ಇಡೀ ದಿನದ ಆಯಾಸವನ್ನು ಪರಿಹರಿಸುವ ಸ್ಥಳ ನಮ್ಮ ಬೆಡ್‌ರೂಮ್. ಹೂವಿನಂಥ ಹಾಸಿಗೆ, ನುಣುಪಾದ ಹೊದಿಕೆ, ಬೆಳಕನ್ನು ಮರೆಮಾಡುವ ಕಿಟಕಿಯ ಪರದೆಗಳು, ಜೊತೆಗೆ ಕೋಣೆಗೆ ಮೆರುಗು ನೀಡುವ ನಮ್ಮ ಮೆಚ್ಚಿನ ಅಲಂಕಾರಗಳು. ಇವೆಲ್ಲ ಇದ್ದೂ ಸಹ ನಿದ್ರೆ ಬರುತ್ತಿಲ್ಲವೆಂದರೆ ಮನೆಯೊಳಗಿನ ಹವೆ ಶುದ್ಧವಾಗಿಲ್ಲವೆಂದೇ ಅರ್ಥ.
ನಾಸಾ ಇನ್ಸ್ ಟಿಟ್ಯೂಟ್ ಆಫ್ ಅಮೆರಿಕಾದ ಒಂದು ಸಂಶೋಧನೆಯ ಪ್ರಕಾರ, ದಿನವಿಡೀ ಕಾರ್ಯನಿರತರಾದ ಜನರಿಗೆ ಆರಾಮವಾಗಿ ನಿದ್ರಿಸಲು ಇತರರಿಗಿಂತ ಹೆಚ್ಚು ಶುದ್ಧವಾದ ಗಾಳಿಯ ಅವಶ್ಯಕತೆ ಇರುತ್ತದೆ. ಆದ್ದರಿಂದ ತಜ್ಞರ ಸಲಹೆ ಏನೆಂದರೆ ಬಾತ್‌ರೂಮಿನಿಂದ ಹೊರಬರುವ ಅಮೋನಿಯಾ ಗ್ಯಾಸ್ ಕಸಕಡ್ಡಿಗಳಿಂದ ಫಾರ್ಮಾಲ್ಡಿಹೈಡ್ ಗ್ಯಾಸ್, ಡಿಟರ್ಜೆಂಟ್‌ನಿಂದ ಬೆನ್‌ಝೀನ್, ಫರ್ನೀಚರ್‌ನಿಂದ ಟ್ರೈಕ್ಲೋರೋ ಎಥಿಲಿನ್, ಗ್ಯಾಸ್ ಸ್ಟವ್ನಿಂದ ಕಾರ್ಬನ್ ಮಾನಾಕ್ಸೈಡ್, ಲ್ಯಾಂಡರಿಯಿಂದ ಹೊರಬರುವ ವಾಸನೆ, ಇವುಗಳನ್ನೆಲ್ಲ ನಿಷ್ಕ್ರಿಯಗೊಳಿಸಲು ಮನೆಗಳಲ್ಲಿ ಗಿಡಗಳನ್ನು ಇರಿಸಬೇಕು. ಕೆಲವು ವಿಶೇಷ ಗಿಡಗಳು ಏರ್ ಪ್ಯೂರಿಫೈಯರ್‌ನ ಕೆಲಸ ಮಾಡುತ್ತದೆ. ಇದನ್ನು ಓದಿದಾಗ ನಿಮ್ಮ ಮನಸ್ಸಿನಲ್ಲಿ ಒಂದು ಸಂದೇಹ ಮೂಡಬಹುದು. `ಗಿಡಗಳು ರಾತ್ರಿಯ ವೇಳೆ ಕಾರ್ಬನ್ ಡೈ ಆಕ್ಸೈಡ್ ಗ್ಯಾಸ್ ಹೊರ ಬಿಡುತ್ತವೆ. ಆದರೆ ನಮಗೆ ಬೇಕಾದುದು ಆಕ್ಸಿಜನ್ ಅಲ್ಲವೇ?’
