ಕಥೆ  – ಜಿ. ವಿನೋದಿನಿ 

“ಸುಚೀ, ಇವತ್ತು ನನ್ನ ಸ್ನೇಹಿತನನ್ನು ಮನೆಗೆ ಕರೆಯುತ್ತಿದ್ದೇನೆ. ವಿಶೇಷವಾಗಿ ರುಚಿಕರವಾಗಿ ಅಡುಗೆ ತಯಾರಿಸು,” ವಿನಯ್‌ ಹೇಳಿದಾಗ ಸುಚಿತ್ರಾಳ ಮುಖ ಕಳೆಗುಂದಿತ್ತು.

“ನೀವು ಇದನ್ನು ಸ್ವಲ್ಪ ಮೊದಲೇ ಹೇಳಬಾರದೇ? ಈಗಾಗಲೇ ಏಳು ಗಂಟೆ ಮೇಲಾಗಿದೆ….”

“ಏನು ಹೇಳುತ್ತಿದ್ದೀಯಾ…..? ದೂರದ ಮುಂಬೈನಿಂದ ಬರುತ್ತಿರುವ ನನ್ನ ಸ್ನೇಹಿತನಿಗೆ ಕೇವಲ ಚಪಾತಿ ಪಲ್ಯ ಮಾಡಿ ತಿನ್ನಿಸುವುದೇ? ಇದರಿಂದ ಅವನಿಗೆ ನನ್ನ ಬಗ್ಗೆ ಎಂತಹ ಇಮೇಜ್‌ ಸಿಗುತ್ತದೆ ಗೊತ್ತಾ….?” ಎಂದ ವಿನಯ್‌.

“ಸರಿ, ಹಾಗಿದ್ದಲ್ಲಿ ರೆಸ್ಟೋರೆಂಟ್‌ನಿಂದ ಊಟ ತರಿಸಿ ಇಡುತ್ತೇನೆ. ಆಗದೆ?” ಎಂದಳು ಸುಚಿತ್ರಾ.

“ಓಹೋ…! ಅಂತೂ ನಿನಗೆ ಅಡುಗೆ ಮಾಡಲು ಸಾಧ್ಯವಿಲ್ಲ ಅಂತ ತಾನೇ ನೀನು ಹೇಳುತ್ತಿರುವುದು. ಇಷ್ಟಕ್ಕೂ ಬೆಳಗಿನಿಂದ ಸಂಜೆಯವರೆಗೆ ಮನೆಯಲ್ಲಿರುವ ನೀನು ಮಾಡುವುದಾದರೂ ಏನನ್ನು? ಇದೇ ನನ್ನ ತಾಯಿಯಾಗಿದ್ದರೆ ನಾನು ಹೇಳಿದುದಕ್ಕಿಂತ ಹೆಚ್ಚು ಚೆನ್ನಾಗಿ ಮಾಡಿ ಬಡಿಸುತ್ತಿದ್ದರು,” ಎಂದು ಸಿಡುಕಿದ.

“ಸರಿ. ನಾನೂ ನಿಮ್ಮ ಇಷ್ಟದಂತೆಯೇ  ಮಾಡುತ್ತೇನೆ,” ಎಂದಳು ಸುಚಿತ್ರಾ.

ಸುಚಿತ್ರಾ ವಿನಯ್‌ ಮದುವೆಯಾಗಿ ಎರಡು ತಿಂಗಳಾಗಿತ್ತು. ಸುಚಿತ್ರಾ ಮೊದಲಿನಿಂದಲೂ ಚೆನ್ನಾಗಿ ಅಡುಗೆ ಮಾಡಲು ಕಲಿತಿರಲಿಲ್ಲ. ಮದುವೆಗೆ ಇನ್ನೇನು ತಿಂಗಳಿದೆ ಎನ್ನುವಾಗ ದಿನನಿತ್ಯಕ್ಕೆ ಅಗತ್ಯವಾದ ಮೂರುನಾಲ್ಕು ಬಗೆಯ ತಿಂಡಿ, ಅಡುಗೆಗಳನ್ನು ಮಾಡಲು ಕಲಿತಿದ್ದಳು. ಇವಳು ಮನೆಯಲ್ಲಿ ಒಬ್ಬಳೇ ಮಗಳಾಗಿದ್ದ ಕಾರಣ ತಾಯಿ ತಂದೆಯರೂ ಮುದ್ದಾಗಿ ಬೆಳೆಸಿ ಯಾವ ಕೆಲಸಕ್ಕೂ ಅತಿಯಾಗಿ ಹಚ್ಚಿಸಿಕೊಳ್ಳಲಿಲ್ಲ.

