಅವಳೊಂದು ಗಟ್ಟಿ ನಿರ್ಧಾರಕ್ಕೆ ಬಂದಳು.

ಸಂಜೆ ಪಾರ್ಕ್‌ಗೆ ಅಮೃತಾ, ಸೌರವ್ ಇಬ್ಬರೇ ಬಂದರು. ಕೈಯಲ್ಲಿ ಮಸಾಲಾ ಕಡ್ಲೆಬೀಜದ ಪ್ಯಾಕೆಟ್‌ ಇತ್ತು. ಅದನ್ನು ಬಿಚ್ಚಿ ಅವಳತ್ತ ಹಿಡಿದ. ಅವಳು ಅದನ್ನು ಒಂದು ಸಲ ಬಾಯಿಗೆ ಹಾಕಿಕೊಂಡು ಅವನತ್ತ ನೋಡಿದಳು. ಅವನ ಮುಖ ಪ್ರಶಾಂತವಾಗಿತ್ತು. ಈಗ ತನ್ನ ನಿರ್ಧಾರ ತಿಳಿಸಿದಾಗ ಅವನಲ್ಲಿ ಏಳುವ ಭಾವನೆಗಳ ಬಗ್ಗೆ ಅವಳು ಯೋಚಿಸಿದಳು. ಸೌರಭನೇ ಮಾತಿಗೆ ಶುರು ಮಾಡಿದ, ”ಏನೋ ಹೇಳಬೇಕೆಂದು ಕರೆದುಕೊಂಡು ಬಂದೆ…. ಏನೂ ಮಾತಾಡ್ತಾ ಇಲ್ಲ….?”

“……….”

“ಅಮೃತಾ, ನಿನ್ನನ್ನೇ ಕೇಳ್ತೀರೋದು….” ಸೌರಭನ ಜೋರು ದನಿಗೆ ವಾಸ್ತವಕ್ಕೆ ಬಂದಳು. ಸಾವಕಾಶವಾಗಿ ನೆಲ ನೋಡುತ್ತಾ ತನ್ನ ನಿರ್ಧಾರ ತಿಳಿಸಿದಳು. ಅವನ ಮುಖ ನೋಡುವ ಧೈರ್ಯವಾಗಲಿಲ್ಲ. ಪಕ್ಕದಿಂದ ಏನೂ ಉತ್ತರವೇ ಬರದಿದ್ದಾಗ ತಲೆ ಎತ್ತಿ ನೋಡಿದಳು. ಅವನು ಅಲ್ಲಿರಲಿಲ್ಲ. ಕುಂಡದಲ್ಲಿರುವ ಚೆಂಗುಲಾಬಿಗಳನ್ನು ತದೇಕಚಿತ್ತನಾಗಿ ನೋಡುತ್ತಿದ್ದ. ಅವನ ಹತ್ತಿರ ಬಂದು ಅವನನ್ನು ಅಲುಗಿಸಿದಳು. ಅವನ ಮುಖ ಭಾವರಹಿತವಾಗಿತ್ತು.

“ಮನೆಗೆ ಹೋಗೋಣ,” ಎಂದಷ್ಟೇ ಹೇಳಿದ. ಅವಳಿಗೆ ವಿಪರೀತ ಹಿಂಸೆಯಾಗತೊಡಗಿತು.

“ನೀನು ನನ್ನ ಮಾತಿಗೆ ಏನೂ ರೆಸ್ಪಾನ್ಸ್ ಮಾಡ್ಲೇ ಇಲ್ಲ.”

ಸ್ವಲ್ಪ ಹೊತ್ತು ಮತ್ತೆ ಮೌನ ವಹಿಸಿದ. ಮತ್ತೆ ನಿಧಾನವಾಗಿ, “ನನಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ನನಗೇನೋ ಇದು ಸರಿ ಕಾಣುತ್ತಿಲ್ಲ. ನೀನೇ ಯಾಕೆ?!” ಅವನು ದಿಗ್ಭ್ರಾಂತಿಯಿಂದ ಕೇಳಿದ.