ನಿಜ. ಗಿಡಗಳು ಹಗಲಿನಲ್ಲಿ ಫೋಟೋಸಿಂಥೆಸಿಸ್ ಕ್ರಿಯೆಯಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ್ನು ಎಳೆದುಕೊಂಡು ಆ್ಯಕ್ಸಿಜನ್ ಹೊರಬಿಡುತ್ತವೆ. ಅದೇ ರಾತ್ರಿಯಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ.
ಆದರೆ ಕೆಲವು ಗಿಡಗಳು ಸಾಯಂಕಾಲ ಮತ್ತು ರಾತ್ರಿ ಸ್ವಲ್ಪ ಕಾಲದಲ್ಲೂ ಸಹ ಆಕ್ಸಿಜನ್ ನೀಡುತ್ತವೆ. ಈ ಗಿಡಗಳು ನಮ್ಮನ್ನು ವಿಷಾನಿಲಗಳಿಂದ ಬಿಡುಗಡೆ ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಬನ್ನಿ, ನಾವೀಗ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಹಾಯ ಮಾಡಬಲ್ಲ ಕೆಲವು ಏರ್ ಪ್ಯೂರಿಫೈಯರ್ ಗಿಡಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ :
ಸ್ನೇಕ್ ಪ್ಲಾಂಟ್ : ಹಗಲು ರಾತ್ರಿ ಎರಡೂ ಸಮಯದಲ್ಲಿಯೂ ಆಕ್ಸಿಜನ್ ನೀಡುವ ಈ ಗಿಡ ಸ್ಯಾಂಸೆವೀರಿಯಾ ಟ್ರಿಫಿಸಿಯಾ ಎಂಬ ಸಸ್ಯನಾಮದಿಂದ ಕರೆಯಲ್ಪಡುತ್ತದೆ. ಸಸ್ಯಪ್ರಿಯರು ಇದನ್ನು ಸ್ನೇಕ್ ಪ್ಲಾಂಟ್ ಎಂದು ಕರೆಯುತ್ತಾರೆ. ಇದು ಸದಾಕಾಲ ಆಕ್ಸಿಜನ್‌ನ್ನು ಹೊರಸೂಸುತ್ತಿರುವುದರಿಂದ ಆಕ್ಸಿಜನ್ ಸ್ತರವನ್ನು ಹೆಚ್ಚಿಸಿ ಮಾಲಿನ್ಯವನ್ನು ತಡೆಗಟ್ಟುತ್ತದೆ. ಆದ್ದರಿಂದ ಬಾತ್‌ರೂಮಿನ ಅಮೋನಿಯಾ ಗ್ಯಾಸ್‌ನ ಪ್ರಭಾವವನ್ನು ನಿಷ್ಕ್ರಿಯಗೊಳಿಸಲು ಮನೆಯೊಳಗೆ ಸ್ನೇಕ್ ಪ್ಲಾಂಟ್ ಬೆಳೆಸಿ. ಇದು ಕಸದ ದುರ್ಗಂಧವನ್ನು ಹೋಗಲಾಡಿಸುತ್ತದೆ. ಬಾತ್‌ರೂಮ್ ನಲ್ಲಿ ಹೂಗಿಡದ ಕುಂಡವನ್ನು ಇರಿಸುವುದರಿಂದ ನಿಮಗೆ ಹೂವಿನ ಪರಿಮಳ ದೊರೆಯುತ್ತದೆ.