ಮದುವೆ ಮಾತುಕಥೆಗೆ ಬಂದಾಗಲೇ ಸುಚಿತ್ರಾ ವಿನಯ್‌ಗೆ ಈ ವಿಚಾರದ ಕುರಿತು ತಿಳಿಸಿದ್ದಳು. “ಅಯ್ಯೋ, ಇದಕ್ಕೆಲ್ಲ ಏಕೆ ತಲೆ ಕೆಡಿಸಿಕೊಳ್ಳಬೇಕು? ಅಡುಗೆ ತಾನೇ….. ನಾನೇ ಹೇಳಿಕೊಡುತ್ತೇನೆ. ಪ್ರತಿದಿನ ಅಡುಗೆ ಮಾಡಲು ನಾನೂ ಸಹಾಯ ಮಾಡ್ತೀನಿ,” ಸುಚಿತ್ರಾಳ ರೂಪಕ್ಕೆ ಮನಸೋತಿದ್ದ ವಿನಯ್‌ ಅಂದು ಭರವಸೆ ಕೊಟ್ಟಿದ್ದ. ಮದುವೆಯಾಗಿ ಬಂದ ಸುಚಿತ್ರಾ ತನಗೆಷ್ಟು ಸಾಧ್ಯವೋ ಅಷ್ಟೂ ಉತ್ತಮ ರೀತಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದಳು. ಇಷ್ಟಕ್ಕೂ ಎರಡು ತಿಂಗಳ ಕಾಲ ಅಡುಗೆ ತರಬೇತಿ ಕೇಂದ್ರಕ್ಕೆ ಹೋಗಿ ದಿನನಿತ್ಯದ ಅಗತ್ಯಕ್ಕೆ ತಕ್ಕಷ್ಟು ಅಡುಗೆ ಮಾಡುವುದನ್ನು ಹೇಗೋ ಕಲಿತಿದ್ದಳು. ಆದರೆ ಅಡುಗೆ ಕಲೆಯಲ್ಲಿ ಪೂರ್ಣ ಪ್ರಮಾಣದ ಪರಿಣಿತಿ ಇನ್ನೂ ಸಾಧಿಸಲಾಗಿರಲಿಲ್ಲ.