“ಹಾಗಲ್ಲ… ! ದಿಶಾಗೆ, ಭಾಸ್ಕರ್‌ ಮತ್ತು ಅವಳ ಮಗುವೇ ಬೇಕಂತೆ. ಅದಕ್ಕಾಗಿ ಸಂಬಂಧಿಕರಲ್ಲಿ ಬಾಡಿಗೆ ತಾಯಿಯಾಗಲು ಯಾರಾದರೂ ಸಿದ್ಧವಿದ್ದಾರಾ ಎಂದು ನೋಡಿದಳಂತೆ. ಈ ದೇಶದಲ್ಲಿ ಸಂಬಂಧಿಕರಲ್ಲಿ ಮಗು ಹೆತ್ತು ಕೊಡುವುದು ಸ್ವಲ್ಪ ಕಷ್ಟವೇ…. ಅಲ್ವಾ? ಇನ್ನೇನು ಅವರು ಹೊರಗೇ ಬಾಡಿಗೆ ತಾಯಿಗಾಗಿ ಹುಡುಕ್ತಾ ಇದ್ದಾರೆ. ನಾನೇ ಯಾಕೆ ಆಗಬಾರ್ದು ಅಂತ ಅನ್ನಿಸ್ತು…. ಇದರಿಂದ ನನ್ನಲ್ಲಿದ್ದ ಪಾಪಪ್ರಜ್ಞೆನೂ ಹೋಗುತ್ತೆ….”

ಅವಳ ಮಾತನ್ನು ಅರ್ಧದಲ್ಲೇ ತಡೆದ ಸೌರವ್, “ಪಾಪಪ್ರಜ್ಞೆ?! ಹಾಗಾದ್ರೆ ನನ್ನ ಮದುವೆಯಾಗಲು ನೀನು ನಿರಾಕರಿಸಬಹುದಾಗಿತ್ತು. ಅಂತಹ ಬಲವಂತ ನಮ್ಮಿಬ್ಬರ ನಡುವೆ ಏನೂ ಇರಲಿಲ್ಲಲ್ಲ…..” ವಿಷಾದದಿಂದ ಹೇಳಿದ.

ಅವನ ಮನಸ್ಸಿಗೆ ನೋವಾಗಿದೆ ಎಂದರಿತ ಅಮೃತಾ, “ಹಾಗಲ್ಲ, ನನ್ನ ಜೀವನದಲ್ಲಿ ಭಾಸ್ಕರ ಇದ್ದಾಗ ಏನೇನಾಯಿತೆಂದು ನಿನಗೂ ಗೊತ್ತು. ಇದರಲ್ಲಿ ನೀನೂ ಪರೋಕ್ಷವಾಗಿ ಕನೆಕ್ಟ್ ಆಗಿದ್ದೀಯಾ. ಆತ ನನ್ನಿಂದ ಬಯಸಿದ್ದು ಒಂದು ಮಗು ಮಾತ್ರ. ಆದರೆ ನಮ್ಮಿಬ್ಬರ ನಡುವೆ ಮಿಸ್‌ ಅಂಡರ್‌ಸ್ಟಾಂಡಿಂಗ್‌, ಜಗಳಗಳಿಂದ ನಾನು ಮಗು ಹೆರಲು ಒಪ್ಪಲಿಲ್ಲ. ಅದು ಮುಂದೆ ವಿಕೋಪಕ್ಕೆ ಹೋಗಿ ನಾವಿಬ್ಬರು ಬೇರೆಯಾದ್ವಿ. ತಪ್ಪು ಹೆಚ್ಚಾಗಿ ನನ್ನ ಕಡೆನೇ ಇದೆ. ಆದ್ದರಿಂದ ಪಾಪಪ್ರಜ್ಞೆ ಅಂದಿದ್ದು. ನೀನು ದಯವಿಟ್ಟು ಇದನ್ನು ಅಪಾರ್ಥ ಮಾಡಿಕೊಳ್ಳಬೇಡ. ಭಾಸ್ಕರ ನನ್ನ ಜೀವನದಲ್ಲಿ ಮುಗಿದು ಹೋದ ಅಧ್ಯಾಯ,” ಅವಳ ಧ್ವನಿ ಗದ್ಗದಿತಾಯಿತು. ಸೌರವ್ ಮೆತ್ತಗಾದ. ಮತ್ತವಳೇ ಮುಂದುವರಿದು, “ಇದರಿಂದ ದಿಶಾಗೂ ನೆಮ್ಮದಿಯ ಬದುಕು ಸಿಗುತ್ತದೆ. ನಿನಗೆ ಇಷ್ಟವಿಲ್ಲದಿದ್ದರೆ ಬೇಡಬಿಡು,” ಎಂದು ಹೇಳುತ್ತಾ ಮುಂದೆ ಹೋದಳು.