ಗೋಲ್ಡನ್ ಪೊಥೊಸ್ : ಅಗಲವಾದ ಹಸಿರು ಹಳದಿ ಎಲೆಗಳಿಂದ ಕೂಡಿದ ಈ ಗಿಡ ಮನೆಯೊಳಗೆ ಕಡಿಮೆ ಸೂರ್ಯಪ್ರಕಾಶದಲ್ಲಿ ಬೆಳೆಯಬಲ್ಲದು. ಬಲ್ಬ್ ಅಥವಾ ಟ್ಯೂಬ್‌ಲೈಟ್‌ನ ಬೆಳಕು ಇದಕ್ಕೆ ಸಾಕಾಗುತ್ತದೆ. ಹೆಚ್ಚಿನ ಆರ್ದ್ರತೆಯಲ್ಲೂ ಮತ್ತು ಕಡಿಮೆ ನೀರಿನಲ್ಲೂ ಈ ಗಿಡ ಬೆಳೆಯುತ್ತದೆ. ಕಸದ ರಾಶಿಯಿಂದ ಹೊರಬರುವ ಗ್ಯಾಸ್‌ನ ಪ್ರಭಾವವನ್ನು ಆ್ಯಲೋವೇರಾ ಗಿಡದಂತೆ ಈ ಗಿಡ ನಿಷ್ಕ್ರಿಯಗೊಳಿಸುತ್ತದೆ. ಜೊತೆಗೆ ಇದು ಗ್ಯಾಸ್ ಸ್ಟವ್ ನಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್ ಗ್ಯಾಸ್‌ನ್ನು ದೂರುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗೆ ಈ ಗಿಡ ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ವೀಪಿಂಗ್ ಫಿಗ್ : ಮನೆಯೊಳಗೆ ಬಾಗಿಲು ಕಿಟಕಿಯ ಪರದೆ, ಜಮಖಾನೆ ಹಾಗೂ ಫರ್ನೀಚರ್‌ಗಳಿಂದ ಹೊರಬರುವ ವಾಸನೆಯು ಕ್ರಮೇಣ ವಾಯುವಿನ ಶುದ್ಧತೆಯನ್ನು ಕ್ಷೀಣಗೊಳಿಸುತ್ತದೆ. ಈ ಬಗೆಯ ವಾಸನೆಯನ್ನು ಹೋಗಲಾಡಿಸಲು ವೀಪಿಂಗ್ ಫಿಗ್ ಗಿಡ ಬಲು ಪರಿಣಾಮಕಾರಿಯಾಗಿದೆ.
ಫರ್ನೀಚರ್‌ನ ಪೇಂಟ್‌ನಿಂದ ವಾಸನೆ ಬರುತ್ತಿದ್ದರೆ ಲಾನೆಂಕ್ ಡ್ರೆಸೀನಾ ಗಿಡವನ್ನು ಬೆಳೆಸುವುದರಿಂದ ವಾಸನೆ ದೂರವಾಗುತ್ತದೆ. ಕೋಣೆಯ ಕಿಟಕಿಯ ಮೇಲೆ ಇರಿಸುವ ರೋಡ್ ಡ್ಯೆಂಡ್ರಾನ್ ಸಿವ್‌ಸೀ ಗಿಡ ಪ್ಲೈಡ್ ಮತ್ತು ಪೇಮ್ ಗಳಿಂದ ಹೊರಬರುವ ವಾಸನೆಯನ್ನು ಹೀರಿಕೊಳ್ಳುತ್ತದೆ. ಇದೇ ರೀತಿ ಜರ್ಬೇರಾ ಡೈಸಿ ಗಿಡ ಕಿಟಕಿಯ ಪರದೆ ಮತ್ತು ಡ್ರೈಕ್ಲೀನ್ ಬಟ್ಟೆಗಳಿಂದ ಹೊರಬರುವ ವಾಸನೆಯನ್ನು ಹೋಗಲಾಡಿಸುತ್ತದೆ. ಈ ಗಿಡಕ್ಕೆ ಹೆಚ್ಚಿನ ಮುತುವರ್ಜಿ ಅಗತ್ಯವಾದರೂ, ಇದು ಆ್ಯಲೋವೇರಾ, ಸ್ನೇಕ್ ಪ್ಲಾಂಟ್‌ಗಳಂತೆ ರಾತ್ರಿಯ ವೇಳೆಯಲ್ಲೂ ಆಕ್ಸಿಜನ್ ಮಟ್ಟವನ್ನು ಹೆಚ್ಚಿಗೆ ಇರಿಸುವಲ್ಲಿ ಸಮರ್ಥವಾಗಿರುತ್ತದೆ.