ಇದೀಗ ವಿನಯ್‌ನ ನಿಲುವೆ ಬೇರೆಯಾಗಿದೆ. ಮದುವೆಗೆ ಮುನ್ನ ಮಾತು ನೀಡಿದಂತೆ ಅವನು ಎಂದೂ ಅಡುಗೆಗೆ ಸಹಾಯ ಮಾಡುತ್ತಿರಲಿಲ್ಲ. ಆಫೀಸ್‌ ಮುಗಿಸಿ ಬಂದವನೇ, `ಊಟಕ್ಕೆ ಎಲ್ಲ ತಯಾರಿದೆಯಾ?’ ಎಂದು ಕೇಳುತ್ತಾ ಟಿ.ವಿ ಮುಂದೆ ಕುಳಿತರೆ, ಸುಚಿತ್ರಾಳೆ ಅಡುಗೆಯೆಲ್ಲವನ್ನೂ ಮಾಡಿ, ಊಟ ಬಡಿಸಲು ತಟ್ಟೆ ಜೋಡಿಸುವವರೆಗೆ ಅವನು ಎದ್ದು ಬರುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಅವಳು ಮಾಡಿದ ಅಡುಗೆಗೆ `ಇದಕ್ಕೆ ಉಪ್ಪು ಕಡಿಮೆ, ಹುಳಿಯಾಗಿದೆ, ಖಾರ ಬೇಕಿತ್ತು,’ ಎಂದು ಟೀಕಿಸುತ್ತಾ, ನಿನಗಿಂತ ನನ್ನ ಅಮ್ಮ ಚೆನ್ನಾಗಿ ಅಡುಗೆ ಮಾಡುತ್ತಿದ್ದರು ಎಂದು ಪದೇ ಪದೇ ಹೇಳಿ ಅವಳ ಕಣ್ಣಿಂದ ನೀರು ತರಿಸುತ್ತಿದ್ದ. ಇಂದು ಸಹ ವಿನಯ್‌ ಮಾತಿನಿಂದ ಅವಳ ಕಣ್ಣಂಚು ಒದ್ದೆಯಾಗಿತ್ತು. ಆದರೂ ಅವಳು ತನಗೆ ತಿಳಿದಂತೆ ಒಳ್ಳೆಯ ಊಟದ ತಯಾರಿ ಮಾಡಲು ನಿರ್ಧರಿಸಿದಳು. ಮನೆಯಲ್ಲಿ ತರಕಾರಿ ಖಾಲಿಯಾಗಿದ್ದು, ಅದಕ್ಕಾಗಿ ಅಂಗಡಿಗೆ ಹೊರಟವಳಿಗೆ ಅಲ್ಲಿಯೂ ನಿರಾಶೆಯಾಗಿತ್ತು. ಅವಳು ಯಾವಾಗಲೂ ತರಕಾರಿ ಕೊಳ್ಳುತ್ತಿದ್ದ ಅಂಗಡಿಯವನು ಅಂದು ಅಂಗಡಿ ಮುಚ್ಚಿ ಎಲ್ಲಿಗೋ ಹೋಗಿದ್ದ. ಮತ್ತೆ ಆಟೋ ಮಾಡಿಕೊಂಡು ನಗರದ ಮುಖ್ಯ ಮಾರುಕಟ್ಟೆಗೆ ಹೋಗಿ ತರಕಾರಿ ತರಬೇಕಾಯಿತು. ಸುಚಿತ್ರಾ ಮನೆ ಸೇರುವಾಗ ಆಗಲೇ ಎಂಟು ಗಂಟೆಯಾಗಿತ್ತು. ಬಂದವಳೇ ತರಕಾರಿಗಳನ್ನು ಹೆಚ್ಚಿ, ಅಕ್ಕಿ ತೊಳೆದು ಒಲೆಯ ಮೇಲಿಟ್ಟಳು. ಅಷ್ಟರಲ್ಲಿ ಕಾಲಿಂಗ್‌ ಬೆಲ್ ಸದ್ದಾಗಿತ್ತು.

ಬಾಗಿಲು ತೆರೆದು ಒಳಬಂದ ವಿನಯ್‌ ಜೊತೆಗೆ ಅವನ ಸ್ನೇಹಿತ ಸಚಿನ್‌ ಸಹ ಬಂದಿದ್ದ. ವಿನಯ್‌ ನೇರವಾಗಿ ಅಡುಗೆ ಮನೆಗೆ ಬಂದು, “ಸುಚೀ…. ಇನ್ನೂ ಅಡುಗೆ ತಯಾರಾಗಿಲ್ಲವೇ? ಪಾಪ ಅವನೆಷ್ಟು ಹಸಿದಿದ್ದಾನೆ? ಸಾಮಾನ್ಯವಾಗಿ ನಾನೆಷ್ಟು ಹೊತ್ತಿಗೆ ಮನೆಗೆ ಬರುತ್ತೇನೆಂದು ತಿಳಿದಿಲ್ಲವೇ…..? ನನ್ನನ್ನು ಅವಮಾನ ಮಾಡಬೇಕೆಂದಿದ್ದೀಯಾ?” ಎಂದು ಏನೇನೋ ಬಡಬಡಿಸಿದ. ಸುಚಿತ್ರಾಳಿಗೆ ತಾನೇನು ಮಾಡಬೇಕು, ಏನು ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಸುಮ್ಮನಿದ್ದಳು. “ಏನು ನಡೆಸುತ್ತಿದ್ದೀರಿ ಗಂಡ-ಹೆಂಡತಿಯರಿಬ್ಬರೂ ಅಡುಗೆ ಮನೆಯಲ್ಲಿ…? ನಾನೊಬ್ಬನೇ ಹೊರಗಿದ್ದು ಏನು ಮಾಡಲಿ…?” ಎಂದು ನಗುತ್ತಾ ಸಚಿನ್‌ ಅಡುಗೆ ಮನೆಗೇ ಬಂದಿದ್ದ. ಸುಚಿತ್ರಾಳ ಕಣ್ಣುಗಳಲ್ಲಿ ನೀರಾಡುತ್ತಿದ್ದುದನ್ನು ಕಂಡ ಸಚಿನ್‌, “ವಿನಯ್‌, ಏನೋ ಮಾಡಿದೆ, ಅವರೇಕೆ ಅಳುತ್ತಿದ್ದಾರೆ?” ಎಂದು ಕೇಳಿದ. ಜೊತೆಗೆ ಅಲ್ಲಿ ತಯಾರಾಗುತ್ತಿದ್ದ ಅಡುಗೆ ನೋಡಿ, “ನಾನೂ ಏನಾದರೂ ಸಹಾಯ ಮಾಡಬೇಕೇ?” ಎನ್ನುತ್ತಾ ವಿನಯ್‌ ಕಡೆಗೆ ತಿರುಗಿ, “ಏನೋ ನೀನು ಸುಮ್ಮನೆ ನಿಂತಿದ್ದೀ… ಸಹಾಯ ಮಾಡೋ ಸೋಮಾರಿ,” ಎಂದ.