ಮನಸ್ಸು ಯೋಚಿಸುತ್ತಿತ್ತು, `ಋಣ+ಅನುಬಂದ = ಋಣಾನುಬಂಧವಾಗುತ್ತದೆ. ಆದರೆ ಅದು ತನ್ನ ಬದುಕಿನಲ್ಲಿ ಋಣ + ಅನುಬಂಧವಾಗಬೇಕಿದೆ,’ ಎಂದುಕೊಂಡಳು.

ಅವಳನ್ನು ಹಿಂಬಾಲಿಸಿದ ಸೌರವ್, “ಹೊರುವವಳು, ಹೆರುವವಳು ನೀನು. ನಿನಗೇ ಸಮಸ್ಯೆ ಇಲ್ಲದಿದ್ದರೆ ನಾನ್ಯಾಕೆ ಅಡ್ಡಗಾಲು ಹಾಕಲಿ? ನಿನ್ನಿಷ್ಟ. ಆದರೆ ನೀನು ರಿಸ್ಕ್ ತಗೋತಿದೀಯಾ ಅಂತ ನನಗೆ ಹೆದರಿಕೆಯಷ್ಟೇ,” ಎಂದ.

“ಒಳ್ಳೊಳ್ಳೆ ಡಾಕ್ಟರ್‌ ಇದ್ದಾರೆ. ಎಷ್ಟು ಜನ ಬಾಡಿಗೆ ತಾಯಿಯರಾಗಿಲ್ಲ. ಅವರಿಗೇನಾದರೂ ಆಗಿದೀಯಾ….?  ಹೆದರಬೇಡ,” ಎಂದು ಹೇಳಿ, “ಹಾಗಾದರೆ ನಾಳೆ ದಿಶಾಗೆ ಬರಲು ಹೇಳು. ಎಲ್ಲನ್ನೂ ತಿಳಿಸೋಣ,” ಎಂದಳು.

“ಆದರೆ ಅಮೃತಾ, ಭಾಸ್ಕರ್‌ ಇದಕ್ಕೆ ಒಪ್ಪಬೇಕಲ್ಲ?!” ಸಂಶಯದಿಂದ ಕೇಳಿದ.

“ನನ್ನ ಷರತ್ತು ಇರುವುದೇ ಇಲ್ಲಿ. ಯಾವುದೇ ಕಾರಣಕ್ಕೂ ನಾನೇ ಬಾಡಿಗೆ ತಾಯಿ ಎಂಬುದು ಅವನಿಗೆ ತಿಳಿಯಕೂಡದು. ಇದು ನನ್ನ ನಿನ್ನ ಮತ್ತು ದಿಶಾಳ ನಡುವೆ ಮಾತ್ರ ಇರಬೇಕು,” ಎಂದಳು.

ಮರುದಿನ ಬಂದ ದಿಶಾಗೆ ಇವಳ ನಿರ್ಧಾರ ಕೇಳಿ ಕುಣಿಯುವಷ್ಟು ಖುಷಿಯಾಯಿತು. ಅಮೃತಾಳ ಷರತ್ತು ಕೇಳಿ ಅವಳ ಖುಷಿ ಇಮ್ಮಡಿಯಾಗಿತ್ತು. ಅಮೃತಾಳೇ ಭಾಸ್ಕರನ ಮೊದಲ ಹೆಂಡತಿ ಎಂದು ಇಷ್ಟರೊಳಗೆ ಅವಳಿಗೂ ಗೊತ್ತಾಗಿ ಹೋಗಿತ್ತು. ಆದ್ದರಿಂದ ಇದರ ಬಗ್ಗೆ ಭಾಸ್ಕರನಿಗೆ ತಿಳಿಯುವುದು ಅವಳಿಗೂ ಬೇಕಾಗಿರಲಿಲ್ಲ. ಇವರಿಬ್ಬರ ಮಧ್ಯೆ ದ್ವೇಷದಿಂದ ಇದು ಸಾಧ್ಯವಾಗದೇ ಹೋದರೆ….? ಅಥವಾ ಇದರಿಂದ ಮತ್ತೆ ಇವರಿಬ್ಬರ ಮಧ್ಯೆ ಅನುಬಂಧ ಶುರುವಾದರೆ….?! ಅದು ಖಂಡಿತಾ ದಿಶಾಗೆ ಬೇಡವಾಗಿತ್ತು.