ಪೀಸ್ ಲಿಲೀ : ಹಸಿರಿನೊಂದಿಗೆ ಸುಗಂಧವನ್ನು ಬಯಸುವಿರಾದರೆ, ವಸಂತ ಋತುವಿನಲ್ಲಿ ಕಳೆಗೂಡುವ ಪೀಸ್ ಲಿಲೀ ಗಿಡವನ್ನು ಮನೆಯೊಳಗೆ ಇಟ್ಟುಕೊಳ್ಳಬಹುದು. ಕಡಿಮೆ ಬೆಳಕಿನಲ್ಲಿ ವಾರಕ್ಕೊಮ್ಮೆ ಸಿಗುವ ನೀರಿನಿಂದ ಬೆಳೆಯಬಲ್ಲ ಈ ಗಿಡ ವಾಯು ಮಾಲಿನ್ಯವನ್ನು ತಡೆಯುವಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಸಾಬೂನಿನಿಂದ ಹೊರಡುವ ಬೆನ್‌ಝೀನ್ ವಾಸನೆ ಮತ್ತು ಕಸದ ದುರ್ಗಂಧವನ್ನು ಇದು ತಡೆಯಬಲ್ಲದು. ಇದೊಂದು ಏರ್ ಪ್ಯೂರಿಫೈಯರ್‌ನಂತೆ ಸಹಾಯ ಮಾಡುತ್ತದೆ. ಹೂವಿನ ಗಿಡ ಬೇಕಾದರೆ ನೀವು ಬೆಡ್‌ರೂಮ್ ಕಿಟಕಿಯ ಮೇಲೆ ನೇರ ಬಿಸಿಲು ಬೀಳದಂತಹ ಸ್ಥಳದಲ್ಲಿ ಬೆಲೆಬಾಳುವ ಆ್ಯಂಥೋರಿಯಮ್ ಗಿಡವನ್ನು ಇರಿಸಬಹುದು.
ರೆಡ್ ಏಜ್ಡ್ ಡ್ರೈಸೀನಾ : ಮನೆಯೊಳಗೆ ಈ ಗಿಡವನ್ನು ಬೆಳೆಸುವುದರಿಂದ ವಾಯು ಮಾಲಿನ್ಯ ನಿಯಂತ್ರಣದ ಕಾರ್ಯ ಸುಗಮವಾಗುತ್ತದೆ.
ಗ್ರೇಪ್ ಐವಿ : ಕಡಿಮೆ ನೀರು, ಬೆಳಕುಗಳಲ್ಲಿ ಬೆಳೆಯಬಲ್ಲ ಈ ಗಿಡ ಮಾಲಿನ್ಯವನ್ನು ತಡೆಯುವಲ್ಲಿ ಪ್ರಭಾವಶಾಲಿಯಾಗಿದೆ. ಅನೇಕ ಬಗೆಯ ಗ್ಯಾಸ್‌ಗಳನ್ನು ನಿಷ್ಕ್ರಿಯಗೊಳಿಸಬಲ್ಲ ಈ ಗಿಡವನ್ನು ಕೋಣೆಯಲ್ಲಿರಿಸಿಕೊಂಡು ಶುದ್ಧ ಹವೆಯನ್ನು ಪಡೆಯಬಹುದು. ಸೂಕ್ಷ್ಮ ಚರ್ಮ ಅಥವಾ ಸ್ಕಿನ್ ಅಲರ್ಜಿ ಇರುವವರು ಈ ಗಿಡದ ಬಗ್ಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು.