“ಏಯ್‌ ಸುಮ್ಮನಿರೋ….” ಎಂದ.

“ಕ್ಷಮಿಸಿ, ಅಡುಗೆ ಸ್ವಲ್ಪ ತಡವಾಯಿತು. ಅದು ನಾನು ತರಕಾರಿ ತರುತ್ತಿದ್ದ ಅಂಗಡಿಯವನು ಬಾಗಿಲು ಮುಚ್ಚಿದ್ದಾನೆ. ಮಾರ್ಕೆಟ್‌ಗೆ ಹೋಗಿ ತರೋದು ನಿಧಾನವಾಯಿತು. ಇನ್ನೂ ಹದಿನೈದು ನಿಮಿಷದಲ್ಲಿ ಅಡುಗೆ ತಯಾರಿಸುತ್ತೇನೆ. ನೀವು ಕುಳಿತು ಮಾತಾಡುತ್ತಿರಿ,” ಎಂದು ತುಸುವೇ ನಕ್ಕು ನುಡಿದಳು ಸುಚಿತ್ರಾ.

“ಓಹೋ… ಇಷ್ಟಕ್ಕೂ ನಾನು ಬರುತ್ತಿರುವ ವಿಷಯ ಒಂದು ಗಂಟೆ ಮುಂಚೇ ಇವನು ನಿಮಗೆ ತಿಳಿಸಿದ್ದಾನೆ ಸರಿಯಾ?” ಎಂದು ವಿನಯ್‌ ಮುಖ ನೋಡಿದ ಸಚಿನ್‌.

“ಹೌದು. ಇವರು ಕರೆ ಮಾಡುವಾಗಲೇ ಏಳು ಗಂಟೆಯಾಗಿತ್ತು,” ಎಂದಳು ಸುಚಿತ್ರಾ.

“ಇವನು ಮೊದಲಿನಿಂದಲೂ ಹಾಗೇ. ಬಾರೋ ಇವರಿಗೆ ಅಡುಗೆಗೆ ಸಹಾಯ ಮಾಡು…”

“ಇಲ್ಲ, ನೀವು ಹೊರಗೆ ಕುಳಿತಿರಿ…..”

“ನಾವಿಬ್ಬರೂ ಹೊರಗೆ ಹರಟೆ ಹೊಡೆಯುತ್ತಿದ್ದರೆ, ಇಲ್ಲಿ ನೀವೊಬ್ಬರೆ ಅಡುಗೆ ಮಾಡುತ್ತೀರೇನು? ಇದೆಲ್ಲ ಆಗದು,” ಎಂದವನೇ ಸಚಿನ್‌ ಅಲ್ಲಿ ಹೆಚ್ಚಿಟ್ಟಿದ್ದ ಆಲೂಗಡ್ಡೆ ಮೊದಲಾದವನ್ನು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಡಲು ಮುಂದಾದ. ಇದನ್ನು ಕಂಡ ವಿನಯ್‌ ಕೂಡ ಅಡುಗೆಗೆ ಸಹಾಯಕ್ಕೆ ನಿಂತನು.