ಆದರೆ ಈಗ ಇಂಥ ಸಂಶಯಗಳಿಗೆಲ್ಲ ಮುಕ್ತಿ ಸಿಕ್ಕಿತ್ತು. ಮೊದಲು ದೊಡ್ಡ ಆಸ್ಪತ್ರೆಗೆ ದಿಶಾ, ಅಮೃತಾ, ಸೌರವ್ ಹೋದರು. ಡಾಕ್ಟರ್‌ ಜೊತೆ ಕುಳಿತು ಚರ್ಚಿಸಿದ ಮೇಲೆ ಒಂದು ಶುಭ ಮುಹೂರ್ತದಲ್ಲಿ ದಿಶಾ, ಭಾಸ್ಕರನನ್ನು ಕರೆದುಕೊಂಡು ಅಲ್ಲಿಗೆ ಹೋದಳು. ಮೊದಲೇ ನಿರ್ಧರಿಸಿದಂತೆ ಎಲ್ಲಾ ಪ್ರಕ್ರಿಯೆಗಳು ಆದವು. ಮುಂದೆ ಡಾಕ್ಟರ್‌ ಹೇಳಿದ ದಿನಗಳಲ್ಲಿ ತಪ್ಪದೇ ಅಮೃತಾ, ದಿಶಾ ಇಬ್ಬರೂ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಇದೆಲ್ಲಾ ಆಗಿ ಎರಡು ವರ್ಷಗಳಾಯಿತು.

ಭಾಸ್ಕರನ ಮನೆಯಲ್ಲೀಗ ಅವಳಿ ಜವಳಿ ಮಕ್ಕಳ ನಗು, ಕೇಕೆ, ಸದ್ದು ಗದ್ದಲಗಳು, ಅಜ್ಜ-ಅಜ್ಜಿಯರ ಸಂತೋಷ ಸಂಭ್ರಮಗಳು ತುಂಬಿದ್ದವು. ಭಾಸ್ಕರ ಈಗ ಕುಡಿಯುವುದನ್ನು ಬಿಟ್ಟುಬಿಟ್ಟಿದ್ದ. ಅವನ ಬದುಕಿಗೀಗ ಗುರಿ ಸಿಕ್ಕಿತ್ತು.

ಸೌರಭನಿಗೆ ಅಮೃತಾಳ ಮೇಲೆ ಇನ್ನೂ ಪ್ರೀತಿ ಹೆಚ್ಚಾಗಿದೆ. ಅಮೃತಾ ಬಾಡಿಗೆ ತಾಯಿಯಾಗಿ ತನ್ನ ಭಾರ ಇಳಿಸಿಕೊಂಡಿದ್ದಾಳೆ. ಅವನಿಗೆ ಅವಳ ಬಗ್ಗೆ ಹೆಮ್ಮೆ ಇದೆ. ದಿಶಾಳ ಬಾಳು ಸರಿಯಾಗಿದ್ದು ಅವನಿಗೆ ಸಂತಸವಾಗಿದೆ.

ಈ ಎಲ್ಲದರ ನಡುವೆ ಹಣವನ್ನು ತೆಗೆದುಕೊಳ್ಳದೆ ಈ ಮುದ್ದು ಮಕ್ಕಳಿಗೆ ಬಾಡಿಗೆ ತಾಯಿಯಾದ, ನಾವು ಚಿರಋಣಿಯಾಗಿರ ಬೇಕಾದ ಪುಣ್ಯವಂತೆ, ಸದ್ಗುಣ ಸ್ತ್ರೀ ಯಾರು? ಎಂಬುದು ಭಾಸ್ಕರನ ಮಟ್ಟಿಗೆ ಗೌಪ್ಯವಾಗಿಯೇ ಉಳಿಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