ಕಿಚನ್‌ನ ಕಾರ್ಬನ್ ಮಾನಾಕ್ಸೈಡ್ ಮತ್ತು ಮನೆಯ ಹೊರಗೆ ಬೆಂಕಿಯಿಂದ ಹೊರಡುವ ದುರ್ಗಂಧವನ್ನು ತಡೆಯಲು ರಬ್ಬರ್ ಗಿಡವನ್ನು ಮನೆಯೊಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಬೆಳೆಸಬಹುದು.
ಬ್ಯಾಂಬೂ ಪಾಮ್ : ಜೇಡರ ಬಲೆಯನ್ನು ದೂರಗೊಳಿಸುವ ಈ ಗಿಡ ಇಂದಿನ ಮಾಡರ್ನ್ ಸೊಸೈಟಿಯ ಅಚ್ಚುಮೆಚ್ಚಿನದಾಗಿದೆ. ಅಲಂಕಾರಿಕ ಸಸ್ಯವಾಗಿ ಇರಿಸಿಕೊಳ್ಳುವ ಈ ಗಿಡ ಕೋಣೆಯ ತೇವಾಂಶವನ್ನು ನಿಯಂತ್ರಿಸುತ್ತದೆ. ಇದನ್ನು ಬಿಸಿಲು ಕಡಿಮೆ ಬೀಳುವ ಮತ್ತು ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಇರಿಸಿ. ಇದು ಕಿಚನ್, ಸೋಪ್ ಮತ್ತು ಕಸದಿಂದ ಹೊರಬೀಳುವ ವಾಸನೆಯನ್ನು ತಡೆಯುತ್ತದೆ.
ಮನೆಯಲ್ಲಿ ಬಾಲ್ಕನಿ ಇದ್ದರೆ, ಹುಳು ಹುಳಹುಪ್ಪಟೆಗಳ್ನು ಓಡಿಸುವ ಮತ್ತು ಪರಿಮಳ ಬೀರುವ ಲ್ಯಾವೆಂಡರ್ ಗಿಡವನ್ನು ಇಡಬಹುದು.
ಅರ್ಯಾಕ್ ಪಾಮ್ ಗಿಡ ಡ್ರಾಯಿಂಗ್ ರೂಮ್ ಶೋಭೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಬೆನ್‌ಝೀನ್, ಕಾರ್ಬನ್ ಮಾನಾಕ್ಸೈಡ್, ಫಾರ್ಮಲ್ಡಿ ಹೈಡ್ ಹಾಗೂ ಮಾಪ್‌ನಿಂದ ಹೊರಬರುವ ಜೈಲೀನ್ ವಾಸನೆಯನ್ನೂ ತಡೆಯುತ್ತದೆ.
ಸ್ಪೈಡರ್ ಪ್ಲಾಂಟ್ : ಈ ಗಿಡವನ್ನು ಬುಟ್ಟಿಯಲ್ಲಿರಿಸಿ ತೂಗು ಹಾಕಬಹುದು. ಇದು ಮನೆಯ ಒಳಗೆ ಮತ್ತು ಹೊರಗೆ ಕಸದ ದುರ್ಗಂಧವನ್ನು ಹೋಗಲಾಡಿಸಿ ಒಂದು ಸ್ವಚ್ಛ ವಾತಾವರಣವನ್ನು ನಿರ್ಮಿಸುತ್ತದೆ.
ಈ ಎಲ್ಲ ಪ್ಯೂರಿಫೈಯರ್ ಗಿಡಗಳು ಮನೆಯ ಶೋಭೆಯನ್ನು ಹೆಚ್ಚಿಸುವುದಲ್ಲದೆ, ಶುದ್ಧ ಗಾಳಿಯನ್ನೂ ಒದಗಿಸುತ್ತವೆ. ಇದರಿಂದ ನೀವು ಆರಾಮವಾಗಿ ವಿಶ್ರಾಂತಿ, ನಿದ್ರೆಗಳನ್ನು ಪಡೆಯಬಹುದು.
– ಎಸ್. ಅನುರಾಧಾ