ಹದಿನೈದು ನಿಮಿಷದಲ್ಲಿ ಮೂವರೂ ಊಟಕ್ಕೆ ಟೇಬಲ್ ಮುಂದೆ ಕುಳಿತರು. ಅಡುಗೆ ಚೆನ್ನಾಗಿ ಆಗಿತ್ತು. ವಿನಯ್‌ ಕೂಡ, “ಇಂದು ಅಡುಗೆ ಎಂದಿನಂತಿರದೆ ರುಚಿಯಾಗಿ ಚೆನ್ನಾಗಿದೆ,” ಎಂದಾಗ ಸುಚಿತ್ರಾ ಮುಖದಲ್ಲಿ ಗೆಲುವು ಮೂಡಿತು.

“ಅಡುಗೆ ರುಚಿಯಾಗಿರುವುದಕ್ಕೆ ನಾವೆಲ್ಲರೂ ಸೇರಿ ಮಾಡಿದ ಕಾರಣದಿಂದಲೇ ಹೊರತು ಎಂದಿಗಿಂತ ಬೇರೆಯಾಗಿದ್ದಕ್ಕಲ್ಲ,” ಸಚಿನ್‌ ಮಾತು ಸೇರಿಸಿದ್ದ. ಊಟವಾದ ನಂತರ ಸಚಿನ್‌ನನ್ನು ಕಳಿಸಿಕೊಡಲು ಬೀದಿಯಂಚಿನವರೆಗೂ ಹೋದ. ಆ ಸಮಯದಲ್ಲಿ ಸುಚಿತ್ರಾ ಬಾಲ್ಕನಿಯಲ್ಲಿ ನಿಂತು ಬೀದಿ ದೀಪಗಳಿಂದ ಬೆಳಗುತ್ತಿದ್ದ ಬೀದಿಯನ್ನು ನೋಡುತ್ತಿದ್ದಳು.

ಕೆಲವು ಕ್ಷಣಗಳ ನಂತರ ಮನೆಗೆ ಬಂದ ವಿನಯ್‌ ಏನೂ ಹೇಳದೆ ಕೋಣೆಗೆ ಹೋಗಿ ಬಟ್ಟೆ ಬದಲಾಯಿಸುತ್ತಿದ್ದ.

`ಇಂದು ತಾನಿನ್ನೇನು ಮಾತು ಕೇಳಬೇಕೋ?’ ಎಂದುಕೊಳ್ಳುತ್ತಿದ್ದಳು ಸುಚಿತ್ರಾ. ಸ್ವಲ್ಪ ಸಮಯದ ನಂತರ ಕೋಣೆಯಿಂದ ಹೊರಬಂದ ವಿನಯ್‌ ಅವಳ ಎರಡೂ ತೋಳನ್ನು ಹಿಡಿದು ತನ್ನತ್ತ ತಿರುಗಿಸಿಕೊಂಡ.

“ನಾನು ನಿನ್ನ ಪಾಲಿಗೆ ಅತ್ಯಂತ ಕ್ರೂರಿಯಾಗಿದ್ದೆ… ಸಚಿನ್‌ ಬಂದು ನನ್ನ ಕಣ್ಣು ತೆರೆಸಿದ. ಇನ್ನು ಮುಂದೆ ನಾವಿಬ್ಬರೂ ಕೂಡಿ ಅಡುಗೆ ಮಾಡೋಣ…” ಎಂದು ಅವಳನ್ನು ತೋಳಲ್ಲಿ ಬಳಸಿದ.

ತನ್ನ ಪ್ರೀತಿಯ ವಿನಯ್‌ನ ತೋಳುಗಳಲ್ಲಿ ಬಂಧಿಯಾದ ಸುಚಿತ್ರಾಗೆ ಪ್ರಪಂಚದ ಪರಿವೆಯೇ ಬೇಡವಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